ವಿ.ವಿ. ಅಂಕಣ – ಒಂದೊಳ್ಳೆ ನಿದ್ದೆ ಮಾಡಿ

ವಿ.ವಿ. ಅಂಕಣ – ಒಂದೊಳ್ಳೆ ನಿದ್ದೆ ಮಾಡಿ

ನಿಮ್ಮ ಗುರಿ ಮುಟ್ಟಲು ಕಷ್ಟಗಳು ಎದುರಾಗುತ್ತಿವೆಯೇ? ಗುರಿ ಸಾಧಿಸಲು ನಿಮ್ಮ ಯೋಚನೆಗಳೇ ಅಡ್ಡ ಬರುತ್ತಿವೆಯೇ? ಹೇಗಾದರು ಮಾಡಿ ನಿಮ್ಮ ಗುರಿ ಮುಟ್ಟಬೇಕೆಂಬ ಆಸೆ ಇದೆಯೆ? ಹೋಗಿ ಹಾಗಾದರೆ ಒಂದೊಳ್ಳೆ ನಿದ್ದೆ ಮಾಡಿ !

ಇದು ನಿದ್ರಾ ಪ್ರಿಯನಾದ ನನ್ನ ಮಾತಲ್ಲ ,ಹೊಸ ಸಂಶೋಧನೆಯೊಂದು ಹೀಗೆ ಹೇಳುತ್ತಿದೆ. ಒಳ್ಳೆ ನಿದ್ದೆ ಬಂದರೆ ಮರುದಿನವೆಲ್ಲಾ ಸುಂದರವಾಗಿಯೂ, ಚಟುವಟಿಕೆಯಿಂದಲೂ ಕೂಡಿರುತ್ತದೆ. ಆಗ ಆ ದಿನದ ಕೆಲಸಗಳೆಲ್ಲಾ ಸುಲಭವಾಗಿ ಮುಗಿಯುತ್ತದೆ. ಕೆಲಸಗಳು ಅಚ್ಚುಕಟ್ಟಾಗಿ ಮುಗಿದರೆ ಆ ರಾತ್ರಿಯೂ ನಿದ್ದೆ ಚೆನ್ನಾಗಿ ಬರುತ್ತದೆ. ಹಾಗೆ ಇದೇ ಚಕ್ರ ತಿರುಗಿ ತಿರುಗಿ ಮುಂಬರುವ ದಿನಗಳೆಲ್ಲಾ ಹೊಸದಾಗಿಯೂ, ಕ್ರಿಯಾಶೀಲವಾಗಿಯೂ ಇರುತ್ತದೆ ಎಂಬುದನ್ನು ಗಮನಿಸಿರುತ್ತೀರ, ಅಲ್ಲವೇ? ಆದರೆ ಆ ನಿದ್ದೆ ಬಾರದಿರುವುದೇ ಎಲ್ಲಾ ಸಮಸ್ಯೆಗಳಿಗೆ ಮೂಲ. ಹೋಗಲಿ ಬಿಡಿ, ನಿಮ್ಮ ನಿದ್ದೆ ಕೆಡಿಸುವ ಕಾರಣಗಳನ್ನು ಸ್ವಲ್ಪ ಬದಿಗಿಟ್ಟು ಇಲ್ಲಿ ಕೇಳಿ.

ನಮಗೆ ಏಕೆ ಸರಿಯಾಗಿ ನಿದ್ದೆ ಬಾರದು ಎಂಬುದಕ್ಕೆ ನಮ್ಮ ಬಳಿ ಹಲವಾರು ಕಾರಣಗಳಿರಬಹುದು, ಆದರೆ ಒಂದೊಳ್ಳೆ ನಿದ್ದೆಯಿಂದಾಗುವ ಪ್ರಯೋಜನ ವಿವರಿಸುವ ಈ ವೈಜ್ಞಾನಿಕ ಸಂಶೋಧನೆಯನ್ನು ಕೇಳಿದರೆ, ಮತ್ತೆ ಆ ನಿದ್ದೆಯನ್ನು ಅರಸಿ ಹೋಗುವ ಪ್ರಯತ್ನವನ್ನಾದರೂ ಮಾಡುತ್ತೀರೆಂಬುದು ನನ್ನ ನಂಬಿಕೆ. ಏಕೆಂದರೆ ಇತ್ತೀಚಿಗಿನ ನಿದ್ದೆಗೆ ಸಂಬಂಧಿಸಿದ ಸಂಶೋಧನೆಗಳ ಗಮನಿಸಿದರೆ ಇದಕ್ಕೆ ಕಾರಣ ಹೆಚ್ಚಾಗಿ ತಡ ರಾತ್ರಿಯವರೆಗಿನ ಮೊಬೈಲ್ ಬಳಕೆ ಎಂದು ಹೇಳುತ್ತಿವೆ. ಹಾಗೆ ಅದರಿಂದ ನಾವು ಅನುಭವಿಸುವ ತೊಂದರೆಗಳನ್ನು ಎಳೆ ಎಳೆಯಾಗಿ ವಿವರಿಸುವಂತಹ ಸಂಶೋಧನೆಗಳು ಎಷ್ಟೋ ಸಿಗುತ್ತವೆ. ಹೀಗೆ ನಮ್ಮ ಅರೆ ನಿದ್ದೆಯಿಂದ ಆಗುವ ತೊಂದರೆಗಳ ಕೇಳಿ ಕೇಳಿ ನಮ್ಮ ತಲೆಯಲ್ಲೆಲ್ಲಾ ಋಣಾತ್ಮಕ ಅಲೆಗಳು ಸಣ್ಣಗೆ ಸುಳಿಯುತ್ತವೆ. ಇದರಿಂದ ಆಗುವ ಪ್ರಯೋಜನಗಳೇನೋ ನಾ ಕಾಣೆ.

ಅದಕ್ಕೆಂದೆ ಈ ಬಾರಿ ಇಲ್ಲಿ, ನಿಮ್ಮ ವಿ ವಿ ಅಂಕಣದಲ್ಲಿ ಒಂದೊಳ್ಳೆ ನಿದ್ದೆಯಿಂದ ನಮ್ಮ ಮೆದುಳಿನಲ್ಲಿ ಆಗುವ ಬದಲಾವಣೆಗಳೇನು? ಅದರ ಪ್ರಯೋಜನವೇನೆಂದು ತಿಳಿಯೋಣ. ಸ್ವಲ್ಪ ಧನಾತ್ಮಕದ ಕಡೆಗೆ ತಿರುಗಿ ನೋಡೋಣ. ಆ ನಂತರ ಒಳ್ಳೆ ನಿದ್ದೆ ಮಾಡಲು ಏನು ಹಿಡಿಯಬೇಕು, ಏನು ಬಿಡಬೇಕೆಂಬುದು ನೀವೆ ನಿರ್ಧರಿಸಬಹುದು. ಆದರೆ ಒಂದು ಸಣ್ಣ ಕೋರಿಕೆ. ಇಷ್ಟೆಲ್ಲಾ ಹೇಳಿದ್ದು ಕೇಳಿ, ಅರೇ ಇಷ್ಟು ಹೇಳಿದ ಮೇಲೂ ನಿದ್ದೆ ಮಾಡದಿದ್ದರೆ ಹೇಗೆ ಎಂದು ಲೇಖನ ಮುಗಿಯುವ ಮೊದಲೇ ನಿದ್ದೆಗೆ ಜಾರಬಾರದು ಅಷ್ಟೆ!

ನಾವು ನಿದ್ದೆಗೆ ಜಾರಿದ ತಕ್ಷಣ ನಮ್ಮ ಮೆದುಳಿನಲ್ಲಾಗುವ ಕ್ರಿಯೆಗಳನ್ನು ಅಧ್ಯಯನ ಮಾಡಿದಾಗ ತಿಳಿದದ್ದು, ಆ ಸಮಯದಲ್ಲಿ ನಮ್ಮ ಮೆದುಳಿನ ಒಳಗೆ ಪ್ರತೀ 20 ಸೆಕೆಂಡುಗಳ ಸಮಯಾಂತರದಲ್ಲಿ ಒಂದು ಬಗೆಯ ದ್ರವ ನಮ್ಮ ಮೆದುಳನ್ನು ಸ್ವಚ್ಛಗೊಳಿಸುತ್ತಿರುತ್ತದಂತೆ. ಅಲೆಗಳ ರೀತಿ ಮೆದುಳಿನ ಜೀವಕೋಶಗಳ ನಡುವೆ ಹರಿಯುವ ಈ ದ್ರವ ನಮ್ಮ ಮೆದುಳಿನ ಕ್ಷಮತೆ ಹಾಗೂ ಆರೋಗ್ಯವನ್ನು ಮೆದುಳಿನ ಜೀವಕೋಶಗಳ ನಡುವೆ ಸೇರಲ್ಪಡುವ ಕೆಲವು ದುಷ್ಪರಿಣಾಮಕಾರಿ ಪ್ರೋಟೀನುಗಳನ್ನು ತೊಲಗಿಸುವ ಮೂಲಕ ನಮ್ಮ ಮೆದುಳನ್ನು ರಕ್ಷಿಸುತ್ತದೆಯಂತೆ. ಇದು ನಮಗೆ ಅಂದರೆ ವಿಜ್ಞಾನಿಗಳಿಗೆ ಮೊದಲು ತಿಳಿದು ಬಂದದ್ದು ಈ ಪ್ರಯೋಗವನ್ನು ಇಲಿಗಳ ಮೇಲೆ ಮಾಡಿದಾಗಲಂತೆ.

ಇದೇ ಪ್ರಯೋಗವನ್ನು 13 ಜನ ಆರೋಗ್ಯವಂತರನ್ನು ಮಲಗಿಸಿ, ಮೆದುಳಿನ ಆಗು ಹೋಗುಗಳನ್ನು ತಿಳಿಯಲು, ಎಮ್. ಆರ್. ಐ ಸ್ಕ್ಯಾನ್ ಮಾಡುವ ಮೂಲಕ ತಿಳಿಯುತ್ತಿದ್ದರು. ಅದರಿಂದ ಹೊರಬಂದ ಚಿತ್ರಗಳನ್ನು ಪರೀಕ್ಷಿಸಿದಾಗ ತಿಳಿದುಬಂದ ಸಂಗತಿಗಳು ಇಂತಿವೆ.
*ಮಲಗಿರುವಾಗ ಪ್ರತೀ ಬಾರಿಯೂ ತಾಜಾ ರೂಪದ ದ್ರವ ಸಮುದ್ರದ ಅಲೆಗಳ ರೀತಿಯಲ್ಲಿ ಬರುತ್ತಿದ್ದವಂತೆ. ಹಾಗು ಆ ಅಲೆಗಳು ದೊಡ್ಡದಾಗಿದ್ದು ‘ತ್ಸುನಾಮಿ’ಗೆ ಹೋಲಿಸಬಹುದು ಎನ್ನುತ್ತಾರೆ ಬೋಸ್ಟನ್ ಯುನಿವರ್ಸಿಟಿಯ ನರವಿಜ್ಞಾನಿ ಲಾರಾ ಲೇವಿಸ್.
*ಎಚ್ಚರವಿರುವ ಜನರ ಮೆದುಳಲ್ಲೂ ಇದೇ ಕ್ರಿಯೆ ನಡೆಯುವುದಾದರೂ ದ್ರವದ ಅಲೆಗಳ ಗಾತ್ರ ತುಂಬಾ ಚಿಕ್ಕದಿದ್ದು, ಪ್ರತೀ ಬಾರಿ ತಾಜಾ ದ್ರವ ಬರುತ್ತದೆಂಬ ಖಾತರಿಯಿಲ್ಲ. ಲಾರಾ ಹೇಳುವ ಹಾಗೆ ಈ ದ್ರವದ ಅಲೆಗಳಿಗೂ ನಾವು ಉಸಿರಾಡುವ ರೀತಿಗೂ ನೇರ ಸಂಬಂಧವಿದೆ.

ಅವರು ನಡೆಸಿದ ಪ್ರಯೋಗ ಹಾಗು ಫಲಿತಾಂಶ ಇವಾದರೆ, ನಿಖರವಾಗಿ ಈ ಸಂಶೋಧನೆಯಿಂದ ಬರುವ ಪ್ರಯೋಜನವಾದರು ಏನು ಎಂಬುದಲ್ಲವೇ ನಿಮ್ಮ ಪ್ರಶ್ನೆ? ಅಲ್ಲಿಗೇ ಬಂದೆ. ಈ ಮೇಲೆ ಹೇಳಿದ ಹಾಗೆ ನಾವು ಒಂದು ಉತ್ತಮ ನಿದ್ದೆಯ ಮೊರೆ ಹೋಗಿದ್ದಾಗ ನಮ್ಮ ಮೆದುಳಲ್ಲಿ ಬರುವ ಈ ದ್ರವದ ಅಲೆಗಳು ಮೆದುಳಿನ ಜೀವಕೋಶಗಳ ನಡುವೆ ಸಿಲುಕುವ ಕೆಲವು ಹಾನಿಕಾರಕ ಪ್ರೋಟೀನುಗಳನ್ನು ತೊಲಗಿಸುತ್ತವೆ.

ಇಲ್ಲಿ ನಿಮಗೊಂದು ಉದಾಹರಣೆಯನ್ನೂ ನೀಡಿಯೇ ಬಿಡುತ್ತೇನೆ, ನಮ್ಮ ಮೆದುಳಿಗೆ ಸಂಬಂಧಿಸಿದ ಹಾಗೆ ಬರುವ ಪ್ರಖ್ಯಾತ ಖಾಯಿಲೆಗಳಲ್ಲಿ ಒಂದಾದ ‘ಮರೆಗುಳಿ’ ಖಾಯಿಲೆ ಹೇಗೆ ಬರುತ್ತದೆ ಎಂದುಕೊಂಡಿರಿ? ಮೆದುಳಿನ ಜೀವಕೋಶಗಳ ನಡುವೆ ಅಮೈಲೋಯ್ಡ್ ಬೀಟಾ ಎಂಬ ಪ್ರೋಟೀನು ಸಿಲುಕಿ ನಮ್ಮ ಯೋಚನಾ, ಕಲಿಕಾ ಮತ್ತು ನೆನಪಿನ ಶಕ್ತಿಗಳನ್ನು ಕುಂಠಿಸುತ್ತದೆಯಂತೆ. ಇಂತಹ ದುಷ್ಟ ಪ್ರೋಟೀನುಗಳನ್ನು ನಾವು ಮಲಗಿರುವ ಸಮಯದಲ್ಲಿ ಪಾಪ ಕಳೆಯುವ ಗಂಗೆಯಂತೆ ಬರುವ ಮೆದುಳಿನ ಈ ಸಂಜೀವಿನಿ ದ್ರವ ತೊಳೆದು ಓಡಿಸುತ್ತವೆಯಂತೆ. ಇದಕ್ಕಿಂತ ಇನ್ನೇನು ಬೇಕು?

ಒಂದೊಳ್ಳೆ ನಿದ್ದೆಯಿಂದ ಆಗುವ ಒಂದೇ ಒಂದು ಉಪಯೋಗವನ್ನು ಮಾತ್ರ ನಿಮ್ಮ ಮುಂದಿಟ್ಟಿದ್ದೇನೆ. ನಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ‘ಬೆಸ್ಟ್ ಪಾರ್ಟ್ ಆಫ್ ದಿ ಡೇ’ ಎಂದು ನನ್ನ ಅಣ್ಣ ಹೇಳುವ ಈ ನಿದ್ರೆಯ ಪ್ರಯೋಜನ ಹಾಗು ಮಹತ್ವದ ಬಗ್ಗೆ ತಿಳಿಯುವ ಆಸಕ್ತಿ ನನಗೂ ಇದೆ. ನಿಮಗೆ ತಿಳಿದದ್ದನ್ನು ನಮಗೆ ಬರೆದು ತಿಳಿಸಿ. ಸದ್ಯಕ್ಕೆ ಹೋಗಿ ಒಂದೊಳ್ಳೆ ನಿದ್ದೆ ಮಾಡಿ!

ನಮ್ಮ ಇ-ವಿಳಾಸ:- [email protected]

ಮೂಲ ಲೇಖನ: Science News for Students

– ಜೈ ಕುಮಾರ್ .ಆರ್
ಡಬ್ಲ್ಯೂ.ಸಿ.ಜಿ., ಬೆಂಗಳೂರು.

Spread the love
error: Content is protected.