ಪಾರಿವಾಳ

ಕನಕದಾಸರು “ಮೋಹನ ತರಂಗಿಣಿ” ಕಾವ್ಯದಲ್ಲಿ ಪಾರಿವಾಳ ಹಕ್ಕಿಯನ್ನು ಉಲ್ಲೇಖಿಸಿ ಕೆಲ ಸಾಂಗತ್ಯಗಳನ್ನು ರಚಿಸಿ, ಸಾಂಗತ್ಯ ಸಾಲುಗಳಲ್ಲಿ ಪಾರಿವಾಳವನ್ನು ಪಾರಿವಾಳ, ಪಾರಿವ, ಪಾರಿವದ, ಪಾರಾವತ ಎಂದು ಕರೆದಿದ್ದಾರೆ.
ಪಾರಿವದಂದದಿ ಗುಟುಕುದಂಬುಲವಿತ್ತು
ಪೀರಿದ ತೊಂಡೆವಣ್ದುಟಿಯ
ಹೋರಿದ ಮೈಯ ಸೊನೆ ಬೆಮರಾಂತುದಮಲಕ
ಸ್ತೂರಿ ಸೌಗಂಧ ಕಂಪೆಸೆಯೆ
ಸಾಂಗತ್ಯದ ಭಾವಾರ್ಥ: ಪಾರಿವಾಳದ ರೀತಿಯಲ್ಲಿ ಗುಟುಕುದಂಬುಲವನ್ನು ಕೊಟ್ಟು ತೊಂಡೆ ಹಣ್ಣಿನ ತುಟಿಯನ್ನು ಹೀರಿದ ಹೋರಾಡಿದ ಮೈಯಲ್ಲಿ ಸೋನೆಬೆವರು ಮೂಡಿತು ಕಸ್ತೂರಿ ಸುಗಂಧದ ಕಂಪುಸೂಸುತ್ತಾ.
ಗಾತ್ರದಲ್ಲಿ ಕಾಗೆಗಿಂತ ಸ್ವಲ್ಪ ಚಿಕ್ಕದಾದ ನೀಲಿಮಿಶ್ರಿತ ಕಡುಬೂದು ವರ್ಣದ ಹಕ್ಕಿ. ರೆಕ್ಕೆ ಹಾಗೂ ಬಾಲದಲ್ಲಿ ಕಪ್ಪು ಪಟ್ಟಿಗಳಿವೆ. ಕತ್ತನ್ನು ಕೊಂಕಿಸಿ ಅತ್ತಿತ್ತ ನೋಡುತ್ತಿರುವಾಗ ಹೊಳೆವ ನೇರಳೆ, ನೀಲಿ ಮಿಶ್ರಿತ ಹಸಿರ ವರ್ಣವು ಚಿತ್ತಾಕರ್ಷವಾಗಿ ಕಾಣುತ್ತದೆ. ಕಣ್ಣು ಮತ್ತು ಕಾಲುಗಳು ಕೆಂಪಾಗಿವೆ. ಕಪ್ಪಾದ ಚಿಕ್ಕ ಕೊಕ್ಕು, ಮುಂದಲೆ ಮತ್ತು ಕೊಕ್ಕುಗಳ ನಡುವೆ ಜೀನಿನಾಕಾರದ ಚರ್ಮದ ಪದರವಿದೆ.

ಹೆಣ್ಣು ಗಂಡು ಪಕ್ಷಿಗಳು ಜೊತೆಯಾಗಿಯೇ ವಾಸಿಸುತ್ತವೆ. ಸಂಗಾತಿ ಸತ್ತು ಹೋದಾಗ ಮಾತ್ರ ಮತ್ತೊಂದು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಗುಣ-ಲಕ್ಷಣ ಹೊಂದಿವೆ. ಪಾಳು ಬಿದ್ದ ಬಾವಿಯ ಬಂಡೆಗಳಲ್ಲಿ, ಮನೆಯ ಮಾಡು, ಪ್ರಪಾತದ ಬದುಗಳು, ಗೋಡೆಯ ಅಂಚುಗಳಿಗೆ ಅಥವಾ ಛಾವಣಿಯ ಸ್ಥಳಾವಕಾಶಗಳನ್ನು ಹೊಂದಿರುವ ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಹುಲ್ಲು ಮತ್ತು ಕಡ್ಡಿಗಳಿಂದ ಆವೃತವಾಗಿ ವೇದಿಕೆಯಂತಿರುವ ಗೂಡುಕಟ್ಟಿ ಒಂದರಿಂದ ಎರಡು, ಅಪರೂಪವಾಗಿ ಮೂರು ಬಿಳಿಯ ಮೊಟ್ಟೆಗಳನ್ನಿಟ್ಟು ಸರದಿಯಲ್ಲಿ ಗಂಡು ಹಗಲಿನಲ್ಲೂ, ಹೆಣ್ಣು ರಾತ್ರಿಯಲ್ಲೂ ಕಾವು ಕೊಡುತ್ತವೆ. ಮೊಟ್ಟೆಗಳೊಡೆದು ಹೊರಬರುವ ಮರಿಗಳು ಕುರುಡಾಗಿದ್ದು, ಕೇವಲ ಕೆಲವೇ ಪುಕ್ಕಗಳನ್ನು ಹೊಂದಿರುತ್ತವೆ. ಈ ಮರಿಗಳಿಗೆ ಸ್ಕ್ವಾಬ್ಸ್ ಎನ್ನುತ್ತಾರೆ. ಸ್ಕ್ವಾಬ್ಸ್ಗಳಿಗೆ ಹತ್ತು ದಿವಸಗಳವರೆಗೆ ದಂಪತಿಗಳೆರಡೂ ಎರೆ ಚೀಲದಲ್ಲಿ ಉತ್ಪನ್ನವಾದ ಹಾಲನ್ನು ನೀಡುತ್ತವೆ. ಮರಿಗಳು ತಂದೆ ತಾಯಿಗಳ ಬಾಯಿಯ ಮೂಲಕ ಎರಚೀಲಕ್ಕೆ ತಮ್ಮ ಕೊಕ್ಕನ್ನು ಚಾಚಿ ಮೊದಲು ಹಾಲನ್ನು ತದನಂತರ ಅಲ್ಲಿರುವ ಕಾಳುಗಳನ್ನು ತಿಂದು ಬೆಳೆಯುತ್ತವೆ. ಹುಟ್ಟಿದ ಮರಿ ಸ್ಕ್ವಾಬ್ಗಳು ಕಪ್ಪು ವರ್ಣದ ಮಾಂಸದ ಮುದ್ದೆಯಂತೆ ಕಾಣುತ್ತವೆ. ಇದನ್ನು “ಕ್ರಾಪ್ ಹಾಲು” ಅಥವಾ “ಪಾರಿವಾಳದ ಹಾಲು” ಎಂದು ಕೂಡ ಕರೆಯುತ್ತಾರೆ. ಪ್ರೌಢಾವಸ್ಥೆಗೆ ಬಂದ ಪಕ್ಷಿಗಳು ವರ್ಷಕ್ಕೆ ಎರಡರಿಂದ ಮೂರು ಬಾರಿ ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ. ಸಂತಾನೋತ್ಪತ್ತಿಗೆ ನಿರ್ದಿಷ್ಟ ಕಾಲವಿರುವುದಿಲ್ಲ.

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುದ್ದಿಯನ್ನು ತಲುಪಿಸಲು ಪಾರಿವಾಳದ ಕಾಲುಗಳಿಗೆ ಟಪಾಲು ಕಟ್ಟಿ ಅವನ್ನು ಹಾರಿ ಬಿಟ್ಟು ಸುದ್ದಿವಾಹಕಗಳಂತೆ ಅನಾದಿ ಕಾಲದಿಂದಲೂ ಬಳಸಲಾಗಿದೆ. ಪುರಾಣ ಹಾಗೂ ಅನೇಕ ದಂತಕಥೆಗಳಲ್ಲಿ ಇವುಗಳ ಉಲ್ಲೇಖವಿದೆ. ಬಾಗ್ದಾದಿನ ಸುಲ್ತಾನ ಕ್ರಿ.ಶ. 1150 ರಲ್ಲಿ ಪಾರಿವಾಳದ ಟಪಾಲ ಕೇಂದ್ರವನ್ನು ಸ್ಥಾಪಿಸಿದ್ದನೆನ್ನಲಾಗಿದೆ. ಯುದ್ಧಗಳಲ್ಲಿ ತುರ್ತು ಸುದ್ದಿಗಳನ್ನು ತಲುಪಿಸಲು ಇಪ್ಪತ್ತನೆಯ ಶತಮಾನದಲ್ಲಿಯೂ ಪಾರಿವಾಳಗಳನ್ನು ಬಳಸಲಾಗಿದೆ. ಪ್ರೇಮಿಗಳು ತಮ್ಮ ಪ್ರೇಮ ಸಂದೇಶಗಳನ್ನು ರವಾನಿಸಲು ಈ ಹಕ್ಕಿಗಳನ್ನು ಉಪಯೋಗಿಸುತ್ತಿದ್ದರು ಎನ್ನಲಾಗಿದೆ.
1789 ರಲ್ಲಿ ಮೊಟ್ಟ ಮೊದಲು “ಜಿಮೆಲಿನ್” ಎಂಬವರು ಪಾರಿವಾಳದ ಬಗ್ಗೆ ವಿವರಿಸಿದರು. ಪಕ್ಷಿಶಾಸ್ತ್ರೀಯವಾಗಿ “ಕೊಲಂಬಾ ಲಿವಿಯಾ” (Columba livia) ಎಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ. ಈ ಪ್ರಭೇದದ ಹೆಸರು ಕೊಲಂಬಾ ಎಂಬುದು ಪುರಾತನ ಗ್ರೀಕ್ ಪದವಾಗಿದ್ದು ಇದರ ಅರ್ಥವು “ಮುಳುಕ, ಡೈವ್ ಹೊಡೆಯುವುದು, ಧುಮುಕುವುದು, ಗಾಳಿಯಲ್ಲಿ ಈಜು ಅಂದರೆ ಗಾಳಿಯಲ್ಲಿ ಈಜು ಚಲನೆಯ ಕಾರಣದಿಂದಾಗಿ ಹಕ್ಕಿಯ ವೈಜ್ಞಾನಿಕ ಹೆಸರಾಗಿ ಕೊಲಂಬಾ (Columba) ಎಂದು. ಲ್ಯಾಟಿನ್ ಭಾಷೆಯಲ್ಲಿ ಲಿವಿಯಾ (livia) ಎನ್ನುವುದು “ನೀಲಿ” ಎಂಬ ಅರ್ಥವನ್ನು ನೀಡುತ್ತದೆ. ಪಾರಿವಾಳಗಳು ಹಾರಾಡುವಾಗ ಗಾಳಿಯಲ್ಲಿ ಈಜಿದಂತೆ ಭಾಸವಾಗುವುದು ಹಾಗೂ ನೀಲ ವರ್ಣವಾಗಿರುವುದನ್ನು “ಕೊಲಂಬಾ ಲಿವಿಯಾ” ಎಂದು ಕರೆದು, ಕೊಲಂಬಿಫಾರ್ಮಿಸ್ (Columbiformes) ಗಣದ ಕೊಲಂಬಿಡೇ (Columbidae) ಕುಟುಂಬಕ್ಕೆ ಸೇರಿಸಲಾಗಿದೆ.
ಇವುಗಳನ್ನು ಕುರುಡು ಪಾರಿವಾಳ, ಗುಡ್ಡದ ಪಾರಿವಾಳ ಎಂದು ಕರೆದು ಆಂಗ್ಲಭಾಷೆಯಲ್ಲಿ ಬ್ಲೂರಾಕ್ ಪಿಜನ್ (Blue Rock Pigeon) ಅಥವಾ ಕಾಮನ್ ಪಿಜನ್ (Common Pigeon ) ಎಂದು ಕರೆಯುತ್ತಾರೆ. 2004 ರಿಂದ 2011 ರವರೆಗೆ ಬ್ಲೂ ರಾಕ್ ಡವ್ ಎಂಬುದು ಇದರ ಅಧಿಕೃತ ಹೆಸರಾಗಿದ್ದರು. ಇಂಟರ್ನ್ಯಾಷನಲ್ ಆರ್ನಿಥೋಲಜಿಕಲ್ ಕಾಂಗ್ರೆಸ್ ತಮ್ಮ ಅಧಿಕೃತ ಪಟ್ಟಿಯಲ್ಲಿ ಅದರ ಮೂಲ ಬ್ರಿಟಿಷ್ ಹೆಸರನ್ನು ರಾಕ್ ಪಾರಿವಾಳಕ್ಕೆ ಬದಲಾಯಿಸಿದಾಗ ಸಾಮಾನ್ಯ ಬಳಕೆಯಲ್ಲಿ ಇವನ್ನು “ಪಾರಿವಾಳ” ಎಂದು ಕರೆಯಲಾಗಿದೆ. ಕೊಲಂಬಾ ಲಿವಿಯಾ (Columba livia) ಎಂಬ ಈ ದ್ವಿನಾಮವನ್ನು (Binomial Name) ಜರ್ಮನ್ನಿನ ನಿಸರ್ಗವಾದಿಯಾದ ಜೋಹಾನ್ ಫ್ರೆಡ್ರಿಕ್ ಗ್ಮೆಲಿನ್ ಎಂಬುವವರು 1789 ಪರಿಚಯಿಸಿದರು. ಸಂಸ್ಕೃತದಲ್ಲಿ ನೀಲ ಕಪೋತ, ಪಾರಾವತ ಎಂಬ ಹೆಸರುಗಳಿವೆ.

ಗೂರ್ ಗೂ.. ಗೂರ್ ಗೂ.. ಎಂದು ನೀಳವಾಗಿ ಗುಬ್ಬಳಿಸುವಂತೆ ಕೂಗುತ್ತವೆ. ಆಹಾರ ಕ್ರಮದಂತೆ ಕಾಡು ಹಕ್ಕಿಗಳಾಗಿ ಪರ್ವತಗಳ ಬಂಡೆಗಳೆಡೆಯಲ್ಲಿ ವಾಸಿಸುತ್ತಾ ಬಯಲಿನಲ್ಲಿ ಅಥವಾ ಹೊಲಗಳಲ್ಲಿನ ಹುಲ್ಲಿನ ಬೀಜ, ಕಾಳುಗಳನ್ನು ತಿನ್ನುತ್ತವೆ. ನಾಗರೀಕತೆಗೆ ಒಗ್ಗಿಕೊಂಡು ಧಾನ್ಯಗಳ ದಾಸ್ತಾನು ಮಳಿಗೆಗಳ ಬಳಿ, ಅಕ್ಕಿಮಿಲ್ಲುಗಳ ಬಳಿ ಮೇಯುವ ಈ ಹಕ್ಕಿಗಳು ಬಾಂಗ್ಲಾದೇಶ, ಸಿಲೋನ್, ಪಾಕಿಸ್ತಾನ ಬರ್ಮಾದೇಶಗಳಲ್ಲಿ ಕಂಡು ಬರುತ್ತವೆ. ಶಾಂತ ಸ್ವಭಾವದ ಈ ಹಕ್ಕಿಗಳನ್ನು ಪಾರ್ಶ್ವವಾಯು ಪೀಡಿತರಿಗೆ ಮಾಂಸ ಭೋಜನವಾಗಿ ನೀಡುವುದರಿಂದ ಗುಣಮುಖರಾಗುತ್ತಾರೆ ಎಂಬ ನಂಬಿಕೆಯಿಂದ ಹಾಗೂ ಮಾನವ ಆಹಾರಕ್ಕಾಗಿ ದುರಾಸೆಯಿಂದ ಬೇಟೆಯಾಡುತ್ತಿರುವುದರಿಂದ ಇವುಗಳ ಸಂಖ್ಯೆ ಗಣನೀಯವಾಗಿ ಇಳುಮುಖವಾಗುತ್ತಿದೆ.
ಪೆರೆಗ್ರಿನ್ ಫಾಲ್ಕಾನ್ಸ್ ಮತ್ತು ಯುರೇಷಿಯನ್ ಸ್ಪ್ಯಾರೋಹಾಕ್ ಹಕ್ಕಿಗಳು ಪಾರಿವಾಳಗಳ ನೈಸರ್ಗಿಕ ಪರಭಕ್ಷಕಗಳಾಗಿವೆ, ಪೆರೆಗ್ರಿನ್ ಫಾಲ್ಕಾನ್ ಗಳು ಮತ್ತು ಯುರೇಷಿಯನ್ ಸ್ಪ್ಯಾರೋಹಾಕ್ ಗಳು ತಮ್ಮ ಆಹಾರದಲ್ಲಿ 80% ರಷ್ಟು ಬೆಟ್ಟ ಪಾರಿವಾಳಗಳನ್ನು ಹಿಡಿದು ಭಕ್ಷಿಸುತ್ತವೆ. ಇನ್ನು ಪಾರಿವಾಳಗಳ ಸಾಕಾಣಿಕೆ ಕ್ರಿ.ಪೂ. 2000 ರಿಂದಲೂ ನಡೆದುಬಂದಿದೆ. ಸಾಕುಪಾರಿವಾಳಗಳಲ್ಲಿ ಅಂದವಾದ ಬಣ್ಣದ ತಳಿಗಳು, ಜೂಜಾಟದ ತಳಿಗಳು ಮತ್ತು ದೊಡ್ಡ ಗಾತ್ರದ ಆಹಾರದ ತಳಿಗಳಿವೆ. ಆ ತಳಿಗಳ ಸಂಖ್ಯೆ ಸುಮಾರು 200ಕ್ಕೂ ಹೆಚ್ಚಿವೆ.
– ಶಶಿಧರಸ್ವಾಮಿ ಆರ್. ಹಿರೇಮಠ
ಕದರಮಂಡಲಗಿ, ಹಾವೇರಿ ಜಿಲ್ಲೆ

ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.