ವಿ.ವಿ. ಅಂಕಣ – ಡಿ.ಎನ್.ಎ ಬದಲಿಸುವ ಗಾಳಿ!

ವಿ.ವಿ. ಅಂಕಣ – ಡಿ.ಎನ್.ಎ ಬದಲಿಸುವ ಗಾಳಿ!

‘ಉಸಿರಾಟ ಕ್ರಿಯೆ ಮನುಷ್ಯ ಬದುಕಲು ಬೇಕಾಗಿರುವ ಪ್ರಮುಖ ಅಂಶ. ಉಸಿರಾಟ ಕ್ರಿಯೆಯಲ್ಲಿ ನಾವು ಆಮ್ಲಜನಕವನ್ನು ಒಳ ತೆಗೆದುಕೊಂಡು ಇಂಗಾಲದ ಡೈ ಆಕ್ಸೈಡ್ ಅನ್ನು ಹೊರ ಹಾಕುತ್ತೇವೆ.’ ಎಂಬ ಉತ್ತರ ಬರೆದು ಪರಿಸರ ವಿಜ್ಞಾನ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ ಮೂರನೇ ತರಗತಿಯ ದಿನಗಳು ಅವು. ಆಗಿನ ಮೌಖಿಕ ಪರೀಕ್ಷೆಗಳೋ ಬಹಳ ಸ್ವಾರಸ್ಯಕರವಾದುವು… ಆದರೆ ಹೇಳುವುದೋ… ಬೇಡವೋ…ಎಂದು ಯೋಚಿಸುತ್ತಿದ್ದೇನೆ. ಆಗಿದ್ದಾಗಲಿ ಹೇಳಿಬಿಡುತ್ತೇನೆ, ನೀವೇನಾದರೂ ತಿಳಿದುಕೊಳ್ಳಿ. ಆ ವಯಸ್ಸಿನಲ್ಲಿ ಪರೀಕ್ಷೆ ಹೇಗಿರುತ್ತದೆ ಹೇಳಿ, ಗುರಿಯಿಟ್ಟು ಹತ್ತು ಹಲವು ಪ್ರಶ್ನೆಗಳು ಹೊಡೆದರೆ ಉತ್ತರಿಸಲಾಗುವುದೇ? ಕಷ್ಟ ಕಷ್ಟ! ಅದಕ್ಕಾಗಿಯೇ ನಮ್ಮ ಮೌಖಿಕವೂ ಬಹಳ ಸರಳವಾಗಿಯೇ ಇತ್ತು.

ಬಾಯಿ ತೆಗೆದು ಆ… ಎನ್ನಬೇಕಿತ್ತು, ಬ್ರಷ್ ಮಾಡಿದ್ದರೆ ಹಾಗು ನಮ್ಮ ಬಾಯಲ್ಲಿರುವ ಒಟ್ಟು ಹಲ್ಲುಗಳ ಸಂಖ್ಯೆ ಹೇಳಿಬಿಟ್ಟರೆ ಪೂರ್ಣ ಅಂಕ, ಇಲ್ಲವಾದರೆ ಅರ್ಧ ಮಾತ್ರ. ನೋಡಿ ಅಷ್ಟೆ, ಮುಗಿಯಿತು ಪರೀಕ್ಷೆ. ಆದರೆ ನನ್ನ ದುರಾದೃಷ್ಟಕ್ಕೆ ಅಂದು ಮೌಖಿಕದಲ್ಲಿ ಕಡಿಮೆ ಅಂಕಗಳು ಬಂದಿರಬೇಕು ಎಂದು ನನ್ನ ಅನುಮಾನ. ಅದೋ ಅಲ್ಲಿ ನೋಡಿ ಹುಬ್ಬೇರಿಸುತ್ತಿದ್ದೀರಿ, ಅದು ಅನುಮಾನವಷ್ಟೇ… ಹಾಗೆಂದು ನೀವು ನಾನು ಅಂದು ಬ್ರಷ್ ಮಾಡಿಲ್ಲವೆಂದು ನೇರವಾಗಿ ತೀರ್ಮಾನಕ್ಕೆ ಬರಬಾರದು. ಅದನ್ನು ಅಲ್ಲಿಗೇ ಬಿಟ್ಟು ಬಿಡಿ. ಮುಂದೆ ಹೋಗೋಣ. ಅದೇ ಹೈ ಸ್ಕೂಲಿನಲ್ಲೋ, ಪಿ. ಯು. ಸಿ. ಯಲ್ಲೋ ಅದೇ ರೀತಿ ಮೌಖಿಕವನ್ನು ಆಶಿಸಲಾದೀತೆ? ಸಾಧ್ಯವೇ ಇಲ್ಲ. ಇಲ್ಲಂತು ಬಂದೂಕಿನಿಂದ ಬರುವ ಬುಲ್ಲೆಟ್ಟುಗಳಂತೆ ಪ್ರಶ್ನೆಗಳು ಬಂದು ನಮ್ಮ ತಲೆಯನ್ನು ಹೊಕ್ಕು ಹುಡುಕಾಡುತ್ತಿದ್ದವಾದರೂ ಅವುಗಳಿಗೆ ಉತ್ತರ ಮಾತ್ರ ಸಿಗುತ್ತಿರಲಿಲ್ಲ. ಹಾಗೆಂದು ನಾವು ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ ಎಂದೇನಲ್ಲ. ಉದಾಹರಣೆಗೆ, ಡಿ. ಎನ್. ಎ ಎಂದರೇನು? ಅವುಗಳ ಕಾರ್ಯವೇನು? ಆರ್. ಎನ್. ಎ ಎಂದರೇನು? ಇವೆರ(ಡ)ರ ನಡುವಿನ ವ್ಯತ್ಯಾಸವೇನು? ಎಂಬ ಪ್ರಶ್ನೆಗಳಿಗೆ, ಖಂಡಿತವಾಗಿಯೂ ಉತ್ತರಗಳು ಹೊರ ಬರುತ್ತಿದ್ದವು. ಆದರೆ ಸರಿಯಾದ ಉತ್ತರಗಳು ಬರುತ್ತಿದ್ದದು ಸ್ವಲ್ಪ ವಿರಳ. ಹಾಗೆಂದು ನಾವು ಸೋಲನ್ನು ಒಪ್ಪುವುದು ಆ ದೇವರಿಗೂ ಇಷ್ಟವಿರಲಿಲ್ಲ ಎಂದು ಕಾಣಿಸುತ್ತದೆ. ಅದಕ್ಕೆ ನಮಗೆ ತಿಳಿದ ಉತ್ತರಗಳನ್ನೇ ಎಲ್ಲಾ ಪ್ರಶ್ನೆಗಳಿಗೂ ಹೊಂದುವಂತೆ ಹೇಳುವ ಸಾಮರ್ಥ್ಯ ಅದೇ ದೇವನು ಕರುಣಿಸಿದ್ದನು. ಇಂತಹ ದೇವರು ನೀಡಿದ ಆಯುಧಗಳ ಹಿಡಿದು ಬಂದ ಪರೀಕ್ಷೆಗಳನ್ನು ಎದುರಿಸಿ ಸ್ವಲ್ಪ ಮುಂದೆ ಬಂದಾಯಿತು. ಈಗ ಇನ್ನೇನು ಆರಾಮವಾಗಿ ಸ್ವಲ್ಪ ಸುಧಾರಿಸಿಕೊಳ್ಳೋಣ ಮುಂದೆ ಹೋಗುವ ದಾರಿ ಬಹಳಷ್ಟಿದೆ ಎಂದು ಕುಳಿತರೆ…ಉಸಿರಾಡದ ಹಾಗೆ ಆಗಿಬಿಟ್ಟಿದೆ ಪ್ರಪಂಚ.

ಏನಿದು? ಏನೇನೋ ಹೇಳುತ್ತಿದ್ದೀರಿ.. ಮೊದಲು ಮೂರನೇ ತರಗತಿ ಎಂದಿರಿ, ನಂತರ ಹೈ ಸ್ಕೂಲ್ ಎಂದಿರಿ, ಈಗ ಉಸಿರಾಡಲು ಕಷ್ಟ ಎನ್ನುತ್ತಿದ್ದೀರಿ. ಏನಿವುಗಳ ಸಂಬಂಧ? ಸಂಬಂಧ ಇದೆ! ನಾವು ಪ್ರೈಮರಿಯಲ್ಲಿ ಕಲಿತ ಉಸಿರಾಟ ಕ್ರಿಯೆಗೂ ನಂತರದ ತರಗತಿಗಳಲ್ಲಿ ಕಲಿತ ಪ್ರತೀ ಜೀವಕೋಶದ ಕ್ರಿಯೆಗಳ ನಿಯಂತ್ರಣ ಹೊಂದಿರುವ ಡಿ . ಎನ್. ಎ. ಗಳಿಗೂ ಸಂಬಂಧ ಕಲ್ಪಿಸುವ ಅಚ್ಚರಿಯ ವೈಜ್ಞಾನಿಕ ಸಂಶೋಧನೆಯೊಂದನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ.

ಕಲುಷಿತ/ಮಾಲಿನ್ಯವಾದ ಗಾಳಿಯನ್ನು ಸೇವಿಸಿದರೆ ಸಾಮನ್ಯವಾಗಿ ಆಗುವ ತೊಂದರೆಯೆಂದರೆ ಉಸಿರಾಟದ ಸಮಸ್ಯೆ, ಕೆಲವೊಮ್ಮೆ ಅಸ್ತಮಾ, ಇನ್ನೂ ಕೆಲವರಿಗೆ ರಕ್ತದ ಒತ್ತಡ ಹೆಚ್ಚವುದು ಅಥವಾ ಕೆಲವರಿಗೆ ಹೃದಯ ಬಡಿತದ ವೇಗವೂ ಹೆಚ್ಚಬಹುದು. ಆದರೆ ಅದೇ ವಾಹನಗಳ ನಿತ್ರಾಣ(ಹೊಗೆ) ನಾವು ಉಸಿರಾಡುವ ಅದೇ ಗಾಳಿಯಲ್ಲಿ ಸೇರಿದರೆ ನಮ್ಮ ದೇಹದೊಳಗಿನ ಡಿ. ಎನ್. ಎ ಯನ್ನು ಬದಲಿಸುತ್ತವೆ. ನಿಖರವಾಗಿ ಹೇಳುವುದಾದರೆ ಜೀನ್ ಗಳನ್ನು ಸ್ವಿಚ್ ಆನ್ ಅಥವಾ ಆಫ್ ಮಾಡುತ್ತವೆ ಎನ್ನುತ್ತಿದೆ ಸಂಶೋಧನೆ.

ಜೀನ್ ಎಂದರೆ ಡಿ. ಎನ್. ಎ ಯ ಒಂದು ಸಣ್ಣ ಭಾಗ. ಇವು ಜೀವಿಯ ದೇಹದ ಒಳಗಿನ ಎಲ್ಲಾ ಜೀವಕೋಶಗಳಲ್ಲಿದ್ದು ಆ ಜೀವಕೋಶಗಳು ಯಾವ ಸಮಯದಲ್ಲಿ ಏನು ಮಾಡಬೇಕು ಎಂದು ನಿರ್ಧರಿಸುವ ಅಂಶ. ಸುಲಭವಾಗಿ ಹೇಳುವುದಾದರೆ ಜೀವಕೋಶದ ಆಗುಹೋಗುಗಳ ಒಂದು ಹಂತದ ಮ್ಯಾನೇಜರ್. ವಿಶೇಷವೆಂದರೆ ಒಂದೇ ಜೀವಕೋಶದಲ್ಲಿ ಬೇರೆ ಬೇರೆ ಕೆಲಸಗಳಿಗೆ ಬೇರೆ ಜೀನ್ ಗಳಿದ್ದು ಅವುಗಳನ್ನು ಸ್ವಿಚ್ ನ ಮೂಲಕ ಆನ್ ಅಥವಾ ಆಫ್ ಮಾಡಬಹುದಾಗಿದೆ. ರಸಾಯನ ಶಾಸ್ತ್ರದಲ್ಲಿ ಈ ಸ್ವಿಚ್ ಗಳಿಗೆ ಮೀಥೈಲ್ಸ್ ಗ್ರೂಪ್ ಎನ್ನುತ್ತಾರೆ.

ಸಾಮಾನ್ಯವಾಗಿ ಈ ಮೀಥೈಲ್ ಗ್ರೂಪ್ ನ ಅಣುವನ್ನು ಹಾಕಿದರೆ ಕೆಲವು ಜೀನ್ ಗಳು ಆಫ್ ಆಗುತ್ತವೆಯಂತೆ. ಹಾಗೆಯೇ ಮೀಥೈಲ್ ಗ್ರೂಪ್ ನ ಅಣುವನ್ನು ತೆಗೆದರೆ ಕೆಲವು ಆನ್ ಆಗುತ್ತವೆಯಂತೆ. ಇವುಗಳ ಪರಿಣಾಮ ಜೀವಕೋಶದಲ್ಲಿ ವಿವಿಧ ಕ್ರಿಯೆಗಳು ಕ್ರಮಬದ್ಧವಾಗಿ ನಡೆಯುತ್ತವೆ. ಈ ಮೀಥೈಲ್ ಗ್ರೂಪ್ ನ ಅಣುವು ಸ್ವಾಭಾವಿಕವಾಗಿ ನಮ್ಮ ದೇಹದಲ್ಲೇ ಬೇಕಾದ ಸಮಯದಲ್ಲಿ ಉತ್ಪಾದನೆಯಾಗುತ್ತದೆ. ಕೆಲಸ ಮುಗಿದ ಮೇಲೆ ತೆಗೆಯಲ್ಪಡುತ್ತದೆ.

ಆದರೆ ನಮ್ಮ ದೇಹದ ಹೊರಗಿನ ಕೆಲವು ಮಾಲಿನ್ಯಕಾರಕ ಅಂಶಗಳಿಂದ ಇಲ್ಲಿಯವರೆಗೆ ದೇಹದಲ್ಲಿ ಸ್ವಾಭಾವಿಕವಾಗಿ ನಡೆಯುತ್ತಿದ್ದ ಮೀಥೈಲ್ ಗ್ರೂಪ್ ನ ಅಣುಗಳ ಹಾಕುವಿಕೆ ಅಥವಾ ತೆಗೆಯುವಿಕೆಯಲ್ಲಿ ವ್ಯತ್ಯಾಸ ಉಂಟುಮಾಡುತ್ತವೆ. ಇದರ ಪರಿಣಾಮ ಜೀನ್ ಗಳು ಅವಶ್ಯವಿಲ್ಲದ ಸಮಯದಲ್ಲಿ ಆನ್ ಅಥವಾ ಆಫ್ ಆಗುತ್ತವೆ. ನಮ್ಮ ಜೀನ್ ಗಳನ್ನು ನಾವು ಉಸಿರಾಡುವ ಗಾಳಿಯಲ್ಲಿ ನುಸುಳಿ ಬರುವ ಈ ಮಾಲಿನ್ಯಕಾರಕಗಳು ಅಪಹರಿಸಿ ಜೀವಕೋಶದಲ್ಲಿನ ಕೆಲಸಗಳನ್ನು ಏರು ಪೇರು ಮಾಡುತ್ತವೆ ಎಂದು ಸುಲಭ ರೀತಿಯಲ್ಲಿ ಹೇಳಬಹುದು.

ಇಲ್ಲಿಯವರೆಗೆ ಅಂತೆ ಕಂತೆಗಳಾಯಿತು. ಇದನ್ನು ಪ್ರಯೋಗದ ಮೂಲಕ ಹೇಗೆ ತಿಳಿದುಕೊಂಡರು ಎಂಬುದನ್ನು ನೋಡಿಯೇ ಬಿಡೋಣ ಬನ್ನಿ. ಮೇಲಿನ ಇಷ್ಟೂ ಪುರಾಣ ಊದಲು ಕ್ಯಾನಡಾದ ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಪ್ರಯೋಗ ಇಂತಿದೆ.

ಇದಕ್ಕಾಗಿ 16 ಸ್ವಯಂಸೇವಕರನ್ನು ಕರೆದು, ನಮ್ಮ ಶೌಚಾಲಯದಷ್ಟಿರುವ ಒಂದು ಸಣ್ಣ ರೂಮಿನಲ್ಲಿ ಬಿಟ್ಟರು. ಈ ಹದಿನಾರು ಜನರಲ್ಲಿ ಅರ್ಧ ಭಾಗದ ಸ್ವಯಂಸೇವಕರಿಗೆ ಶುದ್ಧ ಗಾಳಿಯನ್ನು ಉಸಿರಾಡಲು ನೀಡಿದರು. ಇನ್ನರ್ಧ ಭಾಗದವರಿಗೆ ಡೀಸಲ್ ವಾಹನದಿಂದ ಹೊರ ಸೂಸುವ ಹೊಗೆಯುಕ್ತ(ಚೈನಾದ ಬೀಜಿಂಗ್ ನಗರದಲ್ಲಿ ಸಿಗುವ ಮಾಲಿನ್ಯ ಗಾಳಿಯನ್ನು ಹೋಲುವ) ಗಾಳಿಯನ್ನು ಉಸಿರಾಡಲು ಕೊಟ್ಟರು. ಅವರು 2 ಘಂಟೆಗಳ ಕಾಲ ಅದೇ ರೂಮಿನಲ್ಲಿದ್ದು ಉಸಿರಾಡಬೇಕಿತ್ತು. ಆ ರೂಮಿನಲ್ಲಿ ಕೂತು ಉಸಿರಾಡಿ ಹೊರಬಂದ ಸುಮಾರು 6.30 ಘಂಟೆಯ ನಂತರ ಪ್ರಯೋಗದ ಪರಿಣಾಮ ತಿಳಿಯಲು ಹದಿನಾರೂ ಸ್ವಯಂಸೇವಕರ ರಕ್ತವನ್ನು ತೆಗೆದುಕೊಂಡು ಪರೀಕ್ಷಿಸಿದರು.

ಪ್ರಯೋಗದ ಫಲಿತಾಂಶ ಹೀಗಿದೆ. ಮಾಲಿನ್ಯಯುಕ್ತ ಗಾಳಿಯನ್ನು ಸೇವಿಸಿದ್ದ 8 ಸ್ವಯಂಸೇವಕರ ದೇಹದ ಡಿ. ಎನ್. ಎ ಗಳಲ್ಲಿ 6800 ಜಾಗಗಳಲ್ಲಿ ಮೀಥೈಲ್ ಗ್ರೂಪ್ ನ ಅಣುವು ಬದಲಾಯಿಸಲ್ಪಟ್ಟಿತ್ತು. ಈ ಬದಲಾವಣೆಯು ಸುಮಾರು 400 ಜೀನ್ ಗಳ ಮೇಲೆ ಪರಿಣಾಮ ಬೀರಿದ್ದವು. ಹೆಚ್ಚಾಗಿ ಆಫ್ ಇದ್ದ ಜೀನ್ ಗಳನ್ನು ಈ ಮಾಲಿನ್ಯಯುಕ್ತ ಗಾಳಿಯು ಜೀನ್ ಗಳನ್ನು ಆನ್ ಮಾಡಿದ್ದವು. ಇದರಿಂದಾಗಿ ಅನಾವಶ್ಯಕ ಅತೀ ಹೆಚ್ಚು ಜೀನ್ ಗಳು ಕೆಲಸ ಮಾಡುತ್ತಿದ್ದವು. ಆದರೆ ಶುದ್ಧ ಗಾಳಿ ಸೇವಿಸಿದ್ದ ಯಾರಲ್ಲೂ ಇಂತಹ ಬದಲಾವಣೆಗಳು ಆಗಿರಲಿಲ್ಲ ಎನ್ನುವುದು ಗಮನಾರ್ಹ. ಸರಿ ಹಾಗಾದರೆ ಇದರಿಂದ ನಮ್ಮ ದೇಹದ ಮೇಲಾಗುವ ದುಷ್ಪರಿಣಾಮವೇನು? ಇದನ್ನು ಸರಿಯಾಗಿ ಸುಲಭ ಕನ್ನಡದಲ್ಲಿ ಹೇಳಿ ಎಂಬ ನಿಮ್ಮ ಮನದ ಮಾತು ನನಗೆ ತಲುಪಿದೆ. ಆದರೆ ದುರಾದೃಷ್ಟವಶಾತ್ ಅದಕ್ಕೆ ಸರಿಯಾದ ಉತ್ತರ ಹುಡುಕಿ ಕೊಡುವಷ್ಟು ದೂರ ಈ ಸಂಶೋಧನೆ ಹೋಗಲಿಲ್ಲವಾದರೂ ದೀರ್ಘಕಾಲದ ಮಾಲಿನ್ಯಯುಕ್ತ ಗಾಳಿಯನ್ನು ಸೇವಿಸುವುದರಿಂದ ಅಸ್ತಮಾ ಖಾಯಿಲೆ ಬರುವ ಹೆಚ್ಚು ಸಾಧ್ಯತೆಗಳಿವೆ ಎಂಬುದನ್ನು ಹೇಳುತ್ತದೆ. ಅಷ್ಟೆಯೇ…ಎಂದು ರಾಗ ಎಳೆಯುತ್ತಾ ಈ ಸಂಶೋಧನೆಯನ್ನು ತಳ್ಳಿಹಾಕಲಾಗದು. ಏಕೆಂದರೆ ಇಷ್ಟು ಕಡಿಮೆ ಸಮಯದ ಮಾಲಿನ್ಯ ಗಾಳಿಯ ಸೇವನೆಯಿಂದಾಗಿ ನಮ್ಮ ದೇಹದ ಡಿ. ಎನ್. ಎ ಬದಲಾಗುವುದೆಂಬ ವಿಷಯ ಎಷ್ಟೋ ವಿಜ್ಞಾನಿಗಳಿಗೇ ಹುಬ್ಬೇರಿಸುವಂತೆ ಮಾಡಿದೆ.ಇಲ್ಲಿ ಕೇಳಬೇಕಾದ ಸರಿಯಾದ ಪ್ರಶ್ನೆಯೆಂದರೆ, ಕೇವಲ ಎರಡು ಘಂಟೆಗಳ ಅವಧಿಯಲ್ಲೇ ಡಿ. ಎನ್. ಎ ಯಲ್ಲಿ ಇಷ್ಟು ಬದಲಾವಣೆಯಾದರೇ ಇನ್ನು ಮಾಲಿನ್ಯಯುಕ್ತ ಗಾಳಿಯನ್ನು ದಿನಾಲು ಸೇವಿಸುತ್ತಿರುವವರ ಗತಿಯೇನು? ಎನ್ನುತ್ತಾರೆ ಜಿಯಾಂಗ್.

ನಿಮ್ಮ ಪ್ರಕಾರಗಳ ನಮಗೆ ಬರೆದು ತಿಳಿಸಿ :- [email protected]

ಮೂಲ ಲೇಖನ: Science News for Students

ಜೈ ಕುಮಾರ್ .ಆರ್
ಡಬ್ಲ್ಯೂ.ಸಿ.ಜಿ., ಬೆಂಗಳೂರು.

Spread the love
error: Content is protected.