ದೇಹದೊಳಗೇ ಬೆಳೆಸಿದ ಗಿಡ!
ನಾವು ಕಂಡಿರುವ ಹಾಗೆ ಪಾಚಿ ಬೆಳೆಯುವ ಸ್ಥಳಗಳೆಂದರೆ ನಿಂತ ನೀರಲ್ಲೋ, ಕೆರೆಯಲ್ಲೋ ಅಥವಾ ನದಿಯಲ್ಲೋ ಎನ್ನುತ್ತೇವೆ. ಇದು ನಮ್ಮ ಸಾಮನ್ಯ ಜ್ಞಾನ. ಆದರೆ ಇದೇ ಮಾತನ್ನು ಕೆಲವರು ವಿಜ್ಞಾನಿಗಳ ಬಳಿ ಕೇಳಿದರೆ ಅವರು ಹೀಗೆ ಹೇಳಬಹುದು, ರಕ್ತ ನಾಳಗಳಲ್ಲೋ, ನರಗಳಲ್ಲೋ ಅಥವಾ ಮೆದುಳಲ್ಲೋ ಇರಬಹುದು ಎಂದು. ಅವರ ಈ ಮಾತುಗಳು ನೂರಕ್ಕೆ ನೂರು ಭಾಗ ಒಪ್ಪುವಂತಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಇದೇ ನಿಜವಾದರೆ ಆಶ್ಚರ್ಯಪಡಬೇಕಾಗಿಲ್ಲ. ಏಕೆಂದರೆ ಇತ್ತೀಚೆಗಿನ ಸಂಶೋಧನೆಯೂ ಅದನ್ನೇ ಹೇಳುವಂತಿದೆ. ನಿಮ್ಮ ಊಹೆ ಸರಿಯಾಗಿಯೇ ಇದೆ. ವಿಜ್ಞಾನಿಗಳ ಈ ವಿಚಿತ್ರ ಮಾತಿಗೆ ಕಾರಣ ಇದೇ ಸಂಶೋಧನೆ. ಇಷ್ಟಕ್ಕೂ ಏನಿದು ಸಂಶೋಧನೆ? ಮೊದಲು ಅದನ್ನು ಹೇಳಿ, ಎಳೆದದ್ದು ಸಾಕು! ಎನ್ನುವ ಮುಂಚೆಯೇ ಇದೋ ಹೇಳಿಬಿಡುತ್ತೇನೆ. ಕಪ್ಪೆ ಮರಿಗಳ(ಟ್ಯಾಡ್ ಪೋಲ್) ರಕ್ತನಾಳಗಳಲ್ಲಿ ಒಂದು ರೀತಿಯ ಪಾಚಿಯನ್ನು ಬೆಳೆಸಿದ್ದಾರಂತೆ, ಇದರಿಂದ ಆಮ್ಲಜನಕ ಕಡಿಮೆ ಸಿಗುವ ನರ ಜೀವಕೋಶಗಳಿಗೆ ಅಲ್ಲಿಂದಲೇ ಅಂದರೆ ರಕ್ತನಾಳಗಳಿಂದಲೇ ಆಮ್ಲಜನಕವನ್ನು ಪೂರೈಸಬಹುದಂತೆ!
ಅದು ಸರಿ. ರಕ್ತ ನಾಳಗಳಲ್ಲಿ ಸೂಕ್ಷ್ಮ ರೋಬೋಟುಗಳನ್ನು ಕಳಿಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾಯಿತು. ಈಗ ಇದೊಂದು ಬಾಕಿ ಇತ್ತು…ದೇಹದೊಳಗೇ ಗಿಡ ಬೆಳೆಸುವುದು!ಆದರೆ ನಾವಿದನ್ನು ನೋಡಬೇಕಾದ ದೃಷ್ಟಿಕೋನವೇ ಬೇರೆ. ಈ ಸಂಶೋಧನೆಯಿಂದ ಮುಂದೊಂದು ದಿನ ನರ ಜೀವಕೋಶಗಳಿಗೆ ಕಡಿಮೆ ಆಮ್ಲಜನಕದ ಪೂರೈಕೆಯಿಂದ ಒದಗುವಂತಹ ಲಕ್ವ(ಸ್ಟ್ರೋಕ್) ರೋಗಗಳಿಗೆ ಇದೇ ಉತ್ತಮ ಪರಿಹಾರವಾಗಬಹುದು. ‘ಮೊದಮೊದಲಿಗೆ ಇದೆಲ್ಲಾ ಕೇಳಿದರೆ ತಮಾಷೆಯಂತೆ ಕಂಡರೂ ಇದು ಸಾಧ್ಯವಿದೆ! ಎಂದಾದರೆ ಏಕಾಗಬಾರದು? ನನಗಂತೂ ಇದರಲ್ಲಿ ಬೃಹತ್ ಸಾಮರ್ಥ್ಯ ಕಾಣುತ್ತಿದೆ’ ಎನ್ನುತ್ತಾರೆ ನರಜೀವ ವಿಜ್ಞಾನಿ ಸೂಸನ್. ಆದರೆ ಸ್ಟ್ರಾಕಾ ಎಂದು ಕರೆಯಲ್ಪಡುವ ಇನ್ನೊಬ್ಬ ನರಜೀವ ವಿಜ್ಞಾನಿ ಒಂದು ಹೆಜ್ಜೆ ಮುಂದೆ ಹೋಗಿ, ಇಂತಹ ಸಂಶೋಧನೆ ಮುಂದೊಂದು ದಿನ ದೂರದ ಬಾಹ್ಯಾಕಾಶ ಯಾನಗಳಿಗೆ ತೆರಳುವ ಗಗನಯಾತ್ರಿಗಳ ಆಮ್ಲಜನಕ ಸಿಲಿಂಡರುಗಳ ಬದಲಿಗೆ ದೇಹದಲ್ಲಿಯೇ ಇವುಗಳನ್ನು ಅಳವಡಿಸಿದರೆ ಸಾಕು! ಎನ್ನುತ್ತಿದ್ದಾರೆ.
ಅದೆಲ್ಲಾ ಇರಲಿ, ಮೊದಲಿಗೆ ಈ ದೇಹದಲ್ಲಿ ಪಾಚಿ ಬೆಳೆಸುವ ಆಲೋಚನೆ ಹೇಗೆ ಹುಟ್ಟಿತು? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಸ್ಟ್ರಾಕಾ, ಸೂಸನ್ ಮತ್ತು ಅವರ ಸಂಗಡಿಗರು ಕಪ್ಪೆಯ ತಲೆಯನ್ನು ದೇಹದಿಂದ ಪ್ರತ್ಯೇಕಿಸಿ ಅದರ ಮೆದುಳನ್ನು ಸಕ್ರಿಯವಾಗಿಡಲು ಆಮ್ಲಜನಕವನ್ನು ಹೊರಗಿನಿಂದ ಸಣ್ಣ ಕೊಳವೆಗಳ ಮೂಲಕ ನೀಡುತ್ತಿದ್ದರು. ಹೀಗೊಂದು ದಿನ ಸಸ್ಯಶಾಸ್ತ್ರಜ್ಞರ ಜೊತೆ ನಡೆದ ಸಂವಾದದಲ್ಲಿ ಅವರು ನೀಡಿದ ಸಲಹೆಯಂತೆ ಸ್ಟ್ರಾಕಾರವರಿಗೆ ಪಾಚಿಯನ್ನು ಆಮ್ಲಜನಕದ ಪೂರೈಕೆಗೆ ಬಳಸುವ ಈ ಉಪಾಯ ಹೊಳೆಯಿತಂತೆ. ಆಗಲೇ ಕಪ್ಪೆ ಮರಿಗಳ ರಕ್ತನಾಳಗಳಿಗೆ ಹಸಿರು ಪಾಚಿ(ಕ್ಲಾಮೈಡೋಮನಾಸ್) ಅಥವಾ ಸಯನೋಬ್ಯಾಕ್ಟೀರಿಯಾ(ಸೈನೆಕೊಸೈಟಿಸ್ ) ಅನ್ನು ಒಳನುಗ್ಗಿಸಿದರು. ಇವುಗಳು ಕಪ್ಪೆಮರಿಗಳ ಅರೆಪಾರದರ್ಶಕ ಚರ್ಮದಿಂದ ಒಳಬರುವ ಬೆಳಕನ್ನೇ ಉಪಯೋಗಿಸಿ ಆಮ್ಲಜನಕವನ್ನು ತಯಾರಿಸುತ್ತಿದ್ದವಂತೆ. ಇವುಗಳಿಂದ ಬರುತ್ತಿರುವ ಆಮ್ಲಜನಕ ನಿಜವಾಗಿಯೂ ಉಪಯೋಗವಾಗುವುದೇ ಎಂದು ತಿಳಿಯಲು ಇವರು ನಡೆಸಿದ ಪ್ರಯೋಗ ಇಂತಿದೆ.
ಮೊದಲಿಗೆ ಕಪ್ಪೆಯ ಮೆದುಳಿನಲ್ಲಿನ ಒಂದು ಭಾಗದಲ್ಲಿ ಸರಬರಾಜಾಗುತ್ತಿದ್ದ ಆಮ್ಲಜನಕವನ್ನು ತೆಗೆದರು. ಅದರ ಪರಿಣಾಮವಾಗಿ ಕಪ್ಪೆಯ ಕಣ್ಣಿನ ನರ ಜೀವಕೋಶಗಳು ಸಿಗ್ನಲ್ ಕಳಿಸುವುದನ್ನು ನಿಲ್ಲಿಸಿದವು. ಇದಾದ ಬಳಿಕ ಆ ರಕ್ತನಾಳಗಳಲ್ಲಿದ್ದ ಪಾಚಿಗೆ ಬೆಳಕನ್ನು ನೀಡಲಾಯಿತು. ಅವರ ಆಶ್ಚರ್ಯಕ್ಕೆ ಕೆಲವೇ ಸಮಯದಲ್ಲಿ ಮತ್ತೆ ಆ ಕಣ್ಣಿನ ನರ ಜೀವಕೋಶಗಳಲ್ಲಿ ಸಿಗ್ನಲ್ ರವಾನೆ ಶುರುವಾಯಿತು.
ಇಷ್ಟಾದ ಬಳಿಕ ಪ್ರಯೋಗ ಯಶಸ್ವಿಯಾಗಿ ಇದನ್ನು ತಕ್ಷಣವೇ ರೂಢಿಗೆ ತರಲಾಗದು. ಏಕೆಂದರೆ ಇನ್ನೂ ಈ ಪಾಚಿ ರಕ್ತನಾಳಗಳಲ್ಲಿ ಎಷ್ಟು ಸಮಯದ ಕಾಲ ಉಳಿಯುತ್ತವೆ, ನಮ್ಮ ದೇಹವೂ ಸಹ ಹಿಂದೆಂದೂ ಇಲ್ಲದ ಇಂತದೇ ಹೊಸ ಅತಿಥಿಯನ್ನು ಹೇಗೆ ಒಪ್ಪುತ್ತದೆ ಎಂದು ಸ್ಪಷ್ಟವಾಗಿ ತಿಳಿಯದು. ‘ಈ ಸಂಶೋಧನೆಯು ನಿತ್ಯಜೀವನದಲ್ಲಿ ಸಧ್ಯಕ್ಕೆ ಬಳಸುವುದಂತೂ ಸುಳ್ಳು. ಆದರೆ ಇಂತಹ ಅಸಾಂಪ್ರದಾಯಿಕ ರೀತಿಯ ಸಂಶೋಧನೆಗಳಿಂದ ಲಕ್ವಗಳಂತಹ ಖಾಯಿಲೆಗಳಿಗೆ ಮುಂದೊಂದು ದಿನ ಸುಲಭ ಪರಿಹಾರ ಸಿಗಬಹುದು’ ಎನ್ನುತ್ತಾರೆ ನರವಿಜ್ಞಾನಿ ಕ್ಯಾತ್ಲೀನ್.
ಆದರೆ ಇಂತಹ ಮಾತುಗಳು ಸ್ಟ್ರಾಕಾ ಮತ್ತು ಉಳಿದ ಸಂಶೋಧಕರಿಗೆ ಧೃತಿಗೆಡಿಸಲಿಲ್ಲ. ಅವರ ಮಾತುಗಳಲ್ಲಿ ಹೇಳುವುದಾದರೆ, “ಈ ಸಂಶೋಧನೆಯ ಮುಂದಿನ ಹಂತದಲ್ಲಿ ಬಹುಶಃ ಗ್ಲೂಕೋಸ್ ಕಡಿಮೆ ಇರುವ ಜೀವಕೋಶಗಳಿಗೆ ಇದರಿಂದಲೇ ಅದನ್ನೂ ಪೂರೈಸಬಹುದು” ಎನ್ನುತ್ತಾರೆ. ನನ್ನ ಪ್ರಕಾರ ಇಂತಹ ಸಕಾರಾತ್ಮಕ ಯೋಚನೆಗಳೇ ಬೆಳವಣಿಗೆ ಹಾಗು ಅಸಾಧ್ಯವೆನಿಸುವ ಸಾಧನೆಗಳ ಮೊದಲ ಮೆಟ್ಟಿಲುಗಳು. ನಿಮ್ಮ ಪ್ರಕಾರ……?
– ಲೇಖನ : ಜೈ ಕುಮಾರ್ ಆರ್
ಡಬ್ಲ್ಯೂ ಸಿ ಜಿ , ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.