ಅಮೇಜ಼ಾನ್ ನಲ್ಲಿ ಕಾಡ್ಗಿಚ್ಚು

ಅಮೇಜ಼ಾನ್ ನಲ್ಲಿ ಕಾಡ್ಗಿಚ್ಚು

ಬೆಳಗಿನ ಸಮಯದಲ್ಲಿ ಮಳೆಕಾಡುಗಳ ಚಿತ್ರಣ ಹೇಗಿರುತ್ತದೆಂದರೆ, ಮೇಲಿನ ಚಪ್ಪರದಲ್ಲಿ ನೀರು ಜಿನುಗುವ ಜರೀ ಗಿಡಗಳು ಆರ್ಕಿಡ್ ಗಳು, ಮರದ ಕಾಂಡದ ಮೇಲೆ ಪಾಚಿಯ ಹಾಸು, ಕಲ್ಲುಹೂಗಳು, ಸೂರ್ಯನ ಬೆಳಕು ಬಿದ್ದಹಾಗೆ ಮೆಲ್ಲನೆ ಕರಗಿ ಹೋಗುವ ಇಬ್ಬನಿ, ಇಂಥ ಪರಿಸರದಲ್ಲಿ ಸುಟ್ಟುಹೋಗುವಂತಹ ಸಾಕಷ್ಟು ಎಲೆಗಳಿದ್ದರೂ ಅವು ತೇವದಿಂದ ಕೂಡಿದ್ದು, ಬೆಂಕಿಯನ್ನು ಊಹಿಸಲೂ ಅಸಾಧ್ಯ ಹಾಗೂ ಇಂತಹ ಸ್ಥಳಗಳಲ್ಲಿ ಮನುಷ್ಯನ ಕೈವಾಡವಿಲ್ಲದೇ ಎಂದೂ ಬೆಂಕಿ ಬೀಳುವುದಿಲ್ಲ.  ಕಲ್ಲಿದ್ದಲು ಮಾಪಕದಲ್ಲೂ ಕೂಡ ಅಮೇಜ಼ಾನ್ ಕಾಡುಗಳಲ್ಲಿ ಕಾಳ್ಗಿಚ್ಚು ಬಿದ್ದ ದಾಖಲೆ ಇಲ್ಲ.  ಕೊಲಂಬಸ್ ಅಮೇರಿಕಾವನ್ನು ಕಂಡುಹಿಡಿಯುವುದಕ್ಕೂ ಮೊದಲೇ ಬೆಳೆದಿರುವ ಸುಮಾರು 8000 ಮರಗಳಲ್ಲೂ ಸವನ್ನಾ ಕಾಡುಗಳ ಮರಗಳಲ್ಲಿ ಕಂಡುಬರುವಂತೆ ಕಾಡ್ಗಿಚ್ಚಿಗೆ ಹೊಂದಿಕೊಳ್ಳುವಂತಹ ಯಾವುದೇ ವಿಕಾಸ ಪ್ರಕ್ರಿಯೆಗಳೂ ಕಂಡುಬರುವುದಿಲ್ಲ (ಬೆಂಕಿ ಡೆಯಲು?? ದಪ್ಪನೆ ತೊಗಟೆಯನ್ನು ಹೊಂದುವುದು, ಕೆಳಹಂತದ ರೆಂಬೆ ಕೊಂಬೆಗಳು ಉದುರಿ ಹೋಗುವುದು, ಬೆಂಕಿಯ ಸಹಾಯದಿಂದ ಬೀಜ ಪ್ರಸಾರ).

ಇಂದು ಅಮೇಜ಼ಾನ್ ಕಾಡುಗಳಲ್ಲಿ ಸಂಭವಿಸುತ್ತಿರುವ ಸಾವಿರಾರು ಕಾಳ್ಗಿಚ್ಚುಗಳನ್ನು ನಾವು ಅಭ್ಯಸಿಸಬೇಕು. ಕಾಡಿಗೆ ಬಿದ್ದ ಬೆಂಕಿಯ ಪರಿಸ್ಥಿತಿ ಕೈಮೀರಿಹೋದಾಗ ಕಾಡ್ಗಿಚ್ಚು ಎಂದು ಕರೆಯಬೇಕಾಗುತ್ತದೆ. ಎಂದೂ ಕಾಡ್ಗಿಚ್ಚು ಬೀಳದೆ ಅದಕ್ಕೆ ತಕ್ಕುದಾದ ಬದಲಾವಣೆಗಳನ್ನು ಹೊಂದದೆ ಬೆಳೆದಿರುವ ಕಾಡಿಗೆ ಇಂದು ಕಾಳ್ಗಿಚ್ಚು ಬಿದ್ದಿದೆ ಎಂದರೆ ಏನರ್ಥ? ಹಾಗೂ ಬೆಂಕಿಯ ಹಾನಿಯನ್ನು ಹೇಗೆ ತಗ್ಗಿಸುವುದು?

ಅಭಾದಿತ ಉಷ್ಣವಲಯದ ಕಾಡುಗಳಲ್ಲಿ ಕಾಳ್ಗಿಚ್ಚು ಎಂದರೆ ಇಡೀ ಕಾಡಿಗೆ ಬೆಂಕಿಬಿದ್ದು ವೀಡಿಯೋಗಳಲ್ಲಿ ಕಂಡಂತೆ ಯಾ ಪುರಾಣದಲ್ಲಿ ಓದಿದ ಖಾಂಡವವನ ದಹನ, ಕಳೆದ ಬೇಸಿಗೆಯಲ್ಲಿ ಬಂಡೀಪುರ ಉರಿದು ಹೋದಂತೆ ಬೆಂಕಿಬೀಳುವುದಿಲ್ಲ. ಸುಮಾರು 700 ರಿಂದ 800 ಅಡಿಗಳಷ್ಟು ಕಾಡಿನ ಪ್ರದೇಶದಲ್ಲಿ ಒಂದು ಅಡಿಗೂ ಕಡಿಮೆ ಎತ್ತರದ ಜ್ವಾಲೆಯು ಕೇವಲ ಒಣ ಎಲೆಗಳು ಹಾಗೂ ಉದುರಿರುವ ಸಣ್ಣಪುಟ್ಟ ಕೊಂಬೆಗಳನ್ನು  ಸುಡುತ್ತವೆ. ಇಂತಹ ಕಾಡ್ಗಿಚ್ಚು ಆರಂಭವಾದಾಗ, ಅಲ್ಲಿರುವಂತಹ ಬಹಳಷ್ಟು ಜೀವಿಗಳು ಮತ್ತೊಂದು ಸ್ಥಳಕ್ಕೆ ಓಡಿಹೋಗುತ್ತವೆ, ಅಲ್ಲೇನಾದರೂ ಅಗ್ನಿಶಾಮಕದಳದವರಿದ್ದರೆ,  ಬಹಳ ಸುಲಭವಾಗಿ ಬೆಂಕಿ ದಾರಿಗಳನ್ನು ಮಾಡಿ ಬೆಂಕಿಯನ್ನು ನಂದಿಸಿ ಹತೋಟಿಗೆ ತರುತ್ತಾರೆ ಅಥವಾ ರೈತ ಇರುವೆಗಳು ಸಾಗಿರುವ ಸಣ್ಣ ಹಾದಿಯೂ ಇಂತಹ ಬೆಂಕಿಯನ್ನು ತಡೆಗಟ್ಟುತ್ತವೆ. ಬೆಂಕಿಯ ತೀವ್ರತೆ  ಅದರ ಅಗಾಧತೆಯನ್ನು ಕುರಿತು ತಿಳಿಸಬೇಕೆಂದೇನು ಇಲ್ಲ.

ಕಾಡ್ಗಿಚ್ಚನ್ನು ಪ್ರತಿರೋಧಿಸಿ ಉಳಿಯುವ ಕಲೆ ಈ ಮಳೆಕಾಡಿನ ಮರಗಳಲ್ಲಿ ವಿಕಾಸವಾಗದ ಕಾರಣ, ಇಲ್ಲಿಯ ಮರಗಳು ಸುಲಭವಾಗಿ ಬೆಂಕಿಗಾಹುತಿಯಾಗುತ್ತವೆ. ಒಂದು ಅತಿ ಸಣ್ಣ ಪ್ರಮಾಣದ ಕಾಡ್ಗಿಚ್ಚು ಕೂಡಾ ಸಣ್ಣಮರಗಳನ್ನು ಪೂರ್ಣ ಸುಟ್ಟು ಹಾಕುತ್ತವೆ. ದೊಡ್ಡಮರಗಳು ಬೆಂಕಿಗಾಹುತಿಯಾದ ಕೆಲವರ್ಷಗಳಲ್ಲಿ ಸತ್ತು ಹೋಗುತ್ತವೆ. ಇದರಿಂದ ಕೆಲವೇ ವರ್ಷಗಳಲ್ಲಿ ಮರಗಳ ಸಂಖ್ಯೆ ನಶಿಸುತ್ತದೆ. ಮರಗಳು ಸುಟ್ಟು ಹೋದಾಗ ಅದರಹಿಂದೆ ಮತ್ತೆಬೆಳೆಯುವ ಮರ ಎಂದೂ ಸುಟ್ಟುಹೋದ ಮರದ ಸ್ಥಳವನ್ನು ತುಂಬಲಾಗದು. ಒಮ್ಮೆ ಮರ ಸುಟ್ಟು ಹೋಗಿ ಆ ಸ್ಥಳದಲ್ಲಿ ಮತ್ತೊಂದು ಮರಬೆಳೆದು 30ವರ್ಷ ಕಳೆದರೂ, ಹೊಸದಾಗಿ ಬೆಳೆದಮರ ಸುಟ್ಟುಹೋದ ಮರದ ಸ್ಥಳವನ್ನು ತುಂಬಿಕೊಡಲಾಗದು. ಮರಗಳ ಮೇಲೆ ಇಂತಹ ಪರಿಣಾಮವಾದಾಗ, ಅದರಮೇಲೆ ಅವಲಂಬಿತವಾಗಿರುವ ಪ್ರಾಣಿಪಕ್ಷಿಗಳ ಮೇಲೂ ಪರಿಣಾಮ ಬೀರುತ್ತದೆ. ಸುಟ್ಟಕಾಡಿನ ಮೂಲವಾಸಿ ಪ್ರಾಣಿಪಕ್ಷಿಗಳು ವಲಸೆಹೋಗುತ್ತವೆ ಹಾಗೂ ಹುಳುಗಳನ್ನವಲಂಬಿಸಿರುವ ಪಕ್ಷಿಗಳು ಇಲ್ಲವಾಗುತ್ತವೆ; ಕಾಡಿನಮೇಲೆ ಅವಲಂಬಿತವಾಗಿರುವ ಸ್ಥಳೀಯರಿಗೆ ಅವರಿಗೆ ಬೇಕಾದ ಔಷಧಿ ಹಾಗೂ ಇತರ ಉತ್ಪನ್ನಗಳು ಸಿಗದೆ ಹೋಗುತ್ತವೆ.

ಕಾಡು ಮೊದಲಸಲ ಸುಟ್ಟುಹೋದಾಗ ಈ ಬದಲಾವಣೆಗಳು ಕಾಣುತ್ತವೆ, ಪದೇಪದೇ ಬೆಂಕಿಬೀಳುವ ಕಾಡುಗಳ ಕಥೆಯೇ ಬೇರೆ. ಅರ್ದಂಬರ್ಧಸುಟ್ಟ ಮರಗಳು ಮತ್ತೆ ಬೆಂಕಿ ಬಿದ್ದಾಗ ಸುಲಭವಾಗಿ ಬೆಂಕಿಗೆ ಆಹುತಿಯಾಗುತ್ತವೆ ಹಾಗೂ ಜ್ವಾಲೆ ಎತರೆತ್ತರಕ್ಕೆ ತನ್ನ ಕೆನ್ನಾಲಿಗೆಯನ್ನು ಚಾಚಿ  ಉಳಿದಿರುವ ಇತರ ಮರಗಳೂ ಬೆಂಕಿಗಾಹುತಿಯಾಗುತ್ತವೆ. ಇಂತಹ ಪರಿಸ್ಥಿತಿ ಮುಂದುವರೆದರೆ ಅಮೇಜ಼ಾನ್ ಕಾಡುಗಳು ಸವನ್ನಾ ಬಯಲು ಕಾಡಿನಂತೆ ಕುರುಚಲುಪೊದೆ, ಅಲ್ಲೊಂದು ಇಲ್ಲೊಂದು ಮರ ಇರುವಂತೆ ಬದಲಾಗುತ್ತದೆ. ತನ್ನ ವಿಶೇಷತೆಗಳನ್ನು ಕಳೆದುಕೊಳ್ಳುತ್ತದೆ.

ಅತಿಮುಖ್ಯವಾದ ವಿಚಾರವೇನೆಂದರೆ ಅಮೇಜ಼ಾನಿನ ಕಾಡುಗಳಲ್ಲಿ ಬೆಂಕಿ ಬೀಳುವುದು ಅಪರೂಪದಲ್ಲಿ ಅಪರೂಪದ ವಿಷಯ, ಇತ್ತೀಚಿಗೆ ಅಲ್ಲಿ ಮತ್ತೆ ಮತ್ತೆ  ಬೆಂಕಿ ಯಾಕೆ ಬೀಳುತ್ತಿದೆ? ಇಲ್ಲಿಯವರೆಗೂ ಅಮೇಜ಼ಾನ್ ಕಾಡುಗಳಲ್ಲಿ ಎಲ್ಲಿಗೆ ಬೆಂಕಿ ಬಿದ್ದು ಏನು ಸುಟ್ಟುಹೋಗುತ್ತಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಉಪಗ್ರಹಗಳು ಬೆಂಕಿ ಹಾಗೂ ಹೊಗೆಯನ್ನು ಪತ್ತೆಹಚ್ಚಿವೆ. ಬೆಂಕಿನಿಂತಾಗ ನಮಗೆ ನಿಖರವಾದ ಮಾಹಿತಿ ದೊರೆಯುತ್ತದೆ.

 ಅಮೇಜ಼ಾನ್ ನ ಮೂಲನಿವಾಸಿಗಳು ಹಾಕುವ ಬೆಂಕಿಯಿಂದ ಈ ಅಕ್ರಮ ಬೆಂಕಿಗಳನ್ನು ಬೇರ್ಪಡಿಸಿ ನೋಡಬೇಕು. ಕೆಲವೊಮ್ಮೆ ಮಾನವನೆ ಕಾಡನ್ನು ಕಡಿದು ಬೆಂಕಿ ಹಾಕುತ್ತಾನೆ, ಹಾಗೂ ಅದೊಂದು ಹುಲ್ಲುಗಾವಲಾಗಿ ಪ್ರಾಣಿಗಳಿಗೆ ಮೇವು ಸಿಗುತ್ತದೆ. ಹಾಗೂ ವ್ಯವಸಾಯಕ್ಕೆ ಭೂಮಿ ದೊರೆಯುತ್ತದೆ.  ಈಗ ಒಣ ಹವಾಮಾನವಿದ್ದರೂ ಅಮೇಜ಼ಾನ್ ಕಾಡುಗಳ ಬೆಂಕಿ ನಮಗೆಲ್ಲ ಒಂದು ಚೇತಾವ?ನೆಯಾಗಿದೆ. ಇದರಲ್ಲಿ ಬಹಳಷ್ಟು ಬೆಂಕಿ ಅಪಘಾತಗಳು ಕಾನೂನು ಬಾಹಿರವಾಗಿವೆ ಹಾಗು ರಾಜಕೀಯ ಪ್ರೇರಿತವಾಗಿವೆ. ಕಾಡಿಗೆ ಬೆಂಕಿ ಬಿದ್ದಾಗ ಬೆಂಕಿದಾರಿಯಂತಹ ಸರಳ ಉಪಾಯಗಳಿಂದ ಬೆಂಕಿಯನ್ನು ಹತೋಟಿಗೆ ತರಬೇಕು. ತನ್ನ ಅಮೇಜ಼ನ್ ಕಾಡುಗಳನ್ನು ಉಳಿಸಿ ಬೆಳೆಸಬೇಕಾದ ಬ್ರೆಜ಼ಿಲ್ ಸರ್ಕಾರ ಕಾಡುಗಳಿಗೆ ನೀಡುವ ಅನುದಾನದಲ್ಲಿ ಶೇ95 ರಷ್ಟು ಕಡಿತ ಮಾಡಿದೆ. ಇದೊಂದು ದುಃಖಕರ ವಿವೇಚನಾರಹಿತ ದೂರದೃಷ್ಟಿ ಇರದ ನಿರ್ಧಾರ.

ಕಾಡಿಗೆ ಬೆಂಕಿ ಬೀಳುವುದನ್ನು ಕಡಿಮೆ ಮಾಡಲು ಕಾಡಂಚಿನ ನಾಶವನ್ನು ತಡೆಗಟ್ಟಬೇಕು, ಇಲ್ಲದಿದ್ದರೆ ಕಾಡಂಚಿನ ಜಮೀನುಗಳು ಮಳೆಗಳನ್ನು ವ್ಯತ್ಯಸಿಸಿ ಹವಾಮಾನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಹಾಗೂ ಮಳೆ ಕಡಿಮೆಯಾಗುತ್ತದೆ. ಬೆಂಕಿಬೀಳದ ಕಾಡಿನೊಳಗೆ ಯಾವಾಗಲೂ ತೇವಾಂಶವಿದ್ದು ಎಲೆಗಳು ಬೇಸಿಗೆಯಲ್ಲೂ ಹಸಿಯಾಗಿರುತ್ತವೆ. ಆದರೆ ಬೆಂಕಿಬಿದ್ದ ಕಾಡಿನೊಳಗೆ ಎಲೆಗಳು ಒಣಗಿರುತ್ತವೆ ಹಾಗೂ ಕಾಲ್ತುಳಿತಕ್ಕೆ ಸದ್ದುಮಾಡುತ್ತವೆ ಹಾಗೂ ಸುಲಭವಾಗಿ ಬೆಂಕಿಗೆ ತುತ್ತಾಗುತ್ತವೆ.

ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಹೆಚ್ಚುತ್ತಿರುವ ಕಾಡುನಾಶ, ಮಾನವನ ಕಾಡಿನ ಉತ್ಪನ್ನಗಳಮೇಲೆ ಹೆಚ್ಚಾದ ಮೋಹ, ಕಾಡನ್ನು ಕಡಿದು ಸುಡುವುದರಿಂದ ಸಿಗುವ ಮೇವು, ವ್ಯವಸಾಯದ ಜಮೀನಿನ ದುರಾಸೆಗೆ ಬಿದ್ದಿರುವ  ಮಾನವ ತನ್ನುಳಿವಿಗೆ ಬೇಕಾದ ಕಾಡಿಗೆ ತಾನೇ ಕೊಳ್ಳಿ ಇಡುತ್ತಿದ್ದಾನೆ. ಕಾಡುಗಳ ನಾಶದಿಂದ ಉಳಿವಿನಿಂದ ಪ್ರಕೃತಿಗೆ ಏನೂ ಆಗದು, ನಮ್ಮ ಬದುಕೇ ದುಸ್ತರವಾಗುವುದು.

ಲೇಖನ: ಡಾ.ದೀಪಕ್ ಬಿ.
ಮೈಸೂರು ಜಿಲ್ಲೆ

Print Friendly, PDF & Email
Spread the love
error: Content is protected.