ಆನೆ

ಆನೆ

© ನಾಗೇಂದ್ರ ಎನ್. ಬಿ.

ಕಾಡಂಚಿನಲ್ಲಿದ್ದ ನಮ್ಮ ಜಮೀನಿನಲ್ಲೆ ವಾಸಿಸುತ್ತಿದ್ದರಿಂದ ಕಾಡುಪ್ರಾಣಿಗಳಿಗೂ ನಮಗೂ ಆಗಾಗ ಮುಖಾಮುಖಿಯಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ಕಾಡಂಚಿಗೆ ಬರುತ್ತಿದ್ದ ನರಿಗಳ ಊಳು ಕಾಡನ್ನ ಪ್ರತಿಫಲಿಸುತ್ತಿತ್ತು. ಮೊಲ-ಕಾಡುಹಂದಿಗಳು ಹೊಲದಲ್ಲಿನ ಬೆಳೆಯನ್ನರಿಸಿ ಬರುತ್ತಿದ್ದವು, ಅಂತೆಯೇ ಆನೆಗಳೂ ಬರುತ್ತಿದ್ದವು. ಅವುಗಳ ತಪ್ಪೇನಿಲ್ಲ, ಹಿಂದೆ ನಮ್ಮ ಪೂರ್ವಜರು ಇಲ್ಲಿದ್ದ ಕಾಡನ್ನ ಕಡಿದು ಆಕ್ರಮಿಸಿಕೊಂಡು ಜಮೀನುಗಳಾಗಿ ಮಾಡಿಕೊಂಡಿದ್ದು ಇಂದು ಅದನ್ನೇ ನಾವು ಅವಲಂಬಿಸಿದ್ದೇವೆ ಅಷ್ಟೆ. ಆದ್ದರಿಂದ ಜಮೀನುಗಳಿಗೆ ಆನೆ, ಕಾಡುಹಂದಿಗಳು ಬರುವುದು ನಮ್ಮೂರಿನ ಸುತ್ತಮುತ್ತ ಮಾಮೂಲಿ ವಿಷಯವಾಗಿ ಹೋಗಿತ್ತು.

ಅಂದು ಸಂಜೆ ಆರರ ಸಮಯ ಆಗತಾನೆ ಸೂರ್ಯ ಪಶ್ಚಿಮದಲ್ಲಿ ಮುಳುಗಿದ್ದ. ಕತ್ತಲು ಬೆಳಕನ್ನು ಬಲವಂತವಾಗಿ ಆವರಿಸುವಂತಿತ್ತು, ಮಬ್ಬುಮಬ್ಬಾಗಿ ಎಲ್ಲವೂ ಕಾಣುತ್ತಿತ್ತು. ನಾನು ಏನೋ ಕೆಲಸದ ನಿಮಿತ್ತ ಊರಕಡೆಗೆ ಹೆಜ್ಜೆ ಹಾಕಿದೆ. ಮೂರ್ನಾಲ್ಕು ಫರ್ಲಾಂಗು ನಡೆದಿರಬೇಕು. ರಸ್ತೆಯ ಪಕ್ಕದಲ್ಲೆ ಲೊಟಕ್ಕನೆ ಕೊಂಬೆ ಮುರಿದ ಸದ್ದಾಯ್ತು. ಈ ಶಬ್ಧ ಕಿವಿಗೆ ಬಿದ್ದ ತಕ್ಷಣವೇ ನನಗರಿವಿಲ್ಲದೇ ನನ್ನ ಕಾಲುಗಳು ಓಡಲಾರಂಭಿಸಿದವು. ಕ್ಷಣಾರ್ಧದಲ್ಲಿ ಮನೆ ಸೇರಿ ಮನೆಯಲ್ಲಿದ್ದ ಟಾರ್ಚ್ ತೆಗೆದುಕೊಂಡು ಹೊರಬಂದು ನೋಡಿದೆ. ಮೂರು ದೈತ್ಯ ಆನೆಗಳು ರಸ್ತೆ ದಾಟಿ ಆಗ ತಾನೆ ನಮ್ಮ ಜಮೀನಿನ ಒಳಕ್ಕೆ ಬಂದು ನಿಂತಿದ್ದವು. ಟಾರ್ಚ್ ಬೆಳಕಿಗೆ ಚಕಿತವಾದ ಆನೆಗಳು ಮುಂದೆ ಸಾಗಿ ಕತ್ತಲಲ್ಲಿ ಲೀನವಾಗಿ ಹೋದವು. ಒಂದೆರಡು ನಿಮಿಷದಲ್ಲಿ ನಮ್ಮ ಜಮೀನಿನಿಂದ ಸುಮಾರು ದೂರದಲ್ಲಿ ಆನೆಗಳು ಹೋದ ದಿಕ್ಕಿಗೆ  ಟಿಟ್ಟಿಭಗಳು ಕೂಗಲಾರಂಭಿಸಿದವು. ಆಗ ನಮ್ಮ ತಂದೆ “ಹೋ ಕಂಟಪ್ಪನ್ ಕೆರೆ ಸೇರ್ಕೊಂಡ್ವು ಬಿಡು” ಎಂದರು. ಮರಳಿ ಮನೆ ಸೇರಿದೆವು.

© ನಾಗೇಶ್ ಓ ಎಸ್

ನನಗೆ ಚಿಕ್ಕಂದಿನಿಂದಲು ನಮ್ಮ ತಂದೆ ಈ ಆನೆಗಳ ಹಾವಭಾವಗಳ ಬಗ್ಗೆ ಆಗಾಗ ಹೇಳಿಕೊಡುತ್ತಿದ್ದರು. ಆನೆಗಳು ಸುಮ್ಮನೆ ಒಂದೆಡೆ ನಿಲ್ಲೋದಿಲ್ಲ, ನಿಂತರೂ ಅವು ಕಿವಿಯನ್ನಾದರು ಪಟ ಪಟ ಎಂದು ಆಡಿಸುತ್ತವೆ, ಅಥವಾ ಕಡ್ಡಿ, ರೆಂಬೆ ಏನಾದರೊಂದು ಮುರಿಯುತ್ತಿರುತ್ತವೆ. ಹಾಗೂ ಆನೆ ಎದುರಾದಾಗ ಏನು ಮಾಡಬೇಕು, ಹೀಗೆ.. ಇದರ ಪರಿಣಾಮವಾಗಿಯೇ ಅಂದು ಕೊಂಬೆ ಮುರಿದ ಶಬ್ಧಕ್ಕೆ ಇದು ಆನೆಯಿರಬಹುದೆಂದು ನಾನು ಊಹಿಸಿದ್ದೆ. ಆನೆ ಎಂದೊಡನೆ ಎಲ್ಲರಲ್ಲೂ ಒಂದು ದೈತ್ಯ, ಬಿಳಿದಂತ, ಅಗಲ ಕಿವಿ, ಹೀಗೆ ಹಲವಾರು ವಿಷಯಗಳು ಮನಸಿನಲ್ಲಿ ಮೂಡುವುದು ಸಹಜ. ನಮ್ಮ ವಿಶ್ವದಲ್ಲಿ ಮುಖ್ಯವಾಗಿ ಎರಡು ಪ್ರಭೇದದ ಆನೆಗಳನ್ನ ನೋಡಬಹುದು. ಆಫ್ರಿಕಾ ಆನೆಗಳು ಹಾಗೂ ಏಷ್ಯಾ ಆನೆಗಳು. ಈ ಎರಡೂ ಪ್ರಭೇದದ ಆನೆಗಳನ್ನು ಅವುಗಳ ದಂತ ಹಾಗೂ ತಲೆ ಬುರುಡೆಯ ಗಾತ್ರದ ಆಧಾರದ ಮೇಲೆ ವಿಂಗಡಿಸಿದರೂ ಅವುಗಳ ಆಹಾರ ಕ್ರಮ ಹಾಗೂ ಜೀವನ ಶೈಲಿ ಒಂದೇ ಆಗಿದೆ. ಆದರೆ ಈ ಆಫ್ರಿಕಾದ ಆನೆಗಳಲ್ಲಿ ಗಂಡು ಮತ್ತು ಹೆಣ್ಣು ಆನೆಗಳೆರಡಕ್ಕೂ ದಂತವಿರುತ್ತದೆ.

ಏಷ್ಯಾದ ಆನೆ ಅಥವಾ ಭಾರತದ ಆನೆ (Elephas maximus indicus ) ಆಫ್ರಿಕನ್ ಆನೆಗಿಂತ ಗಾತ್ರದಲ್ಲಿ ಸಣ್ಣದು. ಅಲ್ಲದೆ ಗಂಡಾನೆಗಳು ಮಾತ್ರ ದೊಡ್ಡದಾದ ದಂತಗಳನ್ನು ಹೊಂದಿರುತ್ತವೆ. ಇಂದು ಭೂಮಿಯ ಮೇಲೆ ಸುಮಾರು 60,000 ಏಷ್ಯಾದ ಆನೆಗಳಿವೆ. ಇವುಗಳ ಪೈಕಿ 30,000ದಿಂದ 50000 ದಷ್ಟು ಆನೆಗಳು ಕಾಡಿನಲ್ಲೂ ಮತ್ತು ಸುಮಾರು 10,000 ದಷ್ಟು ಆನೆಗಳು ಪಳಗಿಸಲ್ಪಟ್ಟು ನಾಡಿನಲ್ಲೂ ಇವೆಯೆಂದು ಒಂದು ಅಂದಾಜು.

ಆನೆಗಳು ಬೃಹತ್ ಪ್ರಮಾಣದ ಸಸ್ಯಾಹಾರಿಗಳು, ಸಂಶೋಧಕರ ಪ್ರಕಾರ ಮುಖ್ಯವಾಗಿ ಹುಲ್ಲು, ಬಿದಿರು, ಮರದತೊಗಟೆ ಇವುಗಳ ಮುಖ್ಯ ಆಹಾರವಾಗಿದ್ದು, ಒಂದು ಆನೆಗೆ ದಿನಕ್ಕೆ ಸರಿ ಸುಮಾರು 150 ಕೆಜಿ ಆಹಾರ ಬೇಕು ಎಂದು ಅಂದಾಜಿಸಲಾಗಿದೆ. ನಾವು ಆನೆಯ ಲದ್ದಿಯನ್ನು ಗಮನಿಸಿದರೆ  ಅದು ಹೆಚ್ಚು ನಾರುನಾರಾಗಿದ್ದು ಆನೆ ಸೇವಿಸಿದ ಆಹಾರ ಸಂಪೂರ್ಣವಾಗಿ ಜೀರ್ಣವಾಗದೇ ಇರುವ ಕಾರಣ, ಇವು ಹೆಚ್ಚು ಹೆಚ್ಚು ಆಹಾರ ಸೇವಿಸಬೇಕಾದುದು ಅನಿವಾರ್ಯ, ಹಾಗಾಗಿ ಹೆಚ್ಚು ಪ್ರಮಾಣದ ಆಹಾರಕ್ಕಾಗಿ ಅವುಗಳು ಅಲೆದಾಡುತ್ತವೆ.

ದಕ್ಷಿಣ ಭಾರತದಾದ್ಯಂತ 1,130 km2 (440 sq mi) ನಲ್ಲಿ ನಡೆದ ಅಧ್ಯಯನವೊಂದರಲ್ಲಿ ಆನೆಗಳು, ಸುಮಾರು 112 ಪ್ರಭೇದದ ವಿವಿಧ ಸಸ್ಯಗಳನ್ನು ಆಹಾರವಾಗಿ ಬಳಸಿರುವುದು ಕಂಡುಬರುತ್ತದೆ. ಆನೆಗಳು ಸಾಮಾನ್ಯವಾಗಿ ಬಿದಿರು ದ್ವಿದಳ ಧಾನ್ಯದ ಸಸ್ಯ, ತಾಳೆಮರ, ಜೊಂಡುಹುಲ್ಲನ್ನು ತಿನ್ನುತ್ತವೆ. ಅವು ಬಹುತೇಕ ಎತ್ತರವಾಗಿ ಬೆಳೆದ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಮೇಯುತ್ತವೆ, ಅವುಗಳ ಆಹಾರ ಸೇವಿಸುವ ಪ್ರಮಾಣವು ಆಯಾ ಋತುಮಾನದ ಮೇಲೆ ನಿಗದಿಯಾಗಿರುತ್ತದೆ. ಏಪ್ರಿಲ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಹೊಸಹುಲ್ಲು ಬೆಳೆಯುತ್ತದೆ, ಆಗ ಅವು ಪೊದೆಗಳಲ್ಲಿ ಮೇಯುತ್ತವೆ. ಹುಲ್ಲು ಎತ್ತರವಾಗಿದ್ದರೆ 0.5 m (1.6 ft) ಆಗ ಅವು ಇಡೀ ಪೊದೆಯನ್ನೇ ಬುಡಸಮೇತ ಕಿತ್ತು  ಸೊಂಡಿಲಿನಲ್ಲಿ ಹಿಡಿದು ಕಾಲಿಗೆ ಹುಲ್ಲನ್ನು ಹೊಡೆದುಕೊಳ್ಳುತ್ತಾ ಅದರ ಮಣ್ಣಿನ ಭಾಗ ಮತ್ತು ಬೇರನ್ನು ಜಾಣತನದಿಂದ ತೆಗೆದು ತಿನ್ನುತ್ತವೆ. ಬಿದಿರಿನಿಂದ ಎಳೆಯ ಕಾಂಡದ ಭಾಗ, ಪಾರ್ಶ್ವದ ಸಸ್ಯಭಾಗ ಮತ್ತು ಸಣ್ಣ ಕೊಂಬೆಗಳನ್ನು ತಿನ್ನುತ್ತವೆ.. ಋತುಮಾನಗಳಿಗನುಸಾರ ಆನೆಗಳು ವಲಸೆ ಹೋಗುತ್ತವೆ. ಈಗ ನಮ್ಮ  ಬನ್ನೇರುಘಟ್ಟ, ಬಂಡೀಪುರ, ನಾಗರಹೊಳೆ ಮೊದಲಾದ ಕಾಡುಗಳು ಕುರುಚಲು ಹಾಗು ಎಲೆಉದುರುವ ಕಾಡುಗಳಾಗಿದ್ದು, ಬೇಸಿಗೆಯಲ್ಲಿ ಈ ಕಾಡುಗಳು ಸಂಪೂರ್ಣವಾಗಿ ಒಣಗಿ ಹೋಗುವ ಕಾರಣ, ಆನೆಯಂತಹ ದೈತ್ಯ ಸಸ್ಯಹಾರಿಗಳಿಗೆ ಬೇಕಾಗುವಷ್ಟು ಆಹಾರ ನೀರು ದೊರೆಯುವುದಿಲ್ಲ. ಹಾಗಾಗಿ ಆನೆಗಳು ವಲಸೆ ಹೋಗುವುದು ಸಾಮಾನ್ಯ. 

ನಮ್ಮ ಕರ್ನಾಟಕದಲ್ಲಿ ಮುಖ್ಯವಾಗಿ ಬಂಡೀಪುರ ಹಾಗೂ ಸುತ್ತಮುತ್ತಲಿನ ಕಾಡಿನಲ್ಲಿರುವ ಆನೆಗಳು ಕಬಿನಿಯ ಹಿನ್ನೀರಿಗೆ ಪ್ರತೀವರ್ಷ ವಲಸೆ ಬರುತ್ತವೆ. ಕಪಿಲ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಜಲಾಶಯದ ಹಿನ್ನಿರು ನಾಗರಹೊಳೆ ಕಾಡಿನಲ್ಲೇ ಇರುವುದರಿಂದ ಹಿನ್ನೀರಿನಲ್ಲಿ ಆನೆಗಳಿಗೆ ಬೇಸಿಗೆಯಲ್ಲೂ ಹುಲ್ಲು, ನೀರು ಯಥೇಚ್ಛವಾಗಿ ದೊರೆಯುತ್ತದೆ. ಆನೆಗಳಿಗೆ ನೆನಪಿನ ಶಕ್ತಿ ಹೆಚ್ಚು. ಅಧ್ಯಯನದ ಪ್ರಕಾರ ಆನೆಗಳ ವಲಸೆ ಹೋಗುವ ದಾರಿಯನ್ನ ಆನೆ ಕಾರೀಡಾರ್ ಎಂದು ಗುರುತಿಸುತ್ತಾರೆ. ಯಾವುದಾದರೊಂದು ಆನೆಯ ಗುಂಪು ಹೊಸ ದಾರಿಯಲ್ಲಿ ಆಹಾರವನ್ನರಸಿ ವಲಸೆ ಹೋಯಿತೆಂದರೆ ಆ ಗುಂಪಿನ ಮುಂದಿನ ಪೀಳಿಗೆಯೂ ಅದೇ ದಾರಿಯನ್ನ ಹಿಡಿಯುತ್ತವೆ. ಈ ಮಾಹಿತಿ ತಲೆಮಾರಿನಿಂದ ತಲೆಮಾರಿಗೆ ವಂಶವಾಹಿಯಾಗಿ ಬಂದಿರುತ್ತದೆ.

© ಮಹದೇವ ಕೆ ಸಿ

ಆನೆಗಳು ಒಂದು ವ್ಯವಸ್ಥಿತವಾಗಿ ಬದುಕುವ ಸಾಮಾಜಿಕ ಪ್ರಾಣಿಗಳು. ಗಂಡಿನ ಮತ್ತು ಹೆಣ್ಣಿನ ಸಾಮಾಜಿಕ ಜೀವನಗಳು ಒಂದಕ್ಕೊಂದು ವಿಭಿನ್ನ. ಹೆಣ್ಣಾನೆಗಳು ತಮ್ಮ ಸಂಪೂರ್ಣ ಜೀವನವನ್ನು ಗುಂಪುಗಳಲ್ಲಿಯೇ ಕಳೆಯುತ್ತವೆ. ಈ ಗುಂಪುಗಳು ಕೇವಲ ಹೆಣ್ಣಾನೆಗಳನ್ನು ಮಾತ್ರ ಒಳಗೊಂಡಿದ್ದು ತಾಯಿ, ಮಗಳು, ಸಹೋದರಿಯರು, ಸೋದರತ್ತೆ ಮತ್ತು ಚಿಕ್ಕಮ್ಮಂದಿರನ್ನು ಒಳಗೊಂಡಿರುತ್ತದೆ. ಗುಂಪಿನಲ್ಲಿ ಅತಿ ಹೆಚ್ಚು ವಯಸ್ಸಾದ ಆನೆಯು ಈ ಕುಟುಂಬದ ಯಜಮಾನಿಯಾಗಿ ಗುಂಪನ್ನು ಮುನ್ನಡೆಸುತ್ತಾಳೆ. ವಯಸ್ಸಾದ ಗಂಡಾನೆಗಳು ಸಾಮಾನ್ಯವಾಗಿ ಒಂಟಿಯಾಗಿಯೇ ಬಾಳುತ್ತವೆ. ಹೆಣ್ಣಾನೆಯ ಸಾಮಾಜಿಕ ವಲಯವು ತನ್ನ ಸಣ್ಣ ಕುಟುಂಬಕ್ಕೇ ಸೀಮಿತವಾಗಿರುವುದಿಲ್ಲ. ತನ್ನ ಗುಂಪಿನ ಆಸುಪಾಸಿನಲ್ಲಿ ಸುಳಿದಾಡುವ ಗಂಡಾನೆಗಳು ಮತ್ತು ಇತರ ಗುಂಪುಗಳೊಡನೆಯೂ ಸಂಪರ್ಕದಲ್ಲಿರುತ್ತವೆ. ಗಂಡಾನೆಗಳು ಹೆಚ್ಚಿನ ಸಮಯವನ್ನು ತಮ್ಮ ಪ್ರಾಬಲ್ಯ ಸಾಧಿಸುವುದಕ್ಕಾಗಿ ಇತರ ಗಂಡಾನೆಗಳೊಡನೆ ಕಾದಾಡುವುದರಲ್ಲಿಯೇ ಕಳೆಯುವುವು. ಆನೆಗಳ ವಂಶಾಭಿವೃದ್ಧಿ ಪ್ರಕ್ರಿಯೆಯ ದೃಷ್ಟಿಯಲ್ಲಿ ಇದು ಅವಶ್ಯ, ಕೇವಲ ಪ್ರಬಲ ಗಂಡಾನೆಗಳಿಗೆ ಮಾತ್ರ ಹೆಣ್ಣಾನೆಗಳೊಂದಿಗೆ ಸಂಗಮಿಸುವ ಅವಕಾಶವಿರುವುದು. ಉಳಿದವು ತಮ್ಮ ಸರದಿಗಾಗಿ ಕಾಯಲೇಬೇಕು. ಸಾಮಾನ್ಯವಾಗಿ 40 ರಿಂದ 50 ವರ್ಷ ವಯಸ್ಸಾಗಿರುವ ಬಲಿಷ್ಟ ಗಂಡಾನೆಗಳು ಹೆಚ್ಚಿನ ವಂಶಾಭಿವೃದ್ಧಿಯ ಕಾರ್ಯ ನಡೆಸುತ್ತವೆ.

© ನಾಗೇಂದ್ರ ಎನ್ ಬಿ

        9 ರಿಂದ 12ನೆಯ ವಯಸ್ಸಿಗೆ ಲೈಂಗಿಕವಾಗಿ ಪ್ರೌಢಾವಸ್ಥೆಯನ್ನು ತಲುಪುವ ಹೆಣ್ಣಾನೆಗಳು, ಸುಮಾರು 12 ನೆಯ ಪ್ರಾಯದಲ್ಲಿ ಮೊದಲ ಬಾರಿಗೆ ಗರ್ಭವತಿಯಾಗುತ್ತವೆ. ಇವು 55 ರಿಂದ 60 ನೆಯ ವಯಸ್ಸಿನವರೆಗೂ ಹೆರಬಲ್ಲುವು. ಆನೆಗಳಲ್ಲಿ ಪ್ರತಿ ಹೆರಿಗೆಯ ಮಧ್ಯೆ ಸುಮಾರು 5 ವರ್ಷಗಳ ಅಂತರವಿರುತ್ತದೆ. ಆನೆಯ ಗರ್ಭಧಾರಣೆಯ ಅವಧಿ ಸುಮಾರು 22 ತಿಂಗಳು. ಈ ಅವಧಿ  ಇತರ ಯಾವುದೇ ಪ್ರಾಣಿಗಿಂತ ಹೆಚ್ಚು. ಆನೆಯು ಒಂದು ಬಾರಿಗೆ ಒಂದು ಮರಿಗೆ ಮಾತ್ರ ಜನ್ಮವೀಯುವುದು. ವಯಸ್ಕ ಗಂಡಾನೆಗಳು ನಿಯತವಾಗಿ ಮದವೇರಿದ ಸ್ಥಿತಿಯನ್ನು ತಲುಪುತ್ತವೆ. ಇದಕ್ಕೆ ಮಸ್ತ್ (ಹಿಂದಿ ಭಾಷೆಯ ಪದ)ಎಂದು ಹೆಸರು. ಇಂತಹ ಸಮಯದಲ್ಲಿ ಆನೆಯು ಅತ್ಯಂತ ಉನ್ಮತ್ತಾವಸ್ಥೆಯಲ್ಲಿದ್ದು ತೀವ್ರ ಆಕ್ರಮಣಕಾರಿ ಪ್ರವೃತ್ತಿ ತೋರುವುವು. ಅಲ್ಲದೆ ತಲೆಯ ಪಾರ್ಶ್ವಗಳಲ್ಲಿರುವ ಗ್ರಂಥಿಗಳಿಂದ ಒಂದು ವಿಶಿಷ್ಟ ದ್ರವ ಸ್ರವಿಸುತ್ತಿರುತ್ತದೆ. ಮದೋನ್ಮತ್ತ ಆನೆಯು ಅತಿ ಅಪಾಯಕಾರಿಯಾಗಿದ್ದು ಇದರ ನಿಯಂತ್ರಣ ಸಾಧ್ಯವಿಲ್ಲ. ಪಳಗಿಸಿದ ಆನೆಗಳಲ್ಲಿ ಮದವೇರುವ ಸೂಚನೆ ಕಂಡ ಕೂಡಲೇ ಇವುಗಳನ್ನು ಭದ್ರವಾಗಿ ಒಂದು ಮರಕ್ಕೆ ಕಟ್ಟಿಹಾಕಿ ಮದವಿಳಿಯುವವರೆಗೂ ಆಹಾರ ಮತ್ತು ನೀರನ್ನು ನೀಡಲಾಗುವುದಿಲ್ಲ. ಈ ಮದವೇರುವ ವಿದ್ಯಮಾನ ಸಾಮಾನ್ಯವಾಗಿ ತರುಣ ಗಂಡಾನೆಗಳಲ್ಲಿ ಕಾಣಿಸುವುದು.

ಈ ಆನೆಗಳಲ್ಲಿಯೂ ನಾವು ಭಾವನೆಗಳನ್ನ ಕಾಣಬಹುದು. ಗುಂಪಿನಲ್ಲಿರುವ ಮರಿ ಆನೆಗಳಿಗೆ ಆ ಮರಿಯ ತಾಯಿಯಲ್ಲದೇ ಬೇರೆ ಹೆಣ್ಣು ಆನೆಗಳು ಪೋಷಿಸುತ್ತವೆ ಹಾಗೂ ಹಾಲುಣಿಸುತ್ತವೆ. ಯಾವುದಾದರೂ ಮರಿ ತನ್ನ ತಾಯಿಯನ್ನ ಕಳೆದುಕೊಂಡರೆ ಉಳಿದ ಹೆಣ್ಣುಗಳು ಆ ಮರಿಯನ್ನ ಪೋಷಿಸುತ್ತವೆ. ಬೃಹದಾಕಾರದ ಆನೆಗಳಿಗೆ ಅತೀ ವಿಸ್ತಾರವಾದ ಕಾಡಿನ ಅವಶ್ಯಕತೆಯಿದೆ. ಆದರೆ ನಾವು ನಗರೀಕರಣ ಹಾಗು ಜನಸಂಖ್ಯೆ ಹೆಚ್ಚಳದಿಂದ ಕಾಡುಗಳನ್ನೆಲ್ಲ ಕಡೆದು ನಾಶ ಮಾಡಿರುವ ಪರಿಣಾಮವಾಗಿ ಇಂದು ಆನೆಗಳು ಕಾಡಿನಲ್ಲುಳಿಯದೆ ನಗರಕ್ಕೆ ಬಂದಿವೆ ಎಂದು ಬೊಬ್ಬೆ ಹೊಡೆಯುತ್ತಿದ್ದೇವೆ. ವಂಶವಾಹಿಯಾಗಿ ಆನೆಗಳಿಗೆ ಅವುಗಳು ಸಂಚರಿಸಬೇಕಾದ ದಾರಿಯ ಚಿತ್ರಣ ಬಂದಿರುತ್ತದೆ. ಆದರೆ ನಾವು ಕಾಡನ್ನ ಕಡೆದು ಆನೆದಾರಿಗಳನ್ನು ಹಾಳುಮಾಡಿ ಅಭಿವೃದ್ದಿಗೊಳಿಸಿಬಿಟ್ಟಿದ್ದೇವೆ. ಹೀಗಾಗಿ ಆನೆಗಳಿಗೆ ಕಾಡಿನಿಂದ ಕಾಡಿಗೆ ಆಹಾರವನ್ನರಸಿ ವಲಸೆ ಹೋಗಲಾಗದೆ ಪರಿತಪಿಸಬೇಕಾಗಿದೆ. ಇದು ಸ್ವಾಭಾವಿಕ ಅರಣ್ಯದ ನೈಸರ್ಗಿಕ ಆವಾಸಗಳ ಮೇಲೆ ಅತೀವ ಪರಿಣಾಮ ಬೀರುವುದು.

ಆನೆಗಳ ಆವಾಸವನ್ನ ಹಾಳು ಮಾಡಿದ್ದಲ್ಲದೇ ಅವುಗಳ ದಂತಕ್ಕಾಗಿ ಬೇಟೆಯಾಡುತ್ತಾರೆ. ಒಂದು ಅಧ್ಯಯನದ ಪ್ರಕಾರ ಆಫ್ರಿಕಾ ಆನೆಗಳನ್ನ ದಂತಚೋರರು ಕೇವಲ ದೊಡ್ಡ ದಂತವುಳ್ಳ ಆನೆಗಳನ್ನು ಬೇಟೆಯಾಡಿರುವ ಪರಿಣಾಮ ಒಂದು ವಿಶಿಷ್ಟ ಪರಿಸ್ಥಿತಿಯುಂಟಾಗಿ ಹೆಣ್ಣಾನೆಗಳು ಸಂತಾನಕ್ಕಾಗಿ ಚಿಕ್ಕ ದಂತವುಳ್ಳ ಅಥವಾ ದಂತವೇ ಇಲ್ಲದ ಗಂಡಾನೆಗಳನ್ನು ಕೂಡಬೇಕಾದ ಪರಿಸ್ಥಿತಿಗೆ ಕಾರಣವಾಯಿತು. ಈ ಪ್ರಕ್ರಿಯೆ ದಶಕಗಳ ಕಾಲ ಮುಂದುವರಿದು ಆನೆಗಳ ವಂಶವಾಹಿಯಲ್ಲಿ ಅನೇಕ ಬದಲಾವಣೆಯನ್ನುಂಟುಮಾಡಿತು. ಇಂದು ಜನಿಸುವ ಆನೆಗಳಲ್ಲಿ 30%ರಷ್ಟಕ್ಕೆ ದಂತಗಳು ಮೊಳೆಯುವುದೇ ಇಲ್ಲ. ಒಂದೊಮ್ಮೆ  ಇದು ತೀರಾ ಅಪರೂಪದ ವಿದ್ಯಮಾನವಾಗಿದ್ದು, ಇಂದು ಸಹಜ ಸಾಮಾನ್ಯವಾಗಿದೆ. ಆನೆಗಳು ತಮ್ಮ ದಂತಗಳನ್ನು ಹಲವು ಬಗೆಯಲ್ಲಿ ಉಪಯೋಗಕ್ಕೆ ತಂದುಕೊಳ್ಳುವುದರಿಂದ ದಂತಹೀನ ಆನೆಗಳು ತಮ್ಮ ಸಹಜ ಜೀವನದ ವಿಧಾನವನ್ನು ಬಹಳವಾಗಿ ಬದಲಾಯಿಸಿಕೊಳ್ಳಬೇಕಾಗುವುದು. ಮುಂದೊಮ್ಮೆ ಆನೆಗಳ ಜೀವನಶೈಲಿ ಬಹುಶಃ ಸಂಪೂರ್ಣವಾಗಿ ಬೇರೆಯಾಗಿಬಿಡಬಹುದು!

ಅನಾದಿಕಾಲದಿಂದಲೂ ಮಾನವನಿಗೆ ಆನೆಯು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅಂದಿನ ಭಾರತದ ಅರಸರ ಪಟ್ಟದಾನೆಯು ಸಮಾಜದಲ್ಲಿ ಅತಿ ಗೌರವಾನ್ವಿತ ಸ್ಥಾನವನ್ನು ಹೊಂದಿತ್ತು. ಸೈನ್ಯದ ಶಕ್ತಿಯು ಗಜಬಲವನ್ನು ಹೆಚ್ಚಾಗಿ ಅವಲಂಬಿಸಿತ್ತು. ಉಳಿದಂತೆ, ಆನೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಬಳಸುವ ವಾಡಿಕೆ ಇಂದಿಗೂ ಇದೆ. ದಕ್ಷಿಣ ಭಾರತದ ಬಹಳಷ್ಟು ದೇವಸ್ಥಾನಗಳು ತಮ್ಮದೇ ಆನೆಯನ್ನು ಸಾಕಿಕೊಂಡಿವೆ. ಮೈಸೂರಿನ ದಸರಾ ಹಾಗೂ ಕೇರಳದ ತ್ರಿಶ್ಶೂರಿನ ಪೂರಮ್ ಉತ್ಸವ ಆನೆಗಳೇ ಕೇಂದ್ರವಾಗುಳ್ಳ ಒಂದು ಅತ್ಯಾಕರ್ಷಕವಾದ ಉತ್ಸವ.

–  ಲೇಖನ: ಮಹದೇವ ಕೆ. ಸಿ.
ಡಬ್ಲ್ಯೂ.ಸಿ.ಜಿ., ಬೆಂಗಳೂರು

Print Friendly, PDF & Email
Spread the love
error: Content is protected.