ಬರಲಿದೆ ಹೊಸ ಶಿಲೀಂಧ್ರ ರೋಗ!

ಬರಲಿದೆ ಹೊಸ ಶಿಲೀಂಧ್ರ ರೋಗ!

 ಹವಾಮಾನ ವೈಪರೀತ್ಯ ಎಂದರೇನು? ಎಂಬ ಪ್ರಶ್ನೆಗೆ ಉತ್ತರ, ಅತಿಯಾದ ಹಸಿರುಮನೆ ಅನಿಲಗಳ ಬಿಡುಗಡೆಯಿಂದಾಗಿ ಭೂಮಿಯ ಮೇಲ್ಮೈ ಉಷ್ಣಾಂಶ ಜಾಸ್ತಿಯಾಗಿ, ಧ್ರುವಗಳ ಮಂಜುಗಡ್ಡೆ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚುತ್ತಿದೆ ಎಂಬುದು ಈಗ ಎಲ್ಲರೂ ತಿಳಿದಿರುವ ಸಾಮಾನ್ಯ ಜ್ಞಾನ ಆಗಿದೆ. ಇದರ ಪರಿಣಾಮಗಳೇನೆಂದು ಕೇಳಿದರೆ ಬಹುಶಃ ಸಮುದ್ರ ಮಟ್ಟ ಏರುವಿಕೆಯಿಂದ ಎಷ್ಟೋ ಭೂ ಪ್ರದೇಶಗಳು ಮುಳುಗಡೆಯಾಗಬಹುದು ಹಾಗೂ ಸಮುದ್ರದ ಉಷ್ಣಾಂಶವೂ ಏರುವುದರಿಂದ ಅಲ್ಲಿನ ಜೀವಿಗಳ ಜೀವಗಳಿಗೆ ಕುತ್ತಾಗಬಹುದು, ಎಂದು ಇನ್ನೂ ಸ್ವಲ್ಪ ಹೆಚ್ಚು ಓದಿದವರಿಗೆ ತಿಳಿದ ವಿಷಯವಾಗಬಹುದು. ಈ ಮುಂಚೆಯೇ ವಿ ವಿ ಅಂಕಣದಲ್ಲಿ ಹೇಳಿರುವ ಹಾಗೆ ಹವಾಮಾನ ವೈಪರೀತ್ಯದಿಂದ ಅರಿಯದ ಹಾಗೂ ಎಂದೂ ಊಹಿಸದ ಪರಿಣಾಮಗಳು ಒಂದೊಂದೇ ತಲೆಯೆತ್ತುತ್ತಿವೆ. ಹಾಗೂ ಮುಖ್ಯವಾಗಿ ಇವಾವುದೂ ಭೂಮಿಯ ಮೇಲೆ ವಾಸಿಸುವ ಯಾವ ಜೀವಿಗಳಿಗೂ ಒಳಿತಲ್ಲ. ಅದಕ್ಕೆ ಬಲವಾದ ಇನ್ನೊಂದು ನಿದರ್ಶನವೇ ಈ ಮಾಸದ ವಿ ವಿ ಅಂಕಣದ ವಿಷಯ.

ಮಳೆಗಾಲದಲ್ಲಿ ಮಾತ್ರ ನೋಡಲು ಸಿಗುವ ಶಿಲೀಂಧ್ರಗಳು ಕೇವಲ ನಮ್ಮ ಆಹಾರವಾಗಿ ನೋಡುತ್ತಿದ್ದ ನನಗೆ ಈ ಮಳೆಗಾಲ ತೋರಿದ ಸುಂದರ ವಿವಿಧ ಪ್ರಭೇದಗಳನ್ನು ಕಂಡು ಆಶ್ಚರ್ಯದ ಜೊತೆಗೆ ಸಂತೋಷವಾಯಿತು. ಅವುಗಳಲ್ಲಿರುವ ಬಣ್ಣಗಳು, ಅವುಗಳ ಗಾತ್ರಗಳು, ಅವುಗಳ ಆಕಾರ-ಅಲಂಕಾರಗಳು ‘ಅಬ್ಬಾ!’ ಎನ್ನುವಂತೆ ಮಾಡಿಬಿಟ್ಟವು. ನಮ್ಮ ಸುತ್ತಮುತ್ತಲೇ ನೋಡಿ ಸೆರೆ ಹಿಡಿದಿರುವ ಶಿಲೀಂಧ್ರ(ಅಣಬೆ)ಗಳ ಕೆಲ ಚಿತ್ರಗಳು ನಿಮಗೋಸ್ಕರ ಈ ಕೆಳಗಿವೆ.

ಇಷ್ಟು ನಯನ ಮನೋಹರವಾಗಿರುವ ಶಿಲೀಂಧ್ರಗಳಲ್ಲೇ ಕೆಲವು ಏನಾದರೂ ನಮ್ಮ ದೇಹಕ್ಕೆ ಕಾಲಿರಿಸಿದರೆ ಅದರಿಂದಾಗುವ ತೊಂದರೆಗಳು ಬಲ್ಲವನೇ ಬಲ್ಲ. ಶಿಲೀಂಧ್ರ (ಫಂಗಸ್)ಗಳು ಹೆಚ್ಚಾಗಿ ಮನುಷ್ಯರನ್ನು ಬಾಧಿಸುವುದಿಲ್ಲ. ಯಾವುದೋ ಒಂದೆರೆಡು ಮಾತ್ರ, ಅದೂ ಕೂಡ ಪ್ರಾಣಕಂಟಕವೇನಲ್ಲ. ಸಾವಿರಾರು ಪ್ರಭೇದಗಳಲ್ಲಿರುವ ಶಿಲೀಂಧ್ರಗಳು ನಮ್ಮ ಮೇಲೆ ಎರಗದಿರಲು ಕಾರಣ, ಶಿಲೀಂಧ್ರಗಳು ಬೆಳೆಯಲು ಉಷ್ಣಾಂಶ ಕಡಿಮೆ ಇರಬೇಕು ಹಾಗೂ ತೇವಾಂಶವಿರಬೇಕು. ನಾವುಗಳು ಬಿಸಿ ರಕ್ತ ಜೀವಿಗಳು, ನಮ್ಮ ದೇಹದ ಉಷ್ಣಾಂಶ ಸರಾಸರಿ 37 ಡಿಗ್ರಿ ಸೆಲ್ಷಿಯಸ್ ಇರುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯೂ ಗಟ್ಟಿಯಾಗೇ ಇರುತ್ತದೆ. ಇದರಿಂದಾಗಿಯೇ ಎಷ್ಟೋ ಸಸ್ಯಗಳಿಗೆ, ಕಪ್ಪೆಗಳಿಗೆ, ಹಾವಿನಂತಹ ಸರೀಸೃಪಗಳಿಗೆ ಮಾರಕವಾಗಿರುವ ಫಂಗಸ್ ನಮಗೆ ಎಂದರೆ ಸಸ್ತನಿಗಳಿಗೆ ಮಾತ್ರ ಸಿಡಿಯದ ಬಾಂಬ್ ಆಗಿ ಇತ್ತು. ಬಹುಶಃ ಅದು ಟೈಮ್ ಬಾಂಬ್ ಆಗಿತ್ತೇನೋ, ಈಗ ಅದು ಸಿಡಿದು ನಮ್ಮ ಮೇಲೂ ದಾಳಿ ಮಾಡಲು ಶುರುಮಾಡಿವೆ.

ಬಿಸಿ ರಕ್ತ ಪ್ರಾಣಿಗಳಾದ ಅಂದರೆ ದೇಹದ ಉಷ್ಣಾಂಶ ಹೆಚ್ಚಿರುವ ಹಾಗೂ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿರುವ ನಮ್ಮ ಮೇಲೂ ತಮ್ಮ ಪ್ರಭಾವ ತೋರಲು ಶಿಲೀಂಧ್ರಗಳಿಗೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ನಿಮ್ಮ ಮಸ್ತಕದಲ್ಲಿ ಮೂಡಿದ್ದರೆ ಉತ್ತಮ, ಮೂಡದಿದ್ದರೆ ಮೂಡಿಸಿಕೊಳ್ಳಿ  ಇಲ್ಲವಾದರೆ ಮುಂದುವರೆಯಲು ಕುತೂಹಲದ ಕೊರತೆಯಾದೀತು.

2012 ರಿಂದ 2015ರಲ್ಲಿ ಕ್ಯಾಂಡಿಡಾ ಆರಿಸ್(Candida auris) ಎಂಬ ರೋಗಕಾರಕ ಶಿಲೀಂಧ್ರವು ಆಫ್ರಿಕಾ, ಏಷಿಯಾ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಒಂದೇ ಬಾರಿ ಹುಟ್ಟಿಕೊಂಡವು. ಈ ಮೂರೂ ಖಂಡಗಳಲ್ಲಿ ಸಿಗುವ ಕ್ಯಾಂಡಿಡಾ ಶಿಲೀಂಧ್ರದ ಸೋಂಕು ಒಂದೇ ಸಮಯದಲ್ಲಿ ಬಂದದ್ದರಿಂದ ಇವುಗಳು ಸ್ವತಂತ್ರವಾಗಿ ಅಲ್ಲಿಯೇ
ಹುಟ್ಟಿರಬೇಕು ಹಾಗೂ ಇವುಗಳ ಹೆಸರು ಒಂದೇ ಇದ್ದರೂ ಇವುಗಳ ಉಪ ಪ್ರಭೇದಗಳು ಬೇರೆ ಇರುವುದರಿಂದ ಇವುಗಳು ಅಂತರಾಷ್ಟ್ರೀಯ ಪ್ರಯಾಣಿಕರಿಂದ ಹರಡಿರಲು ಸಾಧ್ಯವೇ ಇಲ್ಲ. ಹಾಗಾದರೆ ಈ ಸೋಂಕು ಹೇಗೆ ಹುಟ್ಟಿಕೊಂಡಿರಬಹುದು? ಇದಕ್ಕೆ ಕಾರಣವೇನಿರಬಹುದು?
ಕಾರಣ ನೀವು(ನಾವು)!

 ವಾತಾವರಣ ಬದಲಾವಣೆಯ ವೈಪರೀತ್ಯದ ಕಾರಣ ಭೂಮಿಯ ಉಷ್ಣಾಂಶ ಹೆಚ್ಚುತ್ತಿದೆ ಅಲ್ಲವೇ, ಅದರ ಪರಿಣಾಮ ಕಡಿಮೆ ಉಷ್ಣಾಂಶದಲ್ಲಿ ಬೆಳೆಯಬೇಕಿದ್ದ ಶಿಲೀಂಧ್ರಗಳು ಈಗ ಕೊಂಚ ಬಿಸಿಯಾದ ವಾತಾವರಣದಲ್ಲಿಯೂ ಬೆಳೆಯಲು ಒಗ್ಗಿಕೊಂಡಿವೆ. ಹಾಗಾಗಿ ಅವು ಬಿಸಿ ರಕ್ತ ಪ್ರಾಣಿಗಳಾದ ಸಸ್ತನಿಗಳಿಗೆ ಹಾಗೂ ನಮ್ಮ ದೇಹದ ಸರಾಸರಿ ಉಷ್ಣಾಂಶವಾದ 37 ಡಿಗ್ರಿಯಲ್ಲಿಯೂ ಸಹ ವಿಭಜಿಸಲು ಸಾಧ್ಯವಾಗಿದೆ. ಇದರಿಂದಾಗಿ ಉಷ್ಣ ದೇಹವುಳ್ಳ ಹಾಗೂ ಹೆಚ್ಚು ರೋಗನಿರೋಧಕ ಶಕ್ತಿ ಇರುವ ನಾವೂ ಸಹ ಶಿಲೀಂಧ್ರ ರೋಗಕ್ಕೆ ತುತ್ತಾಗುವ ಎಲ್ಲಾ ಸಾಧ್ಯತೆಗಳಿವೆ. ಈಗ ಹೇಳಿ ಈ ವಾತಾವರಣದ ಬದಲಾವಣೆಗೆ ಕಾರಣರಾರು, ಹೊಸದಾಗಿ ಹುಟ್ಟುತ್ತಿರುವ ಈ ಮಾರಣಾಂತಿಕ ಸೋಂಕುಗಳಿಗೆ ಹೊಣೆ ಯಾರು?

ಅಮೇರಿಕಾ ಒಂದರಲ್ಲೇ 2016ರ ಸಾಲಿನ ಮಧ್ಯದಿಂದ ಇಲ್ಲಿಯವರೆಗೆ ಸುಮಾರು 700 ಸೋಂಕು ಪೀಡಿತರು 12 ರಾಜ್ಯಗಳಿಂದ ದಾಖಲಾಗಿದ್ದಾರೆ ಹಾಗೂ ಪ್ರಪಂಚದ ಇನ್ನೂ 30 ದೇಶಗಳು ಇದೇ ಕ್ಯಾಂಡಿಡಾ ಶಿಲೀಂಧ್ರದಿಂದ ಹರಡಿರುವ ಸೋಂಕನ್ನು ದಾಖಲಿಸಿವೆ. ಈ ರೋಗವು ಶೇಖಡಾ 30-60% ಮಾರಣಾಂತಿಕವಾಗಿದ್ದು, ಈ ಸೋಂಕು ಹೆಚ್ಚಾಗಿ ಮಾನವನ ಬಹು ಮುಖ್ಯ ಅಂಗಗಳಾದ ಮೆದುಳು ಮತ್ತು ಹೃದಯಗಳಿಗೆ ತಗುಲಿ ಬಾಧಿಸುತ್ತವೆ. ಜೊತೆಗೆ ನಮ್ಮ ರಕ್ತದಲ್ಲಿಯೂ ಸೋಂಕು ಹರಡಬಹುದು. ನಮ್ಮ ದುರಾದೃಷ್ಟವೆಂದರೆ ಈಗ ತಲೆಯೆತ್ತುತ್ತಿರುವ ಈ ಶಿಲೀಂಧ್ರ ಸೋಂಕು ನಮ್ಮ ಬಳಿ ಈಗಾಗಲೇ ಇರುವ ಹಲವಾರು ಪ್ರತಿಶಿಲೀಂಧ್ರ (anti fungal) ಔಷಧಿಗಳಿಗೆ ಯಾವುದೇ ರೀತಿಯಲ್ಲೂ ಬಗ್ಗುತ್ತಿಲ್ಲವಂತೆ. 

ಅರೇ ಮುಂದೇನು ಗತಿ?! ಎನಿಸುತ್ತಿದೆಯೇ? ಅಥವಾ ಏನೂ ಪರವಾಗಿಲ್ಲ ಬಿಡಿ ಈ ಹೊಸ ರೋಗಕ್ಕೆ ಇನ್ನೊಂದು ಔಷಧ ಹುಡುಕಿದರಾಯಿತು, ಎನಿಸುತ್ತಿದೆಯೆ? ಬೊಜ್ಜು ಬೆಳೆದರೆ ವ್ಯಾಯಾಮದಿಂದ ಕರಗಿಸಲು ಸಮಯವಿಲ್ಲದೆ, ಸೋಮಾರಿಗಳ ಹಾಗೆ ಸೋನಾ ಬೆಲ್ಟ್ ಧರಿಸುವ ನಮಗೆ ಇಂತಹ ಆಲೋಚನೆಯೇ ಬರುವುದು. ಈ ಮೇಲೆ ಹೇಳಿರುವ ವಿಷಯವೆಲ್ಲಾ ಕೇವಲ ಒಂದು ಶಿಲೀಂಧ್ರದ ಅವಾಂತರ, ನಮ್ಮ ಸುತ್ತ ಮುತ್ತಾ ಬೇರೆ ಬೇರೆ ಪ್ರಭೇದದ ಲಕ್ಷಾಂತರ ಶಿಲೀಂಧ್ರಗಳಿವೆ. ಅವುಗಳೇನಾದರೂ ನಮ್ಮ ದೇಹದ ಉಷ್ಣಾಂಶದಲ್ಲಿ ವಿಭಜಿಸಲು ಒಗ್ಗಿಕೊಂಡರೆ ನಮ್ಮ ಹಣೆಬರಹವೇನಾಗಬಹುದು?

ನಿಮ್ಮ ಊಹೆಯ ಹಣೆಬರಹಗಳ ಬರೆದು ಈ ಕೆಳಗಿನ ಇ-ವಿಳಾಸಕ್ಕೆ ಕಳುಹಿಸಿ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.