ಸೊಳ್ಳೆಗಳ ಒಂದು ಕಿರು ಪರಿಚಯ

ಸೊಳ್ಳೆಗಳ ಒಂದು ಕಿರು ಪರಿಚಯ

‘ಅಯ್ಯೋ… ಎಷ್ಟು ಸೆಖೆ  ನಿದ್ದೆನೇ ಬರ್ತಿಲ್ಲ, ಹೊರಗಡೆ ಮಲಗೋಣ ಅಂದ್ರೆ ಹಾಳಾದ್ ಸೊಳ್ಳೆಗಳ ಕಾಟ’ , ಬಂದು ಬಂದು ಕಿವಿ ಹತ್ರ ಹಾಡು ಹಾಡ್ತವೆ’.

ಹೀಗೆ ಕಳೆದ ತಿಂಗಳು ನಮ್ಮ ಅಡವಿ ಫೀಲ್ಡ್  ಸ್ಟೆಷನ್ ನಲ್ಲಿ ಉಳಿದಿದ್ದಾಗ ಆ ರಾತ್ರಿಯೆಲ್ಲ ನಮಗೆ ಜಾಗರಣೆಯಾಗಿತ್ತು. ಹರಟೆ ಹೊಡಿತಿದ್ವಿ, ಸಿನೆಮಾ ನೊಡ್ತಿದ್ವಿ  ಅಂದುಕೊಂಡ್ರ ಇಲ್ಲ ಸ್ವಾಮಿ ಮಲಗಿದ್ವಿ  ಆದರೆ ನಿದ್ದೆ ಮಾಡಿಲ್ಲ ಅಷ್ಟೆ, ನಮ್  ಕರ್ಮ ನಿದ್ದೆ ಮಾಡೋಕೆ ಈ ಸೊಳ್ಳೆಗಳು ಬಿಟ್ಟಿಲ್ಲ. ನಮ್ಮಲ್ಲಿದ್ದ ಟೆಂಟ್ ಹಾಕಿ ಒಳಗೆ ಸರಿದ್ವಿ  ನಮ್ಮಲ್ಲಿದ್ದ ಒಬ್ಬ ಮಧ್ಯರಾತ್ರಿಲಿ ಟೆಂಟ್ ತೆರೆದು ಹೊರಗಡೆ ಹೊಗಿದ್ದ ಕಾರಣ  ಬಕ ಪಕ್ಷಿಗಳ ಹಾಗೆ ಕಾಯುತ್ತಿದ್ದ ಈ ಸೊಳ್ಳೆಗಳು ನೂರಾರು ಸಂಖ್ಯೆಯಲ್ಲಿ ಒಳಗೆ ನುಗ್ಗಿ ನಮ್ಮ ಮೇಲೆ ದಾಳಿ ಮಾಡಿದವು. ನಿದ್ದೆಗಿಂತ ಹೆಚ್ಚಿನ ಸಮಯ ಸೊಳ್ಳೆ ಹೊಡೆಯುವುದರಲ್ಲೆ ಕಳೆಯಿತು ನೋಡಿ!!!!! ಇದೇ ಸಮಯದಲ್ಲಿ ನನಗೆ ಹಲವಾರು ಪ್ರಶ್ನೆಗಳು ತಲೆಯಲ್ಲಿ ಹುಟ್ಟಿಕೊಂಡವು. ನಿಮಗೂ ಎಷ್ಟೊಂದು ಹುಟ್ಟಿಕೊಂಡಿರುತ್ತವೆ ಆದರೆ ಅವುಗಳನ್ನು ಹೆಚ್ಚಿನವರು ಸೊಳ್ಳೆಯ ಜೊತೆಯಲ್ಲಿಯೇ  ಕೊಂದಿರುತ್ತೀರಿ. ಅಲ್ಲವೇ? ನನ್ನ ವಿಷಯವು ನಿಮಗಿಂತ ಬೇರೆಯೇನಲ್ಲ ಬಿಡಿ. ನಾನು ಸಹ ಸೊಳ್ಳೆಗಳು ಕಡಿಮೆಯಾದಂತೆ  ಮರೆತೆಹೋಗಿದ್ದೆ. ಆದರೆ ನನ್ನ ತಲೆಯಲ್ಲಿ ಸೊಳ್ಳೆಯ ಕಾಟದಿಂದ ಬರುವ  ಎಲ್ಲಾ ಪ್ರಶ್ನೆಗಳಿಗೆ WCG ಯು 24ನೇ ಮಾರ್ಚ್ ರಂದು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಆಯೋಜಿಸಿದ್ದ ‘ಸೊಳ್ಳೆಗಳ ಜೀವನ’ ಎಂಬ ವಿಚಾರ ಗೋಷ್ಠಿಯಲ್ಲಿ ಬಗೆಹರಿದವು. ಬೆಂಗಳೂರು ವಿಶ್ವವಿದ್ಯಾಲಯದ  ಪ್ರೊಫೆಸರ್ ಆದ  ಡಾ. ಟಿ.ಪಿ.ಎನ್ . ಹರಿಪ್ರಸಾದ್ ರವರು ನನ್ನ ಈ ಪ್ರಶ್ನೆಗಳನ್ನು ಬಗೆಹರಿಸಿದ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಪ್ರಪಂಚದಲ್ಲಿನ 90 ಭಾಗ ಜೀವಿಗಳು ಕೀಟಗಳು. ಇವುಗಳ ಲೋಕವೇ ಒಂದು ವಿಸ್ಮಯ ಪ್ರಪಂಚ. ಇವುಗಳ ಜೀವನ ಶೈಲಿ, ಆಹಾರ ಪದ್ಧತಿ, ಸಂಗಾತಿಯನ್ನು ಹುಡುಕುವ ಪರಿ, ಜೀವನ ಚಕ್ರಗಳನ್ನು ಗಮನಿಸಿದರೆ ಎಂತಹವರಿಗೂ ಸೋಜಿಗವೆನಿಸುತ್ತದೆ. ಆದರೆ ಇವುಗಳನ್ನು ಹೆಚ್ಚು ಗಮನಿಸದ ನಾವು ಕೀಟಗಳು ಎಂದರೆ ಮೂಗು ಮುರಿಯುವುದೇ ಹೆಚ್ಚು. ಅದರಲ್ಲೂ ಸೊಳ್ಳೆಗಳೆಂದರೆ ಎಲ್ಲರ ತಲೆಗೂ ಹೊಳೆಯುವುದು, ಅವುಗಳನ್ನು ಸಾಯಿಸುವುದು. ಈ ವಿಸ್ಮಯ ಜೀವಿಗಳ ಬಗೆಗಿನ ವಿಷಯಗಳನ್ನು ಸಾಮಾನ್ಯ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಲು ಆಯೋಜಿಸಿದ್ದ ಈ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ 40 ಅಭ್ಯರ್ಥಿಗಳು ಭಾಗವಹಿಸಿ ಕೀಟಗಳ ಬಗ್ಗೆ  ವಿಶೇಷವಾಗಿ ಸೊಳ್ಳೆಗಳ ಹಾಗೂ ಚಿಟ್ಟೆಗಳ ಬಗ್ಗೆ ತಿಳಿದುಕೊಂಡರು.

ಕಾರ್ಯಕ್ರಮದ ಆಯೋಜನ ತಂಡದಲ್ಲಿ ನಾನು ಇದ್ದುದ್ದರಿಂದ ಕೆಲಸವು ಹೆಚ್ಚು ಇದ್ದರೂ ಈ ಕೀಟಗಳ ಆಶ್ಚರ್ಯಕರ ಮಾಹಿತಿಯನ್ನು ಕೇಳುತ್ತಿದ್ದ ನಾನು ಎಲ್ಲವನ್ನೂ ಮರೆತು ಕುಳಿತಿದ್ದೆ , ಸೊಳ್ಳೆಗಳಲ್ಲಿ  3000 ಸಾವಿರಕ್ಕೂ ಹೆಚ್ಚು ಪ್ರಭೇದಗಳಿವೆ ಎಂದು ಕೇಳಿ ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಸೊಳ್ಳೆಗಳು ರೋಗವನ್ನು ಒಂದು ಜೀವಿಯಿಂದ ಇನ್ನೊಂದು ಜೀವಿಗೆ ಹರಡುವಂತೆ ಮಾಡುತ್ತವೆಯೇ ಹೊರತು ಅವುಗಳಿಂದ ಯಾವುದೇ ರೋಗ ಉತ್ಪತ್ತಿಯಾಗುವುದಿಲ್ಲ , ಹೆಣ್ಣು ಜೀವಿಗಳು ಮಾತ್ರ ತಮ್ಮ ಮೊಟ್ಟೆಗಳಿಗೆ ಬೇಕಾದ ಪ್ರೊಟೀನ್ ಒದಗಿಸಲು ಬೇರೆ ಜೀವಿಯ ರಕ್ತ ಹೀರುತ್ತವೆ ಎಂದೂ, ಈ ಸೊಳ್ಳೆಗಳ ತೊಂದರೆಯಿಂದ ಪಾರಾಗಲು ನಾವು ತೆಗೆದು ಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ , ಅವುಗಳಿಂದ ಹರಡುವ ರೋಗಗಳ ಬಗ್ಗೆ ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00 ರ ತನಕ PPT  ಯ ಸಹಾಯದಿಂದ  ಸವಿವರವಾಗಿ ತಿಳಿಸಿಕೊಟ್ಟರು.

ಮಧ್ಯಾಹ್ನದ ಲಘು ಉಪಹಾರದ ನಂತರ ಹರಿಪ್ರಸಾದ್ ರವರು ತಮ್ಮ ಸೂಕ್ಷ್ಮದರ್ಶಕದ ಮೂಲಕ ಸೊಳ್ಳೆಯನ್ನು, ಅವುಗಳ ಮೊಟ್ಟೆಯನ್ನು ಹಾಗೂ ಕೆಲವು ಮಾದರಿಗಳನ್ನು ಅಭ್ಯರ್ಥಿಗಳಿಗೆ ತೋರಿಸಿಕೊಟ್ಟರು . ಶ್ರೀ ಚತುರ್ವೇದ್ ರವರು ಚಿಟ್ಟೆಗಳ ಬಗ್ಗೆ ಅವುಗಳನ್ನು ಗುರುತಿಸುವ ಪರಿಯ ಬಗ್ಗೆ, ಅವುಗಳ ಮಹತ್ವ, ಅವುಗಳ ಜೀವನ ಕ್ರಮವನ್ನು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಕಾಣ ಸಿಗುವ ಚಿಟ್ಟೆಗಳನ್ನು ತೋರಿಸುತ್ತಾ ಸವಿವರವಾಗಿ ತಿಳಿಸಿಕೊಟ್ಟರು.

ಈ ಕಾರ್ಯಕ್ರಮವು ಜನಸಾಮಾನ್ಯರನ್ನು, ಯುವಪೀಳಿಗೆ ಯನ್ನು ತಮ್ಮ ಸುತ್ತ ಮುತ್ತ ಇರುವ ಕೀಟಗಳನ್ನು ಪರಿಚಯಿಸಿ ನಿಸರ್ಗದ ಮೇಲಿನ ಕಾಳಜಿಯನ್ನು ಬೆಳೆಸಲು WCG ತಂಡವು ಮಾಡಿದ ಸಣ್ಣ ಪ್ರಯತ್ನವಾಗಿತ್ತು . ಪ್ರತಿ ತಿಂಗಳು ಈ ರೀತಿಯ ಹಲವು ಕಾರ್ಯಕ್ರಮಗಳನ್ನು WCG ಯು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಆಯೋಜಿಸುತ್ತದೆ. ನೀವು ಭಾಗಿಯಾಗಿ ತಮ್ಮ ಸುತ್ತಲಿನ ಜೀವ ವೈವಿಧ್ಯಗಳನ್ನು ತಿಳಿದುಕೊಳ್ಳಬಹುದು.

ಏಪ್ರಿಲ್ ತಿಂಗಳ ಕಾರ್ಯಕ್ರಮ :- ಕರಡಿಗಳ ಜೀವನ ಹಾಗೂ ಮಾನವ – ವನ್ಯಜೀವಿ ಸಂಘರ್ಷ ಪರಿಚಯ
ಸಂಪನ್ಮೂಲ ವ್ಯಕ್ತಿ: ಡಾ . ಅರುಣ್ ಶಾ , Wildlife SOS

ಹೆಚ್ಚಿನ ಮಾಹಿತಿಗಾಗಿ :- http://www.indiawcg.org/
[email protected]
9008261066, 974091983

– ಧನರಾಜ್ ಎಂ
ಡಬ್ಲ್ಯೂ ಸಿ ಜಿ ., ಬೆಂಗಳೂರು

Spread the love
error: Content is protected.