ಮರಗಳಿಂದ ಆಪತ್ತು?!
“ಈ ಬಾಲ್ ಗ್ಯಾರಂಟಿ ಮರದ್ ತುದಿ ಮೇಲೆ ವೋಯ್ತದೆ ನೋಡ್ಕೋ…!” ಎಂದು ನಾನು ಧನುಗೆ ಹೇಳಿದೆ. ಅವನ ಸರದಿಯಲ್ಲಿ, ನನ್ನ ಬೌಲಿಂಗ್ ಗೆ ಹಾಗೆ ಸಿಕ್ಸ್ ಹೊಡೆದಿದ್ದರಿಂದ ಈ ಮಾತು ಬಂತು. “ಓಹ್ ಓಡಿ! ಆಮೇಲೆ ನೋಡನ” ಎಂದು ಕ್ಷಣ ಮಾತ್ರದಲ್ಲಿ ಹೇಳಬೇಕೆನ್ನಿಸಿದರೂ ಅಣ್ಣನ ಮುಖಕ್ಕೆ ಹೊಡೆದ ಹಾಗೆ ಹೇಗೆ ಹೇಳುವುದು ಎಂದೋ ಏನೋ ಅದನ್ನು ಒಳಗೆ ನುಂಗಿಕೊಂಡು, ಒಂದು ವ್ಯಂಗ್ಯ ನಗೆ ಹೊರ ಹಾಕಿದ. ಎಂಟೇಸಾ ಫೀಲ್ಡಿಂಗ್. ನಾವು ಕ್ರಿಕೆಟ್ ಆಡುತ್ತಿದ್ದ ಜಾಗ, ನಮ್ಮ ಹೊಲದ ಬಳಿ ಬೃಹದಾಗಿ ಬೆಳೆದಿದ್ದ ಹುಣಸೆ ಮರದ ಅಡಿಯಲ್ಲಿ. ಅದರ ಮೇಲೆ ರಾತ್ರಿ ಹೊಲ ಕಾಯಲು ‘ಮಚಾನ್’ ಕೂಡ ಕಟ್ಟಲಾಗಿತ್ತು. ಆಟ ಮುಗಿಸಿ ಬರುವಾಗ ನಾವೂ ಮಚಾನ್ ಒಳಗೆ ಹೋಗಿ ಮಲಗಿದರೆ ಹೇಗೆ ಅನುಭವಿಸಬೇಕು ಎಂದೆನಿಸಿ, ತಡ ಮಾಡದೆ ಮರ ಹತ್ತಲು ಪ್ರಯತ್ನಿಸಿದೆವು. ನಮ್ಮ ಎತ್ತರಕ್ಕೆ ಎಟುಕುವ ರೆಂಬೆಗಳೇ ಕಾಣಲಿಲ್ಲ. ಆದರೂ ಬಿಡಲಾದೀತೇ? ಹಳ್ಳಿ ಹುಡುಗರು ನಾವು! ಹೇಗೋ ಮಾಡಿ ಸಾಹಸಗೈದು ಮರ ಹತ್ತಿ ಬಿಟ್ಟೆವು. ಮಚಾನ್ ಒಳಗೂ ಹೋಗಾಯಿತು. ಮರದ ಮೇಲೆ ಮಲಗುವ ಹೊಸ ಅನುಭವ ಚೆನ್ನಾಗಿಯೇ ಇತ್ತು. “ಆದ್ರೆ ಇಲ್ಲಿ ರಾತ್ರಿ ಬರ್ಬೇಕು ಇನ್ನೂ ಮಜಾ!” ಎಂಬ ಮಾತು ಕೇಳಿಬಂತು. ಒಡನೆಯೇ “ಅಷ್ಟೇ ಆಮೇಲೆ. ವಾಪಾಸ್ ಮನೆಗ್ ಬರಲ್ಲ. ಉಣ್ಸೆ ಮರ್ದಲ್ಲಿ ದೆವ್ವ ಇರ್ತವೆ ರಾತ್ರಿ ವೊತ್ತು!” ಎಂಬ ಎಂಟೇಸನ ಹೆದರಿಕೆ ಧ್ವನಿ. ರಾತ್ರಿಯಲ್ಲಿ ಬಂದು ಮಲಗುವ ಧೈರ್ಯ ನನಗಿಲ್ಲದಿದ್ದರೂ ಸ್ವಲ್ಪ ದೊಡ್ಡವನಾದ್ದರಿಂದ ಭಯ ಹೊರ ತೋರುವಂತಿಲ್ಲ. ಶಾಲೆಯಲ್ಲಿ ಪರಿಸರ ವಿಜ್ಞಾನದಲ್ಲಿ ಕಲಿತ ಹಾಗೆ, ಮರಗಳು ರಾತ್ರಿಯ ವೇಳೆ ಉಸಿರಾಡುವಾಗ ಆಮ್ಲಜನಕವನ್ನು ಒಳ ತೆಗೆದುಕೊಂಡು ಇಂಗಾಲದ ಡೈ-ಆಕ್ಸೈಡ್ ಅನ್ನು ಹೊರ ಹಾಕುತ್ತವೆ. ಆದ್ದರಿಂದ ಎಷ್ಟೋ ಬಾರಿ ರಾತ್ರಿಯ ವೇಳೆ ಮರಗಳ ಕೆಳಗೆ ಮಲಗಿದರೆ ಉಸಿರು ಕಟ್ಟಿದಂತಾಗುತ್ತದೆ. ಕೆಲವೊಮ್ಮೆ ಸಾವು ಸಂಭವಿಸಬಹುದು. ಈ ವಿಷಯವನ್ನು ಅವರಿಗೆ ತಿಳಿಸಿ ಸ್ವಲ್ಪ ಬೊಗಳೆ ಕೊಚ್ಚಿಕೊಂಡದ್ದು ಈಗ ನೆನಪಾಗುತ್ತಿದೆ.
ಮರಗಳಿಂದ ಆಪತ್ತೆಂದರೆ ಹೀಗೆ ಇರಬಹುದು ಎಂದು ನನ್ನ ಊಹೆ. ನಿಮ್ಮದು..?
ನಿಮ್ಮದು ಅದೆಯೇ? ಏನ್ ಆಶ್ಚರ್ಯ! ನಮ್ಮ ಯೋಚನೆಗಳು ಮ್ಯಾಚ್ ಆಗುತ್ತಿವೆ. ಮುಂದೆ ನಿಮ್ಮ ಮನೆಯ ವಿಜ್ಞಾನಿಯಾಗುವ ಎಲ್ಲ ಲಕ್ಷಣಗಳಿವೆ. ಜೊತೆಗೆ ಹಾಗೆ ಯೋಚಿಸಿ ನೋಡಿ ನಾನು ಹೇಳ ಹೊರಟಿರುವ ಮರಗಳ ಆಪತ್ತು ಇದೇ ಇರಬಹುದೇ? ‘ಖಂಡಿತ ಇಲ್ಲ’ ಬೇರೆ ಏನೋ ಇದೆ. ಎಂಬ ಉತ್ತರ ನಿಮ್ಮದಾದರೆ, ನೀವು ಖಂಡಿತ ಕರೆಕ್ಟ್. ವಿಷಯ ಬೇರೆಯೇ ಇದೆ!
ರಾತ್ರಿಯಲ್ಲ. ಹಾಡ ಹಗಲಲ್ಲೇ, ಬಿಸಿಲ ಬೇಗೆಯಲ್ಲೇ ಮರಗಳು ಮನುಷ್ಯರಿಗೆ ಆಪತ್ತಿನ ತುತ್ತು ಉಣಬಡಿಸುತ್ತಿವೆ ಎಂದರೆ ನಂಬುವಿರಾ..? ನಂಬಲೇ ಬೇಕು. ಏಕೆಂದರೆ ಇದಕ್ಕೆ ಪುರಾವೆಯೇ ಇತ್ತೀಚೆಗಿನ ಸಂಶೋಧನೆ.
ಮರಗಳಿಂದ ಏನೆಲ್ಲಾ ಉಪಯೋಗಗಳಿವೆ ಎಂದು ಪಟ್ಟಿ ಮಾಡಲು ಹೊರಟರೆ ಇಂದಿನ ಸಂಚಿಕೆಯೆಲ್ಲ ಅದರಲ್ಲಿಯೇ ಕಳೆದು ಹೋಗುತ್ತದೆ. ಉದಾಹರಣೆಗೆ ಕೆಲವನ್ನು ಹೇಳುವುದಾದರೆ, ವೃಕ್ಷಗಳು ಹರಿದು ಹೋಗುವ ಮಳೆ ನೀರನ್ನು ಇಂಗಿಸಿ ಅಂತರ್ಜಲವನ್ನು ಹೆಚ್ಚಿಸುತ್ತವೆ, ಇಂಗಾಲದ ಡೈ-ಆಕ್ಸೈಡ್ ನಂತಹ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತವೆ. ಹಾಗೆ ನಮ್ಮ ಪ್ರಾಣವಾಯುವಾದ ಆಮ್ಲಜನಕವನ್ನು ಹೊರಹಾಕುತ್ತವೆ. ಮರಗಳು ಹೇಗೆ ನೋಡಿದರೂ ನಮ್ಮ ಆರೋಗ್ಯ ಜೀವನದ ಮುಖ್ಯ ಅಂಗ. ಹೀಗಿರುವಾಗ ಮರ ಅಪಾಯಕಾರಿಯಾಗಲು ಹೇಗೆ ಸಾಧ್ಯ?
ಮರಗಳು ಕೇವಲ ನಮಗೆ ಬೇಕಾದ ಆಮ್ಲಜನಕವನ್ನು ಹೊರಹಾಕುವುದಿಲ್ಲ. ಬದಲಿಗೆ ಎಷ್ಟೋ ಬೇರೆ ಬೇರೆ ರಾಸಾಯನಿಕಗಳನ್ನು ಹೊರ ಹಾಕುತ್ತವೆ. ಉದಾಹರಣೆಗೆ, ಮರಗಳು ಆಯಿಸೊಪ್ರೀನ್(isoprene) ನಂತಹ ಹೈಡ್ರೋ-ಕಾರ್ಬನ್ ಗಳನ್ನು ಹೊರಹಾಕುತ್ತವೆ. ಈ ವಸ್ತು ನೈಟ್ರೋಜನ್ ಆಕ್ಸೈಡ್ ಗಳ ಜೊತೆಗೆ ರಾಸಾಯನಿಕವಾಗಿ ಸೇರಿ “ಓಜೋನ್(O3)” ವಸ್ತುಗಳಾಗುತ್ತವೆ. ಓಜೋನ್ ಪದರ ನಾವು ಕೇಳಿದ ಹಾಗೆ ನಮಗೆ ರಕ್ಷಣೆಯ ಪ್ರತೀಕವಾಗಿದ್ದರೂ, ನಮ್ಮ ಉಸಿರಾಟದ ಗಾಳಿಯೊಂದಿಗೆ ಸೇರಿದರೆ ಅದು ಅಪಾಯಕಾರಿ. ಹೇಗೆಂದರೆ ಹೊಗೆಯುಕ್ತ ಮಂಜು(smog) ಮತ್ತು ಈ ಓಜೋನ್ ವಸ್ತುಗಳು ಸೇರಿ ಆಸ್ತಮಾ ಖಾಯಿಲೆಯನ್ನು ಉಲ್ಬಣಗೊಳಿಸಬಹುದಂತೆ.
ಅರೆ ನಮಗೇನು ಆಸ್ತಮಾ ಖಾಯಿಲೆ ಇಲ್ಲ ಬಿಡಿ ಎಂದು ತಾತ್ಸಾರ ಮಾಡುವ ಹಾಗಿಲ್ಲ. ಏಕೆಂದರೆ ಕಥೆ ಇನ್ನೂ ಮುಗಿದಿಲ್ಲ. ಈ ನೈಟ್ರೋಜನ್ ಆಕ್ಸೈಡ್ ಗಳು ಮರಗಳಿಂದ ಹೊರ ಬರುವ ಇನ್ನೊಂದು ಬಗೆಯ ಹೈಡ್ರೋ-ಕಾರ್ಬನ್ ಗಳಾದ ಮೋನೋಟರ್ಪೀನ್(monoterpene) ಮತ್ತು ಸೇಸ್ಕ್ವಿಟರ್ಪೀನ್(sesquiterpene)ಗಳ ಜೊತೆಗೆ ಪ್ರತಿಕ್ರಿಯಿಸಿ ಹತ್ತು ಹಲವು ಹಾನಿಕಾರಕ ಅನಿಲಗಳನ್ನು ವಾತಾವರಣಕ್ಕೆ ಹರಡುತ್ತವೆ. ಇದರಿಂದ ಎಲ್ಲರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆ ಈ ವಾಯು ಮಾಲಿನ್ಯವು ಹೆಚ್ಚು ಉಷ್ಣಾಂಶವಿರುವ ಬೇಸಿಗೆಯ ಸಮಯದಲ್ಲಿ ಜೋರಾಗಿರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಗಲೀನ ಮತ್ತು ಅವರ ತಂಡ ಬರ್ಲಿನ್ ವಿಶ್ವವಿದ್ಯಾಲಯದವರು. ಇವರು ಈ ಸಂಶೋಧನೆಗೆಂದು ಬರ್ಲಿನ್ ಮಹಾನಗರದ 2006ರ ಮತ್ತು 2014ರ ಬೇಸಿಗೆಯ ಸರಾಸರಿ ಉಷ್ಣಾಂಶಗಳನ್ನು ಪಡೆದುಕೊಂಡರು. 2006ರ ಉಷ್ಣಾಂಶ ಸ್ವಲ್ಪ ಹೆಚ್ಚಾಗಿದ್ದು 2014ರ ಉಷ್ಣಾಂಶ ಸ್ವಲ್ಪ ಕಡಿಮೆಯೇ ಇದ್ದಿತು. ಇವುಗಳಲ್ಲಿ ಬೇಸಿಗೆಯ ಸರಾಸರಿ ಉಷ್ಣಾಂಶ 250c ಇದ್ದಾಗ ಮರಗಳಿಂದ ಹೊರಬರುವ ರಸಾಯನಿಕಗಳು ವಾಯುಮಾಲಿನ್ಯಕ್ಕೆ 6-20% ರಷ್ಟು ಓಜೋನ್ ವಸ್ತುವನ್ನು ನೀಡುತ್ತಿದ್ದವು. ಹಾಗೆ ಉಷ್ಣಾಂಶ ಹೆಚ್ಚಿದ್ದ, ಅಂದರೆ ಸರಾಸರಿ 300c ಇದ್ದ ಸಮಯದಲ್ಲಿ 60% ನಷ್ಟು ಓಜೋನ್ ಉತ್ಪತ್ತಿಯಾಗಿ ಗಾಳಿಯಲ್ಲಿನ ಇನ್ನಿತರ ವಿಷಾನಿಲಗಳ ಜೊತೆಗೆ ಸೇರುತ್ತಿದ್ದವು.
ಹಾಗಾದರೆ ಮರಗಳು ನಿಜವಾಗಿಯೂ ಅಪಾಯಕಾರಿಯೇ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿದ್ದರೆ ನನ್ನ ಕೆಲಸ ಚೆನ್ನಾಗಿ ಆಗಿದೆ ಎಂದರ್ಥ. ಖಂಡಿತ ಇಲ್ಲ! ಸಹಸ್ರಾರು ವರ್ಷಗಳಿಂದ ಪೂಜ್ಯಸ್ಥಾನದಲ್ಲಿರುವ ವೃಕ್ಷ ಅಪಾಯಕಾರಿಯಾದೀತೇ? ಇದರಲ್ಲೂ ನಮ್ಮದೇ ಕೈವಾಡವಿದೆ. ಅದೇನು? ಎನ್ನುವಿರೇನು? ಉತ್ತರ ಇಲ್ಲಿದೆ ನೋಡಿ. ಈ ಮೇಲೆ ಹೇಳಿದ ಹಾಗೆ ಹೈಡ್ರೋ-ಕಾರ್ಬನ್ ಗಳ ಜೊತೆಗೆ ನೈಟ್ರೋಜನ್ ಆಕ್ಸೈಡ್ ಗಳು ಸೇರಿ ವಿಷಾನಿಲಗಳು ಹೊರಬರುತ್ತವೆ ಎಂದು ಹೇಳಲಾಗಿತ್ತು. ಇಲ್ಲಿ ನೈಟ್ರೋಜನ್ ಆಕ್ಸೈಡ್ ಗಳು ಎಲ್ಲಿಂದ ಬಂದವು? ಎಂಬ ಪ್ರಶ್ನೆ ಮೂಡಿದ್ದರೆ ತುಂಬಾ ಒಳ್ಳೆಯದು. ಏಕೆಂದರೆ ನೀವು ಚೆನ್ನಾಗಿ ಯೋಚಿಸುತ್ತಿರುವಿರಿ ಎಂದರ್ಥ. ಈ ನೈಟ್ರೋಜನ್ ಆಕ್ಸೈಡ್ ಗಳು, ನಾವು ಮನುಷ್ಯರು ದಿನಾಲು ಕೋಟ್ಯಾನುಕೋಟಿ ಸಂಖ್ಯೆಯಲ್ಲಿ ಉಪಯೋಗಿಸುವ ವಾಹನಗಳ ಹೊಗೆಯಿಂದ ಬಂದಂತವು. ಸ್ವಾಭಾವಿಕವಾಗಿ ಈ ಆಕ್ಸೈಡ್ ವಾತಾವರಣದಲ್ಲಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ಇದನ್ನು ಸೇರಿಸಿದವರು ನಾವೇ! ಹಾಗಾದರೆ ನಿಜವಾದ ವಾಯುಮಾಲಿನ್ಯದ ಕರ್ತೃ ಯಾರು?
ಮರಗಳೋ? ನಾವೋ? ಉತ್ತರ ನಿಮ್ಮ ಬಳಿಯೇ ಇದೆ.
ಸಮಸ್ಯೆಯೂ ನಿಮ್ಮ ಮುಂದೆ ಇದೆ. ಹೀಗೆ ಕೇವಲ ಸಮಸ್ಯೆಗಳ ಪಟ್ಟಿ ಮಾಡುತ್ತಾ ಕುಳಿತರೆ ಪ್ರಯೋಜನವಿಲ್ಲ. ಅವುಗಳಿಗೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳುವ ತನಕ. ಮುಂದೆ ಆ ತಪ್ಪುಗಳನ್ನು ಮರುಕಳಿಸದ ತನಕ. ಈ ವಿಷಯಗಳು ಹೆಚ್ಚಿನ ಸಂಖ್ಯೆಯಲ್ಲಿ ರವಾನಿಸಿ ಬದಲಾವಣೆಯನ್ನು ತರದಿರುವ ತನಕ!
ನಿಮ್ಮ ಪರಿಹಾರಗಳನ್ನು ನಮಗೆ ಬರೆದು ತಿಳಿಸಿ,
ಮೂಲ ಲೇಖನ: ScienceNewsforStudents
–ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.