ಮತ್ತೆ ಮರಳಿ ಬಾ ಗುಬ್ಬಿ
© ಪ್ರಸಾದ್ ನಟರಾಜನ್
ಬೇರೆ ಪಕ್ಷಿಗಳ ತರ ಗುಬ್ಬಚ್ಚಿಯನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಮಕ್ಕಳಾದಿಯಾಗಿ ಮುದುಕರವರೆಗೂ ಪರಿಚಿತವಾಗಿದ್ದ ಮನೆಮ೦ದಿಯಲ್ಲಿ ಒ೦ದಾಗಿದ್ದ ಹಕ್ಕಿ ಎ೦ದರೆ, ಅದು ಗುಬ್ಬಚ್ಚಿ. ಅದರಲ್ಲೂ ಹಳ್ಳಿಗಳಲ್ಲಿ ಎಲ್ಲೆಲ್ಲಿ ಮನುಷ್ಯ ಹೊಸ ಮನೆ ಕಟ್ಟುತ್ತಾನೋ ಅದು ಗುಬ್ಬಚ್ಚಿಯ ಪೋಸ್ಟಲ್ ಅಡ್ರೆಸ್ ಅಂದರೆ ಆಶ್ಚರ್ಯವಿಲ್ಲ ಬಿಡಿ. ಬೈಬಲ್ ಮತ್ತು ರಾಮಾಯಣದಲ್ಲೂ ಗುಬ್ಬಚ್ಚಿಯ ಉಲ್ಲೇಖವಿದೆ. ಇದರಿಂದ ತಿಳಿದುಬರುವುದೇನೆಂದರೆ ಮನುಷ್ಯ ಕೃಷಿ ಶುರುಮಾಡಿದಾಗಿನಿಂದ ಜಾಣ ಗುಬ್ಬಚ್ಚಿ ಕಾಡು ಬಿಟ್ಟು ನೆರಳಿನಂತೆ ಮಾನವನನ್ನು ಹಿಂಬಾಲಿಸಿದೆ, ಆಹಾರಕ್ಕಾಗಿ, ವಾಸಕ್ಕಾಗಿ ಮತ್ತು ಸುರಕ್ಷತೆಗಾಗಿ. ಆಹಾರ, ಸುರಕ್ಷೆ ಎಲ್ಲಾ ಸಿಕ್ಕಿರುವ ಪಕ್ಷಿ ಗುಬ್ಬಚ್ಚಿ ಪ್ರಪಂಚದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ.
ಗುಬ್ಬಚ್ಚಿಯನ್ನು ಆಂಗ್ಲ ಭಾಷೆಯಲ್ಲಿ ಹೌಸ್ ಸ್ಪ್ಯಾರೋ (House Sparrow) ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Passer domesticus. ಭಾರತದಲ್ಲಿ ಕಂಡುಬರುವ ಗುಬ್ಬಚ್ಚಿಯ ವೈಜ್ಞಾನಿಕ ಹೆಸರು Passer domesticus indicus.
ಗುಬ್ಬಚ್ಚಿಯ ತೂಕ ಸುಮಾರು 24 ಗ್ರಾಂ ನಿಂದ 40 ಗ್ರಾಂ, ಹಾಗೂ ಗಾತ್ರ 14 ಸೆಂಟಿಮೀಟರ್ನಿಂದ 18 ಸೆಂಟಿಮೀಟರ್. ಸರಿಸುಮಾರಾಗಿ ಮೂರು ವರ್ಷಗಳ ಕಾಲ ಒಂದು ಗುಬ್ಬಚ್ಚಿ ಬದುಕತ್ತದೆ ಎಂದು ಹೇಳಲಾಗುತ್ತದೆ. ಬೆಂಗಳೂರು ಮತ್ತು ಗುಬ್ಬಚ್ಚಿಯ ವಿಶೇಷ ಸಂಬಂಧ ಭಾರತದ ಉಪ ಜಾತಿಯಾದ Passer Domesticus Indicusನ್ನು 1845ರಲ್ಲಿ ಬೆಂಗಳೂರಿನಿಂದ ಸಂಗ್ರಹಿಸಲಾದ ಮಾದರಿಯಿಂದ ಜಾರ್ಡಿನ್ ಮತ್ತು ಸೆಲ್ಬಿ ವಿವರಿಸಿದ್ದಾರೆ.
ಗಂಡು ಮತ್ತು ಹೆಣ್ಣು ಗುಬ್ಬಚ್ಚಿಯನ್ನು ಗುರುತಿಸುವುದು ಹೇಗೆ? ಗಂಡು ಗುಬ್ಬಚ್ಚಿಗೆ ಬೂದು ತಲೆ, ಬಿಳಿಕೆನ್ನೆ, ಗಂಟಲು ಭಾಗದಲ್ಲಿ (ಬಿಬ್) ಇರುವ ಕಪ್ಪು ಪಟ್ಟಿ ಮತ್ತು ಕಡುಕಂದು ಕುತ್ತಿಗೆಯಿಂದ ಹೊಳೆಯುವ ಬಣ್ಣದ ಪಕ್ಷಿಗಳಾಗಿವೆ. ಹೆಣ್ಣು ಗುಬ್ಬಚ್ಚಿಗೆ ಕಂದು ಮಿಶ್ರಿತ ಬೂದು ಬಣ್ಣದ ಹೊಟ್ಟೆ, ಬೆನ್ನಿನ ಮೇಲ್ಭಾಗದಲ್ಲಿ ಕಪ್ಪು ಮತ್ತು ಕಂದು ಬಣ್ಣದಿಂದ ಗಮನಾರ್ಹವಾದ ಪಟ್ಟಿಯಾಗಿರುತ್ತದೆ.
ಗುಬ್ಬಿಯ ಈ ಹೆಸರು ಕೇಳಿದ ತಕ್ಷಣ ನಮ್ಮ ಮನಸ್ಸಿನಲ್ಲಿ ನೆನಪಿಗೆ ಬರುವ ಮೊದಲ ವಿಷಯವೆ೦ದರೆ ನಮ್ಮ ಬಾಲ್ಯದ ದಿನಗಳು. ಏಕೆಂದರೆ ನಾವು ಗುಬ್ಬಿಗಳನ್ನು ಪ್ರತ್ಯಕ್ಷವಾಗಿ ಕಣ್ಣಾರೆ ಕ೦ಡ ದಿನಗಳವು. ಇತ್ತೀಚಿನ ದಿನಗಳಲ್ಲಿ ಸುಲಭವಾಗಿ “ಹುಲಿ”ಯ೦ತಹ ಪ್ರಾಣಿಯನ್ನು ನೋಡಬಹುದು ಆದರೆ ಗುಬ್ಬಿಯನಲ್ಲ. ಇದಕ್ಕೆ ಕಾರಣ ಬಹುತೇಕವಾಗಿ ಕಣ್ಮರೆಯಾಗಿ ನಶಿಸಿ ಹೋಗುವ ಹ೦ತವನ್ನು ಈ ಪಕ್ಷಿ ಪ್ರಬೇಧ ತಲುಪಿದೆ.
ಗುಬ್ಬಚ್ಚಿಗಳು ಕಣ್ಮರೆಯಾಗಲು ಹಲವಾರು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಈಗಿನ ಮನೆಗಳ ಅತ್ಯಾಧುನಿಕ ಕಟ್ಟಡಗಳ ವಿನ್ಯಾಸ ಕೂಡ ಒ೦ದು. ಹಳ್ಳಿಗಳಲ್ಲಿನ ಮನೆ ನಿರ್ಮಾಣಕ್ಕೂ ಮತ್ತು ಪಟ್ಟಣದ ಕಟ್ಟಡಗಳ ನಿರ್ಮಾಣಕ್ಕೂ ಇರುವ ವ್ಯತ್ಯಾಸವೇ ಇ೦ದು ಗುಬ್ಬಿಯ೦ತಹ ಹಲವು ಪಕ್ಷಿ ಪ್ರಬೇಧಗಳ ಸ೦ತತಿ ನಾಶವಾಗಲು ಕಾರಣವಾಗಿದೆ. ಇನ್ನೊ೦ದು ವಿಷಾದದ ಸ೦ಗತಿಯ೦ದರೆ ಅತ್ಯಾಧುನಿಕ ವಿನ್ಯಾಸ ಕಲೆ ಹಳ್ಳಿಗಳಿಗೂ ಕಾಲಿಟ್ಟು ಗುಬ್ಬಿ ಸ೦ತತಿಯನ್ನು ನಿಧಾನವಾಗಿ ನಶಿಸಿ ಹೋಗುವ೦ತೆ ಮಾಡುತ್ತಿದೆ. ಇನ್ನೂ ಕೆಲವರು ಹೇಳುವ೦ತೆ ಮೊಬೈಲ್ ಫೋನಿನ ತರ೦ಗಗಳಿ೦ದ ಗುಬ್ಬಚ್ಚಿಯ ಸಂಕುಲ ನಶಿಸಿ ಹೋಗುತ್ತಿದೆಯೆ೦ದು! ಆದರೆ ನನ್ನ ಅಭಿಪ್ರಾಯದಲ್ಲಿ ತರ೦ಗಗಳಿಗಿ೦ತಲು ವೇಗವಾಗಿ ಮತ್ತು ಅತಿ ಮಾರಕವಾಗಿ ಕಟ್ಟಡಗಳ ವಿನ್ಯಾಸ ಗುಬ್ಬಿಗಳ ಮೇಲೆ ಪರಿಣಾಮ ಬೀರಿದೆ ಮತ್ತು ಬೀರುತ್ತಿದೆ ಎಂದು.
ಗುಬ್ಬಿಗಳ ಸ೦ತತಿಯ ನಾಶಕ್ಕೆ ಇನ್ನೊ೦ದು ಮುಖ್ಯ ಕಾರಣವೆ೦ದರೆ, ಮನುಷ್ಯ ತಮ್ಮ ಬೆಳೆ ರಕ್ಷಣೆಗೆ ಅತಿಯಾಗಿ ಕ್ರಿಮಿನಾಶಕ ಬಳಸುತ್ತಿರುವುದು, ಅದರ ನೇರ ಪರಿಣಾಮ ಗುಬ್ಬಿ ಮತ್ತು ಅನೇಕ ಕೀಟಹಾರಿ ಪಕ್ಷಿಗಳ ಮೇಲೆ ಬೀರುತ್ತದೆ. ಹೇಗೆಂದರೆ ಗುಬ್ಬಿ ತನ್ನ ಮರಿಗಳಿಗೆ ಆಹಾರವಾಗಿ ಹುಳು ಹುಪ್ಪಟೆಗಳನ್ನು, ಹೊಲ ಗದ್ದೆಗಳಿ೦ದ ತ೦ದು ತಿನ್ನಿಸುತ್ತದೆ. ಮಾನವ ಸಿ೦ಪಡಿಸುರುವ ಕ್ರಿಮಿನಾಶಕ, ನೇರವಾಗಿ ಹುಳು ಹುಪ್ಪಟೆಗಳ ಮೂಲಕ ಗುಬ್ಬಿ ಮರಿಗಳ ಹೊಟ್ಟೆ ಸೇರುತ್ತದೆ ಮತ್ತು ಇವುಗಳ ಸ೦ತತಿಯನ್ನು ಸದ್ದಿಲ್ಲದೆ ನಾಶ ಮಾಡಿದೆ ಮತ್ತು ಮಾಡುತ್ತಲೆ ಇದೆ. ಒ೦ದು ವಿಷಾದದ ಸ೦ಗತಿಯೆ೦ದರೆ ಇತ್ತೀಚಿನ ದಿನಗಳಲ್ಲಿ ತ೦ದೆ/ತಾಯ೦ದಿರು ಮಕ್ಕಳಿಗೆ whatsapp ಮತ್ತು youtubeಗಳನ್ನ ತೋರಿಸಿ ಮಕ್ಕಳಿಗೆ ಊಟ ಮಾಡಿಸುವ೦ತಹ ಪರಿಸ್ಥಿತಿ ಎದುರಾಗಿದೆ. ಈ ವಿಷಯದಲ್ಲಿ ನನ್ನನ್ನು ನಾನು ಭಾಗ್ಯವ೦ತನೆ೦ದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಏಕೆ೦ದರೆ ನಮ್ಮ ಹಿರಿಯರು ನಮಗೆ ಕಾಗಕ್ಕ ಮತ್ತು ಗುಬ್ಬಕ್ಕರನ್ನು ತೋರಿಸಿ ಊಟ ಮಾಡಿಸಿದ್ದಾರೆ ವಿನಃ, whatsapp ಮತ್ತು youtubeಗಳನ್ನಲ್ಲ.
ಮನೆಯ ಮಾಡಿನಲ್ಲೊ೦ದು ಗೂಡು,. ಅವುಗಳು ಅದೆಷ್ಟೇ ಗಲಾಟೆ ಮಾಡಿದರೂ ಮನೆಮ೦ದಿಗೆಲ್ಲ ಅಷ್ಟೇ ಸಹನೀಯ. ಗ೦ಡು ಹೆಣ್ಣು ಹಕ್ಕಿಗಳ ಭಿನ್ನತೆ, ಅವುಗಳು ಕೂಡಿ ಗೂಡು ಕಟ್ಟುವ ಪರಿ ಮನೆಕೆಲಸಗಳಷ್ಟೇ ಪರಿಚಿತ. ಬೆಳಿಗ್ಗೆ ಅಕ್ಕಿ ಕಾಳುಗಳನ್ನು ಹೊಸಲಿನ ಹೊರಗೆ ಚೆಲ್ಲಿದರೆ ಎಲ್ಲಿ೦ದಲೋ ಗುಬ್ಬಚ್ಚಿ ಸಂತತಿ ಕೂಡಿ ತಿನ್ನಲು ತೊಡಗುತ್ತವೆ. ಇಲ್ಲದಿದ್ದರೆ ಮನೆಯ ಮಾಡಲ್ಲಿ ಮೂರೋ ನಾಲ್ಕು ಹಕ್ಕಿ ಚಿ೦ವ್ ಚಿರ್ ಚಿ೦ವ್ ಎ೦ದು ಹಾರುತ್ತಿರುತ್ತವೆ.
ಆ ಕಾಲದಲ್ಲಿ ಮನೆಯವರೆಲ್ಲ ಸಾಲಾಗಿ ತಿ೦ಡಿಗೋ ಊಟಕ್ಕೋ ಕೂತರೆ ಎಲೆಯ ಹತ್ತಿರ ಬ೦ದು ಹೆಕ್ಕಿ ತಿನ್ನುವ ಆ ಸುಸ೦ಸ್ಕೃತಿ ಅವಕ್ಕೆ ಅಗತ್ಯವೇ ಇರಲಿಲ್ಲ. ಈಗ ಅವುಗಳ ಅವಶ್ಯಕತೆಯನ್ನೆಲ್ಲ ನಾವೇ ಆಕ್ರಮಿಸಿ, ಮೇವನ್ನೆಲ್ಲ ನಾವೇ ಮೇಯುತ್ತ ನಮ್ಮ ಕುಸ೦ಸ್ಕೃತಿಯನ್ನು ರಾಜಾರೋಷವಾಗಿ ಪ್ರದರ್ಶಿಸುತ್ತಾ ನಮ್ಮ ತಲೆಯ ಮೇಲೆ ನಮ್ಮಳಿವಿನ ಚಪ್ಪಡಿ ಕಲ್ಲನ್ನು ಎಳೆದುಕೊ೦ಡು ಕೈಸೋಲುವ ತನಕ ಹೊತ್ತು ನಿ೦ತಿದ್ದೇವೆ.
ಇ೦ತಹ ಸ್ವಾರ್ಥ ಜೀವನದ ತಿದ್ದು ಪಡಿಗೆ ನಾವು ಮಾಡಬೇಕಾಗಿರುವುದಾದರೂ ಏನು? ನಾವು ತಿನ್ನುವ ಧಾನ್ಯವನ್ನು ಕೇಳುತ್ತವೆಯೇ ಈ ಗುಬ್ಬಿಗಳು! ಬೇಕಿಲ್ಲ ಅವುಗಳಿಗೆ ಗೂಡು ಕಟ್ಟಲು ಹ೦ಚಿನ/ಸೋಗೆ ಮನೆಯೊಳಗಿನ ಮರದ ತೊಲೆ ಸಂದು ಏನೂ
ಲಭ್ಯವಿಲ್ಲದಿರುವುದರಿ೦ದ ಉಪಯೋಗಿಸಿ ಬಿಟ್ಟ ಕಾರ್ಡ್ ಬೋರ್ಡ್ ಡಬ್ಬಿಗಳಿಗೆ ತೂತೊ೦ದನ್ನು ಕೊರೆದು ಮನೆ ಎದುರು ತೂಗಿ ಬಿಟ್ಟರೆ ಸಾಕು. ಅವುಗಳಲ್ಲೇ ಮರಿಗಳಿಗೆ ಆಶ್ರಯ ತಾಣ ನಿರ್ಮಿಸುತ್ತವೆ. ಇನ್ನೂ ಮೇಲ್ಪಟ್ಟದ್ದು ಬೇಕೆ೦ದರೆ ಉಪಯೋಗಿಸಿ ಎಸೆದು ಬಿಟ್ಟ ಮರದ ಹಲಗೆಗಳನ್ನು ಜೋಡಿಸಿ ತೂತೊ೦ದನ್ನು ಕೊರೆದು ಗೋಡೆಗೆ ಆನಿಸಿ ತೂಗು ಬಿಟ್ಟರೂ ಆಯಿತು.
ಮನೆಯ ಸುತ್ತಮುತ್ತ ಮತ್ತೆ ಕೈತೋಟದಲ್ಲಿನ ಹುಳುಗಳನ್ನು ಆರಿಸಿ ತಿ೦ದು ನಮ್ಮ ಸುತ್ತಮುತ್ತ ಹಾರಾಡುತ್ತಾ ನಮಗೆ ಧನ್ಯವಾದ ಹೇಳುತ್ತಿರುತ್ತವೆ.
ಲೇಖಕರು : ರಮ್ಯ ಸೋಮಶೇಖರಯ್ಯ., ವರುಣ್ ಅಂಗಡಿ., ಶುಭ ಭಟ್.
ಬೆಂಗಳೂರು ಜಿಲ್ಲೆ
Good picture and article