ಪಶುವೈದ್ಯನ ನೋಟದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಪರಿಚಯ

ಪಶುವೈದ್ಯನ ನೋಟದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಪರಿಚಯ

ಮುಂದುವರೆದ ಭಾಗ….

ಸಂಘರ್ಷ ತಡೆಯುವಲ್ಲಿ ಪಶುವೈದ್ಯರ ಪಾತ್ರ

ಸಂಘರ್ಷ ನಿರ್ವಹಣೆಯಲ್ಲಿ ಪಶುವೈದ್ಯನು ಬಹು ಮುಖ್ಯ ಪಾತ್ರವನ್ನು ವಹಿಸುತ್ತಾನೆ.

ಪ್ರತಿಕ್ರಿಯೆಯ ಕಾಲಾವಧಿ

ಯಾವುದೇ ರೀತಿಯ ಮಾನವ-ಸಂಘರ್ಷವನ್ನು  ತಡೆಯುವಲ್ಲಿ/ಕಡಿಮೆಮಾಡುವಲ್ಲಿ, ತೊಂದರೆಯಲ್ಲಿರುವ  ವನ್ಯ ಜೀವಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವಂತಹ  ತಂಡವು ಯಾವಾಗಲೂ ಮಾನವ-ಸಂಘರ್ಷ  ಪರಿಸ್ಥಿತಿ ಒದಗಿದಲ್ಲಿ ತಕ್ಷಣ ಪ್ರತಿಕ್ರಿಯಿಸುವಂತೆ ಸನ್ನದ್ಧವಾಗಿರಬೇಕು ಹಾಗೂ ಇಂತಹ ಸಂಘರ್ಷಗಳ ಮಾಹಿತಿ ದೊರೆತ ತತ್ ಕ್ಷಣವೇ ಕಾರ್ಯೋನ್ಮುಖವಾಗಬೇಕು.

ಮಾನವಶಕ್ತಿಯ ಕ್ರೂಢೀಕರಣ

ಯಾವುದೇ ರೀತಿಯ ಸಂಘರ್ಷಗಳ ಸಮಯದಲ್ಲಿ ಅದನ್ನು ತಡೆಯಲು ಪಶುವೈದ್ಯ ತಂಡವು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು  ಅಥವಾ ಬೇರೆ ಸ್ವಯಂಸೇವಕ ತಂಡದವರನ್ನು  ಕ್ರೂಢೀಕರಿಸಿಕೊಂಡು ಕೆಲಸಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಕೆಲವೊಮ್ಮೆ ಪಂಜರಗಳನ್ನು ಕೊಂಡೊಯ್ಯುವಂತಹ ಸಣ್ಣ ಪುಟ್ಟ ಸುರಕ್ಷಿತ ಕೆಲಸಗಳಲ್ಲಿ ಸಾರ್ವಜನಿಕರ ಸಹಾಯವನ್ನು ಸಹ ಪಡೆಯಬೇಕಾಗುತ್ತದೆ.

ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವಿಕೆ

  ಪಶುವೈದ್ಯ ತಂಡವು ಸಂಘರ್ಷದ ಸ್ಥಳ ತಲುಪಿದ ತಕ್ಷಣವೇ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಅದನ್ನು ಸರಿಪಡಿಸುವಲ್ಲಿ ಮಾಡಬೇಕಾಗಿರುವ ಕಾರ್ಯವೈಖರಿಯ ಯೋಜನೆಯನ್ನು ವಿನ್ಯಾಸಗೊಳಿಸುವುದು ಬಹುಮುಖ್ಯ ಕೆಲಸವಾಗಿದೆ, ವಿಫಲವಾದಲ್ಲಿ ಅದು ವನ್ಯಪ್ರಾಣಿಗಾಗಲಿ, ಕಾಪಾಡಲು ಬಂದ ತಂಡದವರಿಗಾಗಲಿ, ಸಾರ್ವಜನಿಕರಿಗಾಗಲಿ ಹಾನಿಯುಂಟುಮಾಡಬಹುದು.

ತೊಂದರೆಗೀಡಾಗಿರುವ ಪ್ರಾಣಿಯ ಬಗೆಗಿನ ಜ್ಞಾನ

ತೊಂದರೆಯಲ್ಲಿರುವ ಪ್ರಾಣಿಯನ್ನು ಗುರುತಿಸುವುದು ಹಾಗು ಅದರ ನಡವಳಿಕೆಯ ಬಗ್ಗೆ ಅರಿವಿರುವುದು. ಇದು  ಪ್ರಾಣಿಯನ್ನು ರಕ್ಷಿಸುವ ಕಾರ್ಯವಿಧಾನ ರಚಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಪ್ರಾಣಿ ತೊಂದರೆಯಿಂದ ತಪ್ಪಿಸಲು ಬೇಕಾಗುವ ಸಾಮಗ್ರಿಗಳ ಪಟ್ಟಿ ಮತ್ತು ಪೆಟ್ಟಿಗೆ ತಯಾರಿ

ರಕ್ಷಣಾ ಸಾಮಗ್ರಿಗಳ ಪೆಟ್ಟಿಗೆಯು  ರಕ್ಷಣ ತಂಡದವರು ತಕ್ಷಣ ತೆಗೆದುಕೊಂಡು ಹೋಗುವಂತೆ ಸೂಕ್ತವಾದ ರೀತಿಯಲ್ಲಿ ತಯಾರಿರಬೇಕು.ಎಲ್ಲಾ ಅವಶ್ಯಕವಾದ ಪರದೆಗಳು, ಏಣಿ, ತಂತಿಗಳು, ಕಟ್ಟಿಂಗ್ ಪ್ಲೇಯರ್, ವೈದ್ಯಕೀಯ ತುರ್ತುಪರಿಸ್ಥಿತಿಗೆ ಬೇಕಾಗಿರುವಂತಹ ಚುಚ್ಚುಮದ್ದುಗಳು, ನೋವಿನ ಔಷಧಿಗಳು, ಪ್ರತಿಕಾಯಗಳು, ಗಾಯಗಳನ್ನು ಶಮನಗೊಳಿಸುವ ಸಾಮಾಗ್ರಿಗಳು, ಸ್ಟೆತಸ್ಕೋಪ್, ಉಷ್ಣಮಾಪಕ, ಮುಂತಾದ ಪ್ರಮುಖ ಸಾಮಗ್ರಿಗಳು ಆ ಪೆಟ್ಟಿಗೆಯಲ್ಲಿ ಇರಬೇಕು. ಹಾಗೂ ಇರುವ ಸಾಮಗ್ರಿಗಳ ಪಟ್ಟಿಯು ಸಹ ಆ ಪೆಟ್ಟಿಗೆಯಲ್ಲಿಯೇ ಮುಂಚಿತವಾಗಿಯೆ ತಯಾರಿ ಮಾಡಿ ಇಟ್ಟಿರಬೇಕು.

© ಲೇನು ಕಣನ್

ಸೆರೆಹಿಡಿಯುವ ವಿಧಾನವನ್ನು ಆಯ್ಕೆಮಾಡಿಕೊಳ್ಳುವುದು

ಪರಿಸ್ಥಿತಿಯ ಸರಿಯಾದ ಅವಲೋಕನದ ನಂತರ, ಪ್ರ‍ಾಣಿಯನ್ನು ಗುರುತಿಸುವುದು, ಕಾರ್ಯವಿಧಾನದ ಯೋಜನೆ, ತಂಡದಲ್ಲಿನ ಸದಸ್ಯರಲ್ಲಿ ಕೆಲಸದ ವಿಭಜನೆಗಳ ನಂತರ ಪ್ರಾಣಿಯನ್ನು ರಾಸಾಯನಿಕ ನಿಶ್ಚಲತೆ ಅಥವಾ ದೈಹಿಕ ನಿಶ್ಚಲತೆಯ ಮುಖಾಂತರ ಸೆರೆಹಿಡಿಯಬೇಕು

ಸೂಕ್ತವಾದ ಅರೆವಳಿಕೆ ಮತ್ತು ಅದರ ಪ್ರಮಾಣವನ್ನು ಆಯ್ಕೆಮಾಡಿಕೊಳ್ಳುವುದು

ಅರೆವಳಿಕೆ ಮತ್ತು ಅದರ ಪ್ರಮಾಣದ ಆಯ್ಕೆ ಪ್ರಾಣಿಯ ಜಾತಿ, ವಯಸ್ಸು, ಅದರ ಆರೋಗ್ಯದ ಸ್ಥಿತಿ, ಗಾಯದ ಸ್ಥಿತಿ/ರೋಗ/ನಿರ್ಜಲೀಕರಣದ ಸ್ಥಿತಿ ಮುಂತಾದವುಗಳ ಮೇಲೆ ಅವಲಂಬಿಸಿರುತ್ತದೆ.

ಚಿಕಿತ್ಸೆ ಮತ್ತು ಬಿಡುಗಡೆ

ಪ್ರಾಣಿಯನ್ನು ನಿಶ್ಚಲಗೊಳಿಸಿದ ನಂತರ ಪ್ರ‍ಾಣಿಯ ದೇಹವನ್ನು ಸೂಕ್ತವಾಗಿ ಪರಿಶೀಲಿಸಬೇಕು. ಪ್ರಾಣಿಗೆ ಅಲ್ಪಪ್ರಮಾಣದ ಗಾಯವಿದ್ದರೆ ಅಥವಾ ಅದು ದೈಹಿಕವಾಗಿ ಆರೋಗ್ಯವಾಗಿ ಇರುವುದು ಕಂಡುಬಂದಲ್ಲಿ ಅದನ್ನು ಸೂಕ್ತವಾದ ರಕ್ಷಿತ ಪ್ರದೇಶದಲ್ಲಿ ಬಿಡುಗಡೆಗೊಳಿಸಬೇಕು. ಪ್ರಾಣಿಯಲ್ಲಿ ಗಂಭೀರವಾದ ಗಾಯಗಳು ಕಂಡುಬಂದಲ್ಲಿ ಅಥವಾ ವೈದ್ಯರ ಅವಶ್ಯಕತೆ ಇದ್ದಲ್ಲಿ ಅದು ಸರಿಹೋಗುವ ತನಕ ಬಂಧನದಲ್ಲೋ ಅಥವಾ ಸೂಕ್ತವಾದ ಮೃಗಾಲಯದಲ್ಲಿಯೋ ಇಟ್ಟು ಅದಕ್ಕೆ ಚಿಕಿತ್ಸೆ ನೀಡಿ ಅದು ಆರೋಗ್ಯವಾದ ತಕ್ಷಣ ರಕ್ಷಿತ ಪ್ರದೇಶದಲ್ಲಿ ಬಿಡುವುದು.

ರೋಗ ನಿಯಂತ್ರಣ

 ರಕ್ಷಣ ಕಾರ್ಯದಲ್ಲಿ ತೊಡಗಿದ್ದ ವೈದ್ಯನು ಪ್ರಾಣಿಯ ಬಿಡುಗಡೆ ಸಮಯದಲ್ಲಿ ಅದರ  ಅರೋಗ್ಯದ ಸ್ಥಿತಿಯನ್ನು ಸೂಕ್ತವಾಗಿ ಪರಿಶೀಲಿಸಬೇಕು. ಅದು ಯಾವುದೇ ಕಾಯಿಲೆಯ ಹಾಗೂ ಅಂಟುರೋಗದ ಲಕ್ಷಣಗಳು ಇಲ್ಲದೆ ಇರುವುದನ್ನು ಖಾತ್ರಿಪಡಿಸಿಕೊಂಡೇ ಅದನ್ನು ಬಿಡುಗಡೆಗೊಳಿಸಬೇಕು.

ರಕ್ಷಣೆ ಮತ್ತು ಪುನರ್ವಸತಿ

ಸೆರೆಹಿಡಿಯುವ ತಂತ್ರಗಳು

© ಲೇನು ಕಣನ್

ಸೆರೆಹಿಡಿಯಬೇಕಾದ ಜೀವಿಯು ಯಾವುದು ಎಂಬುದರ ಮೇಲೆ ಭೌತಿಕ ಸೆರೆಹಿಡಿಯುವ ವಿಧಾನವನ್ನು ಉಪಯೋಗಿಸಬೇಕೆ? ಅಥವಾ ರಾಸಾಯನಿಕ ಸೆರೆ ವಿಧಾನವನ್ನು ಅನುಸರಿಸಬೇಕೆ? ಎಂಬುದು ನಿಶ್ಚಯವಾಗುತ್ತದೆ. ನಮಗೆಲ್ಲ ತಿಳಿದಿರುವ ಹಾಗೆ ಸಣ್ಣ ಸಸ್ತನಿಗಳಿಗೆ, ಸರಿಸೃಪಗಳಿಗೆ, ಪಕ್ಷಿಗಳಿಗೆ, ಆಮೆಗಳಂತಹ ಜೀವಿಗಳಿಗೆ ಭೌತಿಕ ಸೆರೆಹಿಡಿಯುವ ವಿಧಾನವನ್ನು ಅನುಸರಿಸಬಹುದು. ಹಾಗೆಯೆ ಬೇರೆ ರೀತಿಯ ಸಸ್ತನಿಗಳಾದ ಆನೆ, ದೊಡ್ಡ ಬೆಕ್ಕುಗಳು, ಕರಡಿ, ಕೆನ್ನಾಯಿ, ಜಿಂಕೆ, ಕಾಟಿಯಂತಹ ಜೀವಿಗಳು ಭೀಕರವಾಗಿ ಗಾಯಗೊಂಡಿದ್ದರೆ ಅರೆವಳಿಕೆ ಉಪಯೋಗಿಸುವುದರಿಂದ ಪ್ರಾಣಿಯ ಜೀವಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಭೌತಿಕ ಸೆರೆಹಿಡಿಯುವುದು ಸೂಕ್ತವಾಗುತ್ತದೆ. ಸೆರೆಹಿಡಿಯಬೇಕಾದ ಜೀವಿಗೆ ಅನುಸಾರವಾಗಿ ಈ ಸೆರೆ ವಿಧಾನವನ್ನು ಕೆಳಗಿನ ಉಪಕರಣಗಳ ಸಹಾಯದಿಂದ ಸಾಧಿಸಬಹುದು. ಪ್ರತಿ ವಿಧಾನವು ತನ್ನದೆ ಆದ ಸಾಧಕ ಬಾದಕಗಳನ್ನೊಳಗೊಂಡಿರುತ್ತವೆ ಆದರೆ ಸೆರೆಹಿಡಿಯಬೇಕಾದ ಜೀವಿಯ ಆರೋಗ್ಯ, ಒತ್ತಡ, ಸಮಯದ ಮಿತಿ ಮುಂತಾದವು ಬಹುಮುಖ್ಯ ಪಾತ್ರವಹಿಸುತ್ತವೆ.

ಭೌತಿಕ ಸೆರೆ ವಿಧಾನದಲ್ಲಿ ಬಳಸುವ ಉಪಕರಣಗಳು

ಬಲೆಯ ಪಂಜರ
ಬೊಮ ವಿಧಾನ
ಇಕ್ಕಳಗಳು/ ಹುಕ್ ಗಳು
ಪರದೆಗಳು
ಉರುಳುಗಳು

ರಾಸಾಯನಿಕ ಸೆರೆ ವಿಧಾನ

ಇದನ್ನು ಹಲವಾರು ಅರೆವಳಿಕೆಗಳ ಸಹಾಯದಿಂದ ಸಾಧಿಸಬಹುದು. ಈ ಅರೆವಳಿಕೆಗಳನ್ನು ಹಲವಾರು ಡಾನ್ ಇಂಜೆಕ್ಟ್, ಟೆಲಿ ಇಂಜೆಕ್ಟ್, ಡಿಸ್ಟ್ ಇಂಜೆಕ್ಟ್ ಮುಂತಾದ ಉಪಕರಣಗಳ ಸಹಾಯದಿಂದ ಉಪಯೋಗಿಸಬಹುದು. ಸಾಮಾನ್ಯವಾಗಿ ಉಪಯೋಗಿಸುವ ಅರೆವಳಿಕೆ ಔಷದಿಗಳೆಂದರೆ Inj Xylazine, Ketamin, Zoletil, Meditomidine ಮುಂತಾದವುಗಳು.  ಪ್ರತಿಯೊಂದು ಜೌಷಧಿಯ ಪ್ರಮಾಣವು ಸೆರೆಹಿಡಿಯಬೇಕಾಗಿರುವ ಜೀವಿಯ ದೇಹದ ತೂಕದ ಮೇಲೆ, ಸೆರೆಹಿಡಿಯಬೇಕಾಗಿರುವ ಸಮಯದಲ್ಲಿನ ಅದರ ಆರೋಗ್ಯ ಸ್ಥಿತಿ ಮುಂತಾದವುಗಳ ಮೇಲೆ ಅವಲಂಬಿಸಿರುತ್ತದೆ.

ಸೂಕ್ತವಾದ ವಾಹನ ಮತ್ತು ಸಾರಿಗೆ ವಿಧಾನ

ಪ್ರಾಣಿಯನ್ನು ಸೆರೆ ಹಿಡಿದ ನಂತರ ಸೆರೆಹಿಡಿದ ಪ್ರಾಣಿಯ ಗಾತ್ರದ ಅನುಸಾರ ಅದಕ್ಕೆ ಸೂಕ್ತವಾದ ವಾಹನವನ್ನು ಉಪಯೋಗಿಸಿ ಅದನ್ನು ರವಾನಿಸುವುದು ಬಹು ಮುಖ್ಯವಾಗುತ್ತದೆ. ರವಾನಿಸುವ ವಾಹನವನ್ನು ಆಯ್ದುಕೊಳ್ಳುವಾಗ ಪ್ರಾಣಿಯ ಭದ್ರತೆಯ ಬಗ್ಗೆ ಗಮನ ಹರಿಸಬೇಕು.CZA ನವರು ವಿಭಿನ್ನ ಜಾತಿಯ  ಪ್ರಾಣಿಯ ಸುರಕ್ಷ ಸಾರಿಗೆಗೆ ಸೂಕ್ತವಾದ ಮಾನದಂಡಗಳನ್ನು ಪ್ರಕಟಿಸಿದ್ದಾರೆ.

ಬಿಡುಗಡೆಗೂ ಮುನ್ನ ಸೂಕ್ತ ಆರೋಗ್ಯ ತಪಾಸಣೆ

© ಲೇನು ಕಣನ್

ಪ್ರಾಣಿಯು ಬಿಡುಗಡೆಗೆ ಸೂಕ್ತವಾಗಿದೆ ಎಂದು ತಿಳಿದೊಡನೆ ಬಿಡುಗಡೆಗೆ ಮುನ್ನ ಕಡ್ಡಾಯವಾಗಿ ಅದರ ಆರೋಗ್ಯ ಸ್ಥಿತಿಯನ್ನು ಸೂಕ್ತ ತಜ್ಞ ಪಶುವೈದ್ಯನ ಮುಖಾಂತರ ತಪಾಸಣೆಗೊಳಪಡಿಸಿ ನಂತರ ಕಾಡಿಗೆ ಬಿಡಬೇಕು. ಬಿಡುವಾಗ ಅದಕ್ಕೆ ಯಾವುದೇ ರೀತಿಯ ಗಾಯಗಳು ಆಗದ ಹಾಗೆ ಸುರಕ್ಷಿತವಾಗಿ ಬಿಡುವುದು ಒಳ್ಳೆಯದು. ಅಕಸ್ಮಾತ್ ಆಗಿ ಪ್ರಾಣಿಗೆ ಯಾವುದಾದರು ಭಾಗವು ಊನವಾದಲ್ಲಿ ಅಥವಾ ವಾಸಿಮಾಡಲಾಗದ ರೋಗ ಕಂಡು ಬಂದಲ್ಲಿ ಅದನ್ನು ಜೀವನ ಪರ್ಯಂತ ಪುನರ್ವಸತಿ ಕೇಂದ್ರದಲ್ಲಿಯೇ ಸೆರೆಯಾಗಿಡುವುದು ಸೂಕ್ತ.

ಮಾನವ ಪ್ರಾಣಿ ಸಂಘರ್ಷದಲ್ಲಿ ಪಶುವೈದ್ಯರ ಸವಾಲುಗಳು

ಈ ಮಾನವ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಲು ಅಥವಾ ತಗ್ಗಿಸಲು ಬಹಳಷ್ಟು ಸವಾಲುಗಳು ಎದುರಾಗುತ್ತವೆ. ಅದರಲ್ಲಿ ಕೆಲವುಗಳೆಂದರೆ ಸಂಘರ್ಷದ ಸರಿಯಾದ ಮಾಹಿತಿ ಇಲ್ಲದಿರುವುದು, ಪರಿಸರ ಸಂರಕ್ಷಣೆಗಿಂತ ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡುವುದು, ಈ ಸಂಘರ್ಷ ತಡೆಯಲು ಇರುವ ಜ್ಞಾನ/ಜಾಗೃತಿಯ ಕೊರತೆ, ಇದನ್ನು ತಡೆಯಲು ಬೇಕಾದ ಹಣಕಾಸಿನ ನಿರ್ಬಂಧಗಳು, ರಕ್ಷಿತ ಅರಣ್ಯದಲ್ಲಿನ ಊರುಗಳ ಮತ್ತು ಬುಡಕಟ್ಟು ಜನಾಂಗದವರ ಪುನರ್ವಸತಿ ಕಾರ್ಯ ಇವುಗಳಲ್ಲದೆ ನಿರ್ವಹಣಾತ್ಮಕ ಹಾಗೂ ಆಡಳಿತಾತ್ಮಕ ಸವಾಲುಗಳಿದ್ದರೂ ಪ್ರತ್ಯೇಕವಾಗಿ ವನ್ಯಜೀವಿಗಳ ಪಶುವೈದ್ಯರು ಎದುರಿಸುವ ಸವಾಲುಗಳು ಕೆಳಕಂಡಂತಿವೆ.

  1. ನಿಯಮಗಳು ಮತ್ತು ಸುರಕ್ಷತಾ ಉಪಕರಣಗಳ ಕೊರತೆ
  2. ಜನಸಂದಣಿ ನಿಯಂತ್ರಣದ ಕೊರತೆ.
  3. ನವೀನ ರೀತಿಯ ಅರೆವಳಿಕೆಗಳ ಕೊರತೆ
  4. ಮಾನವ ಸಂಪನ್ಮೂಲದ ಕೊರತೆ
  5. ಕಾಲಮಿತಿಯ ಕೊರತೆ
  6. ತೊಂದರೆಯಲ್ಲಿರುವ ಪ್ರಾಣಿಯ ಬಗ್ಗೆ ಇರುವ ಅಲ್ಪ ಜ್ಞಾನ.
  7. ವಿವಿಧ ಸರ್ಕಾರದ ಸಂಸ್ಥೆಗಳಲ್ಲಿನ ಸಹಕಾರದ ಕೊರತೆ.
  8. ಮಾಧ್ಯಮ ಮತ್ತು ಸ್ಥಳೀಯ ರಾಜಕಾರಣಿಗಳ ಒತ್ತಡ.
  9. ಸರಿಯಾದ ಕಾನೂನುಗಳ ಕೊರತೆ
  10. ಸಮರ್ಪಕವಾದ ಬಿಡುಗಡೆ ಕಾರ್ಯಗಳು ಇಲ್ಲದಿರುವುದು
© ಲೇನು ಕಣನ್

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ವನ್ಯಜೀವಿಗಳ ಪಶುವೈದ್ಯರು ಈ ಸಂಘರ್ಷವನ್ನು ಸಮರ್ಪಕವಾಗಿ ನಿರ್ವಹಿಸುವ ಮತ್ತು ತಡೆಯುವ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಬಹುದು.

ಮಾನವ ವನ್ಯಜೀವಿಗಳ ಸಂಘರ್ಷ ತಡೆಯುವಲ್ಲಿ ವೈಲ್ಡ್ ಲೈಫ಼್ SOS ನ ಕೊಡುಗೆ:

ಬಹು ಕಾಲದಿಂದ ಕರಡಿಯನ್ನು ಕುಣಿತಕ್ಕೆ ಉಪಯೋಗಿಸಿಕೊಂಡು ಅದನ್ನು ದುರ್ಬಳಕೆ ಮಾಡುತ್ತಿದ್ದ ಕಲಂದರ್ ಜನಾಂಗದವರಿಂದ ಕರಡಿಗಳನ್ನು ರಕ್ಷಿಸುವ ಮೂಲ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ ವೈಲ್ಡ್ ಲೈಫ಼್ SOS. ಕರಡಿಗಳನ್ನು ಸಂರಕ್ಷಿಸುತ್ತ ಜೊತೆ-ಜೊತೆಗೆ ಕಲಂದರ್ ಜನಾಂಗದವರಿಗೆ ಬದುಕಲು ಕೆಲಸವನ್ನೂ ಅವರ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸವನ್ನು ಒದಗಿಸುವುದರಿಂದ ಈ ಕೃತ್ಯಕ್ಕೆ WSOS ಅಂತ್ಯ ಹಾಡಿದೆ. ಈ ಪದ್ಧತಿಯನ್ನು ಕೊನೆಗೊಳಿಸುತ್ತಿರುವುದರಿಂದ ಕರಡಿ ಮರಿಗಳನ್ನು ಬೇಟೆಯಾಡುವ ಸಂಖ್ಯೆಯು ಬೆರಳೆಣಿಕೆಯಷ್ಟಾಗಿದೆ.

ಚಿರತೆಗಳು:

      ಮಾನವ ವನ್ಯಜೀವಿ ಸಂಘರ್ಷದಲ್ಲಿ ಗಾಯವಾಗಿರುವ ಚಿರತೆಗಳನ್ನು ಕಾಪಾಡಲು ಮಹಾರಾಷ್ಟ್ರದಲ್ಲಿ WSOS ಸಂಸ್ಥೆಯು ಪುನರ್ವಸತಿ ಕೇಂದ್ರವನ್ನು ನಡೆಸುತ್ತಿದೆ. ಸುಮಾರು ಇಲ್ಲಿನ ಚಿರತೆಗಳು ಕಬ್ಬಿನ ಗದ್ದೆಗಳಿಂದ ಪಾರುಮಾಡಿ ತಂದಿರುವವು. ಕಬ್ಬು ಕೊಯ್ಲಿಗೆ ಬಂದಾಗ ಅಲ್ಲಿ ಏನಾದರೂ ಚಿರತೆಯು ಮರಿಹಾಕಿರುವುದನ್ನು ಕಂಡರೆ ಅಲ್ಲಿ ಮಾನವ-ವನ್ಯಜೀವಿ ಸಂಘರ್ಷ ಉದ್ಭವಿಸುತ್ತದೆ. ಮನುಷ್ಯರಿಗೆ ಹೆದರಿ ಚಿರತೆಯು, ಮರಿಗಳನ್ನು ಬಿಟ್ಟು ಓಡಿಹೋಗಿ ಕಾಡುಸೇರುತ್ತದೆ, ಆಗ ತಬ್ಬಲಿಯಾದ ಮರಿಗಳನ್ನು WSOS ನವರು ತಮ್ಮ ಪುನರ್ವಸತಿ ಕೇಂದ್ರದಲ್ಲಿ ತಂದು ಸಾಕುತ್ತಾರೆ.

ಆವಾಸಗಳ ಪುನಶ್ಚೇತನ 

© ಲೇನು ಕಣನ್

2007ರಿಂದ ವೈಲ್ಡ್ ಲೈಫ಼್ ಕರ್ನಾಟಕದಲ್ಲಿ ರಾಮದುರ್ಗದಲ್ಲಿ ಬರಡಾಗಿದ್ದ 50 ಎಕರೆ ಜಾಗವನ್ನು ಕಾಡಾಗಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತು.  ಈ ಯಶಸ್ವಿ ಕಾರ್ಯದಿಂದ ಇಂದು ರಾಮದುರ್ಗದಲ್ಲಿ ಅಂತರ್ಜಲ ಮಟ್ಟವು ಉತ್ತಮವಾಗಿದೆ. ಕರಡಿ, ಚಿರತೆಯಂತಹ ಹಲವಾರು ಪ್ರಾಣಿಗಳು ಸಹ ನೆಲೆಸಿವೆ ಹಾಗೂ ಅಂತರ್ಜಲದ ಮಟ್ಟ ಉತ್ತಮವಾಗಿರುವ ಕಾರಣ ಹಲವಾರು ಹಳ್ಳಿಗರು ಮತ್ತೆ ವ್ಯವಸಾಯಕ್ಕೆ ಹಿಂತಿರುಗಿದ್ದಾರೆ.

ಕಪ್ಪು ಕರಡಿಗಳು:

ಕಾಶ್ಮೀರದಲ್ಲಿ ಕಪ್ಪು ಕರಡಿಗಳು ಪಕ್ಕದಲ್ಲಿನ ರೈತರ ಹೊಲಕ್ಕೆ ನುಗ್ಗಿ ಬೆಳೆಗಳನ್ನು ಹಾಳುಮಾಡುವುದು ಸಾಮಾನ್ಯವಾಗಿತ್ತು. ಈ ಕೃತ್ಯದಿಂದ ಕುಪಿತಗೊಳ್ಳುತ್ತಿದ್ದ ಜನ ಅದರ ಮೇಲಿನ ದ್ವೇಷದಿಂದ ಅವುಗಳನ್ನು ಹಿಂಸಿಸುತ್ತಿದ್ದರು. ಕೆಲವೊಮ್ಮೆ ಅವುಗಳನ್ನು ಜೀವಂತವಾಗಿ ಸುಟ್ಟಿರುವ ಉದಾಹರಣೆಗಳೂ ಇವೆ. ಇದನ್ನು ಮನಗಂಡ ವೈಲ್ಡ್ ಲೈಫ಼್ SOS ಸಂಸ್ಥೆಯು ದಚಿಗಂ ಮತ್ತು ಪೆಹಲ್ಗಂ ನಲ್ಲಿ ಎರಡು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ ತೊಂದರೆಯಲ್ಲಿರುವ ಕರಡಿಗಳಿಗೆ ಆಶ್ರಯ ನೀಡುತ್ತಿದೆ ಹಾಗೆಯೆ ಸುತ್ತಲಿನ ಸ್ಥಳೀಯ  ಜನರಲ್ಲಿ ಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ.

ವನ್ಯಜೀವಿಗಳ ಸಹಾಯವಾಣಿ – ದೆಹಲಿ –NCR, ಆಗ್ರ, ಬೆಂಗಳೂರು

    ವೈಲ್ಡ್ ಲೈಫ಼್ SOS ಗಾಯಗೊಂಡಿರುವ “ನಗರ” ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ 24×7 ಕಾರ್ಯ ನಿರ್ವಹಿಸುವ ಸಹಾಯವಾಣಿಯನ್ನು ಹೊಂದಿದೆ. ಗಾಯಗೊಂಡ ವನ್ಯಜೀವಿಗಳನ್ನು ನಮ್ಮ ಪಶುವೈದ್ಯರಿಂದ ಚಿಕಿತ್ಸೆಗೊಳಪಡಿಸಿ ಪುನಃ ಸೂಕ್ತ ಜಾಗಕ್ಕೆ ಬಿಡಲಾಗುತ್ತದೆ. ಇಲ್ಲವೆ ನಮ್ಮ ಪುನರ್ವಸತಿ ಕೇಂದ್ರದಲ್ಲಿರಿಸಿ ನೋಡಿಕೊಳ್ಳಲಾಗುತ್ತದೆ. ನಾವು ಚಿಕಿತ್ಸೆಗೊಳಿಸಿದ ಕೆಲವು ಪ್ರಾಣಿಗಳೆಂದರೆ ಆನೆ, ಹುಲಿ, ಚಿರತೆ, ಪುನುಗು-ಬೆಕ್ಕು, ಉಡ, ಹಾವು, ಹದ್ದುಗಳು ಮುಂತಾದವು.

ಸ್ವೀಕೃತಿ

ನಾನು ಈ ಮೂಲಕ ಇಡೀ ವೈಲ್ಡ್ ಲೈಫ಼್ SOS ತಂಡವನ್ನು ಅದರಲ್ಲೂ ನಮ್ಮ ಸಂಸ್ಥೆಯ ಸ್ಥಾಪಕರಾದ ಸತ್ಯನಾರಾಯಣ್ ಮತ್ತು ಗೀತ ಶೇಷಮಣಿಯವರಿಗೆ ಹೃದ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಾಡಿನ ಹಾಗೂ ಕಾಡು ಪ್ರಾಣಿಗಳ ರಕ್ಷಣೆಗೆ ಶಿರಸಾವಹಿಸಿ ಕಾರ್ಯನಿರ್ವಹಿಸುತ್ತಿರುವ ವಿವಿಧ ರಾಜ್ಯದ ಅರಣ್ಯ ಇಲಾಖೆಯವರಿಗೂ ತುಂಬು ಹೃದಯದ ಧನ್ಯವಾದಗಳು.

ಉಲ್ಲೇಖಗಳು:

  1. Das, Tuhin K. and Guha Indrila (2003). Economics of Man-Animal Conflict: A Lesson for Wildlife Conservation. Kolkata: ACB Publications. ISBN 81-87500-14-X.
  2. http://www.downtoearth.org.in/news/indias-forest-cover-declines-35917
  3. http://www.fao.org/
  4. http://www.newsgram.com/uttarakhand-and-the-man-animal-conflict/
  5. https://howtoconserve.org/

ಕನ್ನಡಕ್ಕೆ ಅನುವಾದ: ನಾಗೇಶ್ ಓ ಎಸ್
ಮೂಲ ಲೇಖನ: ಡಾ. ಅರುಣ್ ಎ. ಶಾ
ವೈಲ್ಡ್ ಲೈಫ್ ಎಸ್ ಒ ಎಸ್ ಬನ್ನೇರುಘಟ್ಟ

Spread the love
error: Content is protected.