ನೀರು ನೀ ಇರು. . .

“ಅಕ್ಕಾ ಪಾತ್ರೆಯನ್ನು ತೊಳೆಯಲು ನೀರನ್ನು ಕಡಿಮೆ ಬಿಟ್ಕೊಳಿ. ಈಗಾಗಲೇ ನೀರಿನ ಅಭಾವ ಮುಗಿಲಮುಟ್ಟಿದೆ. ಅಂತ ಹೇಳಿದ್ರೆ “ಇರಲಿ ಬಿಡ್ಲಾ ಎಲ್ಲರಿಗೂ ಆಗಿದ್ದೆ ನಮ್ಗೂ ಆಗ್ತೈತೆ” ಎಂದು ಅಮಲಗೊಂದಿಯ ಈರಮ್ಮನವರು ನಲ್ಲಿಯಡಿ ಪಾತ್ರೆಯನ್ನು ತೊಳೆಯುತ್ತಾ ಪ್ರತಿಕ್ರಿಯೆ ನೀಡಿದರು. ಪ್ರಸ್ತುತವಾಗಿ ನೀರಿನ ಸಮಸ್ಯೆ ಒಂದು ಮನೆ, ಹಳ್ಳಿ, ನಗರ, ರಾಜ್ಯ, ದೇಶ, ವಿಶ್ವವನ್ನೇ ಕಾಡುವ ಉಜ್ವಲ ಸವಾಲಾಗುತ್ತಾ ಸಾಗುತ್ತಿದೆ. ಜಾಗತಿಕ ಪ್ರಪಂಚದಲ್ಲಿ ಮೂರನೇ ಮಹಾಯುಧ್ಧವಾದರೆ ಅದು ನೀರಿಗೇ ಆಗುತ್ತದೆಂದು ನಮ್ಮೆಲ್ಲರ ಶ್ರವಣಗಳ ಮೇಲೆ ಬೀಳುತ್ತಿರುವುದನ್ನು ಗಮನಿಸಿದರೆ ಗೊತ್ತಾಗುತ್ತದೆ ನೀರಿನ ಬವಣೆಯ ಪ್ರಖರತೆ ಎಷ್ಟೆಂದು.

ಇಡೀ ಭೂಮಂಡಲದಲ್ಲಿ ನೀರಿನ ಪಾಲು ಮುಕ್ಕಾಲು ಭಾಗವಿದೆ. ಆದರೂ ನೀರಿನ ಬವಣೆಯೇ? ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಒಟ್ಟು ಭೂಮಂಡಲದಲ್ಲಿನ ನೀರಿನಲ್ಲಿ ಕೇವಲ ಶೇ 3% ಮಾತ್ರ ಬಳಸಲು ಯೋಗ್ಯವಾಗಿರುವುದು. ಹಾಗಾದರೆ ನೀರನ್ನು ಮಿತವಾಗಿ ಬಳಸಬೇಕಲ್ಲವೇ? ಹೌದು ಮಿತವಾಗಿ ಬಳಸಬೇಕೆಂದುಕೊಳ್ಳುತ್ತೇವೆ, ಆದರೆ ನಮ್ಮ ಆಧುನಿಕ ಜೀವನ ಶೈಲಿಗಳಲ್ಲಿ ಮುಳುಗಿ ಈ ಅರಿವನ್ನೇ ನುಂಗಿಬಿಟ್ಟಿದ್ದೇವೆ. ಮಾರ್ಚ್ 22 ರಂದು “ವಿಶ್ವ ಜಲ ದಿನ”ವಾಗಿದೆ. ವಿಶ್ವ ಜಲ ದಿನ 2018 ರ ಧ್ಯೇಯ “ನೀರಿಗಾಗಿ ಪ್ರಕೃತಿ” – 21ನೇ ಶತಮಾನದಲ್ಲಿ ನಾವು ಎದುರಿಸುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳನ್ನು ಅನ್ವೇಷಿಸುತ್ತಿದೆ” (The theme for World Water Day 2018 is Nature for Water exploring nature-based solutions to the water challenges we face in the 21st century). ಈ ದಿನದಂದು ನೀರಿನ ಬಗ್ಗೆ, ನೀರಿನ ಮೂಲಗಳ ಬಗ್ಗೆ ಅನೇಕ ಕಡೆ ಉಪನ್ಯಾಸಗಳು, ಭಾಷಣಗಳು ನಡೆಯುತ್ತವೆ. ಆದರೆ ಅವುಗಳು ಜಾರಿಗೆ ಬಂದು ಜೀವಜಲ ಉಳಿಸುವತ್ತ ಹೆಜ್ಜೆ ಹಾಕುವಲ್ಲಿ ಸೋಲುತ್ತಿರುವುದು ಪ್ರಸ್ತುತವಾಗಿ ಕಾಣಬಹುದಾಗಿದೆ. ನೀರಿಗೆ ಎಲ್ಲೆಲ್ಲೂ ಹಾಹಾಕಾರ ಉಂಟಾಗಿದ್ದು, ನೀರಿಗೆ ಬರ ಬಂದು, ಬರದಲ್ಲಿ ನೀರಿನ ಮಾರಾಟ ಸುಗ್ಗಿಯಾಗಿದೆ. ಈ ಸುಗ್ಗಿಯಲ್ಲೂ ಮನುಷ್ಯ ತನ್ನ ಅವಶ್ಯಕವಾದ ನೀರನ್ನು ಪಡೆಯುತ್ತಾನೆ. ಆದರೆ ಪ್ರಾಣಿ ಪಕ್ಷಿಗಳ ಸ್ಥಿತಿ? ಇದಕ್ಕೆ ಯಾರು ಉತ್ತರಿಸಬೇಕು? ಒಂದು ಸಸಿ ಮೊಳಕೆಯೊಡೆಯಲು ನೀರು ಬೇಕೇ ಬೇಕಲ್ಲವೇ? ಅಂಥಾದ್ದರಲ್ಲೂ ನೀರನ್ನು ಮನುಷ್ಯರಾದ ನಾವುಗಳು ಹಾಳು ಮಾಡುತ್ತಿದ್ದೇವೆ. ಜಲಮೂಲಗಳ ನಾಶ ಪಡಿಸುವಿಕೆಯಿಂದ, ಅಂತರ್ಜಲವನ್ನು ಹೀರುವ ಮೂಲಕ, ಇರುವ ನೀರನ್ನು ಅವೈಜ್ಞಾನಿಕ ಬಳಕೆಯ ಮೂಲಕ ಜೀವಜಲವನ್ನು ಸಾವಿನಂಚಿಗೆ ತಳ್ಳುತ್ತಿದ್ದೇವೆ. ಯುವಜನರು, ಪರಿಸರ ಚಿಂತಕರು, ಸರ್ಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಜಲದ ಜ್ವಲಂತ ಅಭಾವ ಕೊಡುಗೆಯಾಗುತ್ತದೆ.

ಇತ್ತೀಚೆಗೆ ಕರ್ನಾಟಕದಲ್ಲಿನ ಅನೇಕ ಪರಿಸರವಾದಿಗಳು, ಜಲ ತಂತ್ರಜ್ಞರು, ಯುವಜನರು, ರೈತರೆಲ್ಲಾ ಸೇರಿ ಬರಮುಕ್ತ ಕರ್ನಾಟಕವೆಂಬ ವೇದಿಕೆಯನ್ನು ರಚಿಸಿಕೊಂಡು ಬರವನ್ನು ನಿಯಂತ್ರಿಸಲು, ಜಲ ಮೂಲಗಳನ್ನು ಉಳಿಸಲು, ನೀರಿನ ಅತೀರೇಕದ ಬಳಕೆಗೆ ಕಡಿವಾಣ ಹಾಕಲು ಮುಂದಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಚಳುವಳಿಗೆ ನೀರನ್ನು ಬಳಸುವ ಪ್ರತಿಯೊಬ್ಬರು ಸಹಕರಿಸಿದರೆ ಮಾತ್ರ ಸಾಧ್ಯವಾಗುತ್ತದೆ. ಆದರೆ ನೀರಿನ ಸಮಸ್ಯೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ರಾಜ್ಯಗಳನ್ನೂ ಒಳಗೊಂಡಿದೆ. ನೀರನ್ನು ಉಳಿಸಬೇಕೆಂದರೆ ಗಡಿಗಳನ್ನು ಮೀರಿ ಜಲ ಮೂಲವನ್ನು ಗೌರವಿಸಬೇಕಿದೆ.

ಸರ್ಕಾರಗಳು ನೀರಿನ ಸರಬರಾಜಿಗೆ ಹೆಚ್ಚು ಒತ್ತು ನೀಡುತ್ತಿವೆಯೇ ಹೊರತು ಅದರ ಸಂರಕ್ಷಣೆಗಲ್ಲ. ನೀರಿನ ಬೇಡಿಕೆ ಮತ್ತು ಪೂರೈಕೆಗಳ ಲೆಕ್ಕಾಚಾರದಲ್ಲೇ ಸಾಗುತ್ತಿವೆ. ಆದರೆ ಪ್ರಭುತ್ವಗಳು ಮಾಡಬೇಕಿರುವುದು ಜನರು ಮಾಡುವ ನೀರಿನ. ದುರ್ಬಳಕೆಯನ್ನು ನಿಯಂತ್ರಿಸುವುದು ಇದರ ಜೊತೆಗೆ ದಖನ್ ಪ್ರಸ್ಥಭೂಮಿಯ ಜಲಗೋಪುರವಾಗಿರುವ ಪಶ್ಚಿಮ ಘಟ್ಟಗಳನ್ನು ಪ್ರಧಾನವಾಗಿ ಸಂರಕ್ಷಿಸಬೇಕಾಗಿದೆ. ಇವುಗಳೇ ಈ ದೇಶದ ಜಲಮನೆಗಳು. ಪಶ್ಚಿಮ ಘಟ್ಟಗಳನ್ನು ಉಳಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ನೀರನ್ನು ಪೂರ್ವಜರ ಕೊಡುಗೆಯಾಗಿ ನೀಡಬಹುದಾಗಿದೆ.

ಪ್ರತಿನಿತ್ಯ ಪ್ರತಿಯೊಬ್ಬ ವ್ಯಕ್ತಿಗೆ 135 ಲೀಟರ್ ನೀರು ಸಿಗಬೇಕಿದೆ. ಆದರೆ ಪ್ರಸ್ತುತದಲ್ಲಿ 67.5 ಲೀಟರ್ ಸಿಗುತ್ತಿದೆ. 135 ಲೀಟರ್ ನೀರು ಎಲ್ಲರಿಗೂ ಸಮಾನವಾಗಿ ಸಿಗಬೇಕಾದರೆ ಮಳೆ ನೀರಿನ ಸಂಗ್ರಹಣೆ ಅತ್ಯವಶ್ಯಕ. ಜೊತೆಗೆ ಮಾನವರಾದ ನಾವುಗಳು ತಮ್ಮ ಅಂತಸ್ತುಗಳಿಗಾಗಿ ದಿನ ಬಳಕೆಯ ನೀರನ್ನು ಆಧುನಿಕ ತಂತ್ರಜ್ಞಾನಗಳಿಂದ ಪೋಲು ಮಾಡುತ್ತಿದ್ದೇವೆ. ಶೌಚಾಲಯದಲ್ಲಿ ಬಟನ್ ಒತ್ತುವುದರಿಂದ ಅತೀ ಹೆಚ್ಚು ನೀರು ವ್ಯರ್ಥವಾಗುವುದನ್ನು ನಿಲ್ಲಿಸಬೇಕಿದೆ.

ಬರವೆಂದರೆ ನೀರಿಲ್ಲದ ದೃಶ್ಯವೇ ಬೇಗ ನಮ್ಮ ಕಣ್ಣ ಮುಂದೆ ಬರುವುದು. ಬರಮುಕ್ತವಾಗಿಸಬೇಕೆಂದರೆ ಅಂತರ್ಜಲ ಸಂರಕ್ಷಣೆ, ನದಿಮೂಲಗಳ ಸಂರಕ್ಷಣೆ, ಕೃಷಿಯಲ್ಲಿ ನೀರಿನ ಬಳಕೆಯ ನಿರ್ವಹಣೆ, ಮರಳು ಗಣಿಗಾರಿಕೆ ಸ್ಥಗಿತ, ಕೈಗಾರಿಕೆಗಳ ತ್ಯಾಜ್ಯ ನಿಯಂತ್ರಣ, ಕುಡಿಯುವ ನೀರಿನ ಬಗ್ಗೆ ಕ್ರಮಕೈಗೊಳ್ಳಬೇಕಾಗುತ್ತದೆ. ನದಿ ಪಾತ್ರಗಳ ರಕ್ಷಣೆಗೆ, ನೀರನ್ನು ಸಂರಕ್ಷಿಸಲು ಹೆಚ್ಚೆಚ್ಚು ಶಾಸನಗಳು ಜಾರಿಯಾಗಿ ಅವುಗಳ ಅನುಷ್ಠಾನ ಪ್ರಾಮಾಣಿಕವಾಗಬೇಕಿದೆ. ಅಷ್ಟಲ್ಲದೆ ಕೃಷಿಯಲ್ಲಿನ ಬೆಳೆಪದ್ದತಿಗಳನ್ನು ಬದಲಾಯಿಸಬೇಕಾಗಿದೆ. ಹೆಚ್ಚು ನೀರನ್ನು ಬೇಡುವ ಬೆಳೆಗಳನ್ನು ಬೆಳೆಯುವ ಮೂಲಕ ಪರೋಕ್ಷವಾಗಿ ನೀರನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ರಾಸಾಯನಿಕ ಗೊಬ್ಬರಗಳ ಮತ್ತು ಹೆಚ್ಚು ಇಳುವರಿ ಬರುವ ಬೀಜಗಳ ಬಳಕೆಯಿಂದ ಹೆಚ್ಚು ನೀರಿನ ಅವಶ್ಯಕತೆ ಉಂಟಾಗುತ್ತದೆ. ಆಗ ಅಂತರ್ಜಲದ ಶೋಷಣೆಯು ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಮಳೆಯಾಶ್ರಿತ ಬೆಳೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ. ಸರ್ಕಾರದ ಪ್ರಕಾರ ಶೇ 72ರಷ್ಟು ಅರೆ ಬರಭೂಮಿಯಾಗಿದ್ದು, ಶೇ52 ಕ್ಕೂ ಹೆಚ್ಚು ಭೂಭಾಗ ಬರಭೂಮಿಯಾಗಿದೆ. ಅದಕ್ಕಾಗಿ ಕಾಡುನಾಶ, ಗುಡ್ಡನಾಶಗಳನ್ನು, ಮರಳು ಗಣಿಗಾರಿಕೆಗಳನ್ನು ನಿಲ್ಲಿಸಬೇಕಿದೆ. ಇವುಗಳೆಲ್ಲದರ ನಡುವೆ ನದಿ ಮೂಲಗಳನ್ನು ಉಳಿಸಿಕೊಳ್ಳಲು ಇತ್ತೀಚಿಗೆ ಮಿಸ್ಡ್ ಕಾಲ್ ಮಾಡಿದರೆ ಸಾಕೆಂಬುದು ಹಾಸ್ಯಾಸ್ಪದವಾಗಿದೆ. ಮಿಸ್ಡ್ ಕಾಲ್ ಮಾಡುವುದಕ್ಕೆ ನಮ್ಮ ಜನಪ್ರತಿನಿಧಿಗಳು ಉತ್ತೇಜನ ನೀಡುವುದಕ್ಕಿಂತ ಏಕೋಪವಾಗಿ (ಮಾನೋ ಕ್ರಾಫ್ಟ್) ಬೆಳೆಯುವ ಕಬ್ಬಿನ ಬೆಳೆಗೆ 5 ವರ್ಷ ರಜೆ ನೀಡಬೇಕೆಂದು ಸರ್ಕಾರದಲ್ಲಿ ಒತ್ತಡ ತರಬೇಕಿದೆ, ಕೆರೆಗಳನ್ನು ಕಟ್ಟಿಸಬೇಕಿದೆ, ಮಹಿಳೆಯರಿಗೆ ನೀರಿನ ಬಳಕೆಯ ಬಗ್ಗೆ ಅರಿವನ್ನು ನೀಡಬೇಕಿದೆ ಹಾಗೂ ಜೀವ ವೈವಿಧ್ಯತೆಯನ್ನು ಹಾಳು ಮಾಡುವ ಟೀ, ಕಾಫಿ, ರಬ್ಬರ್, ಇತರೆ ಎಸ್ಟೇಟ್ ಗಳನ್ನು ನಿಯಂತ್ರಿಸಬೇಕಿದೆ. ಇವುಗಳ ಜೊತೆಗೆ ಒಳನಾಡು ಜಲನಯನ ಪ್ರದೇಶಗಳ ಅಭಿವೃದ್ಧಿಯಾಗಬೇಕಿದೆ. ಕೃಷಿಯಲ್ಲಿ ಮಾತ್ರ ಹೆಚ್ಚಿನ ನೀರಿನ ಬಳಕೆಯಾಗುತ್ತಿಲ್ಲ ಕೈಗಾರಿಕೆಗಳಲ್ಲೂ ಸಹ ಅತೀ ಹೆಚ್ಚಿನ ಬಳಕೆಯಾಗುತ್ತಿದೆ. ಕೈಗಾರಿಕೆಗಳು ಬಳಸುವ ನೀರಿನ ದಾಖಲಾತಿಗಳನ್ನು ಅಧ್ಯಯನ ಮಾಡಬೇಕಿದೆ. ಕೈಗಾರಿಕೆ, ಕೃಷಿ, ಕುಡಿಯುವ ನೀರಿಗಾಗಿ ಹೆಚ್ಚು ಬೋರ್ವೆಲ್ ಗಳನ್ನು ಕೊರೆದು ಭೂತಾಯಿಯ ಮೇಲೆ ಮಾಡುತ್ತಿರುವ ಅತ್ಯಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಪ್ರಸ್ತುತ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ಪಡೆಯಬೇಕಿದ್ದರೂ ಈ ಕಾನೂನಿನ ಪಾಲನೆಯಾಗುತ್ತಿಲ್ಲ. ಇದರಿಂದ ಅಂತರ್ಜಲದ ಮೇಲೆ ಆಗುತ್ತಿರುವ ಶೋಷಣೆಯು ಹೆಚ್ಚುತ್ತಿರುವುದು ಅಮಾನವೀಯ ಸಂಗತಿ. ಅಂತರ್ಜಲವನ್ನು ನಾಶಪಡಿಸುವ ನೀಲಗಿರಿ, ಅಕೇಶಿಯಾಗಳಂತಹ ಅರಣ್ಯಗಳನ್ನು ವೈವಿಧ್ಯತೆಯ ಅರಣ್ಯಗಳಾಗಿ ಮಾರ್ಪಾಡುಮಾಡಬೇಕಿದೆ. ಮತ್ತು ಅರಣ್ಯ ಕೃಷಿ, ನೈಸರ್ಗಿಕ ಕೃಷಿ, ಸಹಜ ಕೃಷಿಗಳಂತಹ ಕೃಷಿ ಪದ್ದತಿಗಳನ್ನು ಉತ್ತೇಜಿಸಬೇಕಿದೆ. ಇಂತಹ ಹತ್ತಾರು ಕಾರ್ಯಗಳನ್ನು ಮಾಡಿದರೆ ಮಾತ್ರ ನೀರನ್ನು ನಮ್ಮೊಂದಿಗೆ ಉಳಿಸಿಕೊಳ್ಳಬಹುದು ಹಾಗೂ ಜೀವವನ್ನು ಕಾಪಾಡುವ ಜೀವದ್ರವವನ್ನಾಗಿಸಬಹುದು. ಹಾಗಾಗಿ ನೀರನ್ನು ಬಳಸುವ, ಉಳಿಸುವ ಮತ್ತು ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ.

ಲೇಖನ: ಜಿ. ಮಂಜುನಾಥ್ ಅಮಲಗೊಂದಿ
          ತುಮಕೂರು ಜಿಲ್ಲೆ.

Spread the love
error: Content is protected.