ಎಣಿಕೆ ತಿಳಿದ ಸಸ್ಯಗಳು !

ಎಣಿಕೆ ತಿಳಿದ ಸಸ್ಯಗಳು !

 ಓದುಗ ಮಹಾಶಯನಿಗೆ ನಮಸ್ಕಾರ. ಎಲ್ಲವೂ ಕ್ಷೇಮವೇ? ಊಟ-ತಿಂಡಿಗಳು ಮಾಡಿದಿರೇ? ಮಾಡಿಯೇ ಇರುತ್ತೀರಿ, ಏಕೆಂದರೆ ದಾಸರು ಹೇಳುವಂತೆ ಎಲ್ಲರೂ ಮಾಡುವುದು ‘ಹೊಟ್ಟೆಗಾಗಿ’ ಹಾಗೂ ಬಟ್ಟೆಗಾಗಿ ಅಲ್ಲವೇ? ಆದರೆ ಈ ದಿನಗಳಲ್ಲಿ ಅದನ್ನು ಮರೆತು ಬೇರೆ ಎಲ್ಲಾ ಉದ್ದೇಶಗಳಿಗೂ ಕೆಲಸ ನಡೆಯುತ್ತಿವೆ. ಇರಲಿ ಬಿಡಿ ಅದು ಬೇರೆ ವಿಷಯ. ನಮ್ಮ ವಿಷಯಕ್ಕೆ ಬರೋಣ, ದಿನಕ್ಕೆ ಎಷ್ಟು ಬಾರಿ ತಿನ್ನುತ್ತೀರಿ ನೀವು? ಸಾಮಾನ್ಯವಾಗಿ 3 ಬಾರಿ, ಇಲ್ಲವೇ ಕೆಲವರು ಸಂಜೆಯ ತಿಂಡಿಯನ್ನು ಸೇರಿಸಿ ನಾಲ್ಕು ಬಾರಿ ಇರಬಹುದು. ನಿಮಗೆ ತಿಳಿದ ಹಾಗೆ ಎಂದಾದರೂ ನೀವು ತಿಂದುದನ್ನೇ ಮರೆತು, ಇನ್ನೊಮ್ಮೆ ಊಟ ಮಾಡಿರುವ ನಿದರ್ಶನಗಳಿವೆಯೇ? ನನಗಂತೂ ಒಮ್ಮೆಯಾದರೂ ಹಾಗೆ ಆಗಿದೆ ಎಂಬುದನ್ನೂ ಇದೋ ನಿಮ್ಮ ಮುಂದೆ ಒಪ್ಪಿಬಿಡುತ್ತೇನೆ. ಅದರಲ್ಲಿ ತಪ್ಪು ಏನಿಲ್ಲ ಬಿಡಿ. ಇನ್ನೂ ಒಳ್ಳೆಯದೇ. ಊಟ ಮಾಡಲು ಯಾರಾದರೂ ಎಣಿಸಿ ಎಣಿಸಿ ತಿನ್ನುತ್ತಾರೇನು? ತಿನ್ನಲಿಕ್ಕೇನು ಗಣಿತ ಬೇಕೇ?? ಹೊಟ್ಟೆ ಹಸಿದಂತೆಲ್ಲಾ ತಿನ್ನುವುದೇ…. ಅಲ್ಲವೇ?

ಆದರೇ… ಈ ಮುಂದೆ ಹೇಳುವ ವಿಷಯ ಆಶ್ಚರ್ಯದ ಪೆಟ್ಟಿಗೆಯನ್ನು ಖಂಡಿತ ತೆರೆಯುತ್ತದೆ. ಈ ಕೀಟಾಹಾರಿ ಸಸ್ಯಗಳು ಆಹಾರ ಸೇವಿಸಲು ಅವುಗಳಿಗೆ ಎಣಿಕೆ ತಿಳಿದಿರಬೇಕು. ಇಲ್ಲದಿದ್ದರೆ ಉಪವಾಸ. ಅವನ್ನು ಆವರಿಸಿ ತಿಂದುಬಿಡುತ್ತದೆ. ಅಂದಹಾಗೆ ಕೀಟಾಹಾರಿ ಸಸ್ಯಗಳ ಪರಿಚಯವಿದೆಯಲ್ಲಾ.. ಅದೇ ತಮ್ಮ ಬಾಳ್ವೆಗೆ ಅವಶ್ಯಕವಾದ ಸಾರಜನಕ(Nitrogen)ವನ್ನು ಕೀಟಗಳಿಂದ ಪಡೆಯುತ್ತವಲ್ಲ ಅದೇ ಸಸ್ಯಗಳು. ಇವುಗಳಲ್ಲಿ ಹಲವು ಬಗೆಗಳಿವೆ, ಇಲ್ಲಿ ನಾನು ಹೇಳುತ್ತಿರುವುದು ‘ವೀನಸ್ ಫ್ಲೈ ಟ್ರಾಪ್ ‘ ಎಂಬ ಸಸ್ಯದ ಮೇಲೆ ನಡೆಸಿದ ಸಂಶೋಧನಾ ವಿಚಾರ. ಅದೋ.. ಕೆಲವರ ಮುಖದಲ್ಲಿ ಪ್ರಶ್ನೆಗಳು ಮೂಡುತ್ತಿವೆ… ಏನು ಲೇಖಕ ಸಸ್ಯ ಎನ್ನುತ್ತಾನೆ, ಕೀಟಾಹಾರಿ ಎನ್ನುತ್ತಾನೆ, ಅದು ಸಸ್ಯವಾದರೆ ಅದೇ ಆಹಾರ ತಯಾರಿಸಿ ಬೇರೆಲ್ಲಾ ಸಸ್ಯಗಳಂತೆ ಸಾರಜನಕವನ್ನು ಬೇರಿನ ಮೂಲಕ ಭೂಮಿಯಿಂದ ಪಡೆಯಬಹುದಲ್ಲ? ಎಂದು. ಒಳ್ಳೆಯ ಪ್ರಶ್ನೆ, ತುಂಬಾ ಒಳ್ಳೆಯ ಪ್ರಶ್ನೆ. ಇದೂ ಸಸ್ಯವೆ, ಇವಕ್ಕೂ ಬೇರುಗಳಿವೆ, ಆದರೆ ಸಾರಜನಕ ಭೂಮಿಯಿಂದ ಹೀರುವುದಿಲ್ಲ, ಅದಕ್ಕೂ ಕಾರಣವಿದೆ. ಈ ಕೀಟಾಹಾರಿ ಸಸ್ಯಗಳು ಬೆಳೆಯುವ ಜೌಗು ಪ್ರದೇಶಗಳಲ್ಲಿ ಸಾರಜನಕದ ಅಭಾವ ಹೆಚ್ಚಾಗಿರುತ್ತದೆ. ಸ್ವಾಭಾವಿಕವಾಗಿ ಸಿಗಬೇಕೆಂದರೆ ಯಾವುದಾದರೂ ಕಾಡ್ಗಿಚ್ಚು ಆ ದಾರಿಯಲ್ಲಿ ಹೋದರೆ ಮಾತ್ರ ಸುಟ್ಟ ಜೀವಿಗಳಿಂದ ಸಾರಜನಕ ಸಿಗಬಹುದು. ಆದ್ದರಿಂದಲೇ ಇವುಗಳು ತಮಗೆ ಬೇಕಾದುದನ್ನು ನೇರ ಗಾಳಿಯಿಂದಲೇ(ಕೀಟಗಳಿಂದ) ಪಡೆಯುತ್ತವೆ. ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಬದಲಿಸಿಕೊಂಡಿವೆ. ಚಿತ್ರದಲ್ಲಿ ಕಾಣುವ ವೀನಸ್ ಫ್ಲೈ ಟ್ರಾಪ್ ಸಸ್ಯದ ಮಧ್ಯದಲ್ಲಿನ ಸಣ್ಣ ಸೂಜಿಯನ್ನು ಹೋಲುವ ಅಂಗವು ಮುಖ್ಯವಾದುದು. ಏಕೆಂದರೆ ಯಾವುದಾದರೊಂದು ಕೀಟ ಹಾರಿ ಬಂದು ಬಟ್ಟಲಿನಾಕಾರದಲ್ಲಿರುವ ಜಾಗದಲ್ಲಿ ಕುಳಿತು ಓಡಾಡುವಾಗ ಈ ಸೂಜಿಯನ್ನು ಅಲುಗಾಡಿಸಿದಲ್ಲಿ ಸಸ್ಯಕ್ಕೆ ಆ ಭಾಗದಿಂದ ಸೂಕ್ಷ್ಮ ವಿದ್ಯುತ್ ಚಾರ್ಜ್ ಗಳ ಮೂಲಕ ಸಂದೇಶ ಹೊರಟು ಅಗಲವಾಗಿರುವ ಬಾಚಣಿಗೆಯನ್ನು ಹೋಲುವ ಎರಡು ಅಂಗಗಳು ಮುಚ್ಚಿಕೊಂಡು ಆ ಕೀಟವನ್ನು ಅಲ್ಲಿಯೇ ಬಂಧಿಸುತ್ತವೆ. ತದನಂತರ ಆ ಕೀಟವನ್ನು ಜೀರ್ಣಿಸಿಕೊಳ್ಳಲು ಬೇಕಾಗುವ ಎಂಜೈಮ್ ಗಳನ್ನು ಉತ್ಪಾದಿಸಿ ಜೀರ್ಣಿಸಿಕೊಳ್ಳುತ್ತವೆ. ಸಾರಜನಕ ಪಡೆದುಕೊಳ್ಳುತ್ತವೆ!.

ಈ ವಿಷಯವು ಕೆಲವು ಓದುಗ ಮಹಾಶಯರಿಗೆ ತಿಳಿದಿರಬಹುದು. ಆದರೆ ಅಸಲು ವಿಷಯ ಮುಂದಿದೆ ಎಂಬುದು ನೆನಪಿರಲಿ… ಏಕೆಂದರೆ ಇಲ್ಲಿಯವರೆಗೆ ಈ ಸಸ್ಯ ಎಣಿಸುವುದು ಹೇಗೆ ಎಂದು ನಾನು ಹೇಳಲೇ ಇಲ್ಲ! ಕೀಟವು ಈ ಸಸ್ಯದ ಬಟ್ಟಲಿನಲ್ಲಿ ಓಡಾಡುವಾಗ ಆ ಸೂಜಿಯನ್ನು ಒಮ್ಮೆ ಅಲುಗಾಡಿಸಿದ ಕೂಡಲೇ ಬಂಧಿಸಲ್ಪಡುವುದಿಲ್ಲ ಬದಲಿಗೆ ಎರಡನೇ ಬಾರಿಯ ನಂತರವೇ ಅವು ಮುಚ್ಚಲ್ಪಡುತ್ತವೆ. ಹೀಗೆ ಎರಡನೇ ತಗುಲಿಕೆಯ ನಂತರ ಮಾತ್ರ ಪ್ರತಿಕ್ರಿಯಿಸುವುದಕ್ಕೂ ಕಾರಣವಿದೆ. ನೀವೇ ಹೇಳಿ ಕೆಲವೊಮ್ಮೆ ನೀರಿನ ಹನಿಯೋ ಅಥವಾ ಯಾವುದೋ ಪಕ್ಕದ ಗಿಡದ ಎಲೆಯೋ ಹಾಗೆ ತಗುಲಿಸಿದರೆ ಆಗಲೂ ಸಹ ಗಿಡದ ಬಾಗಿಲುಗಳು ಮುಚ್ಚಬೇಕು ಅಲ್ಲವೇ? ಒಮ್ಮೆ ಹೀಗೆ ಮುಚ್ಚಿದರೆ ಮತ್ತೆ ಅದು ಮೊದಲಿನ ಹಾಗೆ ಅರಳಲು ಅರ್ಧ ದಿನವೇ ಬೇಕಾಗುತ್ತದೆ. ಇದರಿಂದ ಗಿಡಕ್ಕೇ ಅನುಚಿತ ಸಮಯ ವ್ಯರ್ಥ. ಅದರಿಂದಲೇ ಮೊದಲ ತಗುಲಿಕೆಯ ನಂತರ 20 ಸೆಕೆಂಡುಗಳಲ್ಲಿ ಏನಾದರೂ ಇನ್ನೊಂದು ತಗುಲಿಕೆಯಾದರೆ, ಆಗ ಗಿಡದ ಬಾಗಿಲುಗಳು ಮುಚ್ಚುತ್ತವೆ. ನಂತರ ಆ ಎರಡನೇ ತಗುಲಿಕೆಯೇ ಗಿಡದಲ್ಲಿ ಜೀರ್ಣಕ್ರಿಯೆಗೆ ಬೇಕಾದ ಎನ್ಸೈಮ್ ಅನ್ನು ತಯಾರಿಸಲು ಹಾರ್ಮೋನುಗಳ ಮೂಲಕ ಸಂದೇಶ ರವಾನಿಸುತ್ತವೆ. ಇಲ್ಲಿಯೂ ಒಂದು ಸಮಸ್ಯೆ ಇದೆ; ಒಂದು ಕೀಟವನ್ನು ಜೀರ್ಣಿಸಲು, ಅಂದರೆ ಎನ್ಸೈಮ್ ಅನ್ನು ತಯಾರಿಸಿ ಕೀಟವನ್ನು ಜೀರ್ಣಿಸಿಕೊಳ್ಳಲು ಸಸ್ಯಕ್ಕೆ ಬೇಕಾದಷ್ಟು ಶಕ್ತಿಯ ಖರ್ಚಾಗುತ್ತದೆ. ಹೀಗಿರುವಾಗ ಸಸ್ಯವೇನಾದರು ಜೀರ್ಣಿಸಿಕೊಳ್ಳಲಾಗದ ಕೀಟವನ್ನೋ ಅಥವಾ ಯಾವುದೋ ಎಲೆಯಿಂದಲೋ ಮುಚ್ಚಿಕೊಂಡು ಜೀರ್ಣಕ್ರಿಯೆ ಪ್ರಾರಂಭಿಸಿದರೆ ವ್ಯಥಾ ಶಕ್ತಿಯ ಖರ್ಚಾಗುವುದಲ್ಲವೇ? ಖಂಡಿತ ಹೌದು! ಹಾಗಾದರೆ ಇದಕ್ಕೇನು ಉಪಾಯ..? ಉಪಾಯ ಇದೆ. ಮುಂದಿದೆ…

ಅದೋ… ತಲೆಯ ಒಳಗಿನ ಕುತೂಹಲತೆ ಮುಖದಲ್ಲಿ ತೋರುತ್ತಿದೆ. ಇನ್ನೂ ತಡಮಾಡುವುದಿಲ್ಲ ಹೇಳಿಬಿಡುತ್ತೇನೆ. ನೀವೂ ಕೇಳಿಬಿಡಿ. ಸಸ್ಯದ ಸೂಜಿಯನ್ನು ಯಾವುದೋ ಮಣ್ಣಿನ ಕಣವೋ ನೀರಿನ ಹನಿಯೋ ಎರಡು ಬಾರಿ ಅಲುಗಾಡಿಸಿತೆಂದಿಟ್ಟುಕೊಳ್ಳೋಣ. ಆಗಲೂ ಸಹ ಬಾಗಿಲುಗಳು ಮುಚ್ಚುತ್ತವೆ. ಆದರೆ ಜೀರ್ಣ ಕ್ರಿಯೆ ಆರಂಭವಾಗುವುದಿಲ್ಲ, ಬದಲಿಗೆ ಅರ್ಧ ದಿನದ ಬಳಿಕ ಬಾಗಿಲುಗಳು ತೆರೆದುಕೊಳ್ಳುತ್ತವೆ. ಆದರೆ ಕೀಟವೇನಾದರೂ ಈ ಸಸ್ಯದ ಬಂಧನದಲ್ಲಿ ಸಿಲುಕಿದರೆ ಗಾಬರಿಗೊಂಡು ಓಡಾಡುತ್ತವೆ ಅಲ್ಲವೇ? ಆಗ ಅದು ಹೆಚ್ಚೆಚ್ಚು ಬಾರಿ ಒಳಗಿನ ಸೂಜಿಯನ್ನು ಖಂಡಿತ ಅಲುಗಾಡಿಸುತ್ತದೆ. ಹೀಗೆ ಹೆಚ್ಚು ಸಾರಿ ಅಲುಗಾಡಿಸಿದಂತೆ ಮುಂದಿನ ಕ್ರಿಯೆಗಳಾದ ಹಾರ್ಮೋನ್ ನಿಂದ ಸಂದೇಶ ರವಾನೆ ಮತ್ತು ಎನ್ಸೈಮ್ ಗಳ ಉತ್ಪತ್ತಿ ಮುಂತಾದವುಗಳು ಚುರುಕುಗೊಳ್ಳುತ್ತವೆ. ಹಾಗಾದರೆ ಹೀಗೆ ಜೀರ್ಣ ಕ್ರಿಯೆ ಶುರುವಾಗಲು ಕೆಲವು ಕನಿಷ್ಠ ಅಲುಗಾಡಿಕೆ ಅಥವಾ ಸೂಜಿಯ ತಗುಲಿಕೆ ಆಗಬೇಕಲ್ಲವೇ? ಹೌದು ಆ ಸಂಖ್ಯೆಯನ್ನು ತಿಳಿಯಲು ಮುಂದಾಗುತ್ತಾರೆ ಜರ್ಮನಿಯ ಉರ್ಜ್ಬರ್ಗ್ ವಿಶ್ವವಿದ್ಯಾಲಯದ ರೈನರ್ ಹೆಡ್ರಿಚ್. ಅವರು ನಡೆಸಿದ ಪ್ರಯೋಗವಿಷ್ಟೆ, ಒಂದು ವಿಶಿಷ್ಟ ನಳಿಕೆ ತಯಾರಿಸಿ ಅದರಿಂದ ಒಂದೊಂದೇ ನೀರಿನ ಹನಿಗಳನ್ನು ಕೀಟಾಹಾರಿಯ ಸೂಜಿಯಾಕಾರದ ಅಂಗಕ್ಕೆ ತಾಗುವಂತೆ ಬಿಟ್ಟರು. ಈ ಹಿಂದೆ ಹೇಳಿದಂತೆ ಎರಡು ತಗುಲಿಕೆಯ ನಂತರ ಬಾಗಿಲುಗಳು ಮುಚ್ಚಿದವು. ಆದರೆ ಜೀರ್ಣ ಕ್ರಿಯೆ ಶುರುವಾಗಲಿಲ್ಲ. ಬದಲಿಗೆ 5 ಬಾರಿ ಹೀಗೆ ಮಾಡಿದ ನಂತರ ಜೀರ್ಣಕ್ರಿಯೆ ಶುರುವಾಯಿತು! ಎಂಬುದು ಅವರ ಸಂಶೋಧನೆಯ ಉತ್ತರ. ಅಷ್ಟೇ ಅಲ್ಲ ಬಂಧಿಸಲ್ಪಟ್ಟ ಕೀಟವೇನಾದರೂ ದೊಡ್ಡದಾಗಿದ್ದಾರೆ ಅವು ಪ್ರತೀ ಘಂಟಗೆ ಹೆಚ್ಚು ಕಡಿಮೆ 60 ಬಾರಿ ಆ ಸೂಜಿಯನ್ನು ತಗುಲಿಸುತ್ತವೆ. ಇದರಿಂದ ಜೀರ್ಣ ಕ್ರಿಯೆ ಇನ್ನೂ ಚುರುಕಾಗುತ್ತದೆ, ಬೇಗ ಬೇಗ ಕೀಟ ಜೀರ್ಣವಾಗುತ್ತದೆ. ಹಾಗೆ ನೋಡಿದರೆ ಕೀಟವೇ ನಮ್ಮ ಈ ಕೀಟಾಹಾರಿಗೆ ‘ನಿನಗೊಲಿದಿರುವ ಭಕ್ಷ್ಯ ದೊಡ್ಡದು-ಅದೃಷ್ಟವಂತ!’ ಎಂದು ಬಾರಿ ಬಾರಿ ಹೇಳಿದಂತಿದೆ ಅಲ್ಲವೇ?

ಅದನ್ನು ಸ್ವಲ್ಪ ಪಕ್ಕಕ್ಕಿಟ್ಟರೆ, ಹೀಗೆ 2 ಮತ್ತು 5 ಎಂಬ ನಿರ್ದಿಷ್ಟ ಸಂಖ್ಯೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ಕೀಟಾಹಾರಿಯ ಜೀವನ ಶೈಲಿ ನಮ್ಮಂತಹ ಎಷ್ಟೋ ಮಹನೀಯರಿಗೆ ಮೂಗಿನ ಮೇಲೆ ಬೆರಳೇರುವಂತೆ ಮಾಡಿರುವುದು ವಾಸ್ತವ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

Spread the love
error: Content is protected.