ಭಾರತದಲ್ಲೇಕೆ ಹಾವಿನ ಕಡಿತ ಹೆಚ್ಚು?

ಭಾರತದಲ್ಲೇಕೆ ಹಾವಿನ ಕಡಿತ ಹೆಚ್ಚು?

ಭಾರತದಲ್ಲೇಕೆ ಹಾವಿನ ಕಡಿತ ಹೆಚ್ಚು ಎನ್ನುವುದು ಒಂದು ಕ್ಲಿಷ್ಟ ಪ್ರಶ್ನೆ. ಇದನ್ನು ಉತ್ತರಿಸಿದಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಉತ್ತರಿಸುವ ಗೋಜಿಗೆ ಹೋಗದಿದ್ದರೆ ಪ್ರಶ್ನೆ ಪ್ರಶ್ನೆಯಾಗೇ ಉಳಿಯುವುದರಿಂದ ಉತ್ತರಿಸುವ ಪ್ರಯತ್ನವನ್ನು ಮಾಡೋಣ. ಆ ಪ್ರಯತ್ನದಿಂದಲಾದರೂ ವಿಷಯ ಮುಂಚೂಣಿಗೆ ಬಂದು ನಿಖರ ಉತ್ತರ ದೊರಕಬಹುದು ಅಥವಾ ಉತ್ತರಿಸುವ ಸಲುವಾಗಿ ವಿಚಾರ ಮಂಥನಗಳು ನಡೆಯಬಹುದು.

ವೈದ್ಯಕೀಯವಾಗಿ ನಾಲ್ಕು ವಿಷಕಾರಿ ಹಾವುಗಳ ಕಡಿತ( ನಾಗರಹಾವು, ಕಟ್ಟು ಹಾವು. ಕೊಳಕು ಮಂಡಲ, ಗರಗಸದ ಹಾವು) ಕಾಣಬಹುದು. ಇತರ ವಿಷಕಾರಿ ಹಾವುಗಳಾದ ಕಟ್ಟಿಗೆ ಹಾವು, ಸಮುದ್ರದ ಹಾವು, ಕಾಳಿಂಗ ಸರ್ಪಗಳೂ ಕೂಡ ಮಾರಣಾಂತಿಕವಾಗಿ ಕಚ್ಚುತ್ತವೆ. ನಾಗರಹಾವು (ನಾಲ್ಕು ತಳಿ),  ಕಟ್ಟು ಹಾವು (ಏಳು ತಳಿ), ರಸಲ್ ವೈಪರ್ ಹಾಗು ಸಾ ಸ್ಕೇಲ್ಡ್ ವೈಪರ್( ಬಹುಶಃ ಎರಡು ತಳಿಗಳು)  ಈ ನಾಲ್ಕು ಹಾವುಗಳ ಕಡಿತ ಗಂಭೀರ, ಮಾರಕ ಪರಿಣಾಮಗಳನ್ನುಂಟುಮಾಡುತ್ತವೆ.

ಹಾವಿನ ಕಡಿತ ಹಾಗು ಅದರಿಂದಾಗುವ ಸಾವುಗಳು ಹೆಚ್ಚಾಗಿ ಈ ನಾಲ್ಕು ಬಗೆಯ ಹಾವುಗಳಲ್ಲಿ ಕಂಡುಬಂದರೂ, ಯಾವ ಹಾವಿನಿಂದ ಹೆಚ್ಚು ಸಾವುಗಳುಂಟಾಗುತ್ತದೆ ಎಂದು ಹೇಳಲು ವಿಶ್ವಾಸಾರ್ಹ ಮಾಹಿತಿಯ ಕೊರತೆ ಇದೆ. ಆದರೆ ಯಾವ ಪ್ರದೇಶದಲ್ಲಿ ಯಾವ ಹಾವಿನ ಕಡಿತದಿಂದ ತೊಂದರೆಯಾಗುತ್ತಿದೆ ಎಂದು ಹೇಳಬಹುದು. ಉದಾಹರಣೆಗೆ ಮಹಾರಾಷ್ಟ್ರದ ರತ್ನಗಿರಿ, ರಾಜಸ್ಥಾನದ ಜೈಸಲ್ಮೆರ್ ನಲ್ಲಿ 90% ಹೆಚ್ಚು ಅಪಾಯಕಾರಿ ಹಾವಿನ ಕಡಿತಗಳು  ಸಾ ಸ್ಕೆಲ್ಡ್ ವೈಪರ್ ನಿಂದಾಗುವುದು. ಉರಗತಜ್ನರು ಹಾಗೂ ವೈದ್ಯರು ಒಟ್ಟಾಗಿ ಸೇರಿ ಈ ವಿಷಯದ ಅಧ್ಯಯನ ಮಾಡಿದರೆ ಇದೊಂದು ಆಕರ್ಷಕ ಅಧ್ಯಯನವಾಗುತ್ತದೆ. ಹಾವಿನ ತಳಿಗಳು  ಹರಡಿರುವ ಪ್ರಮಾಣ ಹಾಗೂ ಹಾವಿನ ಕಡಿತದ ಅಧ್ಯಯನವು ಜನರಿಗೆ ಹೇಗೆ ಸುರಕ್ಷಿತವಾಗಿರುವುದು ಎಂದು ಹೇಳಿಕೊಡುವುದಕ್ಕೆ ಸುಲಭವಾಗುತ್ತದೆ ಹಾಗೂ ಜನರಲ್ಲಿ ವೈದ್ಯರ ಬಗ್ಗೆ ಆತ್ಮವಿಶ್ವಾಸ ಮೂಡಿಸುತ್ತದೆ.

ಗ್ರಾಮೀಣ ಪ್ರದೇಶದ ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಹೆಚ್ಚು ಹಾವಿನ ಕಡಿತಗಳು ಕಂಡು ಬರುವುದು ಹಲವಾರು ವಿಷಯಗಳನ್ನು ಸೂಚಿಸುತ್ತವೆ.

1.ಕೃಷಿ ಪ್ರದೇಶದಲ್ಲಿ ವಿಷಯುಕ್ತ ಹಾವಿನ ಸಾಂದ್ರತೆ ಹೆಚ್ಚಿರುತ್ತದೆ
2.ಕೃಷಿ ಪ್ರದೇಶದಲ್ಲಿ ಹಾವು ಬೇಟೆಯಾಡುವ ಪ್ರಾಣಿಗಳ ಸಾಂದ್ರತೆ ಹೆಚ್ಚಿದೆ
3.ಹಳ್ಳಿಜನ ಪಾದರಕ್ಷೆಗಳನ್ನು ಧರಿಸುವುದಿಲ್ಲ
4.ಹಳ್ಳಿಜನ ರಾತ್ರಿ ಸಮಯ ನಡೆದಾಡುವಾಗ ಟಾರ್ಚ್ ಗಳನ್ನು ಬಳಸುವುದಿಲ್ಲ

1.ಕೃಷಿ ಪ್ರದೇಶದಲ್ಲಿ ವಿಷಯುಕ್ತ ಹಾವಿನ ಸಾಂದ್ರತೆ  ಹೆಚ್ಚಿರುತ್ತದೆ

ಭಾರತದಲ್ಲಿಹಾವುಗಳ ಗಣತಿಯನ್ನು ಯಾರು ಮಾಡದಿದ್ದರೂ ಇರುಳರು ಮಿಲಯಗಟ್ಟಲೆ ಹಾವಿನ ಚರ್ಮದ ಸಂಗ್ರಹಕ್ಕಾಗಿ ಕಾಡುಗಳನ್ನು ಅಲೆಯಲಿಲ್ಲ. (ಆಗಸ್ಟ್ 2018ರ ಕಾನನದಲ್ಲಿ ಇರುಳರ ಬಗ್ಗೆ ಮುದ್ರಿತವಾಗಿದೆ) ಬದಲಾಗಿ ಕೃಷಿಭೂಮಿಯಲ್ಲಿ ಹಾವುಗಳನ್ನು ಬೇಟೆಯಾಡಿದ್ದರು.

ವಿವಿಧ ಹಾವುಗಳ ಸಂಖ್ಯೆ, ಜೀವನಕ್ರಮ, ಅವುಗಳು ಇಡುವ ಮೊಟ್ಟೆಗಳು, ಅದರಿಂದ ಹೊರ ಬರುವ ಮರಿಗಳ ಸಂಖ್ಯೆ, ಅದರಲ್ಲಿ ಉಳಿದು ಪ್ರಬುದ್ಧಾವಸ್ಥೆ ತಲುಪುವ ಹಾವುಗಳ ಸಂಖ್ಯೆ ಇತ್ಯಾದಿ ಮಾಹಿತಿಗಳ ಕೊರತೆಯಿದೆ. ಆ ನಿಟ್ಟಿನಲ್ಲಿ ಕೆಲಸಮಾಡಿದರೆ ಹಾವುಗಳ ಕಡಿತದ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯಕ್ಕೆ ಬರಬಹುದೆನಿಸುತ್ತದೆ.

2.ಕೃಷಿ ಪ್ರದೇಶದಲ್ಲಿ ಹಾವು ಬೇಟೆಯಾಡುವ ಪ್ರಾಣಿಗಳ ಸಾಂದ್ರತೆ  ಹೆಚ್ಚಿದೆ

ಭಾರತದಕೃಷಿ ಭೂಮಿಯಲ್ಲಿ ಇಲಿ ಹೆಗ್ಗಣಗಳ ಸಂಖ್ಯೆ ಎಷ್ಟು ಹೆಚ್ಚಿದೆ ಎಂದರೆ, ಬೆಳೆದ ಬೆಳೆಗಳೇ ಹೆಗ್ಗಣಗಳ ಹೊಡೆತಕ್ಕೆ ಸಂಪೂರ್ಣ ನಾಶವಾಗಿವೆ. ಅದೃಷ್ಟವಶಾತ್ ಇಲಿ ಹೆಗ್ಗಣಗಳ ಸಂಖ್ಯೆ ಹಾಗು ಸಾಂದ್ರತೆ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಯಾರಾದರು ಉರಗಾಸಕ್ತರು ಲಭ್ಯವಿರುವ ದಂಶಕಗಳ (ಇಲಿ ಹೆಗ್ಗಣಗಳ) ಮಾಹಿತಿಯನ್ನು ಆಧರಿಸಿ ಹಾವುಗಳ ಅಧ್ಯಯನ ನಡೆಸಿದರೆ  ಉಪಯುಕ್ತ ಮಾಹಿತಿ ಸಿಗುತ್ತದೆ. “ದಕ್ಷಿಣ ಭಾರತದ ಗದ್ದೆಗಳಲ್ಲಿ ನಾಗರಹಾವುಗಳು ಹಾಗೂ ಹೆಗ್ಗಣಗಳ ಸಹಯೋಗ ಒಂದು ಪಿ.ಹೆಚ್.ಡಿ. ಅಥವಾ ಡಿ.ಲಿಟ್ ಅಧ್ಯಯನಕ್ಕೆ ಸೂಕ್ತವಾದ ವಿಷಯ ಜಾರ್ಜ್ ಸ್ಕಲ್ಲರನ ಶ್ರೇಷ್ಠ ಅಧ್ಯಯನವಾದ ಜಿಂಕೆ ಮತ್ತು ಹುಲಿಯಂತೆ ಯಾರಾದರೂ ದಂಶಕ ಹಾಗೂ ಸರ್ಪ ಎಂಬ ಅಧ್ಯಯನ ಮಾಡಿದರೆ ತುಂಬಾ ಉಪಯೋಗವಾಗುತ್ತದೆ.

ಹಾವುಗಳ ಬೇಟೆಯ ವಿಷಯವು ಸಂಕೀರ್ಣ ಹಾಗೂ ಆಕರ್ಷಕ. ತಾರ್ಕಿಕವಾಗಿ ಹೆಚ್ಚು ಸಂಖ್ಯೆಯ ಹೆಗ್ಗಣಗಳು ಅಪರಿಮಿತ ಹಾವುಗಳ ಸಂಖ್ಯೆಗೆ ಕಾರಣವಾಗುತ್ತದೆ ಎಂದು ಒಪ್ಪಿಕೊಳ್ಳೋಣ. ನಾಗರಹಾವುಗಳು ಭತ್ತದ ಗದ್ದೆಯಲ್ಲಿ ಹೆಚ್ಚು ಎಂಬುದು ಗೊತ್ತೇ ಇದೆ. ಭತ್ತಕ್ಕಾಗಿ ಯಥೇಚ್ಛವಾಗಿ ನೀರುಕಟ್ಟಿ ನೀರು ನಿಲ್ಲುವಂತೆ ಬದುಗಳನ್ನು ರಚಿಸುತ್ತೇವೆ. ಬದುಗಳಲ್ಲಿ ಇಲಿ ಹೆಗ್ಗಣಗಳು ಬಿಲ ಕೊರೆದು ಜೀವಿಸುತ್ತವೆ. ಸ್ವಾಭಾವಿಕವಾಗಿ ಹಾವುಗಳು ಅಲ್ಲಿಗೆ ಬರುತ್ತವೆ ಅವುಗಳೇ ಮನುಷ್ಯರನ್ನು ಹೆಚ್ಚು ಕಚ್ಚುತ್ತವೆ. ಹಾಗಾದರೆ ಭತ್ತದ ಗದ್ದೆಯು ಹಾವುಗಳ ಕಡಿತಕ್ಕೆ ಕಾರಣವೆ? ಅದನ್ನು ಅಧ್ಯಯನ ಮಾಡಿ ತಿಳಿಯಲು ಅಧ್ಯಯನಕಾರರು ಏಷ್ಯಾದ ಪಿಲಿಪೈನ್ಸ್ ವರೆಗೂ ಎಲ್ಲ ಭತ್ತ ಗದ್ದೆಗಳಲ್ಲಿ ಪ್ರವಾಸಮಾಡಬೇಕಾಗುತ್ತದೆ!. ಭತ್ತ ಹಾಗು ಇತರ ಧಾನ್ಯಗಳು ಹೆಚ್ಚಿನ ಸಂಖ್ಯೆಯ ಹೆಗ್ಗಣಗಳಿಗೆ, ಅದರ ಮೂಲಕ ಹಾವುಗಳ ಸಂಖ್ಯೆಗೆ ಕಾರಣವಾಗಿದೆ. ಸನಿಹದ ಕಾಡುಗಳಲ್ಲಿ ದಂಶಕಗಳ ಅಧ್ಯಯನ ಮಾಡಿದರೆ ಅವುಗಳು ಕಾಡುಗಳಲ್ಲಿ ಎಷ್ಟು ವಿರಳವಾಗಿವೆ ಎಂದು ತಿಳಿಯುತ್ತದೆ. ಇರುಳರೊಂದಿಗೆ ಒಂದುದಿನ ಗದ್ದೆಗಳಲ್ಲಿ ನಡೆದಾಡಿದರೆ ನಮಗೆ ನಾಲ್ಕು ವಿಷಯುಕ್ತ ಹಾವುಗಳಿಗಂತಲೂ ಹೆಚ್ಚಾಗಿ  ಡಜ಼ನ್ ಗಟ್ಟಲೆ ಕೇರೆಹಾವುಗಳು ಸಿಗುತ್ತವೆ.

ಕಟ್ಟುಹಾವು ಕೂಡ ದಂಶಕಗಳನ್ನು ತಿನ್ನುತ್ತದೆ. ಇದು ತನ್ನ ದೇಹ ಪ್ರಕೃತಿಗೆ ಅನುಗುಣವಾಗಿ ಚಿಕ್ಕ ಇಲಿಯನ್ನು (Mus booduga) ತಿನ್ನುತ್ತದೆ ಎಂದು ಇರುಳರು ನನಗೆ ತಿಳಿಸಿದರು. ಕಟ್ಟು ಹಾವುಗಳು ಇಲಿಬಿಲಗಳಲ್ಲಿ ವಾಸಿಸಲು ಇಷ್ಟಪಡುತ್ತವೆ, ಅವು ನಾಗರಹಾವುಗಳಂತೆ ಬದುಗಳಮೇಲೆ ಇರುವುದಿಲ್ಲ. ಕಟ್ಟುಹಾವುಗಳು ಕಲ್ಲುಬಂಡೆಗಳ ಸಂದಿಯಲ್ಲಿ ಬದುಕುತ್ತವೆ. ಬಂಡೆ ಗಿಡ ಮರ ಪೊದೆಗಳು ಕಟ್ಟುಹಾವು ಹಾಗೂ ಇಲಿಗಳಿಗೆ ಉತ್ತಮ ಆವಾಸಗಳು.

ರಸಲ್ ವೈಪರ್ ಕ್ಯಾಕ್ಟಸ್ ಭೂತಾಳೆ ಯಂತ ಮುಳ್ಳುಗಿಡಗಳ ಸಂದುಗಳಲ್ಲಿ ಆಶ್ರಯಪಡೆಯುತ್ತವೆ. ಇವು ಬಿಲಗಳಲ್ಲಿ ವಾಸಿಸುವ ಹಾವುಗಳಲ್ಲ. ಒಮ್ಮೊಮ್ಮೆ ತಮ್ಮ ನೆಚ್ಚಿನ Indian gerbil (ಒಂದು ಬಗೆಯ  ಇಲಿ) ಗಳನ್ನು ಹಿಡಿಯಲು, ಹಾಗು ಬಿಸಿಲಿನ ಝಳವನ್ನು ತಡೆಯಲು  ಬಿಲವನ್ನು ಹೊಕ್ಕುತ್ತವೆ. ಜರ್ಬಿಲ್ ಇಲಿಗಳು ಭತ್ತ ಮತ್ತು ಇತರ ಫಸಲುಗಳ ಜಮೀನಿನ ಪಕ್ಕದಲ್ಲಿ ಬಿಲಗಳನ್ನು ತೋಡುತ್ತವೆ. ಅವು ಬದುವಿನಲ್ಲಿ ಬಿಲಗಳನ್ನು ಕೊರೆಯುವುದಿಲ್ಲ.

ನಾಲ್ಕು ವಿಷಕಾರಿ ಹಾವುಗಳಲ್ಲಿ ಗರಗಸದ ಹಾವು ಮಾತ್ರ ಬೇಸಾಯದ ಭೂಮಿಯಿಂದ ಲಾಭ ಪಡೆಯುವುದಿಲ್ಲ. ಗದ್ದೆಯಿಂದ ಕನ್ನಡಿ ಹಾವಿಗಾಗುವ ಲಾಭ ಎಂದರೆ ಭತ್ತವನ್ನು ತಿಂದು ಕೊಬ್ಬಿದ ಇಲಿಗಳನ್ನು ತಿನ್ನುವುದು ಮಾತ್ರ. ಕನ್ನಡಿಹಾವುಗಳು ಬಯಲು ಪ್ರದೇಶದಲ್ಲಿ ವಾಸಿಸಲು ಇಷ್ಟಪಡುತ್ತವೆ. ಮಾನವ ಕಾಡನ್ನು ಕಡಿದು ಈ ಹಾವುಗಳಿಗೆ ಉತ್ತಮ ಆವಾಸವನ್ನು ನಿರ್ಮಿಸಿದ್ದಾನೆ. ಬಯಲಿನಲ್ಲಿ ಇವು ಸಣ್ಣ ಪುಟ್ಟ ಇಲಿ, ಚೇಳು, ಓತಿಕ್ಯಾತ, ಕ್ರಿಕೆಟ್, ಜಿರಳೆ ಯಂತಹ ಜೀವಿಗಳನ್ನು ತಿಂದು ಬದುಕುತ್ತವೆ.

3.. ಹಳ್ಳಿಗರು ಶೂಗಳನ್ನು ಉಪಯೋಗಿಸುವುದಿಲ್ಲ.

ಶೂಗಳ ಬೆಲೆಯೂ ಹೆಚ್ಚು ಹಾಗು ಕೆಸರುಗದ್ದೆಯಲ್ಲಿ ಉಪಯೋಗಕ್ಕೆ ಬಾರದು. ಚಪ್ಪಲಿಗಳನ್ನು ಧರಿಸಿದರೂ ಕೂಡಾ ಹಾವು ಕಡಿತದ ದೃಷ್ಟಿಯಲ್ಲಿ  ಧರಿಸದಷ್ಟೇ ಉಪಯೋಗಿ. ರೈತರು ಬೆಳಗ್ಗೆ ಹಾಗು ಸಾಯಂಕಾಲ ಗದ್ದೆಗಳ ಬಳಿ ನಡೆಯುತ್ತಾರೆ, ಇದು ಹಾವುಗಳು ಬೇಟೆಗೆ ಹೊರಬರುವ ಸಮಯವೂ ಹೌದು ಹಾಗೇ ಶೌಚಕ್ಕೆ ಪೊದೆಗಳಮರೆಗೆ ಹೋಗುತ್ತಾರೆ. ಅದೂಕೂಡ ಹಾವುಗಳ ಆವಾಸ ಸ್ಥಾನ, ಹೀಗಾಗಿ ಮಾನವ ಹಾವುಗಳ ಭೇಟಿಯ ಸಂಭವ ಹೆಚ್ಚು.

4. ಹಳ್ಳಿಗರು ರಾತ್ರಿ ಸಮಯ ನಡೆದಾಡುವಾಗ ಬೆಳಕಿಗಾಗಿ ಟಾರ್ಚನ್ನು ಉಪಯೋಗಿಸುವುದು ಕಡಿಮೆ.

ಬ್ಯಾಟರಿಗೆ ಖರ್ಚು ಹೆಚ್ಚಿರುವುದರಿಂದ ಅವರ ಬಳಿ ಟಾರ್ಚ್ ಇದ್ದರೂ ಬ್ಯಾಟರಿ ಇರದೆ ಅವು ನಿರುಪಯೋಗಿಯಾಗಿರುತ್ತದೆ. ಈಗ ಸ್ಥಿತಿ ಬದಲಾಗುತ್ತಿದೆ, ರಿಚಾರ್ಜಬಲ್ ಬ್ಯಾಟರಿಗಳನ್ನು ರೈತರು ಉಪಯೋಗಿಸುತ್ತಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ ಶೇಖಡ 75 ರಷ್ಟು ಹಾವಿನ ಕಡಿತ ರಾತ್ರಿ ವೇಳೆ ಸಂಭವಿಸಿದೆ. ಇದು ಪರಿಸರ, ಹಾವಿನ ಸ್ವಭಾವ ಅದರ ಜಾತಿ ಆಧಾರಿತವೂ ಹೌದು. ನಮಗೆ ತಿಳಿದಿರುವ ನಾಲ್ಕು ವಿಷಪೂರಿತ ಹಾವುಗಳು ಬಹುಶಃ ನಿಶಾಚರಿಗಳು. ಮಾನವನಿರುವ ಪರಿಸರದ ಸುತ್ತಮುತ್ತ ಹಾವುಗಳು ರಾತ್ರಿ ಕತ್ತಲಿನ ರಕ್ಷಣೆಯನ್ನು ಪಡೆಯುತ್ತವೆ, ಇದು ಮನುಷ್ಯರನ್ನು ಅಪಾಯಕ್ಕೆ ದೂಡುತ್ತದೆ. ಕೇರಳದಲ್ಲಿ ರಸಲ್ ವೈಪರ್ ಪ್ರದೇಶದಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದ ವಿಚಾರವೇನೆಂದರೆ, ಎಲ್ಲಾ ಹಾವಿನ ಕಡಿತಗಳು ರಾತ್ರಿ ಸಮಯ ಕತ್ತಲಲ್ಲಿ ಮನೆಯ ಬಳಿ ಅಥವಾ ಪಾದಾಚಾರಿ ಮಾರ್ಗಗಳಲ್ಲೆ ನಡೆದಿರುವುದು.

ಈ ವಿಚಾರವನ್ನು ಸ್ಥೂಲವಾಗಿ ಹೇಳುವುದಾದರೆ,  ನಾವು ಹಾವುಗಳಿಗೆ ಸೂಕ್ತವಾದ ಬಯಲು ಪ್ರದೇಶವನ್ನು ನಿರ್ಮಿಸಿ ಕೊಡುತ್ತೇವೆ, ಅವುಗಳಿಗೆ ಬೇಕಾದ ಬೇಟೆಯನ್ನು ನಾವು ವಿಸರ್ಜಿಸುವ ಆಹಾರದಿಂದ ಬೆಳೆಯಗೊಡುತ್ತೇವೆ, ನಮ್ಮ ಮಕ್ಕಳು ಅದರ ಪರಿವೆ ಜ್ಞಾನ ತಿಳುವಳಿಕೆ ಇಲ್ಲದೆ ಅವುಗಳಿಂದ ಕಚ್ಚಿಸಿಕೊಳ್ಳುತ್ತಾರೆ!”

2011 ರಲ್ಲಿ ‘ಮಿಲಿಯನ್ ಸಾವುಗಳ ಅಧ್ಯಯನ’ ಎಂಬ ಲೇಖನವನ್ನು ಪ್ರಕಟಿಸಲಾಯಿತು. ಇದರಲ್ಲಿ ವೈದ್ಯಕೀಯ ತಂಡ ಹಾಗೂ ಸ್ವಯಂ ಸೇವಕರ ತಂಡ ಯಾದ್ರ‍ಚ್ಛಿಕವಾಗಿ ಮಿಲಿಯನ್ ಗೂ ಹೆಚ್ಚು ಮನೆಗಳಲ್ಲಿ “ಅವರ ಮನೆಯಲ್ಲಿ ಸಾವಿನ ಕಾರಣ ಏನೆಂದು” ಅಧ್ಯಯನ ನಡೆಸಿತು. ಭಾರತ ಸರ್ಕಾರ ಪ್ರತಿವರ್ಷ 1500 ಕ್ಕಿಂತಲೂ ಕಡಿಮೆ ಜನ ಹಾವಿನ ಕಡಿತದಿಂದ ಸಾಯುತ್ತಾರೆ ಎನ್ನುವುದು, ಆದರೆ ಅಧ್ಯಯನದಲ್ಲಿ ತಿಳಿದದ್ದು ಪ್ರತಿವರ್ಷ 46,000 ಜನ ಹಾವಿನ ಕಡಿತದಿಂದ ಸತ್ತಿದ್ದಾರೆ ಎಂದು ಓದಿ. 

ಮೂಲ ಲೇಖನ: ರೋಮುಲುಸ್ ವಿಟೇಕರ್
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ

Print Friendly, PDF & Email
Spread the love
error: Content is protected.