ಫಂಗಸ್ ಕೊಲ್ಲುವ ಬ್ಯಾಕ್ಟೀರಿಯಾ
ಕೆಮ್ಮಿಗೆ ನಿದ್ದೆ ಬಾರದ ಮೊದಲ ದಿನ ಅದು. ಆಗೊಮ್ಮೆ ಈಗೊಮ್ಮೆ ಕೆಮ್ಮು ಬಂದರೆ ಸಹಿಸಬಹುದು. ಆದರೆ ಎದೆಯೊಳಗಿಂದ ಶುರುವಾಗುವ ಕೆಮ್ಮಿನ ಉಗಿಬಂಡಿಯ ಇಂಜಿನ್, ಒಂದಾದ ಮೇಲೊಂದು ಬೋಗಿಗಳಂತೆ ಹಿಂದಿಂದೆಯೇ ಬಂದರೆ-ತೊಂದರೆ. ಇವುಗಳು ಸಾಲದೆಂಬಂತೆ ನೆಗಡಿ ಬೇರೆ. ಅಷ್ಟು ಸುಲಭವಾಗಿ ಬಾರದ ಕೆಮ್ಮು ನೆಗಡಿ ಮನೆಗೆ ಬರುವ ದೂರಸಂಬಂಧಿಗಳಂತೆ ಈಗ ಬಂದಿದೆಯೆಂದರೆ, ಅಷ್ಟು ಸುಲಭವಾಗಿ ಹೋಗದು. ಆದರೆ ಈ ಬಾರಿ ಬಂದಿರುವ ಕೆಮ್ಮು ನೆಗಡಿಗಳು ಸುಮಾರು ದಿನಗಳು ಇರುವಿಕೆಯ ಬಗ್ಗೆ ನನ್ನದು ಬೇರೆ ಸಿದ್ಧಾಂತವಿದೆ. ನನ್ನ ಗಟ್ಟಿ ನಂಬಿಕೆ ಏನೆಂದರೆ ಈಗ ನಾನಿರುವ ಆಶ್ರಮ-ತೋಟದ ರೂಮಿನಲ್ಲಿ (ಈಗ ಕಡಿಮೆಯಾಗಿದೆಯಾದರೂ) ಖಾಯಂ ಆಗಿ ನೆಲೆಸಿರುವ ಫಂಗಸ್ ನಿಂದಲೇ ನನ್ನ ಕೆಮ್ಮಿನ ತೀಕ್ಷ್ಣತೆ ಮತ್ತು ನೆಗಡಿಯ ಆರ್ಭಟಗಳು ಹೆಚ್ಚುತ್ತಿವೆ ಎಂದು. ಇದನ್ನೇ ವಿವರಿಸಲೆಂದು ಮುರುಳಿ ಅಣ್ಣನನ್ನು ಕರೆತಂದು ಅವುಗಳ(ಫಂಗಸ್) ಚೇಷ್ಟೆಯನ್ನು ವಿವರಿಸಿದರೆ, ಈಗತಾನೇ ನವೀಕರಿಸಿದ ತನ್ನ ರೂಮಿನ ಮೇಲಿನ ಆಪಾದನೆಯನ್ನು ಅವನು ಸಹಿಸದೆಯೋ ಏನೋ ಒಮ್ಮೆ ಪರೀಕ್ಷಿಸಿ, ಇಲ್ಲ! ಈಗ ಇಲ್ಲಿ ಆ ತರಹದ ಯಾವುದೇ ಫಂಗಸ್ ಇಲ್ಲ ಎಂದು(ಹಳೆಯ ರೂಮಿನ ಅವಸ್ಥೆಯನ್ನು ನೆನಪಿಸಿಕೊಂಡು) ಹೇಳಿಬಿಟ್ಟ ಎನಿಸುತ್ತದೆ. ಆದರೂ ಇಂತಹ ಜುಜುಬಿ ಖಾಯಿಲೆಗಳಿಗೆ ಅಷ್ಟು ಸುಲಭವಾಗಿ ಗುಳಿಗೆಗಳ ಮೊರೆ ಹೋಗದ ನಾನು, ಈ ಬಾರಿ ಒಂದೆರೆಡು ಬಾರಿ ವಿಶೇಷ ಗುಳಿಗೆಗಳನ್ನು ಸೇವಿಸಿದರೂ ಇವುಗಳು ಕಾಲ್ಕೀಳಲಿಲ್ಲ. ಹಾಗಾದರೆ ಆ ಫಂಗಸ್ಸೇ ಇದಕ್ಕೆ ಕಾರಣವೆಂಬುದು ಈಗಲೂ ನನ್ನ ಗುಮಾನಿ.
ಫಂಗಸ್ ಎಂಬುದು ಕೆಲವುಬಾರಿ ನಮಗೆ ಉಪಯೋಗಕರವಾಗಿದ್ದರೂ, ಇನ್ನು ಕೆಲವು ಬಾರಿ ತೊಂದರೆಕಾರಕವಾಗಿರುತ್ತವೆ. ಉದಾಹರಣೆಗೆ ನಾವು ತಿನ್ನುವ ಕೆಲವು ಜಾತಿಯ ಅಣಬೆಗಳು. ಅವುಗಳಿಂದ ಹರಡುವ ಕೆಲ ಚರ್ಮದ ತುರಿಕೆಗಳು ಇತ್ಯಾದಿ. ಹೀಗೆ ಫಂಗಸ್ ಗಳು ಕೇವಲ ಮಾನವರಿಗಲ್ಲದೆ ಕೆಲವು ಜೀವಿಗಳಿಗೂ ಉಪದ್ರವ ಕೊಡುವ ಉದಾಹರಣೆಗಳಿವೆ. ಅವುಗಳಲ್ಲೊಂದೇ ಈ ಬಾರಿಯ ವಿ ವಿ ಅಂಕಣದ ವಿಷಯ.
ಬಾಕ್ಟೀರಿಯಾ ಎಂದರೆ ಮೊದಲಿಗೆ ಸಾಮಾನ್ಯವಾಗಿ ನಮ್ಮ ತಲೆಯಲ್ಲಿ ಹೊಳೆಯುವುದು ತೊಂದರೆ ಎಂದೇ ಅಲ್ಲವೇ. ಉದಾಹರಣೆಗೆ ಕೆಲವು ಬಾರಿ ಕೆಟ್ಟುಹೋದ ಮೊಟ್ಟೆಯನ್ನು ಗಮನಿಸಿದರೆ, ಅಲ್ಪ ಸ್ವಲ್ಪ ತಿಳಿದ ನನ್ನಂತವರು ಬಾಕ್ಟೀರಿಯಾವೇ ಇದಕ್ಕೆ ಕಾರಣ ಎಂದು ದೂಷಿಸುತ್ತಾರೆ. ಆದರೆ ಇಲ್ಲಿ ಒಂದು ಬಗೆಯ ಬಾಕ್ಟೀರಿಯಾ ಇನ್ನೊಂದು ಜೀವಿಯ ಮೊಟ್ಟೆಗಳನ್ನು ಕಾಪಾಡಿ ಆ ಜೀವಿಯ ಪೀಳಿಗೆಗೆ ಆಶಾಕಿರಣವಾಗಿದೆ ಎಂದರೆ ನನ್ನಂತವರಿಗೆ ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾದೀತು. ಆದರೆ ಇದೇ ಸತ್ಯವೆಂದು ಮುಂದಿನ ಓದಿನಲ್ಲಿ ಅರಿಯಬಹುದು.
ಎಷ್ಟೋ ಬಾರಿ ಮೀನಿನ ಮೊಟ್ಟೆಗಳಿಗೆ ಇನ್ನೊಂದು ಮೀನೋ, ಕೀಟವೋ ಅಥವಾ ಇನ್ನಾವುದೋ ಪ್ರಾಣಿಯೋ ಕಂಟಕವಾಗಿರಬಹುದು. ಮೊಲ್ಲಸ್ಕನ್ ಗುಂಪಿಗೆ ಸೇರಿದ ಬಾಬ್ ಟೇಲ್ ಸ್ಕಿಡ್ (Euprymna scolopes) ಎಂಬ ಜಾತಿಯ ಮೀನಿನ ಮೊಟ್ಟೆಗಳ ಸುರಕ್ಷತೆಗೆ ಫ್ಯುಸೇರಿಯಮ್ (Fusarium keratoplasticum) ಎಂಬ ಫಂಗಸ್ ಸವಾಲೊಡ್ಡುತ್ತಿದೆ ಎಂಬುದು ವಾಸ್ತವ. ಇದಕ್ಕೆ ವಿರುದ್ಧವಾಗಿ ಈ ಸ್ಕಿಡ್ ಉಪಯೋಗಿಸಿದ ಆಯುಧವೇ ರೋಡೋ ಬಾಕ್ಟೀರಿಯಾ (Rhodobacteraceae).
ಫಂಗಸ್ ನ ಉಪದ್ರವದಿಂದ ತಪ್ಪಿಸಿಕೊಳ್ಳಲು ಬಾಬ್ ಟೇಲ್ ಸ್ಕಿಡ್ , ಬಾಕ್ಟೀರಿಯಾ ಮೊರೆ ಹೋಗಿದೆ. ಅದರ ಆಕ್ಸೆಸ್ಸರಿ ನಿಡಮೆಂಟಲ್ (accessory nidamental gland) ಎಂಬ ಗ್ರಂಥಿಯು ಎರಡು ಬಗೆಯ ಬಾಕ್ಟೀರಿಯಾಗಳಿಗೆ ಮನೆಯಾಗಿದೆ. ಇವುಗಳನ್ನು ಬಾಬ್ ಟೇಲ್ ಸ್ಕಿಡ್ಗಳು ಸುತ್ತಲೂ ಲೇಪಿಸಿರುವ ಮೊಟ್ಟೆಯನ್ನು ಇಡುತ್ತವೆ. ಇದರಿಂದ ತನ್ನ ಮೊಟ್ಟೆಗಳ ಸುರಕ್ಷೆತೆಯನ್ನು ಕಾಪಾಡಿಕೊಳ್ಳುತ್ತವೆ ಎನ್ನುತ್ತಾರೆ ಕನ್ನೆಕ್ಟಿಕಟ್ ವಿಶ್ವ ವಿದ್ಯಾಲಯದ ನೈಹೋಮ್.
ಹಾಗಾದರೆ ಫ್ಯುಸೇರಿಯಮ್ ಫಂಗಸ್ ಗಳೇ ಮೊಟ್ಟೆಗಳನ್ನು ಕೆಡುವಂತೆ ಮಾಡುತ್ತಿವೆ ಹಾಗೂ ರೋಡೋ ಬಾಕ್ಟೀರಿಯಾಗಳೇ ಈ ಮೊಟ್ಟೆಯನ್ನು ಕಾಪಾಡುತ್ತಿರುವುದು ಎಂಬುದಕ್ಕೆ ಪುರಾವೆಯೇನು ಎಂದು ಕೇಳಬೇಕಾದದ್ದು ಪ್ರತಿಯೊಬ್ಬ ವೈಜ್ಞಾನಿಕ ಚಿಂತಕನ ಧರ್ಮ. ಇದನ್ನು ತಿಳಿಯಲೆಂದೇ ನೈಹೋಮ್ ರವರು ಬಾಕ್ಟೀರಿಯಾದಿಂದ ಲೇಪಿಸಿದ ಒಂದು ಮೊಟ್ಟೆಯನ್ನು ತೆಗೆದುಕೊಂಡು ಲೇಪನದಲ್ಲಿರುವ ಬಾಕ್ಟೀರಿಯಾವನ್ನು ಕೊಲ್ಲುವಂತಹ ಆಂಟೀ-ಬಯೊಟಿಕ್ ಒಂದನ್ನು ಪ್ರಯೋಗಿಸಿದರು. ಇದರ ಪರಿಣಾಮ ಅಲ್ಲಿನ ಬಾಕ್ಟೀರಿಯಾಗಳು ಸತ್ತುಹೋದವು. ಇದಾದ ಸ್ವಲ್ಪ ಸಮಯದಲ್ಲೇ ಸ್ಕಿಡ್ ನ ಮೊಟ್ಟೆಗಳು ಫಂಗಸ್ ನಿಂದ ಕೂಡಿದ ಮುದ್ದೆಯಾಗಿ, ಬಳಿಕ ಬೆಳೆಯುತಿದ್ದ ಮೀನಿನ ಭ್ರೂಣ ಸತ್ತು ಹೋಯಿತು. ಈ ಪ್ರಯೋಗದ ತಾತ್ವರ್ಯ ಬಾಕ್ಟೀರಿಯಾಗಳು ಸ್ಕಿಡ್ ನ ಮೊಟ್ಟೆಗಳಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತಿದ್ದವು.
ಅಷ್ಟೇ ಅಲ್ಲದೆ ಸ್ಕಿಡ್ ನ ಈ ನಿಡಮೆಂಟಲ್ ಗ್ರಂಥಿಯಿಂದ ಒದಗುವ ಕೆಲವು ರಾಸಾಯನಿಕಗಳು ಕೆಲವು ಬೇರೆ ಬಗೆಯ ಬಾಕ್ಟೀರಿಯಾ ಮತ್ತು ಫಂಗಸ್ ಗಳಿಗೆ ರೋಧಕವಾಗಿವೆ. ಇದರಲ್ಲಿ ಮನುಷ್ಯರಿಗೆ ಸೋಂಕು ತರುವ ಕ್ಯಾಂಡಿಡಾ (candida albicans) ಎಂಬ ಫಂಗಸ್ ಗೂ ಸಹ ರೋಧಕವಾಗಿದ್ದು, ಮುಂದಿನ ದಿನಗಳಲ್ಲಿ ಈ ರಸಾಯನಿಕಗಳು ನಮ್ಮ ಕೆಲವು ಸೋಂಕುಗಳಿಗೆ ಸ್ವಾಭಾವಿಕ ಆ್ಯಂಟೀ-ಬಾಯಾಟಿಕ್ ಆಗಿ ಅಥವಾ ಫಂಗಸ್ ವಿರೋಧಕ ಮಾತ್ರೆಗಳಾಗಿಯೂ ಔಷಧಿ ಅಂಗಡಿಗಳಲ್ಲಿ ದೊರೆಯಬಹುದು ಎನ್ನುತ್ತಾರೆ ನೈಹೋಮ್.
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.