99 ಮಿಲಿಯನ್ ವರ್ಷ ಹಳೆಯ ಮರಿಹಾವು!

ಪಿಳ್ಳೆ(ನನ್ನ ಗೆಳೆಯ) ಸಾಲಿನಲ್ಲಿಯೇ ಇದ್ದಾನೆ, ಸಮಯ ಮೀರಿ ಹೋಗುತ್ತಿದೆ. ಕೇವಲ ಒಂದೇ ನಿಮಿಷ ಹೆಚ್ಚಾದರೂ ಯಾವುದೇ ಸಿನಿಮಾ ಥಿಯೇಟರ್ ಒಳಗೆ ಕಾಲಿಡದ ನಾನು, ಅಂದು ಮಾತ್ರ ಏಕೋ ಕಾಯೋಣವೆನ್ನಿಸಿತು. ಸಿನಿಮಾ ಶುರುವಾಗುವುದಕ್ಕಿಂತ ಇಪ್ಪತ್ತು ನಿಮಿಷ ಹೆಚ್ಚೇ ಆಗಿದ್ದರೂ ಸುಮ್ಮನೆ ಇದ್ದೆ. ಸ್ವಲ್ಪ ಇಷ್ಟಪಟ್ಟು ತುಂಬಾನೇ ಕಷ್ಟ ಪಟ್ಟು ಬಂದಿದ್ದರಿಂದಲೋ ಏನೋ ಹಿಂತಿರುಗಿ ಹೋಗಲು ಮನಸ್ಸಾಗಲಿಲ್ಲ ಅನಿಸುತ್ತೆ. ಪಿಳ್ಳೆ ಅಷ್ಟು ಸಮಯ ಕಾಯ್ದು ಲೇಟಾಗಿದ್ದಕ್ಕೆ ಟಿಕೆಟ್ ಕೊಡುವವನ ಮೇಲೆ ಗೊಣಗಾಡಿಕೊಂಡು ಹೇಗೋ ಟಿಕೆಟ್ ಸಂಪಾದಿಸಿ ಠೀವಿಯಿಂದ ನನ್ನೆಡೆಗೆ ಬಂದ. ಅವನು “ಅಲ್ಲವೋ…..” ಎಂದು ಕಥೆ ಶುರುಮಾಡುವಷ್ಟರಲ್ಲೇ “ನಡಿ… ನಡಿ… ಈಗಲೇ ಲೇಟ್ ಆಯ್ತು” ಎಂದು ಅವನ ಕೈಲಿದ್ದ ಟಿಕೆಟ್ ಕಸಿದುಕೊಂಡು ಮುನ್ನಡೆದೆ. ಅವನೂ ಮರು ಮಾತನಾಡದೆ ಹಿಂದೆಯೇ ಬಂದ. ನಾವು ಒಳಗೆ ನಡೆದ ತಕ್ಷಣವೇ ಸಿನಿಮಾ ಕೂಡ ಶುರುವಾಯಿತು. ಅಬ್ಬಾ…ಕಾದಿದ್ದಕ್ಕೂ ಸಾರ್ಥಕವಾಯಿತು ಎಂದುಕೊಂಡು ನಮ್ಮ ಆಸನಗಳ ಹುಡುಕಾಟಕ್ಕೆ ಇಳಿದೆವು. ಅವಸರದಲ್ಲಿ ಯಾವುದ್ಯಾವುದೋ ಮೂಲೆಯೆಲ್ಲಿ ನಿಂತು ಹುಡುಕಿದರೆ ನಮ್ಮ ಆಸನ ಇನ್ನೊಂದು ಮೂಲೆಯಲ್ಲಿತ್ತು. ಮೊಬೈಲ್ ಬೆಳಕಲ್ಲಿ ಅಲ್ಲಿಗೆ ಓಡಿ ಹೋಗಿ ಆಸನೀಕರಿಸಿದ ಸಮಯಕ್ಕೆ ಸರಿಯಾಗಿಯೇ ಸಿನಿಮಾ ಮುಖ್ಯಭಾಗ ತೆರೆಗಪ್ಪಳಿಸಿದ್ದು ಕಿರು ಸಂತೋಷವನ್ನುಂಟುಮಾಡಿತು. ಅದಕ್ಕೆಂದೇ ಕಾಣುತ್ತದೆ ನಮ್ಮ ಆಸನಗಳೂ ಮನೆಯ ಮೂಲೆಯಲ್ಲಿ ಪೊರಕೆ ಇಡುವ ಸ್ಥಳ ಇದ್ದಂತೆ ಇದ್ದರೂ ಕೆಲವು ನಿಮಿಷಗಳ ವರೆಗೆ ನಮ್ಮ ಗಮನಕ್ಕೇ ಬರಲಿಲ್ಲ. ಚಿಕ್ಕವಯಸ್ಸಿನಿಂದಲೂ ನನ್ನ ಎಲ್ಲ ಊಹೆಗಳಿಗೆ, ಮನರಂಜನೆಗಳಿಗೆ ಒಗ್ಗುವ ಚಿತ್ರ “ಜುರಸ್ಸಿಕ್ ಪಾರ್ಕ್” 2018ನೇ ಆವೃತ್ತಿಯಲ್ಲಿಯೂ ಇದ್ದದ್ದರಿಂದ ಇದೂ ಸಹ ಗಣನೆಗೆ ಬರಲಿಲ್ಲ.

ಸಿನೆಮಾದಲ್ಲಿನ ಪ್ರಾಣಿಗಳು ಸಹ ಎಂದಿನಂತೆ ಬೃಹತ್ತಾಗಿಯೂ ಮತ್ತು ವಿಚಿತ್ರವಾಗಿಯೂ ಇದ್ದುವು. ಆದರೆ ನಾನು ಗಮನಿಸಿದ ಹಾಗೆ ಸಿನಿಮಾ ಮಧ್ಯದಲ್ಲಿ ಎಲ್ಲಿಯೂ ನಾವು ಈಗ ನೋಡಲು ಸಿಗುವ ವನ್ಯ ಮೃಗಗಳು ಗೋಚರಿಸಲಿಲ್ಲ. ಎಷ್ಟೇ ಆದರೂ ಅದು ಸಿನಿಮಾ ಅಲ್ಲವೇ? ಎಷ್ಟು ತಾನೇ ತೋರಿಸಲಿಕ್ಕಾದೀತು? ಎಂಬ ವಾಕ್ಯಗಳು ನನ್ನಲ್ಲೇ ಮೂಡಿ ನನ್ನ ನಿರೀಕ್ಷೆಗೆ ಸಮಾಧಾನದ ಗೋಡೆಯನ್ನು ಕಟ್ಟಿದವು. ನನ್ನ ಈ ನಿರೀಕ್ಷೆಗೂ ಕಾರಣವಿದೆ. ನಮ್ಮಲ್ಲಿ ಈಗಲೂ ಸಿಗುವ ಕೆಲವು ಪ್ರಾಣಿಗಳಲ್ಲಿ ಕೆಲವು ಡೈನೋಸಾರ್ ಕಾಲದಿಂದಲೂ ಉಳಿದು ಬಂದಿವೆ(ದೇಹದ ಗಾತ್ರ ಮತ್ತು ರಚನೆ ಸ್ವಲ್ಪ ಭಿನ್ನವಾಗಿರಬಹುದು). ಆದರೆ ಅಂತಹ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ ಎಂಬುದು ವಾಸ್ತವ. ಉದಾಹರಣೆಗೆ ಮೊಸಳೆ, ಹಾವು, ಜಿರಲೆ, ಜೇನು ಹುಳು ಹೀಗೆ ಕೆಲವು ತಮ್ಮ ವಂಶವನ್ನು ಇಲ್ಲಿಯವರೆಗೂ ವಿಸ್ತರಿಸಿಕೊಂಡು ಬಂದಿವೆ.
ಮೊಸಳೆಯೆನೋ ಸ್ವಲ್ಪ ಮಟ್ಟಿಗೆ ಡೈನೋಸಾರ್ ನಂತೆಯೇ ಇದೆ, ಜಿರಳೆಯನ್ನು ಎಷ್ಟು ಹೊಡೆದರು ಈಗಲೂ ಸರಾಗವಾಗಿ ಸಾಯದು, ಹಾಗಾಗಿ ಇದು ಇರಬಹುದು. ಜೇನು ಹುಳುಗಳಂತಹ ಪರಾಗ ಸ್ಪರ್ಶಕಗಳು ಇದ್ದದ್ದರಿಂದಲೇ ಈಗಲೂ ನಮಗೆ ಹೂ ಬಿಡುವ ಸಸ್ಯಗಳನ್ನು ನೋಡಸಿಗುವುದು. ಹಾಗಾದರೆ ಈ ಹಾವು ಹೇಗೆ ಈ ಪಟ್ಟಿಯಲ್ಲಿ ಹುದುಗಿದೆ ಎಂಬ ಅನುಮಾನದ ಚಿಟ್ಟೆ ನಿಮ್ಮ ತಲೆಯ ಸುತ್ತಲೂ ತಿರುಗಿರಬಹುದು. ನನಗೂ ಸಹ ಈ ಕೆಳಗಿನ ವಿಷಯ ತಿಳಿಯುವವರೆಗೆ ಆ ಚಿಟ್ಟೆ ನನ್ನ ತಲೆಯ ಸುತ್ತಲೂ ಸುತ್ತಿದೆ.

ಇದಕ್ಕೆ ಪುರಾವೆಯು ಇದೆ. ಮಯನ್ಮಾರ್ ನಲ್ಲಿ ದೊರಕಿರುವ ಒಂದು ಪಳೆಯುಳಿಕೆಯಲ್ಲಿ ಮರಿ ಹಾವಿನ ಅವಶೇಷಗಳು ಜಾಗೃತವಾಗಿ ಸಂರಕ್ಷಿಸಲ್ಪಟ್ಟಿವೆ. 99 ಮಿಲಿಯನ್ ವರ್ಷಗಳ ಹಳೆಯ ‘ಕ್ರಿಟೇಶಿಯೆಸ್ ಪೀರಿಯಡ್’ ಎಂಬ ಯುಗದಲ್ಲಿ ಈ ಹಾವು ಪಳೆಯುಳಿಕೆಯಾಗಿರುವುದೆಂದು ಹಾಗೂ ಆಗ ಇಲ್ಲಿ ಡೈನೋಸಾರ್ ಹೋಲುವ ಜೀವಿಗಳು ಸಂಚರಿಸುತ್ತಿದ್ದ ತಾಣವಾಗಿತ್ತೆಂದು ನಮ್ಮ ಸಂಶೋಧನೆ ಹೇಳುತ್ತದೆ. ಅಷ್ಟೇ ಅಲ್ಲದೆ ಈ ಹಾವು ‘ಕ್ಷಿಯೋಫೀಸ್ ಮ್ಯಾನ್ಮರೆನ್‌ಸೀಸ್ (Xiaophis myanmarensis) ಹಾವಿನ ಜಾತಿಯಾಗಿದ್ದು ನಿಯೊನೇಟಲ್ ಸ್ನೇಕ್ಸ್(neonatal snakes) ಎಂಬ ಹಾವುಗಳ ಜಾತಿಗೆ ಹತ್ತಿರವೆಂದೂ ವೈಜ್ಞಾನಿಕವಾಗಿ ಊಹಿಸಲಾಗಿದೆ. ಇವುಗಳ ಸಣ್ಣ ಗಾತ್ರ ಮತ್ತು ಇನ್ನೂ ಬಲಿಯದ ಮೂಳೆಗಳ ಆಧಾರದ ಮೇಲೆ ಇದು ಮರಿ ಹಾವೆಂದು ಇಲ್ಲಿ ಸಂಬೋಧಿಸಲಾಗಿದೆ.

ಪಳೆಯುಳಿಕೆಯೆಂದರೆ ಎಷ್ಟೋ ಕೋಟಿ ಜೀವಿಗಳಲ್ಲೊಂದು ಸಾವಿರಾರು ವರ್ಷ ಕೆಲವು ಮಣ್ಣಿನ ಪದರಗಳ ನಡುವೆಯೋ, ಮರದ ಜೀವರಸದಲ್ಲಿ ಹುದುಗಿ ಜೀವವಿಲ್ಲದೆ ಇದ್ದರೂ ಬದುಕಿ ಪಳೆಯುಳಿಕೆ (ಹಳೆಯ ಉಳಿಕೆ)ಯಾಗಿ ನಮಗೆ ಅಂದಿನ ಜೀವವೈವಿಧ್ಯವನ್ನು ಪರಿಚಯ ಮಾಡಿಸುವ ದೇವ ಕಿಂಕರನೆ ಸರಿ. 20 ವರುಷಗಳ ಹಿಂದೆ ಹಾವುಗಳ ಪಳೆಯುಳಿಕೆಯು ಕಂಡಿತೆಂದರೆ ಅದು ಒಂದು ಅಪರೂಪದ ದೃಶ್ಯವಾಗಿತ್ತು(ಹಾವುಗಳ ಪಳೆಯುಳಿಕೆ ಬೇರೆ ಜೀವಿಗಳ ಪಳೆಯುಳಿಕೆಗಿಂತ ಅಷ್ಟು ವಿರಳವಾಗಿತ್ತು). ಆದರಲ್ಲೂ ಇಷ್ಟು ಸಣ್ಣ, ಕೇವಲ 8 ಸೆ ಮೀ ಉದ್ದವಿರುವ ಈ ಹಾವು ಪಳೆಯುಳಿಕೆಯಾಗಿರುವುದು ಸೋಜಿಗ. ಇದಕ್ಕೆ ಮುಖ್ಯ ಕಾರಣ, ಈ ಪಳೆಯುಳಿಕೆಯು ನಮಗೆ ಹೆಚ್ಚಾಗಿ ಸಿಗುವ ಸಂಚಿತ ಶಿಲೆಯ ಪಳೆಯುಳಿಕೆಯ ಹಾಗಲ್ಲದೆ, ಅದೃಷ್ಟಕ್ಕೊಮ್ಮೆ ಮರದಲ್ಲಿ ಸುರಿಯುವ ಸಸ್ಯರಸದಲ್ಲಿ ಜೀವಿಯೊಂದು ಸಿಲುಕಿ ಸಾವಿರಾರು ವರುಷ ಸಂರಕ್ಷಣೆಯಾಗಿ ಉಂಟಾಗುವ ಪಳೆಯುಳಿಕೆಯಂತೆ ನಿರ್ಮಾಣವಾದ್ದರಿಂದ ಎನ್ನುತ್ತಾರೆ ಕ್ಯಾಡ್‌ವೆಲ್(ಕೆನಡಾ ದ ಆಲ್ಬರ್ಟಾವಿಶ್ವವಿದ್ಯಾಲಯದ ಪುರಾತತ್ವಶಾಸ್ತ್ರಜ್ಞ).

ಇದೇ ಇಷ್ಟು ಸಣ್ಣ ಗಾತ್ರದ ಹಾವು ಸಂಚಿತ ಶಿಲೆಗಳಾಗುವ ಸ್ಥಳದಲ್ಲಿ ಸಿಲುಕಿಕೊಂಡಿದ್ದರೆ, ಅಲ್ಲಿನ ಒತ್ತಡ -ತಾಪಗಳಿಗೆ ದೇಹದ ಎಲ್ಲ ಭಾಗಗಳು ಛಿದ್ರವಾಗಿ ಖಂಡಿತವಾಗಿಯೂ ಗುರುತಿಸಲಾಗುತ್ತಿರಲಿಲ್ಲ ಎಂದೂ ಸೇರಿಸುತ್ತಾರೆ. ಆದರೆ ಅದರ ದುರಾದೃಷ್ಟವೋ ಅಥವಾ ನಮ್ಮ ಅದೃಷ್ಟವೋ, ಅದು ಮರದಲ್ಲಿ ಹೊರಹೊಮ್ಮುವ ಸಸ್ಯರಸ ಜೊತೆಗೆ ಸೇರಿ ತನ್ನ 3ಡಿ ದೇಹವನ್ನು ಹಾಗೆಯೇ ಉಳಿಸಿಕೊಂಡಿದೆ.

ಈ ಪಳೆಯುಳಿಕೆಯು ಕೆಲವು ವಿಶೇಷತೆಗಳನ್ನು ಒಳಗೊಂಡಿದ್ದು ಈ ಬಗೆಯ ಹಾವುಗಳು ಕೋಟ್ಯಂತರ ವರ್ಷಗಳ ಹಿಂದೆ ಇಲ್ಲಿನ ಮರಗಳ ಕೊಂಬೆಗಳ ಮೇಲೆ ನೇತಾಡುತ್ತಿದ್ದವು ಎಂದು ನಿದರ್ಶಿಸುತ್ತವೆ. ಜೊತೆಗೆ ನಮ್ಮ ಸುತ್ತಲಿನ ನಿಸರ್ಗದ ಸೋಜಿಗಗಳು ನಾವು ಹುಡುಕಲೆಂದೇ ಏನೋ ಕಣ್ಣಾ ಮುಚ್ಚಾಲೆಯಾಡುತ್ತಿದೆ ಎಂಬ ಭಾವನೆ ಮನದಲ್ಲಿ ಸುಳಿದಾಡುತ್ತದೆ.
ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.