ಕೊಳೆತ ಗ್ರಹ

ಕೊಳೆತ ಗ್ರಹ

“ಕೊನೆಗೂ ಪ್ರಶಸ್ತಿ ಸಿಗಲೇ ಇಲ್ಲ ಛೇ… ” ಎಂದುಕೊಂಡು ಹಿಂತಿರುಗಬೇಕಾಯಿತು .

ಹೀಗಂದುಕೊಂಡಿದ್ದು ನಾನು ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ. ಅಂದು ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಲ್ಲರಂತೆ ನಾನು ಉತ್ಸುಕನಾಗಿದ್ದೆ. ಇಲ್ಲಾ,  ಹಿಂದಿನ ವರ್ಷ ಚಿತ್ರಕಲೆಯಲ್ಲಿ ಪ್ರಶಸ್ತಿ ನನಗೇ ಬಂದಿದ್ದರಿಂದ ಎಲ್ಲರಿಗಿಂತ ಹೆಚ್ಚು ಉತ್ಸುಕನಾಗಿ ಕಾಯುತ್ತಿದ್ದೆ. ಸ್ಪರ್ಧೆ ಇದ್ದರೂ

ಕೂಡಾ ಎಂದಿನಂತೆ ತರಗತಿಗಳು-ಪಾಠಗಳು ಇದ್ದೇ ಇದ್ದವು. ‘ಏನಪ್ಪಾ ಇವರು ಇಂತಹ ದಿನಗಳಲ್ಲಾದರು ರಜೆ ಕೊಡಬಾರದಿತ್ತೆ?’ ಎಂದು ಮನಸಿನಲ್ಲಿ ಕೂಗು ಪದೇ-ಪದೇ ಕೇಳಿ ಬರುತ್ತಿದ್ದರೂ, ಅದಕ್ಕಿಂತ ಚಿತ್ರಕಲೆ ಮತ್ತು ಪ್ರಶಸ್ತಿ ಬಗೆಗಿನ ಗಮನ ಹೆಚ್ಚಿದ್ದರಿಂದ ಪರವಾಗಿಲ್ಲ ಅಂದುಕೊಂಡೆ

ಸ್ಪರ್ಧೆ ಮಧ್ಯಾಹ್ನ ಊಟದ ನಂತರ ಇತ್ತು, ಎಂದಿನಂತೆ ಆ ದಿನವೂ ಒಂದು ಮುದ್ದೆ ತಿಂದು ಡೈನಿಂಗ್ ಹಾಲ್ ನಿಂದ  ಬರುವಾಗ ನನ್ನ ಸ್ನೇಹಿತರೆಲ್ಲ ದೊಡ್ಡಸ್ವಾಮೀಜಿಯ ಬಳಿ ಹೋಗಿ ಯಾವುದೋ ರೀತಿಯ ಅರೆಪಾರದರ್ಶಕ ಹಸಿರು ಮಾತ್ರೆಯನ್ನು ಕೈಯಲ್ಲಿ ಹಿಡಿದು ಏನೇನೋ ಮಾತನಾಡಿಕೊಂಡು ಅಲೆಯುತ್ತಿದ್ದರು.

ಕುತೂಹಲ ತಾಳದೆ ಒಬ್ಬನನ್ನು ಹಿಡಿದು ಕೇಳಿದೆ ‘ಲೋ… ಏನೋ ಇದು ಹೀಗಿದೆ?’ ಎಂದು.  ಅದಕ್ಕೆ ಅವನು ‘ಮಗಾ ಇದು ಮೀನು ಮಾತ್ರೆ ಇದನ್ನು ತಿಂದರೆ ಬುದ್ಧಿ ಜಾಸ್ತಿ ಬರುತ್ತೆ’. ಎಂದೊಡನೆ ನನ್ನ ಕಾಲುಗಳು ನನ್ನ

ಅನುಮತಿಗೆ ಕಾಯದೆ ಸ್ವಾಮೀಜಿಯ ಬಳಿಗೆ ಕರೆದೊಯ್ದು, ನನ್ನ ಕೈಯನ್ನು ಚಾಚಿ ಒಂದು ಮಾತ್ರೆ ತೆಗೆದುಕೊಳ್ಳುವಂತೆ ಮಾಡಿತು. ನಂತರದ ಕಾರ್ಯಕ್ರಮ ಚಿತ್ರಕಲೆ ಆದ್ದರಿಂದ ಉಪಯೋಗವಾಗಬಹುದೆ ಅಂದುಕೊಂಡೆ.

ಹೀಗೆ ಮಾತ್ರೆ ತೆಗೆದುಕೊಂಡು ಬರುವಾಗ ನನ್ನ ತಲೆ ಸುಮ್ಮನಿರದೆ ಹೇಳಿತು ‘ಲೋ… ಏನೋ ಇದು ಹೀಗಿದೆ? ಹಸಿರು ಅರೆಪಾರದರ್ಶಕ ಮಾತ್ರೆ? ಒಮ್ಮೆ ಇದನ್ನು ಪೀಸ್ ಮಾಡಿ ನೋಡಬೇಕು ಅನಿಸ್ತಿಲ್ವಾ??’ ಎಂದು . ಹೌದಲ್ಲ ಎನಿಸಿ ಅದರೊಳಗೆ ಏನಿದೆ ಎಂದು ಅರಿಯಲು ಎಷ್ಟೋ ಪ್ರಯತ್ನ ಪಟ್ಟೆ. ಆದರೆ ರಬ್ಬರ್ ನಂತಿದ್ದ ಅದು ನನಗೆ ಪೈಲ್ವಾನನಂತೆ ಸವಾಲನ್ನೊಡ್ಡಿತು. ಸೋಲೊಪ್ಪಿಕೊಳ್ಳಲು ಇಷ್ಟವಿರದ ನಾನೂ ಸಹ ಬಿಡದೆ ಪ್ರಯತ್ನಿಸುತ್ತಿದ್ದೆ. ಅಷ್ಟರಲ್ಲಿ ‘ಸ್ಪರ್ಧೆ ಸಮಯ’ ಎಂದು ಎಚ್ಚರಿಕೆಯ ಬೆಲ್ ಬಾರಿಸಿತು, ಅವಸರದಲ್ಲಿ ಅದನ್ನು ನನ್ನ ಅಂಗಿಯ ಜೇಬಿಗೆ ಇಳಿಸಿ ಓಡಿದೆ.

 ಬಂದು ಸ್ಪರ್ಧೆಗೆ ಸಾಲಾಗಿ ಕೂತು ಹಾಳೆಯಲ್ಲಿ ಇನ್ನೇನು ಚಿತ್ರ ಬಿಡಿಸಬೇಕು ಅನ್ನುವಷ್ಟರಲ್ಲಿ ಎಲ್ಲೋ ಎಂದೂ ಕಾಣದ ಕೆಟ್ಟ ವಾಸನೆ ಬರಲಾರಂಭಿಸಿತು. ಕೊಳೆತ ಮೊಟ್ಟೆ ದುರ್ಗಂಧದಂತಿತ್ತು ಆ ವಾಸನೆ. ಆಚೀಚೆ ಒಮ್ಮೆ ಕಣ್ಣಾಯಿಸಿದೆ, ಕಣ್ಣು ತನ್ನ ಕೆಲಸ ದೃಷ್ಟಿಯ ಗ್ರಹಿಕೆ ಎಂಬುದನ್ನು ಮರೆತು, ಮೂಗಿನ ಕೆಲಸದಲ್ಲಿ ಮೂಗು ತೂರಿಸದ್ದಕ್ಕೋ ಏನೋ ಎಂತಹ ಸುಳಿವು ಸಿಗಲಿಲ್ಲ. ಮತ್ತೆ ತಲೆ ತಗ್ಗಿಸಿ ಬರೆಯಲು ಹೋದೆ ಮತ್ತದೇ ದುರ್ಗಂಧ. ಈಗ ಮೂಗು ತನ್ನ ಕೆಲಸವನ್ನು ತಾನು ನಿಷ್ಠೆಯಿಂದ ಮಾಡುತ್ತಿರುವ ನಿದರ್ಶನವಾಗಿ ಆ ದುರ್ಗಂಧದ ತೀವ್ರತೆಯು ಹೆಚ್ಚಾಗಿರುವುದನ್ನು ಚೆನ್ನಾಗಿಯೇ ಗ್ರಹಿಸಿತು. ಆಗ ಒಮ್ಮೆ ನನ್ನ ಜೇಬಿಗೆ

ಕಡೆಗೆ ಕಣ್ಣು ಹೋಯಿತು. ಆಗ ತಿಳಿಯಿತು ಇದೆಲ್ಲಾ ಅರೆಪಾರದರ್ಶಕ ಹಸಿರು ಬಣ್ಣದ ಮೀನು ಮಾತ್ರೆ ಮೇಲೆ ನಾನು ನಡೆಸಿದ ಪ್ರಯೋಗದ ಫಲ ಆ ಮಾತ್ರೆ ಯಾವುದೋ ನೂಕು ನುಗ್ಗಲಿನಲ್ಲಿ ತನ್ನ ಸೆರೆಮನೆಯಲ್ಲೇ ಕೊನೆಯುಸಿರೆಳೆದಿದೆ ಎಂದು. ಆ ಸುಗಂಧವನ್ನು ತಾಳಲಾರದೆ. ಸುಮ್ಮನಿರಲಾರದೆ. ಚಿತ್ರವೂ ಬರೆಯಲಾಗದೆ. ಪ್ರಶಸ್ತಿಯು ಕೈ ಬಿಟ್ಟು ಹಾರಿ ಹೋಯಿತು. ನೋಡಿ ಹೀಗೆ ಇಲ್ಲಿ ಆ ಘಟನೆಯನ್ನು ನೆನಪಿಸಿಕೊಳ್ಳುವಾಗಲೂ ಅದೇ ವಾಸನೆ ಮೂಗಿನ ತುದಿಯಲ್ಲಿ ಬಂದಂತಿದೆ. ಅಬ್ಬಾ..!

ಅದು ಹಳೆಯ ಕಥೆ. ನಮ್ಮ ಸೌರಮಂಡಲದಲ್ಲಿ ಎಂಟು ಪ್ಲಸ್ ಒಂದು ಗ್ರಹ ಇರುವುದು ನಿಮಗೆ ತಿಳಿಯದೆ? ಇವುಗಳಲ್ಲಿ ಹೆಚ್ಚು ಸುಂದರವಾಗಿ ಕಾಣುವ ಗ್ರಹ ನಮ್ಮ ಭೂಮಿ. ಹಾಗೆಯೆ ಯುರೇನಸ್ ಗ್ರಹವೂ ಕೂಡ ಏನು ಕಮ್ಮಿಯಿಲ್ಲ, ಅದರ ಬಣ್ಣ ಎಲ್ಲರ ಮನಸೆಳೆಯುತ್ತದೆ. ಆದರೆ ಈ ಯುರೇನಸ್ ಗ್ರಹದ ಮೇಲೆ ಯಾವ ಭೂಪರು ಹೋಗಿ ಈ ಮೀನಿನ ಮಾತ್ರೆಗಳನ್ನು ಒಡೆದು ಎಸೆದರೋ ತಿಳಿಯದು, ಅಲ್ಲೂ ಅದೇ ವಾಸನೆ. ಹೌದು ರೀ ಸತ್ಯವಾಗಲು… ಚಿತ್ರದಲ್ಲಿಯೇ ಎಲ್ಲರ ಕಣ್ ಸೆಳೆಯುವ ಯುರೇನಸ್ ಗ್ರಹದ ಅಂದ ನೀವು ನೋಡಿರಬಹುದು. ಅಷ್ಟು ಸುಂದರವಾದ ಗ್ರಹದ ಮೇಲಿನ ವಾಸನೆ ಬಲ್ಲಿರೇನು?

ಬೇಡಪ್ಪ ಬೇಡ ಎನ್ನುವಷ್ಟು ದುರ್ವಾಸನೆ ಬೀರುತ್ತದೆಯಂತೆ ಈ ಗ್ರಹ. ಕೊಳೆತ ಮೊಟ್ಟೆಯ ದುರ್ವಾಸನೆಯೇ ತುಂಬಿ ತುಳುಕುತ್ತಿದೆ ಇಲ್ಲಿ. ಛೆ… ಎನಿಸಿದರೂ ಇದು ಸತ್ಯ.

ಹಾಗಾದರೆ ಇದಕ್ಕೆ ಕಾರಣವೇನು?

ಇದಕ್ಕೆ ಉತ್ತರ ಸರಳ ರಸಾಯನ ಶಾಸ್ತ್ರದಲ್ಲಿ ಹುಡುಕಿದಲ್ಲಿ ದೊರೆಯಬಹುದು. ಹಾ… ಹೈಡ್ರೋಜನ್ ಸಲ್ಫೈಡ್ ಯುಕ್ತ ಮೋಡಗಳ ಹೊಂದಿರುವ ಕಾರಣ ಗ್ರಹದ ನಿಜವಾದ ವಾಸನೆ ಬಯಲು ಮಾಡಿದ್ದರೆ ಇಂಗ್ಲೆಂಡ್ ನ ಖಗೋಳ ವಿಜ್ಞಾನಿ ಲೀ ಫ್ಲೆಚೆರ್. ಅವರ ಈ ಸಂಶೋಧನೆಯನ್ನು Gemini North ಎಂಬ ಟೆಲಿಸ್ಕೋಪ್ ಗೆ ಅಳವಡಿಸಲಾಗಿರುವ ‘spectrograph’ ಎಂಬ ಸಾಧನದಿಂದ ಸಾಧಿಸಲಾಗಿದೆ. ಈ ವಿಷಯ ತುಂಬಾ ಹೊಸತು ಎನಿಸಿದರೂ ಅಷ್ಟು ಹೊಸತೇನಲ್ಲ ಬಿಡಿ ಏಕೆಂದರೆ ಇದೇ ಯುರೇನಸ್ ನಲ್ಲಿ ಹೈಡ್ರೋಜನ್ ಸಲ್ಫೈಡ್ ಇರಬಹುದು ಎಂದು 1990ರಲ್ಲೇ ವಿಜ್ಞಾನಿಗಳು, ಆ ದಿನಗಳಲ್ಲಿ ಖಗೋಳಯಾನಕ್ಕೆ ಕಳುಹಿಸಿದ್ದ ‘Voyager 2’ ಎಂಬ ಉಪಗ್ರಹದ ಸಹಾಯದಿಂದ ಊಹಿಸಲಾಗಿತ್ತು. ಅದೇ ವಿಷಯವನ್ನು ಈಗ ಸಾಬೀತು ಮಾಡಲಾಗಿದೆ. ಯುರೇನಸ್ ಗ್ರಹದಲ್ಲಿರುವ ಜಲಜನಕ ಸಲ್ಫೈಡ್ ಮೋಡ ಪಟ್ಟಕಗಳು ಅನಿಲಭರಿತ ಗ್ರಹಗಳಾದ ಗುರು ಹಾಗು ಶನಿ  ಗ್ರಹಗಳಿಂದ ಯುರೇನಸ್ ಗ್ರಹವನ್ನು  ಬೇರ್ಪಡಿಸುತ್ತದೆ. ಅಷ್ಟೇ ಅಲ್ಲದೇ ಈ ಕೊಳೆತ ಗ್ರಹ ನಮಗೆ ಸೌರವ್ಯೂಹದ ಹುಟ್ಟಿನ ಬಗ್ಗೆ ಕೆಲ ಮಾಹಿತಿಗಳನ್ನು ಬಿಚ್ಚಿಡುತ್ತವೆ ಎನ್ನುತ್ತಾರೆ ಲೀ ಫ್ಲೆಚೆರ್.

ಹೈಡ್ರೋಜನ್ ಸಲ್ಫೈಡ್, ಅಮೋನಿಯಂಗಿಂತ ಕಡಿಮೆ ಉಷ್ಣಾಂಶದಲ್ಲಿ ಹೆಪ್ಪುಗಟ್ಟುತ್ತದೆ ಹಾಗು ಯುರೇನಸ್ ಗ್ರಹದಲ್ಲಿ ಹೈಡ್ರೋಜನ್ ಸಲ್ಫೈಡ್ ಕೇವಲ ಅನಿಲದ ಮೋಡಗಳಷ್ಟೇ ಅಲ್ಲದೆ  ಘನ ರೂಪದಲ್ಲಿ ದೊರೆಯಲು ಅಂದರೆ ಇವು ಐಸ್ ಗಡ್ದೆಗಳಾಗಿ ದೊರೆಯುತ್ತದೆ. ಈ ಹೈಡ್ರೋಜನ್ ಸಲ್ಫೈಡ್ ಅನಿಲ ಸೂರ್ಯನಿಂದ ಸ್ವಲ್ಪ ಹೆಚ್ಚು ದೂರದಲ್ಲಿ ಇದ್ದರೆ ಮಾತ್ರ ಘನೀಕೃತವಾಗಲು ಸಾಧ್ಯ ಅಲ್ಲವೇ?. ಹಾಗಾದ್ದರಿಂದಲೇ ಇರಬೇಕು ನಮ್ಮ ಅನಿಲ ಕಾಯಗಳಾದ ಗುರು ಮತ್ತು ಶನಿ ಗ್ರಹಗಳಾಚೆ ಯುರೇನುಸ್ ಮತ್ತು ನೆಪ್ಚೂನ್ ನಂತಹ ಹೆಪ್ಪುಗಟ್ಟಿದ ಐಸಿ ಗ್ರಹಗಳಾಗಿರುವುದು. ಇದರಿಂದ ತಿಳಿಯುವುದು ಸೌರಮಂಡಲದ ಒಂದೊಂದು ಗ್ರಹಗಳ ರಚನೆಯ ಶೈಲಿ ಬೇರೆ ಬೇರೆ ರೀತಿಯಲ್ಲಾಗಿವೆ. ಹಾಗು ಬೇರೆ ಬೇರೆ ಮೂಲ ವಸ್ತುಗಳಿಂದಾಗಿದೆ ಎಂದು.

ಹಾಗಾದರೆ ನಮ್ಮ ಭೂಮಿಯಲ್ಲಿನ ಅಪಾರ ಸಂಖ್ಯೆಯ ಜೀವಕೋಟಿ ಹುಟ್ಟಿಕೊಳ್ಳಲು ಭೂಮಿಯ ರಚನೆ ಸೂರ್ಯನಿಂದ ನಿರ್ದಿಷ್ಟ ದೂರ ಮತ್ತು ಜೀವ ಧರಿಸಲು ಶಕ್ತಿ ಇರುವ ಕೆಲ ಮೂಲವಸ್ತುಗಳ ಸಮ್ಮಿಶ್ರಣದಿಂದ ಬಂದಿರಬಹುದು ಎಂಬ ಊಹೆ ನನ್ನದು. ಅಷ್ಟೇ ಅಲ್ಲ ನಮ್ಮ ಜೀವನವೂ ಈ ಗ್ರಹಗಳ ಹಾಗೆಯೇ, ನಮ್ಮಲ್ಲಿನ ಮೂಲವಸ್ತು(ಸದ್ಗುಣ)ಗಳ ನಿರ್ದಿಷ್ಟ ಪ್ರಮಾಣದಂತೆ ನಾವೂ ರೂಪುಗೊಳ್ಳುತ್ತೇವೆ. ಒಂದೇ ವ್ಯತ್ಯಾಸವೆಂದರೆ ನಾವೇ ನಮ್ಮ ಮೂಲವಸ್ತುಗಳನ್ನು ಬದಲಾಯಿಸಬಹುದು ಹಾಗೂ ಗ್ರಹಗಳಿಗೆ ಸಾಧ್ಯವಿಲ್ಲ. !

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

Spread the love
error: Content is protected.