ತೆಂಗಿನ ಮರ
ಮಲೆನಾಡಿನ ಸೆರಗಂಚಿಗೆ ಇರುವುದೇ ಸುಂದರ ಧಾರವಾಡ. ಇದಕ್ಕೆ ಮುಕುಟವಿಟ್ಟಂತೆ ಇರುವುದು ಕಲ್ಯಾಣನಗರ. ಇಲ್ಲಿಯೇ ಇರುವುದು ನಮ್ಮ ಮನೆ. ಕಲ್ಯಾಣನಗರದಲ್ಲೇನು ಅಂಥ ವಿಶೇಷ ಎಂಬ ಆಲೋಚನೆ ನಿಮಗೆ ಬಂದಿರಲೂ ಸಾಕು. ಆ ವಿಶೇಷ ಇರುವುದು ಇಲ್ಲಿನ ವಾತಾವರಣದಲ್ಲಿ. ಧಾರವಾಡದಲ್ಲಿನ ಯಾವುದೇ ಭಾಗಕ್ಕಿಂತಲೂ ಕಲ್ಯಾಣನಗರದಲ್ಲಿ ಮಳೆ ಬೀಳುವುದು ಹೆಚ್ಚು. ಇಲ್ಲಿ ಸದಾ ತಂಪಿನ ವಾತಾರಣ. ಹಾಗೆಯೇ ನೇರ ಹಾಗೂ ವಿಶಾಲವಾದ ರಸ್ತೆಗಳು ಕೂಡ ಇಲ್ಲಿನ ಆಕರ್ಷಣೆಯ ಸಂಗತಿಗಳು. ಕಲ್ಯಾಣನಗರದಲ್ಲಿ ಈ ಬಗೆಯ ಮನಮೋಡಿ ಮಾಡುವ ವಾತಾವರಣ ಏಕೆಂಬುದನ್ನು ನಾವು ಗಮನಿಸಿದಾಗ, ಇಲ್ಲಿನ ಬೀದಿ ಬದಿಯ ಗಿಡ-ಮರಗಳ ಪಾತ್ರ ಬಹಳಷ್ಟಿರುವುದು ಗಮನಕ್ಕೆ ಬಂದಿತು. ಹಸುರಿನಿಂದ ಕಂಗೊಳಿಸುವ ಮರಗಳು, ಮರಗಳಲ್ಲಿನ ಬಗೆಬಗೆಯ ಬಣ್ಣದ ಹೂವುಗಳು, ನಮ್ಮ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿರುವುದರಿಂದ, ನಮ್ಮ ಮನಸ್ಸೂ ಅದರಂತೆ ತಿಳಿಯಾಗಿ ಅರಳಿನಿಂತಿರುತ್ತದೆ.
ಈ ಗಿಡ-ಮರ-ಬಳ್ಳಿಗಳೊಂದಿಗೆ ಇನ್ನೂ ಹೆಚ್ಚು ಹೆಚ್ಚು ಮಾತನಾಡಬೇಕು ಎನಿಸಿತು. ಸರಿ ಮತ್ಯಾಕೆ ತಡ ಕೂಡಲೇ ನಮ್ಮ ಮನೆಯ ಸದಸ್ಯರೆಲ್ಲಾ ಸೇರಿ ಗಿಡ-ಮರಗಳೊಟ್ಟಿಗೆ ಮಾತಾಡಲು ಹೊರಟೇ ಬಿಟ್ಟೆವು. ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆಯಂತೆ ಮೂರು ತಿಂಗಳ ಕಾಲ ಸಸ್ಯ ಸಮೀಕ್ಷೆ ಮಾಡಲಾರಂಭಿಸಿದೆವು. ಈ ನಿಟ್ಟಿನಲ್ಲಿ ಸುಮಾರು 38 ವಿವಿಧ ಬಗೆಯ ಮತ್ತು ಸುಮಾರು 439 ಮರಗಳೊಂದಿಗೆ ನಮ್ಮ ಸಂಪರ್ಕ ಬೆಳೆಯಿತು. ನಮ್ಮ ಸಂಬಂಧ ಏರ್ಪಟ್ಟಿದ್ದು ಕಲ್ಯಾಣ ನಗರದ ಬೀದಿ ಬದಿಯ ಗಿಡ-ಮರಗಳ ಜೊತೆಗಾದರೂ, ಕಾಂಪೌಂಡ್‍ನ ಒಳಗಡೆಯಿಂದ ರಸ್ತೆಯ ಹೊರಗೆ ಚಾಚಿಕೊಂಡಿದ್ದ ಮರಗಳೂ ಕೂಡ ನಮ್ಮನ್ನು ಕೂಗಿ ಕರೆದವು. ಏಕೆಂದರೆ ಆ ಮರಗಳೂ ಕೂಡ ಬೀದಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ತಮ್ಮ ಪಾತ್ರ ವಹಿಸಿದ್ದವು.
`ಅರೇ.. ಕಲ್ಯಾಣನಗರದಲ್ಲಿ ಇಷ್ಟೊಂದು ತೆಂಗಿನಮರಗಳಾ?’ ಅಂದುಕೊಂಡೆ. ತಿಂಗಳಲ್ಲಿ ಮೂರು ಸಲವಾದರೂ ಬಂದು, `ಅಕ್ಕಾಎಳ್ನೀರ್ಇಳಿಸಲಾ?’ ಎಂದು ಪದೇ ಪದೇ ಕೇಳುತ್ತಿದ್ದ ಎಳೆನೀರು ಮಾರುವ ಹುಡುಗನ ನೆನಪಾಯಿತು. ಏಕೆಂದರೆ ನಮ್ಮ ಮನೆಯ ಕಾಂಪೌಂಡಿನಲ್ಲಿಯೇ ಮೂರು ತೆಂಗಿನಮರಗಳಿವೆ.
ಮಲೆನಾಡಿನ ಕಡೆಗೆ ಇಷ್ಟೊಂದು ತೆಂಗನ್ನು ಬೆಳೆಯುತ್ತಾರಲ್ಲ, ಈ ಮರದ ಮೂಲ ಯಾವುದು? ಇದು ಎಲ್ಲಿಂದ ಬಂತು? ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಕುತೂಹಲದಿಂದ ತೆಂಗಿನಮರದ ಮೂಲವನ್ನು ಹುಡುಕುತ್ತಾ ಹೊರಟೆ. ಬಗೆ ಬಗೆಯ ಮಾಹಿತಿ ಸಿಕ್ಕಿತು.
ಕೆಲವರು ಸಸ್ಯತಜ್ಞರ ಪ್ರಕಾರ ಇದು ದಕ್ಷಿಣ ಅಮೇರಿಕದಿಂದ ಬಂದದ್ದು, ಇನ್ನು ಕೆಲವರ ಪ್ರಕಾರ ಇದು ಹಿಂದೂ ಮಹಾಸಾಗರದಲ್ಲಿರುವ (ಇಂಡಿಯನ್ ಓಷನ್) ಕೋಕೋಸ್ ದ್ವೀಪದಿಂದ ಬಂದದ್ದು ಎಂಬ ಮಾಹಿತಿ ಸಿಕ್ಕಿತು… ತೆಂಗಿನ ಕಾಯಿಗಳು ನೀರಿನಲ್ಲಿ ಬಿದ್ದು ತೇಲುತ್ತ ತೇಲುತ್ತ ಎಲ್ಲ ಕಡೆಗೂ ಬಂದವು ಎಂದು ಅವರು ಹೇಳುತ್ತಾರೆ. ಇದೆಲ್ಲ ಒಂದು ಕಥೆ ಥರ ನನಗೆ ಅನಿಸಿತು. ತೆಂಗಿನಮರದ ಮೂಲಸ್ಥಾನದ ಕುರಿತು ನಿಖರವಾದ ಮಾಹಿತಿ ಸಿಕ್ಕಲಿಲ್ಲ.
ಆದರೆ, ಕುತೂಹಲಕಾರಿ ಭಾಷಿಕ ಮಾಹಿತಿ ನನಗೆ ರೋಮಾಂಚನ ಉಂಟು ಮಾಡಿದವು! ಪೋರ್ಚುಗೀಸ್ ಭಾಷೆಯಲ್ಲಿ ತೆಂಗಿನಮರವನ್ನು `ಕೋಕೋಸ್’ ಎಂದು ಕರೆಯುತ್ತಾರಂತೆ. ಆ ಭಾಷೆಯಲ್ಲಿ ಕೋಕೋಸ್ ಎಂದರೆ ಕೋತಿ/ಮಂಗ/ಮಂಗ್ಯಾ ಎಂಬ ಅರ್ಥವಂತೆ. ತೆಂಗಿನಕಾಯಿಯ ಜುಬ್ಬರವನ್ನು ಸುಲಿದ ಬಳಿಕ ಒಳಗಿನ ಕಾಯಿಯ ಹೊರಭಾಗ ಕೋತಿಯ ತಲೆಯಂತೆ ಕಂಡದ್ದರಿಂದ ಈ ಹೆಸರು ಬಂದಿತು ಅಂತಲೂ ಹೇಳುತ್ತಾರೆ. (ಇದಕ್ಕೆ ಬೇರರ್ ಆಫ್ ನಟ್ಸ್/ಕಾಯಿಗಳನ್ನು ಹಿಡಿದಿಡುವ ಮರ/ಕಾಯಿರಕ್ಷಕ ಎನ್ನುವರು) ಅದೇನೆ ಇರಲಿ ಸಾವಿರಾರು ವರ್ಷಗಳಿಂದಲೂ ತೆಂಗಿನಮರಗಳು ಎಲ್ಲ ಕಡೆಯಲ್ಲಿಯೂ ಕಂಡು ಬರುತ್ತವೆ.
ತೆಂಗಿನಕಾಯಿಯನ್ನು ಭೂಮಿಯಲ್ಲಿ ನೆಟ್ಟ 3-6 ತಿಂಗಳ ನಂತರ ಸಸಿ ಕಾಣಿಸಿಕೊಳ್ಳುತ್ತದೆ. ಈ ಮರ ಸುಮಾರು 300 (ಸಾಂಪ್ರದಾಯಕ ಮರಗಳು ಈಗಲೂ ಇವೆ) ಅಡಿ ಎತ್ತರ ಬೆಳೆಯುತ್ತದೆ. ತೆಂಗಿನಮರದ ಬೊಡ್ಡೆ ಬಹಳ ದಪ್ಪವಾಗಿರುತ್ತದೆ ಮತ್ತು ಇದು ಬೆಳೆಯುತ್ತ ಹೋದಂತೆಲ್ಲಾ ಮೇಲೆ ಸಣ್ಣದಾಗುತ್ತಾ ಸಾಗುತ್ತದೆ. ಈ ಮರವು ಕಂಬದಂತೆ ವೃತ್ತಾಕಾರವಾಗಿಯೇ ಬೆಳೆಯುತ್ತಾ ಹೋಗುತ್ತದೆ. ಇದರ ಇನ್ನೊಂದು ವಿಶೇಷತೆಯೆಂದರೆ, ಈ ಗಿಡದಲ್ಲಿ ಹೆಣ್ಣು ಮತ್ತು ಗಂಡು ಹೂವುಗಳು ಒಂದೇ ಕಡೆ ಇರುವುದು. ಇದರ ಗರಿ(ಎಲೆ)ಯು ಸುಮಾರು 6 ರಿಂದ 9 ಅಡಿ ಉದ್ದ ಇರುತ್ತದೆ. ಗರಿಯಲ್ಲಿನ ಕಡ್ಡಿ ಸುಮಾರು 3 ರಿಂದ 5 ಅಡಿ ಉದ್ದ ಬರ್ಚಿಯ ಆಕಾರದಲ್ಲಿರುತ್ತದೆ.
ತೆಂಗಿನ ಉಪಯೋಗದಲ್ಲಿ ಮಹತ್ವದ ವಿಷಯವೆಂದರೆ, ಇದು ಔಷಧಿಯ ಗುಣವನ್ನು ಹೊಂದಿರುವುದು. ಇದಕ್ಕೆ ಒಂದು ಉದಾಹರಣೆಯೆಂದರೆ, 2ನೇ ಮಹಾಯುದ್ಧ ನಡೆದ ಸಂದರ್ಭದಲ್ಲಿ ಗಾಯಗೊಂಡು ನಿತ್ರಾಣವಾದ ಸೈನಿಕರಿಗೆ ಎಳನೀರನ್ನು ಅವರ ದೇಹದಲ್ಲಿ ಇಂಜೆಕ್ಟ್ ಮಾಡುತ್ತಿದ್ದರು. ಇದರಿಂದ ನಿತ್ರಾಣವಾದ ಸೈನಿಕರು ತಕ್ಷಣವೇ ಚೇತರಿಸಿಕೊಳ್ಳುತ್ತಿದ್ದರು. ಎಳೆನೀರು ರೋಗಾಣುಮುಕ್ತವಾಗಿರುವ ಅಂಶವನ್ನು ಅಷ್ಟು ಹಿಂದೆಯೇ ಗುರುತಿಸಿದ್ದರು ಎಂಬ ವಿಷಯ ತಿಳಿದು ಆಶ್ಚರ್ಯವಾಯಿತು.
ನಮ್ಮಲ್ಲಿ ತೆಂಗಿನಕಾಯಿ ಇಲ್ಲದೆ ಅಡುಗೆಯನ್ನು ಮಾಡುವುದೇ ಇಲ್ಲ. ಒಂದು ವೇಳೆ ಅಡುಗೆಗೆ ಹೆಚ್ಚಾಗಿ ತೆಂಗಿನಕಾಯಿ ಬಳಸದೇ ಇರುವವರಿಗೂ ಕೂಡ, ತೆಂಗಿನಕಾಯಿ ಒಡೆಯದೆ ಪೂಜೆಯಂತೂ ಪೂರ್ಣವಾಗುವುದಿಲ್ಲ. ಇಷ್ಟೊಂದು ಮಹತ್ವವಿರುವ ತೆಂಗು ನಮ್ಮ ದೇಶದ್ದು ಅಲ್ಲ ಎಂಬ ವಿಚಾರವೇ ಏಕೋ ನನ್ನಲ್ಲಿ ಕಸವಿಸಿಯನ್ನು ಉಂಟುಮಾಡಿತು. ಮರುಕ್ಷಣವೇ `ತೆಂಗಿನಮರ ಎಲ್ಲಿಂದ ಬಂದರೇನಂತೆ, ನಮ್ಮ ನಮ್ಮ ಮನೆ-ಮನಸುಗಳಲ್ಲಿ ತೆಂಗಿಗೆ ವಿಶೇಷ ಸ್ಥಾನ ಇರುವುದಂತೂ ನಿಜ. ಪ್ರಕೃತಿಯಲ್ಲಿರುವುದೆಲ್ಲ ನಮ್ಮದಾದ ಮೇಲೆ, ಎಲ್ಲವೂ ನಮ್ಮದೇ ಅಲ್ಲವೆ. ನಾವೂ ಕೂಡ ಪ್ರಕೃತಿಯ ಒಂದು ಭಾಗವೇ ಅಲ್ಲವೆ..’ ಎಂಬ ಆಲೋಚನೆಯೊಂದಿಗೆ ಮನಸ್ಸು ನಿರಾಳಗೊಂಡು ವಿಶಾಲವಾಯಿತು.
ತೆಂಗಿನಮರದ ಪ್ರತಿಭಾಗವೂ ಉಪಯುಕ್ತವಾಗಿರುವುದಂತೂ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇತ್ತೀಚೆಗೆ ನಾನು ಕೂಡ ನಮ್ಮ ಮನೆಯ ಕಾಂಪೌಂಡಿನಲ್ಲಿ ಉದುರಿಬಿದ್ದ ಗರಿಯಿಂದ ಒಂದು ಕಸಬರಿಗೆ/ಪೊರಕೆಯನ್ನು ಮಾಡಿ ಉಪಯೋಗಿಸಲು ಪ್ರಾರಂಭಿಸಿದ್ದೇನೆ. ತೆಂಗಿನಮರದ ಮಹತ್ವ ಮತ್ತು ಇದರ ಉಪಯೋಗವನ್ನು ಗಮನಿಸಿದಾಗ ಈ ಮರವನ್ನು `ಕಲ್ಪವೃಕ್ಷ’ ಎಂದು ಕರೆಯುವುದು ಸಮಂಜಸವಾಗಿಯೇ ಇದೆ (ಯಾವ ಉತ್ಪ್ರೇಕ್ಷೆಯೂ ಇಲ್ಲ) ಅನಿಸಿತು.
ಯೂರೋಪಿನ ಭಾಷೆಗಳಲ್ಲಿ ತೆಂಗಿನಮರ: ಬೆಲ್ಜ್ರೀರಿಯನ್ – ಕೊಕೊಕಾಬ ಒಪೆಕ್ಸ್, ಡಚ್ – ಕೊಕೊಸ್ನೂಟ್, ಫ್ರೆಂಚ್ – ನೊಯಿಕ್ಸ್ ದೆ ಕೊಕೊ, ಜರ್ಮನಿ – ಕೊಕೊಸ್ನಸ್, ಇಟಲಿ – ನೊಸ್ ದೇ ಕೊಕೊ, ಪೊರ್ಚುಗೀಸ್ – ಕೊಕೊ, ಸ್ಪ್ಯಾನಿಶ್ – ಕೊಕೊ.
ಕರ್ನಾಟಕದ ನೆರೆ ಭಾಷೆಗಳಲ್ಲಿ ತೆಂಗಿನಮರ: ತೆಲುಗು – ಕೊಬ್ಬರಿ ಚೆಟ್ಟು, ತಮಿಳು – ತೆಂಕಾಯ್, ಬಂಗಾಲಿ – ನಾರಿಕನ್, ಗುಜರಾತಿ – ನಾರಿಯೆಲ್, ಹಿಂದಿ – ನಾರಿಯಲ್, ಮರಾಠಿ – ನಾರಳ, ತುಳು – ತಾರೆ, ತಾರೆದ ಮರ, ತಾರಾಯಿದ ಮರ, ಅಸಾಮಿ – ನಾರಿಕೊಳ್, ಬಂಗಾಲಿ- ನಾರಿಕೇಲ್, ನಾರಾಕೇಲ್, ನೀರಿಕೇಲ್, ಗುಜರಾತಿ – ನಾರಿಯಲ್.
ಆಕರ ಗ್ರಂಥಗಳು:
100 Beautiful Trees of India
Common Trees of India
Flowering trees of Bangalore,
ಲೇಖನ: ಪ್ರೇಮಾ ಶಿವಾನಂದ
ಧಾರವಾಡ ಜಿಲ್ಲೆ