ಹೊಸ ಪ್ರಪಂಚದೊಂದಿಗೆ ಹಳೆ ತಲೆಮಾರಿನ ಬುದ್ಧಿವಂತಿಕೆ

ಹೊಸ ಪ್ರಪಂಚದೊಂದಿಗೆ ಹಳೆ ತಲೆಮಾರಿನ ಬುದ್ಧಿವಂತಿಕೆ

ಮೊದಲು ಹಾವನ್ನು ಕಂಡಾಗ ನನಗೆ ಏಳು ವರ್ಷ ವಯಸ್ಸಾಗಿತ್ತು. ನಾನು ಮತ್ತು ನನ್ನಜ್ಜ ತೋಟದಲ್ಲಿ ನಡೆದು ಹೋಗುತ್ತಿದ್ದಾಗ ಸುಮಾರು ನಾಲ್ಕು ಅಡಿಗಿಂತ ಸ್ವಲ್ಪ ದೊಡ್ಡದಾದ ಹಾವು ನಾವು, ನಡೆಯುತ್ತಿದ್ದ ರಸ್ತೆಗೆ ಅಡ್ಡಲಾಗಿ  ಹರಿಯಿತು. ನಮ್ಮನ್ನು ನೋಡಿ, ತನ್ನ ಹೆಡೆ ಎತ್ತಿ ಹಿಸ್ ಎಂದು ಹೆದರಿಸಿ ಸರಿದುಹೋಯಿತು. ನಾನು ಹಾವನ್ನು ಕಂಡೊಡನೆ ಹಿಂತಿರುಗಿ ಓಡಲು ಹೊರಟಿದ್ದೆ. ಅಜ್ಜ ನನ್ನ ಕೈ ಹಿಡಿದು “ನಾವು ಅಲ್ಲಾಡದೆ ಸುಮ್ಮನೆ ನಿಂತರೆ, ಅದೇನು ಮಾಡುವುದಿಲ್ಲ ಹೊರಟುಹೋಗುತ್ತದೆ” ಎಂದು ಹೇಳಿದರು.  ಆ ಎರಡು ವಾಕ್ಯಗಳು ನನ್ನ ನೆನಪಿನಲ್ಲಿ ಅಚ್ಚಾಗಿವೆ.

ನಾನು ಅದೇ ತೋಟದಲ್ಲಿ 34 ವರ್ಷಗಳಿಂದ ವಾಸಿಸುತ್ತಿದ್ದೇನೆ. ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಮಗೆ ಅವುಗಳ ಉಪಟಳವಿಲ್ಲ. ಯಾರಿಗೂ ಹಾವು ಕಚ್ಚಿಲ್ಲ ಅಥವಾ ಹಾವಿನ ಕಡಿತದಿಂದ ನಾಯಿಗಳೂ ಸತ್ತಿಲ್ಲ. ಆಗಾಗ  ಮೊಟ್ಟೆ, ಅದನ್ನು ಕಾಪಾಡ ಹೋಗುವ ಕೋಳಿಗಳು ಕೆಲವೊಮ್ಮೆ ಹಾನಿಗೀಡಾಗಿವೆ. ಆದರೂ ನನ್ನ ಸುತ್ತಲೂ ಹಾವುಗಳಿರುವುದಕ್ಕೆ ನಾನು ಆದ್ಯತೆಯನ್ನು ನೀಡುತ್ತೇನೆ. 

ಹಲವು ವರ್ಷಗಳ ಹಿಂದೆ, ಜನರು ಹಾವುಗಳನ್ನು ಕೊಲ್ಲುವಂತಹ ಪರಿಸ್ಥಿತಿ ಏರ್ಪಡುವ ಸ್ಥಳದಿಂದ ಹಾವುಗಳನ್ನು ಸಂರಕ್ಷಿಸುವುದು ಒಂದು ಅತ್ಯುತ್ತಮ ಕಾರ್ಯ ಎಂದು ತಿಳಿದಿದ್ದೆ. ಪ್ರತಿ ಬಾರಿ ಹಾವನ್ನು ಜನ ನಿಬಿಡ ಪ್ರದೇಶದಿಂದ ಕಾಡಿನಲ್ಲಿ ಬಿಡುಗಡೆ ಗೊಳಿಸಿದಾಗ ಏನೋ ಸಾಧಿಸಿದ ತೃಪ್ತಿ ಸಿಗುತ್ತಿತ್ತು. ಹಲವರಿಗೆ ಹಾವುಗಳನ್ನು ಹಿಡಿದು ಸುರಕ್ಷಿತ ತಾಣದಲ್ಲಿ ಬಿಡುವುದನ್ನು ಕಲಿಸಿದ್ದೆ. ಸಂರಕ್ಷಿಸಿ ಕಾಡಿನಲ್ಲಿ ಬಿಡುವಹಾವುಗಳು ಸುರಕ್ಷಿತ ಎಂದುಕೊಂಡಿದ್ದ ನನ್ನ  ಭ್ರಮೆಯ ಪೊರೆ ಹರಿಯಿತು. ನನ್ನ ಆಗುಂಬೆ ಅಧ್ಯಯನದ ಪ್ರಕಾರ ನಾವು ಸಂರಕ್ಷಣೆಯ ಹೆಸರಿನಲ್ಲಿ ಹೊಸ ಜಾಗದಲ್ಲಿ ಬಿಡುಗಡೆಗೊಳಿಸುವ ಹಾವುಗಳು ಉಳಿಯುವ ಸಾಧ್ಯತೆ ಬಲು ಕಡಿಮೆ. ಆಗುಂಬೆಯಲ್ಲಿ ಕಾಳಿಂಗಸರ್ಪಗಳ ಪುನರ್ವಸತಿಯಲ್ಲಿ ಭಾಗವಹಿಸಿದ್ದಾಗ, ಕಾಳಿಂಗ ಸರ್ಪಗಳು ಹೊಸ ಜಾಗಕ್ಕೆ ಹೊಂದಿಕೊಳ್ಳಲು ಅಸಮರ್ಥವಾಗಿದ್ದುದು ಕಂಡು ಬಂದಿತು ಒಂದೇ ಮಾತಿನಲ್ಲಿ ಹೇಳುವುದಾದರೆ ಸಂರಕ್ಷಿಸಿ ಬೇರೆಡೆ ಬಿಡುಗಡೆಗೊಳಿಸಿದ ಹಾವುಗಳು ಉಳಿಯುವ ಸಂಭವ ತುಂಬಾ ಕಡಿಮೆ.

ವಿಜ್ಞಾನ ತಂತ್ರಜ್ಞಾನಗಳಿಂದ ಮಾನವ ತನ್ನ ಮನೋಭಾವಗಳು ಬದಲಾಗುವುದಕ್ಕಿಂತಲೂ ವೇಗವಾಗಿ ಅಭಿವೃಧಿ ಹೊಂದುತ್ತಿದ್ದಾನೆ. ಹಳ್ಳಿಗಳು ಶೀಘ್ರವಾಗಿ ನಗರೀಕರಣಗೊಳ್ಳುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಮೊದಲಿಗಿಂತಲೂ  ಹಾವಿನಿಂದ ಕಿರುಕುಳ ಎಂದು ಬರುವ ಕರೆಗಳು ಇಮ್ಮಡಿಸಿವೆ. ಸ್ವಲ್ಪ ಹಣ ಖರ್ಚುಮಾಡಿ ಹಾವುಗಳನ್ನು ಕಾಡಿನಲ್ಲಿ ಬಿಟ್ಟರೆ ಬದುಕಿಕೊಳ್ಳುತ್ತವೆ ಎನ್ನುವುದು ಅವರ ಲೆಕ್ಕಾಚಾರ. ಆದರೆ ಕಾಡಿನಲ್ಲಿ ಅವು ಉಳಿಯುವುದು ಕಡಿಮೆ ಎಂದು ಸಂಶೋಧನೆ ಅದನ್ನು ಧೃಡಪಡಿಸಿದೆ. ಮನುಷ್ಯ ಹಾವಿನ ನಡುವೆ ತಿಕ್ಕಾಟದ ಪರಿಸ್ಥಿತಿ ಎದುರಾದಾಗ ನಾವು ಹಾವುಗಳನ್ನು ರಕ್ಷಿಸುತ್ತಿಲ್ಲ, ಬದಲಾಗಿ ಅವುಗಳನ್ನು ಹುಚ್ಚುತನದಿಂದ ಸಾವಿಗಟ್ಟುತ್ತಿದ್ದೇವೆ. ನಮ್ಮ ಸಂರಕ್ಷಣಾ ಕ್ರಮದಲ್ಲಿ ಮೂಕ ಪ್ರಾಣಿಗಳಿಗೆ ಧ್ವನಿ ಇರದ ಕಾರಣ ಮಾನವನ ಪ್ರಭಾವವೇ ಮೇಲಾಗುತ್ತಿದೆ. ಕೇವಲ ಮಾನವನ ಸ್ವಾರ್ಥಕ್ಕಾಗಿ ಅಪಾಯಕಾರಿಯಲ್ಲದ ಹಾವುಗಳು ತಮ್ಮ ವಾಸಸ್ಥಾನವನ್ನು ಕಳೆದುಕೊಳ್ಳುತ್ತಿವೆ. ಬುದ್ಧಿವಂತನಾದ ಮಾನವ ಅರ್ಥ ಮಾಡಿಕೊಳ್ಳಬೇಕಾದದ್ದೇನೆಂದರೆ, “ಹಾವುಗಳನ್ನು ನಾಡಿನಿಂದ ಕಾಡಿಗೆ ಬಿಡುವುದು ಅದರ ಸಂರಕ್ಷಣೆಯಲ್ಲ, ಅವುಗಳ ಜೊತೆಗೆ ಸಹಬಾಳ್ವೆ ಕಲಿಯುವುದು ಜಾಗೃತಿ ಮೂಡಿಸುವುದೊಂದೇ ಹಾವುಗಳನ್ನು ಸಂರಕ್ಷಿಸಲು ನಮಗಿರುವ  ಏಕೈಕ ದಾರಿ”.

ಮನೆಯ ಒಡೆಯರು ಕಾರ್ಖಾನೆ ಮಾಲೀಕರೊಂದಿಗೆ ಕೆಲ ಸಮಯ ಮಾತನಾಡಿ ಹಾವುಗಳ ಬಗ್ಗೆ ತಿಳಿಹೇಳುವುದು ಒಳಿತು, ಹಲವಾರು ಜನ ತಮ್ಮ ಮನೆಯಂಗಳದಲ್ಲಿ  ಹಾವುಗಳನ್ನು ಅವುಗಳ ಪಾಡಿಗೆ ಬದುಕಲುಬಿಟ್ಟರೆ ಸಮತೋಲಿತ ಪರಿಸರ ನಿರ್ಮಾಣವಾಗುತ್ತದೆ.

1986 ಇಸವಿಯಲ್ಲಿ ನಮ್ಮ ಊರಿನಲ್ಲಿ ತುಂಬಾ ಮಳೆಯಾಗಿ, ಮನೆಪಕ್ಕದಲ್ಲಿದ್ದ ಕೆರೆ ಕೋಡಿಬಿದ್ದು, ನೀರು ಮನೆಯಂಗಳಕ್ಕೆ ನುಗ್ಗಿತ್ತು. ನಮ್ಮ ಮನೆ ತಾರಸಿ ಚೇಳು, ಹಾವು, ಉಡಗಳಿಗೂ ಸ್ವರ್ಗಸದೃಶವಾಗಿ ಕಂಡಿತು. ಆಗ ನನ್ನಜ್ಜ ಪರದೆಯನ್ನು ಹಾಸಿಗೆ ಕೆಳಗೆ ಭದ್ರವಾಗಿ ಸೇರಿಸಿ ಮಲಗಿರಿ ಎಂದು ಎಚ್ಚರಿಕೆ ಕೊಟ್ಟರು. ಬೆಳಿಗ್ಗೆ ಎದ್ದಾಗ ನಮ್ಮ ಮನೆಯಲ್ಲಿ ಎಲ್ಲೆಡೆ ಪ್ರಾಣಿಗಳು ತುಂಬಿ ನೈಸರ್ಗಿಕ ಪ್ರಿಯನಿಗೆ ಒಂದು ಸಣ್ಣ ಸ್ವರ್ಗದಂತಾಗಿತ್ತು. ಪಕ್ಕದ ಹಳ್ಳಿಯಲ್ಲಿ ಅಜ್ಜಿಯೊಬ್ಬಳು ಉದ್ದನೆಯ ಕೋಲನ್ನು ತೆಗೆದುಕೊಂಡು ಹಾವನ್ನು  ಆಚೆಗೆ ತಳ್ಳುತ್ತಿದ್ದಳು. ಸಾಧಾರಣವಾಗಿ ಕೊಳಕು ಮಂಡಲ ಹಾವುಗಳನ್ನು ಹಾಗು ಇತರ ವಿಷಪೂರಿತ ಹಾವುಗಳನ್ನು ಹೊಡೆದು ಸಾಯಿಸುತ್ತಿದ್ದರು, ನೀರು ಹಾವು, ಕೇರೆಹಾವುಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಈ ದಿನ ನನ್ನಲ್ಲಿ  ಅಂದಿದ್ದ ಮನೋಭಾವ ಬದಲಾಗಿದೆ.

 ಇಂದು ಸನಿಹದಲ್ಲಿ ಹಾವಿದೆ ಎಂದರೆ ಜನ ಹೌಹಾರುತ್ತಾರೆ. ಅದೊಂದು ತುರ್ತು ಸಂದರ್ಭ ಎಂದು ಪರಿಗಣಿಸಿ ಪೊಲೀಸರನ್ನು, ಅಗ್ನಿ ರಕ್ಷಕರನ್ನು, ಹಾವಿನ ರಕ್ಷಕರು ಎಂದು ಸಿಕ್ಕ ಸಿಕ್ಕವರನ್ನು ಸಂಪರ್ಕಿಸುತ್ತಾರೆ.  ಹಾವುಗಳನ್ನು ನಿರ್ಮೂಲ ಮಾಡುವ ನಿಟ್ಟಿನಲ್ಲಿ, ಹೂಕುಂಡಗಳ ಸಂದಿ, ಮನೆಪಕ್ಕದ ನೀರಿನ ಗುಂಡಿ, ಕೆರೆ ಎಲ್ಲವನ್ನು ಸ್ವಚ್ಛಮಾಡಿ ಹಾವಿನ ವಾಸಕ್ಕೆ ಇರಬಹುದಾದ ಜಾಗಗಳನ್ನು ನಾಶ ಮಾಡುತ್ತಾರೆ. ಸೋಜಿಗದ ವಿಷಯವೆಂದರೆ ಈ ಸ್ವಚ್ಚತಾ ಕಾರ್ಯದಲ್ಲಿ ಕಸದ ತೊಟ್ಟಿ, ಕಟ್ಟಡಗಳ ಅನುಪಯುಕ್ತ ವಸ್ತುಗಳ ರಾಶಿ ಸೇರಿಸಲಾಗಿಲ್ಲ. ನಮ್ಮ ಸ್ಪಂದನೆಯು ನಮ್ಮ ತಲೆಯಲ್ಲಿರುವ ಭೀತಿಯಿಂದ ಉದ್ಭವಿಸುತ್ತದೆ ಹೊರತು ಹಾವಿನಿಂದಲ್ಲ. ಕೊನೆಪಕ್ಷ ವಿಜ್ಞಾನದ ಅರಿವಿರುವ ನಾವು ನಮ್ಮ ನಿರ್ಧಾರವನ್ನು ವೈಜ್ಞಾನಿಕವಾಗಿ ತೆಗೆದುಕೊಳ್ಳಬೇಕು. ಅದಾಗದಿದ್ದಲ್ಲಿ ನನ್ನಜ್ಜ ಹೇಳುತ್ತಿದ್ದಂತೆ ನಾವು ಸುಮ್ಮನಿದ್ದರೆ, ಅದರ ಪಾಡಿಗೆ ಅದು ಹೊರಟುಹೋಗುತ್ತದೆ. 

ಮೂಲ ಲೇಖನ: ಜೆರ್ರಿ ಮಾರ್ಟಿನ್
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ

Spread the love
error: Content is protected.