ಕಾಡಿದವು ಹಕ್ಕಿ . .! ಹಕ್ಕಿ ಹಾಡ ಹಾಡಿದೆ ನಾ. . ! ವಿಷಯಗಳ ಹೆಕ್ಕಿ . . !

ಕಾಡಿದವು ಹಕ್ಕಿ . .!  ಹಕ್ಕಿ ಹಾಡ ಹಾಡಿದೆ ನಾ. . !  ವಿಷಯಗಳ ಹೆಕ್ಕಿ . . !
ಕಾಳಿತಟದ ಬಿದಿರಿನ ಮೆಳೆಗಳ ವನರಾಶಿಯಲ್ಲಿ ಮೀನುಗಾರರ ಹರಿಗೋಲುಗಳು

ಬಿದಿರು ನಾನಾರಿಗಲ್ಲದವಳು !
ಹುಟ್ಟುತ ಹುಲ್ಲಾದೆ ಬೆಳೆಯುತ ಬಿದಿರಾದೆ
ಆಡುವ ಮಕ್ಕಳಿಗೆ ತೂಗುವ ತೊಟ್ಟಿಲಾದೆ !
ಬಿದಿರು ನಾನಾರಿಗಲ್ಲದವಳು !
ತಿಪ್ಪೆಯ ಕೆಳಗಿದ್ದೆ ಅದರುದ್ದ ಬೆಳೆದಿದ್ದೆ !
ಸೊನ್ನಲಿಗೆಯ ಸಿದ್ಧರಾಮೇಶ್ವರನಿಗೆ ನಂದಿಯ ಕೋಲಾದೆ
ಬಿದಿರು ನಾನಾರಿಗಲ್ಲದವಳು !
ಬಸದಿಯೊಳ ಶಿಶುನಾಳಧೀಶನ ಮಠದೊಳಗೆ
ಸಾಧುರ ಕೈಯೊಳಗೆ ಏಕತಾರಿ ಕೊಳವ್ಯಾದೆ !
ಬಿದಿರು ನಾನಾರಿಗಲ್ಲದವಳು !

ಶಿಶುನಾಳ ಸಂತ ಶರೀಫರು ತತ್ವಪದವೊಂದರಲ್ಲಿ ಬಿದಿರು ಮಾನವನ ಜೀವನದಲ್ಲಿ ಎಷ್ಟೊಂದು ಉಪಕಾರಿ ಎನ್ನುವದನ್ನು ತಮ್ಮದೇ ಶೈಲಿಯಲ್ಲಿ ಮನನ ಮಾಡಿದ್ದಾರೆ. ಮನುಷ್ಯನ ಹುಟ್ಟಿನಿಂದ ಹಿಡಿದು ಮಸಣಕ್ಕೆ ಸೇರುವವರೆಗೂ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುವ ಬಿದಿರು ವೈಜ್ಞಾನಿಕವಾಗಿ ಹುಲ್ಲಿನ ಪ್ರಭೇದಕ್ಕೆ ಸೇರಿದೆ.

ಮೇಘಾಲಯದ ಬಿದಿರಿನ ಕಸದ ತೊಟ್ಟಿ
ಕಾಜಿರಂಗದ ಬಿದಿರಿನ ಕುಟೀರ

ಭಾರತವು ವಿಶ್ವದ ಅತಿ ಹೆಚ್ಚು ಬಿದಿರು ಬೆಳೆಯುವ ಎರಡನೇ ರಾಷ್ಟ್ರವಾಗಿದೆ. ದೇಶದಲ್ಲಿರುವ ಸುಮಾರು 136 ಬಿದಿರಿನ ವಿವಿಧ ಪ್ರಭೇದಗಳಲ್ಲಿ ನಮ್ಮ ರಾಜ್ಯದ ಪ್ರಮುಖ 3 ಪ್ರಭೇದಗಳು ಇವೆ. ಅವುಗಳನ್ನು ನಾವು  ಡೌಗಾ (ಹೆಬ್ಬಿದಿರು), ಮೆದರಿ ಹಾಗು ಮಾರಿಹಾಳ  ಬಿದಿರು ಎಂದು ಕರೆಯುತ್ತೇವೆ. ಸಸ್ಯ ಪ್ರಭೇದಗಳಲ್ಲೇ  ಅತಿ ವೇಗದಿಂದ ಬೆಳೆಯುವ ಬಿದಿರು ಪ್ರತಿದಿನ ಮೂರು ಅಡಿಗಳಷ್ಟು ಉದ್ದ ಬೆಳೆಯುತ್ತದೆ. ಎಳೆ ಬಿದಿರಿನಿಂದ (ಕಳಲೆ) ಸ್ವಾದಿಷ್ಟ ಅಡುಗೆಗಳನ್ನು  ಮಲೆನಾಡಿನಲ್ಲಿ ಮಾಡುತ್ತಾರೆ. ದೇಶದ ಬಹುತೇಕ ಬಿದಿರಿನ ವಿಧಗಳು ಈಶಾನ್ಯ ರಾಜ್ಯಗಳಲ್ಲಿ ಬೆಳೆಯುತ್ತವೆ. ಇವತ್ತಿಗೂ ಮನೆಗಳ ಗೋಡೆ, ಛಾವಣಿ, ಟೊಪ್ಪಿಗೆ, ಹೀಗೆ ಹತ್ತಾರು ರೀತಿಯಲ್ಲಿ ಈಶಾನಿಗರು ಬಿದಿರನ್ನು ಉಪಯೋಗಿಸುತ್ತಾರೆ. ಅವರು ಬಿದಿರನ್ನು ಕುಡಿಕೆಗಳನ್ನಾಗಿ ಮಾಡಿ ಅದರಲ್ಲಿ ಹಾಲಿಗೆ ಹೆಪ್ಪನ್ನಿಡುತ್ತಾರೆ, ಕುಡಿಕೆಗಳಲ್ಲಿನ ಮೊಸರು ಹುಳಿಯಾಗದೇ ಹಲವು ದಿನಗಳವರೆಗೂ ರುಚಿಕರವಾಗಿರುತ್ತದೆ.

ಅಸ್ಸಾಂನ ಬಿದಿರಿನ ಮೊಸರು ಕುಡಿಕೆ

ನಮ್ಮ ನಾಡಿನಲ್ಲಿ ವಿಫುಲವಾಗಿ ಬೆಳೆಯುವ ಹೆಬ್ಬಿದಿರು 6 ದಶಕಗಳಿಗೊಮ್ಮೆ ಹೂವು ಬಿಡುತ್ತದೆ. ಸಾಮಾನ್ಯವಾಗಿ ಹೂವು ಬಿಟ್ಟ ನಂತರ ಬಿದಿರಿನ ಮೆಳೆಗಳು (ಹಿಂಡಿಲುಗಳು) ಕ್ಷೀಣಿಸುತ್ತವೆ ಅಥವಾ ಸಂಪೂರ್ಣ ನಾಶವಾಗಿ ಹೋಗುತ್ತವೆ. ಒಬ್ಬ ಮಾನವನ ಜೀವಿತಾವಧಿಯಲ್ಲಿ ಒಮ್ಮೆ ಕಾಣುವಂತಹ ನಿಸರ್ಗದ ಈ ಅಪೂರ್ವ ನಿಯಮ ಜನಪದದಲ್ಲಿ ಅನೇಕ ಭಾವನೆಗಳನ್ನು ತುಂಬಿದೆ. ಮೆಳೆಗಳು ಒಣಗಿದವು ಎಂದರೆ ಬರಗಾಲದ ಮುನ್ಸೂಚನೆಯೆಂದು ಅನೇಕರು ನಂಬಿದ್ದಾರೆ.

ಬಿದರಕ್ಕಿಯನ್ನು ಹೆಕ್ಕುತ್ತಿರುವ ಚಿಟ್ಟುಗಿಳಿ

ಆನೆಗಳ ಮುಖ್ಯ ಆಹಾರವಾದ ಬಿದಿರು ಹಿಂದೆಲ್ಲ ಭೀಕರ ಬರಗಾಲ ಬಂದಾಗ ಕಾಡಿನ ಸುತ್ತಲಿನವರ ಹೊಟ್ಟೆಯ ಹಸಿವನ್ನು ತನ್ನಲ್ಲಿರುವ ಬಿದರಕ್ಕಿಯಿಂದ ತಣಿಸುತ್ತಿತ್ತು. ಅನಿರೀಕ್ಷಿತವಾಗಿ ಹೂ ಬಿಡುವ  ಬಿದಿರುಗಳು ಕಳೆದ ದಶಕದಲ್ಲಿ ಅನೇಕ ಕಡೆಗಳಲ್ಲಿ ಒಣಗಿ ಸಾವಿಗೀಡಾಗಿದ್ದವು. ವಯಸ್ಸಿಗೆ ತಕ್ಕಂತೆ ಹೂಬಿಟ್ಟು ನಾಶವಾಗುವ ಈ ವಿರಳ ಬೆಳವಣಿಗೆಗೆ “ಜನಪದರು” ನೆರೆ ಅಥವಾ ಕಟ್ಟೆರೋಗವೆನ್ನುತ್ತಾರೆ. ಕಳೆದ ನಾಲ್ಕಾರು ವರುಷಗಳಿಂದ ಪಶ್ಚಿಮ ಘಟ್ಟದಲ್ಲೂ ಸಹ ಹೂಬಿಟ್ಟ ಮೆಳೆಗಳು ಒಣಗಿ ಧರೆಗೆ ಉರುಳತೊಡಗಿವೆ.

ಕರಿತಲೆ ಹರಟೆಮಲ್ಲ

ಚಾರಣ ಹಾಗೂ ಪಕ್ಷಿವೀಕ್ಷಣೆಯ ಹವ್ಯಾಸ ನನಗೆ ಇದ್ದ ಕಾರಣ ಅರಣ್ಯದಲ್ಲಿರುವ ಬಿದಿರಿನ ಕುರಿತು ಕುಣುಬಿ, ದನಗರಗೌಳಿ ಹಾಗೂ ಸಿದ್ದಿಗಳು  ಹೇಳುವ ಕುತೂಹಲದ ಕಥೆಗಳನ್ನು  ನಾನು ಕೇಳಿದ್ದೆ. ಪ್ರತಿ ಬಾರಿ ಮಳೆಗಾಲಕ್ಕೂ ಮುನ್ನ ಕಳಲೆಯನ್ನು ಮುರಿದು ತಂದು ಮನೆಯಲ್ಲಿ ಭಕ್ಷ್ಯಗಳನ್ನು ಮಾಡಿಸಿ ತಿಂದು ತೇಗಿದವನು ನಾನು.

ಕರಿತಲೆ ರಾಟವಾಳ
ಕಪ್ಪುಹಿಂಗತ್ತಿನ ರಾಜಹಕ್ಕಿ

ಅಮ್ಮ ಮಾಡುವ ಮೆದರಿಯ ಪಲ್ಯದ (ಕುಬುಚಿ) ಸವಿ ಉಂಡವರಿಗೆ ತಿಳಿಯವುದು !
ಪ್ಲಾಸ್ಟಿಕ್ ಯುಗದ ಪ್ರಾರಂಭದೊಂದಿಗೆ ಬಿದಿರಿನ ಅವಲಂಬನೆ ಮಾನವನಲ್ಲಿ ಕಡಿಮೆಯಾದರೂ, ಪಕ್ಷಿ ಸಂಕುಲಕ್ಕೆ ಬಿದಿರು ಸದಾಕಾಲ ಆಪ್ತಮಿತ್ರ. ಕಾಳುಗಳನ್ನು ಇಷ್ಟ ಪಡುವ ಚಿಟ್ಟುಗಿಳಿ, ರಾಟವಾಳ, ಹಳದಿಗಲ್ಲದ ಗುಬ್ಬಚ್ಚಿ ಮುಂತಾದ ಹಕ್ಕಿಗಳು ಬಿದರಕ್ಕಿಯನ್ನೂ ಸವಿಯುತ್ತವೆ. ಸಿಳ್ಳಾರ (Malabar Whistling Thrush), ಕೈರಾತ (Small Green-billed Malkoha),
ಶಾಮ (White-rumped shama), ಕೆಂಬೂತ (Lesser Coucal), ಭೀಮರಾಜ (Greater Racket-Tailed Drongo)ಗಳಿಗೆ ಮೆಳೆಯ ಬುಡದಲ್ಲಿರುವ ಹುಳು-ಹುಪ್ಪಟೆ ಹಾಗೂ ಸರಿಸೃಪಗಳನ್ನು ತಿನ್ನಲು ಬಿದಿರಿನ ಸಂಗ ಬಹು ಇಷ್ಟ. ಆಕಾಶದೆತ್ತರಕ್ಕೆ ಹಾರಲು ಬಾರದ ಸಿಳ್ಳಾರ, ಹರಟೆಮಲ್ಲ ಹಾಗೂ ಕೈರಾತಗಳು ಹೆಚ್ಚಿನ ಸಮಯ ಮೆಳೆಗಳಲ್ಲೆ ಕಳೆಯುತ್ತವೆ. ಉಲಿಯಕ್ಕಿ, ರಾಜಹಕ್ಕಿ, ಟುವ್ವಿಹಕ್ಕಿ, ಬೆಳ್ಗಣ್ಣಗಳು ದಟ್ಟವಾಗಿ ಬೆಳೆಯುವ ಮೆಳೆಗಳಲ್ಲಿ ಇದ್ದರೆ ವೈರಿಗಳಿಂದ ಅವುಗಳಿಗೆ ಅಪಾಯ ಕಡಿಮೆ.

ಮಲೆನಾಡ ದಾಸ ಮಂಗಟ್ಟೆ
ಕಪ್ಪು ಕಾಗೆ
ಕಪ್ಪುಹಿಂಗತ್ತಿನ ಹೊನ್ನಕ್ಕಿ
ಬೂದುತಲೆಯ ಪಿಕಳಾರ
ಹೊನ್ನಹಣೆಯ ಎಲೆಹಕ್ಕಿ

ಈ ಹಕ್ಕಿಗಳು ಹಿಂಡಿನಲ್ಲಿರುವ ಹುಳು, ಹುಪ್ಪಟೆಗಳನ್ನು ತಿನ್ನುತ್ತಾ ಕುಳಿತರೆ ನಮ್ಮ ಕಣ್ಣಿಗೆ ಅವು ಕಾಣುವುದು ಬಹು ದುಸ್ತರ. ಅಲ್ಲದೆ ಮೆಳೆಗಳಲ್ಲಿನ ಹಕ್ಕಿಗಳನ್ನು ಮೂರನೆಯ ಕಣ್ಣಿನಲ್ಲಿ (ಕ್ಯಾಮೆರಾ) ಬಂಧಿಸುವುದು ಇನ್ನೂ ಕಠಿಣ. ಕೋಗಿಲೆಯಂತೆ ಸುಮಧುರವಾಗಿ ಹಾಗೂ ಇಂಪಾಗಿ ಹಾಡುವ ಸರಳೆಸಿಳ್ಳಾರಗಳ (Malabar Whistling Thrush) ನೆಚ್ಚಿನ ತಾಣ ಬಿದಿರನ ಮೆಳೆ. ಈ ಸಿಳ್ಳಾರಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಬಹುದಿನ ಕಾದು, ಅತ್ಯಂತ ಕಡಿಮೆ ಬೆಳಕು ಬೀಳುವ ಹಾಗೂ ಮುಳ್ಳುಗಳಿರುವ ಮೆಳೆಗಳ ಮಧ್ಯದಲ್ಲಿ ಅವನ್ನು ಹುಡುಕಿ, ಗುರಿಯಿಟ್ಟು ಫೋಟೊ ಕ್ಲಿಕ್ಕಿಸುವುದಂತೂ ಹರಸಾಹಸದ ಕೆಲಸವೇ ಸರಿ.

 ಪಶ್ಚಿಮ ಘಟ್ಟಗಳ ಸಾಲಿನ ಕಾಳಿ ಕಣಿವೆಯ ಶಿರವೆ ಬೆಟ್ಟದ ತಪ್ಪಲಿನಲ್ಲಿರುವ ನಮ್ಮ ಮನೆಯ ಪಶ್ಚಿಮಕ್ಕೆ ಇರುವ ಚಿಕ್ಕ ಕಾಡು ವಿವಿಧ ಜಾತಿಯ ಮರ-ಗಿಡ, ಬಳ್ಳಿಗಳಿಂದ ತುಂಬಿಕೊಂಡಿದೆ. ಅರಣ್ಯದಲ್ಲಿ ಅರ್ಜುನ, ಮತ್ತಿ, ನಂದಿ, ಹೊನ್ನೆ, ಮುತ್ತುಗ, ಹತ್ತಿ ಮರಗಳೇ ಹೆಚ್ಚು. ನಡು ನಡುವೆ ದಟ್ಟವಾದ ಡೌಗಾ ಬಿದಿರಿನ ಮೆಳೆಗಳು ಇವೆ. ಅರಣ್ಯದಲ್ಲಿರುವ ಹಕ್ಕಿಗಳ ಸುಪ್ರಭಾತವನ್ನು ಕೇಳುತ್ತಲೇ ನಿದ್ದೆ ಮುರಿದು ದಿನಚರಿ ಪ್ರಾರಂಭಿಸುವುದು ನನ್ನ ರೂಢಿ. ಆ ಚಿಕ್ಕ ಅರಣ್ಯದಲ್ಲಿನ ಮೆಳೆಗಳಿಂದ ಹೊರಹೊಮ್ಮುವ ಬೆಳಗಿನ ಹಾಡುಗಾರ ಸರಳೆ ಸಿಳ್ಳಾರಗಳ ಹಾಡಿನ ಆಲಾಪ ನನಗೆ ತುಂಬಾ ಇಷ್ಠ.

ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು ಎನ್ನುವ ಹಾಗೆ ಕಳೆದ ನಾಲ್ಕಾರು ವರುಷಗಳಿಂದ ನಮ್ಮಲ್ಲಿ ವಾಡಿಕೆಯ ಮಳೆ ಕಡಿಮೆಯಾಗಿತ್ತು ಹಾಗೂ ಮೆಳೆಗಳು ಹೂವುಗಳನ್ನೂ ಬಿಟ್ಟಿದ್ದವು. ನಿಯಮದಂತೆ ಹೂಗಳು ಅರಳಿದ ನಂತರ ಅವಸಾನದ ದಾರಿಗೆ ಮರಳುವ ಮೆಳೆಗಳು ಒಣಗಿ, ಬೀಸುವ ಗಾಳಿಗೆ ಸದ್ದು ಮಾಡುತ್ತಾ ಬೀಳುವುದು ಸಾಮಾನ್ಯವಾಯಿತು. ಮೆಳೆಗಳಲ್ಲಿನ ಹೂಗಳು ಬಿದರಕ್ಕಿಯಾಗಿ ಉದುರತೊಡಗಿದವು. ಹಸಿರೆಲ್ಲ ಬತ್ತಿ ಸಂಪೂರ್ಣ ಒಣಗಿರುವ ಕಾರಣ ಅವುಗಳಲ್ಲಿ ಹಕ್ಕಿಗಳು ಕುಳಿತರೆ ಸುಲಭವಾಗಿ ಕಣ್ಣಿಗೆ ಗೋಚರಿಸಲು ಪ್ರಾರಂಭವಾದವು. ಕೆಲವು ಮೆಳೆಗಳಂತೂ ಇಳಿಜಾರಿನ ಕಾರಣದಿಂದ ಬೇರಿನ ಸಮೇತ ಬುಡಮೇಲಾಗಿ ಬಿದ್ದವು. ಲಟಲಟನೆ ಮುರಿದು ಬೀಳುತ್ತಿದ್ದ ಬಿದಿರುಗಳನ್ನು ನಾನು ವೀಕ್ಷಿಸುತ್ತಾ ಮೆಳೆಯನ್ನು ನೆಚ್ಚಿಕೊಂಡು ವಾಸಿಸುತ್ತಿದ್ದ ಸಿಳ್ಳಾರ ಹಾಗೂ ಕೈರಾತಗಳ ಕುರಿತು ಚಿಂತಿಸುತ್ತಿದ್ದೆ.

ಹೆಚ್ಚು ಕಡಿಮೆ ಬಹುತೇಕ ಮೆಳೆಗಳು ಧರೆಗುರುಳಿಯಾಗಿತ್ತು. ಅಲ್ಲಲ್ಲಿ ಒಂದೆರೆಡು ಮೆಳೆಗಳಿಂದ ಬಿದಿರುಗಳು ಆಕಾಶಕ್ಕೆ ಮುಖ ಚಾಚಿ ತಮ್ಮ ಅವಸಾನದ ದಿನಗಳನ್ನು ಎಣಿಸುತ್ತಿದ್ದವು. ಕ್ರಮೇಣ ಮೆಳೆಗಳಲ್ಲಿನ ಕೈರಾತಗಳ ವೈಯಾರ ಹಾಗೂ ಸಿಳ್ಳಾರಗಳ ಸಿಳ್ಳೆ ಅಪರೂಪವಾಗತೊಡಗಿತು.ಹೆಚ್ಚು ಕಡಿಮೆ ಬಹುತೇಕ ಮೆಳೆಗಳು ಧರೆಗುರುಳಿಯಾಗಿತ್ತು. ಅಲ್ಲಲ್ಲಿ ಒಂದೆರೆಡು ಮೆಳೆಗಳಿಂದ ಬಿದಿರುಗಳು ಆಕಾಶಕ್ಕೆ ಮುಖ ಚಾಚಿ ತಮ್ಮ ಅವಸಾನದ ದಿನಗಳನ್ನು ಎಣಿಸುತ್ತಿದ್ದವು. ಕ್ರಮೇಣ ಮೆಳೆಗಳಲ್ಲಿನ ಕೈರಾತಗಳ ವೈಯಾರ ಹಾಗೂ ಸಿಳ್ಳಾರಗಳ ಸಿಳ್ಳೆ ಅಪರೂಪವಾಗತೊಡಗಿತು.

ಈ ಮಧ್ಯೆ ಚಳಿಗಾಲ ಪ್ರಾರಂಭವಾಗಿ ಮನೆಯ ಪಕ್ಕದ ಪ್ರದೇಶದಲ್ಲಿ ಮೊದಲಿದ್ದ ಹಕ್ಕಿಗಳ ಚಲನವಲನಗಳು ಸಂಪೂರ್ಣ ಬದಲಾಯಿತು. ಬೇರೆ ಬೇರೆ ಪಕ್ಷಿಗಳಾದ ರಾಟವಾಳ, ಚಿಟ್ಟುಗಿಳಿ, ಹಳದಿಗಲ್ಲದ ಗುಬ್ಬಚ್ಚಿ, ಬುಲ್ ಬುಲ್, ನೀಲಿ ಹಕ್ಕಿ, ಕುಟ್ರು ಹಕ್ಕಿ, ಮಂಗಟ್ಟೆ, ಹೊನ್ನಕ್ಕಿ, ಚಿತ್ರಪಕ್ಷಿ, ಎಲೆಹಕ್ಕಿ, ಕಾಡುಕಾಗೆ, ಮಧುರಕಂಠ, ಮಲೆನಾಡ ಗಿಳಿ, ಹೆಮ್ಮಿಂಚುಳ್ಳಿ, ಜುಟ್ಟು ಕಾಜಾಣ, ಕಬ್ಬಕ್ಕಿ ಹಾಗೂ ಹಿಮಾಲಯದ ಬೂದು ಕಾಜಾಣಗಳು ಲಗ್ಗೆ ಇಡಲು ಪ್ರಾರಂಭಿಸಿದವು. ಒಣಗಿ ನಿಂತಿದ್ದ ಬಿದಿರಿನ ಬಾಹುಗಳ ಮೇಲೆ ಎಳೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಳ್ಳುವುದು ಹಾಗೂ ಜೋಡಿಗಳ ಪ್ರಣಯ ಪೂರ್ವ ಚಟುವಟಿಕೆಗಳು ಹೆಚ್ಚಾದವು.  ದೂರದಿಂದ ಹಾರಿ ಬಂದ ಹಕ್ಕಿಗಳು ಕೆಲಕಾಲ ಬಿದಿರಿನ ಮೇಲೆ ಕುಳಿತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದವು. ನಿಸರ್ಗದ ಈ ಚಲನಶೀಲತೆ ನನಗೆ ವರದಾನವಾಗಿ, ನನ್ನ ಮೂರನೆಯ ಕಣ್ಣಿನಲ್ಲಿ  ಹಕ್ಕಿಗಳು ಸರಳವಾಗಿ ಸೆರೆಯಾಗತೊಡಗಿದವು. ಆದರೆ, ಇದು ಆಕಾಶಕ್ಕೆ ಚಾಚಿ ಒಣಗಿದ ಬಿದಿರು ಬೀಳುವ ತನಕ ಮಾತ್ರ ಸಾಧ್ಯ.

ಈ ಮಧ್ಯೆ ಚಳಿಗಾಲ ಪ್ರಾರಂಭವಾಗಿ ಮನೆಯ ಪಕ್ಕದ ಪ್ರದೇಶದಲ್ಲಿ ಮೊದಲಿದ್ದ ಹಕ್ಕಿಗಳ ಚಲನವಲನಗಳು ಸಂಪೂರ್ಣ ಬದಲಾಯಿತು. ಬೇರೆ ಬೇರೆ ಪಕ್ಷಿಗಳಾದ ರಾಟವಾಳ, ಚಿಟ್ಟುಗಿಳಿ, ಹಳದಿಗಲ್ಲದ ಗುಬ್ಬಚ್ಚಿ, ಬುಲ್ ಬುಲ್, ನೀಲಿ ಹಕ್ಕಿ, ಕುಟ್ರು ಹಕ್ಕಿ, ಮಂಗಟ್ಟೆ, ಹೊನ್ನಕ್ಕಿ, ಚಿತ್ರಪಕ್ಷಿ, ಎಲೆಹಕ್ಕಿ, ಕಾಡುಕಾಗೆ, ಮಧುರಕಂಠ, ಮಲೆನಾಡ ಗಿಳಿ, ಹೆಮ್ಮಿಂಚುಳ್ಳಿ, ಜುಟ್ಟು ಕಾಜಾಣ, ಕಬ್ಬಕ್ಕಿ ಹಾಗೂ ಹಿಮಾಲಯದ ಬೂದು ಕಾಜಾಣಗಳು ಲಗ್ಗೆ ಇಡಲು ಪ್ರಾರಂಭಿಸಿದವು. ಒಣಗಿ ನಿಂತಿದ್ದ ಬಿದಿರಿನ ಬಾಹುಗಳ ಮೇಲೆ ಎಳೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಳ್ಳುವುದು ಹಾಗೂ ಜೋಡಿಗಳ ಪ್ರಣಯ ಪೂರ್ವ ಚಟುವಟಿಕೆಗಳು ಹೆಚ್ಚಾದವು.  ದೂರದಿಂದ ಹಾರಿ ಬಂದ ಹಕ್ಕಿಗಳು ಕೆಲಕಾಲ ಬಿದಿರಿನ ಮೇಲೆ ಕುಳಿತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದವು. ನಿಸರ್ಗದ ಈ ಚಲನಶೀಲತೆ ನನಗೆ ವರದಾನವಾಗಿ, ನನ್ನ ಮೂರನೆಯ ಕಣ್ಣಿನಲ್ಲಿ  ಹಕ್ಕಿಗಳು ಸರಳವಾಗಿ ಸೆರೆಯಾಗತೊಡಗಿದವು. ಆದರೆ, ಇದು ಆಕಾಶಕ್ಕೆ ಚಾಚಿ ಒಣಗಿದ ಬಿದಿರು ಬೀಳುವ ತನಕ ಮಾತ್ರ ಸಾಧ್ಯ.

ಚಿತ್ರ – ಲೇಖನ: ಮಹಾಂತೇಶ, ಕೈಗಾ
ಉತ್ತರ ಕನ್ನಡ ಜಿಲ್ಲೆ

Spread the love
error: Content is protected.