ಹುಚ್ಚು ಹಿಡಿದ ಜೇಡ

ಹುಚ್ಚು ಹಿಡಿದ ಜೇಡ

ಕ್ರೈಸ್ತ ವರ್ಷಾರಂಭದ ಶುಭಾಶಯಗಳೊಂದಿಗೆ, ಈ ಮಾಸದ ವಿ ವಿ ಅಂಕಣ ನಿಮ್ಮ ಮುಂದೆ.

‘ನಾವೆಲ್ಲಾ ಒಂದು’ ಎಂಬ ಮನೋಭಾವ ಅತೀ ಮುಖ್ಯ. ಆದರೂ ಒಬ್ಬೊಬ್ಬರ ವ್ಯಕ್ತಿತ್ವ ಮತ್ತು ನಡವಳಿಕೆ ಅವರವರ ಮೆದುಳಿನ ಯೋಚನೆಗಳಿಗೆ ಸಂಬಂಧಿಸಿದಂತೆ ಇರುತ್ತದಲ್ಲವೇ? ನಿಜ. ಹಾಗೆಯೇ ಈ ಮಾತು ಎಷ್ಟೋ ಪ್ರಾಣಿ ವರ್ಗಕ್ಕೂ ಅನ್ವಯಿಸುತ್ತದೆ. ಉದಾಹರಣೆಗೆ ಜೇಡವನ್ನು ತೆಗೆದುಕೊಳ್ಳೋಣ: ಜೇಡ ತನ್ನ ಬೇಟೆಯನ್ನು ತಾನು ಮನ ಬಂದಂತೆ ಅಥವಾ ಮನ ಬಂದಾಗ ಹಿಡಿಯಬಹುದು. ಕೆಲವು ಜೇಡಗಳು ತಮ್ಮ ಆಹಾರವನ್ನು ಸಾಹಸಮಯವಾಗಿ ಹಿಡಿಯುವುದುಂಟು ಹಾಗು ತಮ್ಮ ಆಹಾರಕ್ಕಾಗಿ ಹಲವು ಏರಿಳಿತಗಳನ್ನು ದಾಟಿ ಮುಂದೆ ಹೋಗಬಹುದು. ಇಂತಹ ಸಾಹಸಮಯ ಜೇಡಗಳಿಗೆ ಅಪಾಯಗಳ ಸಂಖ್ಯೆಯು ಕೂಡ ಹೆಚ್ಚಾಗಿಯೇ ಇರುತ್ತದೆ. ಹಾಗೆಯೇ ಅವುಗಳಿಗೆ ಸಿಗುವ ಆಹಾರದ ಪರಿಮಾಣ ಕೂಡ ಹೆಚ್ಚಾಗಿಯೇ ಇರುತ್ತದೆ. ಇನ್ನುಳಿದ ಕೆಲವು ಜೇಡಗಳು ತಮ್ಮ ಗೂಡಿನ ಆಸು-ಪಾಸಿನಲ್ಲಿಯೇ ಸಿಕ್ಕ ಕೀಟಗಳನ್ನು ಮೃಷ್ಠಾನ್ನ ಭೋಜನವೆಂದು ತಿಳಿದು ಅಷ್ಟರಲ್ಲಿಯೇ ಬದುಕು ಸಾಗಿಸಬಹುದು. ಇದು ಕೆಲವು ನೆಗೆ ಜೇಡಗಳ(jumping spider) ಸಾಮಾನ್ಯ ದಿನಚರಿ. ಈ ವಿಷಯ ವೈಜ್ಞಾನಿಕವಾಗಿ ದೃಢಪಟ್ಟಿದೆ ಕೂಡ. ಜೇಡಗಳ ಈ ದಿನಚರಿಯನ್ನು ನಮಗೆ ತಿಳಿಯದ ಹಾಗೆ ನಾವೇ(ರೈತರು) ಬದಲಾಯಿಸುತ್ತಿರುವುದಲ್ಲದೇ, ಅವುಗಳಿಗೆ ಒಂದು ರೀತಿಯಲ್ಲಿ ಹುಚ್ಚು ಹಿಡಿಸುತ್ತಿದ್ದೇವೆ ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ.

ಅದು ಹೇಗೆ? ಎಂಬುದು ಸಹಜವಾಗಿ ಕಾಡುವ ಪ್ರಶ್ನೆ. ಇದಕ್ಕೆ ಉತ್ತರವೂ ಸಹ ತಕ್ಕ ಮಟ್ಟಿಗೆ ಸಹಜವಾಗಿಯೇ ಇದೆ. ಅಮೇರಿಕಾದಲ್ಲಿ ಹಣ್ಣಿನ ತೋಟಗಳಲ್ಲಿ, ಹಣ್ಣಿನ ಮೇಲೆ ದಾಳಿ ಮಾಡುವ ಒಂದು ಜಾತಿಯ ಪತಂಗದ ಕಾಟ ತಪ್ಪಿಸಲು ಪ್ಹಾಸ್ಮೆಟ್ (phosmet) ಎಂಬ ಕೀಟನಾಶಕವನ್ನು ಬಳಸುತ್ತಾರೆ. ಹಾಗೆಯೇ ಈ ಪತಂಗವು ಒಂದು ಜಾತಿಯ ಕಂಚು ನೆಗೆ ಜೇಡ(Bronze jumping spider)ದ ಆಹಾರ ಸಹ ಆಗಿದೆ. ಹಾಗೆ ನೋಡಿದರೆ ಈ ನೆಗೆ ಜೇಡ ಅಲ್ಲಿನ ರೈತ ಮಿತ್ರನೇ ಸರಿ. ಆದರು ಇಲ್ಲಿ ಪತಂಗದ ಮೇಲೆ ಪ್ರಯೋಗಿಸಿದ ಕೀಟನಾಶಕ, ಜೇಡದ ನಡವಳಿಕೆಯ ಮೇಲೆಯೂ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಇದು ರೈತನಿಗೆ ತಿಳಿಯದೆ ಅವನು ತನ್ನ ಮಿತ್ರನಿಗೆ ಮಾಡುತ್ತಿರುವ ಮಿತ್ರ ದ್ರೋಹವೇ…!

ಇದಕ್ಕೆ ಪುರಾವೆಯಾದರು ಏನು?

ಇದನ್ನು ಪ್ರಾಯೋಗಿಕವಾಗಿಯೇ ತೋರಿಸುತ್ತಾರೆ ರೋಯತ್(Royauté) (ಪ್ರಾಣಿಗಳ ನಡವಳಿಕೆಗಳನ್ನು ಅಭ್ಯಸಿಸುವ ವಿಜ್ಞಾನಿ). ಇವರು ಸುಮಾರು 200 ನೆಗೆ ಜೇಡಗಳನ್ನು ಪ್ಹಾಸ್ಮೆಟ್ ಉಪಯೋಗಿಸದ ಪ್ರದೇಶದಿಂದ ಸಂಗ್ರಹಿಸಿ ತಂದು ಅವುಗಳ ಸ್ವಾಭಾವಿಕ ನಡವಳಿಕೆಗಳನ್ನು ತಿಳಿಯಲು ಎರಡು ಪ್ರಯೋಗಗಳನ್ನು ಮಾಡುತ್ತಾರೆ.

ಮೊದಲಿಗೆ ಈ ಎಲ್ಲಾ ಜೇಡಗಳನ್ನು 12 ಇಂಚು ಉದ್ದ ಮತ್ತು 12 ಇಂಚು ಅಗಲ ಇರುವ ಒಂದು ಡಬ್ಬಿಯಲ್ಲಿ ಬಿಟ್ಟು, ಈ ಡಬ್ಬಿಯಲ್ಲಿ 2 ಇಂಚಿನ 36 ಚೌಕಗಳ ವಿಸ್ತೀರ್ಣದಲ್ಲಿ ಒಂದೊಂದು ಜೇಡ 5 ನಿಮಿಷದಲ್ಲಿ ಎಷ್ಟೆಷ್ಟು ಚೌಕಗಳನ್ನು ಅನ್ವೇಷಿಸುತ್ತದೋ, ಆ ಜೇಡ ತನ್ನ ಆಹಾರವನ್ನು ಅಷ್ಟು ಸಾಹಸಿಕವಾಗಿ ಹುಡುಕುತ್ತದೆ ಎಂದು ಪರಿಗಣಿಸಲಾಯಿತು.

ಈಗ ಎರಡನೇ ಪರೀಕ್ಷೆ, ಒಂದು ಪೆಟ್ರಿ ಡಿಶ್ ನಲ್ಲಿ ಜೇಡಕ್ಕೆ ಪ್ರಿಯ ಆಹಾರವಾದ ಒಂದು ನೊಣವನ್ನು ಇರಿಸಲಾಯಿತು. ಈಗ ಜೇಡ ತನ್ನ ಈ ಆಹಾರವನ್ನು ಎಷ್ಟು ಕಡಿಮೆ ಸಮಯದಲ್ಲಿ ನೋಡಿ, ಗುರುತಿಸಿ ಅದರ ಮೇಲೆ ಎರಗುತ್ತದೆಯೋ ಅದಕ್ಕೆ ಹೆಚ್ಚಿನ ಅಂಕಗಳನ್ನು ನೀಡಲಾಯಿತು. ಇವೆರೆಡು ಪರೀಕ್ಷೆಗಳನ್ನು ಎರಡು ಬಾರಿ ಪುನರಾವರ್ತಿಸಿ ನಂತರ ಅದರ ಸರಾಸರಿಯನ್ನು ಕಂಡುಕೊಂಡರು. ನಂತರ 200 ಜೇಡಗಳಲ್ಲಿ ಅರ್ಧದಷ್ಟು ಜೇಡಗಳನ್ನು ಪ್ಹಾಸ್ಮೆಟ್ ಗೆ ಒಡ್ಡಲಾಯಿತು. ಒಂದು ದಿನದ ತರುವಾಯ ಅದೇ ಎರಡು ಪರೀಕ್ಷೆಗಳನ್ನು ಈ ಜೇಡಗಳ ಮೇಲೆ ನಡೆಸಲಾಯಿತು. ಫಲಿತಾಂಶ… ಇವುಗಳ ನಡವಳಿಕೆಯಲ್ಲಿ ತುಂಬಾ ವ್ಯತ್ಯಾಸ ಕಂಡು ಬಂದಿತು. ಜೇಡಗಳ ಮೇಲೆ ಪ್ಹಾಸ್ಮೆಟ್ ನ ಪರಿಣಾಮ ಬೀರುವ ಮುಂಚೆ ಇದ್ದ ತಮ್ಮ ತಮ್ಮ ಸಾಹಸಮಯ ಪ್ರವೃತ್ತಿಯನ್ನು ಜೇಡಗಳು ಕಳೆದುಕೊಂಡಿದ್ದವು. ಇವುಗಳು ಮೊದಲಿಗಿಂತ ತೀರಾ ಹೆಚ್ಚು ಅಥವಾ ತೀರಾ ಕಡಿಮೆ ಸಾಹಸಕಾರಿಯಾದವು ಎನ್ನುತ್ತಾರೆ ರೋಯತ್. ಅಂದರೆ, ಇದು ಜೇಡದ ಒಂದು ತರಹದ ಹುಚ್ಚು ಹಿಡಿದ ಪ್ರವೃತ್ತಿಯಂತೆ ಕಾಣಬಹುದು. ಅಷ್ಟೇ ಅಲ್ಲದೆ ಈ ಕೀಟನಾಶಕ, ಜೇಡದ ಆಹಾರ ಹುಡುಕುವ ಬೌದ್ಧಿಕ ಸಾಮರ್ಥ್ಯವನ್ನು ಕುಂಠಿಸುತ್ತಿದೆ, ಇದು ಯಾವುದೇ ಕಾರಣಕ್ಕೂ ಒಳಿತಲ್ಲ ಎನ್ನುತ್ತಾರೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜೀವವಿಕಾಸಶಾಸ್ತ್ರಜ್ಞ, ಓಲಿವರ್.

ಹಾಗಾದರೆ ಕೀಟನಾಶಕಗಳ ಬಳಸುವ ಮೂಲ ಉದ್ದೇಶ, ರೈತ ತಾನು ಬೆಳೆದ ಬೆಳೆಗೆ ತೊಂದರೆಯನ್ನು ಉಂಟುಮಾಡುವ ಕೀಟಗಳು ಸಾಯಲಿ ಎಂಬುದು. ಆದರೆ ವೈಜ್ಞಾನಿಕವಾಗಿ ಗಮನಿಸಿದರೆ ಇಲ್ಲಿಯ ವಾಸ್ತವವೇ ಬೇರೆ. ಜೇಡಗಳ ಈ ಬದಲಾವಣೆಯಿಂದ, ತನ್ನ ಬೇಟೆಯಾಡುವ ಸಾಮರ್ಥ್ಯ ಕ್ಷೀಣಿಸಿ ಬೆಳೆನಾಶಕ ಕೀಟ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತದೆ. ಇದನ್ನು ಸರಿಯಾಗಿ ಅರಿಯದ ರೈತ ಇನ್ನು ಹೆಚ್ಚು ಕೀಟನಾಶಕಗಳನ್ನು ಬಳಸಿ ತನ್ನ ಭೂಮಿಯನ್ನು ಮುಂದಿನ ದಿನಗಳಲ್ಲಿ ವಿಷದ ಬರಡು ಭೂಮಿಯಾಗಿ ಪರಿವರ್ತಿಸುವುದರಲ್ಲಿ ಸಂಶಯವೇ ಇಲ್ಲ.

ಹಾಗಾದರೆ ಇದಕ್ಕೆ ಪರಿಹಾರವೇನು?

ಕಳೆ ನಾಶಕ ಮತ್ತು ಕೀಟ ನಾಶಕಗಳ ದುಷ್ಪರಿಣಾಮಗಳು ನಮಗರಿಯದಂತೆ ನಮ್ಮ ಮೇಲೆ ಮತ್ತು ಸುತ್ತಲಿನ ಜೀವವೈವಿಧ್ಯದ ಮೇಲೆ ಈಗಾಗಲೇ ತಮ್ಮ ಪೌರುಷವನ್ನು ತೋರಿಸಿವೆ. ಈಗಲಾದರೂ… ಇಂತಹ ಉದಾಹರಣೆಗಳನ್ನು ನೋಡಿದ ನಂತರವಾದರೂ… ಅರಿತು ರಾಸಾಯನಿಕ ಕೀಟ, ಕಳೆ ನಾಶಕಗಳ ತ್ಯಜಿಸಿ ಆರೋಗ್ಯಕರ ಮತ್ತು ತಕ್ಕ ಮಟ್ಟಿಗೆ ಸುಲಭವಾದ ನೈಸರ್ಗಿಕ ಕೃಷಿ, ಪುರಾತನ ಶೈಲಿಯ ಕೃಷಿಯನ್ನು ಹೆಚ್ಚು ಅನ್ವೇಷಿಸಿ, ಅರಿತು ರೂಢಿಸಿಕೊಳ್ಳುವುದು ಅತ್ಯಗತ್ಯ.

ಏಳಿ..! ಎದ್ದೇಳಿ…! ನೈಸರ್ಗಿಕ ಕೃಷಿ ನೈಸರ್ಗಿಕವಾಗುವವರೆಗೆ ನಿಲ್ಲಿಸದಿರಿ!” 

“Arise..! awake…! stop not till the Natural Farming becomes the Nature of Farming!”

ಲೇಖನ: ಜೈಕುಮಾರ್ .ಆರ್
ಡಬ್ಲ್ಯೂ . ಸಿ. ಜಿ
., ಬೆಂಗಳೂರು ಜಿಲ್ಲೆ

Spread the love
error: Content is protected.