ನಾವೆಷ್ಟು ಅರಿತಿರುವೆವು ನಮ್ಮ ಬೇರುಗಳನು?
© AI
ಮಧ್ಯಾಹ್ನದ ಸುಡುಬಿಸಿಲಿಗೆ ನಾನು ಬೆವರಿ ನೀರಾಗುತ್ತಿದ್ದೆ. ನನ್ನ ಸುತ್ತಲಿನವರೆಲ್ಲ ಈ ಸೆಖೆಯ ಸಹವಾಸ ಸಾಕಪ್ಪ ಎನ್ನುವ ಭಾವದಲ್ಲಿ ಏದುಸಿರುಬಿಡುತ್ತಾ ಮೈಯೆಲ್ಲಾ ಬೆವರ ತೊಡಗಿದರು. ನಾವೇನೂ ಉರಿಯುವ ಬಿಸಿಲಿನಲ್ಲಿ ಅಂತ ಶ್ರಮದಾಯಕವಾದ ಯಾವ ಕೆಲಸವನ್ನೇನೂ ಮಾಡಿರಲಿಲ್ಲ. ಹೆಚ್ಚೆಂದರೆ ಒಂದು 500 ಮೀಟರ್ನಷ್ಟು ಹೆಜ್ಜೆ ಹಾಕಿದ್ದಿರಬಹುದೇನೋ ಅಷ್ಟೇ! ಆಗ ನನ್ನನ್ನು ಕಾಡಿದ್ದು ‘ಸಹಿಷ್ಣುತೆ ಕ್ಷೀಣಿಸಿದ್ದು ನಮ್ಮದೇ ಅಥವಾ ಭೂಮಿಯದ್ದೇ?’ ಅಂತ. ಈ ಆಲೋಚನೆ ಅಲ್ಲಿಗೆ ಕೊನೆಯಾಗಲಿಲ್ಲ, ಹಾಗೆ ಮುಂದಕ್ಕೆ ಸಾಗುತ್ತಾ ಹೋಯಿತು. ಬಿಸಿಲಿನ ತಾಪ ವರ್ಷದಿಂದ ವರ್ಷಕ್ಕೆ ಏರುತ್ತಾ ಹೋದಂತೆ ಬಿಸಿಲನ್ನು ಶಪಿಸುವುದೊಂದನ್ನು ಬಿಟ್ಟು ನಾವೇನು ಮಾಡಿದ್ದೇವೆಂದು ನನಗೆ ಈಗಲೂ ತಿಳಿಯದು. ಬೇಸಿಗೆ ಬಂದೊಡನೆಯೇ ಚಳಿಗಾಲದಲ್ಲಿ ಉದುರಿದ ತರಗೆಲೆ, ಹರಡಿದ ಕಸವನ್ನು ಪ್ಲಾಸ್ಟಿಕ್ ಸಮೇತ ಬೇಯಿಸುವುದನ್ನು ಬಿಟ್ಟರೆ; ಫ್ಯಾನ್, ಏರ್ ಕೂಲರ್ ಹಾಗೂ ಎ. ಸಿ. ಗಳನ್ನು ಸಾಲು-ಸಾಲಾಗಿ ಖರೀದಿಸುವುದನ್ನು ಕರಗತ ಮಾಡಿಕೊಂಡಿದ್ದೇವಷ್ಟೇ. ಫ್ಯಾನ್, ಏರ್ ಕೂಲರ್ ಹಾಗೂ ಎ. ಸಿ. ಅದೆಷ್ಟೇ ತಣ್ಣನೆಯ ಗಾಳಿ ನೀಡಿದರೂ ಹೊಂಗೆ ಮರದ ತಂಪಿಗೆ ಸಮನಾದೀತೇ? ಇದೇ ಆಧುನಿಕ ಕೃತಕ ಪ್ರಪಂಚಕ್ಕೂ ಹಾಗೂ ಸಹಜ ಪರಿಸರದ ನಡುವಣ ಇರುವ ವ್ಯತ್ಯಾಸ. ಆದರೇನು ಮಾಡುವುದು? ನಾವು ನಮ್ಮ ಗ್ರಹಿಕೆಯನ್ನು ಗಂಟುಮೂಟೆಕಟ್ಟಿ ಕನ್ವಿನಿಯೆನ್ಸ್ ಎಂಬ ರೈಲು ಹತ್ತಿ ಬಹಳ ದೂರ ಸಾಗಿದ್ದೇವೆ. ಈ ಸೂಕ್ಷ್ಮತೆಯ ಅರಿವು ಮೂಡದ ಹೊರತು ಬದುಕು ನಿಸ್ಸಾರ.
ವಿಜ್ಞಾನ ನಮಗೆ ಎಲ್ಲವನ್ನು ಬಿಡಿ-ಬಿಡಿಯಾಗಿ ಅರ್ಥೈಸಲು ಕಲಿಸಿದ್ದೇ ತಡ ನಾವು ಎಲ್ಲವನ್ನು ಇಡಿಯಾಗಿ ಗ್ರಹಿಸುವುದನ್ನೇ ಮರೆತು ಶತಮಾನಗಳಾಗಿವೆ ಎಂಬಂತೆ ವರ್ತಿಸುತ್ತಿದ್ದೇವೆ. ಶಿಕ್ಷಣಕ್ಕೂ ಜೀವನಕ್ಕೂ ಸಂಬಂಧವೇ ಇಲ್ಲದಂತೆ ಬದುಕುವ ದಾರಿಯಲಿ ಸಾಗುತ್ತಿದ್ದೇವೆ. ನಾವು ಹೇಗಾಗಿದ್ದೇವೆ ಎಂದರೆ ಬಿಸಿಲು ಹಾಗೂ ಚಳಿಯನ್ನು ಹೊರತುಪಡಿಸಿ ಋತುಗಳು ಹೊತ್ತು ತರುವ ಬೇರೆ ಯಾವ ಬದಲಾವಣೆಗಳೂ ನಮ್ಮನ್ನು ತಾಕುವುದೇ ಇಲ್ಲ. ಎಷ್ಟೆಂದರೆ ಮೂಡುವ ಸೂರ್ಯನನ್ನು ಕಂಡು ಬಹಳ ವರ್ಷಗಳೇ ಸಂದಿವೆ. ಇನ್ನೂ ಬೆಳದಿಂಗಳ ಚಂದ್ರ ಹಾಗೂ ನಕ್ಷತ್ರಗಳನ್ನು ಕಂಡು ಇನ್ನೆಷ್ಟು ವರುಷಗಳೋ ಕಾಣೆ. ಪ್ರಕೃತಿಯ ಚಿತ್ರಗಳು ಪ್ರತಿಕ್ಷಣ ಬದಲಾಗುತ್ತಿರುತ್ತವೆ ಅದನ್ನು ಗಮನಿಸುವ ಕೌತುಕ ನಮ್ಮಲ್ಲಿರಬೇಕು ಅಷ್ಟೆ. ಈಗ ಮನೆಯ ಹತ್ತಿರವಿರುವ ತೆಂಗಿನ ಮರವನ್ನೇ ನೋಡಿ 20 ರಿಂದ 30 ಮೀಟರ್ ಎತ್ತರವಿರುತ್ತೆ, ಪ್ರತಿ ಎಳನೀರಿಗೂ ಬೇಕಾದ ನೀರನ್ನು ಮಣ್ಣಿನಿಂದ ಬೇರುಗಳ ಮೂಲಕ ಪ್ರತಿನಿತ್ಯ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಸಾಗಿಸಿ ರೆಂಬೆ-ಕೊಂಬೆಗಳಿಗೆ

ಕೊಂಡೊಯ್ಯಬೇಕು. ಈ ಸಾಗಾಣಿಕೆಯ ಕಾರ್ಯ-ತಂತ್ರವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗಲೆಲ್ಲ ಅಚ್ಚರಿ ಮೂಡದೆ ಇರುವುದು ಹೇಗೆ? ಆದರೆ ನಮಗೆ ಆಗದು. ಪ್ರತಿನಿತ್ಯ ಇಂತಹ ಎಷ್ಟೋ ಅಚ್ಚರಿಗಳು ಜರುಗುತ್ತಲೇ ಇರುತ್ತವೆ. ಆದರೆ ನಾವು ಗ್ರಹಿಸುವುದೇ ಇಲ್ಲ ಹಾಗೂ ಇದರ ಬಗ್ಗೆ ಯೋಚಿಸುವುದೂ ಇಲ್ಲ. ಯಾವುದನ್ನೂ ಗ್ರಹಿಸಲು ಸಮಯವಿಲ್ಲವೆಂಬುದನ್ನು ತಲೆಯಲ್ಲಿ ಹೊತ್ತುಕೊಂಡು ಸುತ್ತುತ್ತಿರುತ್ತೇವೆ. ಅರಳುವ ಹೂ ನೋಡಿ ಖುಷಿಯಾಗದವರಿಗೆ ಸಂತೋಷ, ಸಂತೃಪ್ತಿ ಯಾವತ್ತೂ ಬಿಸಿಲುಗುದುರೆಯೇ ಎಂದು ಏಕೆ ನಮಗೆ ಅರ್ಥವಾಗುವುದಿಲ್ಲ.
ನಮಗೆ ಉಸಿರಾಡಲು ಗಾಳಿಬೇಕು ಅದೂ ಆಮ್ಲಜನಕವೇಬೇಕು ಎಂದು ಶಾಲೆಯಲ್ಲಿ ಕಂಠಪಾಠ ಮಾಡಿರುತ್ತೇವೆ. ಆದರೆ ನಮ್ಮ ನಿತ್ಯದ ಚಟುವಟಿಕೆಗಳು ಉಂಟುಮಾಡುವ ವಾಯು ಮಾಲಿನ್ಯವನ್ನು ಕೆಲವೊಮ್ಮೆ ಗ್ರಹಿಸದೆ ಮಗದೊಮ್ಮೆ ಗ್ರಹಿಸಿ ಸಹಿಸುತ್ತೇವೆ. ಭೂಮಿಯ ಮೇಲೆ ಜೀವಿಗಳ ಉಗಮದ ಬಗ್ಗೆ ನನ್ನದೇ ಆದ ಒಂದು ಕಲ್ಪನಾ ಸಿದ್ದಾಂತವಿದೆ. ಜೀವಿಗಳು ಇಲ್ಲಿ ಜನಿಸಿರುವುದು ಈ ಇಂಗಾಲದ ಸಮತೋಲನತೆಯೇನೋ ಎಂದು ನನಗೆ ಹಲವಾರು ಕಾರಣಗಳಿಂದ ಅನಿಸುತ್ತದೆ. ಏಕೆಂದರೆ ಎಲ್ಲ ಜೀವಿಗಳ ದೇಹದ ಮೂಲ-ಅಂಶ ಈ ಇಂಗಾಲವೇ. ಆದರೆ ಮನುಷ್ಯನನ್ನು ಹೊರತುಪಡಿಸಿ ಇನ್ನುಳಿದ ಜೀವಿಗಳು ಪರಿಸರದ ಸಮತೋಲನತೆಗಾಗಿಯೇನೋ ಕಾಪಾಡಲು ತಮ್ಮ ಕಾರ್ಯಗಳನ್ನು ಚಾಚುತಪ್ಪದೆ ನಿರ್ವಹಿಸುತ್ತಿದ್ದರೆ ನಾವು ಮಾತ್ರ ಬರೀ ಇಂಗಾಲವೇಕೆ ಇಡೀ ಪ್ರಕೃತಿಯಲ್ಲಿ ಅಸಮತೋಲನವನ್ನುಂಟು ಮಾಡಲು ಕಂಕಣ ಬದ್ದರಾಗಿ ನಿಂತಂತಿದೆ.
ನಗರಗಳು ನೆಲಮುಖಿ ಬದುಕನ್ನು ಬಿಟ್ಟು ಬಹಳ ವರ್ಷಗಳು ಸಂದಿವೆ. ನಮ್ಮ ಇಂದ್ರಿಯಗಳು ಗ್ರಹಿಸಬಹುದಾದ ಹಾಗೂ ನಮ್ಮ ಜೀವಕ್ಕೆ ಮೂಲಾಧಾರವಾದ ಗಾಳಿ, ನೀರು ಹಾಗೂ ಮಣ್ಣನ್ನು ಕಾಪಾಡಿಕೊಳ್ಳುವುದು ರಾಕೆಟ್ ಸೈನ್ಸ್ ಅಥವಾ ಎ.ಐ ಯನ್ನು ಅರ್ಥೈಸುವಷ್ಟು ಕಷ್ಟವೇನಿಲ್ಲ ಆದರೂ ಗ್ರಹಿಕೆ ಹಾಗೂ ಬದ್ಧತೆಯಿರದೆ ಇದು ಸಾಧ್ಯವಾಗದು. ಕೆರೆಗಳು ಬತ್ತಿಹೋದ ಹಾಗೆ ನಮ್ಮ ಪರಿಸರದ ಜ್ಞಾನವೂ ಬತ್ತಿ ಹೋಗುತ್ತಿದೆ. ಉದಾಹರಣೆಗೆ ನಾವು ಪೂಜಿಸುವ ದೇವರುಗಳಿರುವ ದೇವಸ್ಥಾನಗಳನ್ನೇ ನೋಡಿ, ಕೆಲವು ದೇವಸ್ಥಾನಗಳು ಮನಸ್ಸಿಗೆ ನೆಮ್ಮದಿ ಎನಿಸುವಷ್ಟು ಪ್ರಶಾಂತತೆ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಂಡಿರುತ್ತವೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ವಿಂಗಡಿಸದ ಕಸ ಹಾಗೂ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ರಾಶಿ ಬಿದ್ದಿರುತ್ತವೆ. ಪವಿತ್ರ ನದಿಯ ಇಕ್ಕೆಲಗಳಲ್ಲಿ ಕಸ, ಅಷ್ಟೇ ಯಾಕೆ ನಗರದ ಬೀದಿಗಳಲ್ಲಿ, ಪಾರ್ಕ್ ಗಳಲ್ಲಿ, ಅಂಗಡಿ ಮುಂಗ್ಗಟ್ಟುಗಳಲ್ಲಿ ಹಾಗೂ ನಗರದ ಹೊರವಲಯಗಳಲ್ಲಿ ಕಸ. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನೇ ರೂಢಿಯಾಗಿಸಿಕೊಂಡಿದ್ದೇವೆ. ನಮಗೆ ಬೇಡದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು. ನಮಗೇಕೆ ನೈರ್ಮಲ್ಯತೆಯೂ ಕೂಡ ಭಕ್ತಿಯೇ ಎನಿಸುವುದಿಲ್ಲ? ನಿತ್ಯ ನೀರು, ಗಾಳಿ ಹಾಗು ಅನ್ನ ನೀಡುವ ಪ್ರಕೃತಿ ದೇವರಲ್ಲವೇ? ಎಲ್ಲ ಮತದ ದೇವರುಗಳು ಸಹ ಸ್ವಚ್ಛ ಪರಿಸರಕ್ಕಾಗಿ ಹಾತೊರೆಯುತ್ತಿದ್ದಾರೆ. ನಮ್ಮ ಹಿರೀಕರು ನಾವು ಪ್ರಕೃತಿಯೊಟ್ಟಿಗೆ ಕೂಡಿ ಬಾಳಲು ಹಬ್ಬ-ಹರಿದಿನಗಳ ಆಚರಣೆ ಹಾಗೂ ಪದ್ಧತಿಗಳನ್ನು ರೂಪಿಸಿದ್ದಾರೆ. ನಾವು ಅದರ ಮೂಲೋದ್ದೇಶ ಮರೆತು ಬರೀ ಆಚರಣೆಗಳನ್ನೇ ಧ್ಯೇಯವನ್ನಾಗಿಸಿಕೊಂಡಿದ್ದೇವೆ. ಖಾಸಗೀಕರಣದ ಪ್ರಭಾವದಿಂದ ನಾವು ಎಲ್ಲವನ್ನು ಹಣದಲ್ಲಿ ಅಳೆಯುತ್ತೇವೆ. ಅದರ ಮುಖ ಬೆಲೆಯ ಆಧಾರದ ಮೇಲೆ ಗೌರವಿಸುವುದನ್ನು ಕಲಿಯುತ್ತಿದ್ದೇವೆ. ನಾವು ಹತ್ತು ರೂ ಕೊಟ್ಟು ಖರೀದಿಸುವ ನೀರಿನ ಬೆಲೆ ಬರೀ ಹತ್ತು ರೂಪಾಯಿ ಮೌಲ್ಯದ್ದಲ್ಲ; ಅದರ ಬೆಲೆ ಜೀವದ್ದು, ಅದು ನಮಗೆ ಅರಿವಾಗುವುದು ಬಾಯಾರಿ ಕುಡಿಯಲು ನೀರು ಸಿಗದೆ, ನೀರಿಗೆ ಹಪಹಪಿಸಿದಾಗ ಮಾತ್ರ. ನಮಗೆ ಏನು ದೊರೆಯುತ್ತಿದೆಯೋ ಅದರ ಬೆಲೆ ನಾವು ಕೊಟ್ಟು ಖರೀದಿಸುವುದಷ್ಟೇ ಆಗಿರುವುದಿಲ್ಲ. ಅದನ್ನು ನಾವು ಮೊದಲು ಅರಿಯಬೇಕು ಅತ್ಯಂತ ಬೆಲೆಬಾಳುವ ಚಿನ್ನವು ನಮ್ಮ ಬಳಿ ಎಷ್ಟೇ ಇದ್ದರೂ ಅದನ್ನು ಉಸಿರಿಸಲಾಗದು ಹಾಗು ಕುಡಿಯಲಾಗದು ಎಂಬ ಸಣ್ಣ ಸತ್ಯ ನಮ್ಮ ತಲೆಯಲ್ಲಿ ಕೂರುವುದೇ ಇಲ್ಲ.

ನಮ್ಮ ಯಾವ ಆಚರಣೆಗಳೂ ನಮ್ಮನ್ನು ಆಂತರ್ಯದಿಂದ ಕಲಕುವುದೇ ಇಲ್ಲ. ನಾವು ಏನು ಮಾಡುತ್ತಿದ್ದೇವೆ? ಏಕೆ ಮಾಡುತ್ತಿದ್ದೇವೆ? ಹಾಗೂ ಹೇಗೆ ಮಾಡುತ್ತೇವೆ? ಅದರಿಂದ ಪ್ರಕೃತಿಗೆ ಆಗುವ ಸಾಧಕ ಬಾಧಕಗಳ ಬಗ್ಗೆ ಪರಿವೇ ಇಲ್ಲದಂತೆ ವರ್ತಿಸುವುದು ಸರ್ವೇಸಾಮಾನ್ಯವಾಗಿ, ಪರಿಸರದ ಕಾಳಜಿಯನ್ನು ಪರಿಸರ ಪ್ರೇಮಿಗಳಿಗಷ್ಟೇ ಮೀಸಲಿಡುವ ಧೋರಣೆ ಎಲ್ಲೆಲ್ಲೂ ತಲೆದೂರಿದೆ. ಇನ್ನಾದರೂ ನಮ್ಮ ಜೀವದ ಬೇರುಗಳನ್ನು ಅರಿತು ಅವುಗಳ ಸಂರಕ್ಷಣೆಗೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ದೈನಂದಿನ ಚಟುವಟಿಕೆಗಳಲ್ಲಿ ನಾವು ಮಾಡಿಕೊಳ್ಳುವ ಸಣ್ಣ-ಪುಟ್ಟ ಬದಲಾವಣೆಗಳಿಂದ ನಗರದ ತ್ಯಾಜ್ಯಗಳನ್ನು ಕಡಿಮೆ ಮಾಡಬಹುದು. ನಮ್ಮ ಹಾಗೂ ಪರಿಸರದ ಆರೋಗ್ಯ ಕಾಪಾಡಿಕೊಳ್ಳಬಹುದು. ನಾವು ಪ್ರಕೃತಿಯ ಭಾಗವಾಗಿರುವುದರಿಂದ ನಿಸರ್ಗದೊಟ್ಟಿಗೆ ಬದುಕನ್ನು ರೂಪಿಸುವೆಡೆ ಮೊದಲ ಹೆಜ್ಜೆ ಹಾಕಬೇಕಿದೆ. ನಾವೇನು ಕೊಡುತ್ತೇವೆ ಪ್ರಕೃತಿ ನಮಗೆ ವಾಪಸ್ಸು ನೀಡುತ್ತದೆ. ಓದು ಬರಹ ಕಲಿತ ನಾವು ನಿಸರ್ಗವನ್ನು ಓದಲೇ ಇಲ್ಲ. ನಿಸರ್ಗ ನಮ್ಮನ್ನು ಸೋಲಿಸದ ಹೊರತು ನಾವು ಬುದ್ದಿ ಕಲಿಯುವುದಿಲ್ಲವೇನೋ? ಈ ಬಿಸಿಲಿನ ಝಳ ಇನ್ನಾದರೂ ನಮ್ಮನ್ನು ಬದಲಿಸಲಿ ಸುಸ್ಥಿರ ಹಸಿರು ಹಾದಿಯಲಿ ಇನ್ನಾದರೂ ಮುಂದೆ ಸಾಗೋಣ.
ಇರುವುದೊಂದೇ ಭೂಮಿ; ಈಗಲಾದರೂ ಎಚ್ಚೆತ್ತುಕೊಳ್ಳೋಣ.

ಲೇಖನ: : ಚೈತ್ರ ಎಮ್. ಸಿ.
ಮಂಡ್ಯ ಜಿಲ್ಲೆ