ತಬೇಬುಯಾ ರೋಸಿಯಾ: ದಿ ಪಿಂಕ್‌ ಬ್ಲೂಮ್‌

ತಬೇಬುಯಾ ರೋಸಿಯಾ: ದಿ ಪಿಂಕ್‌ ಬ್ಲೂಮ್‌

            © ಸುನೀಲ್ ಕುಮಾರ್ ಎಸ್..

ಕಾಲೇಜ್ ದಿನಗಳಲ್ಲಿ ನನ್ನ ಅಚ್ಚುಮೆಚ್ಚಿನ ಜಾಗ ಅಂದ್ರೆ ಅದುವೇ ನಮ್ ಕಾಲೇಜಿನ ಲೈಬ್ರರಿ ಹತ್ರ ಇದ್ದ ‘ತಬೇಬುಯಾ ಮರ’.

  ಆ ಗುಲಾಬಿ ಹೂಗಳನ್ನು ನೋಡಿ ಒಂದು ಫೋಟೋ ತಗೊಂಡು ಹೋಗುವವರೆಗೂ ನನಗೆ ನೆಮ್ಮದಿ ಇರ್ತಿರಲಿಲ್ಲ. ಬಸ್ಸಲ್ಲಿ ಹೋಗುವಾಗ ಅಕ್ಕ ಪಕ್ಕದ ಬದಿಗಳಲ್ಲಿ ಈ ಹೂ ಅರಳಿರೋದನ್ನ ನೋಡೋ ಮಜಾನೇ ಬೇರೆ!
ಹೂವುಗಳು ಮೇಲಿಂದ ಬೀಳ್ತಾ ಇದ್ರೆ ಆ ಹೂವಿನ ಮಳೆಗೆ ಹಿರೋಯಿನ್ ಥರ ಫೀಲ್ ಬರೋದಂತೂ ಖಂಡಿತಾ!ಪ್ರಕೃತಿಯಲ್ಲಿ ಕೆಲವು ಮರಗಳು ತಮ್ಮ ಹೂವುಗಳಿಂದಲೇ ಎಲ್ಲರ ಗಮನ ಸೆಳೆಯುತ್ತವೆ. ಅವುಗಳಲ್ಲಿ ಅತ್ಯಂತ ಆಕರ್ಷಕವಾದ ಮರವೆಂದರೆ ತಬೇಬುಯಾ. ಈ ಮರವು ಹೂಬಿಟ್ಟಾಗ ಸುತ್ತಮುತ್ತಲಿನ ಪ್ರದೇಶವೇ ಬಣ್ಣಗಳ ಹಬ್ಬದಂತಾಗುತ್ತದೆ.

ಬೆಂಗಳೂರಿನಲ್ಲಿ ನೀವೇನಾದರೂ ಈ ಮರವನ್ನು ಅಥವಾ ಹೂವನ್ನು ನೋಡಿದರೆ ಅದಕ್ಕೆ ಮುಖ್ಯ ಕಾರಣ ಕರ್ತೃ ಸೇತುರಾಂ ಗೋಪಾಲರಾವ್ ನೇಗಿನ್ಹಾಳ್.

ತಬೇಬುಯಾ: “ವಸಂತ ರಾಣಿ” ಎಂದೇ ಗುರುತಿಸಿಕೊಳ್ಳುವ ಇದು ಬಿಗ್ನೋನಿಯೇಸಿ (Bignoniaceae) ಕುಟುಂಬಕ್ಕೆ ಸೇರುತ್ತದೆ. ಇದು ಉಷ್ಣ ವಲಯದ ಹೂಬಿಡುವ ಮರವಾಗಿದ್ದು, ಇದರ ಮೂಲ ದಕ್ಷಿಣ ಅಮೇರಿಕಾ ದೇಶಗಳು. ಈ ಹೂವುಗಳು ಸಾಮಾನ್ಯವಾಗಿ ಟ್ರಂಪೆಟ್ ರೀತಿ ಇರುತ್ತವೆ; ಕೆಳಭಾಗ ಉದ್ದವಾದ ಟ್ಯೂಬ್‌ನಂತೆ ಇದ್ದು ಮೇಲ್ಭಾಗದಲ್ಲಿ ತೆಳುವಾದ ಐದು ದಳಗಳನ್ನು ನೋಡಬಹುದು. ಈ ಹೂವುಗಳು ಸಾಮಾನ್ಯವಾಗಿ ಗುಲಾಬಿ (ಪಿಂಕ್), ಹಳದಿ ಮತ್ತು ಬಿಳಿ ಬಣ್ಣಗಳಲ್ಲಿ ಕಾಣಸಿಗುತ್ತವೆ. ಇದರ ಕೆಲವು ಪ್ರಭೇದಗಳ ಹೂವುಗಳ ಮಧ್ಯಭಾಗದಲ್ಲಿ ಗಾಢ ಬಣ್ಣದ ರೇಖೆಗಳು ಅಥವಾ ಚುಕ್ಕೆಗಳನ್ನು ಕಾಣಬಹುದು. ಈ ಹೂವುಗಳು ದೊಡ್ಡ ಗುಂಪುಗಳಲ್ಲಿ (clusters) ಮರದ ಕೊಂಬೆಗಳಲ್ಲಿ ಅರಳುತ್ತವೆ. ಇದರ ಇನ್ನೊಂದು ವಿಶೇಷತೆ ಎಂದರೆ ಹೂ ಬಿಡುವ ಸಮಯದಲ್ಲಿ ಮರದ ಎಲೆಗಳು ತುಂಬಾ ಕಡಿಮೆ ಇರುತ್ತವೆ ಅಥವಾ ಕೆಲವೊಮ್ಮೆ ಸಂಪೂರ್ಣವಾಗಿ ಉದುರುತ್ತವೆ. ಆದ್ದರಿಂದ ಮರದ ಮೇಲೆ ಕೇವಲ ಹೂವುಗಳು ಮಾತ್ರ ಕಾಣಿಸಿ ಬಹಳ ಆಕರ್ಷಕವಾಗಿ ತೋರುತ್ತವೆ. ಇವು ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ತಿಂಗಳ ನಡುವೆ ಅರಳುತ್ತವೆ. ಹೂವುಗಳು ಸುಮಾರು 5–8 ಸೆಂ. ಮೀ ಉದ್ದವಿದ್ದು, ಕೆಲವು ದಿನಗಳ ಕಾಲ ಮಾತ್ರ ತಾಜಾ ಆಗಿರುತ್ತವೆ. ನಂತರ ಹೂವುಗಳು ನೆಲಕ್ಕೆ ಬಿದ್ದು ಸುಂದರ ಹೂವಿನ ಹಾಸಿಗೆಯನ್ನು ರಚಿಸುತ್ತವೆ. ಈ ಹೂವುಗಳು ಜೇನುನೊಣಗಳು, ಚಿಟ್ಟೆಗಳು ಮತ್ತು ಕೆಲವು ಪಕ್ಷಿಗಳನ್ನು ಆಕರ್ಷಿಸಿ ಪರಾಗಸ್ಪರ್ಶ ಕ್ರಿಯೆಗೆ ಸಹಾಯಕವಾಗುತ್ತವೆ ಹಾಗೂ ಉತ್ತಮ ಮಕರಂದವನ್ನು ನೀಡುತ್ತವೆ. ಅದಲ್ಲದೆ ನಗರ ಪ್ರದೇಶಗಳಲ್ಲಿ ಹಸಿರು ವಾತಾವರಣವನ್ನು ಹೆಚ್ಚಿಸುತ್ತವೆ. ಈ ಕಾರಣದಿಂದಲೇ ನಗರ ಲ್ಯಾಂಡ್‌ಸ್ಕೇಪಿಂಗ್‌ನಲ್ಲಿ ತಬೇಬುಯಾಗೆ ವಿಶೇಷ ಮಹತ್ವವಿದೆ.

    © ಹರ್ಷಿತ ಪುಟ್ಟಹನುಮಯ್ಯ

20ನೇ ಶತಮಾನದ ಆರಂಭದಲ್ಲಿ ಜರ್ಮನ್ ಸಸ್ಯಶಾಸ್ತ್ರಜ್ಞ ಗುಸ್ತಾವ್ ಹರ್ಮನ್ ಕ್ರುಂಬಿಗಲ್ (Gustav Hermann Krumbiegel) ಲಾಲ್‌ಬಾಗ್‌ನಲ್ಲಿ ಹಾರ್ಟಿಕಲ್ಚರ್ ಮುಖ್ಯಸ್ಥರಾಗಿದ್ದರು. ಅವರು ನಗರದಲ್ಲಿ ಅನೇಕ ಅಲಂಕಾರಿಕ ಮರಗಳನ್ನು ನೆಟ್ಟರು. ಅವರ ಪ್ರಯತ್ನಗಳಿಂದ ತಬೇಬುಯಾ ಮರಗಳು ಬೆಂಗಳೂರಿಗೆ ಪರಿಚಯವಾಗಿದ್ದವು. ನಂತರದ ದಶಕಗಳಲ್ಲಿ ಭಾರತೀಯ ಅರಣ್ಯ ಅಧಿಕಾರಿಯಾದ ಎಸ್. ಜಿ. ನೆಗಿನ್ಹಾಳ್ (S. G. Neginhal) ಅವರು ಈ ಮರಗಳನ್ನು ಬೆಂಗಳೂರು ರಸ್ತೆಗಳಲ್ಲಿ ಸಾಲಾಗಿ ನೆಡುವ ಯೋಜನೆ ಆರಂಭಿಸಿದರು. ಇದರ ಪರಿಣಾಮವಾಗಿ ಇಂದು ಹಲವಾರು ರಸ್ತೆಗಳು ವಸಂತ ಕಾಲದಲ್ಲಿ ಗುಲಾಬಿ ಹಾಗೂ ಹಳದಿ ಹೂವುಗಳಿಂದ ಕಂಗೊಳಿಸುತ್ತವೆ

ಪ್ರಕೃತಿಯ ಬಣ್ಣಗಳ ಸೌಂದರ್ಯವನ್ನು ನಗರ ಜೀವನದಲ್ಲಿಯೂ ಅನುಭವಿಸಲು ಅವಕಾಶ ನೀಡುವ ಮರಗಳಲ್ಲಿ ತಬೇಬುಯಾ ಒಂದು ವಿಶೇಷ ಸ್ಥಾನವನ್ನು ಹೊಂದಿದೆ. “ಹೂವುಗಳು ಮಾತನಾಡುವುದಿಲ್ಲ; ಆದರೆ ಅವುಗಳ ಸೌಂದರ್ಯ ಎಲ್ಲವನ್ನು ಹೇಳುತ್ತದೆ” ಎಂಬಂತೆ, ಈ ಹೂವುಗಳು ಜನವರಿಯಿಂದ ಏಪ್ರಿಲ್ ವರಿಗೆ ಬೆಂಗಳೂರನ್ನು ವರ್ಣರಂಜಿತಗೊಳಿಸಿ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತವೆ. ಗುಲಾಬಿ ಬಣ್ಣದ ಹೂವುಗಳಿಂದ ತುಂಬಿದ ಈ ಮರಗಳನ್ನು ನೋಡಿದಾಗ ಪ್ರಕೃತಿಯ ಸೌಂದರ್ಯ ಎಷ್ಟು ಅದ್ಭುತವೆಂದು-ಅರಿವಾಗುತ್ತದೆ. ನಿಮ್ಮ ಸುತ್ತಮುತ್ತ ಈ ಹೂವುಗಳನ್ನು ನೋಡಿದಾಗ, ಬೆಂಗಳೂರಿನ ಹಸಿರು ಪರಂಪರೆಗೆ ಕೊಡುಗೆ ನೀಡಿದ ಎಸ್. ಜಿ. ನೆಗಿನ್ಹಾಳ್ (S. G. Neginhal) ಅವರನ್ನು ಕೃತಜ್ಞತೆಯಿಂದ ಸ್ಮರಿಸೋದನ್ನು ಮರೆಯಬೇಡಿ!

    © ಅನಿಲ್ ಕುಮಾರ್ ಎನ್. ಆರ್.

ಲೇಖನ: :ಹರ್ಷಿತ ಪುಟ್ಟಹನುಮಯ್ಯ
                     ಬೆಂಗಳೂರು ಗ್ರಾಮಾಂತರ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.