ಪ್ರಕೃತಿಯ ಮಡಿಲಲ್ಲಿ
© ಶ್ರೀನಿವಾಸ್ ಕೆ. ಎಸ್.
ನನ್ನ ಗೆಳೆಯನೊಬ್ಬನಿದ್ದಾನೆ. ಅವನು ನಾನು ಪ್ರಾಥಮಿಕ ಶಾಲೆಯಿಂದ ಜೊತೆಯಲ್ಲೇ ಓದಿದ್ದು. ಅವನ ಹೆಸರು… ಬೇಡ ಬಿಡಿ ಅವನು ಮಾಡುವ ಅವಾಂತರಗಳು ಒಂದಾ ಎರಡಾ. ಬರೆಯಲು ಹೊರಟರೆ ಒಂದು ಕಥಾಸಂಕಲನವೇ ಆಗುತ್ತೆ. ಇನ್ನು ನಾನು ಅವನ ಅವಾಂತರಗಳನ್ನ ಬರೆದು ಅವನ ಹೆಸರು ಹಾಕಿದರೆ ಕೋಪ ಬರಲ್ವೇ. ಸದ್ಯಕ್ಕೆ ಅವನನ್ನು ʼಬುಡ್ಡಣ್ಣʼ ಅಂತ ಕರೆಯೋಣ ಏಕೆಂದರೆ ʼಟಿಂಗರ್ ಬುಡ್ಡಣ್ಣʼ ನಾಟಕದಲ್ಲಿ ಬುಡ್ಡಣ್ಣನ ಪಾತ್ರ ಮಾಡಿದ್ದ. ನಾಟಕದ ಹುಚ್ಚು ಶಾಲೆಯಿಂದಲೇ ಇತ್ತು. ಇದೇ ಹುಚ್ಚು ಮುಂದೆ ಮೂರ್ನಾಲ್ಕು ಚಲನಚಿತ್ರಗಳನ್ನು ಪ್ರೊಡ್ಯೂಸ್ ಮಾಡಿಸಿತ್ತು. ಈ ಬುಡ್ಡಣ್ಣ ಹುಟ್ಟುತ್ತಲೇ ಸ್ಥಿತಿವಂತರ ಮನೆಯಲ್ಲಿ ಹುಟ್ಟಿದ್ದ. ಬೆಳೀತಾ ಬೆಳೀತಾ ಆಟ ಪಾಠಗಳ ಜೊತೆ ಅನೇಕ ಚಟಗಳನ್ನು ಹತ್ತಿಸಿಕೊಂಡ. ಚಟಗಳು ಅಂದರೆ ತಪ್ಪಾಗಿ ತಿಳಿದುಕೊಳ್ಳಬೇಡಿ; ನಮ್ಮ ಚಟಗಳು ಬೇರೆಯವರಿಗೆ ಹಿಡಿಸಿದರೆ ಅವೇ ಹವ್ಯಾಸಗಳಾಗುತ್ತವೆ. ಹಿಡಿಸದೆ ಹೋದರೆ, ಚಟವಾಗುತ್ತವೆ ಅಷ್ಟೇ! ಎಸ್ ಎಸ್ ಎಲ್ ಸಿ ಪರೀಕ್ಷೆವರೆಗೂ ಶಾಲೆಗೆ ಪುಸ್ತಕ ಹೊತ್ತಿದ್ದು ಅಷ್ಟೇ. ಆಮೇಲೆ ಶಾಲೆ ಕಡೆ ತಲೆ ಹಾಕಿಯೂ ಮಲಗಲಿಲ್ಲ. ಓದು ನಿಂತಿತ್ತು; ಮನೆಯಲ್ಲಿ ತೋಟ, ಇಟ್ಟಿಗೆಗೂಡು, ಕೋಳಿ ಫಾರಂ ಹೀಗೆ ಅನೇಕ ಜವಾಬ್ದಾರಿಗಳು ಇವನ ಹೆಗಲೇರಿದವು ಕೈಯಲ್ಲಿ ಕಾಸು ಓಡಾಡಲು ಪ್ರಾರಂಭಿಸಿತು. ಜೇಬಿನಲ್ಲಿ ಸಾಕಷ್ಟು ದುಡ್ಡಿದ್ದರೂ ʼತಾಯಿಯ ಮೇಲಾಣೆ ಒಂದು ರೂಪಾಯಿಯೂ ಜೇಬಲ್ಲಿಲ್ಲʼ ಎಂದು ಮುಲುಗುತ್ತಿದ್ದನು. ಮಹಾ ಜಿಪುಣ, ಎಂಜಲು ಕೈಯಲ್ಲಿ ಕಾಗೆಯನ್ನು ಓಡಿಸದವನು. ಆಗಲೇ ಶಿಕಾರಿ ಮಾಡುವ ಹುಚ್ಚನ್ನು ತಲೆ ತುಂಬಿಸಿಕೊಂಡಿದ್ದ. ಬಂದೂಕಿನಲ್ಲಿ ಹೊಡೆಯುತ್ತಿದ್ದನೋ? ಚಾಟರುಬಿಲ್ಲಿನಲ್ಲಿ ಹೊಡೆಯುತ್ತಿದ್ದನೋ? ನನಗೆ ತಿಳಿಯದು. ಅಂತೂ, ಕಾಗೆಯೊಂದನ್ನು ಬಿಟ್ಟು ಎಲ್ಲಾ ರೀತಿಯ ಪಕ್ಷಿಗಳನ್ನು ಸುಟ್ಟು ತಿಂದಿದ್ದ.
ಆಗಾಗಲೇ ನಾನು ಛಾಯಾಗ್ರಹಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೆ. ಒಂದಷ್ಟು ಪ್ರಶಸ್ತಿಗಳೂ ಬಂದಿದ್ದವು. ಇವನೂ ಸಹ ಸಮಾಜದಲ್ಲಿ ಏನಾದರೂ ಸಾಧನೆ ಮಾಡಿ ಗುರುತಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ. ಅದೇ ನಿಟ್ಟಿನಲ್ಲಿ ತಾನು ವೈಲ್ಡ್ ಲೈಫ್ ಪೋಟೋಗ್ರಾಫರ್ ಆಗಬೇಕೆಂದು ನನ್ನ ಬೆನ್ನುಹತ್ತಿದ. ಇವನ ಹಲವು ಕಲ್ಯಾಣ ಸಾಹಸಗಳನ್ನು ನೋಡಿದ್ದ ನನಗೆ ಪ್ರಾರಂಭದಲ್ಲಿ ‘ಬೇಡ’ ಅನಿಸಿದರೂ, ನೋಡೋಣ ವೈಲ್ಡ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಮೂಡಿಸಿ ಪ್ರಾಣಿ ಪಕ್ಷಿಗಳ ಬಗ್ಗೆ ಒಲವು ಮೂಡಿಸಿದರೆ, ಈತ ಬದಲಾಗಿ, ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುವುದನ್ನು ತಪ್ಪಿಸಬಹುದು ಎಂದು ಯೋಚಿಸಿ, ಒಂದೊಳ್ಳೆ ಕ್ಯಾಮೆರಾ ಕೊಳ್ಳುವಂತೆ ತಿಳಿಸಿದೆ. ಅದೇ ವರ್ಷ ಸಿಂಗಪೂರಿಗೆ ಪ್ರವಾಸಕ್ಕೆ ಹೋಗಿ ಬರುವಾಗ ನಿಕಾನ್ D200 ಕ್ಯಾಮೆರಾದೊಂದಿಗೆ ಹಿಂದಿರುಗಿದ; ಆಗಿನ ಸಮಯಕ್ಕೆ ಅದು ಅತ್ಯುತ್ತಮ ಕ್ಯಾಮೆರಾ. ಕ್ಯಾಮೆರಾ ತಗೊಂಡು ನನ್ನೊಂದಿಗೆ ಬಂಡೀಪುರ, ರಂಗನತಿಟ್ಟು, ಮುತ್ತೋಡಿ ಫಾರೆಸ್ಟ್, ಅನೇಕ ಕೆರೆ, ಹಳ್ಳಕೊಳ್ಳ ಹೀಗೆ ಹಲವು ಕಡೆ ಸುತ್ತಾಡಿ ನನ್ನೊಂದಿಗೆ ಹಲವಾರು ಚಿತ್ರಗಳನ್ನು ಸೆರೆಹಿಡಿದ. ನನಗೋ ಅಂಗುಲಿಮಾಲನನ್ನು ಬದಲಾಯಿಸಿದ ಬುದ್ದನಂತೆ ಮನಸ್ಸು ಬೀಗುತ್ತಿತ್ತು..


ಒಂದು ದಿನ ಬೆಳಿಗ್ಗೆ ಫೋನ್ ಮಾಡಿ ಹೊಸದಾಗಿ ಕೋಲಾರದಲ್ಲಿ ತೋಟ ಮಾಡಿದ್ದೇನೆ, ನೋಡಿಕೊಂಡು ಬರೋಣ ಎಂದ. ಸರಿ, ನಾನು ಪುರುಸೊತ್ತಾಗಿ ಇದ್ದೆ. ಅವನ ಜೊತೆ ಕಾರು ಏರಿ ಹೊರಟೆ. ಅಲ್ಲಿ ತೋಟ ನೋಡಿಕೊಳ್ಳಲು ಅವರದೇ ಸಂಬಂಧಿಕರ ಕುಟುಂಬವನ್ನು ಇಟ್ಟಿದ್ದನು. ಇವನು ಹೋದಾಗ ಉಳಿದುಕೊಳ್ಳಲು ಒಂದು ಸಣ್ಣ ಮನೆಯನ್ನು ಕಟ್ಟಿಕೊಂಡಿದ್ದನು. ಕಾರು ಕೋಲಾರದ ತೋಟದ ಮನೆ ತಲುಪಿತು ಮನೆಯವರು ಓಡಿಬಂದವರು ಮಾಲೀಕನನ್ನು ಸ್ವಾಗತಿಸಲು. “ಏನಣ್ಣ ಬರ್ತೀನಿ ಅಂತ ಒಂದು ಫೋನು ಮಾಡಿಲ್ಲ; ಮೊದಲ ಬಾರಿ ನಿಮ್ಮ ಗೆಳೆಯರೊಬ್ಬರನ್ನು ಕರ್ಕೊಂಡು ಬಂದಿದ್ದೀರಾ. ಮೊದಲೇ ಹೇಳಿದ್ದರೆ ಏನಾದರೂ ಸ್ಪೆಷಲ್ ಅಡುಗೆ ಮಾಡಿಸುತ್ತಿದ್ದೆ” ಅಂದ ಅಷ್ಟೇ, ಇವನು “ಅಯ್ಯೋ ಇವರೇನು ಸ್ಪೆಷಲ್ ತಿನ್ನೋದಿಲ್ವೇ? ದಿನಾ ತಿಂತಾರೆ! ನನಗೂ ದಿನಾ ತಿಂದೂ ತಿಂದೂ ಬೇಜಾರಾಗಿದೆ. ಅನ್ನ ಮಾಡಿ, ಒಣ ಮೆಣಸಿನ ಕಾಯಿ ಕಾರ ಚಟ್ನಿ ಮಾಡಿ, ಸೂಪರ್ ಆಗಿ ಇರುತ್ತೆ. ಬೆಂಗಳೂರಿನಲ್ಲಿ ಇದನ್ನು ಯಾರೂ ಮಾಡಲ್ಲ. ಇದೇ ನಮಗೆ ಸ್ಪೆಷಲ್” ಎಂದ. ಅವರಿಗೂ ಇವನು ಮಹಾ ಜಿಪುಣನೆಂದು ತಿಳಿದಿತ್ತು. ನನ್ನ ಮುಖ ನೋಡಿ ಬೇಸರದ ಒಂದು ನಗೆ ಕೊಟ್ಟು “ಆಯ್ತು ಅದನ್ನೇ ಮಾಡಿಸುತ್ತೇನೆ” ಎಂದ.
ಊಟ ಮುಗಿಸಿ ತೋಟ ಸುತ್ತಲು ಹೋದೆವು ಸಂಜೆ 5:00 ಆಗಿತ್ತು. ‘ಇನ್ನೇನು ಮನೆಗೆ ಹೊರಡೋಣ’ ಎಂದು ತಿಳಿಸಿದೆ; ‘ಟೀ ಕುಡಿದು ಹೋಗೋಣ’ ಎಂದು ಟೀ ಮಾಡಲು ತಿಳಿಸಿದ. ಅಷ್ಟರಲ್ಲಿ ಅಲ್ಲಿಗೆ ಅಕ್ಕಪಕ್ಕದ ಹಳ್ಳಿಗಳಿಂದ ನಾಲ್ಕು ಜನ ಪರಿಚಿತರು ಈತನನ್ನು ಭೇಟಿ ಮಾಡಲು ಬಂದಿದ್ದರು. ಹಾಗೆ ಕುಶಲೋಪರಿ ಮಾತನಾಡುತ್ತಾ ಎಲ್ಲರೂ ಟೀ ಕುಡಿದರು. ಮಾತಿನ ಮಧ್ಯೆ ಒಬ್ಬ ಬೇಟೆಯ ವಿಷಯವನ್ನು ತೆಗೆದ; ಬೇಟೆ ಎಂದೊಡನೆ ನಮ್ಮ ಬುಡ್ಡಣ್ಣನ ಇಂದ್ರಿಯಗಳು ರೋಮಾಂಚನಗೊಂಡವು. ತನ್ನದೇ ತೋಟದ ಹೆಮ್ಮರ ಒಂದರ ಮೇಲೆ, ಭಾರೀ ಗಾತ್ರದ ಪಕ್ಷಿಗಳು ಸಂಜೆಯಾಗುತ್ತಲೇ ಬಂದು ಆಶ್ರಯ ಪಡೆಯುತ್ತವೆಂದು ಕೇಳಿ ಆಶ್ಚರ್ಯ ಪಟ್ಟುಕೊಂಡ. ಅಲ್ಲಿ ಬಂದಿದ್ದ ಕೆಲಸವಿಲ್ಲದ ಆ ನಾಲ್ಕು ಮಂದಿಯೂ ಇವನಂತೆ ಬೇಟೆಯ ಚಟ ಹತ್ತಿಸಿಕೊಂಡಿದ್ದವರೇ. ಅಲ್ಲಿ ಮಾತಿನಲ್ಲೇ ಬೇಟೆಯ ಕಿಚ್ಚು ಹತ್ತಿಕೊಂಡಿತು. ಇಂದು ಸಂಜೆಯ ಆ ಹೆಮ್ಮರದ ಪಕ್ಷಿಗಳನ್ನು ಬೇಟೆಯಾಡುವುದೆಂದು ನಿರ್ಧರಿಸಿದರು.
ಅಲ್ಲೇ ಕುಳಿತಿದ್ದ ನನ್ನ ಮನಸ್ಸು ಚಡಪಡಿಸತೊಡಗಿತು. ನನ್ನ ಪ್ರಕಾರ ಬೇಟೆ ಅಕ್ಷಮ್ಯ ಅಪರಾಧ; ಇವನನ್ನು ನಾನು ಕಾಡಿಗೆ ಕರೆದುಕೊಂಡು ಹೋದಾಗಲೆಲ್ಲ ತಿಳಿಸಿದ್ದೆ. ಅದಕ್ಕೆ ಅವನು ಸರಿ ಎನ್ನುವಂತೆ ತಲೆಯೂ ತೂಗಿದ್ದ. ಆದರೆ ಈ ಕ್ಷಣದಲ್ಲಿ ಎಲ್ಲಾ ಮರೆತು ಬೇಟೆಗೆ ಬಂದೂಕು, ದೊಣ್ಣೆ, ಹೆಡ್ ಟಾರ್ಚು ಎಲ್ಲಾ ಸಿದ್ದ ಮಾಡಿಕೊಂಡು ಬೇಟೆಗೆ ಹೊರಟು ನಿಂತ. ಜೊತೆಯಲ್ಲಿ ಬರುವಂತೆ ನನ್ನನ್ನೂ ಕರೆದ. ನಾನು ಕೈ ಮುಗಿದು, ಮತ್ತೊಮ್ಮೆ ನಿನ್ನ ಜೊತೆ ಬರುವುದೇ ಇಲ್ಲ ಎಂದು ಹೇಳಿ ಕಳುಹಿಸಿದೆ. ಎಲ್ಲರೂ ನನ್ನನ್ನು ಒಮ್ಮೆ ನೋಡಿ ನಗುತ್ತಲೇ ಬೇಟೆಗೆ ಹೆಜ್ಜೆ ಹಾಕಿದರು. ಆಕಾಶದಲ್ಲಿ ಕತ್ತಲು ಆವರಿಸಲು ಪ್ರಾರಂಭಿಸಿತ್ತು. ಐಬಿಸ್ ಮತ್ತು ಬೆಳ್ಳಕ್ಕಿಗಳು ಸಾಲು ಸಾಲು ಗುಂಪುಗಳಲ್ಲಿ ಗೂಡಿನತ್ತ ಪ್ರಯಾಣ ಬೆಳೆಸಿದ್ದವು. ನಾನು ಮನೆ ಮುಂಭಾಗದ ಜಗಲಿಯಲ್ಲಿ ಕುಳಿತು ಬೇಟೆಗೆ ಹೊರಟವರ ಶಪಿಸುತ್ತಿದ್ದೆ. ಎದುರಿಗೆ ಕೂಗುದೂರದಲ್ಲಿ ಇವರು ಬೇಟೆಗೆ ಹೊರಟ ಆ ಹೆಮ್ಮರ ಮಬ್ಬಾಗಿ ಕಾಣುತ್ತಿತ್ತು. ಎಲ್ಲರೂ ಸದ್ದಿಲ್ಲದೆ ಕಳ್ಳ ಹೆಜ್ಜೆಗಳನ್ನ ಇಟ್ಟು, ನಿಧಾನವಾಗಿ ಸದ್ದು ಮಾಡದೆ ಆ ಹೆಮ್ಮರದ ಬುಡದಲ್ಲಿ ಕೋವಿ ಹಿಡಿದು ಕುಳಿತರು.
ನಮ್ಮ ಸಂತಾನೋತ್ಪತ್ತಿಯ ಕಾಲವು ಸಾಮಾನ್ಯವಾಗಿ ಮಳೆಗಾಲದ ಸಮಯವಾಗಿದ್ದು, ‘ಮೇ’ ತಿಂಗಳಿನಿಂದ ‘ಸೆಪ್ಟೆಂಬರ್’ವರೆಗೆ ನೆಲಕ್ಕೆ ಬಹಳ ಸನಿಹದಲ್ಲಿ ದಟ್ಟವಾದ ಪೊದೆಗಳ ನಡುವೆ ಗೂಡು ಕಟ್ಟುತ್ತೇವೆ. ನಮ್ಮ ಗೂಡು ಚೆಂಡಿನ ಆಕಾರದಲ್ಲಿ ಇರುತ್ತದೆ. ಗೂಡನ್ನು ಒಣಗಿದ ಹುಲ್ಲು ಅಥವಾ ಬಿದಿರಿನ ಎಲೆಗಳಿಂದ ಮಾಡಿ, ಗೂಡಿನ ಪಕ್ಕದಲ್ಲಿ ಪ್ರವೇಶ ದ್ವಾರವನ್ನು ಮಾಡಿಕೊಂಡಿರುತ್ತೇನೆ. 3 ರಿಂದ 4 ಬಿಳಿ ಅಥವಾ ಕೆನೆ ಬಣ್ಣವಿರುವ, ಮೇಲೆ ಕೆಂಪು-ಕಂದು ಬಣ್ಣದ ಸಣ್ಣ ಚುಕ್ಕೆಗಳನ್ನು ಹೊಂದಿರುವ ಮೊಟ್ಟೆಗಳನ್ನು ಇಡುತ್ತೇವೆ. ಗೂಡು ಕಟ್ಟುವುದು ಮತ್ತು ಮರಿಗಳಿಗೆ ಆಹಾರ ತಂದುಕೊಡುವ ಕೆಲಸವನ್ನು ನಾವು ದಂಪತಿಗಳಿಬ್ಬರೂ ಸಮಾನವಾಗಿ ನಿರ್ವಹಿಸುತ್ತೇವೆ. ಕೆಲವು ಸಲ ಕೋಗಿಲೆ, ಚಾಣದಂತಹ ಇತರ ಹಕ್ಕಿಗಳ ಮರಿಗಳನ್ನು ಸಾಕಿ ಬೆಳೆಸುತ್ತೇವೆ.


ಅಲ್ಲೇ ಕುಳಿತಿದ್ದ ನನ್ನ ಮನಸ್ಸು ಚಡಪಡಿಸತೊಡಗಿತು. ನನ್ನ ಪ್ರಕಾರ ಬೇಟೆ ಅಕ್ಷಮ್ಯ ಅಪರಾಧ; ಇವನನ್ನು ನಾನು ಕಾಡಿಗೆ ಕರೆದುಕೊಂಡು ಹೋದಾಗಲೆಲ್ಲ ತಿಳಿಸಿದ್ದೆ. ಅದಕ್ಕೆ ಅವನು ಸರಿ ಎನ್ನುವಂತೆ ತಲೆಯೂ ತೂಗಿದ್ದ. ಆದರೆ ಈ ಕ್ಷಣದಲ್ಲಿ ಎಲ್ಲಾ ಮರೆತು ಬೇಟೆಗೆ ಬಂದೂಕು, ದೊಣ್ಣೆ, ಹೆಡ್ ಟಾರ್ಚು ಎಲ್ಲಾ ಸಿದ್ದ ಮಾಡಿಕೊಂಡು ಬೇಟೆಗೆ ಹೊರಟು ನಿಂತ. ಜೊತೆಯಲ್ಲಿ ಬರುವಂತೆ ನನ್ನನ್ನೂ ಕರೆದ. ನಾನು ಕೈ ಮುಗಿದು, ಮತ್ತೊಮ್ಮೆ ನಿನ್ನ ಜೊತೆ ಬರುವುದೇ ಇಲ್ಲ ಎಂದು ಹೇಳಿ ಕಳುಹಿಸಿದೆ. ಎಲ್ಲರೂ ನನ್ನನ್ನು ಒಮ್ಮೆ ನೋಡಿ ನಗುತ್ತಲೇ ಬೇಟೆಗೆ ಹೆಜ್ಜೆ ಹಾಕಿದರು. ಆಕಾಶದಲ್ಲಿ ಕತ್ತಲು ಆವರಿಸಲು ಪ್ರಾರಂಭಿಸಿತ್ತು. ಐಬಿಸ್ ಮತ್ತು ಬೆಳ್ಳಕ್ಕಿಗಳು ಸಾಲು ಸಾಲು ಗುಂಪುಗಳಲ್ಲಿ ಗೂಡಿನತ್ತ ಪ್ರಯಾಣ ಬೆಳೆಸಿದ್ದವು. ನಾನು ಮನೆ ಮುಂಭಾಗದ ಜಗಲಿಯಲ್ಲಿ ಕುಳಿತು ಬೇಟೆಗೆ ಹೊರಟವರ ಶಪಿಸುತ್ತಿದ್ದೆ. ಎದುರಿಗೆ ಕೂಗುದೂರದಲ್ಲಿ ಇವರು ಬೇಟೆಗೆ ಹೊರಟ ಆ ಹೆಮ್ಮರ ಮಬ್ಬಾಗಿ ಕಾಣುತ್ತಿತ್ತು. ಎಲ್ಲರೂ ಸದ್ದಿಲ್ಲದೆ ಕಳ್ಳ ಹೆಜ್ಜೆಗಳನ್ನ ಇಟ್ಟು, ನಿಧಾನವಾಗಿ ಸದ್ದು ಮಾಡದೆ ಆ ಹೆಮ್ಮರದ ಬುಡದಲ್ಲಿ ಕೋವಿ ಹಿಡಿದು ಕುಳಿತರು.
ಜಗಲಿಯಲ್ಲಿ ಕುಳಿತಿದ್ದ ನಾನು ದೂರದಿಂದಲೇ ಆ ಹೆಮ್ಮರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಇಂದು ಆ ಹೆಮ್ಮರಕ್ಕೆ ಯಾವುದೇ ಪಕ್ಷಿ ಬರದಿರಲೆಂದು ದೇವರಲ್ಲಿ ಪ್ರಾರ್ಥಿಸಿದೆ. ಸಮಯ ಕಳೆದಂತೆ ನಾಲ್ಕು ದೊಡ್ಡ ಗಾತ್ರದ ಪಕ್ಷಿಗಳು ನಿಧಾನವಾಗಿ ರೆಕ್ಕೆ ಬಡಿಯುತ್ತಾ ಆ ಹೆಮ್ಮರದ ಕೊಂಬೆಯ ಮೇಲೆ ಒಂದೊಂದಾಗಿ ಹಾರಿ ಬಂದು ಕುಳಿತವು. ದೂರದಿಂದ ಈ ದೃಶ್ಯ ಕಂಡು ನನ್ನ ಹೃದಯ ಕಿವುಚಿದಂತಾಯಿತು. ಇನ್ನು ಕೆಲವೇ ಕ್ಷಣಗಳಲ್ಲಿ ಆ ಪಕ್ಷಿಗಳು ಕೋವಿಯ ಗುಂಡಿಗೆ ನೆಲಕ್ಕುರುಳುತ್ತವೆ! ಆ ಮಬ್ಬು ಕತ್ತಲಿನಲ್ಲಿ ನನಗೆ ಆ ಪಕ್ಷಿ ಯಾವುದೆಂದು ಸರಿಯಾಗಿ ಗುರುತು ಹಚ್ಚಲು ಆಗಲಿಲ್ಲ, ಬಹುಶ: ಅದರ ಗಾತ್ರ ಮತ್ತು ರೆಕ್ಕೆ ಬಡಿತ ನೋಡಿ ‘ಓಪನ್ ಬಿಲ್ಡ್ ಸ್ಟಾರ್ಕ್’ ಪಕ್ಷಿ ಇರಬೇಕೆಂದು ಯೋಚಿಸಿದೆ. ಮುಷ್ಟಿ ಬಿಗಿ ಮಾಡಿ ಬೇಸರದಿಂದ ತಲೆತಗ್ಗಿಸಿ ಕುಳಿತೆ. ಎಲ್ಲಾ ಕಡೆ ನಿಶ್ಯಬ್ದ, ನಿಶ್ಯಬ್ದವನ್ನು ಸೀಳಿಕೊಂಡು ಜೋರಾಗಿ ʼ ಢಂʼ ಎಂದು ಕೋವಿ ಸದ್ದು ಮಾಡಿತು. ಆ ಸದ್ದಿಗೆ ಹೆಮ್ಮರದಲ್ಲಿನ ಪಕ್ಷಿಗಳ ಜೊತೆಯಲ್ಲಿ ಅಕ್ಕಪಕ್ಕದ ಮರಗಳಲ್ಲಿ ಆಶ್ರಯ ಪಡೆದಿದ್ದ ಬೆಳ್ಳಕ್ಕಿ- ಬಾವಲಿಗಳು ಒಮ್ಮೆಲೇ ಚೀರುತ್ತ ಆಕಾಶಕ್ಕೆ ಹಾರಿದವು. ಕೆಲವು ಬಹಳ ದೂರ ಹಾರಿ ಹೋದವು. ಮನಸ್ಸು ತುಂಬಾ ಭಾರವಾಯಿತು. ಹತ್ತು ಹದಿನೈದು ನಿಮಿಷ ಕಳೆದಿರಬೇಕು. ಕತ್ತಲಲ್ಲಿ ಬೇಟೆಗೆ ಹೋಗಿದ್ದವರು ಟಾರ್ಚ್ ಹಿಡಿದು ಹಿಂದುರುಗಿ ಬರುತ್ತಿದ್ದರು. ಅವರು ಹತ್ತಿರವಾಗುತ್ತಿದ್ದಂತೆ ಆತಂಕದಿಂದ ನಾನು ಅವರ ಕೈನಲ್ಲೋ, ಹೆಗಲ ಮೇಲೋ ಇರಬೇಕಾದ ರಕ್ತಸಿಕ್ತ ಪಕ್ಷಿಯ ದೇಹವನ್ನು ನೋಡಬೇಕಲ್ಲ ಎಂದು ಇವರನ್ನು ಶಪಿಸಿ ಮನದಲ್ಲೇ ಮರುಗಿದೆ.

ಹತ್ತಿರ ಬರುತ್ತಿದ್ದಂತೆ ಅವರ ಮಾತುಗಳು ಜೋರಾದವು ನಾನು ಕುಳಿತ ಜಗಲಿಯ ಮುಂದೆ ಬಂದು ನಿಂತರು. ಹಟ್ಟಿಯಲ್ಲಿ ಹಾಕಿದ್ದ ಆ ನೂರು ಕ್ಯಾಂಡಲ್ ಬಲ್ಬಿನ ಮಂದ ಬೆಳಕಿನಲ್ಲಿ ನನಗೆ ಯಾವುದೇ ಬೇಟೆ ಕಾಣಲಿಲ್ಲ. ಇನ್ನು ಸೂಕ್ಷ್ಮವಾಗಿ ದೃಷ್ಟಿಸಿ ನೋಡಿದೆ ಯಾರ ಕೈಲೂ ಬೇಟೆ ಕಾಣಲಿಲ್ಲ. ಅವರು ಒಬ್ಬರನ್ನೊಬ್ಬರು ದೂಷಿಸುವಾಗಲೇ ನನಗೆ ಅರ್ಥವಾಗಿದ್ದು ಅವರು ಗುರಿ ತಪ್ಪಿದ್ದರು ಎಂದು.
ಇವರು ಬೇಟೆಗೆಂದು ಆ ಹೆಮ್ಮರದ ಬುಡದಲ್ಲಿ ಸದ್ದಿಲ್ಲದೆ ಕುಳಿತಿದ್ದಾಗ, ಆ ಬೃಹತ್ ಪಕ್ಷಿಗಳು ಇವರ ತಲೆಯ ನೆರಕ್ಕಿದ್ದ ಕೊಂಬೆಯ ಮೇಲೆ ಬಂದು ಕುಳಿತಿದ್ದು, ತಲೆ ಮೇಲೆ 90 ಡಿಗ್ರಿಯಲ್ಲಿ ಕೋವಿಯಿಂದ ಶೂಟ್ ಮಾಡಲು ಅಸಾಧ್ಯ. ಆಚೆ ಈಚೆ ಹೋಗಿ ಗುರಿ ಇಡುವ ಎಂದರೆ ಸ್ವಲ್ಪ ಅಲುಗಾಡಿದರು ಶಬ್ದಕ್ಕೆ ಪಕ್ಷಿಗಳು ಹಾರಿಹೋಗುತ್ತವೆ. ಏನು ಮಾಡುವುದೆಂದು ಯೋಚಿಸಿ, ಕ್ಷಣ ಕ್ಷಣವನ್ನೂ ದಿನದಂತೆ ಕಳೆದು, ಹತ್ತು ನಿಮಿಷವಾದರೂ ಯಾರ ತಲೆಗೂ ಯಾವುದೇ ಸೂಕ್ತ ಯೋಚನೆ ಹೊಳೆಯದೆ, ಕುಳಿತಲ್ಲಿಂದಲೇ ಲಂಬವಾಗಿ 90 ಡಿಗ್ರಿಯಲ್ಲಿ ತಲೆಯ ಮೇಲಿದ್ದ ಪಕ್ಷಿಗೆ ಗುಂಡು ಹಾರಿಸಿದರಂತೆ. ʼ ಢಂ ʼ ಎಂದ ಗುಂಡಿಗೆ ಎಲ್ಲಾ ಪಕ್ಷಿಗಳು ಚೀರುತ್ತಾ ಆಕಾಶಕ್ಕೆ ಚಿಮ್ಮಿದವಂತೆ. ಯಾವುದೇ ಬೇಟೆಯಾಗಲಿಲ್ಲ ಎಂದು ಬೇರೆಯವರು ನನಗೆ ನಡೆದದ್ದನ್ನು ವಿವರಿಸಿ ಒಬ್ಬರನ್ನೊಬ್ಬರು ಶಪಿಸುತ್ತಿದ್ದರು.
ಇದನ್ನು ಕೇಳಿ ನನ್ನ ಮನಸ್ಸು ಕುಣಿದು ಕುಪ್ಪಳಿಸಿತು. ಕಣ್ಣ ಮುಂದೆ ನಡೆಯುತ್ತಿದ್ದ ಘೋರ ದುರಂತ ಒಂದು ತಪ್ಪಿದಂತಾಯಿತು. ಮನದಲ್ಲೇ ನೆನೆದಿದ್ದ ದೇವರಿಗೆ ಥ್ಯಾಂಕ್ಸ್ ಹೇಳಿದೆ. ಮತ್ತೆಂದೂ ಇವನೊಟ್ಟಿಗೆ ಕಾರು ಹತ್ತುವುದಿಲ್ಲ, ಇವನ ಸಹವಾಸವೇ ಬೇಡವೆಂದು ನಿರ್ಧರಿಸಿ ಮನೆಗೆ ಹಿಂದಿರುಗಿದೆ.

ಲೇಖನ: : ಶ್ರೀನಿವಾಸ್ ಕೆ. ಎಸ್.
ಬೆಂಗಳೂರು ಜಿಲ್ಲೆ
