ಭೂಮಿಗೆ ಅಪ್ಪಳಿಸಬಲ್ಲ ಕ್ಷುದ್ರಗ್ರಹಗಳು!

ಭೂಮಿಗೆ ಅಪ್ಪಳಿಸಬಲ್ಲ ಕ್ಷುದ್ರಗ್ರಹಗಳು!

8, 9… ಆ…10… ಅಲ್ಲೀ…11! ಒಟ್ಟು 11 ಉಲ್ಕೆಗಳು. ತಮಿಳುನಾಡಿನ ಉರಿಗಮ್ ಎಂಬ ಊರಿನ ಬಳಿಯ ಯಾವುದೋ ಒಂದು ಸಣ್ಣ ಹಳ್ಳಿಯ ಬಳಿ ನಾನು, ನನ್ನ ಸ್ನೇಹಿತ ಮತ್ತು ಇಬ್ಬರೋ ಮೂರು ಜನ ಖಗೋಳದ ಬಗ್ಗೆ ತಿಳಿದ ಅಣ್ಣಂದಿರ ಜೊತೆಗೆ ಅಂದು ನಕ್ಷತ್ರ ವೀಕ್ಷಣೆಗೆಂದು ಅಲ್ಲಿಗೆ ಹೋಗಿದ್ದೆವು. ರಾತ್ರಿಯ ಹೊತ್ತು ನಕ್ಷತ್ರ ವೀಕ್ಷಿಸಲು ಟೆಲಿಸ್ಕೋಪ್ ಅಳವಡಿಸಬೇಕು. ಅದಕ್ಕೆ ಸರಿಯಾದ ಕತ್ತಲಿನ ಜಾಗ, ಎತ್ತರದ ಮರಗಳು ನಕ್ಷತ್ರ ವೀಕ್ಷಣೆಗೆ ಅಡ್ಡಿ ಮಾಡದ ಬಯಲು ಪ್ರದೇಶವನ್ನು ಹುಡುಕಬೇಕಿತ್ತು. ಆ ಕೆಲಸದಲ್ಲಿ ನಮ್ಮ ಅಣ್ಣಂದಿರು ತಲ್ಲೀನರಾಗಿದ್ದರು. ನಾನೂ ಮತ್ತು ನನ್ನ ಸ್ನೇಹಿತ ಮತ್ತೇನು ಮಾಡುವುದು? ಇಬ್ಬರು ಒಂದು ದೇವಸ್ಥಾನದ ಪಕ್ಕ ಇದ್ದ ಮದುವೆ ಮಂಟಪದ ಮೇಲೆ ಹತ್ತಿದೆವು. ಆಕಾಶದತ್ತ ಮುಖ ಮಾಡುತ್ತಾ, ಎರಡೂ ಕೈಗಳನ್ನು ತಲೆಯ ಕೆಳಗೆ ದಿಂಬಿನ ಹಾಗೆ ಇರಿಸಿ ಹಾಗೇ ನಕ್ಷತ್ರವನ್ನು ಎಣಿಸಲಿಕ್ಕೆ ಶುರು ಮಾಡಿದೆವು.

ಆ ಕತ್ತಲಿನ ಆಕಾಶದ ಕಪ್ಪು ಹಾಳೆಯಲ್ಲಿ ಯಾರೋ ಬಿಳಿಯ ರೇಖೆಯನ್ನು ಗೀಚಿದ ಹಾಗೆ, ಉಲ್ಕೆಯೊಂದು ನಮ್ಮ ಕಣ್ಣ ಮುಂದೆಯೇ ಕ್ಷಣಾರ್ಧದಲ್ಲಿ ಹಾರಿತು. ಇಬ್ಬರೂ ಅದನ್ನು ಕಂಡ ತಕ್ಷಣ ಒಬ್ಬರನ್ನೊಬ್ಬರು ನೋಡಿಕೊಂಡೆವು. ಕಣ್ಸನ್ನೆಯೇ ನಮ್ಮ ಆಶ್ಚರ್ಯವನ್ನು ಇಬ್ಬರಿಗೂ ರವಾನೆ ಮಾಡಿತ್ತು. ಮತ್ತೆ ಆಕಾಶದ ಕಡೆ ಮುಖ ಮಾಡಿದೆವು. ಎರಡೇ ನಿಮಿಷದಲ್ಲಿ ಇನ್ನೊಂದು ಉಲ್ಕೆ! ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ಇದನ್ನ ಅಣ್ಣಂದಿರಿಗೆ ಹೇಳಲೇಬೇಕು ಎಂದು ಓಡಿ, ಹೇಳಿದೆವು. ಆಗ ಅವರು ‘ಹಾ… ಈಗ ಡಿಸೆಂಬರ್ ತಿಂಗಳಲ್ವಾ ಉಲ್ಕಾಪಾತ ಜಾಸ್ತಿ ಇರ್ತದೆ’ ಎಂದರು. ಹಾಗಾದರೆ, ನಾವೇಕೆ ಎಣಿಸಬಾರದು? ಎಂದು ಶುರು ಮಾಡಿದೆವು. ಅಣ್ಣಂದಿರು ಟೆಲಿಸ್ಕೋಪ್ ಅನ್ನು ತಯಾರು ಮಾಡುವಷ್ಟರಲ್ಲಿ ಅಂದು ಒಟ್ಟು 11 ಉಲ್ಕೆಗಳನ್ನು ಎಣಿಸಿಬಿಟ್ಟಿದ್ದೆವು. ನನ್ನ ಜೀವನದಲ್ಲಿ ಅಂದೇ ನಾನು ಅತೀ ಹೆಚ್ಚು ಉಲ್ಕೆಗಳನ್ನು ನೋಡಿದ್ದು!!


ನೀವೆಷ್ಟು ನೋಡಿದ್ದೀರಾ?
ನೋಡಿ, ಉಲ್ಕೆಗಳಿಗೂ – ಕ್ಷುದ್ರಗ್ರಹಗಳಿಗೂ ವ್ಯತಾಸವಿದೆ. ಇವೆರಡು ಬಾಹ್ಯಾಕಾಶದಲ್ಲಿರುವ ಕಲ್ಲುಗಳು, ಗ್ರಹದ ತುಣುಕುಗಳು ಹಾಗೂ ಕೆಲವೊಮ್ಮೆ ಲೋಹಗಳೂ ಆಗಿರುತ್ತವೆ. ಇವೆರಡಕ್ಕೂ ಇರುವ ಮುಖ್ಯ ವ್ಯತ್ಯಾಸ ಇವುಗಳ ಗಾತ್ರ. ಸುಮಾರು 1 ಮೀಟರ್ ಗಿಂದ ಕಡಿಮೆ ವ್ಯಾಸವಿರುವ ಇಂತಹ ಬಾಹ್ಯ ವಸ್ತುಗಳಿಗೆ ಉಲ್ಕೆಗಳು/ಉಲ್ಕಾ ಕಣಗಳು ಎನ್ನುತ್ತಾರೆ. ಗಾತ್ರದಲ್ಲಿ ಇದಕ್ಕಿಂತ ದೊಡ್ಡದಿರುವುದನ್ನು ಕ್ಷುದ್ರಗ್ರಹಗಳು ಎನ್ನುತ್ತಾರೆ. ಕ್ಷುದ್ರಗ್ರಹಗಳು ಮುಖ್ಯವಾಗಿ ಮಂಗಳ ಮತ್ತು ಗುರು ಗ್ರಹಗಳ ಮಧ್ಯದಲ್ಲಿರುವ ಜಾಗದಲ್ಲಿ ಅಸಂಖ್ಯಾತವಾಗಿ ಸಿಗುತ್ತವೆ. ಇದನ್ನು ‘ಎಸ್ಟಿರೋಯ್ಡ್ ಬೆಲ್ಟ್’ ಎಂದು ಕರೆಯುತ್ತಾರೆ. ಈ ಕ್ಷುದ್ರ ಗ್ರಹಗಳು ಕೆಲವೊಮ್ಮೆ ಬಂದು ಭೂಮಿಗೆ ಅಪ್ಪಳಿಸುವ ಅವಕಾಶಗಳೂ ಸಹ ನಾವೂ ಊಹಿಸುವುದಕ್ಕಿಂತಲೂ ಹೆಚ್ಚು ಸಂಭವವಿದೆ. ಉದಾಹರಣೆಗೆ 66 ಮಿಲಿಯನ್ ವರ್ಷಗಳ ಹಿಂದೆ ಹೀಗೆ ಬಂದು ಅಪ್ಪಳಿಸಿದ ಒಂದು ಕ್ಷುದ್ರ ಗ್ರಹದಿಂದಲೇ ಅಂದಿನ ಭೂಮಿಯ ಮೇಲಿನ ಜೀವಿಗಳಾದ ಡೈನೋಸಾರ್ ಗಳು ನಶಿಸಿ ಹೋದವೆಂದು ವಿಜ್ಞಾನಿಗಳು ಹೇಳುತ್ತಾರೆ.

ಅಂತಹ ಕ್ಷುದ್ರ ಗ್ರಹಗಳು ಈಗಲೂ ನಮ್ಮ ಭೂಮಿಗೆ ಬಂದು ಅಪ್ಪಳಿಸಬಹುದು ಗೊತ್ತೇ? ಅಯ್ಯೋ… ಯಾವಾಗಲೋ ಮಿಲಿಯನ್ ವರ್ಷಗಳ ಹಿಂದೆ ಅಪ್ಪಳಿಸಿದ್ದು. ಆ ಅವಕಾಶ ಕಡಿಮೆ ಎಂದು ತಪ್ಪು ತಿಳಿಯಬೇಡಿ. ಏಕೆಂದರೆ ಆ ಅವಕಾಶ ಪ್ರತೀ 11000 ವರ್ಷಕ್ಕೊಮ್ಮೆ ಇದೆ ಎಂದು ಹೇಳುತ್ತಿದೆ ಹೊಸ ಸಂಶೋಧನೆ.

ಈಗಾಗಲೇ ಹೇಳಿದ ಹಾಗೆ ನಮ್ಮ ಸೌರಮಂಡಲದಲ್ಲಿ ಕ್ಷುದ್ರ ಗ್ರಹಗಳು ಸಾಕಷ್ಟಿವೆ. ಸೂರ್ಯನ ಸುತ್ತ ನಮ್ಮ ಗ್ರಹದ ಹಾಗೇ ಅವುಗಳೂ ಸುತ್ತುತ್ತಿವೆ. ಆಗಾಗ್ಗೆ ಅವುಗಳು ಅಲ್ಲಿಂದ ಹೊರ ಬಂದು ಸೌರಮಂಡಲದ ಇತರ ಗ್ರಹಗಳಿಗೆ ಅಪ್ಪಳಿಸಬಹುದು. ಜೊತೆಗೆ ನಮ್ಮ ಸೌರಮಂಡಲದ್ದಲ್ಲದ ಕ್ಷುದ್ರಗ್ರಹಗಳೂ ಸಹ ಬರಬಹುದು. ಆದರೆ ನಮ್ಮ ಜೀವಿತಾವಧಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲವಲ್ಲ ಎಂದು ನಿಮಗನ್ನಿಸಬಹುದು. ಅದು ಸತ್ಯವೂ ಹೌದು. ಹಾಗೆಂದು ನಮ್ಮ ಜೀವಿತಾವಧಿಯಲ್ಲಿ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಇದನ್ನು ತಿಳಿಯಲೆಂದು, ಕ್ಯಾರಿ ನುಜೆಂಟ್ ಎಂಬ ಖಗೋಳ ವಿಜ್ಞಾನಿ ಮತ್ತು ಅವರ 6 ವಿದ್ಯಾರ್ಥಿಗಳು ‘JPL Horizons’ ಎಂದು ಕರೆಯಲ್ಪಡುವ ಕಂಪ್ಯೂಟರ್ ಪ್ರೊಗ್ರಾಮ್ ಒಂದನ್ನು ಬಳಸಿಕೊಂಡು ಸಂಶೋಧನೆ ಶುರು ಮಾಡಿದರು.

ಅದರಲ್ಲಿ ಸುಮಾರು 140 ಮೀಟರ್ (460 ಅಡಿ) ಉದ್ದದ ಕ್ಷುದ್ರಗ್ರಹಗಳ ಅವುಗಳ ತರಂಗಗಳಿಂದ ಅವುಗಳನ್ನು ಗ್ರಹಿಸಿ, ಅವು ನಮ್ಮ ಭೂಮಿಯತ್ತ ಬರುತ್ತಿವೆಯೇ? ಅಥವಾ ಬರಬಲ್ಲವೇ? ಎಂದು ತಿಳಿಯಲು ಹೊರಟರು. ಅಂದರೆ ಒಂದು ಸಣ್ಣ ಗಾತ್ರದ ಹಡಗಿನಷ್ಟು ದೊಡ್ಡದಾದ ಕ್ಷುದ್ರಗ್ರಹ ನಮ್ಮ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಎಷ್ಟು ಎಂದು. ಅವರ ತಾಳೆಯ ಪ್ರಕಾರ ಪ್ರತೀ 11000 ವರ್ಷಗಳಿಗೊಮ್ಮೆ ಇಂತಹ ಅಪ್ಪಳಿಕೆ ಸಾಧ್ಯವಿದೆ ಎಂದು ತಿಳಿದು ಬಂದಿದೆ. ಹಾಗೆಂದು ಇದರಿಂದ ಕಳವಳಗೊಳ್ಳಬೇಕಿಲ್ಲ. ಏಕೆಂದರೆ ಇದನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಹೇಳುವುದಾದರೆ, ಅಕಸ್ಮಾತ್ ಇಂತಹುದೊಂದು ಘಟನೆ ನಡೆದರೆ, ಅದರಲ್ಲಿ ನಾವು ಸಾಯುವ ಸಂಭವಕ್ಕಿಂತ ಮಳೆಗಾಲದ ಮಿಂಚಿನ ಹೊಡೆತಕ್ಕೆ ಸಾಯುವ ಸಂಭವವೇ ಹೆಚ್ಚಂತೆ! ಅಷ್ಟೇ ಅಲ್ಲಾ, ಪ್ರತಿದಿನ ವಾಹನಗಳಲ್ಲಿ ಸಂಚರಿಸುವ ನಾವು ಅವುಗಳ ಅಪಘಾತದಿಂದ ಸಾಯುವ ಸಂಭವ ಇನ್ನೂ ಹೆಚ್ಚಂತೆ.


ಟಿ. ವಿ, ಸಿನೆಮಾಗಳಲ್ಲಿ ತೋರಿಸುವ ಹಾಗೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಬದುಕುವುದೇ ಅಸಾಧ್ಯವೆಂದು ತೋರಿಸುವುದುಂಟು. ಆದರೆ ವಾಸ್ತವದಲ್ಲಿ ಅದರ ತದ್ವಿರುದ್ಧ! ನಾಸಾ (NASA) 2022ರಲ್ಲಿ ನಡೆಸಿದ ‘ನಾಸಾ ಡಾರ್ಟ್’ ಎಂಬ ಒಂದು ಕಾರ್ಯಾಚರಣೆಯಲ್ಲಿ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಯಾವ ಸಂಭವವಿಲ್ಲದಿದ್ದರೂ ಪ್ರಯೋಗಕ್ಕಾಗಿ ಒಂದು ಕ್ಷುದ್ರಗ್ರಹವನ್ನು ಮಿಸೈಲ್ ನಿಂದ ಹೊಡೆಯಿತು. ಅದರಿಂದಾಗಿ ಅದರ ಚಲನೆಯ ದಿಕ್ಕೇ ಬದಲಿತು. ಆದ್ದರಿಂದ ಮುಂದೊಂದು ದಿನ ಇಂತಹ ಘಟನೆ ನಡೆಯುವ ಸಂಭವ ಬಂದರೂ ಅದರಿಂದ ಭೂಮಿಯನ್ನು ತಪ್ಪಿಸುವ ತಂತ್ರಜ್ಞಾನ ಈಗಾಗಲೇ ನಮ್ಮ ಬಳಿ ಇದೆ ಎನ್ನುತ್ತಾರೆ ನುಜೆಂಟ್.) ಅದರ ಜೊತೆ ಜೊತೆಗೆ ಖಗೋಳದ ಸಮೀಕ್ಷೆಗಳು ಇಂತಹ ಸಂದರ್ಭವನ್ನು ಇನ್ನೂ ಕ್ಷೀಣಿಸಬಹುದು ಎಂಬುದು ವಿಜ್ಞಾನಿಗಳ ಅನಿಸಿಕೆ.

ನಿಮ್ಮ ಅನಿಸಿಕೆಯೇನು? ನಮಗೆ ಬರೆದು ತಿಳಿಸಿ…

Source: www.snexplores.org

ಲೇಖನ: ಜೈಕುಮಾರ್ ಆರ್
                    ಬೆಂಗಳೂರು ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.