ಹಿಮಾಲಯದ ತಪ್ಪಲಿನ ಚೆಂದದ ಹಕ್ಕಿಗಳು

ಹಿಮಾಲಯದ ತಪ್ಪಲಿನ ಚೆಂದದ ಹಕ್ಕಿಗಳು

       © ಗುರುಪ್ರಸಾದ್ ಕೆ. ಆರ್.

ಹಿಮಾಲಯದ ತಪ್ಪಲಿನಲ್ಲಿ ತುಂಗನಾಥ್ ಕೆಳಗೆ ಚಾರ್ದಾಮ್ ಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಪುಟ್ಟ ಊರು ಮಂಡಲ್. ಇಲ್ಲಿನ ಪ್ರಸಿದ್ಧಿ ಚಿಕ್ಕ ಚಿಕ್ಕ ಪಕ್ಷಿಗಳು ಮತ್ತು ಅವುಗಳ ವರ್ಣಮಯ ಬಣ್ಣಗಳು. ಉತ್ತರಕಾಂಡ ಪ್ರವಾಸದ ಐದನೇ ದಿನವಾದ ಅಂದು, ಚೋಪ್ತ ವ್ಯಾಲಿ ಮತ್ತೆ ತುಂಗನಾಥ್ ಮೇಲೆ ಹೊಸದಾಗಿ ಬಿದ್ದಿದ್ದ ಹಿಮದ ರಾಶಿಯಲ್ಲಿ ಮಿಂದೆದ್ದು, ಕೆಲವೊಮ್ಮೆ ರಾತ್ರಿಯಲ್ಲಿ -5 ಡಿಗ್ರಿ ಕೊರೆಯುವ ಚಳಿಯಲ್ಲಿ ರೂಮ್ ಹೀಟರ್ ಇಲ್ಲದೆ ಗಡಗಡ ನಡುಗಿ ಮಲಗಿದ್ದ ಅನುಭವ ಹೊತ್ತು ಸ್ವಲ್ಪ ಬೆಚ್ಚಗಿದ್ದ ಈ ಊರಿಗೆ ಬಂದಾಗ ಬಿಸಿಲು ನೋಡಿ ಮೈ ಮನಸ್ಸಿಗೆ ಸ್ವಲ್ಪಗೆಲುವು ಬಂದಿತ್ತು.

© ಗುರುಪ್ರಸಾದ್ ಕೆ. ಆರ್.

ಡಿಸೆಂಬರ್ ನ ಚುಮು ಚುಮು ಚಳಿಯ ಬೆಳಗಿನ ಜಾವ ಬೆಳಕು ಹರಿಯುವ ಮುಂಚೆಯೇ ಎದ್ದು ತಯಾರಾಗಿ ಗೈಡ್ ಜೊತೆ ಹೆಜ್ಜೆ ಹಾಕುತ್ತಾ ಈ ಹೊಸ ಪ್ರದೇಶವನ್ನು ಆಸ್ವಾದಿಸುತ್ತಿದ್ದೆವು.  ಮಬ್ಬುಗತ್ತಲು ಸುತ್ತಲಿನ ಪ್ರದೇಶವನ್ನೆಲ್ಲಾ ಆವರಿಸಿತ್ತು. ಸಮಯ ಸರಿ ಸುಮಾರು 6 ಘಂಟೆ ಆಗಿರಬಹುದು ನಿಧಾನಕ್ಕೆ ಬೆಳಕು ಬರಲು ಶುರುವಾಗಿತ್ತು. ನಮ್ಮೊಡನಿದ್ದ ಗೈಡ್ ರಾಹುಲ್ ಆ ಮಬ್ಬು ಬೆಳಕಿನಲ್ಲಿಯೇ ಬೈನ್ಯಾಕುಲರ್ ಹಿಡಿದು ಯಾವುದೋ ಮರಗಳ ಮೇಲೆ ನೋಡುತ್ತಾ ಇದ್ದ. ಈ ಮಬ್ಬಿನಲ್ಲಿ ಇವನಿಗೆ ಏನು ಕಾಣಿಸುತ್ತಿದೆ ಎಂದು ನಾವು ಚಕಿತಗೊಂಡು ಅವನನ್ನೇ ನೋಡುತ್ತಿದ್ದೆವು. ಇದ್ದಕ್ಕಿದ್ದಂತೆ ಅವನು ನಮಗೆ ಕೈ ಸನ್ನೆ ಮಾಡಿ ಕ್ಯಾಮೆರಾ ತಯಾರಿ ಮಾಡಿಕೊಳ್ಳುವಂತೆ ಹೇಳಿದ. ಆ ಪ್ರದೇಶಗಳಲ್ಲಿ ಹೆಚ್ಚು ಓಡಾಡಿ ಅನುಭವ ಇದ್ದ ಅವನ ಮಾತನ್ನು ನಾವು ಅಲಕ್ಷಿಸುವಂತಿರಲಿಲ್ಲ. ಅವನ ನಿರ್ದೇಶನದಂತೆ ನಮ್ಮ ಕ್ಯಾಮೆರಾಗಳನ್ನು ತಯಾರು ಮಾಡಿಕೊಂಡೆವು. ಕೆಲವು ಸಮಯದ ನಂತರ ‘ಎದುರಿಗೆ ಕಾಣುತ್ತಾ ಇದ್ದ ಮರದ ಮೇಲೆ ಫೋಕಸ್ ಮಾಡಿ ಬೇಗ’ ಎಂದ ಅವನಿಗೆ ಯಾವುದೋ ಒಂದು ಪಕ್ಷಿ ಬರುವ ಮುನ್ಸೂಚನೆ ಸಿಕ್ಕಿತ್ತು, ಆದರೆ ನಮ್ಮ ಕಣ್ಣಿಗಂತೂ ಏನೂ ಕಾಣಿಸುತ್ತಿರಲಿಲ್ಲ. ಒಂದೈದು ನಿಮಿಷಗಳ ನಂತರ ಗೈಡ್ ರಾಹುಲನು ‘ಉದರ್ ದೇಕೊ…  ಉದರ್ ದೇಕೊ … ಆಗಯ …  ಆಗಯ …’ ಎಂದು ಹರ್ಷೋದ್ಗಾರದಲ್ಲಿ ಆ ಮರದ ಕಡೆಯೇ ಕೈ ತೋರಿಸಿದ. ಅಲ್ಲಿಯ ತನಕ ಇವನ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದರೂ ಅಷ್ಟು ಗಣನೆಗೆ ತೆಗೆದುಕೊಂಡಿರದ ನಮಗೆ ಆ ಮುಂಜಾವಿನ ಸೊಬಗನ್ನು ನೋಡಿ ಸ್ವರ್ಗವೇ ಕೆಳಗಿಳಿದಂತಾಯಿತು. ಎಲ್ಲಿದ್ದವೋ ಪುಟ್ಟ ಕೆಂಪು ಪಕ್ಷಿಗಳ ಗುಂಪು… ಸರ್ರ್ ಸರ್ರ್ ಎಂದು ಹಾರಿ ಬಂದು ನಮ್ಮ ಎದುರಿಗಿದ್ದ ಮರಗಳ ಮೇಲೆ ಕುಳಿತವು. ಹಲವಾರು ಪಕ್ಷಿಗಳು ಅಲ್ಲಿ ಕುಳಿತಿದ್ದವು. ಅವುಗಳ ಮೈ ಬಣ್ಣಕ್ಕೆ ನಾನು ಮನಸೋತು ಹೋದೆ. ಸುತ್ತಲಿನ ಎಲ್ಲರ ಮುಖದಲ್ಲೂ ಮಂದಹಾಸ. ಎಲ್ಲರೂ ಈ ಅದ್ಭುತ ವರ್ಣರಂಜಿತ ಜೀವಿಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದರು ನನ್ನನ್ನು ಸೇರಿ. ರಾತ್ರಿಯ ವೇಳೆ ದಟ್ಟವಾದ ಮರಗಳಲ್ಲಿ ಇದ್ದ ಈ ಚಿತ್ರ ಪಕ್ಷಿಗಳ ಗುಂಪು ಬೆಳಕಾಗುತ್ತಿದ್ದಂತೆ ನಿಧಾನಕ್ಕೆ ಹೊರಬರಲು ಶುರುಮಾಡಿದವು. ಅಲುಗಾಡದೆ ಕುಳಿತಿದ್ದ ಒಂದೆರಡು ಪುಟ್ಟ ಪಕ್ಷಿಗಳಂತೂ ಕೆಂಪು ಹಣ್ಣಿನ ರೀತಿಯೇ ಕಾಣುತ್ತಿದ್ದವು. ನಮ್ಮಿಂದ ಅನತಿ ದೂರದಲ್ಲಿದ್ದ ಅವುಗಳನ್ನು ಕಣ್ಣಾರೆ ನೋಡಿ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅವುಗಳ ಚಲನ ವಲನಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆವು. ಹೀಗೆ ಇವು ನಮ್ಮ ಕಣ್ಣು ಮುಂದೆ ಸುಮಾರು ನಾಲ್ಕರಿಂದ ಐದು ನಿಮಿಷ ಅಷ್ಟೇ ಇದ್ದದ್ದು, ನಂತರ ಅವುಗಳು ಆಹಾರ ಹುಡುಕಿಕೊಂಡು ಅಲ್ಲೇ ಇದ್ದ ಕೆಳಗಿನ ಪೊದೆಗಳ ಒಳಗೆ ಮಾಯವಾದವು. ಈ ಸನ್ನಿವೇಶದ ಬಗ್ಗೆ ಮುಂಚೆಯೇ ತಿಳಿದಿದ್ದ ನಮ್ಮ ಗೈಡ್ ಸರಿಯಾದ ಸಮಯಕ್ಕೆ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದ. ಎಂತಹ ಅದ್ಭುತ ಪುಟ್ಟ ಹಕ್ಕಿ ಅವು! ಪದಗಳಲ್ಲಿ ಅದನ್ನು ವರ್ಣಿಸಲಾಗದು ಕಣ್ಣಾರೆ ನೋಡಿಯೇ ಸವಿಯಬೇಕು.  ಸ್ವಲ್ಪ ಹೊತ್ತು ಬೇರೆ ಬೇರೆ ಪಕ್ಷಿ ಹುಡುಕಾಟದ ನಂತರ, ಮತ್ತೆ ಇನ್ನಷ್ಟು ಈ ಪ್ರಭೇದದ ಪಕ್ಷಿಗಳನ್ನು ಕಂಡು ಎಲ್ಲರು ಪುಳಕಿತರಾದೆವು. ಈ ಪಕ್ಷಿಗಳು ತುಂಬಾ ನಾಚಿಕೆ ಸ್ವಭಾವದವು. ಹತ್ತಿರದಲ್ಲಿ ಕಾಣಿಸುವುದು ಬಲು ಅಪರೂಪ. ಒಂದಷ್ಟು ಒಳ್ಳೆಯ ಫೋಟೋಗಳನ್ನು ತೆಗೆದು ಚಿತ್ರಪಕ್ಷಿ (scarlett finch) ಗಳಿಗೆ ಟಾಟಾ ಹೇಳಿ ಮುಂದುವರಿದೆವು…

ಸ್ವಾಭಾವಿಕವಾಗಿ “ಸ್ಕಾರ್ಲೆಟ್ ಫಿಂಚ್” ಎಂದು ಕರೆಯಲ್ಪಡುವ ಈ ಪಕ್ಷಿಯು, ಫಿಂಚ್ (Fringillidae) ಕುಟುಂಬಕ್ಕೆ ಸೇರಿದ ಒಂದು ಸುಂದರವಾದ ಚಿಕ್ಕ ಹಕ್ಕಿಯಾಗಿದೆ. ಇದರ ವೈಜ್ಞಾನಿಕ ಹೆಸರು ಕಾರ್ಪೊಡಕಸ್ ಸಿಪಹಿ (Carpodacus sipahi) ಎಂದು.

ರೂಪ ಮತ್ತು ವಿವರಣೆ:

ಗಂಡು ಹಕ್ಕಿ (Male): ಇದರ ತಲೆ, ದೇಹದ ಮೇಲ್ಭಾಗ ಮತ್ತು ಕೆಳಭಾಗವು ಕಡು ಕೆಂಪು (ಸ್ಕಾರ್ಲೆಟ್) ಬಣ್ಣದಿಂದ ಕೂಡಿರುತ್ತದೆ. ಗಾಢ ಕಪ್ಪು ರೆಕ್ಕೆಗಳು ಮತ್ತು ಬಾಲವು ಇದಕ್ಕೆ ವ್ಯತಿರಿಕ್ತವಾಗಿ ಕಾಣುತ್ತದೆ ಮತ್ತು ಕೆಂಪು ಅಂಚುಗಳನ್ನು ಹೊಂದಿರುತ್ತದೆ.

ಹೆಣ್ಣು ಹಕ್ಕಿ: ಇದು ಗಂಡಿನಷ್ಟು ಆಕರ್ಷಕವಾಗಿರುವುದಿಲ್ಲ, ಹೆಚ್ಚಾಗಿ ಮಸುಕಾದ ಆಲಿವ್-ಹಳದಿ ಅಥವಾ ಆಲಿವ್-ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಹೊಳೆಯುವ ಹಳದಿ ಪುಷ್ಠ (rump) ಹೊಂದಿರುತ್ತದೆ.

ಗಾತ್ರ: ಶಂಕುವಿನಾಕಾರದ ಕೊಕ್ಕನ್ನು ಹೊಂದಿರುವ ಮಧ್ಯಮ ಗಾತ್ರದ ಫಿಂಚ್ ಆಗಿದ್ದು, ಸುಮಾರು 17–19 ಸೆಂ. ಮೀ ಉದ್ದವಿರುತ್ತದೆ.

© ಗುರುಪ್ರಸಾದ್ ಕೆ. ಆರ್.

ಆವಾಸ ಮತ್ತು ಹಂಚಿಕೆ: ಇದು ಮುಖ್ಯವಾಗಿ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಭಾರತದ ಉತ್ತರಾಖಂಡ ರಾಜ್ಯದಿಂದ ಪೂರ್ವಕ್ಕೆ ನೇಪಾಳ, ಈಶಾನ್ಯ ಭಾರತದ ಬೆಟ್ಟಗಳು ಮತ್ತು ಆಗ್ನೇಯ ಏಷ್ಯಾದಲ್ಲಿ ಥೈಲ್ಯಾಂಡ್‌ನವರೆಗೂ ವ್ಯಾಪಿಸಿದೆ. ಇದು ಸಮಶೀತೋಷ್ಣ ಕಾಡುಗಳಲ್ಲಿ ವಾಸಿಸುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ (ಸುಮಾರು 1400–3550 ಮೀ. ಎತ್ತರದಲ್ಲಿ) ತೆರೆದ ಪರ್ವತ ಪ್ರದೇಶದ ಕಾಡುಗಳಲ್ಲಿ ಕಂಡುಬರುತ್ತದೆ. ಚಳಿಗಾಲದಲ್ಲಿ, ಅನೇಕ ಪಕ್ಷಿಗಳು ದಕ್ಷಿಣಕ್ಕೆ ಮತ್ತು ಕೆಳಮಟ್ಟದ ಓಕ್ ಕಾಡುಗಳು ಅಥವಾ ತಪ್ಪಲು ಪ್ರದೇಶಗಳಿಗೆ ವಲಸೆ ಹೋಗುತ್ತವೆ.

ಆಹಾರ: ಇದು ಪ್ರಧಾನವಾಗಿ ಬೀಜಗಳು, ಮೊಗ್ಗುಗಳು, ಹಣ್ಣುಗಳು ಮತ್ತು ಸಣ್ಣ ಹಣ್ಣುಗಳನ್ನು ತಿನ್ನುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಪ್ರೋಟೀನ್‌ಗಾಗಿ ಸಾಂದರ್ಭಿಕವಾಗಿ ಸಣ್ಣ ಕೀಟಗಳನ್ನು ಸಹ ಸೇವಿಸುತ್ತದೆ.

ಈ ನಮ್ಮ ಪಕ್ಷಿ ವೀಕ್ಷಣಾ ಪ್ರವಾಸದಲ್ಲಿ ಈ ಪಕ್ಷಿಯು ನಮ್ಮೆಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿ ಅದರ ಸೌಂದರ್ಯದಿಂದ ಪಕ್ಷಿವೀಕ್ಷಣೆಯ ಬಗ್ಗೆ ಹಾಗೂ ಅವುಗಳ ಛಾಯಾಗ್ರಹಣದ ಬಗ್ಗೆ ನಮ್ಮೆಲ್ಲರಲ್ಲಿ ಇನ್ನಷ್ಟು ಆಸಕ್ತಿ ಮೂಡುವಂತೆ ಮಾಡಿದ್ದು ಸುಳ್ಳಲ್ಲ. ಈ ಅದ್ಭುತ ಜೀವಿಗಳನ್ನು ನಾವು ಮುಂದೆಯೂ ಇಷ್ಟೇ ಆನಂದದಿಂದ ನೋಡಬೇಕಾದರೆ ಪರಿಸರವನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಅಲ್ಲವೇ?

© ಗುರುಪ್ರಸಾದ್ ಕೆ. ಆರ್.

ಲೇಖನ: : ಗುರುಪ್ರಸಾದ್ ಕೆ. ಆರ್.
                     ಬೆಂಗಳೂರು ಜಿಲ್ಲೆ

Spread the love
error: Content is protected.