ವನಸುಮ – ಹಿಪ್ಪೆ ಮರ
© ಡಾ. ಅಶ್ವಥ ಕೆ. ಎನ್.
English Name: Mahua tree
Scientific Name: Madhuca longifolia
ಹಿಪ್ಪೆ ಮರವನ್ನು ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ಸಾಲುಮರವಾಗಿ ಕಾಣಬಹುದು. ಕಾಡಿನ ಒಳಗೆ ಇದು ಕಡಿಮೆ ಕಾಣಸಿಕ್ಕರೂ ಕೆರೆಗಳ ಬಳಿ, ಗುಂಡುತೋಪುಗಳಲ್ಲಿ, ಹೊಲಗಳ ಎಲ್ಲೆಗಳಲ್ಲಿ ಈ ಮರಗಳನ್ನು ಹೆಚ್ಚು ಕಾಣಬಹುದಾಗಿದೆ. ಸದಾ ಹಸಿರು ಎಲೆಗಳನ್ನು ಹೊಂದಿರುವ ಈ ಸುಂದರವಾದ ಮರ ಹತ್ತು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಭಾರತದ ಕರ್ನಾಟಕ, ಗುಜರಾತ್, ಬಿಹಾರ, ಆಂಧ್ರ ಪ್ರದೇಶ, ಒಡಿಶಾ ಅಲ್ಲದೇ ನೇಪಾಳ, ಮಯಾನ್ಮಾರ್, ಶ್ರೀಲಂಕಾಗಳಲ್ಲಿಯೂ ಕಂಡು ಬರುತ್ತದೆ. ಇದರ ಬಲವಾದ ಕಾಂಡದ ಮೇಲೆ ಮಾಸಲು ಬೂದು- ತಿಳಿಕಂದು ಬಣ್ಣದ ತೊಗಟೆ ಇದ್ದು, ತೊಗಟೆಯ ಮೇಲೆ ಸಣ್ಣ ಸಣ್ಣ ಸೀಳುಗಳು ಇರುತ್ತವೆ. ಕಾಂಡವನ್ನು ಕೊರೆದರೆ ಹಾಲು ಹೊರ ಬರುತ್ತದೆ.
ಮರದ ಕೊಂಬೆಗಳ ತುದಿಗಳಲ್ಲಿ ಸರಳ ಪರ್ಯಾಯ ರಚನೆಯ ಎಲೆಗಳು ಗೊಂಚಲು ಗೊಂಚಲಾಗಿ ಇರುತ್ತವೆ. ಎಲೆಗಳು 15 ಸೆಂ.ಮೀ. ಉದ್ದವಿದ್ದು, ಎಲೆಯ ಮೇಲೆ ನಾಳಗಳ ರಚನೆ ಇರುತ್ತವೆ. ಚಿಗುರೆಲೆಗಳು ತಿಳಿ ಗುಲಾಬಿ ಬಣ್ಣದಲ್ಲಿದ್ದು, ಮೇಲೆ ಮೃದುವಾದ ರೋಮದಂತಹ ರಚನೆ ಇರುತ್ತದೆ. ಬಲಿತ ಎಲೆಗಳು ಗಾಢ ಹಸಿರು ಬಣ್ಣದಲ್ಲಿ ಇರುತ್ತವೆ. ಪ್ರೌಢ ಎಲೆಗಳ ತುದಿಯಲ್ಲಿ ಚೂಪಾದ ರಚನೆ ಇರುತ್ತದೆ. ಈ ಮರವು ಫೆಬ್ರವರಿ-ಏಪ್ರಿಲ್ ನಲ್ಲಿ ಎಲೆ ಉದಿರುಸುತ್ತದೆ. ಕಿರು ಕೊಂಬೆಗಳ ತುದಿಯಲ್ಲಿ. ಚಿಗುರೆಲೆಗಳ ಮಧ್ಯೆ ಉದ್ದ ತೊಟ್ಟಿನ ಕಡು ಬೂದು ಬಣ್ಣದ ಮೊಗ್ಗಿನ ಗೊಂಚಲು ನೇತಾಡುತ್ತವೆ. ಮೊಗ್ಗಿನ ಒಳಗೆ ಬೆಣ್ಣೆಯಂತಹ ಬಿಳಿಯ ಬಣ್ಣದ ಒತ್ತೊತ್ತಾಗಿ ಕೂಡಿದ ದಳಗಳ ರಚನೆ ಇರುತ್ತವೆ. ಹೂಗಳು 3 ಸೆಂ.ಮೀ. ಉದ್ದವಿರುತ್ತವೆ. ಮರ ಹೂ ಬಿಟ್ಟಾಗ ಸುತ್ತಲಿನ ವಾತಾವರಣದಲ್ಲಿ ಕಮ್ಮಗಿನ ಸುಗಂಧಭರಿತ ಸುವಾಸನೆ ತುಂಬುತ್ತದೆ. ಸಂಜೆಯಾಗುತ್ತಲೇ ಹೂವಿನ ದಳಗಳು ಕೆಳಗೆ ಉದುರಿ ಬೀಳುತ್ತವೆ. ಈ ಮರದ ಹೂಗಳನ್ನು ಹಲವು ಪ್ರಭೇದದ ಪಕ್ಷಿಗಳು, ಸಸ್ತನಿಗಳು ತಿನ್ನುತ್ತವೆ. ಬಲಿತ ಕಾಯಿಗಳು 2-5 ಸೆಂ.ಮೀ. ಉದ್ದ ಇರುತ್ತವೆ. ಮೊದಲು ಹಸಿರು ಬಣ್ಣದಲ್ಲಿ ಇರುವ ಈ ಕಾಯಿಗಳು ಹಣ್ಣಾದಾಗ ಮಾಸಲು ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಪ್ರತೀ ಹಣ್ಣಿನಲ್ಲೂ ಕಾಫಿ ಬಣ್ಣದ 2-3 ಬೀಜಗಳು ಇರುತ್ತವೆ. ಬೀಜದ ಗಾತ್ರ ನಮ್ಮ ಕಿರು ಬೆರಳಿಗಿಂತ ಕೊಂಚ ದೊಡ್ಡದು. ಬೀಜದ ಉದ್ದ 3-5 ಸೆಂ. ಮೀ. ಇರುತ್ತದೆ. ಹಿಪ್ಪೆ ಬೀಜದ ಒಳಗಿನ ಪಪ್ಪನ್ನು ತಿನ್ನಲು ಕೂಡ ಬಳಸುತ್ತಾರೆ. ಇದರ ಬೀಜಗಳಿಂದ ತೆಗೆದ ಹಸಿರು – ಹಳದಿ ಬಣ್ಣದ ಹಿಪ್ಪೆ ಎಣ್ಣೆಯನ್ನು ದೇವರ ದೀಪಕ್ಕೆ ಬಳಸುತ್ತಾರೆ. ಹಿಪ್ಪೆ ಎಣ್ಣೆ ದೇವರ ಪೂಜೆಗೆ ಶ್ರೇಷ್ಠ ಎಂಬುದು ನಂಬಿಕೆ. ಹಿಪ್ಪೆ ಎಣ್ಣೆಯನ್ನು ಸೋಪು ಮತ್ತು ಕ್ಯಾಂಡಲ್ ತಯಾರಿಕೆಯಲ್ಲೂ ಬಳಸುತ್ತಾರೆ. ಎಣ್ಣೆ ತೆಗೆದ ಮೇಲೆ ಉಳಿಯುವ ಹಿಪ್ಪೆ ಹಿಂಡಿಯನ್ನು ಹೊಲಕ್ಕೆ ಗೊಬ್ಬರವಾಗಿ ಬಳಸುತ್ತಾರೆ. ಇದರ ಬೀಜಗಳನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಾಟಿ ಮಾಡಿದರೆ ಮೊಳಕೆ ಬರುತ್ತದೆ. ಸಂಜೆ ವೇಳೆ ಹಿಪ್ಪೆ ಮರ ಉದುರಿಸುವ ಹೂಗಳನ್ನು ಸಂಗ್ರಹಿಸಿ, ಕೊಳೆಯಿಸಿ ಒಳ್ಳೆ ಗಾಟಿನ ಹಳ್ಳಿಹೆಂಡವನ್ನು ತಯಾರಿಸುತ್ತಾರೆ.! ಈ ಕಾರಣದಿಂದಲೇ ಈಗಲೂ ಹೊಲಗಳ ಬದಿಗಳಲ್ಲಿ ಹಿಪ್ಪೆಮರ ಕಾಣಸಿಗುತ್ತದೆ. ಜೇನುಗಳಿಗೆ ಮಕರಂದ; ಪಕ್ಷಿಗಳಿಗೆ, ಸಸ್ತನಿಗಳಿಗೆ ಹೂವಿನ ಊಟ; ದೇವರ ಪೂಜೆಗೆ ದೀಪದ ಎಣ್ಣೆ; ದೇಹಕ್ಕೆ ಗಾಟು ಹಳ್ಳಿಹೆಂಡ; ಅಲ್ಲದೆ ಇದರ ಬೇರುಗಳು ನೆಲದಲ್ಲಿ ಅಗಲವಾಗಿ ಹರಡಿಕೊಂಡು ಮಣ್ಣನ್ನು ಹಿಡಿದುಕೊಳ್ಳುವುದರಿಂದ ಮಣ್ಣಿನ ಸವೆತವನ್ನು ತಡೆಯುತ್ತದೆ. ಇಷ್ಟೆಲ್ಲಾ ಉಪಯೋಗ ಇರುವ ಈ ಮರವನ್ನು ಮರ-ಮುಟ್ಟಿಗಾಗಿ ಯಾರೂ ಕಡಿಯುವುದಿಲ್ಲ! ಸಂರಕ್ಷಿಸಿ ಕಾಪಾಡಿಟ್ಟಿದ್ದರು. ಆದರೆ ರಸ್ತೆ ಬದಿಗಳಲ್ಲಿ ಸಾಲುಮರ ಆಗಿದ್ದ ಎಷ್ಟೋ ಬೃಹತ್ ಹಿಪ್ಪೆಮರ, ಇಂದು ಅಭಿವೃದ್ದಿಯ ನೆಪದಲ್ಲಿ ರಸ್ತೆ ವಿಸ್ತರಣೆ ಆದಾಗ, ಬದಲಾಗುತ್ತಿರುವ ಭೂಬಳಕೆ ಕಾರಣದಿಂದಾಗಿ ಈ ಮರಗಳನ್ನು ಕಡಿದು ಸಾ ಮಿಲ್ಲುಗಳಿಗೆ ಸಾಗಿಸಲಾಗುತ್ತಿದೆ.
ಔಷಧೀಯ ಗುಣಗಳು
ಹಿಪ್ಪೆ ಮರವನ್ನು ಹಲವು ಆದಿವಾಸಿ ಸಮುದಾಯಗಳು ಬೇರೆ ಬೇರೆ ಕಾಯಿಲೆಗಳ ಚಿಕಿತ್ಸೆಗಾಗಿ ಬಳಸುತ್ತಾರೆ. ಅದರ ಎಲ್ಲಾ ಔಷಧೀಯ ಬಳಕೆಗಳನ್ನು ಕೆಳಗೆ ನೀಡಲಾಗಿದೆ.
| ಸಸ್ಯದ ಭಾಗ | ಆದಿವಾಸಿ ಸಮುದಾಯಗಳ ಹೆಸರು | ಔಷಧದ ವಿಧ | ಕಾಯಿಲೆ | ಔಷಧ ಸೇವಿಸುವ ವಿಧಾನ |
| ಹೂವು | ಮಧ್ಯಪ್ರದೇಶದ ಚಿತ್ರಕೂಟ್ ಪ್ರದೇಶದ ಕೋಲ್, ಗೊಂಡ್ ಮತ್ತು ಮಾವಾಸಿ ಆದಿವಾಸಿಗಳು | ಹೂವಿನ ಕಷಾಯವನ್ನು ತಯಾರಿಸಲಾಗುತ್ತದೆ | ಕರುಗಳಲ್ಲಿ ಕಂಡುಬರುವ ಹೊಟ್ಟೆ ಹುಳು | ಕಷಾಯವನ್ನು ಕುಡಿಯುವುದು |
| ಹೂವು | ಝಾರ್ಖಂಡ್ನ ಸಂತಾಲ್‌ಪರ್ಗಣಾಸ್ ಹಾಗೂ ಪಶ್ಚಿಮ ಬಂಗಾಳದ ಬಿರ್ಭೂಮ್, ಬಂಕುರಾ, ಮಿಡ್ನಾಪುರ ಮತ್ತು ಪುರೂಲಿಯಾ ಪ್ರದೇಶದ ಸಂತಾಲ್ ಆದಿವಾಸಿಗಳು | ಹೂವಿನಿಂದ ಪಾನೀಯ / ಮದ್ಯ ತಯಾರಿಸಲಾಗುತ್ತದೆ | ಮಧುಮೇಹ (ಡಯಾಬಿಟಿಸ್) | ಪಾನೀಯವನ್ನು ಕುಡಿಯುವುದು |
| ಎಲೆಗಳು ಮತ್ತು ಒಣ ಹಣ್ಣುಗಳು | ಛತ್ತೀಸ್ಗಢ ಮತ್ತು ಗುಜರಾತ್‌ನ ಆದಿವಾಸಿಗಳು | ಎಲೆ ಮತ್ತು ಒಣ ಹಣ್ಣುಗಳ ಕಷಾಯ | ಮನುಷ್ಯರು ಮತ್ತು ಜಾನುವಾರುಗಳಲ್ಲಿ ಹಾಲು ಕಡಿಮೆ ಆಗುವುದು | ಕಷಾಯವನ್ನು ಕುಡಿಯುವುದು |
| ತೊಗಟೆ (ಬಾರ್ಕ್) | ಮಧ್ಯಪ್ರದೇಶದ ಅಂಧ್, ಬೈಗಾ, ಭಾರಿಯಾ ಆದಿವಾಸಿಗಳು | ತೊಗಟೆ ಕಷಾಯ | ಹಲ್ಲು, ಮೂಳೆಯ ಊತ | ಕಷಾಯದಿಂದ ಬಾಯಿ ತೊಳೆಯುವುದು |
| ಬೀಜಗಳು | ಮಧ್ಯಪ್ರದೇಶದ ಅಂಧ್, ಬೈಗಾ, ಭಾರಿಯಾ, ಭಟ್ರಾ, ಭಿಲ್, ಭುಜಿಯಾ, ಗೊಂಡ್ ಮೊದಲಾದ ಆದಿವಾಸಿಗಳು | ಬೀಜದ ಎಣ್ಣೆ | ನ್ಯುಮೋನಿಯಾ | ಎಣ್ಣೆಯನ್ನು ಎದೆ ಮೇಲೆ ಮಸಾಜ್ ಮಾಡುವುದು |
| ಬೀಜಗಳು | ಮಧ್ಯಪ್ರದೇಶದ ಅಂಧ್, ಬೈಗಾ, ಭಾರಿಯಾ, ಭಟ್ರಾ, ಭಿಲ್, ಭುಜಿಯಾ, ಗೊಂಡ್ ಮೊದಲಾದ ಆದಿವಾಸಿಗಳು | ಬೀಜದ ಕಷಾಯ | ಹಾವು ಕಚ್ಚಿದರೆ | ಕಷಾಯದ ಕೆಲವು ಹನಿಗಳನ್ನು ಮೂಗಿನೊಳಗೆ ಹಾಕುತ್ತಾರೆ |
ಲೇಖನ: ಕೆ. ಪಿ. ಶಂಕರಪ್ಪ , ಶಾಂತಮ್ಮ ಎಸ್.
ಬೆಂಗಳೂರು ನಗರ ಜಿಲ್ಲೆ

ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.


