ಹುಲಿಯ ಜಾಡು ಹಿಡಿದು
© ಗುರುಪ್ರಸಾದ್ ಕೆ. ಆರ್.
ಬಂಡೀಪುರ, ನಾಗರಹೊಳೆ ಸಫಾರಿಗೆ ತಾತ್ಕಾಲಿಕ ನಿಷೇಧ!
ನಾನು ಮೈಸೂರಿಗೆ ಬಂದು ಸುಮಾರು ಆರು ತಿಂಗಳುಗಳು ಕಳೆಯುತ್ತಾ ಬಂದಿತ್ತು. ಎಲ್ಲರೂ ನನ್ನನ್ನು ಕೇಳುತ್ತಿದ್ದ ಪ್ರಶ್ನೆ ಒಂದೇ “ಬಂಡೀಪುರಕ್ಕೆ ಹೋಗ್ಲಿಲ್ವ ಇನ್ನೂ!?”… ಜೀವನ ಓದುವ ಹಂತದಿಂದ ದುಡಿಯುವ ಹಂತಕ್ಕೆ ಬಂದು ಮೈಸೂರಿಗೆ ತಂದು ನಿಲ್ಲಿಸಿತ್ತು. ಇಲ್ಲಿಗೆ ಬರೋದು ಖಾತರಿ ಆದಾಗಿನಿಂದಲೂ ಬಂಡೀಪುರ – ನಾಗರಹೊಳೆಯ ಕನಸು ಗರಿಗೆದರಿತ್ತು, ಆದರೆ ಇನ್ನೇನು ಎಲ್ಲಾ ರೂಢಿಯಾಗುತ್ತಾ ಸಮಯ ಮಾಡಿಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಸಫಾರಿ ನಿಷೇಧದ ಸುದ್ದಿ ಹೊರಹೊಮ್ಮಿತು.
ಬಂಡೀಪುರ: ಇತಿಹಾಸ
ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ಸಮ್ಮಿಲನದ ಪ್ರದೇಶದಲ್ಲಿರುವ ಬಂಡೀಪುರ ಕರ್ನಾಟಕದಲ್ಲೇ ಅತೀ ಹೆಚ್ಚು ಆನೆ ಮತ್ತು ಹುಲಿಗಳಿಗೆ ಆವಾಸಸ್ಥಾನ. ಮೊದಲು 20ನೇ ಶತಮಾನದ ಆರಂಭದಲ್ಲಿ ಬಂಡೀಪುರ ಪ್ರದೇಶವು ಮೈಸೂರು ಸಾಮ್ರಾಜ್ಯದ ಮಹಾರಾಜರಿಗೆ ಖಾಸಗಿ ಬೇಟೆಯಾಡುವ ಮೀಸಲು ಸ್ಥಳವಾಗಿತ್ತು. 1931 ರಲ್ಲಿ, ಮೈಸೂರು ಮಹಾರಾಜರು 90 ಚದರ ಕಿಲೋಮೀಟರ್ (35 ಚದರ ಮೈಲಿ) ಪ್ರದೇಶವನ್ನು ‘ವೇಣುಗೋಪಾಲ ವನ್ಯಜೀವಿ ಉದ್ಯಾನವನ’ (Venugopala Wildlife Park) ಎಂದು ಘೋಷಿಸುವ ಮೂಲಕ ಸಂರಕ್ಷಣಾ ಕಾರ್ಯಕ್ಕೆ ಅಡಿಪಾಯ ಹಾಕಿದರು. 1973 ರಲ್ಲಿ, ಭಾರತ ಸರ್ಕಾರವು ‘ಪ್ರಾಜೆಕ್ಟ್ ಟೈಗರ್’ (Project Tiger) ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ವೇಣುಗೋಪಾಲ ವನ್ಯಜೀವಿ ಉದ್ಯಾನವನದ ಪ್ರದೇಶಕ್ಕೆ ಹೆಚ್ಚುವರಿ ಅರಣ್ಯ ಪ್ರದೇಶಗಳನ್ನು ಸೇರಿಸಿ, ಅದನ್ನು ‘ಬಂಡೀಪುರ ಹುಲಿ ಮೀಸಲು ಪ್ರದೇಶ’ (Bandipur Tiger Reserve) ಎಂದು ಸ್ಥಾಪಿಸಲಾಯಿತು. 1986 ರಲ್ಲಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನವು ನೆರೆಯ ನಾಗರಹೊಳೆ, ಮದುಮಲೈ ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯಗಳೊಂದಿಗೆ ಸೇರಿ ‘ನೀಲಗಿರಿ ಜೀವಗೋಳ ಮೀಸಲು ಪ್ರದೇಶ’ದ (Nilgiri Biosphere Reserve) ಒಂದು ಅವಿಭಾಜ್ಯ ಅಂಗವಾಯಿತು. ಇದು ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶ ಮತ್ತು ಕಾಡು ಆನೆಗಳ ಪ್ರಮುಖ ಆವಾಸಸ್ಥಾನ. ಕರ್ನಾಟಕದಲ್ಲೇ ಅತೀ ಹೆಚ್ಚು ಹುಲಿ ಸಾಂದ್ರತೆ ಇರುವ ಕಾರಣ ಜಗತ್ತಿನ ಮೂಲೆ ಮೂಲೆಯಿಂದ ಪ್ರವಾಸಿಗರನ್ನ ಬಂಡೀಪುರ ಕೈಬೀಸಿ ಕರೆಯುತ್ತದೆ. ಆದರೆ ಇದೇ ಹೆಮ್ಮೆಯ ಸಂಗತಿ ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಏನಿದು ಸಫಾರಿ ನಿಷೇಧ?

ಬಂಡೀಪುರದ ಅರಣ್ಯದಂಚಿನ ಗ್ರಾಮಗಳಲ್ಲಿ ಇತ್ತೀಚೆಗೆ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಅಕ್ಟೋಬರ್ ಮತ್ತು ನವೆಂಬರ್ 2025 ರ ಅವಧಿಯಲ್ಲಿ, ಬಂಡೀಪುರ ಅರಣ್ಯದ ಸರಗೂರು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಹುಲಿ ದಾಳಿಗಳಲ್ಲಿ ಮೂವರು ರೈತರು ಸಾವನ್ನಪ್ಪಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿದ ಹಿನ್ನೆಲೆಯಲ್ಲಿ, ಕರ್ನಾಟಕದ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಸೂಚನೆಯ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಸಫಾರಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಹುಲಿ ಪ್ರಕರಣಗಳ ಒಳನೋಟ
ಕಳೆದ ತಿಂಗಳು ನಡೆದ ಘಟನೆಗಳನ್ನು ಪರಿಶೀಲಿಸಿದಾಗ, ಮೊದಲ ಎರಡು ದಾಳಿಗಳಲ್ಲಿ ಹುಲಿಗಳು ತಮ್ಮ ಮರಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನದಿಂದಾಗಿ ನಡೆದಿವೆ ಎಂದು ತಿಳಿದುಬಂದಿದೆ. ಮೊದಲ ದಾಳಿಯು ಸಂತ್ರಸ್ತನು ಹೆಣ್ಣು ಹುಲಿ ಮತ್ತು ಅದರ ಮರಿಗಳ ಮೇಲೆ ಕಲ್ಲು ತೂರುತ್ತಿದ್ದ ವಿಚಾರ ವರದಿಯಾಗಿದೆ. ಎರಡು ವಾರಗಳ ನಂತರ ಬೇರೊಂದು ಹೆಣ್ಣು ಹುಲಿಯಿಂದ ನಡೆದ ಎರಡನೇ ದಾಳಿಯಲ್ಲಿ, ಮೂವರು ವ್ಯಕ್ತಿಗಳು ಹೊಲದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಘರ್ಜನೆಯನ್ನು ಕೇಳಿದ್ದಾರೆ. ಇಬ್ಬರು ಸ್ಥಳದಿಂದ ಓಡಿಹೋದರು, ಆದರೆ ಸಂತ್ರಸ್ತನು ಹುಲಿ ಮರಿಗಳನ್ನು ಮುಟ್ಟಲು ಹತ್ತಿರ ಹೋದಾಗ ದಾಳಿ ನಡೆದು ಸಾವನ್ನಪ್ಪಿದ್ದಾನೆ. ಮೂರನೇ ದಾಳಿಯು ಸಂತ್ರಸ್ತನು ತನ್ನ ದನಗಳನ್ನು ರಕ್ಷಿಸಲು ಪ್ರಯತ್ನಿಸಿದಾಗ ಸಂಭವಿಸಿದೆ. (Source: The Hindu) ತಾಯಿ ಹುಲಿ ಯಾವಾಗಲೂ ಮರಿಗಳ ವಿಚಾರದಲ್ಲಿ ಉಗ್ರವಾಗುತ್ತದೆ. ಜನರು ತಿಳಿದೋ ತಿಳಿಯದೆಯೋ ಮಾಡುವ ಸಣ್ಣ ನಡೆ ಕೂಡ ಅಪಾಯ ತಂದೊಡ್ಡುತ್ತದೆ.

ಹೆಡಿಯಾಳ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಅವರ ಪ್ರಕಾರ, ಪ್ರತಿ ವರ್ಷ ಈ ಪ್ರದೇಶಗಳಲ್ಲಿ ಹುಲಿಗಳ ಸಂಚಾರವು ಸಂತಾನೋತ್ಪತ್ತಿ ಅವಧಿಯಲ್ಲಿ ಬಹಳ ಸಾಮಾನ್ಯವಾಗಿದೆ. ಈ ವರ್ಷ, ಚಲನವಲನ ಸ್ವಲ್ಪ ಹೆಚ್ಚಾಗಿದೆ. ಅರಣ್ಯದ ಗಡಿಗಳ ಅತಿಕ್ರಮಣವು ಸಂಘರ್ಷದ ಹಿಂದಿನ ಕಾರಣಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ರೈತರ ಪ್ರಕಾರ, ಕಾಡೊಳಗೆ ಹೆಚ್ಚಾಗುತ್ತಿರುವ ಸಫಾರಿಗಳಿಂದ ಕಾಡನ್ನು ತೊರೆದು ಹುಲಿಗಳು ನಾಡಿಗೆ ಬರುತ್ತಿವೆ ಎನ್ನುವುದು ಅವರ ವಾದ. ಅರಣ್ಯದಂಚಿನಲ್ಲಿರುವ ಜನರು ದನಗಳ ಮೇವು ಇತ್ಯಾದಿಗಳಿಗಾಗಿ ಅತಿಕ್ರಮಣ ಸಂಘರ್ಷಕ್ಕೆ ಕಾರಣ ಎನ್ನುವುದು ಅರಣ್ಯಾಧಿಕಾರಿಗಳ ವಾದ.
ವಿಜ್ಞಾನಿಗಳ ಪ್ರಕಾರ
ಭಾರತದ ಹುಲಿಗಳ ಮೇಲೆ ಆಧುನಿಕ ರೀತಿಯಲ್ಲಿ ಸಂಶೋಧನೆ ನಡೆಸುತ್ತಿರುವ ಡಾ. ಉಲ್ಲಾಸ್ ಕಾರಂತರ ಪ್ರಕಾರ ಅತಿಯಾದ ಸಂರಕ್ಷಣಾ ಕ್ರಮಗಳಿಂದ, ಅಂದರೆ ಹುಲಿಗಳ ಸಂರಕ್ಷಣೆಗಾಗಿ ಕೃತಕ ಜಲಹೊಂಡಗಳ ನಿರ್ಮಾಣ, ಕೃತಕ ಹುಲ್ಲುಗಾವಲುಗಳ ನಿರ್ಮಾಣ ಇತ್ಯಾದಿಗಳಿಂದ ಹುಲಿಗಳ ಸಂಖ್ಯೆ ಅಸಹಜವಾಗಿ ಹೆಚ್ಚಾಗಿದೆ. ಆದರೆ ಕಾಡಿನ ಪ್ರಮಾಣ ಹೆಚ್ಚಾಗಿಲ್ಲ. ಹೀಗಿರುವಾಗ ಮಾನವ – ವನ್ಯಜೀವಿ ಸಂಘರ್ಷ ಹೆಚ್ಚುತ್ತದೆ. ಉಲ್ಲಾಸ್ ಕಾರಂತರ ಸಂಶೋಧನೆಯ ಪ್ರಕಾರ 100 ಚದರ ಕಿಲೋಮೀಟರ್ ನಲ್ಲಿ 5 ರಿಂದ 10 ಹುಲಿಗಳು ಇರುವುದು ಆರೋಗ್ಯಪೂರ್ಣ. ಆದರೆ ಬಂಡೀಪುರದಲ್ಲಿ 100 ಚದರ ಕಿಲೋಮೀಟರ್ ನಲ್ಲಿ 19.83 ಹುಲಿಗಳಿವೆ. ಹಾಗೆಯೇ ಬಂಡೀಪುರ ಮತ್ತು ನಾಗರಹೊಳೆ ಪ್ರದೇಶ ಕರ್ನಾಟಕದ ಶೇಕಡ 75 ರಷ್ಟು ಹುಲಿಗಳ ಆವಾಸಸ್ಥಾನ.

“ಅಧಿಕಾರಿಗಳ ಮತ್ತು ರಾಜಕಾರಣಿಗಳ ನಿರಾಸಕ್ತಿಯಿಂದಾಗಿ, ಕಳೆದ ಹಲವು ವರ್ಷಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳಿಂದ ಅರಣ್ಯ ವಾಸಿ ಕುಟುಂಬಗಳ ಸ್ವಯಂಪ್ರೇರಿತ ಸ್ಥಳಾಂತರ ಸಂಪೂರ್ಣ ಸ್ಥಗಿತಗೊಂಡಿದೆ. ಈ ವಿಷಯದಲ್ಲಿ ತಾರ್ಕಿಕ ಮತ್ತು ವೈಜ್ಞಾನಿಕ ಪ್ರತಿಕ್ರಿಯೆ ಸಿಗದಿದ್ದರೆ, ಮಾನವ-ಪ್ರಾಣಿ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ” ಎನ್ನುತ್ತಾರೆ.
ಪರಿಹಾರ ಇದೆಯೇ?

ಬಂಡೀಪುರದ ಆಕ್ರೋಶಿತ ರೈತರು ಹುಲಿ ಹಿಡಿಯುವ ಬೋನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನೇ ಸೆರೆ ಮಾಡಿದರು, ಅಧಿಕಾರಿಗಳ ಮೇಲೆ ದಾಳಿ, ಕಲ್ಲು ತೂರಾಟ, ಇತ್ಯಾದಿಗಳು ನಡೆದಿವೆ ಆದರೆ ಇದರಲ್ಲಿ ಪರಿಹಾರ ಇದೆಯೇ? ಕಾಡಂಚಲ್ಲಿ ಇರುವ ಸಮುದಾಯಗಳಿಗೆ ಜಾನುವಾರು ಸಾಕಾಣಿಕೆ ಬದಲಿ ಪರ್ಯಾಯ ಜೀವನೋಪಾಯ ನಿರ್ಮಿಸುವ ಕಾರ್ಯ ನಡೆಯಬೇಕು. ಉದಾಹರಣೆಗೆ ಬಿದಿರು ಮತ್ತು ಬೆತ್ತದ ಕೆಲಸ, ಕರಕುಶ ಕಲೆ, ಜೇನು ಸಾಕಾಣಿಕೆಯಂತಹ ಕೆಲಸಗಳ ತರಬೇತಿ ಮತ್ತು ಪ್ರೋತ್ಸಾಹ ಕಾಡಿನ ಮೇಲಿನ ಅವರ ಅವಲಂಬನೆ ಕಡಿಮೆಗೊಳಿಸುತ್ತದೆ. ಹೀಗೆ ಅವರ ಶಿಕ್ಷಣ ಮತ್ತು ಉನ್ನತಿ ಕಾಡಿನ ಸಂರಕ್ಷಣೆಯ ಅಂಗವಾಗಬೇಕು. ಕಾಡು ಮತ್ತು ವನ್ಯಜೀವಿಗಳು ಬರಿ ಇಲಾಖೆಯ ಸ್ವತ್ತು ಎನ್ನುವ ಭಾವನೆಯಿಂದ ನಾವು ಹೊರಬರಬೇಕು. ಕಾಡಿಂದಲೇ ನಾಡು ಎನ್ನುವ ವಿಚಾರ ಎಲ್ಲರ ಮನ ಮುಟ್ಟಬೇಕು. ಜನ ಸಾಮಾನ್ಯರು ಕಾಡಿನ ಗಡಿಗಳನ್ನು ಗೌರವಿಸಬೇಕು. ಅತಿಕ್ರಮಣ ಪ್ರವೇಶ, ಜಾನುವಾರು ಮೇವಿಗಾಗಿ ಕಾಡಿನ ಪ್ರವೇಶ, ವನ್ಯಜೀವಿಗಳನ್ನು ಕಂಡಾಗ ವರದಿ ಮಾಡಬೇಕೇ ಹೊರತು ಕುತೂಹಲದಿಂದ ಸಮೀಪಿಸುವುದು ಕುತ್ತು ತರುತ್ತದೆ.
ಹಾಗೆಯೇ ಕಾಡಿನಲ್ಲಿ ನೈಸರ್ಗಿಕವಾಗಿ ಬೇಟೆಯಾಗುವ ಹಾಗೂ ಬೇಟೆಯಾಡುವ ಪ್ರಾಣಿಗಳ ಸಂಖ್ಯೆಯನ್ನು ಪರಿಸರವೇ ನಿರ್ಧರಿಸಬೇಕು. ಕಾಡಿನಲ್ಲಿ ಅತಿಯಾದ ಲಂಟಾನದಂತಹ ಪರಾಯ ಸಸ್ಯಗಳ ಬೆಳವಣಿಗೆ ನಮ್ಮ ಸ್ಥಳೀಯ ಸಸ್ಯಗಳ ಬೆಳವಣಿಗೆಗೆ ತೊಂದರೆ ಉಂಟುಮಾಡುತ್ತದೆ. ಹಾಗಾಗಿ ಇವುಗಳ ನಿಯಂತ್ರಣ ಮೊದಲ ಗುರಿಯಾಗಬೇಕು. ಅತಿಯಾದ ಸಂರಕ್ಷಣಾ ಕ್ರಮಗಳು ಕೂಡ ಸಮತೋಲನವನ್ನು ಬಿಗಡಾಯಿಸುತ್ತಿದೆ.

ಲೇಖನ: ರಕ್ಷಾ
ಉಡುಪಿ ಜಿಲ್ಲೆ

ಅರಣ್ಯಶಾಸ್ತೃ (ಬಿ. ಎಸ್.ಸಿ. ಫೋರೆಸ್ಟ್ರೀ) ವಿದ್ಯಾರ್ಥಿನಿಯಾಗಿದ್ದು, ಪರಿಸರದ ಕುರಿತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.