ಕಾಡಿನ ನಡುವೆ ಕಂಡ ಕಡವೆ
© ಸುನಿಲ್ ಕುಮಾರ್
ಈ ಘಟನೆ ನಡೆದು ಬರೋಬ್ಬರಿ 12 ವರ್ಷಗಳೇ ಆಯ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಣತಿ ನಡೆಯಲಿದೆ ಎಂಬ ವಿಚಾರ ತಿಳಿಯಿತು. ನಾನಾಗ ಸಂಸೆ ಹೈಸ್ಕೂಲಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಅಕ್ಟೋಬರ್ ತಿಂಗಳಿನಲ್ಲಿ ವನ್ಯಜೀವಿ ಸಪ್ತಾಹ ನಡೆದಾಗ ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಕರೆದುಕೊಂಡು ಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪರಿಚಯವಾಗಿತ್ತು. ಕುದುರೆಮುಖ ವನ್ಯಜೀವಿ ವಲಯದಲ್ಲಿ ಆರು ವಲಯಗಳು ಇವೆ. ವಲಯಮಟ್ಟದ ಎಲ್ಲ ಸ್ಪರ್ಧೆಗಳಲ್ಲೂ ನಮ್ಮ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದರು. ಹೀಗೆ ಪರಿಚಯ ಆಗಿದ್ದ ಕಾರಣ ‘ಬನ್ನಿ ಮೇಷ್ಟ್ರೆ, ನೀವು ಬಂದ್ರೆ ಸಂತೋಷ’ ಅಂತ ಹುಲಿಗಣತಿಗೆ ನನ್ನನ್ನೂ ಸೇರಿಸಿಕೊಂಡರು. ಅದು ಬರೀ ಹುಲಿಗಣತಿಯಾಗದೆ ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಗಣತಿ ಅನ್ನುವುದು ಅಲ್ಲಿಗೆ ಹೋದ ನಂತರವೇ ನನಗೆ ಅರ್ಥವಾದದ್ದು. ಬಸ್ಸಿನಲ್ಲಿ ಪ್ರತಿವಾರ ಊರಿಗೆ ಅದೇ ಕಾಡಿನ ದಾರಿಯಲ್ಲಿ ಓಡಾಡುವ ನನಗೆ ರಾಮಚಂದ್ರ ಎಂಬ ಗಾರ್ಡ್ ಪರಿಚಯವಾಗಿದ್ದರು. ಅವರು ತಮ್ಮ ಬೀಟ್ ಗೆ ನನ್ನನ್ನು ಸೇರಿಸಿಕೊಂಡರು.
ಶಾಲೆಗೆ ಒಂದು ವಾರ ರಜೆ ಹಾಕಿ ಕಾಡು ಸುತ್ತುವ ಉತ್ಸಾಹದಿಂದ ಹೊರಟಿದ್ದೆ. ಡಿಸೆಂಬರ್ ತಿಂಗಳ ಚಳಿಯಲ್ಲಿ ಕಾಡಿನಲ್ಲಿ ಓಡಾಡುವ ಅನುಭವ ಅದ್ಭುತವಾಗಿತ್ತು. ಬೆಳ್ಳಂ ಬೆಳಗ್ಗೆ ಆರು ಗಂಟೆಗೆ ಕೊರೆಯುವ ಚಳಿಯಲ್ಲಿ ಬೈಕ್ ಹತ್ತಿಕೊಂಡು ಕುದುರೆಮುಖ ಪಟ್ಟಣದ ಕೊನೆಯಲ್ಲಿರುವ ಮ್ಯಾಗಜಿನ್ ಗುಡ್ಡದ ನಮ್ಮ ಬೀಟ್ ತಲುಪುವಷ್ಟರಲ್ಲಿ ನಮ್ಮ ಕೈಕಾಲೆಲ್ಲಾ ಮರಗಟ್ಟಿ ಹೋಗಿತ್ತು. ಬೈಕ್ ನಿಲ್ಲಿಸಿ ಗುಡ್ಡ ಹತ್ತಿ ನಡೆದು ನಮ್ಮ ಗಣತಿಯ ಜಾಗ ತಲುಪಿದಾಗ ಸೂರ್ಯ ಪೂರ್ವದಿಗಂತದಲ್ಲಿ ನಿಧಾನವಾಗಿ ಮೇಲೆ ಬರಲಾರಂಭಿಸಿದ್ದ. ನಾವಿದ್ದ ಎತ್ತರದಿಂದ ನೋಡಿದರೆ, ಬೆಟ್ಟಗಳ ಕಣಿವೆಯಲ್ಲಿ ಮಂಜು ತುಂಬಿಕೊಂಡಿರುತ್ತಿತ್ತು. ಆ ಚಂದದ ದೃಶ್ಯವನ್ನು ನೋಡಿಯೇ ಅನುಭವಿಸಬೇಕು. ನಾನಂತೂ ಕೆಲವು ನಿಮಿಷ ಅದನ್ನು ಮೈ ಮರೆತು ನೋಡುತ್ತಲೇ ನಿಂತುಬಿಟ್ಟಿದ್ದೆ.

“ಅಲ್ಲಿ ಗುಡ್ಡದ ಮೇಲೆ ಒಣಗಿದ ಹುಲ್ಲಿನಲ್ಲಿ ಒಂದು ಕಡವೆ ಗುಂಪು ಮಲಗಿತ್ತು. ನಮ್ಮನ್ನು ನೋಡಿ ಎದ್ದು ನಿಂತಿದ್ದಾವೆ” ಅಂತ ಗಾರ್ಡ್ ರಾಮಚಂದ್ರ ಕಿವಿಯಲ್ಲಿ ಪಿಸುಗುಟ್ಟಿದಾಗಲೇ ನನಗೆ ವಾಸ್ತವಕ್ಕೆ ಮರಳಿದ್ದು. ಡಿಸೆಂಬರ್ ತಿಂಗಳಿಗೆ ಆಗಲೇ ಹುಲ್ಲು ಸ್ವಲ್ಪ ಒಣಗಿ ಕಂದು ಬಣ್ಣಕ್ಕೆ ತಿರುಗಲಾರಂಭಿಸಿತ್ತು. ಹುಲ್ಲಿನ ನಡುವೆ ಐದು ಕಡವೆಗಳ ಗುಂಪು ನಮ್ಮ ಕಡೆಗೆ ಎವೆಯಿಕ್ಕದೆ ನೋಡುತ್ತಿದ್ದವು. ಒಣಗಿದ ಹುಲ್ಲಿನ ನಡುವೆ ಅವುಗಳು ಇರುವುದನ್ನು ತಕ್ಷಣ ಪತ್ತೆಹಚ್ಚುವುದು ಬಹಳ ಕಷ್ಟಕರವಾಗಿತ್ತು. ನಮ್ಮಲ್ಲಿದ್ದ ಬೈನಾಕ್ಯುಲರ್ನಿಂದ ಆ ದೃಶ್ಯ ನೋಡಿದಾಗ, ಆಗತಾನೇ ಹೊರಟ ಸೂರ್ಯನ ಹೊಂಬಣ್ಣದ ಕಿರಣಗಳು ಗುಡ್ಡದ ತುದಿಯನ್ನೂ ಅಲ್ಲಿ ನಿಂತಿದ್ದ ಆ ಕಡವೆಗಳ ಗುಂಪನ್ನೂ ಹೊನ್ನಿನ ಬಣ್ಣದಿಂದ ತೋಯಿಸುತ್ತಿತ್ತು. ಅದುವರೆಗೆ ಕೇವಲ ಮೃಗಾಲಯದಲ್ಲಿ ಕಡವೆ ನೋಡಿದ್ದ ನನಗೆ ಮೊದಲ ಬಾರಿ ಕಾಡಿನಲ್ಲಿ ಕಡವೆ ನೋಡಿ ಮೈ ರೋಮಾಂಚನಗೊಂಡಿತು. ಬೆಳಗಿನ ಸೂರ್ಯೋದಯ ನೋಡುತ್ತಾ ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಅವುಗಳಿಗೆ ನಾವು ಬಂದದ್ದು ಆಗಲೇ ತಿಳಿದು ಹೋಗಿತ್ತು. ಹುಲ್ಲಿನ ಮೇಲೆ ಮಲಗಿದ್ದ ಅವುಗಳು ಎದ್ದು ನಿಂತು ತದೇಕಚಿತ್ತದಿಂದ ನಮ್ಮನ್ನೇ ನೋಡುತ್ತಿದ್ದವು. ನಾವು ಸುಮಾರು ಇನ್ನೂರು ಮೀಟರ್ ದೂರದಲ್ಲಿ ನಿಂತಿದ್ದರೂ ಅವುಗಳು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದವು. ರಾಮಚಂದ್ರರವರು ನಾವಿದ್ದ ಜಿಪಿಎಸ್ ಪಾಯಿಂಟ್ ಬರೆದಿಟ್ಟುಕೊಳ್ಳುತ್ತಿದ್ದರು. ಆ ಮನಮೋಹಕ ದೃಶ್ಯವನ್ನು ಇನ್ನು ಹತ್ತಿರದಿಂದ ಕಣ್ ತುಂಬಿಸಿಕೊಳ್ಳಲು ನಾನು ಒಂದು ಹೆಜ್ಜೆ ಮುಂದೆ ಇಡಬೇಕು ಎನ್ನುವಷ್ಟರಲ್ಲಿ ಕಡವೆಗಳು ಛಂಗನೆ ನೆಗೆದು ಬೆಟ್ಟದ ಆಕಡೆಯ ಕಣಿವೆಗೆ ಜಿಗಿದು ಮಾಯವಾದವು.
ಆ ದಿನದ ನಮ್ಮ ಗಣತಿ ಕಾರ್ಯ ಚೆನ್ನಾಗಿಯೇ ನಡೆದಿತ್ತು. ಮಧ್ಯಾಹ್ನ ಬಂದು ಸುಸ್ತಾಗಿದ್ದ ನಾನು ಊಟ ಮಾಡಿ ಒಂದು ಗಡತ್ ನಿದ್ದೆ ಹೊಡೆದೆ. ಸಂಜೆ ಚಹಾ ಕುಡಿಯಲು ಹೋದಾಗ ಫಾರೆಸ್ಟರ್ ದರ್ಶನ್ ಕೂಡಾ ಸಿಕ್ಕರು. ಜೊತೆಗೆ ಚಹಾ ಕುಡಿದು ಕುದುರೆಮುಖ ಪಟ್ಟಣದ ಕಡೆಗೆ ವಾಕಿಂಗ್ ಹೊರಟೆವು. ಒಂದು ಕಾಲದ ದೊಡ್ಡ ಕಬ್ಬಿಣದ ಅದಿರು ಗಣಿಗಾರಿಕೆಯ ಕೇಂದ್ರವಾಗಿದ್ದ ಕುದುರೆಮುಖ ಈಗ ಖಾಲಿಬಿದ್ದು ಬಿಕೋ ಎನ್ನುತ್ತಿತ್ತು. ಜನವಸತಿ ತೀರಾ ವಿರಳವಾಗಿತ್ತು. ಅರಣ್ಯ ಇಲಾಖೆ, ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಯೇ ಈಗ ಪಟ್ಟಣದ ನಿವಾಸಿಗಳಾಗಿ ಉಳಿದಿದ್ದರು. ನನ್ನಂತೆಯೇ ಪಕ್ಷಿಗಳ ಬಗ್ಗೆ ಆಸಕ್ತಿ ಇದ್ದ ದರ್ಶನ್ ಆ ಕಡೆ ಬಹಳ ಹಕ್ಕಿಗಳು ನೋಡ್ಲಿಕ್ಕೆ ಸಿಗ್ತವೆ, ಹೋಗಿ ಬರೋಣ ಎಂದರು. ರಾಮಚಂದ್ರ ಕೂಡ ಸೇರಿಕೊಂಡರು. ನಾವು ಮೂರೂ ಜನ ಅಲ್ಲೇ ಹತ್ತಿರದ ಮಸೀದಿಗುಡ್ಡದ ಕಡೆಗೆ ಹೊರಟೆವು. ಪಕ್ಷಿವೀಕ್ಷಣೆ ಮಾಡುತ್ತಾ ಮುಂದೆ ಸಾಗಿದೆವು.


‘ಮಸೀದಿಗುಡ್ಡದ ಕೆಳಗೆ ಒಂದು ಸಣ್ಣ ಕೆರೆ ಇದೆ, ಆ ಕಡೆ ಹೋಗೋಣ ಬನ್ನಿ, ಏನಾದ್ರೂ ಸಿಗಬಹುದು’ ಎಂದು ಜೊತೆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಕರೆದುಕೊಂಡು ಹೋದರು. ದಟ್ಟವಾದ ಮರಗಳು ಮತ್ತು ಪೊದೆಗಳ ನಡುವೆ ಕೆರೆ ಇದ್ದದ್ದು ದೂರದಿಂದ ತಿಳಿಯುತ್ತಲೇ ಇರಲಿಲ್ಲ. ಕೆರೆಯ ಹತ್ತಿರ ಬರುತ್ತಿದ್ದಂತೆ ಅವರಿಬ್ಬರೂ ಗಕ್ಕನೆ ನಿಂತರು. ಯಾಕೆ ಅಂತ ತಿಳಿಯಲಿಲ್ಲ; ನಾನೂ ನಿಂತುಬಿಟ್ಟೆ. ಪ್ರತಿ ದಿನ ಕಾಡಿನಲ್ಲಿ ಓಡಾಡುವ ಅವರಿಬ್ಬರ ಕಣ್ಣು ಮತ್ತು ಕಿವಿಗಳು ಬಹಳ ಚುರುಕಾಗಿದ್ದವು. ನಾನು ಕೈಸನ್ನೆಯಲ್ಲಿ ಯಾಕೆ ಏನಾಯ್ತು ಅಂತ ಕೇಳಿದೆ. “ಕೆರೆಯಲ್ಲಿ ಕಡವೆಗಳು ನೀರು ಕುಡಿಯುತ್ತಿವೆ” ಅಂತ ಅತ್ಯಂತ ಮೆಲ್ಲಗಿನ ಧ್ವನಿಯಲ್ಲಿ ಹೇಳಿದರು. ಸುಮಾರು ಐವತ್ತರಿಂದ ನೂರು ಮೀಟರ್ ಅಂತರದಲ್ಲಿ ಕಡವೆಗಳು ನೀರು ಕುಡಿಯುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿತು. ಕೈಯಲ್ಲಿ ಕ್ಯಾಮೆರಾ ಇತ್ತು. ಫೋಟೋ ತೆಗೆಯಲೇ ಅಂತ ಕೇಳಿದೆ. ನಿಧಾನವಾಗಿ ಮುಂದೆ ಹೋಗಿ ಪ್ರಯತ್ನಿಸಿ ಎಂದರು. ಸ್ವಲ್ಪವೂ ಶಬ್ದವಾಗದ ಹಾಗೆ ನಾಲ್ಕು ಹೆಜ್ಜೆ ಮುಂದೆ ಹೋಗಿ ಪೊದೆಗಳ ಸಂಧಿಯಲ್ಲಿ ಕ್ಯಾಮೆರಾ ಲೆನ್ಸ್ ತೂರಿಸಿ ನೋಡಿದೆ.

ದೊಡ್ಡ ಕೊಂಬುಗಳ ಎತ್ತರದ ಕಡವೆಯೊಂದು ಅದಾಗಲೇ ನಮ್ಮ ಇರುವಿಕೆಯನ್ನು ಗಮನಿಸಿತ್ತು. ತಲೆ ಎತ್ತಿ ನಮ್ಮ ಕಡೆಗೆ ತದೇಕಚಿತ್ತದಿಂದ ನೋಡುತ್ತಿತ್ತು. ಅದರ ಕುತ್ತಿಗೆಯ ನಡುವೆ ಒಂದು ಗಾಯ ಮತ್ತು ತ್ರಿಭುಜಾಕಾರದಲ್ಲಿ ಕೂದಲು ಉದುರಿತ್ತು. ಹಿಂದುಗಡೆ ಕೊಂಬಿಲ್ಲದ ಎರಡು ಕಡವೆಗಳು ನಮ್ಮ ಕಡೆಗೆ ನೋಡುತ್ತಿದ್ದವು. ಕೊಂಬಿರುವುದು ಗಂಡು ಮತ್ತು ಉಳಿದ ಎರಡು ಹೆಣ್ಣು ಇರಬೇಕು ಎಂದು ಊಹಿಸಿದೆ. ಪೊದೆಗಳ ಹಿಂದಿನಿಂದ ಬರುತ್ತಿದ್ದ ನಾವು ಅಪಾಯದ ಮುನ್ಸೂಚನೆ ಎನಿಸಿರಬೇಕು. ತನ್ನ ಮೋಟುಬಾಲವನ್ನು ಮೇಲಕ್ಕೆತ್ತಿ, ಮುಂಗಾಲಿನಿಂದ ಒಮ್ಮೆ ನೆಲಕ್ಕೆ ಗುದ್ದಿತು. ಉಳಿದ ಕಡವೆಗಳು ಎಚ್ಚರವಾದವು. ಗಂಡು ಕಡವೆ ಇನ್ನೊಮ್ಮೆ ತನ್ನ ಮುಂದಿನ ಕಾಲನ್ನು ಎತ್ತಿ ನೆಲಕ್ಕೆ ಗುದ್ದಿತು ಅದರ ಜೊತೆಗೆ ದೊಡ್ಡ ಬಸ್ಸೊಂದು ಹಾರನ್ ಹೊಡೆಯುವಂತೆ ʼಬೋಂಕ್ʼ ಎಂದು ಜೋರಾಗಿ ಕೂಗಿತು. ಫೋಟೋ ತೆಗೆಯುವುದನ್ನು ಮರೆತು ಕ್ಯಾಮೆರಾ ಮೂಲಕ ಇವುಗಳನ್ನು ನೋಡುವುದರಲ್ಲೇ ಮಗ್ನನಾಗಿದ್ದ ನನಗೆ ಹೀಗಾಗಬಹುದು ಎಂಬ ಊಹೆಯೇ ಇರಲಿಲ್ಲ. ಕಡವೆಯ ಕೂಗಿಗೆ ಒಮ್ಮೆಲೇ ಬೆಚ್ಚಿಬಿದ್ದ ಕಾರಣ ನನ್ನ ಕೈಯಿಂದ ಕ್ಯಾಮೆರಾ ಕೆಳಗೆ ಜಾರಿತು. ಅದು ಹೇಗೋ ತಕ್ಷಣ ಹಿಡಿದುಕೊಂಡದ್ದರಿಂದ ಬಚಾವಾದೆ. ಇಲ್ಲದಿದ್ದರೆ ಕ್ಯಾಮೆರಾದ ಕತೆ ಅವತ್ತೇ ಮುಗಿದುಹೋಗುತ್ತಿತ್ತು. ಈಗಲಾದರೂ ಒಂದು ಫೋಟೋ ತೆಗೆಯೋಣವೆಂದೆನಿಸಿ ಫೋಟೋ ತೆಗೆಯಲು ಸನ್ನದ್ಧನಾದೆ. ಆದರೆ ಅಷ್ಟರಲ್ಲೇ ಹೆಣ್ಣು ಕಡವೆಗಳು ಓಡಿಹೋಗಿದ್ದವು. ಗಂಡು ಜಿಂಕೆ ಇನ್ನೊಮ್ಮೆ ಮುಂಗಾಲಿನಿಂದ ನೆಲವನ್ನು ಗುದ್ದಿ ಒಂದೇ ನೆಗೆತಕ್ಕೆ ಇನ್ನೊಂದು ಬದಿಗೆ ಹಾರಿ, ಅಲ್ಲಿಂದ ಗುಡ್ಡ ಹತ್ತಿ ಮಾಯವಾಗಿಬಿಟ್ಟಿತು. ಅವುಗಳು ಓಡುವ ಸದ್ದು ಸಣ್ಣ ಭೂಕಂಪವಾದ ಅನುಭವವಾಗಿತ್ತು.
ಈಗಲೂ ಕೆಲವೊಮ್ಮೆ ಆ ಘಟನೆಯನ್ನು ನೆನಪಿಸಿಕೊಂಡು ಮಗಳಿಗೆ ಕಥೆ ಹೇಳಬೇಕಾದರೆ ಮತ್ತೆ ರೋಮಾಂಚನವಾಗುತ್ತದೆ. ಕ್ಯಾಮೆರಾ ಕೈಜಾರಿ ಫೋಟೋ ತೆಗೆಯಲಾಗದೆ ಹೋದರೂ ಆ ಕಡವೆಯ ಚಿತ್ರ ಮಾತ್ರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ.








ಲೇಖನ: ಅರವಿಂದ ಕೂಡ್ಲ
ದಕ್ಷಿಣ ಕನ್ನಡ ಜಿಲ್ಲೆ