ವನಸುಮ – ಬಿಲ್ವಪತ್ರೆ ಮರ

ವನಸುಮ – ಬಿಲ್ವಪತ್ರೆ ಮರ

    © ನಾಗೇಶ್ ಒ. ಎಸ್.

English Name: Indian bael  

Scientific Name: Aegle marmelos

ಶಿವನ ದೇವಾಲಯಗಳ ಬಳಿ ಪ್ರಮುಖವಾಗಿ ಕಂಡುಬರುವ ಮರ ಬಿಲ್ವ ಮರ. ವೇದಗಳಲ್ಲೂ ಸಹ ಬಿಲ್ವಪತ್ರೆಯ ಉಲ್ಲೇಖಗಳನ್ನು ಕಾಣಬಹುದು. ಬಿಲ್ವ ಒಂದು ದೈವಿಕ ಮರ ಎಂದು ಜನ ತಿಳಿದಿರುವುದರಿಂದ ದೇವಾಲಯಗಳ ಬಳಿ ಈ ಮರವನ್ನು ಸಾಮಾನ್ಯವಾಗಿ ಕಾಣಬಹುದು. ದಸರಾ ಹಬ್ಬದಲ್ಲಿ ಈ ಮರಕ್ಕೆ ವಿಶೇಷ ಸ್ಥಾನವಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಶೇಷತೆ ಇರುವುದರಿಂದ ಈ ಮರವನ್ನು ಜನರು ದೈವಿಕ ಮರ ಎಂದು ಭಾವಿಸಿ ಇದನ್ನು ಕಡಿಯಲು, ಹಾಳು ಮಾಡಲು ಭಯ ಪಡುತ್ತಾರೆ. ಈ ಮರ ಸಮುದ್ರ ಮಟ್ಟದಿಂದ 3600 ಅಡಿ ಎತ್ತರದ ಪ್ರದೇಶಗಳಲ್ಲೂ ಸಹ ಬೆಳೆಯಬಲ್ಲದು. ಇದು ಭಾರತ, ಪಾಕಿಸ್ತಾನ, ನೇಪಾಳ ದೇಶಗಳ ಸ್ಥಳೀಯ ಮರವಾಗಿದೆ. ಬಾಂಗ್ಲಾ, ಮಾಯನ್ಮಾರ್, ಶ್ರೀಲಂಕಾ ದೇಶಗಳಲ್ಲೂ ಬಿಲ್ವದ ಮರಗಳು ಕಾಣಸಿಗುತ್ತವೆ. ಅಂಡಮಾನ್ ದೀಪಗಳಲ್ಲೂ ಬಿಲ್ವದ ಮರಗಳನ್ನು ಕಾಣಬಹುದು.

© ನಾಗೇಶ್ ಒ. ಎಸ್.

ಇದು ಬೇಸಿಗೆಯಲ್ಲಿ ಎಲೆ ಉದುರಿಸುವ ಮರ. ತೊಗಟೆಯ ಮೇಲೆ ಬೂದು ಬಣ್ಣದ ಉರುಪೆಗಳು ಇರುತ್ತವೆ. ಗಿಡದ ಎಲೆಗಳು ಕಡು ಹಸಿರು ಬಣ್ಣದಲ್ಲಿ ಇರುತ್ತವೆ. ಎಲೆಯ ಬುಡದಲ್ಲಿ, ಕೊಂಬೆಗಳಲ್ಲಿ ಮುಳ್ಳುಗಳು ಅವಿತುಕೊಂಡಿರುತ್ತವೆ. ಇದರ ಎಲೆಗಳು ತ್ರಿಪರ್ಣ. ಎಲೆಗಳಲ್ಲಿ ಮೂರು ಕಿರು ಎಲೆಗಳನ್ನು ಹೊಂದಿದ್ದು, ತೊಟ್ಟಿನಲ್ಲಿ ರೆಕ್ಕೆಯಂತೆ ಹೊರ ಚಾಚಿಕೊಂಡಿರುತ್ತದೆ. ಎಲೆಗಳ ಕೆಳ ಭಾಗದಲ್ಲಿ ತೈಲಯುಕ್ತ ಗ್ರಂಥಿಗಳ ಚುಕ್ಕಿಗಳು ಇದ್ದು, ಸುವಾಸನೆಯಿಂದ ಕೂಡಿರುತ್ತವೆ.

 ಬಿಲ್ವದ ಹೂಗಳು ಪರಿಮಳದಿಂದ ಕೂಡಿರುತ್ತವೆ. ಜೇನುಹುಳುಗಳಿಗೆ ಮಕರಂದವನ್ನು ಕೊಡುತ್ತವೆ. ಏಪ್ರಿಲ್ ಮೇ ತಿಂಗಳಿನಲ್ಲಿ ಹೂ ಬಿಟ್ಟು, ಜೂನ್ ಆಗುವಷ್ಟರಲ್ಲಿ ಕಾಯಿಗಳಾಗುತ್ತವೆ. ಹೂಗಳು ಒಂದರಿಂದ ಎರಡು ಸೆಂಟಿಮೀಟರ್ ಉದ್ದವಿದ್ದು, ಮಾಸಲು ಹಸಿರು ಬಿಳಿ ಬಣ್ಣಕ್ಕೆ ಇರುತ್ತವೆ. ಹೂಗಳಲ್ಲಿ ಹೆಣ್ಣು-ಗಂಡು ಭಾಗಗಳು ಒಟ್ಟಿಗೆ ಇರುತ್ತವೆ. ಇದರ ಕಾಯಿಗಳು ಸೇಬಿನ ಗಾತ್ರದಲ್ಲಿದ್ದು ಗೋಳಾಕಾರವಾಗಿರುತ್ತವೆ. ಕಾಯಿ ಮೊದಲು ಹಸಿರು ಬಣ್ಣಕ್ಕಿದ್ದು, ಹಣ್ಣಾದಾಗ ಬೂದು ಬಣ್ಣಕ್ಕೆ ತಿರುಗುತ್ತದೆ. ಕಾಯಿಯ ಹೊರ ಚಿಪ್ಪು ಗಟ್ಟಿಯಾಗಿರುತ್ತದೆ. ಕಾಯಿ ಹಣ್ಣಾಗಲು 10 ರಿಂದ 11 ತಿಂಗಳುಗಳು ಬೇಕು. ಆದ್ದರಿಂದ ಮರದಲ್ಲಿ ಕಾಯಿಗಳನ್ನು ವರ್ಷವಿಡೀ ನೋಡಬಹುದು. ಬಿಲ್ವದ ಸಣ್ಣ ಸಸಿಗಳನ್ನು ಬೀಜ ಬಿತ್ತನೆ ಮಾಡಿ ಪಡೆಯಬಹುದು. ಬೀಜ ಬಿತ್ತನೆ ಮಾಡಲು ಜೂನ್-ಜುಲೈ ಉತ್ತಮಕಾಲ. ಬಿಲ್ವವನ್ನೂ ಕಹಿಕಿತ್ತಳೆ ಎಂದು ಕೂಡ ಕರೆಯುತ್ತಾರೆ. ಇದೊಂದು ಕಿತ್ತಳೆ ಜಾತಿಗೆ ಸೇರಿದ ಮರ. ಇದರ ಎಲೆ, ಹೂವು, ಕಾಯಿ, ಹಣ್ಣು, ಬೇರು ಸಹ ಔಷಧೀಯ ಗುಣಗಳನ್ನು ಹೊಂದಿವೆ.  ಬಿಲ್ವ ಮರದ ಎಲೆಗಳಲ್ಲಿ ಚಿಟ್ಟೆಗಳು ಬಂದು ಮೊಟ್ಟೆ ಇಡುತ್ತವೆ.

 ಚಿಕ್ಕಮಗಳೂರಿನ ಕಲ್ಮರಡಿ ಎಂಬ ಊರಿನಲ್ಲಿ ವಿಶೇಷವಾಗಿ ಎರಡು ಸಾವಿರ ಬಿಲ್ವ ಮರಗಳ ವನವಿದೆ. . .

ಬಿಲ್ವದ ಮರದಿಂದ ಹಲವು ಉಪಯೋಗ ಇವೆ, ಬಿಲ್ವದ ಹಣ್ಣು ಹೊಟ್ಟೆಗೆ, ಬಿಸಿಲಿಗೆ ನೆರಳು, ಪೂಜೆಗೆ ಎಲೆ, ಮೈಯಿಗೆ ಮದ್ದು ಹೀಗೆ ಹಲವು ಉಪಯೋಗ ಇರುವ ಈ ದೈವೀ ಮರವನ್ನು ಸಂರಕ್ಷಿಸಿ ಬೆಳೆಸುವ ಸರದಿ ನಮ್ಮದಾಗಿದೆ.

ಬಿಲ್ವದ ಔಷಧೀಯ ಗುಣಗಳು: ಬಿಲ್ವಪತ್ರೆ ಬಹು ಉಪಯುಕ್ತ ಔಷಧೀಯ ಮರವಾಗಿದೆ. ಇದರ ಎಲ್ಲಾ ಭಾಗಗಳಿಗೂ ಔಷಧಿ ಗುಣಗಳಿವೆ.

ಎಲೆಗಳು: ಬಿಲ್ವದ ಎಲೆಗಳನ್ನು ಉರಿಯೂತ, ಶೀತ, ಕೆಮ್ಮು, ಅಸ್ತಮಾ, ಕಣ್ಣಿನ ನೋವು ಮತ್ತು ಹೊಟ್ಟೆನೋವಿಗೆ ಬಳಸುತ್ತಾರೆ. ಎಲೆರಸವನ್ನು ಎಣ್ಣೆಯಾಗಿ ತಯಾರಿಸಿ ತಲೆಗೆ ಹಚ್ಚಿದರೆ ಶೀತ ಮತ್ತು ಕೆಮ್ಮು ತಡೆಯಬಹುದು. ಇದು ಹೃದಯದ ದುರ್ಬಲತೆ, ಮಧುಮೇಹ ಮತ್ತು ಗಾಯಗಳಿಗೆ ಸಹ ಉಪಯುಕ್ತ.

ಬೇರು: ಬಿಲ್ವದ ಬೇರು ಎದೆ ನೋವು, ಜ್ವರ, ಗ್ಯಾಸ್ಟ್ರಿಕ್ ಮತ್ತು ರೆಹ್ಯುಮಾಟಿಸಂಗೆ ಉಪಯೋಗಿಸುತ್ತಾರೆ. ಇದರಿಂದ ರಕ್ತದ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ನಾಯಿಯ ಕಚ್ಚು ಮತ್ತು ಹೊಟ್ಟೆ ತೊಂದರೆಗಳಿಗೂ ಬಳಸುತ್ತಾರೆ.

ಹೂಗಳು: ಬಿಲ್ವದ ಹೂಗಳು ಅಜೀರ್ಣ, ಅತಿಸಾರ, ಮಧುಮೇಹ, ಎಪಿಲೆಪ್ಸಿ ಹಾಗೂ ಉಸಿರಾಟದ ಸಮಸ್ಯೆಗಳಿಗೆ ಔಷಧಿ ಆಗಿವೆ.

ಹಣ್ಣು: ಹಣ್ಣನ್ನು ಅತಿಸಾರ, ಅಜೀರ್ಣ, ಹೊಟ್ಟೆನೋವು ಮತ್ತು ಪೈಲ್ಸ್‌ಗೆ ಬಳಸುತ್ತಾರೆ.

ಪಕ್ವ ಹಣ್ಣು: ಜೀರ್ಣ ಕ್ರಿಯೆ ಸುಧಾರಿಸುತ್ತದೆ, ಶೀತ, ಪೈಲ್ಸ್ ಮತ್ತು ಅತಿಸಾರ ತಡೆಯುತ್ತದೆ.

ಕಚ್ಚಾ ಹಣ್ಣು: ಹೊಟ್ಟೆನೋವು, ಅತಿಸಾರ ಮತ್ತು ಅಂತರ ಹುಳು ನಿವಾರಣೆಗೆ ಉಪಯುಕ್ತ.

ಬೀಜ: ಬಿಲ್ವದ ಬೀಜಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ವಿರೋಧಿ ಗುಣಗಳಿವೆ. ಇದು ಹಲವಾರು ರೋಗಾಣುಗಳ ಬೆಳವಣಿಗೆ ತಡೆಯುತ್ತದೆ.

ಒಟ್ಟಿನಲ್ಲಿ, ಬಿಲ್ವ ಶೀತ, ಕೆಮ್ಮು, ಅಜೀರ್ಣ, ಅತಿಸಾರ, ಮಧುಮೇಹ ಮತ್ತು ಹೃದಯದ ಕಾಯಿಲೆಗಳಂತಹ ಹಲವು ರೋಗಗಳಿಗೆ ಸಹಜ ಔಷಧಿಯಾಗಿದೆ.

* ಲೇಖನದಲ್ಲಿನ ಕಕ್ಕೆ ಮರದ ಔಷಧೀಯ ಗುಣಗಳ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನಾ ಲೇಖನಗಳಿಂದ ಕಲೆಹಾಕಲಾಗಿದೆ.

ಲೇಖನ: ಕೆ. ಪಿ. ಶಂಕರಪ್ಪ , ಶಾಂತಮ್ಮ ಎಸ್.
       
ಬೆಂಗಳೂರು
ನಗರ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.