ವನಸುಮ – ಬೇಲದಮರ

ವನಸುಮ – ಬೇಲದಮರ

    © ಡಾ. ಅಶ್ವಥ ಕೆ. ಎನ್.

English Name: Wood Apple  

Scientific Name: Limonia acidissima

© ಡಾ. ಅಶ್ವಥ ಕೆ. ಎನ್.

ಕರಡಿಗಳಿಗೆ ಬಹಳ ಇಷ್ಟವಾದ ಹಣ್ಣುಗಳಲ್ಲಿ ಬೇಲದ ಹಣ್ಣು ಕೂಡ ಒಂದು. ಆನೆಗಳೂ ಕೂಡ ಬೇಲದ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತವೆ. ಬೇಲದ ಮರಗಳು ಸಾಮಾನ್ಯವಾಗಿ ಎಲೆ ಉದುರುವ ಕುರುಚಲು ಕಾಡುಗಳಲ್ಲಿ, ಶುಷ್ಕ ವಾತಾವರಣ ಇರುವ ಒಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇದು ಬಹಳ ನಿಧಾನವಾಗಿ ಬೆಳೆಯುವ ಮರ.  ಇದು ಸುಮಾರು 15 ರಿಂದ 25 ಅಡಿ ಎತ್ತರ ಬೆಳೆಯುತ್ತದೆ. ಬೇಲದ ಮರಗಳನ್ನು ಭೌಗೋಳಿಕವಾಗಿ ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಕಾಣಬಹುದು. ಈ ಮರದ ಎಲೆಗಳು ಸಾಮಾನ್ಯವಾಗಿ 5 ಸೆಂ. ಮೀ. ಉದ್ದ, 3 ಸೆಂ. ಮೀ. ಅಗಲಕ್ಕಿರುತ್ತವೆ. ಪ್ರತಿ ಗುಚ್ಚದಲ್ಲೂ 3-5 ಎಲೆಗಳ ಸರಳ ರಚನೆ ಇರುತ್ತದೆ. ಸಾಮಾನ್ಯವಾಗಿ ಇದರ ಎಲೆಗಳು ಚರ್ಮದಂತೆ ದಪ್ಪಗೆ ಇರುತ್ತವೆ. ಚಿಗುರು ಎಲೆಗಳು ತಿಳಿ ಹಸಿರು ಬಣ್ಣದಲ್ಲಿದ್ದು ಪ್ರೌಢಾವಸ್ಥೆಗೆ ಬಂದಾಗ ಗಾಢ ಹಸಿರು ಬಣ್ಣಕ್ಕೆ ತಿರುಗುತ್ತವೆ.  ಎಲೆಗಳನ್ನು ಕಿವುಚಿ ಮೂಸಿದರೆ ನಿಂಬೆಯಂತಹ ವಾಸನೆ ಬರುತ್ತದೆ. ಈ ಮರವು ಕಿತ್ತಳೆಯ ಪ್ರಭೇದಕ್ಕೆ ಸೇರಿದೆ. ಬೇಲದ ಮರವು ಶ್ವೇತ ವರ್ಣದ, ಐದು ದಳಗಳಿಂದ ಕೂಡಿದ ಪರಿಮಳಯುಕ್ತ ಹೂಗಳನ್ನು ಬಿಡುತ್ತದೆ. ಇವು ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹೂ ಬಿಡಲು ಪ್ರಾರಂಭಿಸಿದರೆ, ಮೇ ಮತ್ತು ಜೂನ್ ತಿಂಗಳವರೆಗೂ ಹೂಗಳ ಗುಚ್ಚಗಳನ್ನು ಮರದಲ್ಲಿ ಕಾಣಬಹುದು. ಈ ಮರವು, 5 ಸೆಂ. ಮೀ. – 12 ಸೆಂ. ಮೀ. ವ್ಯಾಸವುಳ್ಳ ಗೋಳಾಕಾರದ ಕಾಯಿಗಳನ್ನು ಬಿಡುತ್ತವೆ ಹಾಗು ಅಕ್ಟೋಬರ್ ನಿಂದ ಜನವರಿ ತಿಂಗಳವರೆಗೂ ಹಣ್ಣುಗಳು ದೊರೆಯುತ್ತವೆ. ಈ ಕಾಯಿಗಳ ಹೊರಚಿಪ್ಪು ತೆಂಗಿನ ಚಿಪ್ಪಿನಂತಹ ಗಟ್ಟಿಯಾದ ಚಿಪ್ಪಿನಿಂದ ಮಾಡಲ್ಪಟ್ಟಿರುತ್ತದೆ. ಹಣ್ಣಿನ ಹೊರ ಚಿಪ್ಪು ತಿನ್ನಲು ಯೋಗ್ಯವಲ್ಲ. ಬೇಲದ ಹಣ್ಣು ನಾರು ಮಿಶ್ರಿತ ತಿರುಳನ್ನು ಹೊಂದಿರುತ್ತದೆ ಹಾಗೂ ಸ್ವಲ್ಪ ಹುಳಿ, ಸ್ವಲ್ಪ ಸಿಹಿ-ಒಗರನ್ನು ಹೊಂದಿರುತ್ತದೆ.  ಇದರ ಹಣ್ಣುಗಳ ಒಳ ಭಾಗದಲ್ಲಿ ಜಿಗುಟಾದ ಕಂದು ತಿರುಳಿನ ನಡುವೆ ಬಿಳಿ ಬೀಜಗಳು ಇರುತ್ತವೆ. ಮಾಗಿದ ಹಣ್ಣುಗಳು ಸುವಾಸನೆ ಬೀರುತ್ತವೆ. ಇದರಿಂದ ಬೇಲದ ಕಾಯಿ ಹಣ್ಣಾಗಿರುವುದನ್ನು ಗುರುತಿಸಬಹುದು. ಹಣ್ಣಾದ ಬೇಲದ ತೊಟ್ಟು ಕಳಚಿ ಮರದಿಂದ ಕೆಳಗೆ ಬೀಳುತ್ತದೆ ಬೇಲದ ಹಣ್ಣಿನ ತಿರುಳನ್ನು ಹಾಗೆಯೇ ತಿನ್ನಬಹುದು. ಬೇಲದ ಹಣ್ಣು ಮತ್ತು ಬೆಲ್ಲ ಬೆರಸಿ ಪಾನಕ ಮಾಡುತ್ತಾರೆ. ಬೇಲದ ಹಣ್ಣಿನ ತಿರುಳನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರಸಿ ತಿನ್ನಬಹುದು. ಇದೊಂದು ಔಷಧೀಯ ಮರವೂ ಹೌದು. ಈ ಮರ ಕೀಟಗಳಿಗೆ, ಜೇನು ಮತ್ತು ಚಿಟ್ಟೆಗಳಿಗೆ ಹೂಗಳ ಮೂಲಕ ಮಕರಂದದ ಔತಣವನ್ನು ಉಣಿಸುತ್ತದೆ. ಜಿಂಕೆಗಳು, ಕಾಡುಹಂದಿ, ಕೋತಿ, ಕರಡಿ, ಆನೆಗಳಿಗೆ ಹಣ್ಣುಗಳನ್ನು ನೀಡಿ ಜೀವ ಸಂಕುಲಕ್ಕೆ ಉಪಯುಕ್ತ ಮರವಾಗಿದೆ.

ಔಷಧೀಯ ಉಪಯೋಗಗಳು:

    © ಮಧುಸೂದನ್

ಬೇಲದ ಮರದ ಎಲೆಗಳು ಜ್ವರ ಚಿಕಿತ್ಸೆಯಲ್ಲಿ, ಹೊಟ್ಟೆ ನೋವನ್ನು ಕಡಿಮೆ ಮಾಡಲು ಮತ್ತು ಮೂತ್ರ ವಿಸರ್ಜನೆ ತೊಂದರೆಗಳನ್ನು ನಿವಾರಿಸಲು ಬಹಳ ಉಪಯುಕ್ತವಾಗಿವೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬೇಲದ ಹಣ್ಣುಗಳನ್ನು ಅತಿಸಾರಕ್ಕೆ ಅತ್ಯುತ್ತಮ ಪರಿಹಾರವೆಂದು ಪರಿಗಣಿಸಲಾಗುತ್ತದೆ. ಇವು ಜೀರ್ಣಕ್ರಿಯೆಗೆ ಸಹಾಯ ಮಾಡುವುದರೊಂದಿಗೆ ಹೊಟ್ಟೆಯ ಕಿರಿಕಿರಿಯನ್ನು ಕೂಡ ಶಮನಗೊಳಿಸುತ್ತವೆ. ಅರ್ಧ ಮಾಗಿದ ಹಣ್ಣುಗಳು ಜೀರ್ಣಕಾರಿಯಾಗಿದ್ದು ಅತಿಸಾರ ವಿರೋಧಿ ಗುಣಗಳನ್ನು ಹೊಂದಿರುತ್ತವೆ, ಮಾಗಿದ ಹಣ್ಣುಗಳು ಕಚ್ಚಾ ಹಣ್ಣುಗಳಿಗಿಂತ ಹೆಚ್ಚು ಉಪಯುಕ್ತವಾಗಿದ್ದು ಉಪ-ತೀವ್ರ ಮತ್ತು ದೀರ್ಘಕಾಲದ ಭೇದಿಯನ್ನು ತಡೆಗಟ್ಟಲು ಬಳಸಲಾಗುತ್ತದೆ. ಹಣ್ಣಿನ ತಿರುಳು ಕರುಳಿನ ಲೋಳೆಯ ಪೊರೆಗೆ ಉತ್ತೇಜಕವಾಗಿ ಕಾರ್ಯನಿರ್ವಹಿಸಿ ಅತಿಸಾರವನ್ನು ನಿಲ್ಲಿಸಲು ಸಹಾಯಕವಾಗುತ್ತದೆ.

* ಲೇಖನದಲ್ಲಿನ ಕಕ್ಕೆ ಮರದ ಔಷಧೀಯ ಗುಣಗಳ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನಾ ಲೇಖನಗಳಿಂದ ಕಲೆಹಾಕಲಾಗಿದೆ.

ಲೇಖನ: ಕೆ. ಪಿ. ಶಂಕರಪ್ಪ , ಶಾಂತಮ್ಮ ಎಸ್.
         
ಡಬ್ಲ್ಯೂ. ಸಿ. ಜಿ. ಬೆಂಗಳೂರು
ನಗರ ಜಿಲ್ಲೆ

Spread the love
error: Content is protected.