ವನಸುಮ – ಮುತ್ತುಗ
© ಭಗವತಿ ಬಿ ಎಂ
English Name: Flame of the forest
Scientific Name: Butea monosperma
1980 – 90 ರ ಮದುವೆಗಳಲ್ಲಿ ನೀವು ಊಟಮಾಡಿದ್ದರೆ, ಇಸ್ತ್ರಿ ಎಲೆಗಳಲ್ಲಿ ಊಟ ಮಾಡಿರುತ್ತೀರಿ. ಈ ಎಲೆಗಳನ್ನು ತಯಾರಿಸಲು ಮುತ್ತುಗ ಮರದ ಎಲೆಗಳನ್ನು ಬಳಸುತ್ತಿದ್ದರು. ಅಷ್ಟು ಜನೋಪಯೋಗಿ ಯಾಗಿತ್ತು ಈ ಮರ.

ಮುತ್ತುಗ ಮರವು ಎಲೆ ಉದುರುವ ಕಾಡುಗಳಲ್ಲಿ ಬೆಳೆಯುವ ಮರವಾಗಿದೆ. ಈ ಮರ ಸುಮಾರು 10 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ನೀರು ಕಡಿಮೆ ಇದ್ದರೂ ಬೆಳೆಯುವ ಇದು ಫೆಬ್ರವರಿಯಿಂದ ಏಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತದೆ. ಮುತ್ತುಗವು ಭೌಗೋಳಿಕವಾಗಿ ಭಾರತ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ಕಾಣಿಸುತ್ತದೆ. ಸಮುದ್ರ ಮಟ್ಟದಿಂದ 2200 ಮೀಟರ್ ಎತ್ತರದವರೆಗೂ ಕಾಣಸಿಗುತ್ತದೆ.
ಬೂದು ಕಂದು ಬಣ್ಣದ ತೊಗಟೆ ಹೊಂದಿರುವ ಇದು ತೊಗಟೆಯಲ್ಲಿ ಉದ್ದನೆಯ ಹಾಗು ಅಡ್ಡನೆಯ ಸಣ್ಣ ಬಿರುಕುಗಳನ್ನು ಹೊಂದಿರುತ್ತದೆ. ಚಿಗುರುಗಳು ತುಸು ಹೊಳೆಯುವ ಕಂದು ಬಣ್ಣವಿರುತ್ತವೆ. ಇದರ ಹೂವಿನ ಮಕರಂದವನ್ನು ಕಾಡಿನ ಸಕಲ ಪಕ್ಷಿಗಳು ಬಂದು ಆಸ್ವಾಧಿಸುತ್ತವೆ. ಇದರ ಪ್ರತಿ ಕಾಯಿಯಲ್ಲೂ ಒಂದೇ ಒಂದು ಬೀಜವಿರುತ್ತದೆ, ಗಾಳಿಯ ಸಹಾಯದಿಂದ ಬೀಜಪ್ರಸಾರ ನಡೆಸುತ್ತದೆ. ಬೆಟ್ಟದ ತಪ್ಪಲು, ಬಂಡೆಯ ಅಂಚು, ಬಯಲು ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದರ ಬೀಜ ಬೇಗ ಮೊಳಕೆ ಹೊಡೆಯುವುದಿಲ್ಲ. ತೊಗಟೆಯನ್ನು ಕತ್ತರಿಸಿದರೆ, ಕೆಂಪು ಬಣ್ಣದ ದ್ರವರೂಪದ ಗಮ್ ಹೊರಸೂಸುತ್ತದೆ. ಹೂ ಬಿಡುವ ಕಾಲದಲ್ಲಂತೂ ಎಲೆಗಳು ಕಡಿಮೆ ಇದ್ದು ಮರ ಸಂಪೂರ್ಣ ಕೆಂಪು ಕಿತ್ತಳೆ ಬಣ್ಣದಿಂದ ತುಂಬಿ ಬೆಂಕಿಯಂತೆ ಹೊಳೆಯುತ್ತದೆ. ದೂರದಿಂದ ನೋಡಿದರೆ ಕಾಡಿಗೆ ಬೆಂಕಿ ಬಿದ್ದಿದೆ ಏನೋ ಎಂಬುವಂತೆ ಭಾಸವಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಫ್ಲೇಮ್ ಆಫ್ ದಿ ಫಾರೆಸ್ಟ್ (Flame of the forest) ಎಂದು ಸಂಬೋಧಿಸುತ್ತಾರೆ. ಈ ಮರದ ಎಲೆಗಳನ್ನು ಜಾನುವಾರುಗಳು ಅದೇಕೋ ತಿನ್ನುವುದೇ ಇಲ್ಲ. ಇದರ ಬೀಜ ಮೊಳಕೆ ಹೊಡೆದ ಮೇಲೆ ಭೂಮಿಯ ಆಳಕ್ಕೆ ಬೇರು ಬಿಟ್ಟು ಆಗಸದೆಡೆಗೆ ತನ್ನ 3 ಪತ್ರದ ದೊಡ್ಡ ಎಲೆಗಳನ್ನು ಬಿಡಲಾರಂಭಿಸುತ್ತದೆ. ಈ ಸಸ್ಯವನ್ನು ನರ್ಸರಿಗಳಲ್ಲಿ ಬೆಳೆಸುವುದು ಬಹಳ ಕಷ್ಟದ ಕೆಲಸ. ಇಂದಿಗೂ ಗಂದಿಗೆ ಅಂಗಡಿಗಳಲ್ಲಿ ಶಾಸ್ತ್ರಕ್ಕೆ ಬಳಸಲು ಪತ್ರೊಳಿ ಹೆಸರಿನಲ್ಲಿ ಬಿಕರಿಯಾಗುವ ಮುತ್ತುಗದ ಎಲೆಗಳನ್ನು ಕಾಣಬಹುದು. ಈ ಹೊಸ ಯುಗದಲ್ಲಿ ಪ್ಲಾಸ್ಟಿಕ್ ಪೇಪರ್ ಎಲೆ ಬಳಕೆಗೆ ಬಂದಾಗಿನಿಂದ ನಿಸರ್ಗ ಸ್ನೇಹಿಯಾದ ಮುತ್ತುಗದ ಇಸ್ತ್ರಿ ಎಲೆಯ ಬಳಕೆ ಕಡಿಮೆಯಾಗಿದೆ. ಹಂಚಿ ಕಡ್ಡಿಯನ್ನು ಸೀಳಿ ಎಲೆಗೆ ಎಲೆ ಜೋಡಿಸಿ ಎಣೆದು ಇಸ್ತ್ರಿ ಎಲೆ ತಯಾರಿಸುವ ಕಲೆಯೇ ಇಂದು ಕಣ್ಮರೆಯಾಗಿದೆ. ಗುಲಾಬಿ ಕಬ್ಬಕ್ಕಿ (ರೋಸಿ ಸ್ಟಾರ್ಲಿಂಗ್) ಅಂತಹ ಪಕ್ಷಿಗಳಿಗೆ ಕಡು ಬೇಸಿಗೆಯಲ್ಲೂ ರಸದೌತಣವನ್ನು ನೀಡುವ ಈ ಮುತ್ತುಗ ದೇವ ಮರವು ಹೌದು.
ಮುತ್ತುಗ ಮರದ ಔಷಧೀಯ ಬಳಕೆಗಳು
ಮುತ್ತುಗ ಮರವನ್ನು ಔಷಧವಾಗಿ ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮಲಬದ್ಧತೆ, ಮೂಲವ್ಯಾಧಿ, ಮಧುಮೇಹ ಮತ್ತು ಗಂಟಲು ಕಟ್ಟಿಕೊಂಡಿರುವ ಸಮಸ್ಯೆಗಳ ಚಿಕಿತ್ಸೆಗೆ ಇದರ ಉಪಯೋಗವನ್ನು ಉಲ್ಲೇಖಿಸಲಾಗಿದೆ. ಅತಿಸಾರ, ಭೇದಿ, ಹುಣ್ಣುಗಳು, ಮೂಗಿನಲ್ಲಿ ಪಾಲಿಪಸ್ ಮತ್ತು ಸಾಂಪ್ರದಾಯಿಕ ಹಾವು ಕಡಿತದ ಚಿಕಿತ್ಸೆಯಲ್ಲಿ ಇದರ ತೊಗಟೆಯ ಬಳಕೆ ವರದಿಯಾಗಿದೆ. ದುಂಡಾಣು ಹುಳುಗಳನ್ನು ನಿವಾರಿಸಲು ಮುತ್ತುಗ ಬೀಜಗಳನ್ನು ಉಪಯೋಗಿಸಬಹುದು ಎಂದು ದಾಖಲಾಗಿದೆ.
ನೇಪಾಳದ ಚೆಪಾಂಗ್ ಸಮುದಾಯವು ಇದರ ಹೂವುಗಳನ್ನು ಅತಿಸಾರ ಮತ್ತು ಭೇದಿಯ ಚಿಕಿತ್ಸೆಯಲ್ಲಿ ಆಂಥೆಲ್ಮಿಂಟಿಕ್ ಆಗಿ ಬಳಸುತ್ತಾರೆ. ಹೂವಿನ ರಸ ಕಣ್ಣಿನ ಕಾಯಿಲೆಗಳಿಗೆ ಸಹಾಯಕವೆಂದು ತಿಳಿದುಬಂದಿದೆ. ಅಲ್ಲದೆ, ಇದರ ಎಲೆಗಳು ಉರಿಯೂತ, ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಪ್ರಬಲ ಔಷಧೀಯ ಗುಣಗಳನ್ನು ಹೊಂದಿವೆ.
ಒಟ್ಟಾರೆ, ಮುತ್ತುಗ ಗಿಡದ ವಿವಿಧ ಭಾಗಗಳು—ಹೂವು, ಎಲೆ, ಬೀಜ ಮತ್ತು ತೊಗಟೆ—ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ರೋಗಗಳ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದು ಪ್ರಾಚೀನ ಕಾಲದಿಂದಲೂ ಜನಪದ ವೈದ್ಯಕೀಯದಲ್ಲಿ ನಂಬಿಕೆಗೆ ಪಾತ್ರವಾಗಿದ್ದು, ಆಧುನಿಕ ಸಂಶೋಧನೆಗಳಿಗೆ ಸಹ ಪೂರಕವಾಗಿರುವ ಸಸ್ಯವೆಂದು ಪರಿಗಣಿಸಬಹುದು*.
* ಲೇಖನದಲ್ಲಿನ ಕಕ್ಕೆ ಮರದ ಔಷಧೀಯ ಗುಣಗಳ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನಾ ಲೇಖನಗಳಿಂದ ಕಲೆಹಾಕಲಾಗಿದೆ.

ಲೇಖನ: ಕೆ. ಪಿ. ಶಂಕರಪ್ಪ , ಶಾಂತಮ್ಮ ಎಸ್.
ಡಬ್ಲ್ಯೂ. ಸಿ. ಜಿ. ಬೆಂಗಳೂರು ನಗರ ಜಿಲ್ಲೆ

ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.

