ಕಪ್ಪೆಗಳ ಜೀವನಕ್ರಮ
© ಡಾ. ಅಶ್ವಥ ಕೆ. ಎನ್.
ವನ್ಯಜೀವಿಗಳ ಅಪರೂಪದ ಜೀವನ ಶೈಲಿಯ ದೃಶ್ಯಗಳು ಅನಾವರಣಗೊಳ್ಳುವುದು ಹೆಚ್ಚಾಗಿ ರಾತ್ರಿಯಲ್ಲಿ. ಮುಂಗಾರಿನ ಋತುಮಾನದಲ್ಲಿ ಅದು ಇನ್ನೂ ಹೆಚ್ಚಾಗಿರುತ್ತದೆ. ಸತತವಾಗಿ ಸುರಿಯುವ ಮಳೆ, ಹೆಣ್ಣಿಗಾಗಿ ಕೂಗುತ್ತಿರುವ ಗಂಡು ಕಪ್ಪೆಗಳ ಕೂಗು, ಎಂದೂ ಕಣ್ಣಿಗೆ ಕಾಣದ ಅಪರೂಪದ ಉರಗಗಳು, ಸಿಹಿ ನೀರಿನ ಏಡಿಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲೆ ಎಂಬುದೇ ಇರುವುದಿಲ್ಲ.
ಕಾಡು ಒಂದು ಅದ್ಭುತ ಗ್ರಂಥಾಲಯ. ಇಲ್ಲಿರುವ ಪ್ರತಿಯೊಂದು ಜೀವಿಯೂ ಸಹ ಒಂದೊಂದು ಅದ್ಭುತ ಗ್ರಂಥಗಳು. ಕಾಡಿನಲ್ಲಿ ಕುಳಿತು ಸೂಕ್ಷ್ಮವಾಗಿ ಇವುಗಳ ಪುಟಗಳನ್ನು ತಿರುವುತ್ತಾ ಹೋದರೆ, ಕೊನೆಯೆಂಬುದು ಮರೀಚಿಕೆಯಾಗುತ್ತದೆ. ಪ್ರತಿಯೊಂದು ಜೀವಿಯ ಅದ್ಭುತ ಜೀವನಕ್ರಮವು ಕಾಡಿನಿಂದಲೇ ಪ್ರಾರಂಭವಾಗುತ್ತದೆ
ಈಗ ನಾನು ಹೇಳ ಹೊರಟಿರುವುದು ಜೀವ ಜಗತ್ತಿನಲ್ಲಿ ಅದ್ಭುತ ಜೀವಿ ಎಂದೇ ಗುರುತಿಸಿಕೊಂಡಿರುವ ಕಪ್ಪೆಗಳ ಬಗ್ಗೆ. ಕಪ್ಪೆಯನ್ನು ಮಂಡೂಕ ಎಂದು ಕೂಡ ಕರೆಯಬಹುದು. ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು ಇವುಗಳ ಚಟುವಟಿಕೆಗಳು ಸ್ವಲ್ಪ ಹೆಚ್ಚಾಗಿರುತ್ತದೆ. ಕೌತುಕ ಎಂಬುದು ಜೀವ ಜಗತ್ತಿನಲ್ಲಿ ಅದರಲ್ಲೂ ಕಪ್ಪೆಗಳಲ್ಲಿ ಅವಲೋಕಿಸುವುದು ಅತ್ಯಂತ ಸೋಜಿಗವಾಗಿ ಕಂಡುಬರುತ್ತದೆ. ಕಪ್ಪೆಗಳು ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಏಕೆ ಹೆಚ್ಚಾಗಿ ನಮ್ಮ ಕಣ್ಣಿಗೆ ಕಾಣಸಿಗುತ್ತವೆ? ಮಳೆಗಾಲದಲ್ಲಿಯೇ ಏಕೆ ಹೆಚ್ಚಾಗಿ ಕೂಗುತ್ತವೆ? ಮಳೆಗಾಲಕ್ಕಿಂತ ಮೊದಲು ಇವು ಎಲ್ಲಿರುತ್ತವೆ? ಎಂಬ ಇಂತಹ ಸಾವಿರಾರು ನಿಗೂಢ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಇಂತಹ ಹಲವಾರು ಪ್ರಶ್ನೆಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ, ಇನ್ನೂ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾದ ಅನಿವಾರ್ಯತೆಯಿದೆ.
ಕಪ್ಪೆಗಳು ಮಳೆಗಾಲದಲ್ಲಿ ಮಾತ್ರವಲ್ಲದೆ ಎಲ್ಲಾ ಋತುಗಳಲ್ಲಿಯೂ ಚಟುವಟಿಕೆಯಿಂದ ಕೂಡಿರುತ್ತವೆ. ಆದರೆ ಮಳೆಗಾಲದಲ್ಲಿ ಸ್ವಲ್ಪ ಹೆಚ್ಚಾಗಿ ಕೂಗುವುದರಿಂದ ಇವುಗಳ ಚಟುವಟಿಕೆ ನಮಗೆ ಕಾಣಿಸುತ್ತದೆ. ಸಾಮಾನ್ಯವಾಗಿ ಕಪ್ಪೆಗಳು ಮರದ ಮೇಲೆ, ಸಣ್ಣ ಸಣ್ಣ ನೀರಿನ ಹೊಂಡಗಳಲ್ಲಿ, ಹಳ್ಳಗಳಲ್ಲಿ, ಜೌಗು ಪ್ರದೇಶಗಳಲ್ಲಿ, ಗದ್ದೆಗಳಲ್ಲಿ, ನೀರಿರುವ ಜನವಸತಿ ಪ್ರದೇಶದ ಹತ್ತಿರ ಕಾಣಸಿಗುವುದು ಸಾಮಾನ್ಯ. ಕಪ್ಪೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಮಳೆಗಾಲದಲ್ಲಿಯೇ ನಡೆಯುತ್ತದೆ. ತೇವಾಂಶದಿಂದ ಕೂಡಿದ ವಾತಾವರಣ ಸಂತಾನೋತ್ಪತ್ತಿಗೆ ಹಾಗೂ ಮೊಟ್ಟೆಗಳನ್ನು ಹಾಕಲು ಸೂಕ್ತವಾಗಿರುತ್ತದೆ. ಇನ್ನು ಕೆಲವು ಕಪ್ಪೆಗಳಾದ “Dancing frog” ನಂತಹ ಕಪ್ಪೆಗಳು ಮಳೆಗಾಲದ ನಂತರದಲ್ಲಿಯೂ ನೀರು ಹರಿಯುವ ಝರಿಗಳಲ್ಲಿ, ಹಳ್ಳಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.



ಸಂತಾನೋತ್ಪತ್ತಿಯ ಮೊದಲ ಹಂತದಲ್ಲಿ ಗಂಡು ಕಪ್ಪೆಗಳು ಹೆಣ್ಣನ್ನು ಆಕರ್ಷಿಸುವುದಕ್ಕಾಗಿ ತಮ್ಮ ಗಂಟಲಿನ ಗಾಳಿ ಚೀಲದ ಮುಖಾಂತರ ವಿವಿಧ ತೆರನಾಗಿ ಕೂಗುತ್ತವೆ. ಈ ಗಾಳಿ ಚೀಲಕ್ಕೆ “Vocal sac” ಎಂದು ಕರೆಯುತ್ತಾರೆ. ಒಂದು ಹೆಣ್ಣಿಗಾಗಿ ಹಲವಾರು ಗಂಡು ಕಪ್ಪೆಗಳು ಕೂಗುತ್ತವೆ. ಕೆಲವು ಸಂದರ್ಭದಲ್ಲಿ ಹೆಣ್ಣಿಗಾಗಿ ಗಂಡುಗಳ ಮಧ್ಯೆ ಪೈಪೋಟಿಯೇ ನಡೆಯುತ್ತದೆ. ಅದರಲ್ಲಿ ಬಲಿಷ್ಠವಾದ, ತನಗೆ ಇಷ್ಟವಾದ ಗಂಡು ಕಪ್ಪೆಯನ್ನು ಹೆಣ್ಣು ವರಿಸುತ್ತದೆ. ಇದೊಂದು ತರಹದ ರಾಜ ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಸ್ವಯಂವರ ಎನ್ನಬಹುದು. ಮಿಲನಕ್ಕೆ ಒಪ್ಪಿಕೊಂಡ ಹೆಣ್ಣು ತಾನು ಆಯ್ಕೆ ಮಾಡಿಕೊಂಡ ಗಂಡಿನೊಂದಿಗೆ ಬಾಹ್ಯ ಮಿಲನ ಕ್ರಿಯೆಯಲ್ಲಿ ಭಾಗವಹಿಸುತ್ತದೆ. ಹೆಣ್ಣು ಮತ್ತು ಗಂಡು ಈ ಬಾಹ್ಯ ಕೂಡುವಿಕೆಯ ಕ್ರಿಯೆಯನ್ನು “Amplexus” ಎಂದು ಕರೆಯುತ್ತಾರೆ.

ಹೆಣ್ಣು ಕಪ್ಪೆಯು ತೇವಾಂಶವಿರುವ ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಂಡು ಮೊಟ್ಟೆಗಳನ್ನಿಡುತ್ತದೆ. ನಾನು ವೈಯಕ್ತಿಕವಾಗಿ ನೋಡಿದಂತೆ ಹೆಣ್ಣು ಹಾಕುವ ಮೊಟ್ಟೆಗಳು ಸಾಮಾನ್ಯವಾಗಿ 3 ರಿಂದ 1000 ವರೆಗೆ ಇರುತ್ತವೆ. ಹೆಣ್ಣು ಹಾಕಿದ ಮೊಟ್ಟೆಗಳು ಪಾರದರ್ಶಕ ಮೊಟ್ಟೆಗಳಾಗಿರುತ್ತವೆ. ಮೊಟ್ಟೆಗಳು ನೀರಿಗೆ ಬಿದ್ದ ತಕ್ಷಣ ಅವುಗಳಲ್ಲಿ ರೂಪ ಪರಿವರ್ತನೆ ಪ್ರಾರಂಭವಾಗಿಬಿಡುತ್ತದೆ. ಈ ಹಂತವನ್ನು Embryo stage ಎಂದು ಕರೆಯುತ್ತಾರೆ. ಕೆಲವೊಂದು ದಿನಗಳ ನಂತರ ಮೊಟ್ಟೆಯ ಪಾರದರ್ಶಕ ಪೊರೆ ಕಳಚಿ ಬಾಲವಿರುವ ಗೊದಮೊಟ್ಟೆ ಹೊರಬರುತ್ತದೆ. ಆದರೆ “ಪೊದೆ ಕಪ್ಪೆ (Bush frog)” ಯಂತಹ ಕಪ್ಪೆಗಳಲ್ಲಿ ಗೊದಮೊಟ್ಟೆ ಹಂತ ಮೊಟ್ಟೆಗಳ ಒಳಗಡೆಯೇ ಮುಗಿದು ಹೋಗುತ್ತದೆ. ಕಪ್ಪೆಗಳ ಗೊದಮೊಟ್ಟೆ ಹಂತದಲ್ಲಿ ಇವುಗಳ ತಲೆಯ ಎಡ ಮತ್ತು ಬಲಭಾಗದಲ್ಲಿ Gill ಗಳು ಕಂಡುಬರುತ್ತವೆ. ನಂತರ ಇವುಗಳು ಅದೃಶ್ಯವಾಗುತ್ತವೆ. ಗೊದಮೊಟ್ಟೆ ಹಂತದಲ್ಲಿ ಇವುಗಳು Spiracle ಮೂಲಕ ಉಸಿರಾಡುತ್ತವೆ. ಈ ಬಾಲ ಸಹಿತ ಗೊದಮೊಟ್ಟೆ ಗಳು ನೀರಿನಲ್ಲಿ ಈಜುತ್ತ ಆಹಾರಕ್ಕಾಗಿ ಕೆಲವೊಂದು ಪಾಚಿಗಳನ್ನು ಸೇವನೆ ಮಾಡುತ್ತವೆ. ಕೆಲವು ದಿನಗಳ ನಂತರ ಇವುಗಳಿಗೆ ಹಿಂಗಾಲುಗಳು ಮೂಡುತ್ತವೆ, ಮತ್ತೆ ಸ್ವಲ್ಪ ದಿನಗಳ ನಂತರ ಮುಂಗೈಗಳು ಬರುತ್ತವೆ. ಅವುಗಳ ಕಾಲು ಮತ್ತು ಕೈಗಳು ಬೆಳವಣಿಗೆಯಾದ ನಂತರ ಅದರ ಬಾಲವು ದೇಹದ ಒಳಭಾಗದಲ್ಲಿ ಸರಿದುಕೊಳ್ಳುತ್ತದೆ. ನಂತರ ಕಪ್ಪೆಯಾಗಿ ಬದಲಾವಣೆಯಾಗುತ್ತದೆ. ಇವು ನಿರ್ದಿಷ್ಟ ಆವಾಸಸ್ಥಾನದಲ್ಲಿ ವಾಸಿಸುತ್ತವೆ. ಆಹಾರಕ್ಕಾಗಿ ಸಣ್ಣ ಸಣ್ಣ ಕೀಟಗಳನ್ನು ಸೇವನೆ ಮಾಡುತ್ತಾ ಜೀವನ ಸಾಗಿಸುತ್ತವೆ.

ಕಪ್ಪೆಯು ಆಹಾರ ಸರಪಳಿಯ ಅತ್ಯಂತ ದೊಡ್ಡ ಕೊಂಡಿಯಾಗಿದೆ. ಪ್ರಕೃತಿಯಲ್ಲಿ ಒಂದು ಜೀವಿಯನ್ನು ಅವಲಂಬಿಸಿ ಇನ್ನೊಂದು ಜೀವಿ ಬದುಕುತ್ತದೆ. ಇದರಲ್ಲಿ ಯಾವುದೋ ಒಂದು ಕೊಂಡಿ ಕಳಚಿದರೂ ಜೀವನಚಕ್ರ ಅಲ್ಲೇ ನಿಂತು ಬಿಡುತ್ತದೆ ಆದ್ದರಿಂದ ಆಹಾರ ಸರಪಳಿಯ ದೊಡ್ಡ ಕೊಂಡಿಯಾಗಿರುವ ಕಪ್ಪೆಗಳನ್ನು ಸಂರಕ್ಷಿಸುವುದು ಅತ್ಯವಶ್ಯಕವಾಗಿದೆ.

ಜಾಗತಿಕ ತಾಪಮಾನ, ಪ್ರತಿಕೂಲ ಹವಾಮಾನ, ಆವಾಸಸ್ಥಾನದ ನಾಶ, ಅನಿಶ್ಚಿತ ಮತ್ತು ಅಕಾಲಿಕ ಮಳೆ, ಪ್ರಾಕೃತಿಕ ವಿಕೋಪಗಳು, ತನ್ನ ನಿಬಿಡತೆಯಿಂದ ದೂರ ಸರಿಯುತ್ತಿರುವ ಕಾಡುಗಳು ಇಂತಹ ಹಲವಾರು ಕ್ರಿಯೆಗಳಿಂದ ಈ ಅಪರೂಪದ ಜೀವಿಗಳ ಕೆಲವು ಪ್ರಭೇದಗಳು ಇಂದು ಅಳಿವಿನಂಚಿಗೆ ಬಂದು ನಿಂತಿವೆ. ಹುಲಿ, ಚಿರತೆಯಂತಹ ಮೇಲ್ಪಂಕ್ತಿಯಲ್ಲಿರುವ ಜೀವಿಗಳು ಮಾತ್ರ ನಮ್ಮ ಕಣ್ಣಿಗೆ ಕಾಣಿಸುತ್ತಿವೆ. ಇವುಗಳ ಮಧ್ಯದಲ್ಲಿ ಎಲ್ಲೋ ಈ ಪುಟ್ಟ ಜೀವಿಗಳು ನಮ್ಮ ದುಷ್ಕೃತ್ಯಗಳಿಂದ ಕಣ್ಮರೆಯಾಗುತ್ತಿವೆ.


ಲೇಖನ: ಬಸನಗೌಡ ಎನ್. ಬಗಲಿ
ಉತ್ತರ ಕನ್ನಡ ಜಿಲ್ಲೆ