ದೇಹದಲ್ಲಿನ ವಿದ್ಯುತ್ ವಿಚಾರ!
© Steve Gschmeissner_Science Photo Library_Getty ImagesChannel
ನನ್ನ ಪಾಡಿಗೆ ನಾನು ನಮ್ಮ ಶಾಲೆಯ ಲ್ಯಾಬ್ ಬಳಿಯ ಕಾರಿಡಾರಿನಲ್ಲಿ ನಡೆದು ಹೋಗುತ್ತಿದ್ದೆ. ಅದನ್ನು ನೋಡಿದ ಶಂಕ್ರಣ್ಣ ಕರೆದು, ‘ಜೈ… ಬಾ ಇಲ್ಲಿ, ಒಂದು ಹೊಸ ಪ್ರಯೋಗ ನೋಡಿದ್ದಿನಿ’ ಎಂದರು. ನಾನೂ ಕುತೂಹಲದಿಂದ ಹೌದಾ ಎಂದುಕೊಂಡು ಲ್ಯಾಬ್ ಒಳಗೆ ಹೋದೆ. ಎಲ್ಲವನ್ನು ರೆಡಿ ಇಟ್ಟಿದ್ದ ಶಂಕ್ರಣ್ಣ, ನಾನು ಬಂದ ತಕ್ಷಣ ನನ್ನನ್ನು ಒಂದು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂರಿಸಿದರು. ನಂತರ ಒಂದು ಟವೆಲ್ ನಿಂದ ಕುರ್ಚಿಯ ಹಿಂಭಾಗಕ್ಕೆ ಹೊಡೆಯತೊಡಗಿದರು. ‘ಅರೇ, ಇದೆಂಥಾ ಪ್ರಯೋಗ? ಸುಮ್ನೆ ಒಡೆಯಕೆ ಕರೆಸ್ದಾ?’ ಎಂದು ಕೇಳಿದೆ. ‘ಇಲ್ಲ ಲೋ, ನೀನು ನಿನ್ ಕೈ ಮುಂದೆ ಚಾಚಿ, ತೋರು ಬೆರಳು ಮುಂದೆ ಮಾಡು’ ಎಂದರು. ಈ ಹಿಂದೆ ಶಂಕ್ರಣ್ಣನ ಜೊತೆ ಕೆಲವು ಪ್ರಯೋಗಗಳು ಮಾಡಿದ್ದ ಅನುಭವ, ನನ್ನನ್ನು ಏನನ್ನೂ ಕೇಳದೆ ಕೈ ಮುಂದೆ ಮಾಡುವಂತೆ ಮಾಡಿತ್ತು. ಕೆಲವು ಕ್ಷಣಗಳು ಹೊಡೆದ ನಂತರ ಬಂದು ನನ್ನ ಬೆರಳ ತುದಿಯನ್ನು ಅವರು ಮುಟ್ಟಿದರು. ಏನೂ ನಡೆಯಲಿಲ್ಲ. ನನಗೆ ಪ್ರಶ್ನೆಗಳು ಮೂಡಿದವು. ಅದನ್ನು ಇನ್ನೇನು ಕೇಳುವಷ್ಟರಲ್ಲಿ “ಅಯ್ಯೋ ಕಾಲು ನೆಲದಿಂದ ಸ್ವಲ್ಪ ಮೇಲಕ್ಕೆತ್ತಿ ಹಿಡ್ಕೋ” ಎಂದು ಹೇಳಿ, ಮತ್ತೆ ಹಿಂದೆಯಿಂದ ಕುರ್ಚಿಗೆ ಹೊಡೆಯತೊಡಗಿದರು. ನನ್ನ ಪ್ರಶ್ನೆಗಳನ್ನು ನನ್ನಲ್ಲೇ ಇಟ್ಟುಕೊಂಡು ಅಣ್ಣನ ಪ್ರಯೋಗಕ್ಕೆ ಶರಣಾಗಿ ಅದೇನಾಗುತ್ತದೋ ನೋಡಿಯೇ ಬಿಡೋಣ ಎಂದು ಸುಮ್ಮನೆ ಕುಳಿತೆ. ಕೆಲವು ಕ್ಷಣಗಳ ನಂತರ ಮತ್ತೆ ಮುಂದೆ ಬಂದು ನನ್ನ ಬೆರಳಿನ ತುದಿಯನ್ನು ಮುಟ್ಟಲು ಬಂದರು. ಹತ್ತಿರ ಬಂದಂತೆ ಇನ್ನೇನು ನನ್ನ ಬೆರಳನ್ನು ಮುಟ್ಟಬೇಕು ಅಷ್ಟರಲ್ಲಿ ‘ಚಟ್’ ಎಂದು ಶಬ್ಧ ಹಾಗೂ ಬೆಳಕು! ಸಣ್ಣ ಪ್ರಮಾಣದ ವಿದ್ಯುತ್ ಉಂಟಾಗಿ ನನ್ನ ದೇಹವನ್ನು ಗ್ರಹಿಸಿ ಮೈ ಜುಮ್ ಎಂದಿತ್ತು! ಅದೇ ಮೊದಲ ಬಾರಿ ನಾನು ಅಂತಹ ಪ್ರಯೋಗ ಕಂಡಿದ್ದು. ಇಬ್ಬರೂ ಕೆಲವು ಕ್ಷಣಗಳು ನಗುತ್ತಾ ಅಚ್ಚರಿಯನ್ನು ಮುಖಭಾವಗಳಲ್ಲಿ ಹಂಚಿಕೊಂಡೆವು. ಅಂತಹ ಕರೆಂಟ್ ಶಾಕ್ ಹೇಗೆ ಆಯ್ತು ಎಂಬ ವಿಸ್ತಾರ ವಿವರಣೆ ಅಂದು ಪಡೆದಿಲ್ಲವಾದರೂ, ಅದು ‘ಸ್ಟಾಟಿಕ್ ಎಲೆಕ್ಟ್ರಿಸಿಟಿ’ ಎಂದು ಹೇಳಿದ ನೆನಪು. ಅಂದಿನಿಂದ ಇಂದಿನವರೆಗೆ ನಾನು ಆ ಪದವನ್ನು ಮರೆತಿಲ್ಲ. ಆ ಶಾಕ್ ಸಹ…

ಅದೇ ಮೊದಲ ಬಾರಿಗೆ ನನ್ನ ಜೀವನದಲ್ಲಿ, ನಮ್ಮ ದೇಹದಲ್ಲೂ ಹೀಗೆ ವಿದ್ಯುತ್ ಇದೆ ಎಂದು ತಿಳಿದದ್ದು. ಅದರ ಪ್ರಮಾಣ ಹೊರಗಿನ ನಮ್ಮ ಬಳಕೆಯ ವಿದ್ಯುತ್ ಗೆ ಹೋಲಿಸಿದರೆ ಕಡಿಮೆಯಾದರೂ, ಇದೆ ಎಂದು ಖಾತ್ರಿಯಾಯ್ತು. ಮುಂದೆ ನನ್ನ ವಿದ್ಯಾಭ್ಯಾಸ ಮುಂದುವರೆದಂತೆ ನಮ್ಮ ನರಜೀವಕೋಶಗಳು ಪ್ರತಿ ಕ್ಷಣ ಇಂತಹ ಸಣ್ಣ ಪ್ರಮಾಣದ ವಿದ್ಯುತ್ ನಿಂದಲೇ ತಮ್ಮ ಕೆಲಸಗಳನ್ನು ಮಾಡುತ್ತವೆ ಎಂದು ತಿಳಿದೆ. ಆದರೆ ಅಂದು ನನಗೆ ತಿಳಿಯದಿದ್ದ ವಿಚಾರವೆಂದರೆ ಇದೇ ತರಹದ ನರಜೀವಕೋಶಗಳಲ್ಲಿ ಕಂಡುಬರುವ ವಿದ್ಯುತ್ ಪ್ರಮಾಣಕ್ಕಿಂತ ಇನ್ನೂ ಕಡಿಮೆ ಪ್ರಮಾಣದ ವಿದ್ಯುತ್ ನಮ್ಮ ಚರ್ಮ ಜೀವಕೋಶಗಳಲ್ಲೂ ಉತ್ಪತ್ತಿಯಾಗುತ್ತದೆ ಹಾಗೂ ಅವುಗಳನ್ನು ದೇಹ ಚರ್ಮಕ್ಕೆ ಗಾಯವಾದಾಗ ಉತ್ಪತ್ತಿ ಮಾಡಿ, ಪಕ್ಕದ ಜೀವಕೋಶಗಳಿಗೆ ರವಾನೆ ಮಾಡಿ ‘ಹೇ ಇಲ್ಲಿ ನನಗೆ ಡ್ಯಾಮೇಜ್ ಆಗಿದೆ ಅದನ್ನು ಸರಿಪಡಿಸಲು ನೀವು ವಿಭಜನೆಯಾಗಿ ಸರಿಮಾಡಲು ಸಿದ್ಧರಾಗಿ’ ಎಂದು ಹೇಳುವುದರ ಮೂಲಕ ಸಂವಹಿಸುತ್ತವೆ ಎಂದು. ಮ್ಯಾಸುಚುಸೆಟ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳುವವರೆಗೆ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ ಬಿಡಿ. ಸುಮಾರು 150 ವರ್ಷಗಳಿಂದ ವಿಜ್ಞಾನಿಗಳು ಚರ್ಮ ಜೀವಕೋಶ ಏನಾದರು ಡ್ಯಾಮೇಜ್ ಆದರೆ ಅಲ್ಲಿ ವಿದ್ಯುತ್ ಕಾಂತತೆಯ ಬದಲಾವಣೆ ಆಗುತ್ತದೆ ಎಂಬ ವಿಚಾರ ಮಾತ್ರ ತಿಳಿದಿದ್ದರು. ಆದರೆ ಆ ಕಿರು ಪ್ರಮಾಣದ ವಿದ್ಯುತ್ ಪಕ್ಕದ ಚರ್ಮ ಜೀವಕೋಶಗಳ ಜೊತೆ ಸಂವಹಿಸುತ್ತವೆ ಎಂದು ಹೊಸ ಸಂಶೋಧನೆ ಹೇಳುತ್ತದೆ.

ಇದನ್ನು ಪ್ರಯೋಗಿಸಲು ಮಾನವ ಚರ್ಮ ಜೀವಕೋಶಗಳನ್ನು ಎಲೆಕ್ಟ್ರೋಡ್ ಸಹಿತ ಚಿಪ್ ನ ಮೇಲೆ ವಿಭಜಿಸುವಂತೆ ಮಾಡಿದರು. ಅದು ಬೆಳೆಯುತ್ತಾ ಹೋಯಿತು. ನಂತರ ಆ ಜೀವಕೋಶಗಳ ಮೇಲೆ ಲೇಸರ್ ಹಾಯಿಸಿ ಸ್ವಲ್ಪ ಗಾಯವನ್ನು ಹೋಲುವ ರೀತಿ ಡ್ಯಾಮೇಜ್ ಮಾಡಿದರು. ನಂತರ ಅದರಿಂದ ಬರಬಹುದಾದ ಎಲೆಕ್ಟ್ರಿಕ್ ಸಿಗ್ನಲ್ ಅನ್ನು ಗ್ರಹಿಸಲು ಕಾತುರದಿಂದ ಕಾಯಲು ಮುಂದಾದರು. ಅವರ ಆಶಯದಂತೆ ವಿದ್ಯುತ್ ಉತ್ಪತ್ತಿ ಆಯಿತು, ಆದರೆ ಅದು ನರ ಜೀವಕೋಶಗಳಲ್ಲಿ ಉತ್ಪತ್ತಿ ಆಗುವ ವಿದ್ಯುತ್ ಗಿಂತ ತುಂಬಾ ಕಡಿಮೆ ಪ್ರಮಾಣದ್ದಾಗಿತ್ತು. ಜೊತೆಗೆ ನರ ಜೀವಕೋಶಗಳಲ್ಲಿ ಇದು ಕೆಲವು ಮಿಲಿಸೆಕೆಂಡುಗಳಲ್ಲಿ ನಡೆದರೆ ಚರ್ಮ ಜೀವಕೋಶಗಳಲ್ಲಿ ಇದು 1-2 ಸೆಕೆಂಡುಗಳ ಕಾಲ ಸಮಯ ಹಿಡಿಯುತ್ತದೆ. ಅಷ್ಟೇ ಅಲ್ಲ, ನರ ಜೀವಕೋಶಗಳ ಈ ಸಿಗ್ನಲ್ ಗಳು ಕೆಲ ಮಿಲಿಸೆಕೆಂಡುಗಳಲ್ಲಿ ಬಂದು ಹೋಗಿಬಿಡುತ್ತವೆ, ಆದರೆ ಈ ಹಾನಿಗೊಳಗಾದ ಚರ್ಮ ಜೀವಕೋಶಗಳು ಕೆಲವು ಗಂಟೆಗಳ ಕಾಲ ಹೊರಸೂಸುತ್ತಲೇ ಇದ್ದವು. ಅರ್ಥಾತ್ ಪಕ್ಕದ ಜೀವಕೊಶಗಳಿಗೆ ಆದ ಹಾನಿಯ ಬಗ್ಗೆ ತಿಳಿಸಿ, ವಿಭಜಿಸಲು ಸತತವಾಗಿ ಸಿಗ್ನಲ್ ಕಳುಹಿಸುತ್ತಿದ್ದವು.
ನಮ್ಮ ದೇಹದಲ್ಲಿನ ಈ ಸಣ್ಣ ವಿದ್ಯುತ್ ನ ಕೆಲಸ ನನಗಂತೂ ಒಳ್ಳೆ ಶಾಕ್ ಅನ್ನೇ ನೀಡಿತು. ಕಣ್ಣಿಗೆ ಕಾಣದ್ದನ್ನು ನಂಬಲು ಇಚ್ಛಿಸದ ನಮ್ಮ ಬುದ್ಧಿವಂತಿಕೆ, ಎಷ್ಟು ಸೂಕ್ಷ್ಮವಾಗುವುದೋ, ಎಷ್ಟು ವಿಸ್ತಾರವಾಗಲು ಬಯಸುವುದೋ ಅಷ್ಟೇ ದೊಡ್ಡದಾಗಿ ತೆರೆಯುವ ವಿಚಾರಗಳ ಬಾಗಿಲು ನಮ್ಮನ್ನು ಬರಮಾಡಿಕೊಂಡು ಅಷ್ಟೇ ವಿಧ ವಿಧದ ಅಚ್ಚರಿಗಳ ಔತಣವನ್ನು ಉಣಬಡಿಸುವಲ್ಲಿ ಆಶ್ಚರ್ಯವಿಲ್ಲ!!
Source: www.snexplores.org

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.