ಕೊಳೆಯದ ಮರಗಳು!

ಕೊಳೆಯದ ಮರಗಳು!

© Ning Zeng

ಚಳಿಗಾಲದ ಸಮಯ. ಸುಮಾರು 20-25 ವರ್ಷಗಳ ಹಳೆಯ ಅನುಭವವಾದ್ದರಿಂದ ಆಗಿನ ಚಳಿ ಇನ್ನೂ ತೀಕ್ಷ್ಣವಾಗಿತ್ತು ಅಥವಾ ನನ್ನ ವಯಸ್ಸು ತುಂಬಾ ಚಿಕ್ಕದಿದ್ದರಿಂದ ಚಳಿ ಹೆಚ್ಚು ಅನಿಸುತ್ತಿತ್ತೇನೋ. ಏನೇ ಆಗಲಿ, ಚಳಿ ಮಾತ್ರ ಜೋರಿತ್ತು. ಆಗಿನ ನಮ್ಮ ಹೆಂಚಿನ ಮನೆಯಲ್ಲಿ ಸೌದೆಗಳಿಂದ, ಮಣ್ಣಿನ ಒಲೆಯ ಮೇಲೆ ತಯಾರಿಸಿದ ಅಡುಗೆಗಳೇ ಊಟ ಮಾಡುತ್ತಿದ್ದದ್ದು. ಈಗಿನ ಹಾಗೆ ಅಲ್ಲದೆ ಆಗ ಅಮ್ಮ ಮುದ್ದೆ ಮಾಡುವಾಗಲೇ ಒಂದು ತುತ್ತು ಅವಳಿಂದ ಪಡೆದುಕೊಂಡು ಹಂಚಿನ ಕಡ್ಡಿಗೆ ಸಿಕ್ಕಿಸಿಕೊಂಡು ಆಟವಾಡುತ್ತಾ ಅರ್ಧ ಊಟ ಮಾಡಿ ಬಿಡುತ್ತಿದ್ದೆವು. ಆದರೆ ಸಮಯ ಜರುಗಿದಂತೆ ಚಳಿಯೂ ಹೆಚ್ಚುತ್ತಿತ್ತು. ಆಗ ಒಮ್ಮೊಮ್ಮೆ ಅಜ್ಜಿ ಅಥವಾ ಚಿಕ್ಕಪ್ಪನ ಬೆಡ್ ಶೀಟಿನ ಗೂಡಿನೊಳಗೆ ಸೇರುವುದು ಒಂದು ವಿಧಾನವಾದರೆ, ಅಮ್ಮ ಅಡುಗೆ ಯಾವಾಗ ಮುಗಿಸುತ್ತಾಳೋ ಎಂದು ಕಾಯುತ್ತಾ ಇದ್ದು, ಕೊನೆಗೆ ಹಾಲನ್ನು ಕಾಯಿಸಲೆಂದು ಒಲೆಯಲ್ಲಿ ಕೆಂಡ ಮಾತ್ರ ಬಿಡುವುದನ್ನು ಕಾಯುತ್ತಿದ್ದೆವು. ಏಕೆಂದರೆ ಆಗ ಮಾತ್ರ ಅಲ್ಲಿ ಹೆಚ್ಚು ಕೆಲಸವಿಲ್ಲದ ಕಾರಣ ನಾವು ಹೋಗಿ ಒಲೆಯ ಮುಂದೆ ಕೂತು ಕೈ-ಕಾಲುಗಳನ್ನು ಬಿಸಿ ಮಾಡಿಕೊಳ್ಳುತ್ತಿದ್ದೆವು. ಚಳಿ ಹೆಚ್ಚಾದರೆ ಉಲ್ಟಾ ತಿರುಗಿ ಬೆನ್ನನ್ನೂ ಕಾಯಿಸುತ್ತಿದ್ದೆವು. ಹೀಗೆ ಚಳಿಗಾಲದ ಚಳಿಯ, ಛಳಿ ಬಿಡಿಸಲೆಂದು ಕೆಂಡದ ಮುಂದೆ ಕೂತಾಗ, ಕೆಂಡವನ್ನೇ ದಿಟ್ಟಿಸಿ ನೋಡುತ್ತಿದ್ದೆ. ಆಗ ಬೆಂಕಿಯ ಅಲೆಯ ಸಣ್ಣ ಜ್ವಾಲೆ ಆ ಕೆಂಡದ ಒಳಗೆ ಅಲೆದಾಡುವಂತೆ ಕಾಣುತ್ತಿತ್ತು. ಆ ಕೆಂಡದ ಕೆಂಪು ಈಗಲೂ ನನ್ನ ಕಣ್ಣಿಗೆ ಕಟ್ಟಿದ ಬಣ್ಣದಂತೆ ಗೋಚರಿಸುತ್ತದೆ. ನನಗೆ ಅರಿಯದಂತೆಯೇ ಆ ಸಮಯದಲ್ಲಿ ಒಂದು ರೀತಿಯ ಧ್ಯಾನಾವಸ್ಥೆಗೆ ಜಾರುತ್ತಿದ್ದೆನೇನೋ ಎಂದು ಈಗ ಅನಿಸುತ್ತಿದೆ… ಆದರೆ ಆಗಿನ ನನ್ನ ವೈಜ್ಞಾನಿಕ ತಲೆಗೆ ಮೂಡಿದ ಪ್ರಶ್ನೆ ಈಗಲೂ ನನಗೆ ನೆನಪಿದೆ. ಅದೇನೆಂದರೆ, ಸೌದೆಯೆಲ್ಲಾ ಬೆಂಕಿಯಲ್ಲಿ ಉರಿದು ಹೋದರೂ ಈ ಕೆಂಡ ಮಾತ್ರ ಅದು ಶಾಖವನ್ನು ಈಗಲೂ ಹೊರ ಸೂಸುತ್ತಿದೆ? ಎಂದು. ಆಗ ಅದನ್ನೆ ಕಲ್ಲಿದ್ದಲು ಎನ್ನುತ್ತಾರೆ, ಅದರಲ್ಲಿ ಅತಿ ಹೆಚ್ಚು ಇಂಗಾಲದ ಜೊತೆಗೆ ಇನ್ನೂ ಜ್ವಲಿಸದ ಕಲ್ಲಿದ್ದಲಿನ ರೂಪದ ಇಂಧನ ಇದೆ ಎಂದು ಆಗ ನನಗೆ ತಿಳಿದಿರಲಿಲ್ಲ.

© rawpixel.com

ಸುಮಾರು 70-95% ಭಾಗ ಇಂಗಾಲವನ್ನೇ ಹೊಂದಿರುವ ಈ ಇಂಗಾಲದ ಮೂಟೆಯಲಿ ಹೇಗೆ ಬೆಂಕಿ ಉರಿಯಲು ಸಾಧ್ಯ ಎಂದು ಈಗಲೂ ನನಗೆ ಸರಿಯಾಗಿ ತಿಳಿದಿಲ್ಲ. ಆದರೆ ಈ ಕಲ್ಲಿದ್ದಿಲಿನಲ್ಲಿ ಶೇಖರಿಸಿರುವ ಹೆಚ್ಚು ಪ್ರಮಾಣದಲ್ಲಿರುವ ಇಂಗಾಲದ ಈ ವಿಚಾರವನ್ನೇ ಬಳಸಿಕೊಂಡ ಮೇರಿಲ್ಯಾಂಡ್ವಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳುವ ಪ್ರಕಾರ ನಮ್ಮ ಭೂಮಿಯಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆಗೆ ಹಾಗೂ ಅದರಿಂದ ಆಗುತ್ತಿರುವ ದುಷ್ಪರಿಣಾಮಗಳಿಗೆ ಪರಿಹಾರವು ಈ ಕಲ್ಲಿದ್ದಲನ್ನು ಹೊಂದಿರುವ ಮರಗಳಲ್ಲಿಯೇ ಇದೆ ಎನ್ನುತ್ತಾರೆ ಅದೇ ವಿಶ್ವವಿದ್ಯಾಲಯದ ವಿಜ್ಞಾನಿ ಝೆಂಗ್. ಇವರ ಊಹೆಯ ಪ್ರಕಾರ, ನಮ್ಮ ಭೂಮಿಯಲ್ಲಿ ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಮುಖ್ಯ ಕಾರಣ ಇಂಗಾಲ ಹಾಗೂ ಇನ್ನಿತರ ಅನಿಲಗಳು. ಆದರೆ ಅತಿ ಹೆಚ್ಚು ಇಂಗಾಲದ ಆಕರಗಳೇ, ಆದ್ದರಿಂದ ಈ ಇಂಗಾಲವನ್ನು ವಾತಾವರಣಕ್ಕೆ ಸೇರದಂತೆ ಮಾಡಿದರೆ ಜಾಗತಿಕ ತಾಪಮಾನವೂ ಕಡಿಮೆಯಾಗುತ್ತದೆ.

© rawpixel.com

ಅದು ಸರಿ ಆದರೆ ಅದಕ್ಕೂ ಮರಗಳಿಗೂ ಅದರಲ್ಲಿರುವ ಕಲ್ಲಿದ್ದಲಿನ ರೂಪದ ಇಂಗಾಲಕ್ಕೂ ಸಂಬಂಧವೇನು? ಆ ವಿಚಾರಕ್ಕೆ ಬರುತ್ತಿದ್ದೇನೆ. ಮರಗಳು ಅಷ್ಟು ಇಂಗಾಲವನ್ನು ತನ್ನಲ್ಲಿ ಶೇಖರಿಸಿಕೊಳ್ಳಲು ಇಂಗಾಲದ ಡೈ ಆಕ್ಸೈಡ್ ಅನ್ನು ತೆಗೆದುಕೊಳ್ಳುತ್ತವೆ. ಅಂದರೆ ವಾತಾವರಣದಲ್ಲಿ ನಮ್ಮಿಂದ ಆದ ಮಲಿನವನ್ನು ಅವುಗಳು ಹೀರಿಕೊಳ್ಳುತ್ತವೆ ಎಂದಾಯಿತು. ಸರಿ, ಅದು ಒಳ್ಳೆಯದೇ ಅಲ್ಲವೇ? ಮತ್ತೇಕೆ ಜಾಗತಿಕ ತಾಪಮಾನ ಏರುತ್ತಿದೆ? ಎಂಬ ಪ್ರಶ್ನೆ ಮೂಡಬಹುದು. ಆದರೆ ನಾವು ಅದನ್ನು ಅಲ್ಲಿಗೇ ಬಿಡುತ್ತಿಲ್ಲ, ಬದಲಿಗೆ ಅದೇ ಮರಗಳನ್ನು ಕಡಿದು ಸುಡುತ್ತಿದ್ದೇವೆ, ಆಗ ಶೇಖರಿಸಿ ಇಟ್ಟಿದ್ದ ಇಂಗಾಲವೆಲ್ಲಾ ಮತ್ತೆ ವಾತಾವರಣಕ್ಕೆ ಸೇರುತ್ತಿದೆ. ಜೊತೆಗೆ ನೂರಾರು ವರ್ಷಗಳಿಂದ ಹಲವಾರು ಕಾಡುಗಳಲ್ಲಿ ಶೇಖರಿಸಿದ್ದ ಇಂಗಾಲವನ್ನು ನಾವು ಕಾಡು ಕಡಿದು ಬೆಂಕಿ ಹಚ್ಚುತ್ತಿರುವುದರಿಂದ ಇನ್ನೂ ಹೆಚ್ಚೆಚ್ಚು ಇಂಗಾಲವನ್ನು ವಾತಾವರಣಕ್ಕೆ ಸೇರಿಸುತ್ತಿದ್ದೇವೆ. ನೋಡಿ ನಾವು ಇನ್ನೆಷ್ಟು ಬುದ್ಧಿವಂತರು. ಸ್ವಾಭಾವಿಕವಾಗಿ ಹವಾಮಾನ ಬದಲಾವಣೆ ಆಗದಂತೆ ಕ್ರಿಯೆಗಳು ನಡೆಯುತ್ತಿದ್ದರೆ, ನಾವು ಅದನ್ನೂ ಆಗಲು ಬಿಡದೆ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ಇದನ್ನು ಅರಿತ ಝೆಂಗ್ ಮತ್ತು ತಂಡ, ಅದನ್ನೇ ಆಯುಧವಾಗಿಸಿಕೊಂಡು ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡುವ ವಿಧಾನವನ್ನು ಕಂಡು ಹಿಡಿಯುತ್ತಿದ್ದಾರೆ. ಅದೇನೆಂದರೆ ನಾವೇ ಮರಗಳನ್ನು ಬೆಳೆಸುವುದು, ಆಗ ಅದರಲ್ಲಿ ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಮರದೊಳಗೆ ಶೇಖರಿಸಲ್ಪಡುತ್ತದೆ. ಆಗ ಅದನ್ನು ಕತ್ತರಿಸಿ, ಸುಡುವ ಬದಲು ಮಣ್ಣಿನೊಳಗೆ ಸುಮಾರು ವರ್ಷಗಳ ಕಾಲ ಹೂಳುವುದು. ಆಗ ಮರದ ವಿಶೇಷ ಗುಣದಿಂದ ಅದು ಪೂರ್ತಿ ಕೊಳೆಯದೇ ಇಂಗಾಲವನ್ನು ವಾತಾವರಣಕ್ಕೂ ಬಿಡದೆ ಹಾಗೆ ಭೂಮಿಯೊಳಗೆ ಶೇಖರಿಸಿ ಇಟ್ಟಿರುತ್ತದೆ ಎಂದು ಅವರ ವೈಜ್ಞಾನಿಕ ನಂಬಿಕೆ. ಇದನ್ನು ಪರೀಕ್ಷಿಸಲು ಝೆಂಗ್ ಮತ್ತು ತಂಡ ಸುಮಾರು 35000kg ಮರಗಳನ್ನು ಒಂದು ದೊಡ್ಡ ಗುಂಡಿ ಮಾಡಿ ಅದರೊಳಗೆ 9 ವರ್ಷಗಳ ಕಾಲ ಮಣ್ಣಿನಲ್ಲಿ ಹೂತು, ಅದರ ಮೇಲೆ ಜೇಡಿ ಮಣ್ಣನ್ನು ತುಂಬುವುದು. ಅದಾದ ನಂತರ ಅವರ ಊಹೆಯಂತೆಯೇ ಮರದ ತುಂಡುಗಳು ಕೊಳೆಯದೇ ಹಾಗೆ ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತವೆಯೇ? ಇಟ್ಟುಕೊಂಡರೆ ಪ್ರಮಾಣ ಎಷ್ಟು? ಎಂದೆಲ್ಲಾ ಅಭ್ಯಸಿಸಲು ತಯಾರು ಮಾಡಿಕೊಂಡಿದ್ದರು.

© Ning Zeng

 “ನಾವೊಂದು ಬಯಸಿದರೆ, ದೈವವೊಂದು ಬಗೆಯಿತು” ಎಂಬತೆ, ಅವರ ಈ ಪ್ರಯೋಗಕ್ಕೆಂದು ಮಣ್ಣನ್ನು ಅಗೆಯುವಾಗ ಸುಮಾರು 2 ಮೀಟರ್ ಮಣ್ಣಿನ ಕೆಳಗೆ ಅವರಿಗೆ ಒಂದು ಮರದ ದಿಮ್ಮಿ ದೊರಕಿತು. ಆ ಮರ ನೆನ್ನೆ ಮೊನ್ನೆಯೋ ಬಿದ್ದು ಭೂಮಿಯೊಳಗೆ ಸೇರಿದ್ದಲ್ಲ. ಬದಲಿಗೆ ಅದು 3775 ವರ್ಷಗಳ ಹಳೆಯ ಮರವಾಗಿತ್ತು! ಹಾಗೂ ಅದು ಕೊಳೆಯದೇ ತನ್ನಲ್ಲಿನ ಇಂಗಾಲವನ್ನು ಕೊಳೆತು ಹೊರಬಿಡದೇ ತನ್ನಲ್ಲಿಯೇ ಸಾವಿರಾರು ವರ್ಷ ಶೇಖರಿಸಿ ಇಟ್ಟುಕೊಂಡಿತ್ತು. ಇದನ್ನೆಲ್ಲಾ ಕಂಡ ಝೆಂಗ್ ಮಂತ್ರಮುಗ್ಧರಾಗಿಬಿಟ್ಟಿದ್ದರು. ತಾವು ಮಾಡಬೇಕೆಂದಿದ್ದ ಅದೇ ಪ್ರಯೋಗವನ್ನು ಸಾವಿರಾರು ವರ್ಷಗಳ ಹಿಂದೆ ಪ್ರಕೃತಿಯೇ ಮಾಡಿ ಫಲಿತಾಂಶವನ್ನೂ ನೀಡಿಬಿಟ್ಟಿದೆ! ಮಣ್ಣನ್ನು ಅಗೆದು ಅಲ್ಲಿ ಇಂತಹ ಮರಗಳನ್ನು ಹಾಕುವುದರಿಂದ ಗಾಳಿಯ ಆಮ್ಲಜನಕ ಮರದೊಂದಿಗೆ ಪ್ರತಿಕ್ರಿಯಿಸುವುದನ್ನು, ಅದರ ಮೇಲೆ ಮುಚ್ಚಿರುವ ಜೇಡಿ ಮಣ್ಣಿನ ಹೊದಿಕೆ ತಡೆಯುತ್ತದೆ. ಇದರಿಂದ ಮರ ಹೆಚ್ಚಿನ ಕಾಲ ಕೊಳೆಯದೇ ಹಾಗೇ ಇರಬಲ್ಲದು. ಅಷ್ಟೇ ಅಲ್ಲ, ಈ ವಿಧಾನದಿಂದ ಕಡಿಮೆ ವೆಚ್ಚದಲ್ಲಿ ವಾತಾವರಣದ ಇಂಗಾಲದ ಡೈ ಆಕ್ಸೈಡ್ ಅನ್ನು ತೆಗೆಯಬಹುದು. ಅಂದರೆ ಸುಮಾರು 8000-24000 ರೂ ವೆಚ್ಚ ಮಾಡಿದರೆ 1000 ಕೆ. ಜಿ. ಇಂಗಾಲವನ್ನು ತೆಗೆಯುವ ತಂತ್ರಜ್ಞಾನ ನಮ್ಮಲ್ಲಿ ಇದ್ದದ್ದು. ಆದರೆ ಈ ವಿಧಾನದಿಂದ ನಮ್ಗೆ ತಗುಲುವ ವೆಚ್ಚ ಕೇವಲ 250-8000 ರೂ ಪ್ರತೀ 1000 ಕೆ. ಜಿ. ಇಂಗಾಲಕ್ಕೆ. ಇದೆಲ್ಲಾ ಆದರೂ ಝೆಂಗ್ ತಮ್ಮ ಸಂಶೋಧನೆಯನ್ನು ಮುಂದುವರೆಸಿದರು. ಏತಕ್ಕೆಂದರೆ, ಮರಗಳನ್ನು ಹೀಗೆ ನಾವು ಮುಂದೆ ಶೇಖರಿಸಲು ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಯಲು.

ದೀಪವೇ ಉರಿದು ಬೆಳಕು ನೀಡುವಂತೆ ಮರಗಳೇ ತನ್ನ ಜೀವಿತಾವದಿಯಲ್ಲಿ ಇಂಗಾಲವನ್ನು ಶೇಖರಿಸುತ್ತಾ ಇದ್ದು, ನಾವು ಮಾಡಿದ ವಾತಾವರಣ ವೈಪರೀತ್ಯವನ್ನು ಕಡಿಮೆ ಮಾಡುತ್ತಾ ನಂತರ ಸತ್ತ ಮೇಲೂ ನಮಗೆ ಮತ್ತು ವಾತಾವರಣಕ್ಕೆ ಇಂಗಾಲದಿಂದ ಈಗಾಗುತ್ತಿರುವ ತೊಂದರೆಯನ್ನು ಕಡಿಮೆ ಮಾಡುವಲ್ಲಿ ಒಂದು ಮಹತ್ತರ ಪರಿಹಾರದ ದಾರಿಯನ್ನು ತೋರಿವೆ. ಇದಕ್ಕಿಂತ ನಿಸ್ವಾರ್ಥತೆಯ ನಿದರ್ಶನ ಬೇಕೇ…?

© ಧನರಾಜ್ ಎಂ.

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
   
ಬೆಂಗಳೂರು ನಗರ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.