ಮೊಲದ ಕಿವಿಯ ಬಾವಲಿಗಳು

© ಶ್ರದ್ಧಾ ಕುಮಾರಿ ಕೆ.
ಬಾವಲಿಗಳ ಬಗ್ಗೆ ಆಸಕ್ತಿಯು ಬಂದಾಗಿನಿಂದ ಅವುಗಳನ್ನು ಗುರುತಿಸುವುದು, ಅವುಗಳ ಆವಾಸಸ್ಥಾನವನ್ನು ಪತ್ತೆ ಹಚ್ಚುವುದು ಮತ್ತು ಸ್ಥಳೀಯರಲ್ಲಿ ಬಾವಲಿಗಳ ಆವಾಸ ಸ್ಥಾನದ ಕುರಿತು ವಿಚಾರಿಸುವುದು ನನಗೆ ಒಂದು ಅಭ್ಯಾಸವಾಗಿದೆ. ಬಾವಲಿಗಳ ಕುರಿತಾದ ನನ್ನ ಆಸಕ್ತಿಯನ್ನು ಅರಿತ ಸ್ಥಳೀಯರು ತಾವೇ ಬಾವಲಿಗಳಿರುವ ಜಾಗವನ್ನು ನನಗೆ ತೋರಿಸುತ್ತಾರೆ. ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ಪ್ರತಿ ಊರಿನಲ್ಲಿಯೂ ಒಂದೊಂದು ಹೆಸರು ಇರುವಂತೆಯೇ ಬಾವಲಿಗಳಿಗೂ ಇವೆ. ಈ ಹೆಸರುಗಳು ಬಾವಲಿಗಳ ಗುಣಲಕ್ಷಣಗಳನ್ನು ಸೂಚಿಸುವಂತೆ ಇರುತ್ತವೆ. ಆಯಾ ಪ್ರದೇಶ ಮತ್ತು ವಿವಿಧ ಜನಸಮೂಹಗಳಲ್ಲಿ ಬಾವಲಿಗಳ ಕುರಿತಾದ ವಿವಿಧ ಅಭಿಪ್ರಾಯಗಳನ್ನು ಕಾಣಬಹುದಾಗಿದೆ. ಕೆಲವೆಡೆ ಬಾವಲಿಗಳನ್ನು ನಕಾರಾತ್ಮಕವಾಗಿ ಕಂಡರೆ, ಇನ್ನು ಹಲವು ಕಡೆಗಳಲ್ಲಿ ಸಕಾರಾತ್ಮಕವಾಗಿ ಕಾಣುವುದೂ ಇದೆ. ಮಾನವ ಚಟುವಟಿಕೆಗಳಿಲ್ಲದ ಪಾಳು ಬಿದ್ದ ಕಟ್ಟಡಗಳನ್ನು ಬಾವಲಿಗಳು ತಮ್ಮ ಆವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಇಂತಹ ಒಂದು ಸ್ಥಳವನ್ನು ನನಗೆ ನಮ್ಮ ಕರ್ನಾಟಕದ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಯಲ್ಲಾಪುರದ ಒಂದು ಗ್ರಾಮಸ್ಥರು ತೋರಿಸಿಕೊಟ್ಟರು. ಅಲ್ಲಿ ನಾನು ಕಂಡ ಬಾವಲಿ ಪ್ರಭೇದವನ್ನು ಮತ್ತು ಅದರ ವಿಶೇಷತೆಯನ್ನು ಈ ಲೇಖನದಲ್ಲಿ ವಿವರಿಸುತ್ತೇನೆ.
ಹೌದು, ಮೊಲದ ಕಿವಿಗಳಂತೆ ಸುಂದರವಾದ, ದೊಡ್ಡ ಕಿವಿಗಳನ್ನು ಹೊಂದಿರುವ ಬಾವಲಿಗಳೇ ಮೊಲದ ಕಿವಿಯ ಬಾವಲಿಗಳು. ಭಾರತದಲ್ಲಿರುವ 9 ಬಾವಲಿಗಳ ಕುಟುಂಬದಲ್ಲಿ (Family) ಮೊಲದ ಕಿವಿಯ ಬಾವಲಿಗಳೂ ಸೇರಿಕೊಳ್ಳುತ್ತವೆ. ಈ ಬಾವಲಿಯ ಕುಟುಂಬದ ವೈಜ್ಞಾನಿಕ ಹೆಸರು ‘ಮೆಗಾಡರ್ಮಾಟಿಡೆ’ (Megadermatidae). ಭಾರತದಲ್ಲಿ ಈ ಕುಟುಂಬದ ಎರಡು ಪ್ರಭೇದದ (Species) ಬಾವಲಿಗಳಿವೆ. ಅವುಗಳೆಂದರೆ ಮೆಗಾಡರ್ಮಾ ಸ್ಪಾಸ್ಮಾ (Megaderma spasma) (ಚಿತ್ರ 1) ಮತ್ತು ಲೈರೋಡರ್ಮಾ ಲೈರಾ (Lyroderma lyra) (ಚಿತ್ರ 2).


ಮೊಲದ ಕಿವಿಯ ಬಾವಲಿಯು ಭಾರತಕ್ಕೆ ಮಾತ್ರ ಸೀಮಿತವೇ?
ಮೆಗಾಡರ್ಮಾ ಸ್ಪಾಸ್ಮಾ ಭಾರತದಲ್ಲಿ ಹೆಚ್ಚಾಗಿ ಪಶ್ಚಿಮ ಹಾಗು ಪೂರ್ವಘಟ್ಟಗಳಲ್ಲಿ ಕಂಡುಬರುತ್ತದೆ. ಅದಲ್ಲದೇ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಕೆಲವು ಕಡೆಗಳಲ್ಲೂ ಕಂಡುಬರುತ್ತದೆ (ಚಿತ್ರ 3). ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಫಿಲಿಫೈನ್ಸ್, ಇಂಡೋನೇಶಿಯಾ ಮುಂತಾದ ಭಾಗಗಳಲ್ಲಿಯೂ ಇದನ್ನು ಕಾಣಬಹುದು. ವಿಶೇಷವಾಗಿ ಈ ಬಾವಲಿಯ ಪ್ರಭೇದವು ಆಗ್ನೇಯ ಏಷ್ಯಾಕ್ಕೆ ಸೀಮಿತವಾಗಿದೆ. ಇನ್ನು ಲೈರೋಡರ್ಮಾ ಲೈರಾವು ಭಾರತದಾದ್ಯಂತ ಕಂಡುಬರುತ್ತದೆ. ಅದಲ್ಲದೇ ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ದೇಶಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಬರ್ಮಾ, ಕಾಂಬೋಡಿಯಾ, ಚೈನಾ, ಲಾವೋಸ್, ಮಲೇಶಿಯಾ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯಟ್ನಾಂಗಳಲ್ಲಿ ಇದನ್ನು ನಾವು ನೋಡಬಹುದು (ಚಿತ್ರ 4).


ಮೊಲದ ಕಿವಿಯ ಬಾವಲಿಗಳ ಆವಾಸಸ್ಥಾನಗಳು

ಮೆಗಾಡರ್ಮಾ ಸ್ಪಾಸ್ಮಾಗಳು ತೇವ ಭರಿತ ಕಾಡು ಗಳಲ್ಲಿ ವಾಸಿಸುತ್ತವೆ. ಗುಹೆ, ಪಾಳುಬಿದ್ದ ಮನೆ, ಟೊಳ್ಳು ಮರ ಮತ್ತು ಸುರಂಗಗಳು ಇವುಗಳ ಆವಾಸಸ್ಥಾನಗಳು. ಇವುಗಳು ಹೆಚ್ಚಾಗಿ ಸಣ್ಣ-ಸಣ್ಣ ಗುಂಪಿನಲ್ಲಿ ವಾಸಿಸುತ್ತವೆ. ಕೆಲವೊಮ್ಮೆ ಇವುಗಳು ತುಂಬಾ ಒತ್ತೊತ್ತಾಗಿ ಒಂದಕ್ಕೊಂದು ಅಂಟಿಕೊಂಡು ನೇತಾಡುತ್ತವೆ (ಚಿತ್ರ 5). ಲೈರೋಡರ್ಮಾ ಲೈರಾದ ಆವಾಸಸ್ಥಾನವು ಗುಹೆ, ದೇವಸ್ಥಾನ, ಪಾಳುಬಿದ್ದ ಕಟ್ಟಡಗಳು ಮತ್ತು ಸುರಂಗ ಇತ್ಯಾದಿ ಸ್ಥಳಗಳು. ಇವೂ ಸಹ ಮೆಗಾಡರ್ಮಾ ಸ್ಪಾಸ್ಮಾದಂತೆಯೇ ಗುಂಪುಗಳಲ್ಲೇ ವಾಸಿಸುತ್ತವೆ.
ಮೊಲದ ಕಿವಿಯ ಬಾವಲಿಗಳನ್ನು ಗುರುತಿಸುವುದು ಹೇಗೆ?
ನಾವು ಎಲ್ಲಾದರೂ ಈ ಮೇಲ್ಕಂಡ ಆವಾಸಸ್ಥಾನಗಳಲ್ಲಿ ಬಾವಲಿಗಳನ್ನು ಕಂಡರೆ, ಮೊಲದ ಕಿವಿಯ ಬಾವಲಿಯ ಕುಟುಂಬವನ್ನು ಗುರುತಿಸುವುದು ಹೇಗೆ? ಸಹಜವಾಗಿಯೇ ಇವುಗಳ ಕಿವಿಗಳು ಮೊಲದ ಕಿವಿಗಳಂತೆಯೇ ಕಾಣಿಸುತ್ತವೆ. ಹಾಗಾಗಿ ಇತರ ಕುಟುಂಬಗಳಿಂದ ಈ ಬಾವಲಿಗಳನ್ನು ಬೇರ್ಪಡಿಸುವ ಅಂಶವೆಂದರೆ ಅದು ಈ ಬಾಲಿಗಳ ಕಿವಿಯ ರಚನೆ. ಆದರೆ ಈಗಾಗಲೇ ನಾವು ನೋಡಿದಂತೆ ಮೆಗಾಡರ್ಮಾಟಿಡೆ ಕುಟುಂಬದೊಳಗೆ ಮೆಗಾಡರ್ಮಾ ಸ್ಪಾಸ್ಮಾ ಮತ್ತು ಲೈರೋಡರ್ಮಾಲೈರಾ ಎಂಬ ಎರಡು ಪ್ರಭೇದಗಳಿವೆ. ಇವೆರಡೂ ಕೂಡ ಮೊಲದ ಕಿವಿಗಳಂತೆಯೇ ಕಾಣುವ ಕಿವಿಗಳನ್ನು ಹೊಂದಿವೆ. ಇವುಗಳ ನಡುವೆ ವ್ಯತ್ಯಾಸವನ್ನು ಮಾಡುವುದು ಹೇಗೆ ಎನ್ನುವ ಪ್ರಶ್ನೆಯು ನಮಗೆ ಸಹಜವಾಗಿಯೇ ಬರುತ್ತದೆ. ಅದಕ್ಕೆ ವಿಜ್ಞಾನದಲ್ಲಿ ಎರಡು ಉಪಾಯಗಳಿವೆ, ಅವುಗಳನ್ನು ನೋಡೋಣ.
ಮೂಗು ಮತ್ತು ಕಿವಿಯ ಆಕಾರದ ಗುರುತುಗಳು – ಮೊದಲ ಉಪಾಯ
ಮೆಗಾಡರ್ಮಾ ಸ್ಪಾಸ್ಮಾದ ಮೂಗಿನ ಮೇಲ್ಭಾಗದ ರಚನೆಯು ಸಣ್ಣದಾಗಿದೆ ಮತ್ತು ಬದಿಗಳು ಸುಮಾರಾಗಿ ‘C’ ಆಕಾರವನ್ನು ಹೊಂದಿವೆ. ಆದರೆ ಲೈರೋಡರ್ಮಾ ಲೈರಾದ ಮೂಗಿನ ಮೇಲ್ಭಾಗದ ರಚನೆಯು ಉದ್ದವಾಗಿದೆ ಮತ್ತು ಬದಿಗಳು ಸುಮಾರಾಗಿ ನೇರವಾಗಿವೆ (ಚಿತ್ರ 6). ಇದಲ್ಲದೇ ಇನ್ನೂ ಒಂದು ವ್ಯತ್ಯಾಸವನ್ನು ಸಹ ಇವುಗಳ ನಡುವೆ ಗುರುತಿಸಬಹುದು. ಅದೇನೆಂದರೆ ಈ ಎರಡೂ ಪ್ರಭೇದದ ಬಾವಲಿಗಳ ಕಿವಿಗಳು ಸೇತುವೆಯಾಕಾರದ ಚರ್ಮದಿಂದ ಕೂಡಿಕೊಂಡಿರುತ್ತವೆ. ಆದರೆ ಲೈರೋಡರ್ಮಾ ಲೈರಾದ ಕಿವಿಗಳು ಮೆಗಾಡರ್ಮಾ ಸ್ಪಾಸ್ಮಾದ ಕಿವಿಗಳಿಗಿಂತ ಹೆಚ್ಚಿನ ಭಾಗದಲ್ಲಿ ಅಂಟಿಕೊಂಡಿರುತ್ತವೆ (ಚಿತ್ರ 6). ಹೀಗೆ ಮೂಗಿನ ರಚನೆ ಮತ್ತು ಕಿವಿಗಳ ನಡುವಿನ ಚರ್ಮದಿಂದ ಮೊಲದ ಕಿವಿಯ ಬಾವಲಿ ಪ್ರಭೇದಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು. ಇನ್ನು ನಾವು ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಇರುವ ಎರಡನೇ ಉಪಾಯವನ್ನು ಗಮನಿಸೋಣ.

ಎಕೊಲೊಕೇಶನ್ ನ ಮುಖಾಂತಾರ ಗುರುತು – ಎರಡನೆಯ ಉಪಾಯ
ಹೆಚ್ಚಿನ ಬಾವಲಿಗಳಂತೆ ಇವುಗಳೂ ಸಹ ಎಕೋಲೊಜಿಕಲ್ ಮುಖಾಂತರ ಸಂಚಲನೆ, ಆಹಾರ ಹುಡುಕುವುದು ಮುಂತಾದವುಗಳನ್ನು ಪೂರೈಸುತ್ತವೆ. ಎಕೊಲೊಕೇಶನ್ (Echolocation) ಎಂದರೆ ಧ್ವನಿಯನ್ನು ಹೊರಡಿಸಿ ಆ ಧ್ವನಿಯು ಎದುರಿನ ವಸ್ತುವಿಗೆ ತಗುಲಿ ಪ್ರತಿಧ್ವನಿತವಾದ ತರಂಗಗಳ ಮುಖಾಂತರ ಆಯಾ ವಸ್ತುಗಳನ್ನು ಗುರುತಿಸುವುದು. ಪ್ರತಿಯೊಂದು ಪ್ರಭೇದದ ಬಾವಲಿಯೂ ತನ್ನದೇ ಆದ ವಿಶಿಷ್ಟ ಎಕೊಲೊಕೇಶನ್ ಗಳನ್ನು ಹೊಂದಿದೆ. ಹಾಗಾಗಿ ಎಕೊಲೊಕೇಶನ್ ಮುಖಾಂತರವಾಗಿಯೂ ಸಹ ನಾವು ಮೆಗಾಡರ್ಮಾ ಸ್ಪಾಸ್ಮಾ ಮತ್ತು ಲೈರೋಡರ್ಮಾ ಲೈರಾಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಮೆಗಾಡರ್ಮಾ ಸ್ಪಾಸ್ಮಾದ ಎಕೊಲೊಕೇಶನ್ ನ ಗರಿಷ್ಠ ಆವೃತ್ತಿಯು ಸರಿಸುಮಾರು 56 kHz (ಚಿತ್ರ 7) ಇದ್ದರೆ, ಲೈರೋಡರ್ಮಾ ಲೈರಾದ್ದು ಸರಿಸುಮಾರು 50 kHz ಇರುತ್ತದೆ (ಚಿತ್ರ 8). ಹೀಗೆ ಎಕೊಲೊಕೇಶನ್ ನ ಆವೃತ್ತಿಯ ವ್ಯತ್ಯಾಸದಿಂದಲೂ ಪ್ರಭೇದದ ವ್ಯತ್ಯಾಸವನ್ನು ನಾವು ಗುರುತಿಸಬಹುದಾಗಿದೆ.


ಮೊಲದ ಕಿವಿಯ ಬಾವಲಿಗಳ ಆಹಾರ ಪದ್ಧತಿ
ಮೊಲದ ಕಿವಿಯ ಬಾವಲಿಗಳ ವೈಶಿಷ್ಟ್ಯವು ಬರಿ ಇವುಗಳ ಕಿವಿಗಳ ಅಂದ ಮತ್ತು ಆಕಾರಕ್ಕೆ ಸೀಮಿತವಲ್ಲ. ಇವುಗಳ ಆಹಾರ ಪದ್ಧತಿಯೂ ಸಹ ವಿಶೇಷವಾದುದೇ ಆಗಿದೆ. ಇದು ಸೂರ್ಯಾಸ್ತದ ಸುಮಾರು ಅರ್ಧ ಗಂಟೆಯ ನಂತರ ಆವಾಸಸ್ಥಾನದಿಂದ ಆಹಾರಕ್ಕಾಗಿ ಹೊರ ಹಾರುತ್ತದೆ. ವೇಗವಾಗಿ ಹಾರುವ ಮೆಗಾಡರ್ಮಾ ಸ್ಪಾಸ್ಮಾವು ಮರ ಮತ್ತು ಪೊದೆಗಳ ಸುತ್ತ ಆಹಾರವನ್ನು ಬೇಟೆಯಾಡುತ್ತದೆ. ಈ ರೀತಿ ಇದು ಬೇಟೆಯಾಡುವಾಗ ಕೆಲವೊಮ್ಮೆ ಮರದ ರೆಂಬೆಗಳಲ್ಲಿ ಅಥವಾ ಬಂಡೆಯ ಕೆಳಗೆ ಕೆಲ ನಿಮಿಷಗಳ ಕಾಲ ನೇತಾಡುತ್ತಿರುತ್ತದೆ. ಹಾಗೂ ಕೆಲವೊಮ್ಮೆ ತನ್ನ ಆವಾಸಸ್ಥಾನಕ್ಕೆ ಭೇಟಿಕೊಟ್ಟು ಹೋಗುತ್ತದೆ. ಇದರ ಆಹಾರವು ವೈವಿಧ್ಯಮಯವಾಗಿದ್ದು ಚಿಟ್ಟೆ, ಪತಂಗ, ಮಿಡತೆ, ಜೀರುಂಡೆಗಳನ್ನು ತಿನ್ನುವುದರ ಜೊತೆ ಇಲಿಗಳನ್ನು ಸಹ ಬೇಟೆಯಾಡಿ ತಿನ್ನುತ್ತದೆ. ಇದು ಹಾರುತ್ತಿರುವ ಕೀಟಗಳಿಗಿಂತ ಹೆಚ್ಚಾಗಿ ವಿಶ್ರಮಿಸುತ್ತಿರುವ ಕೀಟಗಳನ್ನು ಅಂದರೆ ಗಿಡಗಳಲ್ಲಿ ಇರುವ ಕೀಟಗಳನ್ನು ತಿನ್ನುತ್ತದೆ. ಹೆಚ್ಚಾಗಿ ಇದು ಆವಾಸಸ್ಥಾನದ ಸುತ್ತಮುತ್ತಲೇ ಬೇಟೆಯಾಡುತ್ತದೆ.
ಇನ್ನು ಲೈರೋಡರ್ಮಾ ಲೈರಾದ ಆಹಾರ ಪದ್ಧತಿಯು ಇನ್ನೂ ಕುತೂಹಲಕಾರಿಯಾಗಿದೆ. ಇದು ಸೂರ್ಯಾಸ್ತದ ಸುಮಾರು ಒಂದು ಗಂಟೆಯ ನಂತರ ಆವಾಸಸ್ಥಾನದಿಂದ ಆಹಾರಕ್ಕಾಗಿ ಹೊರ ಹಾರುತ್ತದೆ. ಇದು ನೆಲದಿಂದ ಕಡಿಮೆ ಎತ್ತರದಲ್ಲಿ ಹಾರುತ್ತಾ ಆಹಾರ ಹುಡುಕುತ್ತವೆ. ಇದಕ್ಕೆ ಎಕೊಲೊಕೇಶನ್ ಜೊತೆಗೆ ತಮಗೆ ಆಹಾರವಾಗುವ ಪ್ರಾಣಿಗಳು ಹೊರಡಿಸುವ ಶಬ್ದಗಳನ್ನು ಗುರುತಿಸಿ, ಅವುಗಳನ್ನು ಬೇಟೆಯಾಡುವ ಸಾಮಾರ್ಥ್ಯವಿದೆ. ಇದು ವಿವಿಧ ಬಗೆಯ ಕೀಟಗಳನ್ನು ತಿನ್ನುವುದರೊಂದಿಗೆ, ಗುಬ್ಬಚ್ಚಿಯಂತಹ ಚಿಕ್ಕ ಗಾತ್ರದ ಪಕ್ಷಿಗಳು, ಹಲ್ಲಿಗಳು, ಕಪ್ಪೆಗಳನ್ನೂ ತಿನ್ನುತ್ತದೆ. ಅದರೊಂದಿಗೆ ಇದು ಇನ್ನೂ ಅಚ್ಚರಿಯೆಂಬಂತೆ ಮೀನುಗಳನ್ನೂ ತಿನ್ನುತ್ತದೆ. ಅಲ್ಲದೇ ಚಿಕ್ಕ ಗಾತ್ರದ ಬೇರೆ ಪ್ರಭೇದಗಳ ಬಾವಲಿಗಳನ್ನೂ ಸೇವಿಸುತ್ತದೆ.
ಇವುಗಳಿಂದ ನಮಗೇನು ಪ್ರಯೋಜನ?
ಈ ಬಾವಲಿಗಳು ವಿಶಿಷ್ಟವಾಗಿರುವುದು ಮಾತ್ರವಲ್ಲದೇ ಇವುಗಳಿಂದ ನಮಗೆ ಪ್ರಯೋಜನಗಳೂ ಸಹ ಇವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಬೆಳೆಗೆ ಹಾನಿಯನ್ನುಂಟು ಮಾಡುವ ಕೀಟಗಳನ್ನು ಭಕ್ಷಿಸಿ ಬೆಳೆಗಳನ್ನು ಕೀಟಗಳಿಂದ ರಕ್ಷಿಸುವುದು. ಅಲ್ಲದೇ ಆಹಾರ ಸರಪಳಿಯಲ್ಲಿ ಮುಖ್ಯ ಪಾತ್ರವಹಿಸಿ ಪರಿಸರದ ಸಮತೋಲನವನ್ನು ಕಾಪಾಡುವ ಕೆಲಸವನ್ನೂ ಮಾಡುತ್ತವೆ. ಹಾಗೂ ಇವುಗಳ ಹಿಕ್ಕೆಯು ಮಣ್ಣಿನ ಫಲವತ್ತತೆಯನ್ನೂ ಸಹ ಹೆಚ್ಚಿಸುತ್ತದೆ. ಬಾವಲಿಗಳ ಬಗ್ಗೆ ಆಸಕ್ತಿಯನ್ನು ತೋರಿದಷ್ಟೂ ಸಹ ಅನೇಕ ಕುತೂಹಲಕಾರಿ ಅಂಶಗಳು ತೆರೆದುಕೊಳ್ಳುತ್ತವೆ. ಮುದ್ದಾದ ಮೊಲದ ಕಿವಿಯ ಬಾವಲಿಗಳನ್ನು ನೋಡಿ ಅದರ ಜೀವನ ಶೈಲಿಯ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದವು. ಅವುಗಳಿಗೆ ಉತ್ತರವನ್ನು ಕಂಡುಕೊಳ್ಳಲು ಸಂಶೋಧನೆಗಳನ್ನು ಹೇಗೆ ನಡೆಸುವುದು ಎಂದುಕೊಳ್ಳುತ್ತಾ ಅಲ್ಲಿಂದ ಹಿಂದುರಿಗಿದೆ.
ಲೇಖನ: ಶ್ರದ್ಧಾ ಕುಮಾರಿ ಕೆ.
ದಕ್ಷಿಣ ಕನ್ನಡ ಜಿಲ್ಲೆ