ಸಮಯವೇ ಮಾಯವಾದೀತೇ?

ಸಮಯವೇ ಮಾಯವಾದೀತೇ?

© Ai generated

ಬೆಳಿಗ್ಗೆ ಆದಷ್ಟು ಬೇಗ ಏಳಲು ಪ್ರಯತ್ನ ಮಾಡಿ, ಆಗದೆ ತಡವಾಗಿ ಎದ್ದು ಕಾಲೇಜಿಗೆ ಹತ್ತೇ ನಿಮಿಷದಲ್ಲಿ ತಯಾರಾಗಿ ಓಡಿರುವುದು, ಮಾಸಿಕ ಪರೀಕ್ಷೆಗೆ ಹಿಂದಿನ ದಿನ ಕೂತು ಓದುವುದು, ಎರಡು ಘಂಟೆ ಪುಸ್ತಕ ಹಿಡಿದ ತಕ್ಷಣ ಎಂದೂ ಓದದ ನಾವು ಈ ಎರಡು ತಾಸು ಅತಿಯಾಗಿ ಓದಿದೆವೆಂದು ಭಾವಿಸಿ ವಿಶ್ರಾಂತಿಗೆಂದು ಕೆರೆಯ ದಾರಿಯಲ್ಲಿ ಅದೇ ಎರಡು ತಾಸು ವಾಕಿಂಗ್ ಹೋದದ್ದು, ಅದೇ ಕೆರೆಯಲ್ಲಿ ಸಂಜೆ ಮುಸುಕಾದಂತೆ ಗೋದಿ ಹಿಟ್ಟಿನಲ್ಲಿ ಮಾಡಿದ ಉಂಡೆಯಿಂದ ಮೀನು ಹಿಡಿದು ಅದನ್ನು ಸುಟ್ಟು ತಿಂದದ್ದು, ಹೀಗೆ ಹೇಳುತ್ತಾ ಹೋದರೆ ಎಷ್ಟೋ ಇದೆ; ಆ ಇಂಜಿನಿಯರಿಂಗ್ ನ ನಾಲ್ಕು ವರ್ಷದ ಅವಧಿ. ಆ ನಾಲ್ಕು ವರ್ಷ ನಾಲ್ಕು ದಿನಗಳಂತೆ ಎಂದೂ ಮರೆಯಲಾಗದ ಅನುಭವಗಳನ್ನು ನನ್ನಲ್ಲಿ ಕೂಡಿ ಕಳೆದುಹೋದವು. ಆ ದಿನಗಳು ಕಳೆದೇ ಸುಮಾರು ಒಂದು ದಶಕವಾಗುತ್ತಿದೆ ಎನ್ನುವುದು ಇನ್ನೂ ನಂಬಲಾಗುತ್ತಿಲ್ಲ. ಇಷ್ಟು ವರ್ಷಗಳ ಸಮಯ ಹಾಗೇ ಕಣ್ಣೆದುರು ಮಾಯವಾದಂತೆ ಸಮಯದ ಸಾಗರದಲ್ಲಿ ಎದ್ದ ಅಲೆಗಳಂತೆ ಸಮದಲ್ಲೇ ಬೆರೆತು ಹೋದವು.

© Ai generated

ಇಲ್ಲಿ ಮಾಯವಾದ ಸಮಯ ನನ್ನ ಕಲ್ಪನೆಯ ವರ್ಣನೆಯಾದರೆ, ಮುಂದೆ ಹೇಳಲು ಹೊರಟಿರುವುದು. ನಿಜವಾದ ಸತ್ಯ. ಹೌದು, ನಿಜ ಹಾಗು ಸತ್ಯ. ಏಕೆಂದರೆ ಈ ಮಾತನ್ನು ಕೇಳಿದರೆ ನನ್ನಂತ ಮೊದಲ ಬಾರಿ ವಿಷಯ ಕೇಳುತ್ತಿರುವ ಕೆಲವರಿಗೆ ನಂಬಲಿಕ್ಕೆ ಕಷ್ಟವಾಗಬಹುದು. ನಮ್ಮ ಕೈ ಗಡಿಯಾರದಲ್ಲಿ ಅಥವಾ ಮೊಬೈಲಿನಲ್ಲಿ ನೋಡುವ ಸಮಯ ಎಷ್ಟು ಸರಿ? ಅದು ಹೇಗೆ ಇದೇ ಸಮಯ ಎಂದು ನಿರ್ಧರಿಸಲ್ಪಡುತ್ತದೆ? ಎಂಬುದೆಲ್ಲದಕ್ಕೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಆದರೆ ಅದಕ್ಕೆ ಮುಂಚೆ ನಿಮಗೊಂದು ವಿಷಯ ಮುಟ್ಟಿಸಬೇಕು, ಅದೇನೆಂದರೆ ಸಮಯ ಮಾಯವಾಗುತ್ತದಂತೆ! ಕೇಳುವುದಕ್ಕೇ ಎಷ್ಟು ವಿಚಿತ್ರವಾಗಿರುವುದಲ್ಲವೇ? ಆದರೂ ಇದೇ ಸತ್ಯ. ಬಹುಶಃ ಈ ಲೇಖನ ಮುಗಿಯುವಷ್ಟರಲ್ಲಿ ನಿಮಗೆ ಸ್ಪಷ್ಟತೆ ಸಿಗಬಹುದು.

ಭೂಮಿಯ ಎಲ್ಲಾ ಭಾಗದಲ್ಲಿ ಒಂದು ಸಮಯದಲ್ಲಿ ಒಂದೇ ಸಮಯ ಇರುವುದಿಲ್ಲ. ಅರ್ಥಾತ್, ಈಗ ಭಾರತದಲ್ಲಿ ಸಮಯ ಬೆಳಿಗ್ಗೆ 6 ಘಂಟೆಯಾದರೆ ಆಸ್ಟ್ರೇಲಿಯಾದಲ್ಲಿ ಬೆಳಿಗ್ಗೆ 11.30 ಹಾಗೆಯೇ ಬೇರೆ ಬೇರೆ ಭೂಮಿಯ ಭಾಗದಲ್ಲಿ ಸಮಯದ ವ್ಯತ್ಯಾಸವಿರುತ್ತದೆ. ಈ ವ್ಯತ್ಯಾಸವನ್ನು ತಿಳಿಯಲು/ಅರಿಯಲು ನಮಗೆ ಆ ದೇಶದಲ್ಲಿ ಹಾದು ಹೋಗುವ ಸಮಯದ ರೇಖೆ/ಟೈಮ್ ಜೋನ್ ನ ಅರಿವಿರಬೇಕು. ಇನ್ನೂ ಸುಲಭವಾಗಿ ಹೇಳುವುದಾದರೆ ನಮ್ಮ ಫೋನ್ ಗಳಲ್ಲಿ ಸಮಯವನ್ನು ಸೆಟ್ ಮಾಡುವಾಗ ಟೈಮ್ ಜೋನ್ ಕಲ್ಕತ್ತ UTC + 5.30 (GMTಯಂತೇ UTC) ಹೀಗೆ ನೋಡಿರಬಹುದು. ಇದರಲ್ಲಿ ಬರುವ UTC (Coordinated Universal Time) ಪ್ರಪಂಚದ ಎಲ್ಲಾ ದೇಶಗಳಿಗೂ ಒಂದೇ ಇದ್ದು, ಬದಲಾದ ದಿನದ ಭಾಗವನ್ನು ಆ ದೇಶ ಇರುವ ಟೈಮ್ ಜೋನ್ ಗೆ ಅನುಗುಣವಾಗಿ ಘಂಟೆಗಳಾಗಿ ಅದಕ್ಕೆ ಸೇರಿಸಲಾಗುತ್ತದೆ. ಜೊತೆಗೆ ಈ UTCಯನ್ನು ಸೆಟ್ ಮಾಡಲು ‘ಪರಮಾಣು ಗಡಿಯಾರ (atomic clock)’ವನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಈ ಪರಮಾಣು ಗಡಿಯಾರವೂ ಕೂಡಾ ನಿರ್ಧಿಷ್ಟವಲ್ಲ. ಈ ಪರಮಾಣು ಗಡಿಯಾರವನ್ನೂ ಭೂಮಿಯ ಚಲನೆ(ತಿರುಗುವಿಕೆ)ಯನ್ನು ಆಧರಿಸಿ ಸ್ವಲ್ಪ ಬದಲಿಸುತ್ತಿರಬೇಕಾಗುತ್ತದೆ. ಏಕೆಂದರೆ ಭೂಮಿಯ ಒಂದು ದಿನದ ಅವಧಿ ನಿಖರವಾಗಿ 24 ಘಂಟೆಯೇ ಇರುವುದಿಲ್ಲ ಎಂಬುದು ನಿಮಗೂ ತಿಳಿದಿರಬಹುದು. ಆದರೆ ಏಕೆ ಹೀಗೆ ಎಂದು ಗೊತ್ತಿದೆಯೇ? ಭೂಮಿಯ ಸಮಯ ನಿರ್ಧರಿಸಲ್ಪಡುವುದು ಭೂಮಿಯು ತನ್ನ ಸುತ್ತ ತಾನು ತಿರುಗಲು ಅಂದರೆ ಒಂದು ಪರಿಭ್ರಮಣೆಗೆ ತೆಗೆದುಕೊಳ್ಳುವ ಸಮಯದಿಂದ. ಈ ಸಮಯವನ್ನು ನಾವು 24 ಘಂಟೆಯೆಂದು ನಿರ್ಧರಿಸಿಕೊಂಡಿರುವೆವಾದರೂ, ಭೂಮಿಯ ಈ ಚಲನೆಯ ವೇಗವು ಸೂರ್ಯ ಹಾಗೂ ಚಂದ್ರರ ಗುರುತ್ವಕ್ಕೆ ಒಳಗಾಗಿ ಬದಲಾಗುತ್ತದೆ. ಆಗ ಸಮಯದ ಅಳತೆಯೂ ಬದಲಾಗಲೇಬೇಕು ಅಲ್ಲವೇ? ಅಷ್ಟೇ ಅಲ್ಲ, ಭೂಮಿಯ ಮೇಲಿನ ಹೆಚ್ಚು ಭಾರದ ವಸ್ತುಗಳು ಹೆಚ್ಚೆಚ್ಚಾಗಿ ಜಾಗ ಬದಲಿದರೂ ಸಹ ಭೂಮಿಯ ಚಲನೆಯಲ್ಲಿ ವ್ಯತ್ಯಾಸವಾಗಿ ಅದರ ಪ್ರಭಾವ ಸಮಯದ ಮೇಲೆ ಬೀರುತ್ತದೆ. ಹಾಗಾದರೆ ದೊಡ್ಡ ಭೂಕಂಪವಾದರೆ ಭೂಮಿಯ ತಿರುಗುವಿಕೆ ಬದಲಾಗಿ ಸಮಯ ಬದಲಾಗಬಹುದೇ? ಎಂಬ ನಿಮ್ಮ ಊಹೆ… ಸರಿಯಾಗಿದೆ. 2004ರಲ್ಲಿ ಇಂಡೋನೇಷಿಯಾದಲ್ಲಿ ನಡೆದ 9.1 ಮ್ಯಾಗ್ನಿಟೂಡ್ ನ ಭೂಕಂಪದಿಂದ ಭೂಮಿಯ ಮೇಲ್ಭಾಗದಲ್ಲಾದ ಬದಲಾದಲಾವಣೆಯಿಂದ ಭೂಮಿಯ ತಿರುಗುವಿಕೆಯ ವೇಗ ತುಸು ಹೆಚ್ಚಾಗಿದೆ ಎಂದಿದ್ದಾರೆ ವಿಜ್ಞಾನಿಗಳು. ಆದರೆ ಅದೇ ಭೂಮಿಯ ಮೇಲ್ಮೈ ಮೇಲೆ ನಮ್ಮ ನಿಮ್ಮೆಲ್ಲರ ಸಲುವಾಗಿ ನಡೆಯುತ್ತಿರುವ ಇನ್ನೊಂದು ವಿದ್ಯಮಾನದಿಂದ ಭೂಮಿಯ ವೇಗದ ಮೇಲೆ ಈ ಭೂಕಂಪಕ್ಕಿಂತ ಹೆಚ್ಚಿನ ಪ್ರಭಾವ ಬೀರಿ ಭೂಮಿಯ ತಿರುಗುವಿಕೆಯ ವೇಗವನ್ನು ಕ್ಷೀಣಿಸುತ್ತಿದೆಯಂತೆ! ಅದೇನಿರಬಹುದು ಊಹಿಸಿ ನೋಡೋಣ… ನಮ್ಮ ಭೂಮಿಯ ಮೇಲೆ ನಮ್ಮಿಂದ ಆಗುತ್ತಿರುವ ಜಾಗತಿಕ ತಾಪಮಾನದಿಂದ ಗ್ರೀನ್ಲ್ಯಾಂಡ್ ಮತ್ತು ಅಂಟಾರ್ಟಿಕದಲ್ಲಿ ಕರಗುತ್ತಿರುವ ಮಂಜಿನ ವೇಗ ಇತ್ತೀಚೆಗೆ ಹೆಚ್ಚಿ ಅಲ್ಲಿನ ಭಾರವೆಲ್ಲ ಸಮುದ್ರಕ್ಕೆ ಸೇರುತ್ತಿರುವುದರಿಂದ ಭೂಮಿಯ ಮೇಲ್ಮೈ ಮೇಲೆ ಈ ಬದಲಾವಣೆಯಿಂದ ಭೂಮಿಯ ವೇಗ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿದೆ ಎನ್ನಲಾಗಿದೆ.

© Ai generated

ಈ ವಿದ್ಯಮಾನ ಇಲ್ಲದಿದ್ದರೂ ಸಹ ಭೂಮಿಯ ಪರಿಭ್ರಮಣೆಯಲ್ಲಿ ಬದಲಾವಣೆ ನಡೆಯುತ್ತದೆ, ಆಗ ನಾವು ಸಾರ್ವತ್ರಿಕ ಸಮಯ ಅಥವಾ UTC ಎನ್ನುವ ಸಮಯದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಅಂತಹ ಸಂದರ್ಭ ಬಂದಲ್ಲಿ ಆ ಸಾರ್ವತ್ರಿಕ ಸಮಯಕ್ಕೆ ‘ಲೀಪ್ ಸೆಕೆಂಡ್ (leap second)’ ಎಂದು ಒಂದು ಸೆಕೆಂಡನ್ನು ಸಮಯ ತಜ್ಞರು ಸೇರಿಸುತ್ತಾರೆ. 1972 ರಿಂದ ಇಲ್ಲಿಯವರೆಗೆ 27 ಬಾರಿ ಹೀಗೆ ಲೀಪ್ ಸೆಕೆಂಡನ್ನು ಸೇರಿಸಲಾಗಿದೆ. ಆದರೆ ಸ್ವಾಭಾವಿಕವಾಗಿಯೇ ಭೂಮಿಯ ಪರಿಭ್ರಮಣೆಯ ವೇಗ ಕಳೆದ 20 ವರ್ಷಗಳಿಂದ ಹೆಚ್ಚುತ್ತಿರುವುದರಿಂದ ಮುಂದಿನ ಲೀಪ್ ಸೆಕೆಂಡನ್ನು 2026ಕ್ಕೆ ಸೇರಿಸಬೇಕೆಂದು ಸಮಯ ತಜ್ಞರು ಊಹಿಸಿದ್ದರು. ಆದರೆ ಈ ಧೃವದ ಮಂಜುಗಡ್ಡೆಯ ಕರಗುವಿಕೆಯಿಂದ ಭೂಮಿಯ ಪರಿಭ್ರಮಣೆಯ ವೇಗ ಕಡಿಮೆಯಾಗುತ್ತಿದ್ದು, ಸೇರಿಸಬೇಕಿದ್ದ ಆ ಲೀಪ್ ಸೆಕೆಂಡನ್ನು 2029ರ ವರೆಗೆ ಸೇರಿಸದೇ ಮುಂದೂಡಲಾಗುತ್ತಿದೆ. ಇದು ನಮ್ಮ ನಿಮ್ಮೆಲ್ಲರ ಕೊಡುಗೆ ಮರೆಯದಿರಿ…

ಕಾಲವನ್ನು ತಡೆಯೋರು ಯಾರೂ ಇಲ್ಲ! ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ! ಎಂಬ ಕನ್ನಡ ಚಲನಚಿತ್ರದ ಹಾಡೊಂದು ಹೀಗೇ ನೆನಪಾಗಿ ಮುಖದಲ್ಲಿ ಮಂದಹಾಸ ಮೂಡುತ್ತಿದೆ.

© KEREM YUCEL_AFP via Getty Images

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
   
ಬೆಂಗಳೂರು ನಗರ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.