ಅದೊಂದು ಬೇರೆಯದೇ ಅನುಭೂತಿ

ಅದೊಂದು ಬೇರೆಯದೇ ಅನುಭೂತಿ

© ಧನರಾಜ್ ಎಂ.

ಮುಂದುವರಿದ ಭಾಗ

ಬೆಳಗ್ಗೆದ್ದು ಕಾಫಿ-ತಿಂಡಿ ಮುಗಿಸಿದ ಈ ಶಾಲಾ ಪ್ರವಾಸಿ ತಂಡ ಬಳ್ಳಾಲರಾಯನದುರ್ಗಕ್ಕೆ ಚಾರಣ ಹೋದಾಗ, ಸ್ಥಳೀಯ ಹೋಂಸ್ಟೇನಲ್ಲಿ ತಂಗಿದ್ದ ಸುಮಾರು ಇಪ್ಪತ್ತು ಜನ ಗಡವಾಗಳು ಸ್ಕೂಲು ಮಕ್ಕಳ ಹಿಂದೆಯೇ ಬರುತ್ತಿದ್ದರು. ಬೆಟ್ಟದೇರಿ ಏರಿದ ಕೂಡಲೇ ಅವರಲ್ಲಿ ಹಲವರಿಗೆ ಮೈಮೇಲೆ ದೆವ್ವ ಬಂದೇಬಿಟ್ಟಿತು. ಬಾಟಲಿ ಹಿಡಿದು, ಟೀಷರ್ಟ್ ಬಿಚ್ಚಿದ ಅವರು, (ಪುಣ್ಯಕ್ಕೆ ಚಡ್ಡಿ ಬಿಚ್ಚಲಿಲ್ಲ!)  ಇಂಗ್ಲೀಷರ ಖಾಸಾ ಪುತ್ರರಂತೆ ದೊಂಬರಾಟ ಮಾಡತೊಡಗಿದರು. ಹೋಂಸ್ಟೇಯವರ ತಾಳ ಬೇರೆ ಅದಕ್ಕೆ.

ತಮ್ಮದೇ ತಂಡದವರ ಎಚ್ಚರಿಕೆಯ ಕಿವಿಮಾತನ್ನೂ ಕಡೆಗಣಿಸಿ ಕವಿತಾ ಮೇಡಂ, ಆದದ್ದಾಗಲಿ ಎಂದು ಕಟುಮಾತಿನಲ್ಲಿ ಗದರಿಸಿದರು, ಮುಖ್ಯೋಪಾಧ್ಯಾಯರೂ ಆಕ್ಷೇಪಿಸಿದರು. ಸದ್ಯಕ್ಕೆ ಅಚಾತುರ್ಯಗಳೇನೂ ಘಟಿಸದೇ ಆ ಗಡವಾಗಳು ಬಾಲ ಮುದುರಿಕೊಂಡರು. ಆದರೆ ಆ ರೆಸಾರ್ಟ್ನ ಮೇಸ್ತ್ರಿಯೇ ಮುಖ್ಯೋಪಾಧ್ಯಾಯರೊಂದಿಗೆ ವಾಗ್ವಾದಕ್ಕೆ ನಿಂತು, “ನೀವ್ ಯಾರ್ರೀ ಕೇಳೋಕ್ಕೆ? ನಾವಿಲ್ಲಿ ಲೋಕಲ್ ಗೊತ್ತಾ?” ಎಂದ.

© ಧನಂಜಯ ಜೀವಾಳ

ಅಷ್ಟರಲ್ಲಿ ನಮ್ಮ ಶಾಲಾ ಪ್ರವಾಸಿ ತಂಡದೊಂದಿಗೆ ಗೈಡ್ ಆಗಿ ಬಂದಿದ್ದ ಸ್ಥಳೀಯನೇ ಆಗಿದ್ದ ಅರ್ಜುನ, ‘ಮಗನೇ, ದುಡ್ಡು ಸಿಗುತ್ತೆ ಅಂದ್ರೆ, ಎಂಥಾ ಹೀನ ಕೆಲಸ ಸಹ ಮಾಡ್ತೀರಿ. ನಿನ್ನಪ್ಪಂದಲ್ಲ ಈ ಕಾಡು, ಹೋಗು ನಿನ್ನ ಲೋಕಲ್ಗಳನ್ನೇ ಕರ್ಕೊಂಡ್ ಬಾ, ಎಷ್ಟು ಜನಾ ಬರ್ತಾರೋ ನೋಡೇ ಬಿಡ್ತೀನಿ’ ಎಂದ.  ಮುಖ್ಯೊಪಾದ್ಯಾಯರಿಗೂ ಅವರ ಉಢಾಫೆಯ ವರ್ತನೆ ನೋಡಿ ರೋಸಿ ಹೋಗಿತ್ತು. ‘ಇಂಥಾ ಇಕೋಸೆಂಸಿಟಿವ್ ಏರಿಯಾದಲ್ಲಿ ಅತಿಕ್ರಮ ಪ್ರವೇಶ ಮಾಡೋದಲ್ದೇ, ನ್ಯೂಸೆನ್ಸ್ ಬೇರೆ ಮಾಡ್ತೀರಾ’ ಎಂದು ಗದರಿಸಿದರು.

ಅಷ್ಟರಲ್ಲಿ ಈ ಶಾಲಾಮಕ್ಕಳ ಪ್ರವಾಸೀ ತಂಡದ ಹಿಂದೆಯೇ ನಡೆದುಕೊಂಡು ಬರುತ್ತಿದ್ದ ಗಿರೀಶ್ ಮೇಷ್ಟ್ರ ಜೊತೆಯೇ ಮಾತನಾಡುತ್ತಿದ್ದ ಸ್ಥಳೀಯ ವನ್ಯಜೀವಿ ಛಾಯಾಗ್ರಾಹಕ ದುರ್ಗದಹಳ್ಳಿ ಮಧುಸೂಧನ್ ಮತ್ತು ಅವರ ಸಂಗಡಿಗರು ಅ ತಂಟೆಕೋರ ಗಢವಾಗಳನ್ನು ಮಾತಿನಲ್ಲೇ ಬೆಂಡೆತ್ತಿದರು. ಗಿರೀಶರತ್ತ ತಿರುಗಿದ ಮಧುಸೂಧನ್ “ಸ್ವಾಭಿಮಾನ, ಆತ್ಮಾಭಿಮಾನ, ಘನತೆ-ಗೌರವವನ್ನೇ ಮೈತಳೆದಂತೆ ಹೆಮ್ಮೆಯಿಂದ ನಾಡಿಗೇ ಅನ್ನವಿಕ್ಕುತ್ತಿದ್ದ ನಮ್ಮ ರೈತರು ಮೂರುಕಾಸಿನಾಸೆಗೆ ಹೋಂಸ್ಟೇ, ರೆಸಾರ್ಟ್ಗಳ ನೆಪದಲ್ಲಿ ಯಾರೋ ಕುಡಿದೆಸೆದ ಬಾಟಲಿ ಹೆರಕಿ ಜೋಡಿಸುವ, ಯಾರೋ ಮಲಗೆದ್ದು, ಹೊಲಸೆಬ್ಬಿಸಿದ ಬೆಡ್ಷೀಟನ್ನು ಒಗೆಯುವ, ಕುಡಿದು ಹೆಚ್ಚಾಗಿ ಕಕ್ಕಿದವರ ವಿಸರ್ಜನೆಗೆ ಟಿಷ್ಯೂ ಪೇಪರ್ ಒದಗಿಸುವುದನ್ನು ನೋಡಿದರೆ ಭೂಮಿ ಬಿರಿಯಬಾರದೇ ಎನಿಸುತ್ತದೆ.  ಕಾಡು ಹೋದರೆ ಒಂದು ರೋಮ ಹೋಯ್ತು ಎನ್ನುವವರೇ ಜಾಸ್ತಿ” ಎಂದು ತನ್ನ ಸಿಟ್ಟು ಹೊರಹಾಕಿದರು.

© ಧನಂಜಯ ಜೀವಾಳ

ಮಧುಸೂಧನರೊಟ್ಟಿಗೆ ಬಂದಿದ್ದ ಹಳೇಕೋಟೆ ವಿನಯ, “ನಮ್ಮೂರಿನ ಬಗ್ಗೆ ನಾವು ಪರ ಊರಿನ ನಮ್ಮ ಬಂಧುಗಳು, ಸ್ನೇಹಿತರ ಬಳಿ ‘ನಮ್ಮೂರಿನಲ್ಲಿ ಆ ಗುಡ್ಡ ಇದೆ, ಈ ಜಲಪಾತ ಇದೆ, ಇಂಥಾ ಕಾಡು ಇದೆ, ಇಷ್ಟೊಂದು ಪ್ರಾಣಿಗಳಿವೆ, ಇಷ್ಟು ಮಂಜಿದೆ, ಅಷ್ಟು ಮಳೆ ಬರುತ್ತೆ, ಅಲ್ಲಿ ಕಣಿವೆ ಇದೆ, ಇಲ್ಲಿ ವಿಶಾಲವಾದ ಬಯಲಿದೆ, ಅಷ್ಟೆತ್ತರದ ಮರಗಳಿವೆ, ತಣ್ಣನೆಯ ಗಾಳಿ ಇದೆ, ಶುಭ್ರವಾದ ನೀರಿನ ಝರಿಗಳಿವೆ, ಹಸುರಿನ ಗದ್ದೆಗಳಿವೆ, ಕಾಡುಕೋಳಿಗಳು ಕೆಕ್ಕರಿಸುತ್ತವೆ, ಕಾಟಿ ರಸ್ತೆ ಬದಿ ನಿಂತು ದಿಟ್ಟಿಸುತ್ತದೆ, ನವಿಲುಗಳು ಗರಿಗೆದರುತ್ತವೆ, ಕೆರೆಕಲ್ಲಿನ ಮೇಲೆ ಆಮೆಗಳು ಬಿಸಿಲು ಕಾಯಿಸುತ್ತವೆ, ಆಗಸದೆತ್ತರದ ಬಿದಿರುಮೆಳೆಗಳಿವೆ, ಮರದಿಂದ ಮರಕ್ಕೆ ಹಾರಾಡುವ ಕೆಂಜಳಿಲುಗಳಿವೆ, ಅತ್ತ ಸ್ವಾದಿಷ್ಠ ಮಳಲಿ ಮೀನಿವೆ, ಆನೆ, ಸಿಂಗಳೀಕ, ಮುಸಿಯ, ಕಡವೆ, ಹುಲಿ, ಮುಳ್ಳುಹಂದಿ, ಬರ್ಕ, ಉಡ, ತಾಟೀನ್ಹಕ್ಕಿ, ಹಾರುವ ಓತಿ, ಮಂಡಲ, ಕಾಳಿಂಗ, ನಾಗರ, ಹಸಿರು ಹಾವು, ಚಿಟ್ಟೆ, ಹದ್ದು, ಗೂಬೆ, ಬಾವಲಿ, ಜೀರುಂಡೆ, ಕಡಜ, ಸಿಕಾಡಾ, ಕಪ್ಪೆ, ಕಾಡುಹಂದಿ, ಕಾಡುಬೆಕ್ಕು, ಅಡ್ಡಡ್ಡ ವಿಚಿತ್ರವಾಗಿ ಚಲಿಸುವ ಏಡಿಗಳಿವೆ, ಮಳೆಗಾಲದ ರುಚಿಕರ ಕಳಲೆಯಿದೆ, ಬಿಡುವಿಲ್ಲದೇ ಸುತ್ತುವ ಚಗಳಿ ಇರುವೆ ಇವೆ, ನಮ್ಮಲ್ಲಿ ಅವಿಭಕ್ತ ಕುಟುಂಬಗಳಿವೆ, ನಮ್ಮ ರೈತರು ಕಷ್ಟಜೀವಿಗಳು, ಅನ್ನದಾತರು, ಸ್ವಾವಲಂಬಿಗಳು. ನಮ್ಮಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಿದೆ, ಜನಜೀವನ ನೈತಿಕತೆಯಿಂದಿದೆ, ಜಗತ್ತಿನ ಅಮೂಲ್ಯ ಹದಿನೆಂಟು ಜೀವವೈವಿಧ್ಯ ತಾಣಗಳಲ್ಲಿ ನಮ್ಮ ಚಾರ್ಮಾಡಿ, ಶಿರಾಡಿ, ಕುದುರೆಮುಖ ಇತ್ಯಾದಿಗಳೂ ಇವೆ, ದಕ್ಷಿಣ ಭಾರತದ ಕೋಟ್ಯಾಂತರ ಜನರಿಗೆ ನಮ್ಮಲ್ಲಿ ಉಗಮವಾಗುವ ನದಿಗಳಿಂದ ನೀರು ಕೊಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ದಿನಗಳಿನ್ನು ಮುಗಿಯಲಿವೆ.  ಇನ್ನು ಇದೇ ರಾಗವನ್ನು ಹಾಡಿದರೆ ನಮ್ಮನ್ನು ಭೂರಿಬಸವ ಎಂದು ಅಪಹಾಸ್ಯ ಮಾಡಲಿದ್ದಾರೆ ಜೋಪಾನ” ಎಂದು ಗಹಗಹಿಸಿ ನಗಾಡಿದ.

ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರಿನ ಹಾಸಿನಂತೆ ಕಾಣುತ್ತಿದ್ದ ಆ ಬೆಟ್ಟಗಳ ಸಾಲು ಆ ಮಕ್ಕಳ ಸೈನ್ಯವನ್ನು ಮಂತ್ರಮುಗ್ಧಗೊಳಿಸಿತು.  ಈ ಜಗತ್ತಿನಲಿ ಇದಕ್ಕಿಂತಲೂ ಅಮೂಲ್ಯವಾದುದು ಮತ್ತೇನೂ ಇರಲಾರದೆಂದೆನಿಸಿತು.  ತಾವು ಎಲ್ಲಿಂದ ಬಂದಿದ್ದೇವೆ, ಎಲ್ಲಿದ್ದೇವೆ, ಎತ್ತ ಹೋಗಲಿಕ್ಕಿದೆ ಎಂಬುದನ್ನು ಸಹಾ ಮರೆಸುವಂತೆ ಎತ್ತ ನೋಡಿದರತ್ತ ಇಡೀ ಜಗತ್ತಿನ ಸೊಬಗೇ ಇಲ್ಲಿ ಬಂದು ಸುರಿದು ಬಿದ್ದಿದೆಯೋ ಎಂಬಂತೆ ಎಲ್ಲರ ಬಾಯಿಯನ್ನು ಕಟ್ಟಿ ಹಾಕಿತು.

ಮಧ್ಯಾಹ್ನದ ಊಟ ಮುಗಿಸಿದ ಶಾಲಾ ತಂಡ ಆ ದಿನ ಮಧ್ಯಾಹ್ನವನ್ನು ಯಾವುದೇ ಪ್ರಯಾಣ ಮಾಡದೇ ಅದೇ ಬಳ್ಳಾಲರಾಯನದುರ್ಗ ಪ್ರದೇಶದಲ್ಲೇ ಜಲಮೂಲಗಳು, ಔಷಧೀಯ ಸಸ್ಯಗಳು, ಆರ್ಕಿಡ್ ಮುಂತಾದುವುಗಳ ಕುರಿತು ಮಾಹಿತಿ ಕಲೆಹಾಕುವುದೆಂದು ನಿರ್ಧರಿಸಿತು.  ಎರಡು ದಿನಗಳ ನಿರಂತರ ಪ್ರಯಾಣದಿಂದ ಆಯಾಸಗೊಂಡಿದ್ದ ಅನೇಕರು ಆ ಹಸುರ ರಾಶಿಯ ಮಡಿಲಲ್ಲಿ ತಂಗಾಳಿಯ ಅಡಿಯಲ್ಲಿ ಜಗತ್ತಿನೆಲ್ಲ ಐಶ್ವರ್ಯವೆಲ್ಲವೂ ತಮಗೇ ದಕ್ಕಿದೆ ಎಂಬ ತೃಪ್ತಿಯಿಂದ ಬದುಕಿನ ಈವರೆಗಿನ ಆಯಾಸವೆಲ್ಲವೂ ಪರಿಹಾರವಾಯ್ತೆಂಬ ನೆಮ್ಮದಿಯಿಂದ ನಿದಿರಾದೇವಿಯ ಸಮ್ಮೋಹನಕ್ಕೊಳಗಾಗಿ ಸಂಜೆ ಐದರವರೆಗೂ ವಿಶ್ರಾಂತಿ ಪಡೆದರು.

ಮೋಹನ್ ರಾಜ್, ಗಿರೀಶ್ ಮೇಸ್ಟ್ರು ಜತೆಗೊಂದಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಡಿನಲ್ಲಿ ಇರುವ ಈ ಸಮಯದ ಸುಸಂದರ್ಭವನ್ನು ಬಳಸಿಕೊಳ್ಳದೇ ಬಿಡಬಾರದೆಂದೆಣಿಸಿ ಅಲ್ಲೇ ಸಮೀಪದಲ್ಲಿ ಸಳಸಳನೆ ಹರಿಯುತ್ತಿದ್ದ ಸರುಕಲಿನ ಹಾದಿಯಗುಂಟ ಆ ನೀರಿನ ಹರಿವಿನ ಮೂಲವನ್ನು ಹುಡುಕಲೇಬೇಕೆಂಬ ಹಂಬಲದಿಂದ ಆ ಕಡಿದಾದ ಹೆಬ್ಬಂಡೆಗಳನ್ನು ಸುತ್ತಿ ಬಳಸಿ ಉತ್ಸಾಹದಿಂದಲೇ ಮೈಯೆಲ್ಲ ಕಣ್ಣಾಗಿ ನಡೆಯುತ್ತಿದ್ದರು. ಈ ಹಿಂದೆ ನೋಡಿರದಿದ್ದ ಸಸ್ಯ ಪ್ರಭೇದಗಳು, ಕಪ್ಪೆಗಳು, ಮೀನುಗಳು, ಓತಿಕ್ಯಾತಗಳು ಮುಂತಾದವನ್ನು ನೋಡುತ್ತಾ ಅಚ್ಚರಿಗೊಳ್ಳುತ್ತಾ, ತಮ್ಮ ಗುರುಗಳ ಬಳಿ ಅವುಗಳ ವಿಚಾರವಾಗಿ ಕೇಳಿ ತಿಳಿದುಕೊಳ್ಳುತ್ತಿದ್ದರು.

ಇದ್ದಕ್ಕಿದ್ದಂತೆ ಯಾಕೋ ಮೋಹನ್ ರಾಜ್‌ರವರಿಗೆ ತಮ್ಮೊಡನೆ ಹೊರಟ ವಿದ್ಯಾರ್ಥಿಗಳ ಸಂಖ್ಯೆಗೂ, ಈಗ ತಮ್ಮೊಡನೆ ಇರುವವರ ಸಂಖ್ಯೆಗೂ ವ್ಯತ್ಯಾಸವಾಗಿರುವುದು ಗಮನಕ್ಕೆ ಬಂತು.  ಬೇಸ್ ಕ್ಯಾಂಪಿನಿಂದ ಹೊರಟಾಗ ಬಂದಿದ್ದ ಹುಡುಗಿಯರು ಆರು ಜನ, ಹುಡುಗರು ಐದು ಜನ.  ಈಗ ತಮ್ಮೊಡನಿರುವುದು ಮೂವರು ಹುಡುಗರು, ಮೂವರು ಹುಡುಗಿಯರು ಮಾತ್ರ!!!  ಎಲ್ಹೋದರು ಉಳಿದ ಐದು ಜನಾ!!??  ಗಾಬರಿಗಿಟ್ಟುಕೊಂಡಿತು ಈ ಇಬ್ಬರು ಶಿಕ್ಷಕರುಗಳಿಗೆ.  ತಮ್ಮೊಡನಿದ್ದ ವಿದ್ಯಾರ್ಥಿಗಳಲ್ಲಿ ವಿಚಾರಿಸಿದರೆ, ಸರ್, ನಮ್ಮ ಜೊತೆಯೆ ಈವರೆಗೂ ಇದ್ದರು.  ನೀವು ಮುಂದೆ ಮುಂದೆ ಹೋಗುತಿದ್ದುದನ್ನು ನೋಡಿಕೊಂಡು ನಾವು ನಿಮ್ಮನ್ನೇ ಹಿಂಬಾಲಿಸಿದೆವು.  ಈಗ ನೋಡಿದರೆ, ಆ ಐದು ಜನರೂ ಇಲ್ಲ.  ಎಲ್ಲರ ಮುಖ ಪೆಚ್ಚಾಗಿತ್ತು.  ಏನೋ ಎಂತೋ ಎಂದು ಗಲಿಬಿಲಿಗೊಂಡಿದ್ದರು.  ಹತ್ತನೇ ತರಗತಿಯ ರಶ್ಮಿಯಂತೂ ಅಳಲೇ ಶುರು ಮಾಡಿದಳು.  ಅವಳೊಡನೆ ಇದ್ದ ನಾಗಲಕ್ಷ್ಮಿ “ಅಲ್ಲೊಂದು ಕಡೆ ಯಾರೋ ಕಾಡಿನ ಹುಲ್ಲನ್ನು ಕೊಯ್ದು ಒಂದೆಡೆ ರಾಶಿ ಮಾಡಿಟ್ಟಂತೆ ಇತ್ತು.  ಸುತ್ತಲೂ ಜನವಸತಿಯೇ ಇಲ್ಲದೆಡೆ ಹುಲ್ಲು ಕೊಯ್ದು ಈ ಕಾಡಿ ನಡುವೆ ರಾಶಿಯನ್ನು ಯಾರಾದರೂ ಯಾಕಾದರೂ ಮಾಡಿಟ್ಟಿರ್ತಾರೆ? ಅದೇನಂತ ನೋಡಣ ಬನ್ನಿ ಅಂತ ಮುಕುಂದ ನಮ್ಮನ್ನೂ ಕರೆದ. ನಾವು ಮೋಹನ್ರಾಜ್ ಸರ್ ಬೈತಾರೆ, ಅಂತ ಸೀದಾ ಬಂದ್ವಿ” ಎಂದಳು.  ಇದನ್ನು ಕೇಳಿಸಿಕೊಂಡ ಗಿರೀಶ್ ಮೇಷ್ಟ್ರು, “ಅಯ್ಯೋ, ಹೌದಾ, ಬನ್ನಿ, ಬನ್ನಿ, ಏನದ್ರೂ ಅನಾಹುತವಾಗೋದ್ರೊಳಗೆ ಅವರನ್ನು ಅಲ್ಲಿಂದ ದೂರಕ್ಕೆ ಕರೆತರಬೇಕು” ಎಂದವರೇ, ತಮ್ಮ ಕೈಯ್ಯಲ್ಲಿದ್ದ ಆರಡಿ ಕೋಲಿನೊಂದಿಗೆ ಗಾಬರಿಯಿಂದ ಆ ಐವರು ಇರಬಹುದಾದ ದಿಕ್ಕಿಗೆ ಏದುಸುರಿನಿಂದ ಓಡತೊಡಗಿದರು.  ಅವರಲ್ಲೊಬ್ಬನ ಹೆಸರಾದ ಮಂಜುನಾಥನ ಹೆಸರನ್ನು ಜೋರಾಗಿ ಕೂಗುತ್ತ “ಅಲ್ಲಿಂದ ಬನ್ನಿ ಬನ್ನಿ, ಬೇಗ ಬನ್ನಿ.  ಮಂಜೂ, ಒಂದು ಕ್ಷಣವೂ ಅಲ್ಲಿರಬೇಡಿ, ಬೇಗ ಬನ್ನಿ.  ವಿದ್ಯಾ, ಸೀಮಾ, ಮುಕುಂದಾ, ಮಹೇಶಾ” ಮೇಷ್ಟ್ರ ಹಿಂದೆಯೇ ಮೋಹನ್ರಾಜ್ ಹಾಗೂ ಇನ್ನುಳಿದ ಮಕ್ಕಳೂ ಸಹಾ ಹಿಂಬಾಲಿಸಿ ಓಡತೊಡಗಿದರು. ಒಂದೆರಡು ಫರ್ಲಾಂಗ್ ಓಡಿದ ನಂತರ ಒಂದು ಬಿದಿರಿನ ಹಿಂಡಲಿನ ಕೆಳಗೆ ನಾಲ್ಕಡಿಗೂ ಎತ್ತರವಾಗಿ ತೊಪ್ಪೆ ಬಿದ್ದಿದ್ದ, ಆ ಕಾಡಿನಲ್ಲಿ ಯಥೇಚ್ಛವಾಗಿ ಬೆಳೆದಿದ್ದ ಆನೆಹುಲ್ಲಿನ ರಾಶಿಯನ್ನು ಮಹೇಶ ಮತ್ತು ಮುಕುಂದ ಮಾರುದ್ದದ ಕೋಲಿನಿಂದ ಜಿಬುಕುತಿದ್ದರು. ಗಂಟಲು ಹರಿದುಹೋಗುವಂತೆ ಕೂಗುತ್ತಿದ್ದರೂ ಅದರ ಕಡೆಗೆ ಒಂದಿನಿತೂ ಗಮನವೀಯದೆ ತಮ್ಮದೇ ಲೋಕದಲ್ಲಿ ವಿಹರಿಸುತಿದ್ದ ಆ ಐವರಿಗೂ ತಾವುಗಳು ಅತ್ಯಂತ ಅಪಾಯದ ಸನ್ನಿವೇಶದಲ್ಲಿರುವುದರ ಅರಿವೇ ಇರಲಿಲ್ಲ.  ವಿದ್ಯಾ ಮತ್ತು ಸೀಮಾ ಇಬ್ಬರೂ ಆ ಹುಲ್ಲಿನ ರಾಶಿಯನ್ನು ಆ ಕಾಡಿನಲ್ಲಿ ಯಾರು, ಯಾಕಾಗಿ ಮಾಡಿರಬಹುದೆಂದು ಮಂಜುನಾಥನೊಂದಿಗೆ ಸಂಶೋಧನೆ ನಡೆಸುತ್ತಿದ್ದರು. ಗಿರೀಶ್ ಮೇಸ್ಟ್ರು ಹೋದಹೋದವರೇ ಮಹೇಶ ಮತ್ತು ಮುಕುಂದನ ಮುಕುಳಿಯ ಕೆಳಗಿನ ತೊಡೆಯ ಹಿಂಭಾಗದ ಮೆತ್ತನೆಯ ಮಾಂಸದ ತುಣುಕುಗಳಿಗೆ ರಪ್ಪರಪ್ಪನೆ ಪ್ಯಾಂಟು ಹರಿದುಹೋಗುವಂತೆ ಇಕ್ಕರಿಸಿದರು. ಅದನ್ನು ನೋಡಿದ ಮಂಜ ಎತ್ತಕಡೆ ಮಾಯವಾಗಿ ಹೋದ ಅಂತನೇ ಗೊತ್ತಾಗಲಿಲ್ಲ.  ಈ ಹುಡುಗಿಯರಿಬ್ಬರೂ ತಮಗೆಲ್ಲೆಲ್ಲಿಗೆ ಹೊಡೆತ ಬೀಳಬಹುದೆಂದು ಅಪ್ರತಿಭರಾಗಿ ಬೆಪ್ಪಿಯರಂತೆ ದಯನೀಯರಾಗಿ ಮೊಹನ್ರಾಜ್ ಮಾಸ್ತರರತ್ತ ದೈನ್ಯತೆಯಿಂದ ನೋಡತೊಡಗಿದರು.

ಓಡಿ ಬಂದ ಸುಸ್ತು, ಕೂಗಿ, ಕೂಗಿ ಆಗಿದ್ದ ಆಯಾಸ, ಕೂಗಿದಾಗ ಅದಕ್ಕೆ ಪ್ರತಿಕ್ರಿಯಿಸದಿದ್ದಕ್ಕೆ ಬಂದಿದ್ದ ಸಿಟ್ಟು ಇವೆಲ್ಲದ್ದರಿಂದ ಥರಥರನೆ ನಡುಗುತ್ತಿದ್ದ ಗಿರೀಶ್ ಮೇಷ್ಟ್ರು ಒಂದೇ ಉಸಿರಿಗೆ “ಓಡಿ ಇಲ್ಲಿಂದ, ಬೇಗ, ಬೇಗ’’ ಎಂದು ಆ ಹುಡುಗಿಯರ ಕಡೆ ದುರದುರನೆ ನೋಡಿ ಅಬ್ಬರಿಸಿದರು. ಅಂತೂ ಇಂತೂ ಆ ಹುಲ್ಲಿನ ರಾಶಿಯಿಂದ ಕನಿಷ್ಠ ಎರಡು ಫರ್ಲಾಂಗ್ ದೂರದವರೆಗೆ ಓಡಿ, ನಂತರ ಬೇಸ್ ಕ್ಯಾಂಪ್ ತಲುಪಿದ ಈ ಹದಿಮೂರು ಜನರ ತಂಡ, ಸುಧಾರಿಸಿಕೊಳ್ಳಲು ಕಡಿಮೆ ಎಂದರೂ ಒಂದು ಗಂಟೆ ತೆಗೆದುಕೊಂಡಿತು.

ಸಂಜೆಯ ಆರು ಗಂಟೆಯ ಕಾಫಿ ಅವಲಕ್ಕಿ ಸಮಾರಾಧನೆಯ ಸಮಯದಲ್ಲಿ ಮಾನ್ಯ ಹೆಡ್ಮಾಷ್ಟ್ರು ಆ ಹನ್ನೊಂದು ಜನ ಉತ್ಸಾಹಿಗಳನ್ನು ವೇದಿಕೆಗೆ ಕರೆದರು.  ಅವರಲ್ಲಿ ಆ ಐದು ಜನ ಅತ್ಯುತ್ಸಾಹಿಗಳನ್ನು ಅಲ್ಲಿಯೇ ನಿಲ್ಲಲು ಹೇಳಿ ಉಳಿದ ಆರು ಜನರಿಗೆ ವಾಪಾಸ್ಸು ಇತರೆಲ್ಲರೊಡನೆ ಸೇರಿಕೊಳ್ಳಲು ಹೇಳಿದರು. ಈ ಐವರು ಮಾಡಿದ ಸಾಹಸವನ್ನು ಇಡೀ ಪ್ರವಾಸಿ ತಂಡಕ್ಕೆ ನಿರೂಪಣೆ ಮಾಡಿ ಹೇಳಲಾಯಿತು. ಆಗ ವಿವರ ನೀಡಲು ಮೇಲೆದ್ದ ಗಿರೀಶ್ ಮೇಷ್ಟ್ರು, “ಚಾರಣ ಹೋದಾಗ ಹೇಗೆ ನಡೆದುಕೊಳ್ಳಬೇಕೆಂದು ನಿಮಗೆಲ್ಲರಿಗೂ ಈ ಹಿಂದೆಯೇ ಹೇಳಿದ್ದೆವು. ತಂಡವನ್ನು ಬಿಟ್ಟು ಅಥವಾ ತಂಡದ ನಾಯಕನ ಗಮನಕ್ಕೆ ಬಾರದಂತೆ ಪ್ರತ್ಯೇಕವಾಗಿ ಹೋಗುವುದಾಗಲೀ, ಹಿಂದೆಯೇ ಉಳಿಯುವುದಾಗಲೀ ಮಾಡಬಾರದೆಂದು ಗಿಣಿಗೆ ಹೇಳುವಂತೆ ಹೇಳಿದ್ದೆವಲ್ವೇ?  ನೀವು ಮಾಡಿದ್ದ ಕೆಲಸವಾದರೂ ಎಂಥದ್ದು ಎಂಬುದು ನಿಮಗೆ ಗೊತ್ತೇ? ಕಾಳಿಂಗ ಸರ್ಪದ ಹೆಸರು ಕೇಳಿದ್ದೀರಾ?  ಹದಿನೆಂಟು ಇಪ್ಪತ್ತಡಿ ಬೆಳೆಯುವ ಈ ಹಾವು ಆಹಾರಕ್ಕಾಗಿ ತಿನ್ನೋದೇ ಇತರ ಪ್ರಭೇದದ ಹಾವುಗಳನ್ನ. ಇದರ ಒಂದು ಕಡಿತ ಒಂದು ದೊಡ್ಡ ಆನೆಯನ್ನು ಸಹ ಕೊಲ್ಲಬಲ್ಲದು. ಇದು ಮೊಟ್ಟೆಯಿಟ್ಟು, ಕಾವು ಕೊಟ್ಟು ಮರಿಮಾಡುವ ಸಮಯಕ್ಕೆ ಒಂದಷ್ಟು ಹುಲ್ಲನ್ನು ಬಾಲದಿಂದ ಬಡಿದು, ನೂಕಿಕೊಂಡು ತಂದು ಮೆದೆಯಂತೆ ರಾಶಿ ಹಾಕಿಕೊಳ್ಳುತ್ತದೆ.  ಆ ಹುಲ್ಲಿನ ಮೆದೆಯಡಿಯಲ್ಲಿ ಮೊಟ್ಟೆಗಳನ್ನು ಜೋಡಿಸಿಕೊಂಡು ಕಾವು ಕೊಡಲಾರಂಬಿಸುತ್ತದೆ. ತನಗೆ ಆಹಾರ ಸಂಗ್ರಹಿಸಲು ಹೊರಹೋಗುವ ಸಂದರ್ಭದಲ್ಲಿ ತನ್ನ ಸಂಗಾತಿಯನ್ನು ಮೊಟ್ಟೆಗಳ ಕಾವಲಿಗೆ ನಿಲ್ಲಿಸುವ ಈ ಕಾಳಿಂಗ ಮೊಟ್ಟೆಗಳಿಗೆ ಕಾವು ಕೊಡುವ ಸಮಯದಲ್ಲಿ ತೀರಾ ಆಕ್ರಮಣಕಾರಿಯಾಗಿರುತ್ತೆ. ದೂರದಿಂದಲೇ ನಮ್ಮನ್ನು ಗಮನಿಸುವ ಇವು ಅತ್ಯಂತ ವೇಗವಾಗಿ ಆಕ್ರಮಣ ನಡೆಸುತ್ತವೆ. ನೀವು ಐವರಿಗೂ ಇವತ್ತು ಸಿಕ್ಕಿರೋದು ಪುನರ್ಜನ್ಮ ತಿಳ್ಕಳಿ, ಕಂತ್ರಿಗಳಾ!!”.

ಹಿಂದಿನ ದಿನದಂತೆಯೇ ಇಂದೂ ಸಹಾ ರಾತ್ರಿಯೂಟದ ಅಡುಗೆಗೆ ಸಿದ್ಧತೆ, ಟೆಂಟುಗಳ ಅಳವಡಿಕೆ, ಕ್ಯಾಂಪ್ ಫೈರಿನ ಹೂಡುವಿಕೆ ನಡೆಯಿತು. ಹಿಂದಿನ ದಿನ ಯಾರ್ಯಾರು ಟೆಂಟುಗಳಲ್ಲಿ ರಾತ್ರಿ ಕಳೆದಿದ್ದರೋ, ಅವರುಗಳು ಇವತ್ತು ಕಡ್ಡಾಯವಾಗಿ ಬಸ್ಸಿನಲ್ಲಿಯೇ ವಿಶ್ರಮಿಸಬೇಕಾಗಿತ್ತು. ಟೆಂಟ್ ವಾಸ್ತವ್ಯದ ಸಂತಸ ಎಲ್ಲರಿಗು ಲಭ್ಯವಾಗಲೆಂದು ಹೆಡ್ಮಾಷ್ಟ್ರೆ ಈ ಉಪಾಯ ಮಾಡಿದ್ದರು.

ನಾಳೆ ಹೋಗಲಿರುವ ಮುತ್ತೋಡಿ ಅಭಯಾರಣ್ಯಕ್ಕೆ ಪೂರ್ವಭಾವಿಯಾಗಿ ಒಂದಷ್ಟು ವಿಚಾರಗಳನ್ನು ಮಕ್ಕಳು ಹಾಗೂ ಸಹೋದ್ಯೋಗಿಗಳ ಗಮನಕ್ಕೆ ತರಲೆಂದು ಗಿರೀಶ್ ಮೇಷ್ಟ್ರು ತಮ್ಮ ಈ ಹಿಂದಿನ ಮುತ್ತೋಡಿ ಭೇಟಿ ಕಾಲದ ಘಟನೆಯೊಂದನ್ನು ವಿವರಿಸಲು ಕುಳಿತರು.

“ಈ ಸೀಳು ನಾಯಿಗಳು ಎಷ್ಟು ವ್ಯವಸ್ಥಿತ ಬೇಟೆಗಾರರು ಹಾಗು ಅಪಾಯಕಾರೀ ಹಂತಕರು ಎಂಬುದು ನನಗೆ ಹೀಗೆ ಹನ್ನೆರಡು ವರ್ಷಗಳ ಹಿಂದಿನ ಒಂದು ಘಟನೆ ಖಚಿತಪಡಿಸಿತ್ತು. ಬಿರುಬೇಸಿಗೆಯ ಆ ದಿನ ನಾವು ಎಂಟತ್ತು ಜನ ಟೆಂಪೋ ಟ್ರಾಕ್ಸ್ ವಾಹನದಲ್ಲಿ ಮುತ್ತೋಡಿ ಅಭಯಾರಣ್ಯಕ್ಕೆ ಕಾಡು, ವನ್ಯಜೀವಿ, ಜಲಾವಾರಗಳ ಉಗಮಗಳ ಕುರಿತಾದ ಸಹಜ ಕುತೂಹಲದಿಂದ ಹೋಗಿದ್ದೆವು.  ಕಾಡುಮೃಗಗಳು ತಮ್ಮ ನೀರಿನ ಅಗತ್ಯಕ್ಕಾಗಿ ಅಲ್ಲಲ್ಲಿ ಇದ್ದ ಜೌಗು ಪ್ರದೇಶಗಳಿಗೆ ಭೇಟಿ ನೀಡುತ್ತವೆ. ಅಂತಹ ಆಯಕಟ್ಟಿನ ಸ್ಥಳಗಳಲ್ಲಿ ಪ್ರಾಣಿ ವೀಕ್ಷಣೆಗೆ ಅನುಕೂಲವಾಗಲೆಂದು ಅರಣ್ಯ ಇಲಾಖೆಯವರು ಕಾಡಿನ ಒಳಗೆ ಅಲ್ಲಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದರು. ಕ್ರಮಿಸುತ್ತಾ ಕ್ರಮಿಸುತ್ತಾ ಆ ಅಗಾಧ ವಿಸ್ತೀರ್ಣದ ಅಭಯಾರಣ್ಯದ ಮಧ್ಯಭಾಗಕ್ಕೆ ಬಂದಿದ್ದೆವು.

© ಗಿರೀಶ್ ಗೌಡ

ಮುಗಿಲೆತ್ತರದ ಮರಗಳ ಬುಡದಲ್ಲಿ ಲಂಟಾನದ ಕುರುಚಲು ಗಿಡಗಳ ದಟ್ಟ ಪೊದೆಗಳು. ನಮ್ಮೊಂದಿಗೆ ಬಂದಿದ್ದ ಹುಡುಗಿ-ಹುಡುಗರು ಬೈನಾಕ್ಯುಲರ್, ಕ್ಯಾಮೆರಾಗಳನ್ನು ಹಿಡಿದುಕೊಂಡು ಸಡಗರದಿಂದ ವೀಕ್ಷಣಾ ಗೋಪುರದ ಅಟ್ಟಣಿಗೆಯನ್ನು ಏರಿ, ಕುತೂಹಲದಲ್ಲಿ ಅಷ್ಟೆತ್ತರದಿಂದ ಸುತ್ತಲಿನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ನಾನಿನ್ನೂ ವಾಹನದ ಬಳಿಯೇ ಇದ್ದು, ಕೊಂಡೊಯ್ದಿದ್ದ ಕಲ್ಲಂಗಡಿ ಹಣ್ಣನ್ನು ಟ್ಯಾಕ್ಸಿಯ ಬಾನೆಟ್ಟಿನ ಮೇಲೆ ಹಾಸಿದ್ದ ದಿನಪತ್ರಿಕೆಯ ಮೇಲಿನಿಂದ ಉರುಳದಂತೆ ಹಿಡಿದಿಟ್ಟುಕೊಂಡು ಕತ್ತರಿಸಲೆಂದು ಚಾಕನ್ನು ಶುಚಿಗೊಳಿಸಲು ನಾ ತೊಟ್ಟಿದ್ದ ಜೀನ್ಸ್ ಪ್ಯಾಂಟಿನ ಮೇಲೆ ಉಜ್ಜುತ್ತಿದ್ದೆ.

© ಧನರಾಜ್ ಎಂ.

ಅಷ್ಟರಲ್ಲಿ ನಮ್ಮ ವಾಹನದ ಡ್ರೈವರ್ ಇಬ್ರಾಹಿಂ, “ಸ್ಸಾರ್, ಸ್ಸಾರ್, ಅಲ್ನೋಡಿ, ಅಲ್ನೋಡಿ” ಎಂದು ಪಿಸುಗುಟ್ಟುವ ದನಿಯಲ್ಲಿ ಗಡಿಬಿಡಿಯ ಆತಂಕದಲ್ಲಿಯೇ ಕೂಗಿದ. ಎಂಥದು ಎನ್ನುವಂತೆ ಅವನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದೆ. ನಮ್ಮ ವಾಹನ ನಿಂತಿದ್ದ ದಿಕ್ಕಿನಲ್ಲಿಯೇ ನನ್ನ ಬೆನ್ನಿನ ಹಿಂಭಾಗದೆಡೆಗೆ ದೃಷ್ಟಿಸುತ್ತಾ ಅತ್ತ ನೋಡುವಂತೆ ಹುಬ್ಬು ಹಾರಿಸುವ ಮೂಲಕ ಸಂಕೇತ ನೀಡಿದ.  ಸರಕ್ಕನೇ ತಿರುಗಿ ನಿಂತು ಚಕಚಕನೆ ಆ ಲಂಟಾನದ ಪೊದೆಯೊಳಗೆ ಕಣ್ಣಾಡಿಸಿದೆ.  ಭಾರೀ ಗಾತ್ರದ ಜಿಂಕೆಯೊಂದು ಗಾಬರಿ ಹಾಗೂ ಆತಂಕದಿಂದ ಗಲಿಬಿಲಿಗೊಂಡು ಯಾವುದರಿಂದಲೋ ತಪ್ಪಿಸಿಕೊಂಡು ಪಾರಾಗಲು ತಹತಹಿಸುತ್ತಿತ್ತು.

© ಭಗವತಿ ಬಿ. ಎಂ

ಪೊದೆಯು ದಟ್ಟವಾಗಿದ್ದರಿಂದ ಆ ಜಿಂಕೆಯ ಬೃಹದಾಕಾರದ ಕೋಡುಗಳು ಮತ್ತು ಒಂದೆರಡು ಬಾರಿ ಅದರ ಗೊರಸುಗಳು ಕಾಣಿಸಿಕೊಳ್ಳತೊಡಗಿತು. ಇದ್ದಕ್ಕಿದ್ದಂತೆ ಆ ಜಿಂಕೆಯ ಸುತ್ತಮುತ್ತ ಅಸಹಜ ಚಟುವಟಿಕೆ ಗೋಚರಿಸತೊಡಗಿತು. ನೋಡನೋಡುತ್ತಿದ್ದಂತೆ ಮೂರು ಸೀಳು ನಾಯಿಗಳು ಜಿಂಕೆಯ ಎಡಭಾಗದಿಂದ ಹೊಂಚು ಹಾಕುತ್ತಿರುವುದು ಗಮನಕ್ಕೆ ಬಂತು. ಹಾ! ಹಾ! ಎನ್ನುತ್ತಿದ್ದಂತೆ ಅವೆಲ್ಲಿದ್ದವೋ ಇನ್ನಾರು ಕೆಂಬಣ್ಣದ ಸೀಳು ನಾಯಿಗಳು ಜಿಂಕೆ ಹಾಗೂ ನಮ್ಮ ನಡುವಿನ ಬಯಲಿನಲಿ ಅಟಕಾಯಿಸಿಕೊಂಡವು.  ಬಡಕಲು ಬಡಕಲಾಗಿದ್ದ, ಸರಿಯಾಗಿ ಜಾಡಿಸಿದರೆ ಕಯಂಕ್ ಸಹಾ ಎನ್ನದೇ ಸಾಯಬಹುದಾಗಿದ್ದ ಬೀದಿನಾಯಿಗಳಂತಿದ್ದ ಆ ಕೆನ್ನಾಯಿಗಳಿಗೆ ಈ ಹೋರಿಯಂತಿರುವ ಜಿಂಕೆ ಹೆದರುತ್ತಿದೆಯಲ್ಲ ಎಂದೆನಿಸಿತು.

ಆಗತಾನೇ ಕೇಬಲ್ ಟಿವಿಯಲ್ಲಿ ಡಿಸ್ಕವರಿ, ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್ಲುಗಳು ಪ್ರಸಾರ ಪ್ರಾರಂಭಿಸಿದ್ದವು. ಇಂಥಾ ಅಪೂರ್ವ ಪ್ರಸಂಗವನ್ನು ದಾಖಲಿಸುವ ಅವಕಾಶ ಸಿಕ್ಕಿದೆಯೆಂದು ಹಿಗ್ಗಿದೆ.  ಕೆಲವೇ ದಿನಗಳ ಹಿಂದೆ ಡಿಜಿಟಲ್ ಕ್ಯಾಮೆರಾವೊಂದನ್ನು ಕೊಂಡಿದ್ದೆ. ಇಷ್ಟು ಹತ್ತಿರದಿಂದ ಸಹಜಬೇಟೆಯ ದೃಶ್ಯ ಸೆರೆಹಿಡಿಯುವ ಸಂದರ್ಭ ಎಲ್ಲರಿಗೂ ಸಿಗುವುದಿಲ್ಲವಾದ್ದರಿಂದ, ಕಲ್ಲಂಗಡಿಯನ್ನು ನಿಧಾನವಾಗಿ ಇಬ್ರಾಹಿಂ ಕೈಗೆ ವರ್ಗಾಯಿಸಿ, ಸೊಂಟಕ್ಕೆ ಕಟ್ಟಿಕೊಂಡಿದ್ದ ಕ್ಯಾಮೆರಾ ಪೌಚಿನಿಂದ ಒರೆಯಿಂದ ಕತ್ತಿಯನ್ನು ಹೊರಸೆಳೆಯುವಂತೆ! ಕ್ಯಾಮೆರಾ ಹೊರತೆಗೆದೆ. ಎಡಗೈಯ್ಯಲ್ಲಿ ಕಲ್ಲಂಗಡಿ ಕತ್ತರಿಸುವ ಚಾಕು, ಬಲಗೈಲಿ ಕ್ಯಾಮೆರಾ ಹಿಡಿದು ಸುತ್ತಮುತ್ತಲೂ ಜರುಗುತ್ತಿರುವ ವಿದ್ಯಮಾನಗಳ ಪರಿಗಣಿಸದೇ ತದೇಕಚಿತ್ತನಾಗಿ ಆಗಾಗ ದಿಕ್ಕು ಬದಲಿಸುತಿದ್ದ ಜಿಂಕೆಯ ಕೋಡಿನ ತುದಿಗಳನ್ನೇ ನೋಡುತ್ತಾ ಅರೆಕುಕ್ಕರಗಾಲಿನಲ್ಲಿ ಕಳ್ಳಹೆಜ್ಜೆಗಳನ್ನಿಡುತ್ತಾ ಮುಂದೆ ಮುಂದೆ ಕ್ರಮಿಸುತ್ತಿದ್ದೆ.

© ಪೃಥ್ವಿ ಬಿ.

ಕಣ್ಣು ಮುಚ್ಚಿ ತೆರೆಯುವುದರೊಳಗೆ ಎರಡು ನಾಯಿಗಳು ಪ್ರತ್ಯಕ್ಷವಾಗಿ ಬಡಕ್ಕನೆ ಜಿಂಕೆಯ ಮೇಲೆರಗಿದವು. ಆ ಜಿಂಕೆ ಆಂಯ್ ಎಂದು ಸದ್ದು ಮಾಡಿದ್ದೂ ಸಹಾ ಕೇಳಲಿಲ್ಲ.  ಅದನ್ನು ಸುತ್ತುವರೆದು ವೆಲ್ ಪ್ಲಾನ್ಡ್ ಅಂಡ್ ಫೂಲ್ ಪ್ರೂಫ್ ಕಿಲ್ ಮಾಡಿದ ಹಂತಕ ಸೀಳುನಾಯಿಗಳು ಗುರುಗುಟ್ಟಿದ್ದಾಗಲೀ, ತಮ್ಮ ತಮ್ಮಲ್ಲೇ ಹಿಸ್-ಕ್ರಿಸ್ ಎಂದು ಕಿತ್ತಾಡಿದ್ದಾಗಲೀ ಒಂದು ಸಣ್ಣ ಸದ್ದೂ ಕೇಳಿಸಲಿಲ್ಲ!! ನೀವು ನಂಬಲಿಕ್ಕಿಲ್ಲ, ಕೇವಲ ಮೂರರಿಂದ ನಾಲ್ಕು ನಿಮಿಷದೊಳಗೆ ಕನಿಷ್ಠ ಎರಡು ವರ್ಷದ ಹೋರಿಯ ಗಾತ್ರವಿದ್ದ ಆ ದಷ್ಟಪುಷ್ಟ ಜಿಂಕೆಯನ್ನು ನೆಲದ ಮೇಲೆ ರಕ್ತ, ಮಾಂಸ, ಮಜ್ಜೆ ಮತ್ತಾವುದೇ ತ್ಯಾಜ್ಯದ ಕುರುಹೂ ಉಳಿಯದಂತೆ ಗಾಳಿಯಲ್ಲಿಯೇ ಎತ್ತಾಡಿಸುತ್ತಲೇ ಹೇಳಹೆಸರಿಲ್ಲದಂತೆ ಮಂಗಮಾಯ ಮಾಡಿಹಾಕಿದವು!

ಕ್ಯಾಮೆರಾ ಹೊಂದಿಸುವ ಹೊತ್ತಿಗಾಗಲೇ ತಮ್ಮ ಭೋಜನ ಕಾರ್ಯಕ್ರಮವನ್ನು ಮುಗಿಸಿಯೇ ಹಾಕಿದ್ದ ಆ ಸೀಳುನಾಯಿಗಳ ಕಬಳಿಕಾ ಸಾಮರ್ಥ್ಯವನ್ನು ಕಂಡು ಕಕ್ಕಾಬಿಕ್ಕಿಯಾಗಿ ಹಿಂದಿರುಗಲು ಕ್ರಮಿಸುತ್ತಿದ್ದ ನನ್ನನ್ನು ಎಚ್ಚರಿಸಿದ್ದು ಸುಮಾರು ಎಪ್ಪತ್ತೆಂಬತ್ತು ಮೀಟರ್ ದೂರದಿಂದ ಕೇಳಿಬಂದ ಇಬ್ರಾಹಿಂನ ಕೂಗು. “ಸ್ಸಾರ್! ಸ್ಸಾರ್! ಪಕ್ದಲ್ ನೋಡೀ! ನೋಡೀ!!” ಎಂಥದಪ್ಪಾ ಎಂದುಕೊಳ್ಳುತ್ತಾ ಬಲಕ್ಕೆ ತಿರುಗುತ್ತೇನೆ!! ಪಕ್ಕದಲ್ಲೇ ಬಾಂಬ್ ಬಿದ್ದಂತಾಯಿತು!! ಕೈಕಾಲೆಲ್ಲಾ ತಣ್ಣಗಾಗಿಬಿಟ್ಟವು! ಮಂಡಿ ಚಿಪ್ಪಿನೊಳಗಿನ ಕಸುವೆಲ್ಲ ಒಮ್ಮೆಲೆ ಇಂಗಿ ಹೋದಂತಾಯಿತು. ಇಡೀ ದೇಹವೇ ಸಂಪೂರ್ಣವಾಗಿ ಗಾಳಿ ತೆಗೆದ ಬಲೂನಿನಂತೆ ಬಳಲಿ ಮಸಳಿಸಿತು. ಕೈಯ್ಯಳತೆಯ ದೂರದಲ್ಲಿಯೇ ಎರಡು ಸೀಳು ನಾಯಿಗಳು ತಲೆತಗ್ಗಿಸಿ ಮೇಲ್ಗಣ್ಣುಗಳನ್ನು ಅರಳಿಸಿಕೊಂಡು ನನ್ನ ಮೇಲೆ ನೆಗೆದು ಅಪ್ಪಳಿಸಲು ಕ್ಷಣಗಣನೆ ಮಾಡುತ್ತಿವೆ! ಹೇಗೆ ಪ್ರತಿಕ್ರಿಯಿಸುವುದೆಂದು ಗೊತ್ತಾಗುತ್ತಿಲ್ಲ. ದೇಹದಾಳದಿಂದೆಲ್ಲೋ ಅಡ್ರಿನಾಲಿನ್ ಸರಕ್ ಎಂದು ಉಕ್ಕಿ, ದೇಹದಾದ್ಯಂತ ಪ್ರವಹಿಸಿ, ಶರೀರವನ್ನು ಸ್ಥಿಮಿತದಲ್ಲಿಡುವ ತನ್ನ ಕೆಲಸ ಮಾಡತೊಡಗಿತು. ಎಡಗಡೆಯಿಂದ ತಲೆ ತಿರುಗಿಸಿ ಎದುರು ನೋಡುತ್ತೇನೆ, ಅತ್ತಕಡೆಯಿಂದಲೂ ನಾಲ್ಕೈದು ಅವೇ ಸೀಳುನಾಯಿಗಳು ತಮ್ಮ ರಕ್ತಸಿಕ್ತ ಬಾಯಿ, ಮುಸುಡಿಗಳನ್ನು ಅಸಹ್ಯವಾಗಿ ಹಾಗೂ ಬೀಭತ್ಸವಾಗಿ ಮುದುರುಮುದುರು ಮಾಡಿಕೊಳ್ಳುತ್ತಾ ಮುಂದಡಿಯಿಡಲಾರಂಭಿಸಿದವು. ಅಲ್ಲಿಗೆ ನಿಶ್ಚಯವಾಯಿತು, ತಮ್ಮ ಬೇಟೆಯ ಔತಣಕ್ಕೆ ಅಡಚಣೆಯಾದವನನ್ನೂ ಆ ಔತಣದ ಮುಂದುವರೆದ ಹಂತದ ಭಾಗವನ್ನಾಗಿ ಮಾಡಿಕೊಳ್ಳಲು ಆ ಹಂತಕ ಮೃಗಗಳು ತೀರ್ಮಾನಿಸಿವೆಯೆಂದು.

ಎಡಗೈಲಿ ಮೂರಂಚಿನ ಕಲ್ಲಂಗಡಿ ಕುಯ್ಯುವ ಚಾಕು, ಬಲಗೈಲಿ ಅರ್ಧ ಕೇಜಿ ತೂಕದ ಕ್ಯಾಮೆರಾ ಹಿಡಿದುಕೊಂಡು ಬೀದಿಹೆಣದಂತೆ ಸಾಯಲೇಬೇಕಾದ ಸನ್ನಿವೇಶದಲ್ಲಿ ಬೆದರಿದ ಬೆಪ್ಪನಂತೆ ಬಿಳಿಚಿಕೊಂಡು ಏನೂ ಮಾಡಲಾಗದ ಅಸಹಾಯಕತೆಯಿಂದ ನಿಂತಿದ್ದೆ.  ಅಷ್ಟರಲ್ಲಿ ಇಬ್ರಾಹಿಂ ಟ್ಯಾಕ್ಸಿ ಚಾಲೂ ಮಾಡಿದವನೇ ಜೋರಾಗಿ ಹಾರ್ನ್ ಮಾಡಿದ.  ಆ ಸದ್ದಿಗೆ ಒಂದರೆ ಕ್ಷಣ ತಿರುಗಿ ನೋಡಿದ ನನ್ನ ಸಮೀಪವೇ ಇದ್ದ ಆ ಎರಡು ಸೀಳು ನಾಯಿಗಳು ಮತ್ತೆ ನನ್ನೆಡೆಗೆ ತಿರುಗಿದವೇ ಆಲ್ಮೋಸ್ಟ್ ಹೊಟ್ಟೆ ಬಗೆದೇಬಿಟ್ಟವೇನೋ ಎನ್ನುವಂತೆ ಕುಪ್ಪಳಿಸಿಯೇ ಬಿಟ್ಟವು!  ಆ ಹಾರ್ನ್ ಆದದ್ದು, ಮತ್ತಾ ನಾಯಿಗಳು ಅತ್ತ ಗಮನಿಸಿದ ಗಳಿಗೆಗಳ ನಡುವಿನ ಸೂಕ್ಷ್ಮಾತಿಸೂಕ್ಷ್ಮ ಗ್ಯಾಪಿನಲ್ಲಿ ನನ್ನ ಹಿಮ್ಮಡಿಯ ಪಕ್ಕದಲ್ಲೇ ಬಿದ್ದಿದ್ದ ಮರದ ಒಣ ಗೆಲ್ಲೊಂದನ್ನು ರಪಕ್ಕನೆ ಕೈಗೆತ್ತಿಕೊಂಡಿದ್ದೆ. ಎದುರಿನಿಂದ ನಿಶ್ಚಿತ ಗುರಿಯೆಡೆಗೆ ದೃಢ ತೀರ್ಮಾನದೊಂದಿಗೆ ಬರುತಿದ್ದ ಆ ಏಳೆಂಟು ನಾಯಿಗಳು ಸಹಾ ವಿಲಕ್ಷಣ ಉನ್ಮಾದದಿಂದ ನಾಲಗೆ ಹೊಸೆಯುತ್ತಾ, ಹಲ್ಲುಗಳನ್ನು ಮಸೆಯುತ್ತಾ ಸಮೀಪಿಸಿಯೇ ಬಿಟ್ಟಿದ್ದವು. ಮತ್ತಿಮರದಿಂದ ಎಂದೋ ಒಣಗಿ ಉದುರಿ ಬಿದ್ದಿದ್ದ, ಆ ಬಿಸಿಲಿಗೆ ಒಣಗೀ ಒಣಗೀ ದಗ್ಗುಲೇ ಆಗಿಹೋಗಿದ್ದ ಆ ಗೆಲ್ಲಿನಿಂದ ಯಾವುದಕ್ಕಾದರೂ ಹೊಡೆಯುವುದು ಹೋಗಲೀ, ಸುಮ್ಮನೇ ಗಾಳಿಯಲ್ಲಿ ಬೀಸಿದರೂ ಅದಾಗಿಯೇ ಮುರಿದು ಕಳಕ್ಕನೇ ಕೆಳಗೆ ಬೀಳುವ ಸ್ಥಿತಿಯಲ್ಲಿತ್ತು.

ಈ ಸೀಳುನಾಯಿಗಳು ಯಾವುದೇ ಪ್ರಾಣಿಯನ್ನು ಒಮ್ಮೆ ತನ್ನ ಬೇಟೆ ಎಂದು ನಿಗದಿಮಾಡಿಕೊಂಡರೆ ಮುಗಿಯಿತು; ಆ ಬಲಿಪ್ರಾಣಿ ಆನೆ, ಹುಲಿ, ಸಿಂಹ, ಕಾಡೆಮ್ಮೆ ಇರಲಿ ಕಡೆಗೆ ಮೊಸಳೆಯಾಗಿದ್ದರೂ ಸರಿ, ಬಿಡಲ್ಲ. ಕ್ಷಣಕ್ಷಣಗಳೊಳಗೆ ತೀರ್ಮಾನ ಹಾಗೂ ಕಾರ್ಯಾಚರಣೆ ಮಾಡಲೇಬೇಕಾದ ಸ್ಥಿತಿ.  ಅಲ್ಲಲ್ಲಿ ಬೆಳೆಸಿದ್ದ ಸಾಗುವಾನಿ ಮರಗಳಿಂದ ಉದುರಿದ್ದ ಅಗಲವಾದ ಎಲೆಗಳು, ಈ ಎಗ್ಸಿಬಿಷನ್ಗಳಲ್ಲಿ ಕರಿದು ಇಪ್ಪತ್ತು ರೂಪಾಯಿಗೊಂದರಂತೆ ಮಾರುವ ಬಾಂಡಲಿಯಗಲದ ಹಪ್ಪಳಗಳಂತೆ ಕಾಡಿಡೀ ಚೆಲ್ಲಾಡಿಕೊಂಡು ಬಿದ್ದಿದ್ದವು. ಅವೈಜ್ಞಾನಿಕ ನೆಡುತೋಪು ಯೋಜನೆಗಳು ಹೇಗೆ ಕಾಡಿನ ಅವನತಿಗೆ ಕಾರಣವಾಗುತ್ತವೆ ಎಂದರೆ, ಅಗತ್ಯವಿಲ್ಲದ ಸಂದರ್ಭವಾದ ಮಳೆಗಾಲದಲ್ಲಿ ಮೈತುಂಬಾ ಸೊಪ್ಪು ತುಂಬಿಸಿಕೊಂಡು ನಿಲ್ಲುವ ಈ ಸಾಗುವಾನಿ ಮರಗಳು ಬೇಸಿಗೆಯಲ್ಲಿ ಒಂದೇ ಒಂದು ಎಲೆ ಉಳಿಯದಂತೆ ಉದುರಿಸಿಕೊಂಡು ಬೆತ್ತಲೆಯಾಗುತ್ತವೆ. ಇಡೀ ತೋಪು ಯಾವ ಕ್ಷಣ ಬೇಕಾದರೂ ಕಾಳ್ಗಿಚ್ಚಿಗೆ ಇಂಬಾಗುವ ಹಾಗೂ ತುತ್ತಾಗುವ ಸನ್ನಿವೇಶಕ್ಕೆ ಕಾರಣೀಭೂತವಾಗಿ ಕಾಯುತ್ತಿರುತ್ತದೆ.

© ದೀಪಕ್ ಭ ಮೈಸೂರು

ಎದುರಿಗೆ ಮಾಣಿಕ್ಯದಂತೆ ಕಂಡ ಮುಷ್ಠಿಗಾತ್ರದ ಕಲ್ಲೊಂದನ್ನು ಲಬಕ್ಕನೇ ಕೈಗೆತ್ತಿಕೊಂಡವನೇ ಆ ಹಿಂದಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಸಾಧ್ಯತೆಗಳ ಕುರಿತು ಆಲೋಚಿಸತೊಡಗಿದೆ.  ನನ್ನೊಳಗಿದ್ದ ಮನುಷ್ಯನೆಂಬ ಪ್ರಾಣಿಯ ಬೇಸಿಕ್ ಇನ್ಸ್ಟಿಂಕ್ಟ್ ಸಹಾ ಆ ಅಪಾಯವನ್ನು ನಿಭಾಯಿಸುವ ಬಗೆಯನ್ನು ಪರ್ಯಾಯವಾಗಿ ಯೋಚಿಸುತ್ತಿತ್ತು ಹಾಗೂ ಯೋಜಿಸುತ್ತಿತ್ತು. ಅಷ್ಟರಲ್ಲಾಗಲೇ ನಮ್ಮ ಟ್ಯಾಕ್ಸಿ ಕಡೆಯಿಂದ ಕಲ್ಲುಗಳನ್ನು ತೂರಲಾರಂಭಿಸಿದರು. ಅದರಲ್ಲೆರಡು ಕಲ್ಲುಗಳು ನೆಲಕ್ಕೆ ಬಿದ್ದು ಪುಟಿದು ನನಗೇ ಬಡಿದವು.  ಇಬ್ರಾಹಿಂ ವಾಹನವನ್ನು ಚಾಲನೆ ಮಾಡಿಕೊಂಡು ಹತ್ತಿರಕ್ಕೆ ಬಂದೇಬಿಟ್ಟ.  ಆದರೆ, ರಸ್ತೆಯ ಎರಡೂ ಬದಿ ತೆಗೆದಿದ್ದ ಟ್ರೆಂಚ್ ಕಾರಣದಿಂದ ನಾನಿದ್ದ ಜಾಗಕ್ಕೆ ಬರಲಾಗದೇ ಮುಂದಿನ ಎಡಬಾಗದ ಚಕ್ರ ಚರಂಡಿಯ ಗುಂಡಿಯೊಳಗೆ ಸಿಕ್ಕಿಹಾಕಿಕೊಂಡು, ಅದೊಂದು ಯಡವಟ್ಟಾಯಿತು.  ವಾಹನದ ಹಾರ್ನ್, ನಮ್ಮ ಗುಂಪಿನವರ ಶಿಳ್ಳೆ, ಕೇಕೆ ಹಾಗೂ ಕಲ್ಲಿನ ದಾಳಿಗೆ ವಿಚಲಿತಗೊಂಡ ಆ ಸೀಳುನಾಯಿಗಳು ನಿಧಾನವಾಗಿ ಹಿಂದಡಿಯಿಟ್ಟವು.  ವಿಧಿಯಿಲ್ಲದೇ ಹಿಮ್ಮೆಟ್ಟುವ ಸಂದರ್ಭದಲ್ಲಿ ಸಹಾ ಆ ಗುಂಪಿನಲ್ಲಿದ್ದ ನಾಲ್ಕೈದು ನಾಯಿಗಳು ಬೇಟೆಯನ್ನು ಅಪ್ಪಳಿಸಿ ಕೆಡವಲು ಸಾಧ್ಯವಾ ಎಂದು ಅಸಹನೆಯಿಂದ ತಿರುತಿರುಗಿ ನಮ್ಮತ್ತಲೇ ನೋಡುತ್ತಾ ತಮ್ಮತಮ್ಮಲ್ಲೇ ಒಂದರ ಮೇಲೊಂದು ಆರೋಪಿಸುತ್ತಾ ಪೊದೆಗಳಾಚೆ ಕಣ್ಮರೆಯಾದವು.

ಕೈಯ್ಯಲ್ಲಿ ಹಿಡಿದಿದ್ದ ಪ್ಲೇಟಿನಲ್ಲಿದ್ದ ಮದ್ದೂರೊಡೆ, ಮೊಸರುಬಜ್ಜಿ, ಪಲಾವ್ ಅನ್ನು ತಿನ್ನುವುದನ್ನು ಸಹ ಮರೆತು, ಬಾಯಿಗೆ ಹಾಕಿಕೊಂಡದ್ದನ್ನು ಅಗಿದು ನುಂಗುವುದನ್ನು ಸಹಾ ಅಲ್ಲಿಗೇ ನಿಲ್ಲಿಸಿ, ಅರೆಬರೆ ತಿಂದ ಕೈ ಅವರಿಗರಿವಿಲ್ಲದಂತೆ ಒಣಗಿ ಹೋಗಿದ್ದರೂ ಅದರ ಪರಿವೆಯೇ ಇಲ್ಲದಂತೆ ಕಣ್ಣರಳಿಸಿಕೊಂಡು ಗಿರೀಶ್ ಮೇಷ್ಟ್ರು ಹೇಳುತ್ತಿದ್ದುದನ್ನೇ ಕೇಳಿಸಿಕೊಳ್ಳುತ್ತಿದ್ದ ಅಡುಗೆ ಕೆಲಸದವರಾದಿಯಾಗಿ ಎಲ್ಲರೂ ಯಾವುದೋ ಒಂದು ಥ್ರಿಲ್ಲರ್ ಸಿನೆಮಾ ನೋಡಿದ ಆನಂದದಿಂದ ಮುದಗೊಂಡಿದ್ದರು.  ಇದುವರೆಗೂ ಸಾಧಾರಣ ಹೀರೋ ಆಗಿದ್ದ ಗಿರೀಶ್ ಮೇಷ್ಟ್ರು ಈ ಕ್ಷಣದಿಂದ ಅಲ್ಲಿದ್ದವರೆಲ್ಲರ ದೃಷ್ಟಿಯಲ್ಲಿ ಸೂಪರ್ ಡೂಪರ್ ಸ್ಟಾರ್ ಆಗಿಬಿಟ್ಟಿದ್ದರು.

© ಧನರಾಜ್ ಎಂ

ಮುಂದುವರಿಯುವುದು . . .

ಲೇಖನ: ಧನಂಜಯ ಜೀವಾಳ
          ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.