ಜೇನು ಪ್ರಪಂಚ: ಭಾಗ ೧೦

ಜೇನು ಪ್ರಪಂಚ: ಭಾಗ ೧೦

© CC0

ಹಿಂದಿನ ಸಂಚಿಕೆಯಲ್ಲಿ ವಿಶ್ವದಾದ್ಯಂತ ವ್ಯಾಪಿಸಿರುವ ನಮ್ಮ ಕುಟುಂಬದ ಇತರ ಪ್ರಭೇದಗಳ ಜೇನುನೊಣಗಳ ಬಗ್ಗೆ ನಿಮಗೆ ತಿಳಿಸಿದ್ದೆ. ಈ ಸಂಚಿಕೆಯಲ್ಲಿ ನಮ್ಮ ಭಾರತ ದೇಶದಲ್ಲಿ ಕಂಡುಬರುವ ನಮ್ಮ ಸೋದರ ಸಂಬಂಧಿಗಳಾದ ಇತರ ಜೇನುನೊಣಗಳ ವೈವಿಧ್ಯತೆಯ ಬಗ್ಗೆ ತಿಳಿಸುತ್ತೇನೆ. ಭಾರತ ದೇಶದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಜೇನುನೊಣಗಳ ಪ್ರಭೇದಗಳನ್ನು ನೀವು ಕಾಣಬಹುದು. ನಾವು ಜಮ್ಮುವಿನ ಸಮಶೀತೋಷ್ಣ ಪ್ರದೇಶದಿಂದ ಕನ್ಯಾಕುಮಾರಿಯ ಕಡಲತೀರದವರೆಗೂ ಹರಡಿಕೊಂಡಿದ್ದೇವೆ.  ಹಿಂದಿನ ಸಂಚಿಕೆಯಲ್ಲಿ ತಿಳಿಸಿದಂತೆ ವಿಶ್ವದಲ್ಲಿ ಸುಮಾರು ಹನ್ನೊಂದು ಪ್ರಭೇದದ ಎಪಿಸ್ (Apis) ಕುಲದ ಜೇನುನೊಣಗಳನ್ನು ಕಾಣಬಹುದು. ಅವುಗಳಲ್ಲಿ ಆರು ಪ್ರಭೇದದ ಎಪಿಸ್ (Apis) ಕುಲದ ಜೇನುನೊಣಗಳನ್ನು ನಮ್ಮ ಭಾರತದಲ್ಲಿಯೂ ಕಾಣಬಹುದು. ಅವುಗಳೆಂದರೆ ಎಪಿಸ್ ದೊರ್ಸಾಟಾ (Apis dorsata), ಎಪಿಸ್ ಸರನ (Apis cerana), ಎಪಿಸ್ ಅಂಡ್ರೆನಿಫಾರ್ಮಿಸ್ (Apis andreniformis), ಎಪಿಸ್ ಮೆಲ್ಲಿಫೆರಾ (Apis mellifera), ಎಪಿಸ್ ಲ್ಯಾಬರಿಯೋಸಾ (Apis laboriosa) ಇನ್ನು ಆರನೆಯ ಪ್ರಭೇದದ ಎಪಿಸ್ ಫ್ಲೋರಿಯಾ (Apis florea). ನಾನು ಈ ಎಪಿಸ್ ಫ್ಲೋರಿಯಾ (Apis florea, Little Bee) ಪ್ರಭೇದಕ್ಕೆ ಸೇರಿದವಳು, ನಾವು ಸಾಮಾನ್ಯವಾಗಿ ಗೂಡು ಕಟ್ಟುವುದು ಮರದ ಟೊಂಗೆಗಳಲ್ಲಿ, ಸಣ್ಣ ಪೊದೆಗಳಲ್ಲಿ. ಇನ್ನು ಎಪಿಸ್ ದೊರ್ಸಾಟಾ (Apis dorsata) ಎನ್ನುವ ಹೆಜ್ಜೇನು, ಎಲ್ಲರು ಭಯಭೀತರಾಗುವ ಜೇನುನೊಣ. ಅದನ್ನು ರಾಕ್ ಬೀ (Rockbee) ಎಂದು ನೀವು ಕರೆಯುತ್ತೀರಿ. ಅವು ಗೂಡು ಕಟ್ಟುವುದು ಎತ್ತರವಾದ ಮರಗಳ ಮೇಲೆ, ದೊಡ್ಡ ದೊಡ್ಡ ಬಂಡೆಗಳಿಗೆ ಅಂಟಿಕೊಂಡಂತೆ, ಎತ್ತರದ ಕಟ್ಟಡಗಳಲ್ಲಿ. ಎಪಿಸ್ ಸರನ (Apis cerena) ಜೇನುನೊಣಗಳು ಗೂಡು ನಿರ್ಮಿಸುವುದು ಮರಗಳ ಪೊಟರೆಗಳಲ್ಲಿ, ಹಳೆಯ ಹುತ್ತಗಳಲ್ಲಿ ಅದರಿಂದಲೇ ನೀವೆಲ್ಲಾ ಇದನ್ನು ಹುತ್ತದ ಜೇನು ಎಂದು ಕರೆಯುವುದು.

ಎಪಿಸ್ ಲ್ಯಾಬರಿಯೋಸಾ (Apis laboriosa, Himalayan Giant Honey Bee) ನೇಪಾಳ, ಭೂತಾನ್, ಹಿಮಾಲಯದ ಎತ್ತರದ ಪ್ರದೇಶಗಳಿಗೆ ಸೀಮಿತವಾಗಿವೆ. ಇವು ಹೆಜ್ಜೇನಿನಂತೆ ತೆರೆದ ಗೂಡುಗಳನ್ನು ಬಂಡೆಗಳಿಗೆ ಕಟ್ಟುತ್ತವೆ. ಗಾತ್ರದಲ್ಲಿ ಹೆಜ್ಜೇನಿಗಿಂತಲೂ ದೊಡ್ಡವು!. ಎಪಿಸ್ ಅಂಡ್ರೆನಿಫಾರ್ಮಿಸ್ (Apis andreniformis., Dark Dwarf Honey Bee, ಇವು ಭಾರತದ ಈಶಾನ್ಯ ಭಾಗಕ್ಕೆ ಮಾತ್ರ ಸೀಮಿತವಾಗಿವೆ. ಎಪಿಸ್ ಮೆಲ್ಲಿಫೆರಾ (Apis mellifera) ಯುರೋಪಿನ ಮೂಲದ್ದು, ಇವನ್ನು ನಿಮ್ಮ ಕೆಲವು ಜೇನುಸಾಕಣೆದಾರರು ಪಳಗಿಸಿ ಪ್ರಿಯವಾದ ಜೇನುನೊಣವಾಗಿಸಿಕೊಂಡಿದ್ದಾರೆ. ಇವುಗಳನ್ನು ಸಾಕಣೆಗಾಗಿ ಮತ್ತು ಪರಾಗಸ್ಪರ್ಶಕ್ಕಾಗಿ ಭಾರತಕ್ಕೆ ಮತ್ತು ವಿಶ್ವದ ಇತರ ಭಾಗಗಳಿಗೆ ಹಬ್ಬಿಸಲಾಗಿದೆ. 

ಎರಡು ವರ್ಷಗಳ ಕೆಳಗೆ ನಮ್ಮ ಕುಲಕ್ಕೆ ಹೊಸ ಸದಸ್ಯೆ ಸೇರಿಕೊಂಡಳು, ಅದು ಎಪಿಸ್ ಕರಿಂಜೋಡಿಯಾನ್ (Apis karinjodian, Indian Black Bee) ಭಾರತದ ಕಪ್ಪು ಜೇನುನೊಣ, 2022 ರಲ್ಲಿ ಇದನ್ನು ನೀವು ಕಂಡುಕೊಂಡಿದ್ದು. ಭಾರತದಲ್ಲಿ ಕೊನೆಯಬಾರಿ ನಮ್ಮ ಜೇನುನೊಣದ ಪ್ರಭೇದವನ್ನು ಕಂಡುಹಿಡಿದಿದ್ದು ಫ್ಯಾಬ್ರಿಸಿಕ್ಸ್ ಎಂಬ ವಿಜ್ಞಾನಿ, ಅದು 1798 ರಲ್ಲಿ. ಅಂದರೆ ಸುಮಾರು 200 ವರ್ಷಗಳ ತರುವಾಯ ಎಪಿಸ್ (Apis) ಕುಲದಲ್ಲಿ ಹೊಸ ಪ್ರಭೇದವನ್ನು ಕಂಡು ಹಿಡುಹಿಡಿದಿದ್ದೀರಿ ಎಂದರೆ ಇದು ಅದೆಷ್ಟು ಅಪರೂಪ ವಿದ್ಯಮಾನ ನಿಮಗೆ ಎಂದು ನಾನು ಊಹಿಸಬಲ್ಲೆ! ಇಲ್ಲಿ ಕರಿಂಜೋಡಿಯಾನ್ (karinjodian) ಎಂದರೆ ಮಲಯಾಳಂ ಭಾಷೆಯಲ್ಲಿ ಕಪ್ಪು ಜೇನುನೊಣ ಎಂದು ಅರ್ಥವಲ್ಲವೇ?

ಈ ನಮ್ಮ ಸಹೋದರ ಸಂಬಂಧಿಯನ್ನು ಕಂಡುಕೊಂಡದ್ದು ನಮ್ಮ ಪಶ್ಚಿಮ ಘಟ್ಟಗಳಲ್ಲಿ. ಈ ಪ್ರಭೇದವನ್ನು ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಕೆಲ ಭಾಗಗಳಲ್ಲಿ ಕಾಣಬಹುದು. ಇದು ಬಿಸಿ ಮತ್ತು ಆರ್ದ್ರ ವಾತಾವರಣಕ್ಕೆ ಒಗ್ಗಿಕೊಂಡಿದೆ, ಇದರ ತುಪ್ಪ ನಮ್ಮೆಲ್ಲಾ ಉಳಿದ ಪ್ರಭೇದಗಳ ತುಪ್ಪಕ್ಕಿಂತ ಗಟ್ಟಿಯಾಗಿದೆ! ಈ ಜೇನುನೊಣಗಳು ಪೆಟ್ಟಿಗೆ ಮತ್ತು ಹುತ್ತದ ಜೇನುನೊಣಗಳಿಗಿಂತ ಹೆಚ್ಚು ಆಕ್ರಮಣಕಾರಿಯಾಗಿವೆ ಹಾಗು ಬಹು ಬೇಗ ವಲಸೆ ಹೋಗುವ ಗುಣ ಹೊಂದಿವೆ ಆದ ಕಾರಣ ಇವನ್ನು ಗೂಡುಗಳಲ್ಲಿ ಸಾಕುವುದು ಕಷ್ಟವಾಗುತ್ತದೆ ಎಂದು ಆ ಪ್ರದೇಶದ ಜೇನು ಸಾಕಣೆದಾರರು ಹೇಳುತ್ತಾರೆ. ಆದರೂ ಇದರ ತುಪ್ಪದಲ್ಲಿ ನೀರಿನಾಂಶ ಕಡಿಮೆ ಮತ್ತು ತುಪ್ಪವು ಗಟ್ಟಿಯಾಗಿರುವುದರ ಪರಿಣಾಮ ಮನುಷ್ಯರಿಗೆ ವಾಣಿಜ್ಯ ವ್ಯವಹಾರಕ್ಕೆ ಅನುಕೂಲಕರವಾದದ್ದು. ಇದು ಗೂಡನ್ನು ಮಾಡುವುದು ಹುತ್ತದ ಜೇನು ಮತ್ತು ಪೆಟ್ಟಿಗೆ ಜೇನುಗಳಂತೆ ಬಿರುಕುಗಳಲ್ಲಿ, ಹುತ್ತದಲ್ಲಿ, ಮರದ ಪೊಟರೆಗಳಲ್ಲಿ ಹಲವಾರು ಸಮಾನಾಂತರ ವಠಾರಗಳನ್ನು ನಿರ್ಮಿಸಿಕೊಂಡು.  ಅಂದರೆ ಜೇನುಗಾರಿಕೆಗೆ ಸೂಕ್ತವಾದದ್ದು. ನಾವಾದರೆ (Apis florea) ತೆರೆದ ಪ್ರದೇಶದಲ್ಲಿ ಮರದ ಕೊಂಬೆಗೋ, ಕಡ್ಡಿಗೋ ಕಟ್ಟಿಕೊಂಡ ಒಂದೇ ವಠಾರ ಮಾಡುತ್ತೇವೆ. ಪೆಟ್ಟಿಗೆಗಳಲ್ಲಿ ಇಟ್ಟು ನಮ್ಮನ್ನು ಪಳಗಿಸಲು ಸಾಧ್ಯವಿಲ್ಲ.

© CC0

ಭಾರತದ ಮಟ್ಟಿಗೆ ಪೆಟ್ಟಿಗೆಯಲ್ಲಿ ಸಾಕಬಹುದಾದ ಮೂರು ಪ್ರಭೇದಗಳೆಂದರೆ ಎಪಿಸ್ ಸರನ (Apis cerena), ಎಪಿಸ್ ಮೆಲ್ಲಿಫೆರಾ (Apis mellifera) ಮತ್ತು ಎಪಿಸ್ ಕರಿಂಜೋಡಿಯಾನ್ (Apis karinjodian).  ಆ ಪ್ರಭೇದಗಳ ಈ ಸೌಭಾಗ್ಯವನ್ನು ಅನುಭವಿಸಲಿ.  ನಾವಂತೂ ನಿಮ್ಮಿಂದ ಸ್ವತಂತ್ರರು. ವಲಸೆ ಹೋಗುತ್ತಲೇ ಇರುತ್ತೇವೆ. ಒಂದು ವಠಾರ ಬಿಟ್ಟು ಮತ್ತೊಂದು ವಠಾರದೆಡೆಗೆ; ವಾತಾವರಣ ಪ್ರತಿಕೂಲವಾದ ಪಕ್ಷದಲ್ಲಿ.

ಇನ್ನು Apis ಗುಂಪಿನಲ್ಲಿ ಹೊಸ ಪ್ರಭೇದದ ಸಾಧ್ಯತೆಯ ವಿಷಯಕ್ಕೆ ಬಂದರೆ, ಸಂಪೂರ್ಣವಾಗಿ ವಿಜ್ಞಾನಕ್ಕೆ ಹೊಸದಾದ ಜೇನುನೊಣವನ್ನು ಕಂಡುಹಿಡಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು.  ಈಗಾಗಲೇ ಎಲ್ಲತೆರನಾದ ಆವಾಸಸ್ಥಾನಗಳನ್ನು ಶೋಧಿಸಿದ್ದಿರಿ ಅಲ್ಲವೇ? ಆದರೆ ಈಗಾಗಲೇ ಇರುವ ಜೇನುಹುಳಗಳ ಕುಲಗಳಲ್ಲಿ ಸಾಕಷ್ಟು ಉಪಕುಲಗಳಿದ್ದು ಮುಂದೊಂದು ದಿನ ಅವುಗಳ ಆವಸ್ಥಾನ, ಪ್ರದೇಶಗಳಿಗೆ ಮತ್ತು ಅನುವಂಶೀಯ ದತ್ತಾಂಶಗಳಿಂದ ಆ ಉಪಕುಲ/ Race ಬೇರೊಂದು ಕುಲದ ಜೇನುನೊಣವೆಂದು ವಿಭಜಿಸಬಹುದು ಅಷ್ಟೇ.

ಉದಾಹರಣೆಗೆ: ಎಪಿಸ್ ಸೆರೆನಾ (Apis cerana) ಹುತ್ತದ ಜೇನಿನಲ್ಲಿ ಸುಮಾರು 8 ಉಪ ಪ್ರಭೇದಗಳಿವೆ! ಎಪಿಸ್ ಸೆರೆನಾ ಇಂಡಿಕಾ (Apis cerana indica) ಮತ್ತು ಎಪಿಸ್ ಸೆರೆನಾ ಸೆರೆನಾ (Apis cerana cerana) ಎಂಬ ಎರಡು ಉಪ ಪ್ರಭೇದಗಳನ್ನು ಭಾರತದಲ್ಲಿ ಕಾಣಬಹುದು, ಇನ್ನು ನಮ್ಮ ದಕ್ಷಿಣ ಭಾರತದಲ್ಲಿ ಕಾಣಸಿಗುವುದು, ಎಪಿಸ್ ಸೆರೆನಾ ಇಂಡಿಕಾ (Apis cerana indica) ಈ ಎರಡು ಉಪ ಪ್ರಭೇದಗಳನ್ನು ಮುಂದೊಂದು ದಿನ ಹೊಸ ಕುಲಗಳು ಎನ್ನುವ ಸಾಧ್ಯತೆಯನ್ನು ತಳ್ಳಿಯಾಕುವಂತಿಲ್ಲ!

ಎಪಿಸ್ ಮೆಲ್ಲಿಫೆರಾ (Apis mellifera) ಪೆಟ್ಟಿಗೆ ಜೇನಿನ ಉಪ ಪ್ರಭೇದಗಳ ವಿಷಯಕ್ಕೆ ಬಂದರೆ, ವಿಶ್ವದಾದ್ಯಂತ 28 ಕ್ಕೂ ಹೆಚ್ಚಿನ ಉಪ ಪ್ರಭೇದಗಳಿವೆ! ಮುಂದೊಂದು ದಿನ ಇವುಗಳನ್ನು ವಿಂಗಡಿಸಿ ಮತ್ತೊಂದು ಹೊಸ ಕುಲವನ್ನು ಹೆಸರಿಸಿದರೆ ಆಶ್ವರ್ಯ ಪಡುವಂತಿಲ್ಲ, ವಿಶ್ವದಾದ್ಯಂತ ಎಲ್ಲಾ ಜೀವಿಗಳ ವರ್ಗೀಕರಣ ವಿಷಯದಲ್ಲಿ ನಡೆಯುತ್ತಿರುವ, ನಡೆಯುತ್ತಲೇ ಇರುವ ಗೊಂದಲವಿದು!

ಈ ಹೊಸ ಎಪಿಸ್ ಕರಿಂಜೋಡಿಯಾನ್ (Apis karinjodian) ಪ್ರಭೇದವನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲಬೇಕು – ಶಾನಸ್ ಎಸ್., IFSRS’ ಕೇರಳ ಕೃಷಿ ವಿಶ್ವವಿದ್ಯಾಲಯ, ಕೃಷ್ಣನ್ ಜಿ. ಅಂಜು, ಪ್ರಾಣಿಶಾಸ್ತ್ರ ವಿಭಾಗ, ಶ್ರೀ ನಾರಾಯಣ ಕಾಲೇಜು, ಚೇರ್ತಲ, ಕೇರಳ ಮತ್ತು ಕೆ. ಕೆ. ಮಶ್ಹೂರ್, ಬಯೋಟೆಕ್ನಾಲಜಿ ವಿಭಾಗ, EMEA ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್, ಕೊಂಡೊಟ್ಟಿ, ಮಲಪ್ಪುರಂ, ಕೇರಳ.

ಮುಂದಿನ ಸಂಚಿಕೆಯಲ್ಲಿ ನಮ್ಮ ದೃಷ್ಟಿ, ನಾವೆಷ್ಟು ವೈವಿಧ್ಯ ಬಣ್ಣಗಳನ್ನು ಕಾಣುತ್ತೇವೆಂದು ತಿಳಿಸುವೆ.

© (CC0) VIJAY RICHHIYA

ಲೇಖನ: ಹರೀಶ ಎ. ಎಸ್.

IISER- ತಿರುಪತಿ

Spread the love
error: Content is protected.