ಬುದ್ದಿವಂತ ಪಕ್ಷಿಗಳು

ಬುದ್ದಿವಂತ ಪಕ್ಷಿಗಳು

©ಧನರಾಜ್ ಎಮ್.

ಮನುಷ್ಯ ಈ ಭೂಮಿಯ ಮೇಲೆ ಅತ್ಯಂತ ವಿಕಸಿತ ಪ್ರಾಣಿ ಎನ್ನುವ ಬಿರುದು ಹೊಂದಿರಬಹುದು. ಆದರೆ, ಆ ಬಿರುದು ನಮ್ಮಷ್ಟಕ್ಕೆ ನಾವೇ ನಮ್ಮ ವರ್ಗಕ್ಕೆ ನೀಡಿಕೊಂಡಿದ್ದು ಎನ್ನುವುದು ನನ್ನ ಭಾವನೆ. ಏಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸರ ಎಲ್ಲಾ ಅಚ್ಚರಿಗಳ ಆಗರ, ಇಲ್ಲಿ ಎಲ್ಲರನ್ನೂ ಬೆರಗುಗೊಳಿಸುವ ಬುದ್ಧಿವಂತ ಸಸ್ಯಸಂಕುಲ, ಖಗ-ಮಿಗಗಳಿವೆ. ಅವುಗಳಲ್ಲಿ ಪಕ್ಷಿಗಳು ಕೂಡ ಒಂದು. ಪಕ್ಷಿಗಳಲ್ಲಿನ ಬುದ್ಧಿವಂತಿಕೆಯನ್ನು ಅವುಗಳ ಎಲ್ಲಾ ರೀತಿಯ ಚಟುವಟಿಗಳಲ್ಲಿಯೂ ಕಾಣಬಹುದು. ನೆಲದ ಮೇಲೆ ಇತರ ಜೀವಿಗಳಂತೆ ನಡೆಯುವ ಬದಲು ಆಗಸದಲ್ಲಿ ಹಾರಡುವಂತೆ ತಮ್ಮ ಮುಂದಿನ ಕಾಲುಗಳನ್ನೇ ರೆಕ್ಕೆಯನ್ನಾಗಿಸಿಕೊಂಡವು. ಸೂರ್ಯನ ಶಾಖ ಹಾಗೂ ಗಾಳಿಗೆ ಮೊಟ್ಟೆಗಳು ಹಾಳಾಗದಿರಲೆಂದು ಸುಣ್ಣದ ಪದರ ಸೃಷ್ಟಿಸಿದವು. ಇನ್ನು ಮರಿಹಕ್ಕಿಗಳ ಪಾಲನೆ-ಪೋಷಣೆ, ಗೂಡುಗಳನ್ನು ಕಟ್ಟುವ ಜಾಗ, ರೀತಿ-ನೀತಿಗಳನ್ನು ಗಮನಿಸಿದರೆ ಒಂದೊಂದು ಹಕ್ಕಿಯು ಶ್ರಮ, ತಾಳ್ಮೆ ಮತ್ತು ಬುದ್ಧಿವಂತಿಕೆಯಲ್ಲಿ ಮನುಷ್ಯರನ್ನೇ ಮೀರಿಸುತ್ತವೆ. ಅವುಗಳಲ್ಲಿ ಕೆಲವನ್ನು ತಿಳಿಯೋಣ ಬನ್ನಿ.

ಗುಂಪಿನಲ್ಲಿ ಬಲವೂ – ಗುಂಪಿನಲ್ಲಿ ಗೆಲುವೂ: ಸೂರ್ಯ ನೆತ್ತಿಗೆ ಏರಿ ಮಧ್ಯಾಹ್ನದ ಹನ್ನೆರಡು ಗಂಟೆಯ ಬಿಸಿಲು ಸುಡುತ್ತಿದ್ದರೂ ಕಾಡಿನ ನೆರಳಲ್ಲಿದ್ದ ನಮಗೆ ಬಿಸಿಲಿನ ಬೇಗೆ ಅಷ್ಟೇನೂ ತಾಕಲಿಲ್ಲ. ಆಗಲೇ ಇನ್ನೂ ಎಲೆ ಉದುರಿಸದೆ ನಿಂತಿದ್ದ ತೇಗ, ಮತ್ತಿ ಮರಗಳ ನಡುವೆ ಕಾಜಾಣಗಳ ಹಾರಾಟ ಆರಂಭವಾಯಿತು. ಜೊತೆಯಲ್ಲಿದ್ದ ಎಲ್ಲರಿಗೂ ಕಂಚು ಕಾಜಾಣ, ಜುಟ್ಟು ಕಾಜಾಣಗಳ ಸಂಚಾರ ಕಂಡಿತು. ಇದರ ಜೊತೆಜೊತೆಗೆ ಚಿತ್ರಪಕ್ಷಿಗಳ ಜೋಡಿಯೂ ಸೇರಿತು. ಎಲ್ಲಿಂದಲೋ ಹರಟೆಮಲ್ಲ, ಅಡವಿ ಕೀಚುಗ ಮತ್ತು ಮರಕುಟಿಕವೂ, ಕೀಟ ಅರಸುತ್ತಾ ಬಂದವು. ಬಾಲದಂಡೆ ಹಕ್ಕಿ, ಅರಿಶಿನ-ಬುರುಡೆ ಹಕ್ಕಿಗಳು ಕೂಡ ಇಲ್ಲಿ ಸೇರಿದ್ದವು. ತಮ್ಮ ವಿವಿಧ ಸ್ವರ ವಿನ್ಯಾಸ ಪ್ರದರ್ಶಿಸುತ್ತಾ ಎಲೆಹಕ್ಕಿ ಕೂಡ ಹಾಜರು. ಈ ಹಕ್ಕಿಗಳ ಗುಂಪಿನ ರಕ್ಷಕನಂತೆ ಭೀಮರಾಜನೇ ಬಂದನು. ನೋಡು ನೋಡುತ್ತಿದ್ದಂತೆ ಎಡದಿಂದ ಬಂದ ಗುಂಪು ಚುರುಕಾಗಿ ಬೇಟೆಯಾಡಿ ಬಲಗಡೆಯಿಂದ ಮುಂದೆ ಸಾಗಿತು. ಹೀಗೆ ವಿವಿಧ ಪಕ್ಷಿಗಳನ್ನು ಒಮ್ಮೆಲೆ ನೋಡಿದ ನಮಗೆ ಸಂತಸ, ಆಶ್ಚರ್ಯಗಳು ಸಮ್ಮಿಲನವಾದವು. ಪಕ್ಷಿಗಳ ಈ ಗುಂಪು ಬೇಟೆಗೆ ಆಂಗ್ಲ ಭಾಷೆಯಲ್ಲಿ “ಮಿಕ್ಸೆಡ್ ಹಂಟಿಂಗ್ ಪಾರ್ಟಿ” ಎನ್ನುತ್ತಾರೆ. ಅರ್ಥಾತ್ ವಿವಿಧ ಪ್ರಭೇದದ ಹಕ್ಕಿಗಳು ಜೊತೆಯಾಗಿ ಆಹಾರ ಪಡೆಯುವ ಕ್ರಮ. ಮರದ ಮೇಲೆ ಮರಕುಟಿಕ ಬರಲು ಅಲ್ಲಿಂದ ಹಾರುವ ಕೀಟ ಇನ್ನಾವುದೋ ಪಕ್ಷಿಗೆ ಆಹಾರ. ಹರಟೆಮಲ್ಲ ನೆಲದ ಮೇಲೆ ಆಹಾರ ಅರಸುವಾಗ ಹಾರಿದ ಕೀಟವೂ ಕೂಡ ಮರದ ಮೇಲೆ ಹಾರಾಡುವ ಇನ್ನೊಂದು ಹಕ್ಕಿಗೆ ಆಹಾರ. ಹೀಗೆ ಜೊತೆ ಸೇರಿ ಬೇಟೆಯಾಡಿದಾಗ ಎಲ್ಲ ಹಕ್ಕಿಗೂ ಆಹಾರ ಪಡೆಯುವ ಅವಕಾಶ ಹೆಚ್ಚು. ನೋಡಿ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎನ್ನುವ ಜಾಣ್ಮೆ‌‌ ಪಕ್ಷಿಗಳಲ್ಲೂ ಕಾಣಬಹುದು.

ವಲಸೆ: ವಲಸೆ ಎನ್ನುವುದು ಪಕ್ಷಿ ಜಗತ್ತಿನ ವಿಸ್ಮಯಗಳಲ್ಲಿ ಒಂದು. ಸ್ಮಾರ್ಟ್ ಫೋನುಗಳು, ಗೂಗಲ್ ಮ್ಯಾಪ್ ಇತ್ಯಾದಿ ಆಧುನಿಕ ಉಪಕರಣಗಳಿದ್ದೂ ಕೂಡ ದಾರಿ ತಪ್ಪುವ ನಾವೆಲ್ಲಿ? ತಮ್ಮ ಪುಟ್ಟ ತಲೆಯಲ್ಲಿ ಜಗತ್ತಿನ ದಾರಿಯನ್ನೇ ಹೊತ್ತು ಹಾರುವ ಪಕ್ಷಿಗಳೆಲ್ಲಿ? ಭೂಮಿಯ ಕಾಲ ಚಕ್ರಗಳು, ಆಹಾರದ ಕೊರತೆ, ಸಂತಾನೋತ್ಪತ್ತಿ ಇತ್ಯಾದಿ ಕಾರಣಗಳಿಗೆ ಪಕ್ಷಿಗಳು ವಲಸೆ ಹೋಗುತ್ತವೆ. ಭೂಮಿಯ ಮೇಲಿನ ಗುರುತ್ವಾಕರ್ಷಣೆ, ಮಾರುತಗಳ ದಿಕ್ಕನ್ನು ಅನುಸರಿಸಿ ವಲಸೆಗೆ ಸಿದ್ಧವಾಗುತ್ತವೆ. ಉದಾಹರಣೆಗೆ ನವರಂಗಿ ಪಕ್ಷಿಯನ್ನೇ ತೆಗೆದುಕೊಳ್ಳಿ, ಪ್ರತಿ ಬಾರಿ ಚಳಿಗಾಲದಲ್ಲಿ ಮಧ್ಯ ಹಾಗೂ ಉತ್ತರಭಾರತದ  ಶೀತವಲಯಗಳಿಂದ ಕರ್ನಾಟಕ, ಕೇರಳದ ಉಷ್ಣವಲಯಗಳಿಗೆ ಬರುತ್ತದೆ. ಇನ್ನು ಭಾರತಕ್ಕೆ ಅನೇಕ ಪಕ್ಷಿಗಳು ಇತರ ದೇಶಗಳಿಂದಲೂ ಬರುತ್ತವೆ. ಆಫ್ರಿಕಾದಿಂದ ಬೇಸಿಗೆಯ ಅಂತ್ಯದಲ್ಲಿ ಬರುವ ಚಾತಕ ಪಕ್ಷಿಗಳನ್ನು ಮಳೆಗಾಲದ ಸೂಚಕಗಳೆಂದೇ ಕರೆಯುತ್ತಾರೆ. ಕೆಂಪುಕಾಲಿನ ಚಾಣ ಹಕ್ಕಿಯು ರಷ್ಯಾದಿಂದ ಭಾರತದ ಮಾರ್ಗವಾಗಿಯೇ ಚಳಿಗಾಲದಲ್ಲಿ ಆಫ್ರಿಕಾಗೆ ಸಾಗುತ್ತದೆ. ಉತ್ತರದ ಅಲಸ್ಕದಿಂದಲೆ ಪಟ್ಟೆ ಬಾಲದ ಹಿನ್ನೀರು ಗೊರವ ನಮ್ಮ ದೇಶದ ಕರಾವಳಿಯ ತೀರಕ್ಕೆ ಬರುತ್ತವೆ. ಅನೇಕ ಹೆಬ್ಬಾತುಗಳ ಆಶ್ರಯತಾಣವಾದ ಕರ್ನಾಟಕದ ಮಾಗಡಿ ಕೆರೆಯು ಜಗತ್ತಿನ ಸ್ಥಳದಲ್ಲಿ ಒಂದಾಗಿದೆ. ಗುಜರಾತಿನ ರನ್ ಆಫ್ ಕಚ್ಚ್ ಅಲ್ಲಿ ಕಾಣುವ ರಾಜಹಂಸ ಹಕ್ಕಿಗಳು ಭಾರತದ ಸೊಬಗನ್ನು ಹೆಚ್ಚಿಸುತ್ತವೆ. ಈ ಎಲ್ಲ ದಾರಿಗಳ ಮಾಹಿತಿ ತಮ್ಮ ಪುಟ್ಟ ತಲೆಯಲ್ಲಿ ಭದ್ರವಾಗಿರಿಸಿಕೊಂಡಿರುವ ಹಕ್ಕಿಗಳ ಸಾಮರ್ಥ್ಯಕ್ಕೆ ತಲೆದೂಗಲೆ ಬೇಕು.

ಹಾರಾಡುತ್ತಲೇ ನಿದ್ದೆ ಮುಗಿಸುವ ಕಡಲಗಿಡುಗ: ವಾಹನ ಚಾಲಕ ಅರೆಕ್ಷಣ ನಿದ್ದೆಯಲ್ಲಿ ಮೈ ಮರೆತರೂ ಅಪಘಾತ ತಪ್ಪಿದ್ದಲ್ಲ. ಅಂತಹುದರಲ್ಲಿ ಇಲ್ಲೊಂದು ಹಕ್ಕಿ ನಿದ್ದೆ ಮಾಡುತ್ತಲೇ ಹಾರಾಡುವ ವಿದ್ಯೆಯಲ್ಲಿ ಪರಿಣಿತಗೊಂಡಿದೆ. ಹೌದು, ದಕ್ಷಿಣ ಅಮೆರಿಕಾದಲ್ಲಿ ಕಂಡು ಬರುವ ಕಡಲಗಿಡುಗಗಳ ಮೇಲೆ ನಡೆದ ಸಂಶೋಧನೆಯ ಪ್ರಕಾರ ಈ ಹಕ್ಕಿಗಳ ಮೇಲೆ ಜಲ ಪಕ್ಷಿಗಳಂತೆ ನೀರು ತಾಗಿದರೂ ಒದ್ದೆಯಾಗದ ರೀತಿ ರೆಕ್ಕೆಗಳಿಲ್ಲ. ಹಾಗಾಗಿ ಸುಮಾರು 2.3 ಮೀಟರ್ಗಳಷ್ಟು ಅಗಲವಾದ ರೆಕ್ಕೆಗಳಲ್ಲಿ ಸಮುದ್ರ ಪರ್ಯಟನೆ ಮಾಡುತ್ತವೆ. ಇವುಗಳು ಒಮ್ಮೆ ಆಹಾರ ಹುಡುಕಲು ಹೊರಟರೆ ಸುಮಾರು ಎಂಟು ಗಂಟೆಗಳಿಂದ ನಾಲ್ಕು ದಿನಗಳವರೆಗೂ ಹಾರಾಡುತ್ತಲೇ ಇರುತ್ತವೆ. ಈ ಹಾರಟದಲ್ಲೆ ತಮ್ಮ ಮಿದುಳಿನ ಅರ್ಧ ಭಾಗ ಹಾಗೂ ಅದರ ವಿರುದ್ಧ ಕಣ್ಣಿಗೆ ನಿದ್ದೆ ನೀಡುತ್ತಾ ಹಾರಾಡುತ್ತವೆ!

ಜೇನು ತೋರಿಸುವ ಹನಿ ಗೈಡ್: ಪಕ್ಷಿಗಳು ಜೊತೆ-ಜೊತೆಗೆ ಸಾಮೂಹಿಕವಾಗಿ ಆಹಾರ ಹುಡುಕುವ ರೀತಿ ತಿಳಿದಿರಿ. ಈಗ ಮನುಷ್ಯನ ಜೊತೆ ಸೇರಿ ಪಕ್ಷಿಗಳು ಆಹಾರ ಪಡೆಯುವ ಉದಾಹರಣೆ ನಾವು ಆಫ್ರಿಕಾದಲ್ಲಿ ನೋಡಬಹುದು. ಹೌದು, ಆಫ್ರಿಕಾದಲ್ಲಿ ಹನಿ ಗೈಡ್ ಎನ್ನುವ ಹಕ್ಕಿ ಕಾಡು ಜನರಿಗೆ ಜೇನು ಗೂಡಿನ ಮಾರ್ಗ ತಿಳಿಸುವ ದಾರಿ ಸೂಚಕ. ಈ ಹಕ್ಕಿ ಹಾರುತ್ತಾ ಕಾಡು ಜನರಿಗೆ ಜೇನು ಗೂಡಿರುವ ಮರದ ದಾರಿ ತೋರಿಸುತ್ತದೆ. ಈ ಕಾಡು ಜನರು ಮರ ಹತ್ತಿ ಜೇನು ಓಡಿಸಿ, ಗೂಡು ತೆಗೆದು ಹಿಂಡಿದ ಗೂಡಿನ ಮೇಣ ಹನಿ ಗೈಡ್ ಹಕ್ಕಿಯ ನೆಚ್ಚಿನ ಆಹಾರ. ಕಾಡು ಜನರು ಜೇನು ಅರಸಿ ಹೋಗುವಾಗ ಈ ಹಕ್ಕಿಗೆ ಅವರದೇ ರೀತಿಯಲ್ಲಿ ಕೂಗಿ ಸೂಚನೆ ಕೊಡುತ್ತಾರೆ. ಆ ಸೂಚನೆ ಅರಿತ ಹಕ್ಕಿ ಅವರಿಗೆ ಪ್ರತಿಕ್ರಿಯಿಸುತ್ತದೆ. ಈ ಕೂಗು ಆ ಹಕ್ಕಿಗೆ ಹೇಗೆ ತಿಳಿಯುತ್ತದೆ? ಈ ಮನುಷ್ಯ – ಪಕ್ಷಿಗಳ ಪರಸ್ಪರ ಅವಲಂಬನೆ ಈಗಲೂ ವಿಜ್ಞಾನದ ಕೌತುಕಗಳಲ್ಲಿ ಒಂದಾಗಿದೆ.

ಬೆಂಕಿ ಹಚ್ಚುವ ಹಕ್ಕಿಗಳು: ನಮ್ಮಲ್ಲಿ ಆಹಾರ ಬೇಯಿಸಲು ಒಲೆಗೆ ಬೆಂಕಿ ಹಚ್ಚುವುದು ಸಾಮಾನ್ಯ, ಆದರೆ ಆಹಾರ ಹುಡುಕಲು ಪಕ್ಷಿಗಳು ಬೆಂಕಿ ಹಚ್ಚುವಷ್ಟು ಬುದ್ಧಿಶಾಲಿಗಳು ಎಂದರೆ ನಂಬಲು ಅಸಾಧ್ಯವಾದರೂ ಇದು ಸತ್ಯ. ಆಸ್ಟ್ರೇಲಿಯಾದ ಮೂಲವಾಸಿಗಳು ಆಹಾರ ಸಿಗದ ಶುಷ್ಕ ಋತುಗಳಲ್ಲಿ ಅಲ್ಲಿನ ಸವನ್ನ ಹುಲ್ಲುಗಾವಲಿಗೆ ಬೆಂಕಿ ಹಾಕುತ್ತಾರೆ. ಇದರಿಂದ ಹೊಸ ಚಿಗುರು ಹುಟ್ಟಿ ಸಣ್ಣ ಪ್ರಾಣಿಗಳು ಬಂದರೆ ಬೇಟೆಗೆ ಸಿಗುತ್ತವೆ ಎನ್ನುವುದು ಬೆಂಕಿ ಹಚ್ಚುವುದರ ಹಿಂದಿನ ಉದ್ದೇಶ. ಹೀಗೆ ಬೆಂಕಿ ಹಚ್ಚಿದಾಗ ಅಲ್ಲಿನ ಅನೇಕ ಕೀಟಗಳು ಎದ್ದು ಪಕ್ಷಿಗಳಿಗೆ ಆಹಾರವಾಗುತ್ತವೆ. ಮಾನವಶಾಸ್ತ್ರಜ್ಞ ಕಿಮ್ ಆಕೆರ್ಮನ್ ಈ ಹುಲ್ಲುಗಾವಲಿನಲ್ಲಿ 15 – 20 ಅಡಿ ದೂರದಲ್ಲಿ ಹೊತ್ತಿದ ಬೆಂಕಿಯಿಂದ ಕಪ್ಪುಗಿಡುಗವೊಂದು ಹೊಸ ಬೆಂಕಿ ಸೃಷ್ಟಿ ಮಾಡಿದ್ದನ್ನು ದಾಖಲು ಮಾಡಿದ್ದಾನೆ. ಇದು ಒಂದೇ ಬಾರಿ ನಡೆದ ಘಟನೆಯಲ್ಲ. ಅನೇಕ ಬಾರಿ ಗಿಡುಗಗಳು ಹೊಗೆಯಾಡುವ ಕಡ್ಡಿಗಳನ್ನು ಒಣ ಹುಲ್ಲುಗಾವಲುಗಳಲ್ಲಿ ಬೀಳಿಸುವ ಮೂಲಕ ಬೆಂಕಿ ಸೃಷ್ಟಿಸಿದ್ದು ದಾಖಲಾಗಿದೆ. ಈ ಹಕ್ಕಿಗಳು ಬೇಕೆಂದೇ ಈ ರೀತಿ ಬೆಂಕಿ ಸೃಷ್ಟಿಸುತ್ತವೆಯೆ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಇನ್ನೂ ಸಂಶೋಧನೆ ನಡೆಸುತ್ತಿದ್ದಾರೆ!

ಸಂಗೀತ ಮೂಡಿಸುವ ಕಾಕಟೂಗಳು: ಕೆಲವು ಹಕ್ಕಿಗಳು ಹಾಡಿ ತಮ್ಮ ಸಂಗಾತಿಯನ್ನು ಒಲಿಸುತ್ತವೆ. ಇನ್ನೂ ಕೆಲವು ತಮ್ಮ ನೃತ್ಯದ ಮೂಲಕ ಸಂಗಾತಿಯ ಮನ ಗೆಲ್ಲುತ್ತವೆ. ಇಲ್ಲೊಂದು ಪ್ರಭೇದದ ಪಕ್ಷಿ ಕಡ್ಡಿ ಉಪಯೋಗಿಸಿಕೊಂಡು ಡ್ರಮ್ ಬಾರಿಸುವಂತೆ ಸಂಗೀತ ಮೂಡಿಸುತ್ತಾ ಸಂಗಾತಿಯನ್ನು ಒಲಿಸಿಕೊಳ್ಳುತ್ತದೆ. ಹೌದು, ಆಸ್ಟ್ರೇಲಿಯಾದ ಕೆಲವು ಪ್ರದೇಶದ ಪಾಮ್ ಕಾಕಟೂಗಳು ಮರದ ಪೊಟರೆಗೆ ಕಡ್ಡಿಗಳಲ್ಲಿ ಬಡಿದರೆ ಸದ್ದು ಬರುವುದನ್ನು ಕಂಡುಕೊಂಡಿವೆ. ಇದರಿಂದ ಬರುವ ಸದ್ದಿನಿಂದಲೇ ಸಂಗಾತಿಯನ್ನು ಒಲಿಸಿಕೊಳ್ಳುತ್ತವೆ. ವಿಜ್ಞಾನಿಗಳ ಪ್ರಕಾರ ಈ ಅಭ್ಯಾಸವು ಕೆಲವು ಪ್ರದೇಶದ ಪಾಮ್ ಕಾಕಟುಗಳಿಗೆ ಮಾತ್ರ ಸೀಮಿತವಾಗಿದೆ. ಇದರರ್ಥ ಪಕ್ಷಿಗಳು ಕೂಡ ತಮ್ಮ ಜೀವನ ಕ್ರಮದಲ್ಲಿ ವಿಕಸನ ಹೊಂದುತ್ತಿವೆ ಅಲ್ಲವೇ?

© ಧನರಾಜ್ ಎಮ್.

ಪಕ್ಷಿಗಳ ಜಾಣ್ಮೆಯ ಗುಣಗಾನಕ್ಕೆ ಪೂರ್ಣವಿರಾಮ ಇಡುವುದು ಕಷ್ಟವೆ. ಬೇರೆ ಪಕ್ಷಿಗಳ ಗೂಡಲ್ಲಿ ಮೊಟ್ಟೆ ಇಡುವ ಕೋಗಿಲೆ. ಸದ್ದೆ ಇಲ್ಲದೆ ಕತ್ತಲಲ್ಲಿ ಆಹಾರ ಹಿಡಿಯುವ ಗೂಬೆ, ಭೂಮಿಯ ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೆ ವಲಸೆ ಹೋಗುವ ಆರ್ಕ್ಟಿಕ್ ರೀವಗಳು, ದಕ್ಷಿಣ ಅಮೆರಿಕಾದ ಅಟಕಮದಂತಹ ಮರುಭೂಮಿಯಲ್ಲಿ ಸಂತಾನೋತ್ಪತ್ತಿ ಮಾಡುವ ಸೋಕಾಟ್ರನ್ ನೀರುಕಾಗೆಗಳು ಎಂದಿಗೂ ಅದ್ಭುತ. ಭಾರತದಲ್ಲಿಯೂ ಈ ರೀತಿ ಅನೇಕ ಪಕ್ಷಿಗಳಿವೆ. ಸೈಬೀರಿಯಾದಿಂದ ರಾಜಸ್ಥಾನಕ್ಕೆ ಬರುವ ಸೈಬೀರಿಯನ್ ಕ್ರೇನ್ ಇವೆಲ್ಲ ಪಕ್ಷಿ ಜಗತ್ತಿನ ಕೌತುಕಗಳು. ಮನುಷ್ಯರಂತೆಯೇ ಭೂಮಿಯ ಮೇಲೆ ಅನೇಕ ಜೀವಿಗಳು ತಮ್ಮದೇ ರೀತಿಯಲ್ಲಿ ಹೊಸ ಆವಿಷ್ಕಾರ ಮಾಡಿವೆ ಹಾಗೂ ಮಾಡುತ್ತಿವೆ. ಇದನ್ನು ತಿಳಿಯಲು ಕೂತೂಹಲ ಭರಿತ ಕಣ್ಣುಗಳು ಇರಬೇಕಷ್ಟೆ!

ಲೇಖನ: ರಕ್ಷಾ
          ಉಡುಪಿ ಜಿಲ್ಲೆ

Print Friendly, PDF & Email
Spread the love
error: Content is protected.