ಸೂಕ್ಷ್ಮಜೀವಿ ಜಗತ್ತು

ಸೂಕ್ಷ್ಮಜೀವಿ ಜಗತ್ತು

©ಅರವಿಂದ ರಂಗನಾಥ

ಭಾಗ-5: ಕಾಡಿನ ಸೂಕ್ಷ್ಮಜೀವಿ ಸಮೂಹ

© ಡಾ. ಎಸ್. ಶಿಶುಪಾಲ; ಚಿತ್ರ ೧ – ಪಶ್ಚಿಮ ಘಟ್ಟದ ಆಗುಂಬೆಯ ನಿತ್ಯಹರಿದ್ವರ್ಣ ಕಾಡು

ಕಾಡು – ಒಂದು ಅದ್ಭುತ ಪ್ರಕೃತಿಯ ತಾಣ. ಅದೆಷ್ಟೋ ಜೀವಿಗಳು ಒಂದಕ್ಕೊಂದು ಪೂರಕವಾಗಿ ವಾಸಿಸುವ ಸ್ಥಳ. ಕಾಡು ಎಂದರೆ ಹಲವರಿಗೆ ಅರಾಜಕತೆಯಿರುವ ಕ್ರೌರ್ಯದ ಸ್ಥಳ ಎನಿಸಬಹುದು. ಬರೀ ಬೇಟೆಗಾರ ಪ್ರಾಣಿಗಳು ಸೌಮ್ಯ ಪ್ರಾಣಿಗಳನ್ನು ಹಿಡಿದು ತಿನ್ನುವುದನ್ನು ಗಮನದಲ್ಲಿರಿಸಿಕೊಂಡರೆ ಹಾಗೆನ್ನೆಸುವುದು ಸಹಜ. ಆದರೆ ಕಾಡು ಒಂದು ವಿಶಿಷ್ಟ ಪರಿಸರವ್ಯೂಹ (Ecosystem). ಕಾಡಿನ ಪ್ರತಿ ಇಂಚಿನ ಜಾಗದಲ್ಲೂ ನಡೆಯುತ್ತಿದೆ ಪರಾಸ್ಪರಾವಲಂಬನೆಯ ಸಹಜೀವನ. ಜೀವಿಗಳು ಪ್ರಕೃತಿ ನೀಡಿದ ತಮ್ಮ ಕರ್ತವ್ಯವನ್ನು ಕರಾರುವಕ್ಕಾಗಿ ಮಾಡುತ್ತವೆ. ಇದರಲ್ಲಿ ಮಾನವನ ಹಸ್ತಕ್ಷೇಪದಿಂದ ಏರುಪೇರಾಗಬಹುದು. ಭೂಮಿಯ ಕೇವಲ 29% ಭಾಗ ನೆಲದಿಂದ ಆವೃತವಾಗಿದೆ. ಉಳಿದ ಭಾಗ ಸಂಪೂರ್ಣ ನೀರಿನದ್ದು. ಕಾಡಿನ ಪರಿಸರವ್ಯೂಹವು ನಾಲ್ಕು ಕೋಟಿ ಇಪ್ಪತ್ತು ಲಕ್ಷ ಚದರ ಕಿಲೋಮೀಟರ್ ಗಳಷ್ಟಿದ್ದು, ನೆಲದಲ್ಲಿನ 45% ಇಂಗಾಲವನ್ನು ಸಂಗ್ರಹಿಸಿಕೊಂಡಿದೆ. ಪ್ರತಿವರ್ಷ 76 ಸಾವಿರ ಕೋಟಿ ಕಿಲೋಗ್ರಾಂ ತೂಕದ ಇಂಗಾಲದ ಡೈ ಆಕ್ಸೈಡ್ ಅನ್ನು ಕಾಡು ಹೀರಿಕೊಳ್ಳುತ್ತದೆ. ಭೂ ಪ್ರದೇಶದ 50% ರಷ್ಟು ಆಹಾರ ಉತ್ಪಾದನೆ ಕಾಡಿನಿಂದಾಗುತ್ತದೆ. ನಮ್ಮ ರಾಜ್ಯದಲ್ಲಿ ನಿತ್ಯಹರಿದ್ವರ್ಣ ಕಾಡು (ಚಿತ್ರ-೧), ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡು (ಚಿತ್ರ-೨) ಗಳಿದ್ದು, ವೈವಿಧ್ಯಮಯ ಜೀವಿಗಳಿವೆ. ಈ ಕಾಡುಗಳ ವಾತಾವರಣ ಮತ್ತು ಜೀವಿ ಸಂಕುಲಗಳ ನಡುವೆ ಸೂಕ್ಷ್ಮಜೀವಿಗಳು ನೆಲೆಸಿವೆ. ನಿಸರ್ಗ ನಿರ್ಮಿತ ಅರಣ್ಯದಲ್ಲಿ ಸೂಕ್ಷ್ಮಜೀವಿಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಭೂಮಿಯಲ್ಲಿನ ಪ್ರತಿಯೊಂದು ಜೀವಿಯೂ ಸೂಕ್ಷ್ಮಜೀವಿಗಳಿಂದಾವೃತವಾಗಿವೆ. ಪೋಷಕಾಂಶ ಚಕ್ರದ ಪ್ರಮುಖ ಕೊಂಡಿಯಾಗಿರುವ ಸೂಕ್ಷ್ಮಜೀವಿಗಳು ತಮ್ಮ ವೈಶಿಷ್ಟಪೂರ್ಣ ಚಟುವಟಿಕೆಗಳಿಂದ ಕಾಡಿನ ಸಮತೋಲನವನ್ನು ನಿರ್ವಹಿಸುತ್ತವೆ.

© ಡಾ. ಎಸ್. ಶಿಶುಪಾಲ; ಚಿತ್ರ ೨ – ಬಯಲು ಸೀಮೆಯ ಕುರುಚಲು ಕಾಡು

ಕಾಡಿನ ಸೂಕ್ಷ್ಮಜೀವಿ ಸಮೂಹ (Forest microbiome)

 ವಿಶ್ವದ ಪರಿಸರಕ್ಕೆ ಕಾಡಿನ ಕೊಡುಗೆ ಅನನ್ಯ. ಇಂಗಾಲವನ್ನು ಮಣ್ಣಿನಲ್ಲಿ ಹಿಡಿದಿಡುವುದಕ್ಕೆ ಮತ್ತು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಅನ್ನು ಎಲ್ಲಾ ಜೀವಿಗಳಿಗೆ ಅಗತ್ಯವಾದ ಆಹಾರವನ್ನು ತಯಾರಿಸಲು ಕಾಡು ಅಗತ್ಯ. ಕಾಡು ಸಂಕೀರ್ಣ ಪರಿಸರವ್ಯೂಹವೂ ಹೌದು. ಕಾಡು ಪ್ರಕೃತಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂಗಾಲದ ಡೈ ಆಕ್ಸೈಡ್ ಹೆಚ್ಚುವಿಕೆ, ಜಾಗತಿಕ ತಾಪಮಾನ ಏರಿಕೆ, ಕ್ಷಾಮ, ಕಾಳ್ಗಿಚ್ಚು, ಸಾರಜನಕ ಸ್ಥಿರೀಕರಣ, ಕೀಟ ಮತ್ತು ರೋಗ ಬಾಧೆ ಮುಂತಾದ ಅಂಶಗಳು ಕಾಡು ಸುಸ್ಥಿರ ಸ್ಥಿತಿಯಲ್ಲಿರಲು ಬಿಡಲಾರವು. ಆರೋಗ್ಯವಂತ ಕಾಡು ಈ ಎಲ್ಲಾ ಸವಾಲುಗಳನ್ನು ಸೂಕ್ತವಾಗಿ ಎದುರಿಸುವಲ್ಲಿ ಸೂಕ್ಷ್ಮಜೀವಿಗಳನ್ನು ಬಳಸಿಕೊಳ್ಳುವುದು.  ಅದರಲ್ಲೂ ಶಿಲೀಂಧ್ರಗಳು (Fungi) ಮತ್ತು ದಂಡಾಣುಗಳು (Bacteria) ಕಾಡನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಟ್ಟಾರೆಯಾಗಿ ಕಾಡಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಕಾಡಿನ ಸೂಕ್ಷ್ಮಜೀವಿ ಸಮೂಹ (Forest microbiome) ಎಂದು ಕರೆಯುವರು.

ಕಾಡಿನ ಭವಿಷ್ಯವು ಸಾವಯವ ವಸ್ತುಗಳನ್ನು ಜೀರ್ಣಿಸುವ ಶಿಲೀಂಧ್ರಗಳ ಸಂತತಿ, ಕಾರ್ಯವಿಧಾನ ಮತ್ತು ಸಂಖ್ಯೆಯನ್ನು ಅವಲಂಬಿಸಿದೆ. ಕೆಲವು ಶಿಲೀಂಧ್ರಗಳು ಕಾಡಿನಲ್ಲಿರುವ ಸಸ್ಯಗಳಿಗೆ ಉಪಯುಕ್ತವಾಗಿದ್ದರೆ ಮತ್ತೇ ಕೆಲವು ಶಿಲೀಂಧ್ರಗಳು ಸಸ್ಯರೋಗಕಾರಕಗಳಾಗಿವೆ. ಕೊಳೆಯುತ್ತಿರುವ ವಸ್ತುಗಳ ನಡುವೆ ಕಣ್ಣಿಗೆ ಕಾಣದಂತೆ ಹತ್ತಿಯ ಎಳೆಯಂತಹ ಶಿಲೀಂಧ್ರದ ತಂತು (Hypha) ಗಳ ಜಾಲದ ರಚನೆಯಿರುವ ಕವಕಜಾಲ (Mycelium) ವಾಗಿರುತ್ತದೆ. ಕಣ್ಣಿಗೆ ಕಾಣದ ಈ ಜಾಲವು ಭೂಮಿಯ ಮಣ್ಣಿನೊಳಗೆ ಅಥವಾ ಮರದ ಬೊಡ್ಡೆಯೊಳಗೆ ಹರಡಿರುತ್ತದೆ. ಶಿಲೀಂಧ್ರಗಳು ತಮ್ಮ ಅಪೂರ್ವ ಕಿಣ್ವಗಳಿಂದ ಸಾವಯವ ರಾಸಾಯನಿಕಗಳನ್ನು ಜೀರ್ಣಿಸುವ ಅಣಬೆಗಳು ಮಣ್ಣನ್ನು ಫಲವತ್ತುಗೊಳಿಸುತ್ತವೆ. ಪರಿಸರದಲ್ಲಿ ಲಭ್ಯವಿರುವ ಸಸ್ಯ ಮತ್ತು ಪ್ರಾಣಿಜನ್ಯ ಸಾವಯವ ವಸ್ತುಗಳನ್ನು ಕರಗಿಸಿ ಅಲ್ಲಿನ ಪೋಷಕಾಂಶಗಳನ್ನು ತಾವು ಹೀರಿಕೊಂಡು ಸಸ್ಯಗಳಿಗೂ ಹಂಚುತ್ತವೆ. ಕೆಲವು ಅಣಬೆ ಪ್ರಭೇದಗಳು ಮರಗಳ ಬೇರುಗಳ ಜೊತೆಗೆ ಸೇರಿಕೊಂಡು ಶಿಲೀಂಧ್ರ ಬೇರು (Mycorrhiza) ಎಂಬ ಸಹಜೀವನ ನಡೆಸುತ್ತವೆ. ಸಾರರಹಿತ ಮಣ್ಣಿನಲ್ಲಿ ಮರಗಳು ಚೆನ್ನಾಗಿ ಬೆಳೆಯಲು ಈ ಅಣಬೆಗಳು ಅವಶ್ಯಕವಾಗಿದ್ದು, ಅರಣ್ಯೀಕರಣಕ್ಕೆ ಸಹಕಾರಿ. ಕಾಡಿನಲ್ಲಿರುವ ಪ್ರಮುಖವಾದ ದಂಡಾಣುಗಳ ಸಂತತಿ ಮತ್ತು ಸಂಖ್ಯೆಯೂ ಬಹುಮುಖ್ಯ. ಕಾಡಿನಲ್ಲಿರುವ ಗೆದ್ದಲು ಹುಳುಗಳ ಹೊಟ್ಟೆಯಲ್ಲಿರುವ ವಿಶೇಷ ಸೂಕ್ಷ್ಮಜೀವಿಗಳು ಮರವನ್ನು ಜೀರ್ಣಿಸುವ ಕೆಲಸಮಾಡುತ್ತವೆ (ಚಿತ್ರ-೩).

© ಡಾ. ಎಸ್. ಶಿಶುಪಾಲ
ಚಿತ್ರ ೩ – ಸೂಕ್ಷ್ಮಜೀವಿಗಳ ಸಹಕಾರದೊಂದಿಗೆ ಕಾಡಿನಲ್ಲಿ ಬಿದ್ದಿರುವ ಮರಗಳನ್ನು ಜೀರ್ಣಿಸುವ ಗೆದ್ದಲುಗಳು

ಕಾಡಿನ ಸಮಸ್ಯೆಗಳು

 ಕ್ಷಾಮ ಬಂದಾಗ ಕಾಡು ಕ್ಷೀಣಿಸುತ್ತದೆ. ಮರ-ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಸಸ್ಯಗಳು ರೋಗಗಳಿಗೆ ತುತ್ತಾಗುತ್ತವೆ. ಹಾಗೆಯೇ ಕಾಳ್ಗಿಚ್ಚಿಗೆ ಸುಲಭವಾಗಿ ಬಲಿಯಾಗುತ್ತವೆ. ಇದರಿಂದ ಕಾಡು ನಾಶವಾಗಿ ಇಂಗಾಲವನ್ನು ಹೀರಿಕೊಳ್ಳುವ, ಸಂಗ್ರಹಿಸುವ ಮತ್ತು ಮರುಪೂರೈಸುವ ಕೆಲಸಗಳಿಗೆ ಅಡ್ಡಿಯುಂಟಾಗುತ್ತದೆ.

ಕಾಡಿನ ಸಮಸ್ಯೆ ನಿರ್ವಹಣೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರ

© ಡಾ. ಎಸ್. ಶಿಶುಪಾಲ
ಚಿತ್ರ ೪ – ಕಾಡಿನ ತೇವಾಂಶವಿರುವ ಮಣ್ಣಿನಲ್ಲಿ
                ಬೆಳೆಯುತ್ತಿರುವ ಪಾಚಿಗಳು (Algae)

ಸಸ್ಯಗಳ ಮತ್ತು ಸೂಕ್ಷ್ಮಜೀವಿಗಳ ಅನೂಹ್ಯ ಅನುಬಂಧ ಕಾಡಿನ ಪರಿಸರವ್ಯೂಹಕ್ಕೆ ಬಹುಮುಖ್ಯ. ಹಾಗಾಗಿ ಕಾಡಿನ ಸೂಕ್ಷ್ಮಜೀವಿ ಸಮೂಹದ ಅಧ್ಯಯನ ಪ್ರಾಮುಖ್ಯತೆಯನ್ನು ಪಡೆಯಬೇಕು. ಸಸ್ಯಗಳು ಅದರಲ್ಲಿಯೂ ಮರಗಳು ಕಾಡಿನ ಉನ್ನತ ಉತ್ಪಾದಕರ ಸ್ಥಾನದಲ್ಲಿವೆ.  ಸಸ್ಯಗಳ ಬೇರಿನ ಸುತ್ತ ಇರುವ ಮಣ್ಣನ್ನು ಬೇರುಗೋಲ (Rhizosphere) ಮತ್ತು ಎಲೆ ಮೇಲ್ಮೈ (Phylloplane) ಸೂಕ್ಷ್ಮಜೀವಿಗಳಿಂದಾವೃತವಾಗಿವೆ.  ಭೂಮಿಯಲ್ಲಿನ ಇಂಗಾಲದ ಕೆಲಭಾಗ ಮಣ್ಣಿನಲ್ಲಿ ಮರ-ಗಿಡಗಳ ಬೇರಿನ ಮೂಲಕ ಸಾವಯವ ರೂಪದಲ್ಲಿ ಸಂಗ್ರಹವಾಗಿದ್ದರೆ ಮತ್ತೆ ಕೆಲಭಾಗ ಸತ್ತ ಮರ, ಎಲೆ, ಸೊಪ್ಪು ಮುಂತಾದವುಗಳಲ್ಲಿರುತ್ತದೆ. ವಿವಿಧ ರೀತಿಯ ಕಾಡುಗಳಲ್ಲಿ ಬೇರೆ ಬೇರೆ ಪ್ರಮಾಣದ ಇಂಗಾಲವೂ ಸಂಕೀರ್ಣ ರೂಪದಲ್ಲಿರುತ್ತದೆ. ಇದನ್ನು ಅವಲಂಬಿಸಿರುವ ಸೂಕ್ಷ್ಮಜೀವಿ ಸಮೂಹದಲ್ಲಿ ಅಘಾದ ವೈವಿಧ್ಯವಿದೆ. ಮಣ್ಣಿನ ಮೇಲ್ಪದರದಲ್ಲಿನ ಸೂಕ್ಷ್ಮಜೀವಿಗಳ ಸಂಖ್ಯೆ, ವೈವಿಧ್ಯ ಮತ್ತು ಚಟುವಟಿಕೆಯನ್ನು ಆಧರಿಸಿ ಮಣ್ಣಿನ ಫಲವತ್ತತೆ ನಿರ್ಧಾರವಾಗುತ್ತದೆ. ಕಾಡಿನ ತೇವಾಂಶವಿರುವ ಮಣ್ಣಿನಲ್ಲಿ ವಿವಿಧ ರೀತಿಯ ಪಾಚಿಗಳು ಬೆಳೆದು ಅಮ್ಲಜನಕ ಹೊರಸೂಸುವುದರ ಜೊತೆಗೆ ಗಾಳಿಯ ಸಾರಜನಕವನ್ನು ಮಣ್ಣಿನಲ್ಲಿ ಸಂಗ್ರಹಿಸುವ ಕೆಲಸವನ್ನು ಮಾಡುತ್ತವೆ (ಚಿತ್ರ-೪).  ಕಾಡಿನ ಸೂಕ್ಷ್ಮಜೀವಿ ಸಮೂಹವೂ ವಿಶಿಷ್ಟವಾಗಿದೆ. ಇಲ್ಲಿರುವ ಸೂಕ್ಷ್ಮಜೀವಿಗಳು ಇಂಗಾಲ ಮತ್ತು ಸಾರಜನಕದ ಸ್ಥಿರೀಕರಣ, ಕೊಳೆಯುವಿಕೆ, ಪೋಷಕಾಂಶಗಳ ಮರುಪೂರಣ, ವನ್ಯಜೀವಿಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಸಸ್ಯಾಹಾರಿ ವನ್ಯಜೀವಿಗಳಾದ ಜಿಂಕೆ, ಕಾಡೆಮ್ಮೆ, ಆನೆ ಇತ್ಯಾದಿಗಳು ತಾವು ತಿನ್ನುವ ಆಹಾರವನ್ನು ಜೀರ್ಣಿಸಲು ವಿಶಿಷ್ಟವಾದ ಸೂಕ್ಷ್ಮಜೀವಿಗಳ ಸಮೂಹವನ್ನು ತಮ್ಮ ಕರುಳಿನಲ್ಲಿಟ್ಟುಕೊಂಡಿರುತ್ತವೆ (Gut microbiome). ಈ ಸೂಕ್ಷ್ಮಜೀವಿಗಳಿಂದ ತಮಗೆ ಬೇಕಾದ ಪೋಷಕಾಂಶಗಳನ್ನು ಪಡೆಯುತ್ತವೆ. ಈ ಸೂಕ್ಷ್ಮಜೀವಿಗಳಿಲ್ಲದಿದ್ದರೆ ಸಸ್ಯಾಹಾರಿ ಪ್ರಾಣಿಗಳು ಬದುಕಲಾರವು.

ಮಾಂಸಾಹಾರಿ ಪ್ರಾಣಿಗಳಾದ ತೋಳ, ಹುಲಿ, ಸಿಂಹ ಮುಂತಾದವುಗಳು ಸಹ ತಮ್ಮ ಕರುಳಿನ ವಿಶೇಷ ಸೂಕ್ಷ್ಮಜೀವಿಗಳ ಸಹಾಯದಿಂದ ತಮಗೆ ಅಗತ್ಯವಾದ ಜೀವಸತ್ವಗಳು (Vitamins) ಮತ್ತು ಇತರೆ ಪೋಷಕಾಂಶಗಳನ್ನು ಪಡೆಯುತ್ತವೆ.  ಇವುಗಳಲ್ಲಿರುವ ಸೂಕ್ಷ್ಮಜೀವಿ ಸಮೂಹವು ಅವುಗಳ ಆರೋಗ್ಯವನ್ನು ನಿರ್ವಹಿಸುತ್ತವೆ. ಅಂತೆಯೇ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಸಸ್ಯದ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತಿರುತ್ತವೆ. ಪ್ರತಿಯೊಂದು ಸಸ್ಯ ಪ್ರಭೇದವು ತನ್ನದೇ ಆದ ಸೂಕ್ಷ್ಮಜೀವಿ ಸಮೂಹವನ್ನು ಹೊಂದಿರುತ್ತದೆ. ತನ್ನ ಬೇರಿನಿಂದ ಸ್ರವಿಸುವ ಕೆಲವು ರಾಸಾಯನಿಕಗಳು ಬೇರಿನ ಸುತ್ತಲಿನ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ನಿರ್ವಹಿಸುತ್ತವೆ. ಬೇರಿನ ಸ್ರವಿಕೆ (Root exudate) ಯಲ್ಲಿ ಅನೇಕ ಅಮೈನೋ ಅಮ್ಲಗಳು ಮತ್ತು ವಿವಿಧ ಸಕ್ಕರೆ ಅಂಶಗಳಿರುತ್ತವೆ. ಈ ರಾಸಾಯನಿಕಗಳು ಕೆಲವು ಸೂಕ್ಷ್ಮಜೀವಿಗಳ ಸಂತಾನಭಿವೃದ್ಧಿಗೆ ಸಹಕರಿಸಿದರೆ ಮತ್ತೆ ಕೆಲವು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ. ಇದನ್ನು ಬೇರುಗೋಲ ಪ್ರಭಾವ (Rhizosphere effect) ಎನ್ನುವರು. ಹಾಗಾಗಿ ಪ್ರತಿ ಸಸ್ಯ ಪ್ರಭೇದದ ಬೇರುಗೋಲದಲ್ಲಿ ವಿಶಿಷ್ಟ ಸೂಕ್ಷ್ಮಜೀವಿ ಸಮೂಹ ಸಶಕ್ತಗೊಳ್ಳುತ್ತದೆ. ಸಸ್ಯ ಮತ್ತು ಸೂಕ್ಷ್ಮಜೀವಿಗಳು ಪರಸ್ಪರಾವಲಂಬನೆಯು ಕಾಡು ಉಳಿಸಲು ಮತ್ತು ಅಳಿಸಲು ಕಾರಣವಾಗುತ್ತದೆ. ಅದೇ ರೀತಿ ಕೆಲವು ಸೂಕ್ಷ್ಮಜೀವಿಗಳು ಸಸ್ಯರೋಗಕಾರಕಗಳಾಗಿದ್ದು, ಕಾಡಿನ ಸಸ್ಯಗಳು ವಿವಿಧ ರೋಗಗಳಿಂದ ನರಳಿ ಸಾಯುವಂತೆ ಮಾಡುತ್ತವೆ. ಹಾಗೆಯೇ ಕಾಡಿನ ಪ್ರಾಣಿಗಳೂ ಸಹ ತಮ್ಮದೇ ಸೂಕ್ಷ್ಮಜೀವಿ ಸಮೂಹದಿಂದ ಆವೃತಗೊಂಡಿವೆ. ಹಾಗಾಗಿ ಕಾಡಿನ ಪ್ರಾಣಿಗಳ ಆರೋಗ್ಯವನ್ನು ಸೂಕ್ಷ್ಮಜೀವಿಗಳು ನಿರ್ಧರಿಸುತ್ತವೆ. ವನ್ಯಪ್ರಾಣಿಗಳ ನಿಯಂತ್ರಣದಲ್ಲಿ ರೋಗಕಾರಕ ಸೂಕ್ಷ್ಮಜೀವಿಗಳ ಪಾತ್ರ ಹಿರಿದು.

ಕಾಡಿನ ಪರಿಸರದಲ್ಲಿರುವ ಕೊಳೆತಿನಿಗಳು ಅಥವಾ ಪೂತಿಭಕ್ಷಕರು (Saprophytes) ಕಾಡಿನಲ್ಲಿ ಬಿದ್ದಿರುವ ಎಲೆ, ಮರ ಮತ್ತು ಸತ್ತಿರುವ ಪ್ರಾಣಿಯ ದೇಹ ಮುಂತಾದವುಗಳಲ್ಲಿರುವ ಸಂರ್ಕೀಣ ರಾಸಾಯನಿಕಗಳನ್ನು ಜೀರ್ಣಿಸಿ ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಸರಳ ಪೋಷಕಾಂಶ ರಾಸಾಯನಿಕಗಳನ್ನು ಒದಗಿಸುತ್ತವೆ. ಕಾಡಿನ ಪೋಷಕಾಂಶ ಮರುಪೂರಣ ಸೂಕ್ಷ್ಮಜೀವಿಗಳಿಂದಾಗುವ ಮುಖ್ಯ ಕೆಲಸ. ಹಾಗಾಗಿ ಒಂದು ಕಾಡಿನಲ್ಲಿರುವ ಜೈವಿಕ ಮತ್ತು ಅಜೈವಿಕ ಅಂಶಗಳು ಸೂಕ್ಷ್ಮಜೀವಿ ಸಮೂಹದ ಮೇಲೆ ಅವಲಂಬಿತವಾಗಿದೆ. ಕಾಡಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸೂಕ್ಷ್ಮಜೀವಿಗಳು ಅಗತ್ಯ. ವಿವಿಧ ರೀತಿಯ ಕಾಡುಗಳಲ್ಲಿನ ಜೈವಿಕ ಮತ್ತು ಅಜೈವಿಕ ಅಂಶಗಳ ಆಧಾರದ ಮೇಲೆ ಅಲ್ಲಿನ ಸೂಕ್ಷ್ಮಜೀವಿ ವೈವಿಧ್ಯ ಬದಲಾಗುವುದು. ಆರೋಗ್ಯ ಪೂರ್ಣ ಅರಣ್ಯಕ್ಕಾಗಿ ಸೂಕ್ಷ್ಮಜೀವಿಗಳ ಅವಶ್ಯಕತೆಯನ್ನು ಸೂಕ್ತವಾಗಿ ಮನಗಂಡರೆ ಅರಣ್ಯೀಕರಣ ಯೋಜನೆಗಳಲ್ಲಿ ಅವುಗಳನ್ನು ಬಳಸಿಕೊಳ್ಳಬಹುದು.

ಲೇಖನ: ಡಾ. ಎಸ್. ಶಿಶುಪಾಲ
                           ದಾವಣಗೆರೆ ವಿಶ್ವವಿದ್ಯಾಲಯ
, ದಾವಣಗೆರೆ ಜಿಲ್ಲೆ

Spread the love
error: Content is protected.