ಜೇನು ಪ್ರಪಂಚ: ಭಾಗ -೪
©ಪವನ್ ಕುಮಾರ್ ಟಿ. ಎಸ್.
ಕಳೆದ ಸಂಚಿಕೆಯಿಂದ…
ನಾನು ಮತ್ತು ನನ್ನ ಪರಿವಾರ ಹೇಗೆ ಅಂತ್ಯವಾದೆವು ಎಂದು ತಿಳಿಸುವ ಮೊದಲು ನನ್ನ ವಠಾರದ ಜೀವನ ಕ್ರಮದ ಬಗ್ಗೆ ತಿಳಿಸುವುದು ಹೆಚ್ಚು ಸೂಕ್ತ ಎಂದು ಭಾವಿಸುತ್ತೇನೆ. ನಿಮಗೆ ಗೊತ್ತು ನನ್ನ ಕುಟುಂಬದ ವ್ಯಾಪ್ತಿ ತುಂಬಾ ದೊಡ್ಡದು, ನಾವು ಸಾವಿರಾರು ಅಕ್ಕ-ತಂಗಿಯರು, ನೂರಾರು ಅಣ್ಣ-ತಮ್ಮಂದಿರೊಡನೆ ಜೀವಿಸುತ್ತೇವೆಂದು. ಜೊತೆಗೆ ಸಾವಿರಾರು ಮರಿಗಳು! ಇವುಗಳಿಗೆಲ್ಲಾ ಆಹಾರ ಒದಗಿಸುವುದು ಸುಲಭದ ಕೆಲಸವಲ್ಲ, ತುಂಬಾ ಶ್ರಮದಾಯಕವಾದುದು. ಇಲ್ಲಿ ನಾವು ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಉತ್ಕೃಷ್ಟವಾದ ಆಹಾರ ಸಂಗ್ರಹಣೆ ಮಾಡಬೇಕಿರುತ್ತದೆ. ಸೂಕ್ತ ಆಹಾರವಿರುವ ಹೂವಿನ ಸಮೂಹವನ್ನು ಕಂಡುಹಿಡಿಯಲೆಂದೇ ನಾವು ಪ್ರತ್ಯೇಕವಾದ ಅನ್ವೇಷಣಾ ತಂಡವನ್ನೇ ರಚಿಸಿರುತ್ತೇವೆ. ಈ ಅನ್ವೇಷಕ ತಂಡದ ನೊಣಗಳ ಕೆಲಸ, ಸೂಕ್ತ ಆಹಾರ ಒದಗಿಸುವ ಹೂವಿನ ಸಮೂಹ ಕಂಡುಹಿಡಿದು, ಅಲ್ಲಿ ಎಷ್ಟು ಆಹಾರ ಲಭ್ಯವಿದೆ? ಎಷ್ಟು ದೂರದಲ್ಲಿದೆ? ಯಾವ ದಿಕ್ಕಿನಲ್ಲಿದೆ? ಎಂಬ ಮಾಹಿತಿಯನ್ನು ಇನ್ನಿತರ ಸಹೋದರಿಯರಿಗೆ ತಿಳಿಸಬೇಕಿರುತ್ತದೆ. ಅದು ಅತಿ ಕಡಿಮೆ ಸಮಯದಲ್ಲಿ ಹೆಚ್ಚು ನಿಖರವಾದ ಮಾಹಿತಿಯಾಗಿರಬೇಕು.
ಆದರೆ ಇದನ್ನೆಲ್ಲಾ ತಿಳಿಸಲು ನಿಮಗೆ ಬಾಯಿ ಇದೆ, ನೀವು ಮಾತು ಬಲ್ಲವರು, ಬರವಣಿಗೆ ಗೊತ್ತು ಜೊತೆಗೆ ನಿಮಗೆ ನಿಖರವಾದ ಸ್ಥಳ ತಿಳಿಸಲು GPS ಸಾಧನಗಳಿವೆ, ದಿಕ್ಸೂಚಿಗಳಿವೆ. ಆದರೆ ನಮಗೆ ಇದರ ಬಗ್ಗೆ ಯಾವುದೇ ಅರಿವಿಲ್ಲ, ಆದರೂ ನಾವು ನಿಖರವಾದ ಸ್ಥಳವನ್ನು ತಿಳಿಸುವ ಮತ್ತು ಗ್ರಹಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದೇವೆ. ಅದು ಹೇಗೆ ಗೊತ್ತಾ? ನೃತ್ಯದ ಮೂಲಕ! ಹೌದು, ನೃತ್ಯದ ಮೂಲಕವೇ. ನೀವು ನೃತ್ಯವನ್ನು ಕೇವಲ ಕಲೆ, ಮನೋರಂಜನೆ ಸಲುವಾಗಿ ಮಾಡಿದರೆ, ನಾವು ನಮ್ಮ ಜೀವನೋಪಾಯಕ್ಕೆ ಮಾಡುತ್ತೇವೆ.
ನಮ್ಮ ವಠಾರದ ಅನ್ವೇಷಕಗಳು ಸೂಕ್ತ ಆಹಾರದ ಜಾಗ ಗುರುತಿಸಿದ ನಂತರ ಅವಳು ಜಾಗದ ಮಾಹಿತಿಯ ಜೊತೆಗೆ ಒಂದಿಷ್ಟು ಮಕರಂದ, ಪರಾಗರೇಣುಗಳನ್ನು ಮತ್ತು ಹೂವಿನ ಸುಗಂಧವನ್ನೂ ತಂದಿರುತ್ತಾಳೆ. ಅವಳು ತಂದ ಮಾದರಿ ಮಕರಂದ ಮತ್ತು ಪರಾಗರೇಣುಗಳನ್ನು ಸ್ವಲ್ಪ-ಸ್ವಲ್ಪವಾಗಿ ಇನ್ನಿತರ ಸೋದರಿಯರಿಗೆ ವಿತರಿಸಿ ಅವಳು ನೃತ್ಯದ ಮೂಲಕ ಅದರ ದೂರ ಮತ್ತು ದಿಕ್ಕನ್ನು ತಿಳಿಸುತ್ತಾಳೆ. ನಿಮ್ಮಲ್ಲಿ ಭರತನಾಟ್ಯ, ಯಕ್ಷಗಾನ, ಕಥಕ್ಕಳಿ, ಕೂಚಿಪುಡಿ ಎಂಬ ಹಲವಾರು ನೃತ್ಯ ಪ್ರಕಾರಗಳು ಇರಬಹುದು ಆದರೆ ನಮ್ಮಲ್ಲಿ ಇರುವುದು ಎರಡು ಮಾತ್ರ! ವೃತ್ತಾಕಾರದ ನೃತ್ಯ ಮತ್ತು ಅಂಕು-ಡೊಂಕಿನ ನೃತ್ಯ. ಈ ಎರಡು ಪ್ರಕಾರಗಳಲ್ಲಿಯೇ ನಾವು ಆಹಾರದ ದಿಕ್ಕು ಮತ್ತು ದೂರದ ವಿಚಾರ ತಿಳಿದುಕೊಳ್ಳುತ್ತೇವೆ.
ಅನ್ವೇಷಿಸಿದ ಆಹಾರದ ಸ್ಥಳ ನಮ್ಮ ವಠಾರದ 50 ಮೀಟರ್ ಪರಿಧಿಯ ಒಳಗಿದ್ದಾದಲ್ಲಿ ಅನ್ವೇಷಕಳು ವೃತ್ತಾಕಾರದ ನೃತ್ಯ ಮಾಡುತ್ತಾಳೆ. ವಠಾರದ ಷಡ್ಭುಜೀಯ ಕೋಣೆಗಳ ಮೇಲೆ ನರ್ತಿಸುತ್ತಾಳೆ, ಅವಳು ವೃತ್ತಾಕಾರವಾಗಿ ವೇಗವಾಗಿ ಕುಣಿಯುತ್ತಾ ಒಂದು ದಿಕ್ಕಿನಲ್ಲಿ ಸುತ್ತಿ ಮತ್ತೆ ವಿರುದ್ದ ದಿಕ್ಕಿನಲ್ಲಿ ಆ ವೃತ್ತದ ಒಳಗೆ ಮತ್ತೊಂದು ಸಣ್ಣ ವೃತ್ತವನ್ನು ಹಾಕುತ್ತಾಳೆ (ಚಿತ್ರ-1), ಇದನ್ನೇ ವಠಾರದಲ್ಲಿ ಬೇರೆ-ಬೇರೆ ಕಡೆ ಇತರ ಸೋದರಿಯರಿಗೆ ತಿಳಿಸುವ ಸಲುವಾಗಿ ಆ ನೃತ್ಯವನ್ನೇ ಪುನರಾವರ್ತಿಸುತ್ತಾಳೆ. ಇಲ್ಲಿ ಇವಳ ನೃತ್ಯದಿಂದ ಕೇವಲ ಆಹಾರ 50 ಮೀ. ಪರಿಧಿಯಲ್ಲಿದೆ ಎಂದು ಮಾತ್ರ ತಿಳಿದಿರುತ್ತದೆ ಆದರೆ ಆಹಾರ ಮನೆಗೆ ಹತ್ತಿರವೇ ಇದ್ದ ಕಾರಣ ಮತ್ತು ಅವಳು ತಂದ ಹೂವಿನ ಸುಗಂಧದಿಂದ ನಾವು ಪತ್ತೆ ಹಚ್ಚಲು ಹೆಚ್ಚು ಸಮಯ ಮತ್ತು ಶ್ರಮ ಬೇಕಿರುವುದಿಲ್ಲ.
ಒಂದು ವೇಳೆ ಆಹಾರ 50 ಮೀಟರ್ ಗಿಂತಲೂ ಹೆಚ್ಚು ದೂರವಿದ್ದ ಪಕ್ಷದಲ್ಲಿ ಅವಳು ಅಂಕು-ಡೊಂಕಿನ ನೃತ್ಯ ಮಾಡುತ್ತಾಳೆ. ಇಲ್ಲಿ ಅವಳು ನಿಖರವಾದ ದಿಕ್ಕು ಮತ್ತು ದೂರವನ್ನು ತಿಳಿಸುವುದರ ಜೊತೆಗೆ ಆಹಾರದ ಮಾದರಿಯನ್ನು ತಂದಿರುತ್ತಾಳೆ. ಈ ನೃತ್ಯವನ್ನು ಸಹ ವಠಾರದ ಕೋಣೆಗಳ ಮೇಲೆಯೇ ಮಾಡುತ್ತಾಳೆ. ಅವಳು ದಿಕ್ಕನ್ನು ಸೂಚಿಸಲು ಸೂರ್ಯನನ್ನು ಪ್ರಧಾನವಾಗಿ ಇಟ್ಟುಕೊಂಡು ನೃತ್ಯ ಮಾಡುತ್ತಾಳೆ. ಚಿತ್ರದಲ್ಲಿ (ಚಿತ್ರ-2)
ಇರುವಂತೆಯೇ ಆಹಾರ ಸೂರ್ಯನಿರುವ ದಿಕ್ಕಿನಲ್ಲಿದ್ದರೆ ಅದು ತನ್ನ ನೃತ್ಯವನ್ನು (ಚಿತ್ರ-3) A ಬಿಂದುವಿನಿಂದ ಪ್ರಾರಂಭಿಸಿ B ಬಿಂದುವಿಗೆ ತನ್ನ ಹೊಟ್ಟೆ ಭಾಗವನ್ನು ಅಂಕು-ಡೊಂಕಾಗಿ ಅಲುಗಾಡಿಸುತ್ತಾ ಮತ್ತೆ A ಬಿಂದುವಿನಿಂದ ಅರ್ಧ ವೃತ್ತಾಕಾರವಾಗಿ B ಬಿಂದುವಿಗೆ ತಲುಪಿ ತಾನು ಸಾಗಿದ ನೇರವಾದ ದಾರಿಯಲ್ಲಿ ಮತ್ತೆ ಹೊಟ್ಟೆ ಭಾಗವನ್ನು ಅಂಕು-ಡೊಂಕಾಗಿ ಅಲುಗಾಡಿಸುತ್ತಾ A ಬಿಂದುವಿಗೆ ಸಾಗಿ ಇನ್ನೂ ಉಳಿದ ಅರ್ಧ ವೃತ್ತವನ್ನು ಪೂರ್ಣಗೊಳಿಸಿ ಮತ್ತೆ ಮತ್ತೊಂದು ಭಾಗದ ವಠಾರದಲ್ಲಿ ಇನ್ನುಳಿದ ಸಹೋದರಿಯರಿಗೆ ಮಾಹಿತಿ ತಿಳಿಸಲು ನೃತ್ಯವನ್ನು ಪುನಾರಾವರ್ತಿಸುತ್ತಾಳೆ. ಒಂದೊಮ್ಮೆ ಆಹಾರವು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಇದ್ದಲ್ಲಿ ಅವಳು ತನ್ನ ನೃತ್ಯವನ್ನು B ಬಿಂದುವಿನಿಂದ ಪ್ರಾರಂಭಿಸಿ A ಬಿಂದುವಿಗೆ ತಲುಪಿ ಮತ್ತೆ ಆಗಲೇ ತಿಳಿಸಿರುವಂತೆ ಎರಡು ಅರ್ಧ ವೃತ್ತಗಳನ್ನು ಕುಣಿಯುತ್ತಾಳೆ. ಒಂದು ವೇಳೆ ಆಹಾರ ಸೂರ್ಯನಿಗೆ 600 ದಿಕ್ಕಿನಲ್ಲಿ ಇದ್ದ ಪಕ್ಷದಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಆ ಕೋನದಲ್ಲಿ ನೃತ್ಯ ಪ್ರದರ್ಶಿಸುತ್ತಾಳೆ.
ಅವಳು ದಿಕ್ಕನ್ನೇನೋ ತಿಳಿಸಬಹುದು, ಆದರೆ ದೂರ? ನೀವು ಗಮನಿಸಿರಬಹುದು A ಬಿಂದುವಿನಿಂದ B ಬಿಂದುವಿಗೆ ಇರುವ ದೂರ ಮತ್ತು ಆ ಸಮಯದಲ್ಲಿ ಎಷ್ಟು ಬಾರಿ ತನ್ನ ಹೊಟ್ಟೆಯನ್ನು ಅಂಕು-ಡೊಂಕಾಗಿ ಅಲ್ಲಾಡಿಸಿದಳು ಎಂಬುದರ ಮೇಲೆ ದೂರ ಅಳೆಯುತ್ತೇವೆ. A ಬಿಂದುವಿನಿಂದ B ಬಿಂದುವಿಗೆ ದೂರ ಹೆಚ್ಚಾದಂತೆ ವಠಾರದಿಂದ ಆಹಾರ ಇರುವ ಸ್ಥಳ ದೂರ ಇದೆಯೆಂದು ಅರ್ಥ. A ಬಿಂದುವಿನಿಂದ B ಬಿಂದುವಿಗೆ ತಲುಪಲು 1 ಸೆಕೆಂಡ್ ತೆಗೆದುಕೊಂಡ ಪಕ್ಷದಲ್ಲಿ ಆಹಾರ ಸುಮಾರು 1000 ಮೀ. ದೂರದಲ್ಲಿದೆ ಎಂದೂ, 2 ಸೆಕೆಂಡ್ ತೆಗೆದುಕೊಂಡ ಪಕ್ಷದಲ್ಲಿ ಸುಮಾರು 2000 ಮೀ. ದೂರದಲ್ಲಿದೆ ಎಂದು ಅರ್ಥ. (ಚಿತ್ರ-3)
ಇದು ನಮ್ಮಲ್ಲಿ ಆಹಾರದ ವಿಷಯದಲ್ಲಿ ನಡೆಯುವ ಸಂವಹನಾ ಕ್ರಿಯೆ… ನೀವು ಸಹ ನೃತ್ಯದ ಮೂಲಕ ಸಂವಹನ ಮಾಡಬಹುದಾ? ಯೋಚಿಸುತ್ತಿರಿ . . .
ಮುಂದುವರೆಯುವುದು…
ಲೇಖನ: ಹರೀಶ ಎ. ಎಸ್. ಜಿಕೆವಿಕೆ, ಬೆಂಗಳೂರು ನಗರ ಜಿಲ್ಲೆ