ಜೇನು ಪ್ರಪಂಚ: ಭಾಗ ೨
© ನಾಗೇಶ್ ಒ. ಎಸ್.
ಕಳೆದ ಸಂಚಿಕೆಯಿಂದ…
ನಾನು ನನ್ನ ಕೆಲಸ ಕಾರ್ಯಗಳು ಏನೆಂದು ಅರಿತು ನನ್ನ ಕೆಲಸ ಕಾರ್ಯಗಳಲ್ಲಿ ತೊಡಗಬೇಕಿರುತ್ತದೆ. ನನ್ನ ಪಾಲಿನ ಕೆಲಸ ನನ್ನ ವಯಸ್ಸಿಗೆ ತಕ್ಕಂತೆ ಇದ್ದು, ಅದರಂತೆ ಮಾಡಬೇಕಿರುತ್ತದೆ. ಇಲ್ಲಿ ನಾನು ನನ್ನ ಕರ್ತವ್ಯವನ್ನು ಅರಿತು ಅದರಂತೆ ನಡೆದುಕೊಳ್ಳಬೇಕಿರುತ್ತದೆ. ಇಲ್ಲಿ ನನ್ನ ತಾಯಿಯೇ ನಮಗೆಲ್ಲಾ ರಾಣಿಯಾಗಿದ್ದು, ಎಲ್ಲರೂ ಅವಳ ಅಣತಿಯಂತೆ ನಡೆದುಕೊಳ್ಳುತ್ತೇವೆ. ವಯಸ್ಸಿಗೆ ಬಂದ ಮೊದಲ ಮೂರು ದಿನಗಳು ನಾನು ನನ್ನ ಇಡೀ ವಠಾರದ ಸ್ವಚ್ಛತೆಯನ್ನು ಮಾಡಬೇಕಿರುತ್ತದೆ. ಪ್ರತಿಯೊಂದು ಕೋಣೆಗೂ ಭೇಟಿಕೊಟ್ಟು ಸತ್ತ, ರೋಗಕ್ಕೆ ತುತ್ತಾದ ಮರಿಗಳನ್ನು ತೆಗೆದು ಸ್ವಚ್ಛತೆ ಕಾಪಾಡಬೇಕಿರುತ್ತದೆ. ಜೊತೆಗೆ ಪ್ರತಿಯೊಂದು ಕೊಣೆಗೂ ಹೊಸ ಹೊಳಪು ನೀಡಬೇಕಿರುತ್ತದೆ. ಮೂರರಿಂದ ಹದಿನಾರನೇ ದಿನಗಳವರೆಗೂ ಸ್ವಚ್ಛತೆ, ಸೋದರ-ಸೋದರಿಯರಿಗೆ ಜೇನು ಮಿಶ್ರಿತ ಪರಾಗರೇಣುಗಳ ಊಟವನ್ನು ಉಣಿಸಬೇಕಿರುತ್ತದೆ. ಸಾಮಾನ್ಯವಾಗಿ ಒಂದು ದಿನದಲ್ಲಿ ನಾವು ಒಂದು ಮರಿಯ ಕೋಣೆಗೆ 1,000 ರಿಂದ 1,300 ಬಾರಿ ಭೇಟಿ ನೀಡಿರುತ್ತೇವೆ. ಇದರ ಜೊತೆಗೆ, ರಾಣಿಯ ಸೇವೆಯನ್ನೂ ಮಾಡಬೇಕಿರುತ್ತದೆ. ಆದರೆ ಆ ಸಮಯಕ್ಕೆ ಯಾವುದು ಪ್ರಮುಖವೋ ಅದನ್ನು ಅರಿತು ಕೆಲಸಗಳನ್ನು ಮಾಡಬೇಕಿರುತ್ತದೆ. ಕೆಲವೊಮ್ಮೆ ನನ್ನ ಹಿರಿಯ ಸಹೋದರಿಯರು ತರುವ ಮಕರಂದ ಮತ್ತು ಪರಾಗರೇಣುಗಳನ್ನು ತೆಗೆದುಕೊಂಡು ಜೋಪಾನವಾಗಿ ಶೇಖರಿಸಬೇಕಿರುತ್ತದೆ. ಹನ್ನೆರಡು ದಿನದಿಂದ ಹದಿನೆಂಟು ದಿನದ ಕಾಲಾವಧಿಯಲ್ಲಿ ಮಕರಂದವನ್ನು ಪಕ್ವಗೊಳಿಸುವ ಕಾರ್ಯವನ್ನು ಮಾಡಬೇಕಿರುತ್ತದೆ. ಅಂದರೆ ನನ್ನ ರೆಕ್ಕೆಗಳನ್ನು ವೇಗವಾಗಿ ಆಡಿಸುವ ಮೂಲಕ ಮಕರಂದದಲ್ಲಿರುವ ಶೇಕಡ ಎಪ್ಪತ್ತರಷ್ಟು ನೀರಿನಂಶವನ್ನು ಶೇಕಡ ಹದಿನೆಂಟರಿಂದ ಇಪ್ಪತ್ತಕ್ಕೆ ಇಳಿಸಬೇಕಿರುತ್ತದೆ. ನಾನು ವಯಸ್ಸಿಗೆ ಬಂದ ಹನ್ನೆರಡು ದಿನಗಳ ನಂತರ ನಾನು ನನ್ನ ಮೇಣ ಗ್ರಂಥಿಗಳ ಮೂಲಕ ಮೇಣವನ್ನು ಉತ್ಪಾದಿಸಬಲ್ಲವಳಾಗಿದ್ದು, ಇಲ್ಲಿ ನಾನು 1 ಗ್ರಾಂ ಮೇಣ ಉತ್ಪಾದಿಸಲು 8 ಗ್ರಾಂ ತುಪ್ಪವನ್ನು ತಿನ್ನಬೇಕಿರುತ್ತದೆ, ಅಂದರೆ ಇದು ತುಂಬಾ ಕಷ್ಟಕರ ಕೆಲಸವಾಗಿರುತ್ತದೆ.
ಹದಿನೆಂಟರಿಂದ ಇಪ್ಪತ್ತೊಂದು ದಿನದ ವಯಸ್ಸಿನಲ್ಲಿ ನಾನು ನನ್ನ ವಠಾರದ ರಕ್ಷಣೆಯಲ್ಲಿ ತೊಡಗಬೇಕಿದ್ದು, ನಾನು ಸೈನಿಕಿಯಾಗಿ (ಸೈನಿಕ ಎಂಬುದು ಲಿಂಗ ತಟಸ್ಥವಾದ ಪದವಾಗಿದ್ದರೂ ಸಾಮಾನ್ಯವಾಗಿ ಸೈನಿಕ ಎಂದರೆ ಗಂಡು ಎಂದೇ ಪುರುಷ ಪ್ರಧಾನ ಸಮಾಜ ನಂಬಿಕೆ ಇದೆ. ಆದ್ದರಿಂದ ಉದ್ದೇಶ ಪೂರ್ವಕವಾಗಿ ಈ ಸೈನಿಕಿ ಪದ ಬಳಸಲಾಗಿದೆ) ನನ್ನ ಮನೆಯ ರಕ್ಷಣೆಯಲ್ಲಿ ತೊಡಗಬೇಕಿರುತ್ತದೆ. ನಾನು ವಠಾರಕ್ಕೆ ಹೋಗಿ ಬರುವ ಪ್ರತಿಯೊಬ್ಬರನ್ನು ಕೂಲಂಕುಷವಾಗಿ ಅವಲೋಕಿಸಬೇಕಿದ್ದು, ನಮ್ಮ ಕುಟುಂಬಕ್ಕೆ ವಿಭಿನ್ನವಾದ ಸುಗಂಧವಿರುತ್ತದೆ ಹಾಗು ಆ ಸುಗಂಧವೆ ನಮ್ಮ ಗುರುತಿನ ಚೀಟಿಯಾಗಿರುತ್ತದೆ. ಆ ಸುಗಂಧ ಇಲ್ಲವಾದಲ್ಲಿ ಒಳ ಬಿಡಲಾಗುವುದಿಲ್ಲ. ಕಾರಣ ಬೇರೊಂದು ವಠಾರದವರು ನಮ್ಮ ತುಪ್ಪ, ಪರಾಗರೇಣು ಮತ್ತು ನಮ್ಮ ಮರಿಗಳನ್ನು ಕದಿಯುವ ಅವಕಾಶವಿರುತ್ತದೆ. ಅವರನ್ನು ತಡೆದು ಓಡಿಸುವುದೇ ನನ್ನ ಕೆಲಸ. ಜೊತೆಗೆ ನಮ್ಮ ವಠಾರಕ್ಕೆ ಆಪತ್ತು ಬಂದಲ್ಲಿ ನಾನು ನನ್ನ ಪ್ರಾಣವನ್ನೇ ಪಣವಿಟ್ಟು ನಮ್ಮ ವಠಾರವನ್ನು ರಕ್ಷಿಸುತ್ತೇನೆ. ನಮ್ಮಲ್ಲಿ ಯುದ್ಧವೆಂದರೆ ಪ್ರಾಣವನ್ನು ಅರ್ಪಿಸುವುದೇ ಆಗಿದ್ದು, ನಮ್ಮ ಆಯುಧ ವಿಷಕಾರಕ ಕುಟುಕವಾಗಿದ್ದು, ಒಮ್ಮೆ ನಾವು ನಮ್ಮ ವೈರಿಗೆ ಚುಚ್ಚಿದಲ್ಲಿ ನಮ್ಮ ಕುಟುಕದ ಜೊತೆಗೆ ನಮ್ಮ ಇಡೀ ಜೀರ್ಣಾಂಗವೇ ಹೊರ ಬರುವುದರಿಂದ ನಾವು ಸಾಯಬೇಕಿರುತ್ತದೆ.
ವಯಸ್ಸಿಗೆ ಬಂದ 21 ದಿನಗಳ ನಂತರ ನಮ್ಮ ಮುಖ್ಯ ಕೆಲಸಕ್ಕೆ ನಿಯೋಜಿಸಲ್ಪಡುತ್ತೇವೆ. ಇಲ್ಲಿ ನಾನು ಮಕರಂದ ಮತ್ತು ಪರಾಗರೇಣುಗಳನ್ನು ಸಂಗ್ರಹಿಸುವ ಕ್ಷೇತ್ರ ಸಂಗ್ರಹಕಾರಳಾಗಿ ನಿಯೋಜಿಸಲ್ಪಡುತ್ತೇನೆ. ಇಲ್ಲಿ ನಾನು ಎಲ್ಲಾ ಪ್ರಾಕೃತಿಕ ಅಡೆ-ತಡೆಗಳನ್ನು ಮೀರಿ ನನ್ನ ಪರಿವಾರಕ್ಕೆ ಆಹಾರ ಒದಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಆದರೆ ನನ್ನ ಇಡೀ ಜೀವಿತಾವಧಿಯಲ್ಲಿ ಕೇವಲ 0.8 ಗ್ರಾಂ ನಷ್ಟು ತುಪ್ಪವನ್ನು ಮಾತ್ರ ಸಂಗ್ರಹಿಸಬಹುದು. ನಾವು ಒಂದು ಕಿ. ಗ್ರಾಂ ತುಪ್ಪ ಶೇಖರಿಸಲು ನನ್ನಂತ 12,500 ಜೇನುನೊಣಗಳ ಪರಿಶ್ರಮವಿರುತ್ತದೆ ಮತ್ತು ಅದಕ್ಕೆ ಅನುಸಾರವಾಗಿ ನಾವು 44,05,286 ಹೂಗಳಿಗೆ ಭೇಟಿ ನೀಡಬೇಕಿರುತ್ತದೆ. ಈ ಸಮಯದಲ್ಲಿ. ನಾವು ಸುಮಾರು 1,94,965 ಕಿ. ಮೀ. ನಷ್ಟು ದೂರವನ್ನು ಕ್ರಮಿಸಿರುತ್ತೇವೆ ಅಂದರೆ ಭೂಮಿಯನ್ನು 3 ಬಾರಿ ಸುತ್ತು ಹಾಕಿದಷ್ಟು ದೂರವನ್ನು ಕ್ರಮಿಸಿರುತ್ತೇವೆ.
ಮೊದಲ ದಿನ
ಕಳೆದ 21 ದಿನಗಳಿಂದ ವಠಾರದೊಳಗಿನ ಕೆಲಸದಿಂದ ಮೊದಲ ಬಾರಿ ಹೊರಗಿನ ಕೆಲಸಕ್ಕೆ ಅಂದರೆ ಮಕರಂದ ಮತ್ತು ಪರಾಗರೇಣು ಸಂಗ್ರಹಣೆಗೆ ನಿಯೋಜನೆಗೊಂಡ ದಿನ. ಮುಂಜಾನೆ 5:30 ರ ಸಮಯ; ಮೊದಲ ಬಾರಿ ರೆಕ್ಕೆ ಬಿಚ್ಚಿ ಹಾರಾಡುವ ಸಮಯ. ಈಗಾಗಲೇ ನಾನು ರಕ್ಷಣೆಯಲ್ಲಿ ರೆಕ್ಕೆ ಬಿಚ್ಚಿ ಹಾರಾಡಿದ್ದೆನಾದರೂ ಈ ಬಾರಿಯ ಹಾರಾಟದಲ್ಲಿ ಒಂದು ವಿಧವಾದ ಆನಂದ, ಭಯ, ಅಂಜಿಕೆ, ಕುತೂಹಲ ಎಲ್ಲಾ ಭಾವನೆಗಳ ಸಮ್ಮಿಲನ. ನನ್ನ ವಠಾರದ ಬಗ್ಗೆ, ಇದರ ಸುತ್ತಲಿನ ಪರಿಸರದ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ವಠಾರವನ್ನು ಬಿಟ್ಟು ದೂರ ಹೋಗುವಂತಿಲ್ಲ, ಹೋದರೂ ಮತ್ತೆ ಮನೆಗೆ ಹಿಂತಿರುಗುತ್ತೇನೆಂಬ ನಂಬಿಕೆ ಇಲ್ಲ. ಆದ್ದರಿಂದ ನಾನು ನನ್ನ ಮನೆಯ ಸುತ್ತಲಿನ ಪ್ರತಿಯೊಂದು ವಿವರಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಲಾರಂಭಿಸಿದೆ. ನನ್ನ ವಠಾರವನ್ನು ಒಂದು ಸಣ್ಣ ಮಾವಿನ ಮರದ ಕೊಂಬೆಗೆ ಅಂಟಿಸಿದಂತಿತ್ತು, ಇದರ ಸುತ್ತಮುತ್ತಲೂ ಇತರ ಮರಗಳು ಹಚ್ಚ-ಹಸಿರಿನಿಂದ ಕಂಗೊಳಿಸುತ್ತಿತ್ತು, ನನ್ನ ವಠಾರವನ್ನು ನೇರವಾದ ಬೆಳಕು, ಮಳೆ, ಗಾಳಿಯಿಂದ ಮರೆಮಾಚಿತ್ತು. (ಇದೆಲ್ಲಾ ಮನುಷ್ಯ ಕಾಣುವ ರೀತಿ. ನಮಗೆ ಪ್ರತಿಯೊಂದು ಬಣ್ಣ, ಬೆಳಕು, ವಿನ್ಯಾಸ ಬೇರೆಯೇ ರೀತಿಯದ್ದಾಗಿದೆ. ಅದು ಹೇಗೆ ಮತ್ತು ಏಕೆಂದು ಮುಂದೆ ತಿಳಿಸುವೆ).
ನಾನು ಮೊದಲ ಬಾರಿ ಹಾರಿ ಬಂದಾಗ ಇನ್ನೂ ಸೂರ್ಯ ಉದಯಿಸಿರಲಿಲ್ಲ ಆದರೂ ನೇರಳೆ ಕಿರಣಗಳ ಬೆಳಕಿನಲ್ಲಿ ನಾನು ಎಲ್ಲವನ್ನು ನೋಡಬಹುದಾಗಿದ್ದೆ. ನಮ್ಮ ಮನೆಯ ಮಾವಿನ ಮರದ ಕಾಂಡವು ಸಾಧಾರಣ ದಪ್ಪವಿದ್ದು, ನಮ್ಮ ಮನೆ ನೆಲದಿಂದ ಸುಮಾರು 5 ಮೀಟರ್ ಎತ್ತರದಲ್ಲಿತ್ತು. ನಮ್ಮ ಮನೆಯ ಪಶ್ಚಿಮಕ್ಕೆ ದೊಡ್ಡ ಬಂಡೆಗಳಿಂದ ಕೂಡಿದ ಗುಡ್ದವಿದ್ದು, ಉತ್ತರಕ್ಕೆ 100 ಮೀಟರ್ ದೂರದಲ್ಲಿ ಹತ್ತಿಯ ಬೆಳೆ ಸ್ಪಷ್ಟವಾಗಿ ಕಾಣಬಹುದಾಗಿತ್ತು, ದಕ್ಷಿಣ ದಿಕ್ಕಿಗೆ ಯದ್ವ-ತದ್ವ ಬೆಳೆದ ಬೇಲಿ, ಯುಪಟೋರಿಯಂ ಮುಂತಾದ ಗಿಡಗಳಿದ್ದು, ಅದರಾಚೆಗೆ ಕಂಗೊಳಿಸುವ ಸೂರ್ಯಕಾಂತಿಯ ಬೆಳೆ ಕಾಣಬಹುದಾಗಿತ್ತು. ಪೂರ್ವದಿಕ್ಕಿಗೆ ದೊಡ್ಡ ಮರಗಳ ಸಮೂಹವಿದ್ದು, ಮಧ್ಯಭಾಗದಲ್ಲಿ ಮನುಷ್ಯರು ವಾಸಿಸುವ ಸಣ್ಣ-ಸಣ್ಣ ಮನೆಗಳ ಸಮೂಹವಿತ್ತು. ನನ್ನ ಮನೆಯ ಸುತ್ತಲಿನ ಸೂಕ್ಷ್ಮ ವಿವರಗಳ ಬಗ್ಗೆ ಅರಿಯುವುದಕ್ಕೆ ನನ್ನ ಇಡೀ ದಿನವನ್ನೇ ಮೀಸಲಿಟ್ಟೆ. ಪ್ರತಿ 4-5 ನಿಮಿಷಕ್ಕೆ ನನ್ನ ಮನೆಗೆ ಹಿಂತಿರುಗುವುದು, ರಕ್ಷಣೆಯ ಗಸ್ತು ತಿರುಗುವುದರಲ್ಲಿ, ನನ್ನ ಹಿರಿಯ ಸಹೋದರಿಯರು ತರುವ ಮಕರಂದ ಮತ್ತು ಪರಾಗರೇಣುಗಳನ್ನು ಪಡೆದು ಸಂಗ್ರಹಿಸುವುದರಲ್ಲಿ ಕಾಲ ಕಳೆದೆ.
ಎರಡನೇ ದಿನ
ಹಿಂದಿನ ರಾತ್ರಿಯ ಮಳೆಯ ಕಾರಣ ಸರಿಯಾಗಿ ಬೆಳಕಿನ್ನು ಹರಿದಿರಲಿಲ್ಲ, ವಠಾರದ ಉಷ್ಣಾಂಶ ಸುಸ್ಥಿತಿಯಲ್ಲಿಡಲು ಯಾರೂ ವಠಾರವನ್ನು ಬಿಟ್ಟು ಹೊರ ಹೋಗಿರಲಿಲ್ಲ, ಸುಮಾರು 9:30 ರ ಸಮಯಕ್ಕೆ ಮೋಡಗಳು ಚದುರಿ ಸೂರ್ಯನ ಬೆಳಕು ಪ್ರಕಾಶಮಾನವಾದ್ದರಿಂದ ನಮ್ಮ ಪ್ರತಿನಿತ್ಯದ ಕಾರ್ಯ ಚಟುವಟಿಕೆಗಳು ಪ್ರಾರಂಭವಾದವು. ನಾನು ಹೆಚ್ಚು ದೂರ ಹಾರಾಡದೆ ಮನೆಯ ಪರಿಸರದಲ್ಲೇ ಹಾರಾಡಿ, ರಕ್ಷಣೆ ಮತ್ತು ಇತರ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡೆ. ರಾತ್ರಿಯ ಮಳೆಯ ಕಾರಣವಿರಬಹುದು, ಮಧ್ಯಾಹ್ನ ಸೂರ್ಯನ ಶಾಖ ಹೆಚ್ಚಿದ್ದರಿಂದ ಹಿರಿಯ ಸಹೋದರಿಯರು ಆಹಾರ ಸಂಗ್ರಹಣೆಗೆ ಹೋಗದೆ ಮರದ ಟೊಂಗೆಯ ಮೇಲೆ ಎಲೆಗಳ ಮೇಲೆ ವಿಶ್ರಾಂತಿಯ ಸ್ಥಿತಿಯಲ್ಲಿದ್ದರು, ನಾನು, ನನ್ನ ಸಮವಯಸ್ಕರು ವಠಾರದ ಉಷ್ಣಾಂಶವನ್ನು ಕಡಿಮೆ ಮಾಡುವ ಸಲುವಾಗಿ ನಾವು ನಮ್ಮ ರೆಕ್ಕೆಗಳನ್ನು ಹೆಚ್ಚು ವೇಗದಲ್ಲಿ ಬಡೆಯುವುದರ ಮೂಲಕ ಫ್ಯಾನಿಂಗ್ ಕಾರ್ಯದಲ್ಲಿ ತೊಡಗಿದ್ದೆವು. ಸಂಜೆ ವಾತಾವರಣ ತಂಪಾದ ನಂತರ ತಮ್ಮ-ತಮ್ಮ ವಯಸ್ಸಿಗೆ ಅನುಗುಣವಾಗಿ ಅವರವರ ಕೆಲಸ ಕಾರ್ಯಗಳಲ್ಲಿ ತೊಡಗಿದೆವು, ನಾನು ಮಾತ್ರ ನನ್ನ ಸುತ್ತಲಿನ ಪರಿಸರವನ್ನು ಇನ್ನೂ ಹೆಚ್ಚು ಅರಿಯುವಲ್ಲಿ ನಿರತಳಾದೆ.
ಮುಂದುವರೆಯುವುದು . . .
ಲೇಖನ: ಹರೀಶ ಎ. ಎಸ್.
ಜಿಕೆವಿಕೆ, ಬೆಂಗಳೂರು ನಗರ ಜಿಲ್ಲೆ