ಕೀಟ ಲೋಕದ ಹಿಟ್ಲರ್ ! ಮನುಷ್ಯ ಮುಖದ ತಿಗಣೆ..
©ಶಶಿಧರಸ್ವಾಮಿಆರ್. ಹಿರೇಮಠ
ಈ ಕೀಟವನ್ನು ನೋಡಿದ ತಕ್ಷಣವೇ ಮನುಷ್ಯನ ಮುಖವನ್ನು ಹೊಲುವಂತಿದೆ. ಕೀಟವು ಮೇಲ್ಮುಖವಾಗಿ ಕುಳಿತಾಗ ಮುಂಭಾಗದ ರೆಕ್ಕೆಗಳ ತುದಿಯಲ್ಲಿ ಗಾಢವಾದ ಕಪ್ಪು ತೇಪೆಯ ಭಾಗವು ಗಡ್ಡಧಾರಿಯಾಗಿ ಹಾಗೂ ಕೆಳಮುಖವಾಗಿ ಕುಳಿತಾಗ ಕೇಶವಿರುವ ತಲೆಯಂತೆ ಕಾಣುತ್ತದೆ. ಕಪ್ಪಾದ ಹುಸಿ-ಕಣ್ಣಿನ ಗುರುತುಗಳು ಮೀಸೆ, ಕಣ್ಣುಗಳಂತೆ ಗಮನವನ್ನು ಸೆಳೆಯುತ್ತವೆ. ತಿಗಣೆಗಳ ಮೇಲ್ಭಾಗದಲ್ಲಿ ಎರಡು ಜೋಡಿ ದೊಡ್ಡ ಕಪ್ಪು ಕಲೆಗಳನ್ನು, ಒಂದು ಜೋಡಿ ಕಪ್ಪು ಕಲೆಯೂ ತಲೆಯ ಹಿಂದೆ ತ್ರಿಕೋನ ಶಲ್ಕ ಚಿಪ್ಪು ಅಥವಾ ಪೊರೆ ಚಿಪ್ಪು (ಸ್ಕುಟೆಲ್ಲಮ್) ಪ್ರದೇಶದಲ್ಲಿ ಮತ್ತು ಇತರ ಜೋಡಿಯು ಮುಂಭಾಗದ ರೆಕ್ಕೆಗಳ ಮೇಲಿದೆ. ಗಡುಸಾದ ಗುರಾಣಿ ದೇಹವು ಮೇಲ್ಭಾಗವನ್ನು ಆವರಿಸಿ ರಕ್ಷಣೆ ಒದಗಿಸುತ್ತದೆ. ವಿಲಕ್ಷಣವಾದ ಮುಖದ ಮಾದರಿಯು ಅವುಗಳ ರಕ್ಷಣಾ ಕಾರ್ಯ ವಿಧಾನವಾಗಿದೆ. ಈ ಕೀಟವು ನಾಲ್ಕು ವಿವಿಧ ಬಣ್ಣಗಳಲ್ಲಿ ಅಂದರೆ ಕೆನೆ, ಕಿತ್ತಳೆ, ಕೆಂಪು, ಹಳದಿ ಬಣ್ಣಗಳಲ್ಲಿ ಕಂಡುಬರುತ್ತದೆ. ಈ ಗಾಡ ಬಣ್ಣಗಳು ಪರ ಭಕ್ಷಕಗಳಿಗೆ ವಿಷಕಾರಿ, ರುಚಿಕರ ಅಲ್ಲವೆಂದು ಪರ ಭಕ್ಷಕಗಳನ್ನು ದಾರಿತಪ್ಪಿಸುವುದಲ್ಲದೆ ಪರ ಭಕ್ಷಕಗಳನ್ನು ಎಚ್ಚರಿಸಲು ಸಹಾಯಕವಾಗಿದೆ. ಹೊಟ್ಟೆಭಾಗ ಬಿಳುಪಾಗಿ, ತಲೆ, ಮೀಸೆ, ಕಾಲು ಮತ್ತು ಮುಂಭಾಗದ ಪಾರ್ಶ್ವದ ಅಂಚುಗಳು ಕಪ್ಪಾಗಿವೆ. “ಮನುಷ್ಯ ಮುಖದ ತಿಗಣೆ” ಗಳನ್ನು ಇಂಗ್ಲೀಷಿನಲ್ಲಿ “ಮ್ಯಾನ್ ಪೇಸ್ಡ್ ಸ್ಟಿಂಕ್ ಬಗ್ (Man-faced Stink Bug) ಅಥವಾ “ಹಿಟ್ಲರ್ ಬಗ್” (Hitler Bug) ಎಂದು ಕರೆದು, ವೈಜ್ಞಾನಿಕವಾಗಿ ಕ್ಯಾಟಕಾಂಥಸ್ ಇನ್ಕಾರ್ನಾಟಸ್ (Catacanthus incarnatus) ಎಂದು ಹೆಸರಿಸಿ, ಸಂಧಿಪದಿಗಳ ಕೀಟ ವರ್ಗದ, ಅರ್ಧಪಕ್ಷೀಯ ಹೆಮಿಪ್ಟೆರಾ (Hemiptera) ಗಣದ, ಪೆಂಟಾಟೊಮಿಡೆ (Pentatomidae) ಕುಟುಂಬಕ್ಕೆ ಸೇರಿಸಲಾಗಿದೆ.
ಮಿಲನದ ನಂತರ ಹೆಣ್ಣು ತಿಗಣೆಯು ಎಲೆಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಹೊರ ಬರುವ ರೆಕ್ಕೆಗಳಿಲ್ಲದ ಮರಿಹುಳುಗಳು ಕಪ್ಪು ಮತ್ತು ಬಿಳಿ ವರ್ಣಗಳಲ್ಲಿದ್ದು, ಇವು ಸಹ ಎಳೆಯ ಚಿಗುರೆಲೆಗಳ ರಸವನ್ನು ಹೀರುವ ಮೂಲಕ ಹಾನಿಯನ್ನುಂಟುಮಾಡುತ್ತವೆ. ಈ ತಿಗಣೆಗಳು ಒಟ್ಟಾರೆ ಫೆರೋಮೋನ್ ಅನ್ನು ಉತ್ಪತ್ತಿ ಮಾಡುತ್ತವೆ, ಇದರಿಂದ ಒಂದೇ ಗಿಡದಲ್ಲಿ ಅಧಿಕ ಸಂಖ್ಯೆಗಳಲ್ಲಿ ಈ ತಿಗಣೆಗಳು ಒಟ್ಟಿಗೆ ಸೇರಿಕೊಳ್ಳುತ್ತವೆ. ಕಿಸ್ಕಾರ (ಕಿಸುಕಾರೆ) ಮತ್ತು ಕೆಂಪು ತುರಾಯಿ (ಗುಲ್ಮೊಹರ್) ಗಿಡದ ಒಂದು ಶಾಖೆಯಲ್ಲಿ 400-500 ತಿಗಣೆಗಳು ಮತ್ತು ಒಂದೇ ಒಂದು ಗೋಡಂಬಿ ಮರದಲ್ಲಿ 300 ತಿಗಣೆಗಳು ಗುಂಪಾಗಿ ಸೇರಿಕೊಂಡಿರುವ ಬಗ್ಗೆ ವರದಿಯಾಗಿವೆ. ಕಾಂಡ, ಚಿಗುರೆಲೆ, ಹಣ್ಣುಗಳನ್ನು ಆಕ್ರಮಣಕಾರಿಯಾಗಿ ಭಕ್ಷಿಸಿ ಸರ್ವಾಧಿಕಾರಿ ಧೋರಣೆ ತೋರುವುದರಿಂದ ಇವಕ್ಕೆ “ಹಿಟ್ಲರ್ ಬಗ್” ಎಂಬ ಹೆಸರು ಬಂದಿದೆ.
ವಯಸ್ಕ ಮತ್ತು ಮರಿಹುಳುಗಳು ಎಳೆಯ ಚಿಗುರೆಲೆಗಳ ರಸವನ್ನು ಹೀರುವ ಮೂಲಕ ಹಾನಿಯನ್ನುಂಟುಮಾಡುತ್ತವೆ. ಎಲೆಗಳನ್ನು ಹಾನಿಗೊಳಿಸುವುದಲ್ಲದೆ ಸೂಕ್ಷ್ಮಜೀವಿಗಳು ಆಕ್ರಮಿಸಿ ಹಣ್ಣುಗಳನ್ನು ಕೊಳೆಯುವಂತೆ ಮಾಡುತ್ತವೆ. ಇವು ಪ್ರಮುಖವಾಗಿ ಅಲಂಕಾರಿಕ ಸಸ್ಯಗಳಾದ ಕಿಸ್ಕಾರ (ಕಿಸುಕಾರೆ) ಮತ್ತು ಕೆಂಪು ತುರಾಯಿ (ಗುಲ್ಮೊಹರ್), ಅರಣ್ಯ ಮರಗಳಾದ ಶಿವನೆ, ಸುಳ್ಳೆ ಮರ (ಕಾಡು ಕಪ್ಪಿ), ಪಾತಾಳಮರ ಹಾಗೂ ಪನ್ನೀರುಗಂಧ, ವಾಣಿಜ್ಯ ಮರಗಳಾದ ಗೋಡಂಬಿ ಮತ್ತು ಆಲೀವ್ ಎಣ್ಣೆಯ ಮರಗಳ ಕಾಂಡದ ಮೇಲೆ 6-9 ತಿಗಣೆಗಳು ಕೂಡಿ ಆಕ್ರಮಣದಿಂದಾಗಿ ಇಳುವರಿ ಕುಂಠಿತವಾಗುವಂತೆ ಮಾಡುತ್ತವೆ.
ನೈಸರ್ಗಿಕ ಶತ್ರುಗಳಾಗಿ ಪರಾವಲಂಬಿ ಕಣಜಗಳು ಹಾಗೂ ಕೆಲ ಸಲ ದರೋಡೆನೋಣಗಳು ಇವುಗಳನ್ನು ಹತೋಟಿಯಲ್ಲಿ ಇಡುತ್ತವೆ.
ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ ಜಿಲ್ಲೆ
ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.