ಜಿಮ್ ಕಾರ್ಬೆಟ್ ಕಾಡಿನ ರೋಚಕ ಅನುಭವದ ಕಥನ ಭಾಗ ೨

ಜಿಮ್ ಕಾರ್ಬೆಟ್ ಕಾಡಿನ ರೋಚಕ ಅನುಭವದ ಕಥನ ಭಾಗ ೨

© ಗುರು ಪ್ರಸಾದ್ ಕೆ. ಆರ್.

ಪಕ್ಷಿ ಗಣತಿಯ ಮೊದಲನೇ ದಿನದ ರಾತ್ರಿ ತಡವಾಗಿ ಕ್ಯಾಂಪ್ ಗೆ ಬಂದು ಮಲಗಿದ್ದರೂ ಸಹ, ಮುಂಜಾನೆ ಬೆಳಗಾಗುವುದಕ್ಕೆ ಮುಂಚೆಯೇ ಎಚ್ಚರಾಗಿತ್ತು. ಹೊಸ ಪಕ್ಷಿಗಳನ್ನು ಕಂಡರೆ ಸಿಗುವ ಆನಂದ, ಹಿಮಾಲಯದ ತಪ್ಪಲಿನಲ್ಲೇ ಕಾಣಸಿಗುವ ಸ್ಥಳೀಯ ಪಕ್ಷಿಗಳ ಸೌಂದರ್ಯವು ನನ್ನನ್ನು ಹಾಸಿಗೆಯಿಂದ ಬಡಿದೆಬ್ಬಿಸಿತ್ತು. ಬೆಳಿಗ್ಗೆ 5.30ರ ಸಮಯಕ್ಕೆ ಬೆಳಕು ಹರಿದಿತ್ತು. ಬೆಳಿಗ್ಗೆ ಎದ್ದವನೇ ಹೊರಗಡೆ ಬಂದು ನೋಡಿದೆ. ನಾವು ತಂಗಿದ್ದ ಅರಣ್ಯ ಇಲಾಖೆಯ ಕ್ಯಾಂಪ್ ನ ಎದುರಿಗೆ ವಿಶಾಲವಾದ ಹಸಿರಿನ ಪ್ರದೇಶ, ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವರಿಸಿದ ಕಾಡು, ಬಾನೆತ್ತರಕ್ಕೆ ಬೆಳೆದು ನಿಂತ ಮರಗಳು, ಹಕ್ಕಿಗಳ ಚಿಲಿಪಿಲಿ ನಿನಾದ ಎಲ್ಲವೂ ನನ್ನ ಮನಸೂರೆಗೊಳಿಸಿದವು.

© ಗುರು ಪ್ರಸಾದ್ ಕೆ. ಆರ್.

ತಕ್ಷಣವೇ ಕ್ಯಾಂಪ್ ನ ಒಳಹೊಕ್ಕ ನಾನು, ಶುಚಿಯಾಗಿ ಕ್ಯಾಮೆರಾ ಸಮೇತ ಹೊರಗಡೆ ಬಂದೆ.  ನಮ್ಮ ಕ್ಯಾಂಪ್ ನಲ್ಲಿದ್ದ ಅಮರ್ ಚಂದ್, “ಬೆಳಗಿನ ಉಪಾಹಾರಕ್ಕೆ ಚಪಾತಿ, ಪಲ್ಯ ತಯಾರು ಮಾಡ್ತೇನೆ, ಸಮಯವಿದ್ದರೆ ತಿನ್ಕೊಂಡು ಹೊರಡೋಣ, ಇಲ್ಲ ಬುತ್ತಿ ಕಟ್ಟಿಕೊಂಡು ಹೊರಡೋಣ.” ಎಂದು ತಿಂಡಿ ತಯಾರಿಸಲು ಹೊರಟ.  ಅಮರ್ ಚಂದ್, ಉತ್ತರಾಖಂಡ್ ರಾಜ್ಯದ ಅಪ್ಪಟ ದೇಸಿ ಹುಡುಗ; ಒಳ್ಳೆಯ ಅಡುಗೆ ಭಟ್ಟ. ನಾವು ಅಲ್ಲಿ ತಂಗಿದ್ದಷ್ಟು ದಿನವೂ ಸ್ವಾದಿಷ್ಟಕರವಾದ ಊಟ ಸಿಗಲು ಮೂಲ ಕಾರಣ ಇವನೆ. ಇವನ ಕೈ ಚಳಕ ಬರಿ ಪಾಕಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿರದೆ ಪರಿಸರಶಾಸ್ತ್ರಕ್ಕೂ ಸಹ ಪಸರಿಸಿತ್ತು. ಇವನು ಪಕ್ಷಿಗಳ ಬಗ್ಗೆ, ಕಾಡಿನ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದನು.  ಇದು ನಮ್ಮ ಪಕ್ಷಿ ಗಣತಿಗೂ ಸಹ ತುಂಬಾ ನೆರವಾಯಿತು.

© ಗುರು ಪ್ರಸಾದ್ ಕೆ. ಆರ್.

    ಸ್ವಲ್ಪ ಸಮಯದಲ್ಲಿಯೇ ನನ್ನಂತೆಯೇ ಇನ್ನೂ ಕೆಲವರು ಪಕ್ಷಿ ವೀಕ್ಷಣೆಗೆಂದು ಸನ್ನದ್ಧರಾಗಿ ಕ್ಯಾಂಪ್ ಇಂದ ಹೊರಬಂದರು. ಅವರನ್ನು ಗಮನಿಸಿದ ನಾನು, ನಮ್ಮ ಪಕ್ಷಿ ಗಣತಿಯ ಕೆಲಸವನ್ನು ಇಲ್ಲಿಂದಲೇ ಶುರು ಮಾಡಬಹುದೆಂದು ಆಲೋಚಿಸಿ, ಕ್ಯಾಂಪಿಗೆ ಹೋಗಿ ಒಂದು ಕೈಯಲ್ಲಿ ಟೀ ಹಿಡ್ಕೊಂಡು, ಬೈನಾಕ್ಯುಲರ್ ಹೆಗಲಿಗೆ ಹಾಕಿಕೊಂಡು ಹೊರಬಂದು, ನಮ್ಮ ಕ್ಯಾಂಪ್ ನ ಆವರಣದಲ್ಲಿದ್ದ ಪಕ್ಷಿಗಳ ಚಲನ ವಲನ ಗಮನಿಸಿ ದಾಖಲಿಸುವುದಕ್ಕೆ ಅಣಿಯಾದೆ.

Oriental dollarbird, Callie’s Pheasant, Grey-headed Woodpecker, red jungle Blue Whistling-Thrush, Greater Hornbill, paradise fly-catcher ಹೀಗೆ ಅನೇಕ ನೋಡಿರುವ ಮತ್ತು ನೋಡಿರದ ಪಕ್ಷಿಗಳು, ತುಂಬಾ ಹತ್ತಿರದಲ್ಲೇ ಹಾರಾಡುವುದನ್ನು ಕಂಡು ಖುಷಿಯಿಂದ ದಾಖಲಿಸತೊಡಗಿದೆವು.

© ಗುರು ಪ್ರಸಾದ್ ಕೆ. ಆರ್.

ನನ್ನ ಪಕ್ಷಿ ವೀಕ್ಷಣೆ ದಕ್ಷಿಣ ಭಾರತದ ಪ್ರಾಂತ್ಯಕ್ಕಷ್ಟೇ ಸೀಮಿತವಾಗಿದ್ದರಿಂದ, ಇಲ್ಲಿನ ಪರಿಸರದ ಸ್ಥಳೀಯ ಪಕ್ಷಿಗಳು ಎಲ್ಲವೂ ಹೊಸತು.!  ಆದ ಕಾರಣ ನನ್ನ   ಕುತೂಹಲ, ಸಂತೋಷ, ಉದ್ವೇಗ ಏರುತ್ತಲೇ ಇತ್ತು. ನಾನು, ನನ್ನ ಸಹಚರ ಮುನೀಶ್ ಕಂಡ ಪಕ್ಷಿಗಳನ್ನೆಲ್ಲ ಗುರುತು ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ನಮ್ಮ ಅಮರ್ ‘ಪರೋಟ, ಚಪಾತಿ ರೆಡಿ ಇದೆ’ ಎಂದು ಕೂಗಿ ಕರೆದ.  ಸಮಯ ನೋಡಿದೆ, ಗಡಿಯಾರ 6.30 ತೋರಿಸುತ್ತಿತ್ತು. ‘ಇಷ್ಟು ಬೇಗ ತಿನ್ನೋದ?’ ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಮುನೀಶ್ ‘ನಮ್ಮ ಲಗೇಜ್ ಗಳೇ ಹೆಚ್ಚಿವೆ, ಅದರ ಜೊತೆ ತಿಂಡಿ ಹೊರುವುದು ಕಷ್ಟದ ಕೆಲಸ. ಇಲ್ಲಿಯೇ ತಿಂದು ಹೊರಡೋಣ.’ ಎಂದ. ನನಗೂ ಅವನ ತರ್ಕ ಸರಿಯೆನ್ನಿಸಿ ಕ್ಯಾಮೆರಾ, ಬೈನಾಕ್ಯುಲರ್, ನೀರಿನ ಬಾಟೆಲ್, ಫೀಲ್ಡ್ ಗೈಡ್ ಎಲ್ಲವನ್ನು ತುಂಬಿಕೊಂಡು ಒಂದೆರಡು ಪರೋಟ ಅಲ್ಲೇ ತಿಂದು ಕಾಡಿನ ಕಡೆ ಹೊರಟೆವು.

© ಗುರು ಪ್ರಸಾದ್ ಕೆ. ಆರ್.

ಮುಂಜಾನೆಯ ದಟ್ಟ ಮಂಜನ್ನು ಸೀಳಿ ಬರುತ್ತಿದ್ದ ಬೆಳಗಿನ ಎಳೆ ಬಿಸಿಲು, ತಂಪಾದ ಆಹ್ಲಾದಕರ ವಾತಾವರಣ, ಮಳೆಗಾಲದ ಮುಂಗಾರಿನ ದಿನಗಳು, ಕಿರಿದಾದ ಕಣಿವೆ, ಸಣ್ಣಗೆ ಹರಿಯುವ ಝರಿ, ಆ ಝರಿಗಳನ್ನೇ ದಾಟಿ ಸಾಗುತ್ತಿದ್ದ ನಮ್ಮ ಪಯಣ, ಜಿಂಕೆ, ಸಾರಂಗ ಮುಂತಾದ ಕಾಡು ಪ್ರಾಣಿಗಳ ದರ್ಶನ ಎಲ್ಲವೂ ಹೊಸ ಲೋಕವನ್ನೇ ಸೃಷ್ಟಿಸಿತ್ತು.

ನಮ್ಮ ಮಾರ್ಗದರ್ಶಕರಾಗಿ ಜೊತೆಯಲ್ಲಿ ಇಬ್ಬರು ಅರಣ್ಯ ರಕ್ಷಕರು ಮತ್ತು ವಲಯ ಅರಣ್ಯ ಅಧಿಕಾರಿಗಳು ಸಹ ಇದ್ದರು. ಅವರ ಮಾರ್ಗದರ್ಶನದಂತೆ ನಡೆಯುತ್ತಾ ನಾವು ಇಲ್ಲಿನ ಕಾಡು ಮತ್ತು ಪರಿಸರದ ಅವರ ಅನುಭವವನ್ನು, ಇಲ್ಲಿ ಕಾಣಸಿಗುವ ಚಿಟ್ಟೆಗಳು, ಕಾಡಿನ ಮರ ಮತ್ತು ಗಿಡಗಳ ಪರಿಚಯ   ಎಲ್ಲವನ್ನು ಕೇಳಿ ತಿಳಿಯುತ್ತ ಹಾಗೆಯೇ ಅವರ ಮಾತುಗಳನ್ನು ನನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾ ಜಿಮ್ ಕಾರ್ಬೆಟ್ ಎನ್ನುವ ಸುಂದರ ಕಾಡಿನ ನೈಜ ಸೊಬಗನ್ನು ಸವಿಯುತ್ತಾ ಮುನ್ನಡೆಯುತ್ತಿದ್ದೆವು.

© ಗುರು ಪ್ರಸಾದ್ ಕೆ. ಆರ್.

ನಮ್ಮ ಜೊತೆಗಾರ ಮುನೀಶ್ ರವರು ಯಾವುದೋ ಸುಂದರವಾದ ಅಪರೂಪದ ಪಕ್ಷಿಗಳ ಚಲನ ವಲನವನ್ನು ಕಂಡು ಪಕ್ಕದಲ್ಲಿಯೇ ಇದ್ದ ಕಡಿದಾದ ಕಣಿವೆ ಇಳಿದು ಅದನ್ನು ಹುಡುಕಿ ಹೊರಟರು. ನಾವೆಲ್ಲರೂ ಅವರನ್ನೇ ಹಿಂಬಾಲಿದೆವು. ಹಸಿರು, ಹಳದಿ ಮತ್ತು ಕಪ್ಪು ಬಣ್ಣದ ಸುಂದರ ಪಕ್ಷಿಯು ಕುಳಿತಿರುವುದನ್ನು ಕಂಡು ನಿಬ್ಬೆರಗಾದೆನು. ಅದರ ಹೆಸರು ಲಾಂಗ್ ಟೈಲ್ಡ್ ಬ್ರಾಡ್ ಬಿಲ್ (Long-tailed broadbill). ಪ್ರಪ್ರಥಮ ಬಾರಿ ಕಂಡ ಈ ಸುಂದರ ಪಕ್ಷಿಯ ಸುಂದರತೆಯನ್ನು ಕಂಡು ಸಂತೋಷದಲ್ಲಿ ಕೂಗಬೇಕೆನಿಸಿತು. ಆದರೆ ಹಾಗೆ ಮಾಡದೆ ಅದರ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ, ತುಂಬಾ ಹತ್ತಿರದಲ್ಲಿಯೇ ಕುಳಿತಿದ್ದ ಅದರ   ಚಟುವಟಿಕೆಯನ್ನು ನೋಡುತ್ತಾ, ಅದರ ಇಂಪಾದ ಕೂಗನ್ನು ಕೇಳುತ್ತಾ ಮೈಮರೆತು ಅಲ್ಲಿಯೇ ಸ್ವಲ್ಪ ಸಮಯ ಕಳೆದೆವು. ಹೀಗೆ ನವ ನವೀನ ಪಕ್ಷಿಗಳನ್ನು ನೋಡುತ್ತಾ, ಅವುಗಳ ಕೂಗನ್ನು ಆಲಿಸುತ್ತಾ, ಕ್ಯಾಮೆರಾದಲ್ಲಿ ಅವುಗಳನ್ನು ಸೆರೆಯಿಡಿಯುತ್ತ ಸರಿ ಸುಮಾರು ಎಂಟರಿಂದ ಹತ್ತು ಕಿಲೋ ಮೀಟರ್ ಕಾಡಿನ ಒಳ ಹೊಕ್ಕಿದ್ದೆವು.

ನಡೆದು ನಡೆದು ಸುಸ್ತಾಗಿದ್ದ ಎಲ್ಲರು ವಿರಮಿಸಲು ಯೋಚಿಸಿ, ತಣ್ಣನೆಯ ನೆರಳಿರುವ ಜಾಗವನ್ನು ಹುಡುಕಿ, ಜೊತೆಯಲ್ಲಿ ತಂದಿದ್ದ ಬಿಸ್ಕತ್ತು ಮತ್ತು ನೀರು ಕುಡಿಯುತ್ತ ಕುಳಿತೆವು.  ನಮ್ಮ ಜೊತೆ ಬಂದಿದ್ದ ಫಾರೆಸ್ಟ್ ಗಾರ್ಡ್, “ಸಾರ್ ಅಲ್ಲೇ ನನಗೆ ಎರಡು ವರ್ಷದ ಕೆಳಗೆ ಹುಲಿ ದಾಳಿ ಮಾಡಿದ್ದು.” ಎಂದು ಪಕ್ಕದಲ್ಲಿನ ಒಂದು ಜಾಗದ ಬಳಿ ಕೈ ತೋರಿಸಿದ.  ನೀರು ಕುಡಿಯುತ್ತಿದ್ದ ನಾನು ತಟ್ಟನೆ ನಿಲ್ಲಿಸಿ ಆತನ ಕಡೆ ಮುಖ ಮಾಡಿದೆ. ನನ್ನಷ್ಟೇ ನನ್ನ ಜೊತೆಗಾರರೆಲ್ಲರೂ ಗಾಬರಿಗೊಂಡಿದ್ದರು. ಅವನು ತಮಾಷೆ ಮಾಡುತ್ತಿರಬಹುದೇ ಎಂದು ತಿಳಿಯಲು ನಾನು ಅವನ ಪಕ್ಕ ಹೋಗಿ ಕುಳಿತು ನಿಧಾನವಾಗಿ “ಏನು?” ಎಂದು ಕೇಳಿದೆ.

ಅವನು ಮತ್ತೊಮ್ಮೆ ಅದೇ ಜಾಗದ ಕಡೆ ಕೈ ತೋರಿಸಿ, “ಸಾರ್ ಅಲ್ಲಿ ನೋಡಿ ಅದೇ ಜಾಗ… ಅಲ್ಲಿ ಗುಡ್ಡದ ಮೇಲೆ ಕಾಣುತ್ತ ಇದೆ ಅಲ್ವ ಅದೇ ಜಾಗ ಸಾರ್… ನಾವೆಲ್ಲಾ ಒಟ್ಟಿಗೆ ಬೀಟ್ ಗೆ ಬಂದಿದ್ದೆವು. ನಮ್ಮ ಪಾಡಿಗೆ ನಾವು ಮಾತನಾಡುತ್ತ ಸಾಗುತ್ತ ಇದ್ದಾಗ ಅದೆಲ್ಲಿತ್ತೋ ಹುಲಿ ಎದುರು ಗಡೆಯಿಂದ ಬಂದದ್ದೇ ನೇರವಾಗಿ ನಮ್ಮ ಮೇಲೆ ಎಗರಿತು ಸಾರ್. ನಾನು ನನ್ನ ಕೈಲಿದ್ದ ಕೋಲನ್ನು ಅಡ್ಡಲಾಗಿ ಹಿಡಿದು ಅದನ್ನು ತಳ್ಳಲು ಯತ್ನಿಸಿದೆ. ನಮ್ಮ ಬಳಿ ಬಂದೂಕು, ಕೋವಿ ಎಲ್ಲವೂ ಇದ್ದರು ಏನು ಮಾಡಲು ಆಗಲಿಲ್ಲ. ಅದು ಯಾವ ಮಾಯೆಯಲ್ಲಿ ಬಂತೋ ಸಾರ್… ಬಂದಿದ್ದೆ ನನ್ನನ್ನು ಟಾರ್ಗೆಟ್ ಮಾಡಿತು.” ಎಂದವನೆ ಅವನ ಫೋನ್ ನಲ್ಲಿ ಇದ್ದ ಹುಲಿ ದಾಳಿಯ ಫೋಟೋ ತೋರಿಸುತ್ತಾ ತನ್ನ ಮಾತು ಮುಂದುವರಿಸಿದ. ಹಾಗೆ ಹೇಳುವಾಗ ಆ ದಿನದ ಆ ಭಯಾನಕ ದೃಶ್ಯ ಅವನ ಕಣ್ಣ ಮುಂದೆ ಬಂದಿರಬೇಕು. ಆ ಎದರಿಕೆ ಅವನ ಮುಖದಲ್ಲಿ ಕಾಣುತ್ತಿತ್ತು.  ಮುಂದುವರಿಸುತ್ತಾ “ಆಮೇಲೆ ನಮ್ಮ ಜೊತೆ ಇದ್ದ ಐದು ಜನ ಕೋಲು ಕಟ್ಟಿಗೆ ಇಂದ ಜೋರಾಗಿ ಗಲಾಟೆ ಮಾಡಿ ಅದರ ಮೇಲೆ ಎರಗಿದರು ಸಾರ್.  ಅಷ್ಟರಲ್ಲಿ ನನ್ನ ತಲೆ ಮತ್ತು ಭುಜಕ್ಕೆ ಅ ಹುಲಿ ತನ್ನ ಪಂಜಾ ಇಂದ ಹೊಡೆದು ಗಾಯ ಮಾಡಿತ್ತು!  ಅಷ್ಟೇ ಸಾರ್ ನನಗೆ ಗೊತ್ತಾಗಿದ್ದು. ಮುಂದೇನಾಯಿತೋ ತಿಳಿಯದು ಎಚ್ಚರವಾದಾಗ ಆಸ್ಪತ್ರೆಯಲ್ಲಿ ಇದ್ದೆ. ಇಲ್ಲಿ ಹುಲಿಗಳು ತುಂಬಾ ಭಯಂಕರ, ಖತರ್ನಾಕ್ ಸರ್… ಯಾವಾಗ ಹೇಗೆ ಬಂದು ಮೇಲೆ ಎರಗುತ್ತವೋ ಗೊತ್ತಾಗೋದೇ ಇಲ್ಲ” ಎಂದ.

© ಗುರು ಪ್ರಸಾದ್ ಕೆ. ಆರ್.

ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಅವನ ಸಹೋದ್ಯೋಗಿ ಮುಂದುವರಿಸುವಂತೆ “ನಾನೇ ರೋಡ್ ತನಕ ಇವನನ್ನು ಹೆಗಲ ಮೇಲೆ ಹಾಕಿಕೊಂಡು ಏಳು ಎಂಟು ಕಿಲೋಮೀಟರ್ ತನಕ ಎತ್ಕೊಂಡ್ ಹೋಗಿ ಹಾಸ್ಪಿಟಲ್ ಗೆ ಸೇರಿಸಿದೆ ಸಾರ್. ಆಸ್ಪತ್ರೆ ಕೂಡ ಇಲ್ಲಿಂದ ಮೂವತ್ತು ಕಿಲೋಮೀಟರ್ ದೂರದ ಒಂದು ಊರಿನಲ್ಲಿ ಇರೋದು.”  ಎಂದ. “ಹೆಂಗೋ ಬಚಾವ್ ಅದ ಇವನು ನನ್ನಿಂದ!” ಅಂತ ಅವನನ್ನು ಛೇಡಿಸುತ್ತಿದ್ದ.

ಮೋಹನ್ ದಾಸ್ (ಹೆಸರು ಬದಲಿಸಲಾಗಿದೆ), ಹುಲಿ ಅಟ್ಯಾಕ್ ಮಾಡಿದ ರಕ್ತ ಸಿಕ್ತ ಫೋಟೋವನ್ನು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೋ ವನ್ನು ತೋರಿಸಿದ. ಇದನ್ನು ನೋಡಿದ ನಮಗೆ ತಲೆಯಲ್ಲಿನ ಕೂದಲು ನಿಮಿರಿದವು, ಕೈ ಬೆವರಲು ಶುರುವಾಯಿತು, ಕಾಲುಗಳು ತಂತಾನೆ ನಡುಗಲು ಶುರುವಾದವು. ನಾನು ಅಳಕು ಧ್ವನಿಯಲ್ಲೆ, “ಅಲ್ಲಪ್ಪ ಇಷ್ಟೆಲ್ಲಾ ಇದ್ರು ನಮ್ಮನ್ನ ಈ ಪ್ರದೇಶಕ್ಕೆ ಕರ್ಕೊಂಡ್ ಬಂದಿದೀರಲ್ಲ ಸರೀನಾ?” ಎಂದು ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿದೆ. ಅದಕ್ಕೆ ಒಬ್ಬ ಉತ್ತರವಾಗಿ, “ನಾವು ಪ್ರತೀ ದಿನ ಓಡಾಡಲ್ವಾ ಸರ್… ಹುಷಾರಾಗಿ ಇರಬೇಕು ಅಷ್ಟೇ. ಅವತ್ತು ಏನೋ ನಮ್ಮ ಗ್ರಹಚಾರ ಸರಿ ಇರಲಿಲ್ಲ ಎನಿಸುತ್ತೆ! ” ಎಂದ. ಆದರೆ ಅವನ ಮಾತು ನಮಗೆ ಸಮಾಧಾನ ತರಿಸಲಿಲ್ಲ. ಗುಂಪಿನ ಎಲ್ಲರು ವಾಪಸ್ ಹೋಗಲು ತಯಾರಾದೆವು ಹಾಗೂ ಆ ಅರಣ್ಯ ಸಿಬ್ಬಂದಿಯನ್ನು ಬೇಗ ನಮ್ಮನ್ನು ಕ್ಯಾಂಪ್ ಗೆ ಕರೆದುಕೊಂಡು ಹೋಗಲು ಕೇಳಿಕೊಂಡೆವು. ನಮ್ಮ ಭಯವನ್ನು ಅರಿತ ಅವರು ಅಡ್ಡ ರಸ್ತೆಯಲ್ಲಿ ತುಂಬಾ ಬೇಗನೆ ಕ್ಯಾಂಪ್ ನ ಬಳಿಗೆ ಕರೆತಂದರು. ಬರುವಾಗ ಪಕ್ಷಿ, ಪ್ರಾಣಿ, ಗಿಡ, ಮರ ಎಲ್ಲವನ್ನೂ ಮರೆತಿದ್ದೆವು. ಬರಿ ಹುಲಿ ಮಾತ್ರ ತಲೆಯಲ್ಲಿ ತುಂಬಿತ್ತು.

© ಗುರು ಪ್ರಸಾದ್ ಕೆ. ಆರ್.

ಅರಣ್ಯ ಇಲಾಖೆಯವರ ಒಡನಾಟದಲ್ಲಿ ನಾನು ಅರಿತ ವಿಷಯವೆಂದರೆ ಮೇಲ್ನೋಟಕ್ಕೆ ಅವರ ಕೆಲಸ ಕಾಡಿನಂತೆ ಬಲು ಸುಂದರ, ರೋಚಕ, ಕುತೂಹಲಕರ ಎನಿಸಿದರೂ ಯಾವ ಕ್ಷಣದಲ್ಲಿ ಬೇಕಾದರೂ ಜೀವಕ್ಕೆ ಆಪತ್ತಾಗಬಹುದು ಎಂಬುದು. ಅವರ ಸೇವೆಗೆ ನಾವು ಪ್ರತಿಯಾಗಿ ಏನು ನೀಡಿದರೂ ಸಾಲದು ಅವರು ಸಂಬಳಕ್ಕೆ ಕೆಲಸ ಮಾಡುತ್ತಿದ್ದರು ಎಲ್ಲಾ ಮಾನವ ಕುಲಕ್ಕೂ, ಸಕಲ ಜೀವಿಗಳಿಗೂ ಅವಶ್ಯವಿರುವ ಕಾಡಿನ ಸಂಪತ್ತನ್ನು ರಕ್ಷಿಸುವ ಹೊಣೆ ಹೊತ್ತಿದ್ದಾರೆ. ಅವರನ್ನು ‘ಹಸಿರು ಯೋಧರು’ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಈ ಘಟನೆಯಿಂದ ಇನ್ನಷ್ಟು ಸ್ಪಷ್ಟವಾಯಿತು ನನಗೆ.

ಕ್ಯಾಂಪ್ ಗೆ ವಾಪಾಸ್ ಬಂದ ಎಲ್ಲರೂ ಊಟ ಮಾಡಿ ವಿರಮಿಸಿ ಆ ಕಥೆಯಿಂದ ಸಾವರಿಸಿಕೊಂಡೆವು.  ಸಂಜೆಯ ಸಮಯದಲ್ಲಿ ಮತ್ತೊಮ್ಮೆ ಇನ್ನೊಂದು ದಾರಿಯಲ್ಲಿ ನಾವು ಪಕ್ಷಿ ಗಣತಿಗೆ ಹೋಗಬೇಕಿತ್ತು. ಎಲ್ಲರೂ ಎದರಿದ್ದ ಕಾರಣ ಮುಖ್ಯ ರಸ್ತೆಯ ಸಮೀಪದಲ್ಲಿನ ಕಾಲು ದಾರಿಯಲ್ಲೇ ಕರೆದುಕೊಂಡು ಹೋಗುವಂತೆ ಅರಣ್ಯ ಸಿಬ್ಬಂದಿಯನ್ನು ಕೇಳಿಕೊಂಡೆವು ನಮ್ಮ ಭದ್ರತೆಯೇ ಅವರ ಕರ್ತವ್ಯವಾದ ಕಾರಣ ಮತ್ತು ನಮ್ಮ ಆ ದಿನದ ಮನಸ್ಥಿತಿಯನ್ನು ಅರಿತಿದ್ದ ಅವರು ತಮ್ಮ ಯೋಜನೆಯನ್ನು ಬದಲಿಸಿ ನಾವು ಹೇಳಿದಂತೆಯೇ ಮಾಡಿದರು. ಮುಂದಿನ ದಿನದ ಅನುಭವವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

© ಗುರು ಪ್ರಸಾದ್ ಕೆ. ಆರ್.

ಮುಂದುವರೆಯುವುದು ………

ಲೇಖನ: ಗುರು ಪ್ರಸಾದ್ ಕೆ. ಆರ್.
             ಬೆಂಗಳೂರು ಜಿಲ್ಲೆ

Print Friendly, PDF & Email
Spread the love
error: Content is protected.