ಅಲೆಮಾರಿಯ ಅನುಭವಗಳು – ೧೫
© ನಾಗೇಶ್ ಓ. ಎಸ್.
ವಾರದೈದು ದಿನ ಬೆವರಿನ ಘಮಲಲ್ಲಿ ನಮ್ಮನ್ನು ಉನ್ಮಾದಕ್ಕೇರಿಸುತ್ತಲೆ ದುಡಿಸಿಕೊಳ್ಳುವ ಬೆಂಗಳೂರಿನಂತಹ ಶಹರ ಅಚಾನಕ್ಕಾದ ಅವಘಡ ಎಂಬಂತೆ ಎರಡು ದಿನಗಳ ಬಿಡುವು ಕೊಟ್ಟು ಒಂದು ಸಣ್ಣ ನಿಟ್ಟುಸಿರು ಬಯಸಿ ನಿಂತುಬಿಡುತ್ತದೆ. ಆ ಎರಡು ದಿನ ಇಂತಹ ಶಹರಗಳಿಂದ ದೂರದೂರದ ಊರಿಗ್ಹೋಗಿ ಒಂದಿಷ್ಟು ಸಂತಸ ಅನುಭವಿಸಬೇಕೆಂಬ ಅಮಲು ಎಲ್ಲರೆದೆಯಲ್ಲೂ ಅಚ್ಚೊತ್ತಿರುತ್ತೆ. ಅಂತಹದೊಂದು ಸಣ್ಣ ಚಾರಣದನುಭವವಿದು.
ಬೆಟ್ಟದ ಜೀವ, ಶಿವರಾಂ ಕಾರಂತರ ಮೇರು ಕೃತಿಗಳಲ್ಲಿ ಒಂದು. ಅದು ಓದಿದ ಮೇಲೆ ಒಮ್ಮೆಯಾದರೂ ಕುಮಾರ ಪರ್ವತಕ್ಕೆ ಹೋಗಿ ಅಲ್ಲಿಯ ಪ್ರಕೃತಿಯನ್ನು ಅನುಭವಿಸಿ ಭಟ್ಟರ ಮನೆ ನೋಡಿ ಬರಬೇಕೆಂಬ ಆಸೆ ಹೊತ್ತಿದ್ದೆ. ಒಂದು ದಿನ ಆ ಕಾಲ ಕೂಡಿ ಬಂತು. ಕುಮಾರಧಾರ ನದಿಯ ದಡಕ್ಕಂಟಿಕೊಂಡಂತಿರುವ ಕುಕ್ಕೆ ಸುಬ್ರಹ್ಮಣ್ಯ ಊರಿನ ಒಳಹೊಕ್ಕು ಸುಬ್ರಮಣ್ಯನ ದರ್ಶನದೊಂದಿಗೆ ಅಲ್ಲಿ ಎರಡು ದಿನದ ಬದುಕಿಗಾಗುವಷ್ಟು ದೊಡ್ಡದೊಂದು ಬ್ಯಾಗ್, ಎಡಬಲಕ್ಕೆ ನೀರಿನ ಬಾಟಲ್, ಸಣ್ಣದೆನ್ನಲಾಗದ ಟೆಂಟ್, ಒಂದಿಷ್ಟು ತಿಂಡಿ – ತಿನಿಸು, ಚಾಕೊಲೇಟ್ ಮತ್ತೊಂದು ಬ್ಯಾಗಿನೊಳಗೆ ಉದ್ದನೆಯ ಲೆನ್ಸ್ ಜೊತೆಗೊಂದು ಕ್ಯಾಮೆರಾ, ಪ್ರಥಮ ಚಿಕಿತ್ಸೆಯ ಕಿಟ್, ಎರಡು ಮೂರು ಜೊತೆ ವಾತಾವರಣಕ್ಕೆ ಹೊಂದುವಂತ ಬಟ್ಟೆ, ಇಂಬಳದ ಕಾಟ ತಡೆಯಲೊಂದಿಷ್ಟು ಉಪ್ಪು – ಸುಣ್ಣ, ತಲೆಗೊಂದು ಸ್ಕಾರ್ಫ್, ಉದ್ದನೆಯ ಸಾಕ್ಸ್, ಕತ್ತಿಗೊಂದು ದುರ್ಬೀನು, ಕೊಡೆ, ಪ್ಲಾಸ್ಟಿಕ್ ರಹಿತ ಪ್ರಯಾಣ ಶುರುವಾಗಿದ್ದು ಕುಮಾರ ಪರ್ವತದ ಅಡಿಯಿಂದ.!
ಕಾಡು ಶುರುವಾಯ್ತು. ಮೇಲೆ ಕಾರ್ಮೋಡ. ಕಾಡಿನೊಳು ಪೂರಾ ಹಸಿ ಹಸಿಯಾದ ಹಸಿರು. ನಡೆವ ದಾರಿ ಪೂರಾ ಕೆಸರು. ಹೆಜ್ಜೆ ಹೆಜ್ಜೆಗೂ ಒಣಗಿದೆಲೆಯ ಮುರುಕಲು ಸದ್ದು! ಒಬ್ಬರ ಹಿಂದೆ ಒಬ್ಬರಂತೆ ಹೆಜ್ಜೆ ಹಾಕಿ ಕಾಡ ಪರ್ವತ ಏರತೊಡಗಿದೆವು. ಮೈ – ಮನಸೆಲ್ಲಾ ತೇವ ತೇವ.! ಹಸಿ ಹಸಿ ಹನಿಗಳು ಹಸಿರೆಲೆಗಳ ಮೇಲೆ. ಮೈಪೂರಾ ಧಗೆಯೊ ಧಗೆ; ಅದು ಮಳೆಯಲ್ಲ! ಕಾಡಿನ ತೇವಾಂಶವೆ ಹಾಗೆ, ವರ್ಷದ ಎಲ್ಲಾ ಮಾಸಕ್ಕೂ ಮಾಸದಂತ ತೇವ ಕಾಡಿನೊಡಲಿನಿಂದ ಚಿಮ್ಮುತ್ತಲೆ ಇರುತ್ತದೆ.! ಮುರಿದು ಬಿದ್ದ ದೊಡ್ಡ ಮರದ ಒಣಕಾಂಡದಡಿಯಿಂದ ಸಣ್ಣ ನೀರಿನ ತೊರೆಯ ಜುಳು ಜುಳು ಸದ್ದು! ಒಂದೇ ಸಮನೆ ಆಹಾರಕ್ಕಾಗಿ ಧ್ಯಾನಿಸಿ ಕೂತ ಹಾವು, ಚೇಳು, ಇಂಬಳ (ಜಿಗಣೆ, ಉಂಬಳ).! ಇವೆಲ್ಲವುಗಳ ನಡುವೆ ನಮ್ಮ ಚಾರಣ!
ಬೇರು ಬೇರಿಗೆ ಬೆಸೆದು – ಹೊಸೆದಂತಹ ಏರಲೊಂದು ಸಣ್ಣ ಬೇರಿನ ದಾರಿ. ದೃಷ್ಟಿ ಹಾಯಿಸಿದಷ್ಟು ಬರಿ ಹಸಿರು, ರೆಂಬೆ, ಕೊಂಬೆ, ಗಿಡ, ಹಸಿ ಮಣ್ಣ ಘಮಲು, ಹಕ್ಕಿಗಳ ಚಿಲಿಪಿಲಿ, ನೀರಿನ ಜುಳುಜುಳು ನಿರ್ಜನ ವಾತಾವರಣ.! ಏರ ಏರುತ್ತಾ ಏದುಸಿರು ಹೆಚ್ಚಾಯ್ತು. ದೊಡ್ಡ ಬಳಗ ಒಡೆದು ಸಣ್ಣ ಸಣ್ಣ ಗುಂಪುಗಳಾಗಿ ಅಲ್ಲಲ್ಲಿ ವಿಶ್ರಮಿಸಿ ಹತ್ತುತ್ತಿದ್ದರು. ಯಾಕಿಷ್ಟು ಕಷ್ಟ ಪಡಬೇಕು ಅಂತ ಆಗಾಗ ಅನ್ನಿಸುತ್ತಿತ್ತಾದರೂ ಆ ಪ್ರಕೃತಿಯ ಸೊಬಗು ನಮ್ಮ ನೋವನ್ನೆಲ್ಲಾ ಮರೆಸಿಬಿಡುತ್ತಿತ್ತು! ಒಂದು ಕಡೆ ಜೊತೆಗಿದ್ದ ನಾಲ್ಕಾರು ಜನರೊಂದಿಗೆ ಊಟಕ್ಕೆ ಕೂತೆ. ಊಟ ಮಾಡಿ ಎದ್ದಾಗ ಐದಾರು ಇಂಬಳ ಜೊತೆಗಾರರಿಗೆ ಹತ್ತಿ ಅವುಗಳ ಊಟವನ್ನೂ ಮುಗಿಸಿಬಿಟ್ಟಿದ್ದವು! ಮತ್ತದೆ ಉಪ್ಪು – ಸುಣ್ಣದ ಉಪಚಾರದೊಂದಿಗೆ ಇಂಬಳ ಉದುರಿಸಿಕೊಂಡು ಮೊದಲನೆ ಪೀಕಿನೆಡೆಗೆ ಪಯಣ! ಏರುತ್ತಿರುವಾಗಲೆ ಒಂದು ದೊಡ್ಡ ಬಯಲು ಕಾಣಿಸಿತು. ಅಲ್ಲೆ ಸ್ವಲ್ಪ ಹೊತ್ತು ಕೂತು ಫೋಟೋಗ್ರಫಿ ಮಾಡುವಷ್ಟರಲ್ಲಿ ಕಾರ್ಮೋಡ ಸಣ್ಣಗೆ ಕರಗಲಾರಂಭಿಸಿತು! ತಣ್ಣಗೆ ಗಾಳಿ ಎದೆಗೆ ಸೋಕಿದಾಗ ಎಂಥದೊ ಪ್ರಫುಲ್ಲ ಮನಸ್ಸು ಬಿಚ್ಚಿಕೊಂಡಿತು! ಎತ್ತರೆತ್ತರದ ಮರಗಳ ಕಾಡು ದಾಟಿ ಹುಲ್ಲುಗಾವಲಿನಂತ ಬಯಲ ಸಹ್ಯಾದ್ರಿ ಒಳಗೆ ಚಾರಣ ಶುರುವಾಗಿತ್ತು. ಮಳೆ ಅಬ್ಬರ ಜಾಸ್ತಿ ಆಯ್ತು.! ಆಹಾ ಏನು ಆನಂದ! ಅಕ್ಷರಗಳಲಿ ಹಿಡಿದಿಡಲಾರದಂತ ಅನುಭವವದು! ಒಂದೊಂದು ಹನಿ ಸೀದಾ ಎದೆಯ ಮೇಲೆ ಬಂದು ಬೀಳುತ್ತಿದ್ದವು! ಅಲ್ಲಿಂದ ಸಣ್ಣ ಸಣ್ಣ ತಿರುವುಗಳ ಹೊತ್ತ ಕಾಲುದಾರಿ. ಒಂದೇ ಮೀಟರ್ ಅಂತರದ ಎದುರಿನ ವ್ಯಕ್ತಿ ಕಾಣದಷ್ಟು ಮುಸುಕು ನಮ್ಮನ್ನಾವರಿಸಿದಾಗ ನಮಗೆ ದಾರಿ ತಪ್ಪಿತು! ಬೆಟ್ಟದ ದಾರಿ ಬಿಟ್ಟು ನಡೆದೆವು! ನಮ್ಮ ಜನ ಯಾರೂ ಕಾಣಲಿಲ್ಲ! ಕೂಗಿದೆ, ಸಿಳ್ಳೆ ಹಾಕಿದೆ, ಕಿರುಚಾಡಿ ಸುಸ್ತಾಗಿ ಕೊಡೆಯೊಂದರ ಅಡಿಯಲ್ಲಿ ನಿಂತಾಗ ಮುಸುಕು ಸಣ್ಣಗೆ ಸರಿಯಿತು! ಹೆಂಚುಗಳುಳ್ಳ ದೊಡ್ಡ ಎಸ್ಟೇಟಿನಂತ ಮನೆ ಕೆಳಗಡೆ ಕಾಣಿಸಿತು – ಬೆಟ್ಟದ ಜೀವ ನೆನಪಾಯ್ತು ಅದು ಭಟ್ಟರ ಮನೆ! ಆದರೆ ನಮ್ಮ ಫೂರಾ ದಂಡು ಅಲ್ಲಿ ವಾಸ್ತವ್ಯ ಹೂಡುವುದಿಲ್ಲ ಅಂತ ಮೊದಲೆ ಗೊತ್ತಿತ್ತು ಮತ್ತು ಆ ಇಳಿಜಾರು ಇಳಿದು ಹೋಗಿ ಅಲ್ಲಿಂದ ವಾಪಸ್ಸಾಗುವ ಮನಸ್ಸಾಗಲಿಲ್ಲ!
ಮತ್ಯಾವುದೋ ಕಾಲು ದಾರಿ ಕಾಣಿಸಿತು ಅದನ್ನೆ ಹಿಡಿದು ಹೊರಟಾಗ ಸಣ್ಣದೊಂದು ಬಯಲು ಅಲ್ಲಿ ಒಂದು ಬೆಟ್ಟ – ಅದರ ಮೇಲೊಂದು ನೆಟ್ವರ್ಕ್ ಗೆ ಸಂಬಂಧಿಸಿದ ಆಂಟೆನಾ! ಆ ಬೆಟ್ಟದಡಿಯಲ್ಲಿ ಹಾಸುಗಲ್ಲಿನ ಕವಲುದಾರಿ ಎರಡರಲ್ಲೊಂದೆಂದು ಆರಿಸಿಕೊಂಡಾಗ ಮಳೆ ಜೋರಾಗಿ ಬೀಳತೊಡಗಿತು! 200 ಮೀಟರ್ ದಾರಿ ಕ್ರಮಿಸಿರಬಹುದು. ದೊಡ್ಡ ಸದ್ದು; ಗುಡುಗಿನದು! ಅಲ್ಲಿ ಮಿಂಚು ಕಮ್ಮಿ, ಹಾಗಾಗಿ ಗುಡುಗು ಅಷ್ಟಕಷ್ಟೆ! ಮಳೆಯದು ಮಾತ್ರ ಅಬ್ಬರ! ದೂರದಲ್ಲಿ ಸಣ್ಣ ಸಣ್ಣ ಟೆಂಟ್ ಗಳ ಬಿಡಾರ ಕಂಡು ಖುಷಿಯಾಯಿತು! ಓಡೋಡಿ ಹೋಗಿ ಅಲ್ಲಿ ತಲುಪಿದೆವು! ಅದು ಅರಣ್ಯ ಇಲಾಖೆ ಕಛೇರಿ.! ಅಲ್ಲಿ ನಮ್ಮ ಟೀಮು ಟೆಂಟ್ ಹಾಕುತ್ತಿತ್ತು. ಆಯೋಜಕರು ಅಡಿಗೆ ಮಾಡುವ ತರಾತುರಿಯಲ್ಲಿದ್ದರು. ಸರಿಸುಮಾರು ಒಂದೂವರೆ ಗಂಟೆ ಬಿದ್ದ ಮಳೆಗೆ ಮೈ ನಡುಗುತ್ತಲೆ ಇತ್ತು. ಮಳೆ ನಿಂತಾಗ ಸಂಜೆಯಾಗಿತ್ತು. ಚೂರುಪಾರು ನೆಟ್ವರ್ಕ್ ಸಿಗುತ್ತಿತ್ತು. ಗೆಳೆಯರೊಡನೆ ಕೂಡಿ ಒಂಚೂರು ಆ ಬಯಲ ಬೆಟ್ಟದ ಮೇಲೆ ತಿರುಗಾಡಿದೆವು. ಸುತ್ತಲೂ ಕಣ್ಣು ಹರಿಸಿದಷ್ಟು ಹಸಿರು. ನಾವು ಕುಕ್ಕೆಯಿಂದ ಏಳು ಕಿಲೋಮೀಟರ್ ಮೇಲಿದ್ದೆವು. ಕಾಫಿ ಕುಡಿದರಾಯ್ತು ಅಂತ ಭಟ್ಟರ ಮನೆಗೆ ಬರಿಗಾಲಿನಿಂದಲೆ ಹೊರಟೆವು. ಅದು ವಾರಾಂತ್ಯವಾಗಿದ್ದರಿಂದ ಅಲ್ಲಿ ನಿಲ್ಲಲೂ ಜಾಗವಿಲ್ಲ ಅಷ್ಟು ಜನ ಸೇರಿದ್ದರು. ಚಾ – ಕಾಫಿ ಏನೂ ಸಿಗಲಿಲ್ಲ. ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾದೆವು. ಟೆಂಟ್ ಹತ್ರ ಬರುವಷ್ಟರಲ್ಲಿ ಅಡಿಗೆ ರೆಡಿಯಾಗಿತ್ತು. ಭರ್ಜರಿ ಊಟ ಮಾಡಿ ಟೆಂಟ್ ಒಳಗೆ ಮಲಗಿದೆವು.
ರಾತ್ರಿ ಮೂರಾಗಿರಬೇಕು. ನಮ್ಮ ಟೆಂಟ್ ಗಳ ಹೊರಗಿನಿಂದ ಸದ್ದು! ನಮ್ಮ ಚಾರಣದ ಆಯೋಜಕರಿಂದ ಕರೆ. ಪುಷ್ಪಗಿರಿಗೆ ಬರುವವರು ಬೇಗ ಬೇಗ ರೆಡಿ ಆಗ್ರಿ ಅಂತ.! ಏಳಲು ಮನಸ್ಸಿರಲಿಲ್ಲ. ಮೈ – ಕೈ ನೋವಿಗೆ ಮನಸ್ಸು ಸೋತು ಮಲಗಿತ್ತು. ಒಬ್ಬರೂ ಸಹ ಟೆಂಟ್ ಓಪನ್ ಮಾಡುತ್ತಿಲ್ಲ. ಹೊರಗಿನಿಂದ ಮತ್ತದೆ ಕರೆ ಪದೆ ಪದೆ.!
ಎದ್ದು ಹೊರಬಂದು ಮುಖತೊಳೆದು ತಲೆಗೊಂದು ಸ್ಕಾರ್ಫ್ ಕಟ್ಟಿಕೊಂಡು ನೀರಿನ ಬಾಟಲ್ ತುಂಬಿಕೊಂಡು ಕ್ಯಾಮೆರಾ ಮತ್ತು ಅವಶ್ಯದ ತಿಂಡಿ – ತಿನಿಸುಗಳನ್ನು ಬ್ಯಾಗಿನಲ್ಲಿ ತುರುಕಿಕೊಂಡೆ. ಬರೊಬ್ಬರಿ 24 ಜನ ರೆಡಿ ಆಗುವಷ್ಟರಲ್ಲಿ ನಸುಕಿನ ನಾಲ್ಕರ ಆಸುಪಾಸು.! ಎಲ್ಲರ ಹೆಸರು ಬರೆದುಕೊಂಡು ಸಹಿ ಮಾಡಿಸಿಕೊಂಡ ಅರಣ್ಯ ಇಲಾಖೆಯವರು “ಪ್ರತಿಯೊಬ್ಬರ ಬ್ಯಾಗಿನೊಳಗಿದ್ದ ಪ್ಲಾಸ್ಟಿಕ್ ಗಳ ಲೆಕ್ಕ ಪಡೆದು ಅದಕ್ಕೆ ಇಂತಿಷ್ಟು ಅಂತ ಠೇವಣಿ ಹಣ ಇರಿಸಿಕೊಂಡು ಬರುವಾಗ ಈ ಪ್ಲಾಸ್ಟಿಕ್ ತರದೆ ಹೋದಲ್ಲಿ ಹಣ ವಾಪಸ್ಸಾಗುವುದಿಲ್ಲ” ಅಂತ ಹೇಳಿ ಕಳುಹಿಸಿದರು.
ಸಾಲಾಗಿ 24 ಜನರು ಒಬ್ಬರ ಹಿಂದೆ ಒಬ್ಬರು. ಮುಂದೆ ದಾರಿ ತಿಳಿದ ಒಬ್ಬನು. ಕೊನೆಗೆ ನಾನು. ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಹೊರಟು ನಿಂತೆವು. ಸುತ್ತಲೂ ಕಾಡು, ನಡುವೆ ಒಂದು ಕಾಲುದಾರಿ ಎಲ್ಲರ ಕೈಯೊಳಗೊಂದು ಯಾಂತ್ರಿಕ ತುಣುಕು ಬೆಳಕು. ಆಹಾ! ದೂರದಿಂದ ನೋಡುವವರಿಗೆ ಇದೊಂದು ಅದ್ಭುತ.! ಏನೇನೋ ಸಣ್ಣ ಸಣ್ಣ ಮಾತುಕತೆಯೊಂದಿಗೆ ಬೆಟ್ಟ ಹತ್ತುತ್ತಾ ನಸುಕಿನ 5.30 ಆದಾಗ 2 ಕಿ. ಮೀ ಏರಿದ್ದೆವು. ನೊಡಬೇಕು ಆ ಸೌಂದರ್ಯವನ್ನು ಕ್ಷಣ ಹೊತ್ತು ನಿಂತು.! ಮೋಡಗಳು – ಮಂಜಿನ ಮುಸುಕು…! ಅರೆ ಇಷ್ಟೆ ಹತ್ತಿದ್ದೇವಾ ಇಷ್ಟೊತ್ತು ಎನ್ನುವ ಉದ್ಗಾರ ಎಲ್ಲರಿಂದ.!
ನೀರಿನ ಶಬ್ದ ಶುರುವಾಯಿತು. ಏರ ಏರುತ್ತಲೆ ಹೊಸ ಹುರುಪು ಹುಟ್ಟಿಕೊಂಡಿತು. ನೀರನರಸಿ ದಾರಿ ಹಿಡಿದು ಹೊರಟರೆ ಬರೊಬ್ಬರಿ ಒಂದು ತಾಸು. ಆಗ ಕಾಣಿಸಿದ್ದು ಒಂದು ಸಣ್ಣ ಝರಿಯಂತ ನೀರಿನ ತೊರೆ. ಕಲ್ಲು ಹಾಸಿದ ಒಂದು ಸಣ್ಣ ದಾರಿ ತುಳಿದು ಆ ಝರಿಯಲ್ಲಿ ಇಳಿದು ಬಾಟಲ್ ತುಂಬಿಸಿಕೊಂಡು ಒಂದಿಷ್ಟು ಫೋಟೊಗ್ರಫಿ ಮಾಡಿಕೊಂಡು ಮತ್ತದೆ ಬೆಟ್ಟದ ದಾರಿ ತುಳಿಯುವಾಗ 24 ಜನರ ಸಮೂಹ ಸಣ್ಣ ಸಣ್ಣ ಗುಂಪುಗಳಾಗಿ ಒಡೆದು ಹೋಗಿತ್ತು. ನಾಲ್ಕಾರು ಜನ ಒಟ್ಟೊಟ್ಟಿಗೆ ಹಿಂದೆ ಮುಂದೆ ಆಗಿಬಿಟ್ಟೆವು. ಮತ್ತದೆ ಏರಿನ ಪಯಣ ಶುರು.
ಕಲ್ಲು ಮಂಟಪ ಸುತ್ತೆಲ್ಲಾ ಬರಿ ಬಿಳಿ ಮೋಡ. ಆವರಿಸಿದ ಮುಸುಕು. “ನಾವಿಲ್ಲಿ ಸ್ವಲ್ಪ ಹೊತ್ತು ಕೂತೇಳೋಣ” ಅಂತ ತಿರ್ಮಾನಿಸಿ ಐದಾರು ಜನ ಉಳಿದೆವು. ಒಂದಿಷ್ಟು ಕ್ಷಣಕ್ಕೆ ಅಲ್ಲಿ ಭರ್ಜರಿ ಚಳಿ ಶುರುವಾಯ್ತು. ಆಗ ಮತ್ತೆ ನಮ್ಮ ನಡಿಗೆ ಶುರು ಮಾಡಿದೆವು. ಇದುವರೆಗೆ ಏರಲು ಒಂದು ಸನ್ನೆಯಂತ ದಾರಿಯಾದರೂ ಇತ್ತು. ಈಗ ಹಾಗಿರಲಿಲ್ಲ. ನಮ್ಮ ಮೊಳಕಾಲು ತೊಡೆ ಲಂಬಕೋನ ಸ್ಥಿತಿಯಲ್ಲಿದ್ದರೆ ಮಾತ್ರ ಒಂದೊಂದು ಹೆಜ್ಜೆ ಕಿತ್ತಿಡಲು ಸಾಧ್ಯ. ಏರಲು ಮೆಟ್ಟಿಲಿಲ್ಲ. ಮಣ್ಣ ದಿನ್ನೆಗಳು. ಈಗ ಕಾಡು ದಾರಿ ಮುಗಿದು ಸಹ್ಯಾದ್ರಿಯ ಹುಲ್ಲುಗಾವಲು ಶುರುವಾಯ್ತು. ಕೂತರು ಭಯ ನಿಂತರು ಭಯ ಹಾವಿನ ಹಾವಳಿ ಹೆಚ್ಚು.! ಹೊರಟೆವು ನಿಲ್ಲದೆ ಅಗಾಧ ಬಯಲೊಳು.!
ನಾವು ನಾಲ್ಕು ಜನ ಕವಲು ದಾರಿಯೊಳು ಹೆಜ್ಜೆ ತುಳಿದು ದಾರಿ ತಪ್ಪಿ ನಡೆದುಬಿಟ್ಟೆವು. ಮುಂದೆ ದಾರಿಯೆ ಕಾಣಲಿಲ್ಲ. ಹಾವು – ಚೇಳೆನ್ನದೆ ಎದೆ ಎತ್ತರದ ಹುಲ್ಲುಗಾವಲಿನಲಿ ಹುಂಬ ಧೈರ್ಯ ಮಾಡಿ ಹೆಜ್ಜೆ ಹಾಕಿ ನಡೆದುಬಿಟ್ಟೆವು. ಕಲ್ಲುಗಳ ಬೆಟ್ಟ ಎದುರಿಗೆ ಅಸ್ಪಷ್ಟವಾಗಿ ಕಾಣಿಸಿತು. ಜಿಗಣೆಗಳ ಕಾಟವು ಹೆಚ್ಚಾಯಿತು. ಆ ಹಾಸಿದ ಕಲ್ಲ ಮೇಲೆ ಕೂತು ಜರ ವಿಶ್ರಾಂತಿ ಪಡೆದು ಹೊಟ್ಟೆಗೊಂದಿಷ್ಟು ಬ್ರೆಡ್ ಜಾಮ್ ತಿಂದು ಮತ್ತೆ ಪಯಣ ಶುರುವಿಟ್ಟುಕೊಂಡೆವು. ಏನ್ ಕೇಳ್ತಿರಾ? ನಮ್ಮಪಾಡು. ನಡೆವಾಗ ಒಂದು ಸಣ್ಣ ಬೆಟ್ಟ ಎದುರಿಗೆ ಕಾಣುತ್ತೆ ಅದರ ಹಿಂದಿನದೂ ಏನೇನೂ ಕಾಣಲ್ಲ. ಅಷ್ಟೊಂದು ಮುಸುಕು. ಅದೆ ಗಮ್ಯ ಅಂದುಕೊಂಡು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿ ಅಲ್ಲಿಗೆ ಹೋಗಿ ನಿಂತಾಗ ಮುಗಿಲೆತ್ತರದ ಮತ್ತೊಂದು ಬೆಟ್ಟ ಕಣ್ಣೆದುರಿಗೆ.! ಹೀಗೆ ಸಾಗಬೇಕಾದರೆ ಸಮತಟ್ಟಾದ ಒಂದೆ ದಾರಿ ಸಿಕ್ಕು ಚೂರು ನಡೆದೆವು. ಒಂದೆರಡು ದೊಡ್ಡ ಬಂಡೆ. ಆ ಕಡೆ ಪ್ರಪಾತ. ಈ ಕಡೆ ಕಾಡು ಒಂದು ಕತ್ತಿಯಂಚಿನ ದಾರಿ ನಮ್ಮದು.! ಅಲ್ಲೊಂದು ಕಾಡು ಒಳಹೊಕ್ಕು ಹೋಗಲು ಇಕ್ಕಟ್ಟು ದಾರಿ ಅಲ್ಲೊಂದು ಮರಕ್ಕೆ ಹಸಿರು ಫಲಕ “ಪುಷ್ಪಗಿರಿ – 1 ಕಿ.ಮೀ.”
ಆ ಒಂದು ಕಿಲೋಮೀಟರ್ ದಾರಿ ನಿಜಕ್ಕೂ ಜೀವನದ ವಿಸ್ಮಯ ಕ್ಷಣಗಳು. ಒಂದು ಕಡೆ ಪ್ರಪಾತ ಏನೂ ಕಾಣದಂತ ಮಂಜಿನ ಮುಸುಕು, ಮುಗಿಯದ ಮುಗಿಲ ಸದೃಶ. ಇನ್ನೊಂದು ಕಡೆ ದಟ್ಟ ಅರಣ್ಯ ಶುರುವಾಗೋದು ಇಲ್ಲಿಂದಲೆ.! ನಾವು ಅಲ್ಲಿ ಹಾಕುವ ಒಂದೊಂದು ಹೆಜ್ಜೆಗೆ ಒಣಗಿದೆಲೆಗಳು ಮೈ ಮುರಿದಂತೆ ನಟಿಸಿ ಸದ್ದು ಮಾಡುತ್ತಿದ್ದವು. ಇಂಬಳಗಳಿಗೆ ಎಲ್ಲಿಲ್ಲದ ಖುಷಿ. ಚಿಟ್ಟೆಗಳು ಹಾರಾಡಿದರೆ, ಹಾವು – ಚೇಳು ಗಿಡದ ಪೊಟರೆಯಲ್ಲೊ, ಮರದ ಅಡಿಯ ಕಲ್ಲ ಸಂದಿಯಲ್ಲೊ ಬೆಚ್ಚಗೆ ಆಹಾರಕ್ಕಾಗಿ ಹವಣಿಸಿ ಕೂತಿರುವ ಸೂಚನೆ.!
ನಿರಂತರ ನೀರೆರೆವ ನಿರ್ಜನ ಪ್ರದೇಶದ ಸಹ್ಯಾದ್ರಿ ಪರ್ವತದಡಿಯ ನಿಗೂಢ ದಾರಿಯ ಇಕ್ಕಲಗಳಿಗಂಟಿ ಬೆಳೆದ ಗಿಡಮರಬಳ್ಳಿ ತಪ್ಪಲಿಗೆ ತಗಲುವ ಮಳೆಯ ಹನಿಗಳೊಳಗಿನ ನೇಸರನ ಕಿರಣದ ಸಪ್ತರಂಗುಗಳಲ್ಲಿ ಕಾಮನಬಿಲ್ಲಿನದೆ ದರ್ಬಾರು.! ನಿಂತ ಕಡೆ ನಿಂತುಕೊಂಡು ಆ ಪ್ರಕೃತಿಯನ್ನು ಅನುಭವಿಸಬೇಕೆಂಬುವವರಿಗೆ ಇಂಬಳದ ಕಾಟವಂತು ತಪ್ಪಿದ್ದಲ್ಲ! ಸಾಗಸಾಗುತ್ತಲೆ ಜೋರು ನೀರಿನ ಹಾಗೆ ಶಬ್ದ. ನಮ್ಮಿಂದ ಸ್ವಲ್ಪ ದೂರದಲ್ಲಿ ಮಳೆ ಜೋರಾಗಿದೆ ಎಂದುಕೊಂಡೆವು. ಆದರೆ ಅದು ಸಣ್ಣ ನೀರಿನ ತೊರೆಯ ದೊಡ್ಡ ಸದ್ದು. ಇಡಿ ಕಾಡಿಗೆ ಕಾಡೆ ಪ್ರತಿಧ್ವನಿಸುವಂತದ್ದು! ಮನಸ್ಸು ತಡೆಯಲಿಲ್ಲ ನೀರಿನ ಸದ್ದಾಗುವ ಕಡೆ ಓಡಿಹೋದೆವು. ಇಡೀ ಕಾಡಿನ ಮರದ ಬೇರುಗಳೆಲ್ಲಾ ತೊಳೆದು ಹರಿದು ಬರುವ ಅದ್ಭುತ ಔಷಧಿಯಂತಹ ತಣ್ಣನೆಯ ತಾಜಾ ನೀರದು. ಕುಡಿದೆವು.! ಸಾಲದ್ದಕ್ಕೆ ತಲೆ ತೋಯಿಸಿಕೊಂಡು ಕುಣಿದಾಡಿದೆವು.
ಸ್ವಲ್ಪ ಮುಂದೆ ಸಾಗಿ ಅದೆ ತೊರೆಯನ್ನು ದಾಟಿದಾಗ ಎದುರಿಗೆ ದೊಡ್ಡದಾದ ಒಂದು ಸಣ್ಣ ಸಣ್ಣ ಕಲ್ಲುಗಳ ಬೆಟ್ಟದಂತಹ ಬೆಟ್ಟವಲ್ಲದ ಕಲ್ಲೊಟ್ಟಿದಂತಹ ಕಲ್ಲಿನ ದಾರಿ. ಕಲ್ಲಿಗೆ ಕಲ್ಲಂಟಿಸಿ ಇಟ್ಟ ಹಾಗೆ ಒಂದಕ್ಕೊಂದು ಬೆಸೆದಂಥವು. ಕಲ್ಲ ಮೇಲೆ ಕಾಲು ಜಾರದಂತೆ ಎಚ್ಚರವಹಿಸಿ ಹತ್ತಿದೆವು. ಅಂಟಿದ ಕಲ್ಲಿನ ನಂಟು ಮುಗಿದು ದಾರಿ ಎಲ್ಲೆ ಎದುರಾದಾಗ ಎದೆಮೇಲೆ ಬಂದು ಕೂತಂತೆ ಆಕಾಶದೆತ್ತರದ ದೊಡ್ಡ ಬಂಡೆಯಂತ ಕಲ್ಲು ಎದುರಿಗೆ.! ಮೇಲಿಂದ ಒಂದೆ ಸಮನೆ ಸುರಿಯುವ ನೀರ ಝರಿ. ಅಲ್ಲೊಂದಿಷ್ಟು ದಣಿವಾರಿಸಿಕೊಂಡು ಕ್ಯಾಮೆರಾ ಬ್ಯಾಗಿನಲ್ಲಿ ತುರುಕಿಕೊಂಡು ಕಲ್ಲಿನ ಬೆಟ್ಟ ಹತ್ತಲಾರಂಭಿಸಿದೆವು. ಕೊಂಚವೇ ಕೈ ಜಾರಿದರೆ ಕೆಳಗೆ ಪಾತಾಳ, ಹೆಗಲಿಗೇರಿದ ಬ್ಯಾಗೆಂಬ ಬೇತಾಳ.! ಹುಂಬ ಧೈರ್ಯ ಮಾಡಿ ಹತ್ತಿದೆವು. ಒಂದು ಸಣ್ಣ ಸನ್ನೆ ಸಿಗುವಂತಹ ಕಲ್ಲಿನ ದಾರಿಯ ಅಂಚು ಸಿಕ್ಕು ಅಲ್ಲಿ ಕೂತಾಗ ಗೊತ್ತಾಯಿತು ಇನ್ನೂ ಅರ್ಧ ಕಿಲೋಮೀಟರ್ ಇದೆ ಅಂತ.!
ಅಲ್ಲಿಂದ ಯಾವುದ್ಯಾವುದೊ ಮರಗಳ ಬುಡದಲ್ಲಿ, ನೀರ ತೊರೆಗಳ ದಡಗಳಲ್ಲಿ, ದೊಡ್ಡ ದೊಡ್ಡ ಕಲ್ಲು ಬಂಡೆಯ ಅಂಚುಗಳಲ್ಲಿ ಹೆಜ್ಜೆ ಹಾಕುತ್ತಾ ನಡೆದಾಗ ನಮಗೆ ಪುಷ್ಪಗಿರಿ ಪೀಕಿನ ಮೈಲ್ಮೈ ಅಂಗಳ ಸಿಕ್ಕಿತು. ಆಹಾ ಎಷ್ಟೊಂದು ಸಣ್ಣ ಸಣ್ಣ ಕಲ್ಲಿನ ರಾಶಿಯ ಗುರುತುಗಳು. ಬಂದವರೆಲ್ಲಾ ತಮ್ಮ ನೆನಪಿಗೆಂದು ಕಟ್ಟಿಹೋದಂತಿತ್ತು. ಹಾಗೆ ನೋಡ ನೋಡುತ್ತಾ ಸುತ್ತಲೂ ಮುಸುಕು. ಏನೂ ಕಾಣುತ್ತಿಲ್ಲ. ಏರಿಳಿಯುತ್ತಿದ್ದವರೆ “ಹೀಗೆ ಹೋಗಿ ಹಾಗೆ ಹೋಗಿ” ಎನ್ನುವ ಸೂಚನೆಗಳೆ ಸೂಕ್ತವೆಂದು ಆರಿಸಿಕೊಂಡು ಬೆಟ್ಟದ ತುತ್ತ ತುದಿ ತಲುಪಿದಾಗ ಬೆಳಗ್ಗೆ 11 ಗಂಟೆ!
ಶಾಂತ ಮಲ್ಲಿಕಾರ್ಜುನ ದೇವಾಲಯವೆ ಅಲ್ಲಿನ ವಿಶೇಷ. ಗುಡಿಯೊಳಗೊಂದು ಲಿಂಗ. ಸುತ್ತಲೂ ಕಲ್ಲುಗಳ ರಾಶಿ. ಗುಡಿ ಎಂದರೆ ಅದು! ಅದೆಷ್ಟು ಸರಳ! ಪಂಚಲೋಹದ ಗಂಟೆಯೊಂದು ಬಿಟ್ಟು ಇನ್ನೇನೂ ಇಲ್ಲ.! ಸುತ್ತ ನೋಡಿದಷ್ಟು ಮುಗಿಯದ ಮುಗಿಲು – ಮೋಡಗಳು ಬಂದು ಕಪಾಳಕ್ಕೆ ರಪ್ಪನೆ ನೀರೆರೆಚುವಾಗ ಸಿಗುವ ಸುಖ ಯಾವ ಪ್ರತಿಷ್ಠಿತ ಕಂಪನಿಯ ಶೆವರ್ ಕೂಡ ಕೊಡಲಾರವು! ಮಳೆ – ಮೋಡ – ಹಸಿ – ಹಸಿರು – ಬೆಟ್ಟ – ಗುಡ್ಡ – ಕಾಡು ಎಲ್ಲವೂ ಕಣ್ಣೆದುರಿಗೆ ಭೂಲೋಕದ ಸ್ವರ್ಗ ಕಟ್ಟಿಕೊಟ್ಟಿದ್ದವು!
ಎಲ್ಲವೂ ನೋಡಾಯ್ತು.! ಹೊಟ್ಟೆ ಚುರುಗುಟ್ಟುತ್ತಿತ್ತು. ಬಂದ ದಾರಿ ಸರಿಯಾಗಿ ನೆನಪಿತ್ತು. ಬೆಟ್ಟ ಇಳಿಯಲಾರಂಭಿಸಿದೆವು. ಹೆಜ್ಜೆ ಮೊದಲಿಗಿಂತಲೂ ವೇಗವಾದವು. ಹೊರಟು ಬರುವಾಗ ಏನನೋ ಕಳೆದುಕೊಂಡ ಭಾವ.! ಮತ್ತದೆ ಕ್ಷಣಕ್ಕೆ ಎಲ್ಲೆ ಮೀರಿದ ಎಲ್ಲಿಲ್ಲದ ಸಂತಸ. ಆನಂದ ಭಾಷ್ಪ ಕನ್ನಡಕದ ಹಿಂದೆ ಜಾರಿದ್ದು ನನಗಷ್ಟೆ ಗೊತ್ತು.! ಅದೆ ಹುಮ್ಮಸ್ಸಿನಲ್ಲಿ ಬರೊಬ್ಬರಿ ಮಧ್ಯಾಹ್ನ ಒಂದು ಗಂಟೆಗೆಲ್ಲಾ ನಾವು ಟೆಂಟ್ ಹಾಕಿದ ಜಾಗ ತಲುಪಿ ಅಲ್ಲಿ ಊಟ ಮಾಡಿದೆವು. ಅಲ್ಲಿ ಅರಣ್ಯ ಇಲಾಖೆಯವರಿಗೆ ಪ್ಲಾಸ್ಟಿಕ್ಕಿನ ಲೆಕ್ಕ ಕೊಟ್ಟು ಠೇವಣಿ ಹಣ ಮರಳಿ ಪಡೆದು ಅಲ್ಲಿಂದ ಮತ್ತೆ ಎರಡೆರಡು ಬ್ಯಾಗು – ಟೆಂಟು – ನೀರಿನ ಬಾಟಲ್ ಹೆಗಲಿಗೇರಿಸಿಕೊಂಡು ಕೆಳಗಿಳಿಯಲಾರಂಭಿಸಿದೆವು. ಕುಕ್ಕೆಯ ಕುಮಾರ ಪರ್ವತದ ಪಾದದಡಿ ತಲುಪಿದಾಗ ಸಂಜೆ ಆರಾಗಿತ್ತು.
ನಿರ್ಜನ ಕಾಡಲ್ಲಿ ಏನೋ ಒಂದು ಸಂಗೀತವಿದೆ.! ಮತ್ತಿನ್ಯಾವುದೋ ಬದುಕಿದೆ! ಅಲ್ಲೊಂದು ಅಳಲಿದೆ, ಅರ್ಥಪೂರ್ಣ ನಾದವಿದೆ, ವಾದವಿದೆ, ಎಲ್ಲವನ್ನು ಸಹಿಸಿಕೊಳ್ಳುವ ನಿಸರ್ಗ ನಮ್ಮೂರಿನಾಚೆ ಇದೆ. ಇಲ್ಲೂ ಎದೆಯಲ್ಲೂ – ಎದೆಯೂರಿನಲ್ಲೂ ಹಸಿ – ಹಸಿರನ್ನ ಹಬ್ಬಿಸಿಕೊಳ್ಳೋಣ. ಕಾಡು ಬರಿ ನಮಗೆ ಅವಶ್ಯಕತೆ ಆಗದೆ ಅನಿವಾರ್ಯತೆ ಆಗಿದೆ ಎಂದು ತಿಳಿದು ಬದುಕೋಣ. ಪ್ಲಾಸ್ಟಿಕ್ ಎಸೆದಾಡದೆ ಚಾರಣ ಮಾಡಿ. ವನ – ವನ್ಯಜೀವರಾಶಿ ಉಳಿಸಿ.
ಲೇಖನ: ಮೌನೇಶ ಕನಸುಗಾರ
ಕಲ್ಬುರ್ಗಿ ಜಿಲ್ಲೆ.