ಹರಳೆ ಗಿಡ ಮತ್ತು ಹರಳೆ ಚಿಟ್ಟೆ

ಹರಳೆ ಗಿಡ ಮತ್ತು ಹರಳೆ ಚಿಟ್ಟೆ

© ಶಶಿಧರಸ್ವಾಮಿ ಆರ್. ಹಿರೇಮಠ

ಅಂದು ಮುಂಜಾನೆ ಕ್ಯಾಮೆರಾ ಹಿಡಿದು ಚಿಟ್ಟೆಗಳ ಛಾಯಾಗ್ರಹಣಕ್ಕಾಗಿ ನಮ್ಮ ಹೊಲದ ಬದುವಿನಲ್ಲಿ ಸಾಗುತ್ತಿದ್ದೆ. ಗೋವಿನ ಜೋಳದ ಪೈರಿನ ಬದಿಗೆ ಹಾಕಿದ್ದ ಹರಳೆ (ಔಡ್ಲ) ಗಿಡದಲ್ಲಿ ಹರಟೆಮಲ್ಲ ಹಕ್ಕಿಗಳು ಕುಳಿತಿರುವುದು ಕಂಡ ತಕ್ಷಣವೇ ಕ್ಯಾಮರಾಕ್ಕೆ ಅಳವಡಿಸಿದ್ದ ಮ್ಯಾಕ್ರೋ ಲೆನ್ಸ್ ಬದಲಾಯಿಸಿ ಟೆಲಿ ಲೆನ್ಸ್ ಹಾಕಿ ಆ ಹಕ್ಕಿಗಳ ಪೋಟೊ ಕ್ಲಿಕ್ಕಿಸಲು ಅಣಿಯಾದೆ. ಇನ್ನೇನು ಕ್ಲಿಕ್ ಬಟನ್ ಒತ್ತಬೇಕು ಅನ್ನುವಷ್ಟರಲ್ಲಿ ಹರಟೆಮಲ್ಲ ಹಕ್ಕಿಯು ಎಳೆಯ ಹರಳೆ ಕಾಯಿ ಗೊಂಚಲುಗಳಿಂದ ಇನ್ನೂ ಬಲಿಯದ ಸಣ್ಣ ಕಾಯಿಯನ್ನು ಕಿತ್ತು ಬಾಯಿಗೆ ಹಾಕಿಕೊಂಡು ನುಂಗಿತು. ಇತ್ತ ನನ್ನ ಕ್ಯಾಮರಾ ಚಟರ್… ಚಟರ್… ಎಂಬ ಪಿಸು ಸದ್ದಿನೊಂದಿಗೆ ಎರಡು ಪೋಟೊಗಳನ್ನು ದಾಖಲಿಸಿಕೊಂಡಿತು. ಆ ಹರಟೆಮಲ್ಲ ಹಕ್ಕಿಗೆ ನಾನು ಬದುವಿನಲ್ಲಿ ನಿಂತಿರುವುದು ಕಾಣಿಸಿತು ಎಂದನಿಸುತ್ತದೆ, ತಕ್ಷಣವೇ ಅದು ಅಲ್ಲಿಂದ ಹಾರಿ ಹೋಯಿತು. ಅದೇಕೊ ಹರಳೆ ಗಿಡ ನನ್ನನ್ನು ತನ್ನತ್ತ ಕರೆದಂತೆ ಭಾಸವಾಯಿತು. ಹತ್ತಿರಕ್ಕೆ ಹೋಗಿ ನೋಡಿದೆ. ಕೆಲ ಎಳೆಯ ಎಲೆಗಳು ಕತ್ತರಿಸಿದಂತೆ ಹಾಗೂ ಅವುಗಳ ಮಧ್ಯದಲ್ಲಿ ರಂಧ್ರಗಳಿರುವುದು ಆಕರ್ಷಕವಾಗಿ ಕಂಡವು. ಇದು ಯಾವುದೋ ಕೀಟದ ಕಿತಾಪತಿ ಇರಬಹುದೆಂದು ಆ ಹುಳದ ಹುಡುಕಾಟದಲ್ಲಿ ತೊಡಗಿದೆ. ಎಲೆಗಳನ್ನು ತಿರುಗಿಸಿ ನೋಡಿದೆ ಏನೂ ಕಾಣಿಸಲಿಲ್ಲ.

ಎಲ್ಲಿ ಅಡಗಿರಬಹುದು? ಕಿತಾಪತಿ ಕೀಟ, ಸಿಗುತ್ತಲೇ ಇಲ್ಲವಲ್ಲ ಎಂದು ಯೋಚಿಸುತ್ತಿದ್ದವನಿಗೆ ತಕ್ಷಣ ಹೊಳೆದಿದ್ದು ಇದು ಹರಳೆ ಗಿಡ, ಹರಳೆ ಚಿಟ್ಟೆಯ ಕಂಬಳಿ ಹುಳುವಿನ ಆಹಾರ ಸಸ್ಯವೆಂಬುದು. ಹೌದು, ಇದು ಹರಳೆ ಚಿಟ್ಟೆಯ ಕಂಬಳಿ ಹುಳುವಿನ ಕೆಲಸ. ಆಗ ಚಿಗುರೆಲೆಗಳಲ್ಲಿ ಹುಡುಕಾಟ ನಡೆಸಿದೆ. ಎಲೆಯ ಮೇಲೆ ವಿಶ್ರಾಂತ ಸ್ಥಿತಿಯಲ್ಲಿರುವ ಹಸಿರು ವರ್ಣದ ಕಂಬಳಿಹುಳು ಕಣ್ಣಿಗೆ ಕಂಡ ತಕ್ಷಣವೇ ಕ್ಯಾಮರಾಕ್ಕೆ ಅಳವಡಿಸಿದ್ದ ಟೆಲಿ ಲೆನ್ಸ್ ಬದಲಿಸಿ ಮತ್ತೆ ಮ್ಯಾಕ್ರೋ ಲೆನ್ಸ್ ಅಳವಡಿಸಿಕೊಂಡು ಅದರ ಪೋಟೊಗ್ರಫಿ ಮಾಡತೊಡಗಿದೆ. ವಿಶ್ರಾಂತವಾಗಿ ಕುಳಿತಿದ್ದ ಕಂಬಳಿಹುಳು ಎಲೆಯ ತುದಿಯತ್ತ ಬಂದು ಎಲೆಯನ್ನು ಭಕಾಸುರನಂತೆ ಭಕ್ಷಿಸತೊಡಗಿತು. ಈ ದೃಶ್ಯಗಳನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಂಡೆ. ಅದೇ ಗಿಡದ ಇನ್ನೊಂದು ಎಲೆಯಲ್ಲಿ ಮೊಟ್ಟೆ, ಕೋಶ ಕಂಡವು ಅವನ್ನು ಕ್ಲಿಕ್ಕಿಸಿಕೊಂಡೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಹರಳೆ ಗಿಡ 

ಹರಳೆ ಗಿಡವನ್ನು ಹರಳು ಎಂದು ಕರೆಯಲಾಗುತ್ತದೆ. ಈ ಗಿಡದ ಅಂಡಾಕಾರದ ಹೊಳೆಯುವ ಕಂದು ಬಣ್ಣದ ಬೀಜಗಳು ಬೆಲೆ ಬಾಳುವ ಹರಳು (ಮಣಿ)ಗಳಂತೆ ಕಾಣುವುದರಿಂದ ಈ ಗಿಡಕ್ಕೆ ಹರಳು ಎಂಬ ಹೆಸರು ಬಂದಿದೆ. ಈ ಬೀಜಗಳಿಂದ ತಯಾರಿಸುವ ಎಣ್ಣೆಯನ್ನು ರೂಢಿಯಲ್ಲಿ ಹರಳೆಣ್ಣೆ ಎಂದು ಆಡುಭಾಷೆಯಲ್ಲಿ ಮುಂದುವರೆದಿದೆ. ಹರಳೆಯ ಉಪಯೋಗವು ವೇದಗಳ ಕಾಲದಿಂದಲೂ ಭಾರತದಲ್ಲಿ ಇತ್ತೆಂದು ಮತ್ತು ಹಿಮಾಲಯದ ತಪ್ಪಲಿನಲ್ಲಿ ಇದನ್ನು ನೈಸರ್ಗಿಕವಾಗಿ ಬೆಳೆದಿರುವ ಬಗ್ಗೆ ದಾಖಲೆಗಳಿರುವ ಕಾರಣ, ಭಾರತವು ಹರಳೆ ಗಿಡದ ತವರೂರಾಗಿದೆ. ಈ ಗಿಡವನ್ನು ಔಡ್ಲ, ಔಡಲ, ಅವುಡಲ ಎಂತಲೂ ಕರೆದು ಸಂಸ್ಕೃತದಲ್ಲಿ ಏರಂಡ ಎಂದು ಕರೆಯಲಾಗುತ್ತದೆ. ಇಂಗ್ಲೀಷಿನಲ್ಲಿ ಕ್ಯಾಸ್ಟರ್ (Castor), ಕ್ಯಾಸ್ಟರ್ ಬೀನ್ (Castor Bean), ಕ್ಯಾಸ್ಟರ್ ಆಯಿಲ್ ಪ್ಲ್ಯಾಂಟ್ (Castor Oil Plant), ವಂಡರ್ ಟ್ರೀ (Wonder Tree) ಎಂತೆಲ್ಲ ನಾನಾ ಹೆಸರುಗಳಿಂದ ಕರೆದು, ರಿಸಿನಸ್ ಕಮ್ಯುನಿಸ್ (Ricinus communis) ಎಂದು ಸಸ್ಯಶಾಸ್ತ್ರೀಯವಾಗಿ ಹೆಸರಿಸಿ, ಯುಫೊರ್ಬಿಯೇಸಿ (Euphorbiaceae) ಸಸ್ಯಕುಟುಂಬಕ್ಕೆ ಸೇರಿಸಲಾಗಿದೆ.

© ಶಶಿಧರಸ್ವಾಮಿ ಆರ್. ಹಿರೇಮಠ

ವರ್ಗಿಕರಣಶಾಸ್ತ್ರಜ್ಞ ಕಾರ್ಲ್ ಲಿನ್ನಿಯಸ್ ಅವರು ಈ Ricinus communis ದ್ವಿನಾಮಪದವನ್ನು ಪ್ರಪ್ರಥಮವಾಗಿ ಹೆಸರಿಸಿದರು. ಲ್ಯಾಟಿನ್ ಭಾಷೆಯಲ್ಲಿ ರಿಸಿನಸ್ (Ricinus) ಎಂದರೆ ದನ-ಕರುಗಳನ್ನು ಆಶ್ರಯಿಸಿರುವ ಪರೋಪಜೀವಿಯಾದ ಉಣ್ಣಿ (Ticks) ಎಂದಾಗಿದೆ. ಹರಳೆಯ ಬೀಜಗಳು ಈ ಉಣ್ಣಿಯನ್ನು ಹೋಲುವುದರಿಂದ ರಿಸಿನಸ್ ಹೆಸರನ್ನು ಇಡಲಾಗಿದೆ. ಹರಳೆ ಗಿಡವು ಎಲ್ಲಾ ಪ್ರದೇಶಗಳ ಬೇಸಾಯದಲ್ಲಿ ಸಾಮಾನ್ಯವಾಗಿ (ಲ್ಯಾಟಿನ್ ಭಾಷೆಯಲ್ಲಿ communis ಎಂದರೆ Common) ಕಂಡು ಬರುವುದರಿಂದ ಕಮ್ಯುನಿಸ್ ಎಂಬ ಪ್ರಭೇದದ ಹೆಸರನ್ನು ನಾಮಕರಣ ಮಾಡಿದ್ದಾರೆ.

ಹರಳೆ ಗಿಡವು ವಿವಿಧ ಪ್ರಕಾರದ ಮಣ್ಣು ಹಾಗೂ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವ ಏಕ ಅಥವಾ ಬಹುವಾರ್ಷಿಕ ಸಸ್ಯ. ರೈತರು ಖುಷ್ಕಿ ಕೃಷಿಯಲ್ಲಿ (ಒಣ ಬೇಸಾಯ) ಬೆಳೆಗಳ ಮ್ಯಾರಿ (ಬದುಗಳಲ್ಲಿ) ಸುತ್ತಲೂ ಹಾಗೂ ಸಣ್ಣ ಪ್ರಮಾಣದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಕೆಲವೊಮ್ಮೆ ಜನವಸತಿ ಪ್ರದೇಶಗಳಲ್ಲಿ, ಕೈತೋಟಗಳಲ್ಲಿ ತಾನಾಗಿಯೇ ನೈಸರ್ಗಿಕವಾಗಿ ಬೆಳೆಯುತ್ತವೆ. ಹರಳೆ ಗಿಡವು ಸುಮಾರು 15 ರಿಂದ 30 ಅಡಿ ಎತ್ತರಕ್ಕೆ ಬೆಳೆಯುವ ಪೊದೆಯಾಕಾರದ ಇಲ್ಲವೇ ಸಣ್ಣ ಮರದಂತೆ ಬೆಳೆಯುವ ಗಿಡ. ಎಳಸಾದ ಕಾಂಡವು ನಸುಗೆಂಪಾಗಿ ಹೊರಮೈ ನುಣುಪಾದ ಬೂದು ಬಿಳಿ ಹುಡಿಯಂತ ಲೇಪವಿದ್ದು, ಕೈಯಿಂದ ಮುಟ್ಟಿದಾಗ ಅಂಟುತ್ತದೆ. ಕಾಂಡವು ಬಲಿತಾಗ ಬೂದು ಮಿಶ್ರಿತ ಹಸಿರಾಗಿದ್ದು, ಒಳಭಾಗವು ಟೊಳ್ಳಾಗಿದೆ. ಕಾಂಡದ ಮೇಲೆ ದೊಡ್ಡದಾದ ಹಸ್ತಾಕಾರದ ಸರಳ ಗಾಡ ಹಸಿರು ವರ್ಣದ ಎಲೆಗಳು ಪರ್ಯಾಯ ಜೋಡಣೆ ಹೊಂದಿದ್ದು, ಪ್ರತಿ ಎಲೆಯೂ 5 ರಿಂದ 7 ಸೀಳುಗಳಿವೆ. ಈ ಸೀಳುಗಳ ತುದಿ ಚೂಪಾಗಿವೆ. ಎಲೆಗಳ ಅಂಚು ಗರಗಸದ ಅಲಗಿನ ಹಲ್ಲಿನಂತಿವೆ. ಎಲೆ ತೊಟ್ಟು ಉದ್ದವಾಗಿ ಟೊಳ್ಳಾಗಿದೆ. ಚಿಗುರುಗಳು ಕೆಂಗೆಂದು ಬಣ್ಣವಾಗಿ ಬಲಿತಂತೆ ಹಸಿರಾಗುತ್ತವೆ.

© ಶಶಿಧರಸ್ವಾಮಿ ಆರ್. ಹಿರೇಮಠ

 ಹೂವುಗಳು ಏಕಲಿಂಗಿಗಳು ಪುಷ್ಪ ಮಂಜರಿಯ ಮೇಲಿನ ಅರ್ಧ ಭಾಗದಲ್ಲಿ ಹೆಣ್ಣು ಹೂವುಗಳಿದ್ದರೆ, ಕೆಳಗಿನ ಅರ್ಧ ಭಾಗದಲ್ಲಿ ಗಂಡು ಹೂವುಗಳು ಸ್ಥಿತಗೊಂಡಿವೆ. ಹೂವುಗಳಲ್ಲಿ ದಳಗಳಿರುವುದಿಲ್ಲ ಆದರೆ ಪುಷ್ಪ ಪಾತ್ರಾ ಪತ್ರಕಗಳಿವೆ. ಗಂಡು ಹೂವಿನಲ್ಲಿ ಐದು ಕೇಸರಗಳಿದ್ದು, ಇವು ಕವಲೊಡೆದಿರುವುದರಿಂದ ಹಲವಾರು ಕೇಸರಗಳಿರುವಂತೆ ಗೋಚರವಾಗುತ್ತದೆ. ಹೆಣ್ಣು ಹೂವಿನಲ್ಲಿ ಅಂಡಾಶಯವು ಉನ್ನತ ಸ್ಥಾನದಲ್ಲಿದ್ದು, ಅಂಡಾಶಯದೊಳಗೆ ಮೂರು ಕೋಣೆಗಳಿವೆ, ಪ್ರತಿ ಕೋಣೆಯಲ್ಲಿ ಒಂದೊಂದು ಅಂಡಕವಿದೆ. ಕಾಯಿಗಳು ಗೊಂಚಲುಗಳಲ್ಲಿ ಸ್ಥಿತವಾಗಿ ಗೋಳಾಕಾರದಲ್ಲಿದ್ದು ಮೈಮೇಲೆಲ್ಲಾ ಮೆತ್ತನೆಯ ಮುಳ್ಳುಗಳಿವೆ. ಕಾಯಿಗಳನ್ನು ವೈಜ್ಞಾನಿಕವಾಗಿ “ಕ್ಯಾಪ್ಸೂಲ್” ಎಂದು ಕರೆಯಲಾಗುತ್ತದೆ. ಕಾಯಿಗಳು ಬಿರಿದಾಗ ಮೂರು ಹೋಳಾಗುತ್ತವೆ. ಪ್ರತಿ ಹೋಳಿನೊಳಗೆ ಒಂದೊಂದು ಬೀಜವಿರುತ್ತದೆ. ಬೀಜದ ಒಂದು ತುದಿಯಲ್ಲಿ ಕ್ಯಾರಂಕಲ್ ಎಂಬ ಕುಪ್ಪೆ ಇದೆ. ಬೀಜವು ಕಂದು ಬಣ್ಣದ್ದಾಗಿದೆ ಹಾಗೂ ಕಪ್ಪಾದ ಗೆರೆಗಳಿದ್ದು ನುಣಪಾಗಿದೆ. ಹೂವು ಹಾಗೂ ಕಾಯಿಗಳು ಡಿಸೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಬಿಡುತ್ತವೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಭಾರತದಾದ್ಯಂತ ಸುಮಾರು 35 ಹರಳೆ ತಳಿಗಳ ಬೇಸಾಯ ಮಾಡುತ್ತಿರುವುದು ಕಾಣಸಿಗುತ್ತದೆ. ಕರ್ನಾಟಕದಲ್ಲಿ ಲಭ್ಯವಿರುವ ದಪ್ಪ ಹಾಗೂ ಸಣ್ಣ ಬೀಜದ (ಚಿಟ್ಟು ಹರಳೆ) ತಳಿಯಿಂದ ಸಂಸ್ಕರಿಸಿದ ಹರಳೆಣ್ಣೆ ಔಷಧಿಗೆ ಶ್ರೇಷ್ಠವೆಂಬ ನಂಬಿಕೆಯಿದೆ. ಬೀಜವು ವಿಷಪೂರಿತವಾಗಿದ್ದು, ಹರಳೆಣ್ಣೆಯಲ್ಲಿ “ರಿಸಿನ್‌ಒಲಿಯೊಗ್ಲಿಸಿರೈಡ್ಸ್” ಎಂಬ ರಾಸಾಯನಿಕ ಸತ್ವವಿದ್ದು, ಈ ಸತ್ವದಿಂದಲೆ ವಿರೇಚಕ ಗುಣಕ್ಕೆ ಕಾರಣವೆಂಬುದು ಕಂಡು ಬಂದಿದೆ. ಬೇರು, ಎಲೆ, ಬೀಜ ಹಾಗೂ ಎಣ್ಣೆಗಳಿಂದ ನಾಟೀ, ಸಿದ್ಧ, ಹೊಮಿಯೋಪತಿ ಹಾಗೂ ಆಯುರ್ವೇದ ಔಷಧಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಹರಳೆಯ ಅನೇಕ ಆಯುರ್ವೇದ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು. ಪೂಜೆಯ ಸಮಯದಲ್ಲಿ ದೀಪಕ್ಕೆ ಹರಳೆಣ್ಣೆಯನ್ನು ಉಪಯೋಗಿಸುವ ಸಂಪ್ರದಾಯ ಕೆಲ ಭಾಗದಲ್ಲಿ ಈಗಲೂ ಇದೆ.

ಮಾನವರಿಗೆ ಈ ಸಸ್ಯದಲ್ಲಿರುವ ರಿಸಿನಸ್ ಅಂಶವು ಅತ್ಯಂತ ಮೈನೂರತೆ (ಅಲರ್ಜಿಕಾರಕ- Allergenicity) ಕಾರಕವಾಗಿದೆ. ಇದು ಅಸ್ತಮಾಕ್ಕೆ ಬಲವಾದ ಪ್ರಚೋದಕವಾಗಿ ಈ ಅಲರ್ಜಿಯೂ ಸಾಮಾನ್ಯವಾದರೂ ಕೆಲಸಲ ತೀವ್ರವಾಗಿರುತ್ತದೆ. ಹರಳೆಯ ಹೂವುಗಳು ಹೇರಳವಾಗಿ ಹಗುರವಾದ ಪರಾಗವನ್ನು ಉತ್ಪಾದಿಸುತ್ತವೆ. ಇದು ಸುಲಭವಾಗಿ ವಾಯುಗಾಮಿಯಾಗಿ ಗಾಳಿಯಲ್ಲಿ ಸೇರಿ ಉಸಿರಾಟದಿಂದ ಶ್ವಾಸಕೋಶಕ್ಕೆ ಸೇರಿ ಅಲರ್ಜಿಯನ್ನು ಉಂಟುಮಾಡುತ್ತದೆ. ಸಸ್ಯದ ಮೇಲೆ ರಸವು ಚರ್ಮದ ದದ್ದುಗಳನ್ನು ಉಂಟುಮಾಡುತ್ತದೆ.

ಹರಳೆ ಗಿಡವು ಹರಳೆ ಚಿಟ್ಟೆ Common Castor Butterfly (Ariadne merione) ಮತ್ತು ಕಾಡು ಹರಳೆ ಚಿಟ್ಟೆ Angled Castor Butterfly (Ariadne Ariadne) ಯ ಕಂಬಳಿಹುಳುಗಳ ಆಹಾರದ ಆತಿಥೇಯ ಸಸ್ಯವಾಗಿದೆ.

ಹರಳೆ ಚಿಟ್ಟೆ

© ಶಶಿಧರಸ್ವಾಮಿ ಆರ್. ಹಿರೇಮಠ

ಹರಳೆ ಚಿಟ್ಟೆಯ ಪ್ರೌಢ ಚಿಟ್ಟೆಯು ಸುಮಾರು 52 ರಿಂದ 62 ಮಿ. ಮೀ ಅಗಲದ ರೆಕ್ಕೆ ಹರವು ಇರುವ, ಕಂದು ಮಿಶ್ರಿತ ಕೇಸರಿ ವರ್ಣದ ಮಧ್ಯಮ ಗಾತ್ರದಲ್ಲಿದೆ. ಚಿಟ್ಟೆಯ ನಾಲ್ಕು ರೆಕ್ಕೆಗಳ (ಮುಂದಿನ ಮತ್ತು ಹಿಂದಿನ) ಮೇಲ್ಮೈಯಲ್ಲಿ ಅಡ್ಡವಾದ ಅಲೆಯಾಕಾರದ ಕಂದು ಗೆರೆಗಳಿವೆ. ನಾಲ್ಕು ರೆಕ್ಕೆಗಳ ಕೆಳಮೈಯು ಕಡು ಕಂದು ವರ್ಣದಿಂದ ಕೂಡಿದ್ದು, ಮಾಸಿದ ಪೇಲವ ಕಿತ್ತಳೆ ಬಣ್ಣದ ಪಟ್ಟೆಗಳಿವೆ. ಎದೆ ಹಾಗೂ ಉದರ ಭಾಗವನ್ನೊಳಗೊಂಡ ದೇಹವು ಕಂದು ಮಿಶ್ರಿತ ಕೇಸರಿ ಬಣ್ಣದ್ದಾಗಿದೆ. ಆರು ಕಾಲುಗಳು ಮತ್ತು ಹೀರುನಳಿಕೆಯೂ ಮಾಸಲು ಕಂದು. ತಲೆ, ಸಂಯುಕ್ತಾಕ್ಷಿಗಳು ಹಾಗೂ ಗ್ರಹಣಾಂಗ (ಮೀಸೆ)ಗಳು ಪೇಲವ ಕಿತ್ತಳೆ ವರ್ಣಗಳಿಂದ ಆವೃತವಾಗಿವೆ.

ವರ್ಷವಿಡೀ ಕಾಣಸಿಗುವ ಈ ಚಿಟ್ಟೆಯು ನೆಲ ಮಟ್ಟದಿಂದ ಸ್ವಲ್ಪ ಎತ್ತರದಲ್ಲಿ ಮಂದಗತಿಯಿಂದ ತೇಲುವಂತೆ ಹಾರಾಡುತ್ತದೆ. ಕುಳಿತಾಗ ರೆಕ್ಕೆಗಳನ್ನು ಬಿಡಸಿ ಅಗಲಿಸಿಕೊಂಡು ಕುಳಿತು ವಿಶ್ರಾಂತಿ ಪಡೆಯುತ್ತದೆ. ಹೂವಿನ ಮಕರಂದದ ಜೊತೆ ಮರದ ಅಂಟನ್ನು ಸಹ ಸವಿಯುತ್ತದೆ.  ಕೃಷಿ ಭೂಮಿ, ಕುರುಚಲು ಕಾಡುಗಳು, ಎಲೆ ಉದುರುವ ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಸಮತಟ್ಟು ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಗಂಡು-ಹೆಣ್ಣು ಮಿಲನದ ನಂತರ ಹೆಣ್ಣು ಚಿಟ್ಟೆಯು ತನ್ನ ಆತಿಥೇಯ ಸಸ್ಯವಾದ ಹರಳೆ ಗಿಡದ ಎಲೆಯಲ್ಲಿ ಮೊಟ್ಟೆಗಳನ್ನು ಇಡುತ್ತದೆ. ತುರಿಕೆ ಪ್ರಭೇದದ Tragia hispida, Tragia plukenetii, Tragia involucrate ಸಸ್ಯಗಳು ಸಹ ಇದರ ಆತಿಥೇಯ ಸಸ್ಯವಾಗಿದ್ದು, ಇವುಗಳಲ್ಲಿಯೂ ಸಹ ಕೆಲ ಸಲ ಮೊಟ್ಟೆಗಳನ್ನು ಇಟ್ಟು ಸಂತಾನಾಭಿವೃದ್ಧಿ ಮಾಡುವುದೂ ಉಂಟು.

ಮೊಟ್ಟೆ

© ಶಶಿಧರಸ್ವಾಮಿ ಆರ್. ಹಿರೇಮಠ

ಹೆಚ್ಚಾಗಿ ಮಧ್ಯಾಹ್ನದ ಮೊದಲು ಅಂದರೆ 9 ರಿಂದ 12 ಘಂಟೆಗಳ ಮಧ್ಯದ ಸಮಯದಲ್ಲಿ ತಾಯಿ ಚಿಟ್ಟೆಯು ತನ್ನ ರೆಕ್ಕೆಗಳನ್ನು ಹರಡಿಕೊಂಡು ಮೊಟ್ಟೆಗಳನ್ನು ಆತಿಥೇಯ ಸಸ್ಯದ ಬಲಿತ ಎಲೆಯ ಕೆಳ ಅಥವಾ ಮೇಲಿನಭಾಗದಲ್ಲಿ 1-8 ಮೊಟ್ಟೆಗಳನ್ನು ಮತ್ತು ಕೋಮಲ ಚಿಗುರೆಲೆಯಲ್ಲಿ 1-4 ಮೊಟ್ಟೆಗಳನ್ನು, ಒಂದೊಂದೇ ಅಥವಾ 15 ಮೊಟ್ಟೆಗಳ ಗುಂಪಿನಲ್ಲಿ ಇಟ್ಟು ಅಂಟಿಸುತ್ತದೆ. ಪ್ರತಿಯೊಂದು ಮೊಟ್ಟೆಯು 0.80-0.90 ಮಿ. ಮೀ ವ್ಯಾಸದಲ್ಲಿವೆ. ಇವು ಬಿಳಿ ಬಣ್ಣದವಾಗಿದ್ದು ದುಂಡಾಕಾರವಾಗಿವೆ. ಮೊದಲು ಮೊಟ್ಟೆ ಇಟ್ಟಾಗ ಮೊಟ್ಟೆಗಳಲ್ಲಿ ಮೃದುವಾದ ವಿನ್ಯಾಸ ಕಾಣಿಸಿಕೊಂಡು 6-10 ಸೆಕೆಂಡಿನೊಳಗೆ ತೆಳುವಾದ ಮುಳ್ಳಿನಂತಿರುವ ಕೂದಲುಗಳ ರಚನೆಗಳನ್ನು ಮೂಡುತ್ತವೆ. ಮೊಟ್ಟೆಗಳು ಮುಂಗಾರು ಪೂರ್ವದ 3-4 ದಿನಗಳಲ್ಲಿ ಹಾಗೂ ಮುಂಗಾರು ನಂತರದಲ್ಲಿ 2-3 ದಿನಗಳಲ್ಲಿ ಮೊಟ್ಟೆಯೊಳಗೆ ಕಂಬಳಿ ಹುಳುವಿನ ಬೆಳವಣೆಗೆ ಹೊಂದುತ್ತದೆ. ಮೊಟ್ಟೆಯೊಡೆಯುವ ಕಾಲ ಸನ್ನಿತವಾಗುತ್ತಿದ್ದಂತಯೇ ಮೊಟ್ಟೆಯ ಬಣ್ಣವು ತಿಳಿ ಕಂದು ಬಣ್ಣಕ್ಕೆ ಬದಲಾಗುತ್ತದೆ. ಸ್ವಲ್ಪ ಸಮಯದ ನಂತರ ಮೊಟ್ಟೆಯೊಡೆದು ಕಂಬಳಿಹುಳು (ಲಾರ್ವಾ)ಗಳು ಹೊರ ಬಂದು ತಮ್ಮ ಮೊಟ್ಟೆಯ ಚಿಪ್ಪನ್ನು ತಿನ್ನಲು ಪ್ರಾರಂಭಿಸುತ್ತವೆ. ಮೊಟ್ಟೆಯ ಚಿಪ್ಪನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಕಂಬಳಿ ಹುಳುಗಳಿಗೆ ದೊರೆಯುತ್ತವೆ. ಸಂಪೂರ್ಣವಾಗಿ ಚಿಪ್ಪನ್ನು ತಿಂದು ಮುಗಿಸಿದ ನಂತರ ಕಂಬಳಿಹುಳು ಕೋಮಲವಾದ ಚಿಗುರೆಲೆಗಳನ್ನು ಭಕಾಸುರನಂತೆ ಭಕ್ಷಿಸಲು ಪ್ರಾರಂಭಿಸುತ್ತದೆ.

ಕಂಬಳಿಹುಳು (ಲಾರ್ವಾ- Larvae)

© ಶಶಿಧರಸ್ವಾಮಿ ಆರ್. ಹಿರೇಮಠ

ಎಳೆ ಕಂಬಳಿಹುಳು ಹಸಿರು ಬಣ್ಣದಾಗಿದ್ದು, ದೇಹದ ಮೇಲ್ಭಾಗದಲ್ಲಿ ಎರಡು ಅಸ್ಪಷ್ಟ ಬಿಳಿ ಗೆರೆಗಳಿರುತ್ತವೆ. ಉದ್ದವಾದ ಕಂಬಳಿಹುಳುವು 14 ಖಂಡಗಳನ್ನು ಹೊಂದಿದ್ದು, 1ನೇ ಖಂಡವು ತಲೆಭಾಗ, 2-4ನೇ ಖಂಡವು ಎದೆಭಾಗ, 5-14ನೇ ಖಂಡಗಳು ಉದರಭಾಗವಾಗಿರುತ್ತವೆ. ಪ್ರತಿಯೊಂದು ಖಂಡಗಳಲ್ಲಿ ನಾಲ್ಕು ಸಣ್ಣ ಸಣ್ಣ ಕವಲೊಡೆದಿರುವ ಕಿತ್ತಳೆ ಮಿಶ್ರಿತ ಹಸಿರು ಬಣ್ಣದ ಮೃದುವಾದ ಮುಳ್ಳಿನಂತಿರುವ ರಚನೆಗಳಿವೆ. 1ನೇ (ತಲೆಭಾಗ) ಖಂಡದಲ್ಲಿ ಕೇಸರಿ ವರ್ಣದ ಸಣ್ಣ ಸಣ್ಣ ಕವಲುಗಳಿರುವ ಎರಡು ಉದ್ದವಾದ ಕೊಂಬುಗಳಿವೆ. ಈ ರಚನೆಗಳು ಬಲಿತ ಕಂಬಳಿಹುಳುವಿನಲ್ಲಿಯೂ ಕಂಡುಬರುತ್ತವೆ. ದೇಹದ ಮೇಲ್ಭಾಗದಲ್ಲಿ ಅಗಲವಾದ ಹಳದಿ ಪಟ್ಟೆಯಿದ್ದು, ಅದರಲ್ಲಿ ಸಪೂರ ಕಂದು ಗೆರೆಯಿದೆ ಹಾಗೂ ಪಟ್ಟೆಯ ಎರಡು ಬದಿಗಳಲ್ಲಿ ಕಲೆಗಳಿವೆ. ಎದೆಭಾಗವಾದ 2, 3 ಮತ್ತು 4ನೇ ಖಂಡಗಳಲ್ಲಿ ಮೂರು ಜೊತೆ ನಿಜಪಾದಗಳು ಹಾಗೂ ಉದರಭಾಗವಾದ 7ನೇ ಖಂಡದಿಂದ 10ನೇ ಖಂಡದವರೆಗೆ ಪ್ರತಿಖಂಡದಲ್ಲಿ ಒಂದು ಜೊತೆ ಮಿಥ್ಯಾ ಪಾದಗಳಿದ್ದು, ಇವುಗಳ ಸಹಾಯದಿಂದ ಕಂಬಳಿಹುಳುವು ನಡೆದಾಡುತ್ತದೆ. 2ನೇ ಮತ್ತು 5 ರಿಂದ 14ನೇ ಖಂಡಗಳ ಎರಡು ಬದಿಯಲ್ಲಿ ಶ್ವಾಸರಂಧ್ರ (Spiracle) ವಿದ್ದು, ಇದರ ಮೂಲಕ ಕಂಬಳಿಹುಳು ಉಸಿರಾಡುತ್ತದೆ. ಬಾಯಿಯ ಹಿಂಬದಿಯಲ್ಲಿ ನೂಲುವ ಅಂಗ ಅಥವಾ ರೇಷ್ಮೆ ಸುರಿಸುವ ತಂತು (Spinneret) ರಚನೆ ಇದ್ದು, ಇದರಿಂದ ರೇಷ್ಮೆಎಳೆಯನ್ನು ಸ್ರವಿಸುತ್ತದೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಪ್ರತಿ ಕಂಬಳಿಹುಳು (ಲಾರ್ವಾ)ವು ಐದು ವಿಭಿನ್ನ ಪೊರೆ ಕಳಚುವಿಕೆ ಅಥವಾ ಚರ್ಮ ಕಳಚುವಿಕೆ (Moulting) ಹಂತವನ್ನು (Instar) ಹೊಂದಿರುತ್ತದೆ. ಮುಂಗಾರು ಪೂರ್ವದ ಮೊದಲನೇಯ ಹಂತದಲ್ಲಿ 2-3 ದಿನಗಳ ಅವಧಿಯಾಗಿರುತ್ತದೆ. ಎರಡನೇಯ ಹಂತದಲ್ಲಿ 2-3 ದಿನಗಳ, ಮೂರನೇಯ ಹಂತದಲ್ಲಿ 3-4 ದಿನಗಳ, ನಾಲ್ಕನೇಯ ಹಂತದಲ್ಲಿ 2-4 ದಿನಗಳ, ಐದನೇಯ ಹಂತದಲ್ಲಿ 2-3 ದಿನಗಳ ಅವಧಿಯಲ್ಲಿ ನಡೆದು ಸುಮಾರು 11-17 ದಿನಗಳಲ್ಲಿಯೂ ಹಾಗೂ ಮುಂಗಾರು ನಂತರದಲ್ಲಿ ಮೊದಲನೇಯ ಹಂತದಲ್ಲಿ 3-4 ದಿನಗಳ, ಎರಡನೇಯ ಹಂತದಲ್ಲಿ 3-4 ದಿನಗಳ, ಮೂರನೇಯ ಹಂತದಲ್ಲಿ 2-4 ದಿನಗಳ, ನಾಲ್ಕನೇಯ ಹಂತದಲ್ಲಿ 2-3 ದಿನಗಳ, ಐದನೇಯ ಹಂತದಲ್ಲಿ 3-5 ದಿನಗಳ ಅವಧಿಯಲ್ಲಿ ತೆಗೆದುಕೊಂಡು 27 ಮಿ. ಮೀ ಉದ್ದದ ಕಂಬಳಿಹುಳು ಮುಂಗಾರು ನಂತರದಲ್ಲಿ ಸುಮಾರು 13-18 ದಿನಗಳಲ್ಲಿ ಸಂಪೂರ್ಣ ಐದು ಪೊರೆಕಳಚುವಿಕೆಯನ್ನು ಪೂರೈಸಿ ಕೋಶಾವಸ್ಥೆಗೆ ಸಿದ್ಧವಾಗುತ್ತದೆ. ಕೋಶಾವಸ್ಥೆಗೆ ತಲುಪುವಾಗ ಹಸಿರಾಗಿದ್ದ ಕಂಬಳಿಹುಳು ತಿಳಿಗಂದು ಬಣ್ಣಕ್ಕೆ ಬದಲಾಗುತ್ತದೆ.

ಕೋಶಾವಸ್ಥೆಗೆ ತಲುಪುವ ಮುನ್ನಾದಿನ ಕಂಬಳಿಹುಳು ಆಹಾರ ಭಕ್ಷಿಸುವುದನ್ನು ನಿಲ್ಲಿಸಿಬಿಡುತ್ತದೆ. ನಂತರ ಸೂಕ್ತವಾದ ಜಾಗವನ್ನು ಆಯ್ಕೆ ಮಾಡಿಕೊಂಡು ರೆಂಬೆ, ಎಲೆಗೆ ಡಿವತ್ತಳೆ (Cremaster) ಸಹಾಯದಿಂದ ಅಂಟಿಸಿಕೊಂಡು ಎಂಟರಿಂದ ಹತ್ತು ತಾಸುಗಳವರೆಗೆ ಅಚಲವಾಗಿ ನೇತಾಡುತ್ತ ಕುಳಿತು ತದನಂತರ ಹೊರಕವಚವು ತಲೆ ಭಾಗದಿಂದ ಸೀಳಿ, ಗುದ ಭಾಗದವರೆಗೆ ಸೀಳುತ್ತ ಬಂದು ಮೇಲ್ಪದರಾಗಿರುವ ಕವಚವನ್ನು ಸಂಪೂರ್ಣವಾಗಿ ಕಳಚಿ ಕೋಶಾವಸ್ಥೆಯ ಪೊರೆಹುಳು ಅಥವಾ ಗೂದುಹುಳುವಾಗಿ ಮಾರ್ಪಾಡುತ್ತದೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಕೋಶಾವಸ್ಥೆ (ಪ್ಯೂಪಾ Larvae or Chrysalis)

© ಶಶಿಧರಸ್ವಾಮಿ ಆರ್. ಹಿರೇಮಠ

ಕೋಶಾವಸ್ಥೆ ಹಂತವು ಚಿಟ್ಟೆಯ ಸುಪ್ತಾವಸ್ಥೆಯಾಗಿದೆ. ಈ ಹಂತದಲ್ಲಿ ಕೋಶದ ಒಳಗೆ ಚಿಟ್ಟೆಯು ಪ್ರೌಢ ಚಿಟ್ಟೆಯಾಗಲು ರೂಪಪರಿವರ್ತನೆಗೊಳ್ಳುತ್ತದೆ. ಈ ಕೋಶವು ಸರಾಸರಿ 20-28 ಮಿ. ಮೀ ಉದ್ದ ಹಾಗೂ 3 ಮಿ. ಮೀ ಅಗಲವಾಗಿದೆ. ಹಸಿರಾಗಿ ಮೇಲ್ಭಾಗದಲ್ಲಿ ಕಂದು ಬಣ್ಣದ ಅಗಲವಾದ ಕಲೆಗಳಿವೆ. ಎದೆಭಾಗವು ಉಬ್ಬಿದ್ದು, ತುಸು ಮೊನಚಾಗಿದೆ. ಕೋಶಾವಸ್ಥೆಯ ಹಂತದ ಅವಧಿಯು ಬದಲಾವಣೆಯನ್ನು ಹೊಂದಿದ್ದು, ಮುಂಗಾರು ಪೂರ್ವದಲ್ಲಿ 6-7 ದಿನಗಳು ಹಾಗೂ ಮುಂಗಾರು ನಂತರದ ಅವಧಿಯಲ್ಲಿ 7-11 ದಿನಗಳಾಗಿವೆ. ಕೋಶದಿಂದ ಪ್ರೌಢ ಚಿಟ್ಟೆಯಾಗಿ ಹೊರಬರುವ ಸಮಯವು ಸಮೀಪಿಸುತ್ತಿದ್ದಂತೆ ಕೋಶವು ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಮುಂಭಾಗದ ತುದಿ ಕಿರಿದಾಗುತ್ತ ಕೆಳಭಾಗವು ವಿಶಾಲವಾದಂತೆ ಎರಡೂ ಪಾರ್ಶ್ವ ಬದಿಗಳು ಒಳಮುಖವಾಗಿ ವಕ್ರವಾಗಿರುತ್ತವೆ ಹಾಗೂ ಬದಿಯ ಎರಡು ಪಾರ್ಶ್ವಗಳು ಮೊನಚಾದ ಪ್ರಕ್ಷೇಪಗಳಂತೆ ಕಾಣಿಸಿಕೊಳ್ಳುತ್ತವೆ. ಕೋಶದಲ್ಲಿ ಮೀಸೆ, ರೆಕ್ಕೆಗಳು, ಸಂಯುಕ್ತ ಕಣ್ಣುಗಳು, ಹೀರುಕೊಳವೆ, ಕಾಲುಗಳು, ತಲೆ, ಎದೆ, ಉದರಭಾಗಗಳೆಲ್ಲವು ಸಂಪೂರ್ಣವಾಗಿ ಬೆಳೆದು ಪ್ರೌಢ ಚಿಟ್ಟೆಯೂ ಕೋಶದಿಂದ ತಳ ತುದಿಯಲ್ಲಿ ಕೋಶವನ್ನು ನೂಕಿಕೊಂಡು ಹೊರಬರುತ್ತದೆ.

ಹೊರಪೊರೆಯನ್ನು ಒಳಗಿನಿಂದ ಮಿಸುಗಾಡುತ್ತಾ ತಲೆ, ಮೀಸೆ, ಹೀರುಗೊಳವೆ, ಮುಂಗಾಲುಗಳು ನಿಧಾನವಾಗಿ ಮೊದಲು ಹೊರಬರುತ್ತವೆ. ನಂತರ ಅದು ಹೊರಳಾಡುತ್ತ ರೆಕ್ಕೆಗಳು ಹಾಗೂ ಸಂಪೂರ್ಣ ದೇಹಭಾಗ ಹೊರ ಬಂದು ಕಾಲಿನ ಸಹಾಯದಿಂದ ಕೋಶದ ದಿಂಬಕ್ಕೆ ನೇತಾಡುತ್ತವೆ. ಅವುಗಳ ರೆಕ್ಕೆಗಳು ಇನ್ನು ಒದ್ದೆಯಾಗಿದ್ದು, ಹಾರುವ ಸ್ಥಿತಿಯಲ್ಲಿರುವುದಿಲ್ಲ. ರೆಕ್ಕೆಗಳಿಗೆ ದೇಹದಿಂದ ರಕ್ತ ಪರಿಚಲನೆ ಹೊಂದಿ ಸೂರ್ಯನ ಕಿರಣಗಳು ಅದರ ಮೇಲೆ ಬಿದ್ದಾಗ ಅಥವಾ ವಾತಾವರಣದ ಶಾಖದಿಂದ ರೆಕ್ಕೆಗಳು ಒಣಗಿ ಗಟ್ಟಿಯಾಗಿ ಸುಂದರವಾದ ಪ್ರೌಢ ಚಿಟ್ಟೆಯಾಗಿ ಮಕರಂದ ಹೀರುತ್ತ ಸಂಗಾತಿಯ ಹುಡುಕಾಟದಲ್ಲಿ ತೊಡಗಿ ಮತ್ತೇ ವಿರುದ್ದ ಲಿಂಗಗಳು ಮಿಲನಗೊಂಡು ವಂಶಾಭಿವೃದ್ಧಿಗೊಳಿಸುತ್ತವೆ. ಮೊಟ್ಟೆಯಿಡುವಿಕೆಯಿಂದ ವಯಸ್ಕ ಚಿಟ್ಟೆಯಾಗುವರೆಗಿನ ಒಟ್ಟು ಬೆಳವಣಿಗೆಯ ಸಮಯ 22-32 ದಿನಗಳಾಗಿವೆ.

ಹರಳೆ ಚಿಟ್ಟೆಗಳನ್ನು ಇಂಗ್ಲೀಷನಲ್ಲಿ ಕಾಮನ್ ಕ್ಯಾಸ್ಟರ್ (Common Castor) ಎಂದು ಕರೆದು, ಅರಿಯಡ್ನೆ ಮೆರಿಯೋನ್ (Ariadne merione) ಎಂದು ವೈಜ್ಞಾನಿಕವಾಗಿ ಹೆಸರಿಸಿ, ಸಂಧಿಪದಿ (Arthropoda)ಗಳ, ಕೀಟ (Insecta) ವರ್ಗದ, ಲೆಪಿಡೋಪ್ಟೆರಾ (Lepidoptera) ಗಣದ, ಕುಚ್ಚುಪಾದದ (Brush-footed butterflies) ಚಿಟ್ಟೆಗಳ, ನಿಂಪಾಲಿಡೇ (Nymphalidae) ಕುಟುಂಬದ, ಬಿಬ್ಲಿಡಿನೇ (Biblidinae) ಉಪಕುಟುಂಬಕ್ಕೆ ಸೇರಿಸಲಾಗಿದೆ. ಭಾರತದಲ್ಲಿ ದಖನ್ ಹರಳೆ ಚಿಟ್ಟೆ Dakhan Common Castor (Ariadne merione merione – Cramer, 1777) ಹಾಗೂ ಇಂಟ್ರಿಕೇಟ್ ಹರಳೆ ಚಿಟ್ಟೆ Intricate Common Castor (Ariadne merione tapestrina- Moore, 1884) ಎಂಬ ಎರಡು ಉಪಜಾತಿಯ ಹರಳೆ ಚಿಟ್ಟೆಗಳನ್ನು ಚಿಟ್ಟೆ ತಜ್ಞರು ದಾಖಲಿಸಿದ್ದಾರೆ.

ಪ್ರಕೃತಿಯಲ್ಲಿ ಸಸ್ಯ ಹಾಗೂ ಚಿಟ್ಟೆಗಳ ಸಂಬಂಧವು ಕೋಟ್ಯಾಂತರ ವರ್ಷಗಳಿಂದ ಮುಂದುವರೆದುಕೊಂಡು ಬಂದಿದ್ದು, ಒಂದನ್ನೊಂದು ಅವಲಂಭಿಸಿವೆ. ಒಂದು ಸಸ್ಯ ಪ್ರಭೇದವು ವಿನಾಶವಾದರೇ ಮತ್ತೊಂದು ಜೀವಿಯು ವಿನಾಶವಾದಂತೆ. ಮಾನವರಾದ ನಾವೆಲ್ಲರೂ ಸಸ್ಯ ಹಾಗೂ ಚಿಟ್ಟೆಗಳ ಆವಾಸ ತಾಣಗಳನ್ನು ಸಂರಕ್ಷಿಸಿದಾಗ ಜೀವ ವೈವಿಧ್ಯವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ.

© ಶಶಿಧರಸ್ವಾಮಿ ಆರ್. ಹಿರೇಮಠ

ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
        ಹಾವೇರಿ ಜಿಲ್ಲೆ

Spread the love
error: Content is protected.