ರಕ್ತಗತವಾದ ಪ್ಲಾಸ್ಟಿಕ್..!
©PROSTOCK-STUDIO_ISTOCK_GETTY IMAGE PLUS
ಬಿದಿರಿನ ಕಡ್ಡಿಯ ತುದಿಯನ್ನು ಚೂಪಾಗಿಸಲು ಬಳಸುತ್ತಿದ್ದ ಆ ಹರಿತವಾದ ಚಾಕು ಸೀದಾ ನನ್ನ ಎಡಗೈನ ತೋರು ಬೆರಳಿನ ಬುಡಕ್ಕೆ ಇರಿಯಿತು. ಕ್ಷಣಾರ್ಧದಲ್ಲಿ ರಕ್ತ ಚಿಮ್ಮೆಂದು ನನ್ನ ಕಣ್ಣ ಮುಂದೆಯೇ ತೂತಾದ ಪೈಪಿನಿಂದ ಚಿಮ್ಮುವ ನೀರಿನಂತೆ ಚಿಮ್ಮಿತು. ನೋಡು ನೋಡುತ್ತಿದ್ದಂತೆಯೇ ರಕ್ತ ಹರಿದು ಕೈಯೆಲ್ಲಾ ಕೆಂಪಾಯ್ತು. ಒಂದೆರಡು ಹನಿ ನೆಲಕ್ಕೂ ಬಿತ್ತು. ತಕ್ಷಣ ಕತ್ತರಿಸಿದ ಭಾಗವನ್ನು ಬಲಗೈ ಹೆಬ್ಬೆರಳು ಮತ್ತು ತೋರು ಬೆರಳಿನಿಂದ ಗಟ್ಟಿಯಾಗಿ ರಕ್ತಸ್ರಾವವನ್ನು ನಿಲ್ಲಿಸಲು ಹಿಡಿದೆ. ಆದರೆ ಸ್ವಲ್ಪ ಸಮಯದ ನಂತರ ತಲೆಯಲ್ಲಿ ಕುತೂಹಲ. ರಕ್ತಸ್ರಾವ ನಿಂತಿದೆಯೇ? ಕತ್ತರಿಸಿದ ಭಾಗ ಎಷ್ಟು ಆಳವಾಗಿ ಹೋಗಿರಬಹುದು? ಎಂಬ ಕುತೂಹಲದ ಪ್ರಶ್ನೆಗಳು. ತಾಳಲಾರದೆ ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನಿಧಾನವಾಗಿ ಹೆಬ್ಬೆರಳನ್ನು ಸಡಿಲ ಮಾಡಿದೆ. ನಿಂತ ರಕ್ತ ಮತ್ತೆ ನಲ್ಲಿಯಲ್ಲಿ ಬಿಟ್ಟ ನೀರಿನಂತೆ ಹರಿಯತೊಡಗಿತು. ಹಿಂಗಾದರೆ ಕೆಲಸ ಕೆಟ್ಟೀತು ಎಂದು ಖಾತ್ರಿಯಾಯ್ತು. ಅದಕ್ಕೆ ನನ್ನ ಕೌತುಕತೆಯನ್ನು ಸ್ವಲ್ಪ ಕಾಲ ಹಿಡಿದಿಟ್ಟುಕೊಳ್ಳಬೇಕಾಯ್ತು. ಮುಂದೆ ಸ್ವಲ್ಪ ಕಾಲ ಆ ಪರೀಕ್ಷೆಯನ್ನು ಮಾಡಲು ಹೋಗಲೇಬಾರದೆಂದು ನಿರ್ಧರಿಸಿದೆ. ಕನಕಪುರ ತಾಲೂಕಿನ ಚಾಕನಹಳ್ಳಿ ಗ್ರಾಮಕ್ಕೆ ಹತ್ತಿರದ ಒಂದು ಬೆಟ್ಟದಲ್ಲಿ ಆ ದಿನ ಜಾತ್ರೆ ಇತ್ತು. ಆ ಬೆಟ್ಟವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುಪರ್ದಿಗೆ ಬರುವುದರಿಂದ ಅಲ್ಲಿ ನಡೆಯುವ ಜಾತ್ರೆಗೆ ಕೆಲವು ಕಟ್ಟು ನಿಟ್ಟುಗಳಿದ್ದವು. ಉದಾಹರಣೆಗೆ ಜಾತ್ರೆಗೆ ತೆರಳುವ ಯಾರೂ ಸಹ ಯಾವುದೇ ಕಾರಣಕ್ಕೂ ಎಲ್ಲಿಯೂ ಬೆಂಕಿಯನ್ನು ಹಚ್ಚಬಾರದು, ಹೆಚ್ಚು ಶಬ್ಧವನ್ನು ಮಾಡಬಾರದು, ಪ್ಲಾಸ್ಟಿಕ್ ಬಳಕೆಯನ್ನು ಕನಿಷ್ಟಗೊಳಿಸಿ, ಅಲ್ಲಲ್ಲಿ ಇಟ್ಟ ಕಸದ ತೊಟ್ಟಿಯಲ್ಲೇ ಕಸವನ್ನು ಹಾಕಬೇಕು. ಹೀಗೆ… ಆದರೆ ನಮ್ಮ ಜನ ಹೇಳಿದ್ದನ್ನು ಪಾಲಿಸುವುದಿರಲಿ, ಹೇಳಿದ ಪದಗಳು ಅವರ ಶ್ರವಣದ ಒಳಹೊಕ್ಕು ತಮಟೆಗಳಲ್ಲಿ ಕಂಪಿಸಿತೋ ಇಲ್ಲವೋ ಎಂಬುದೇ ಅನುಮಾನ. ಅದಕ್ಕಾಗೇ ವಾಸ್ತವ ಅರಿತ ನಾವು ಜಾತ್ರೆ ಕೊನೆಗೊಳ್ಳುವ ಗೋಧೂಳಿಯ ಸಮಯಕ್ಕೆ ಕಾಡಿನ ನಡುವಲ್ಲಿದ್ದ ಆ ಜಾತ್ರಾ ಸ್ಥಳಕ್ಕೆ ಹೋಗಿ ಅಲ್ಲಿನ ಪ್ಲಾಸ್ಟಿಕ್ ಮತ್ತು ಮುಂತಾದ ಕಸ ಮಾಣಿಕ್ಯಗಳನ್ನು ಆರಿಸಿ ಸುಟ್ಟು ಬರಬೇಕೆಂದು ಪಣ ತೊಟ್ಟಿದ್ದೆವು. ಸೊಂಟ ಬಗ್ಗಿಸಿ ಎಷ್ಟೆಂದು ಪ್ಲಾಸ್ಟಿಕ್ ಆಯಲಾದೀತು? ಅದಕ್ಕೆಂದೇ ಒಂದೊಳ್ಳೆ ಬಿದಿರಿನ ಕಡ್ಡಿಯನ್ನು ಅವಣಿಸಿಕೊಂಡು ಅದರ ಮೂತಿಯನ್ನು ಚೂಪಾಗಿಸಿದರೆ, ನಿಂತುಕೊಂಡೇ ಚುಚ್ಚಿ-ಚುಚ್ಚಿ ಪ್ಲಾಸ್ಟಿಕ್ಕನ್ನು ಆಯಬಹುದಿತ್ತು (ಎಲ್ಲಾದರೂ ಸ್ವಯಂ ಸೇವಕ ಕೆಲಸಕ್ಕೆ ಹೋದರೆ ನೀವೂ ಇದನ್ನು ಟ್ರೈ ಮಾಡಿ). ಬಿದಿರಿನ ತುದಿಯನ್ನು ಚೂಪಾಗಿಸುವ ಅದೇ ಮಹಾ ಕೆಲಸದಲ್ಲಿ ತೊಡಗಿದ್ದಾಗ ನಡೆದ ರಕ್ತಪಾತದ ಕಥೆ ಇದು. ಆದರೆ ಅಂದು ನನಗೆ ತಿಳಿಯದ ವಿಷಯವೆಂದರೆ, ಅಂದು ನಾನು ಆರಿಸಿದ ಪ್ಲಾಸ್ಟಿಕ್ಕಿಗೂ ನನ್ನಿಂದ ಹೊರಗೆ ಹರಿದ ರಕ್ತಕ್ಕೂ ಇರುವ ನಂಟು ಮುಂದೊಂದು ದಿನ ಹೀಗೆ ಸಂಶೋಧನೆಯೊಂದರ ಮೂಲಕ ಹೊರಬರುವುದೆಂದು…
ಅಚ್ಚಾ… ಏನಿರಬಹುದು ‘ಆ’ ನಂಟು ಎಂದು ತಲೆಯೊಳಗಿನ ನರಕೋಶಗಳು ಹುಡುಕಲು ಹೋಗಿ ಒತ್ತಡಕ್ಕೆ ಒಳಗಾಗುತ್ತಿವೆಯೇ? ಬೇಡವೆಂದು ಹೇಳಿ, ನಾನೆ ಹೇಳಿಬಿಡುತ್ತೇನೆ. ಸಾಮಾನ್ಯವಾಗಿ ಊಟ ಮಾಡುವಾಗ ಕಲ್ಲು ಅಥವಾ ಕೂದಲು ಸಿಕ್ಕಿರುತ್ತದೆ. ಎಂದಾದರು ನೀವು ಊಟ ಮಾಡುತ್ತಿದ್ದ ತಟ್ಟೆಯಲ್ಲಿ ಪ್ಲಾಸ್ಟಿಕ್ ದೊರೆತಿದೆಯಾ? ಸಿಕ್ಕಿದ್ದರೂ ಸಿಕ್ಕಿರಬಹುದು, ಆಶ್ಚರ್ಯವಿಲ್ಲ. ಅಂತಹ ಸಮಯದಲ್ಲಿ ಅದನ್ನು ಹಲ್ಲುಗಳೇ ಗುರುತಿಸಿ ಹೊರಗೆ ದೂಡಿರುತ್ತವೆ ಅಲ್ಲವೇ. ಆದರೆ ಇದು ನಮ್ಮ ಕಣ್ಣಿಗೆ ಗೋಚರಿಸುವ ಗಾತ್ರದ ಪ್ಲಾಸ್ಟಿಕ್ ನ ಕಥೆ. ನಮ್ಮ ಕಣ್ಣಿಗೇ ಕಾಣದ, ಸೂಕ್ಷ್ಮ ಗಾತ್ರದ ಪ್ಲಾಸ್ಟಿಕ್ ಅದೇ ತಟ್ಟೆಯಲ್ಲಿ ಇದ್ದಿರಬಹುದಲ್ಲವೇ, ಅಥವಾ ಅಂತಹ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ನಮ್ಮ ಉಸಿರಾಟ ಕ್ರಿಯೆಯ ಭಾಗವಾಗಿ ಶ್ವಾಸಕೋಶ ಸೇರಿರಬಹುದಲ್ಲವೇ. ಇಂತಹ ಆಲೋಚನೆಗಳು ಈ ಹಿಂದೆಯೇ ಬಂದಿವೆಯಾದರೂ ಎಲ್ಲೂ ಯಾವ ಸಂಶೋಧನೆಯೂ ನಮ್ಮ ದೇಹದಲ್ಲಿ ಇಂತಹ ಭಾಗದಲ್ಲಿ ಪ್ಲಾಸ್ಟಿಕ್ ಇದೆ ಎಂದು ಹೇಳಿಲ್ಲ. ಆದರೆ ಕಳೆದ ವರ್ಷದಲ್ಲಿ ಪ್ರಕಟವಾದ ಒಂದು ಸಂಶೋಧನಾ ಲೇಖನದ ಪ್ರಕಾರ ನಮ್ಮ ದೇಹದ ಒಳಗೆ ಪ್ಲಾಸ್ಟಿಕ್ ಹೋಗುವುದಿರಲಿ, ಸೀದಾ ನಮ್ಮ ರಕ್ತಕ್ಕೇ ನುಸುಳಿವೆಯಂತೆ! ನೋಡಿದಿರಾ ನಮ್ಮ ಊಹೆಗೂ ಮೀರಿದ ವೇಗದಲ್ಲಿ ಪ್ಲಾಸ್ಟಿಕ್ ನ ಓಟ ಮುಂದುವರೆದು ನಮ್ಮ ರಕ್ತಸಂಬಂಧಿಯಾಗಿಹೋಗುತ್ತಿದೆ. ಆದರೆ ಇಂತಹ ರಕ್ತಸಂಬಂಧದಿಂದ ನಮ್ಮ ದೇಹದಲ್ಲಾಗುವ ಕೆಡಕುಗಳ ಅರಿವಿದೆಯೇನು? ವೈಜ್ಞಾನಿಕವಾಗೇ ಹೇಳುವುದಾದರೆ ಇಂತಹ ಪ್ಲಾಸ್ಟಿಕ್ ನಿಂದ ದೇಹದ ವಿವಿಧ ಭಾಗಗಳಲ್ಲಿ ಊತಗಳು ಉಂಟಾಗಬಹುದು, ಜೊತೆಗೆ ಅವುಗಳು ಹೊತ್ತೊಯ್ಯುವ ವಿಷಕಾರಿ ರಾಸಾಯನಿಕಗಳಿಂದ ನಮ್ಮ ದೇಹದ ಹಾರ್ಮೋನ್ ಮತ್ತು ಸಂತಾನೋತ್ಪತ್ತಿ ಕಾಯಕದ ಅಂಗಾಂಗಗಳಿಗೆ ತೊಡಕನ್ನು ಉಂಟುಮಾಡಬಹುದು. ಈಗಾಗಲೇ ಹೀಗೆ ಆಗಿರುವುದನ್ನು ಪ್ರಾಣಿಗಳಲ್ಲಿ ವಿಜ್ಞಾನಿಗಳು ಅಭ್ಯಸಿಸಿದ್ದಾರೆ.
ಅದು ಹಾಗಿರಲಿ, ನಮ್ಮ ದೇಹದಲ್ಲಿ ಅಂತಹ ಸೂಕ್ಷ್ಮ ಪ್ಲಾಸ್ಟಿಕ್ ನುಸುಳಿದೆ ಎಂದು ಹೇಗೆ ಕಂಡುಕೊಂಡರು ಎಂಬುದೇ ಪ್ರಶ್ನೆ. ಅದಕ್ಕಾಗಿ ಈ ಸಂಶೋಧನೆಯ ಕಾರ್ಯವಿಧಾನದ ಕಡೆ ನಮ್ಮ ದೃಷ್ಟಿ ಹರಿಸಬೇಕು. ಇಂತಹ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳನ್ನು ಗುರುತಿಸುವುದು, ರಕ್ತದ ಮಾದರಿಯನ್ನು ತೆಗೆದುಕೊಂಡು ಸೂಕ್ಷ್ಮದರ್ಶಕದಲ್ಲಿ ನೋಡೀ ಎಣಿಸುವಷ್ಟು ಸುಲಭವಲ್ಲ. ಅದಕ್ಕೆ ಕೆಲವು ರಾಸಾಯನಿಕ ಕಾರ್ಯವಿಧಾನಗಳನ್ನು ಬಳಸಬೇಕಾಗುತ್ತದೆ. ಅದಕ್ಕೆಂದು ಸಂಶೋಧನಾ ತಂಡ ಮೊದಲಿಗೆ 22 ವಯಸ್ಕರ ರಕ್ತದ ಮಾದರಿಯನ್ನು ತೆಗೆದುಕೊಂಡರು. ನಂತರ ಅದರಲ್ಲಿನ ದೊಡ್ಡ ದೊಡ್ಡ ರಕ್ತ ಜೀವಕೋಶಗಳನ್ನು ತೆಗೆದು ಹಾಕಿದರು. ಈಗ ಉಳಿದದ್ದು ಒಂದು ಬಗೆಯ ದ್ರವ ಮಾತ್ರ. ಆ ದ್ರವದಿಂದ 700 ನ್ಯಾನೋಮೀಟರ್ (0.000003 ಇಂಚು) ನಷ್ಟು ಸಣ್ಣ (ಮನುಷ್ಯನ ಕೂದಲಿನ ದಪ್ಪಕ್ಕೆ ಹೋಲಿಸಿದರೆ ಅದಕ್ಕಿಂತ 100 ಪಟ್ಟು ಸಣ್ಣದ್ದು) ಗಾತ್ರದ ವಸ್ತುಗಳನ್ನು ಬೇರ್ಪಡಿಸಿದರು. ಇದಾದ ನಂತರ ಪ್ಲಾಸ್ಟಿಕ್ ಮಾಡಲು ಬಳಸುವ 5 ವಸ್ತುಗಳು (ಪಾಲಿಮರುಗಳು) ದೊರೆಯುತ್ತವೆಯೇ ಎಂದು ಹುಡುಕಾಟ ಶುರುಮಾಡಿದರು. ಅವರ ಅಚ್ಚರಿಗೆ, 22 ಮಾದರಿಗಳಲ್ಲಿ 17 ಮಾದರಿಯಲ್ಲಿ ಪಾಲಿಮರುಗಳು ಸಿಕ್ಕಿದ್ದು, 4ರಲ್ಲಿ ಅಂತಹ ಪಾಲಿಮರುಗಳು ಗಣನೀಯ ಪ್ರಮಾಣದಲ್ಲಿ ದೊರೆತವಂತೆ. ಅಂದರೆ ಅವರು ಪ್ರಯೋಗಕ್ಕೆ ಎಂದು ತೆಗೆದುಕೊಂಡ ಮಾದರಿಯಲ್ಲಿನ ಮುಕ್ಕಾಲು ಭಾಗ ಅಂದರೆ 75% ಮಾದರಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳಿದ್ದವು. ಇನ್ನೂ ನಿಖರವಾಗಿ ಹೇಳುವುದಾದರೆ, ಶಾಪಿಂಗ್ ಬ್ಯಾಗ್, ಲ್ಯಾಮಿನೇಷನ್, ಬಾಟಲಿಗಳಲ್ಲಿ ಸಾಮಾನ್ಯವಾಗಿ ಬಳಸುವ ‘ಪಾಲಿ ಇಥಲೀನ್’ ಎಂಬ ವಸ್ತು ದೊರೆತಿದೆ. ಅಲ್ಲದೇ ಬಟ್ಟೆ ಮತ್ತು ನೀರಿನ ಬಾಟಲಿಗಳನ್ನು ಮಾಡಲು ಬಳಸುವ ‘ಪಾಲಿ ಇಥಲೀನ್ ಟ್ರಾಪ್ತಲೇಟ್’ ಎಂಬ ವಸ್ತುವೂ ದೊರಕಿದೆ. ಇಷ್ಟೇ ಎಂದುಕೊಂಡೀರ? ಬಾಚಣಿಕೆ, ಪ್ಲಾಸ್ಟಿಕ್ ಚಮಚ, ಕಂಪ್ಯೂಟರ್ ಕೇಸ್ ಗಳಲ್ಲಿ ದೊರಕುವ ‘ಪಾಲಿಸ್ಟರೀನ್’ ಕೂಡಾ ದೊರಕಿದೆ.
ನೋಡಿದಿರಾ. . . ಎಲ್ಲೆಲ್ಲೂ ಪ್ಲಾಸ್ಟಿಕ್. ನಮ್ಮ ರಕ್ತದ ಕಣ ಕಣದಲ್ಲೂ ಪ್ಲಾಸ್ಟಿಕ್ ಹೊಕ್ಕಿದೆ. ಇದು ನಾವು ಒಪ್ಪಲೇಬೇಕಾದ ವಾಸ್ತವ. ಆದರೆ ನಮ್ಮ ಮುಂದಿರುವ ನಿಜವಾದ ಚಾಲೆಂಜ್ ಅದಲ್ಲ. ರಕ್ತಗತವಾದ ಈ ಪ್ಲಾಸ್ಟಿಕ್ ನಿಂದ ನಮ್ಮ ದೇಹದ ಮೇಲಾಗುವ ನಿರ್ದಿಷ್ಟ ಪರಿಣಾಮಗಳಾದರೂ ಏನು? ಎಂಬುದಕ್ಕೆ ಉತ್ತರ ಬೀಗ ಹಾಕಿದ ಅಜ್ಞಾನದ ಖಜಾನೆಯಲ್ಲಿ ಭದ್ರವಾಗಿ ಅಡಗಿದೆ. ಅದನ್ನು ಅರಿಯಲು ಬೇಕಾದ ಜ್ಞಾನದ ಕೀಲಿ ನಮ್ಮ ಕೈಗಿನ್ನೂ ಸಿಕ್ಕಿಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು. ನನ್ನ ಪ್ರಕಾರ ಮುಂದೊಂದು ದೌರ್ಭಾಗ್ಯ ದಿನದಂದು ಅದರ ಪರಿಣಾಮಗಳು ನಮ್ಮ ಕಣ್ಣ ಮುಂದೆ ಬಂದೇ ಬರುತ್ತದೆ. ಆದರೆ ಬುದ್ಧಿವಂತ ಜೀವಿಗಳೆಂದು ಸ್ವ-ಬಿರಿದು ಮುಡಿಗೇರಿಸಿ ಬೀಗುವ ನಾವು ನಮ್ಮನ್ನೇ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು, “ಆ ದುರ್ದಿನ ಬರುವವರೆಗೂ ಕಾಯಬೇಕೆ ಅಥವಾ ಈಗಾಗಲೇ ದೊರಕಿರುವ ಸೂಚನೆಯನ್ನು ಅರಿತು ಪ್ಲಾಸ್ಟಿಕ್ ಮಾಯೆ/ಮಯ ಜೀವನ ಶೈಲಿಯನ್ನು ಆದಷ್ಟು ಬೇಗ ಬದಲಾಯಿಸಬೇಕೆ?”
ಮೂಲ ಲೇಖನ: www.snexplores.org
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು ನಗರ ಜಿಲ್ಲೆ
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.