ಸಾವಿಲ್ಲದ ಜೀವಗಳು

ಸಾವಿಲ್ಲದ ಜೀವಗಳು

© ಜೈಕುಮಾರ್ ಆರ್.

ಇನ್ನೇನಾದರೂ ಪ್ರಶ್ನೆಗಳಿವೆಯೇ? ಇದ್ದಲ್ಲಿ ಕೇಳಿ. ಯಾಕಂದ್ರೆ ಚೆನ್ನಾಗಿ ಯೋಚಿಸಬಲ್ಲವರೇ ಒಳ್ಳೆ ಒಳ್ಳೆ ಪ್ರಶ್ನೆಗಳನ್ನು ಕೇಳಬಲ್ಲರು. ಎಂಬ ನನ್ನ ಮಾತಿಗೆ ಕಾಯುತ್ತಿದ್ದವರಂತೆ 9ನೇ‌ ತರಗತಿಯಲ್ಲಿ ಒಬ್ಬ ನಿಂತು, ‘ಸಾರ್ ಕಟ್ ಮಾಡಿದ್ರೂ ಸಾಯ್ದೇ, ಎರಡು ಜೀವಿ ಆಗೋ ಜೀವಿ ಯಾವ್ದು ಸಾರ್?’ ಎಂದುಬಿಟ್ಟ. ಒಮ್ಮೆಲೆ ಇಂಥಾ ಅನಿರೀಕ್ಷಿತ ಪ್ರಶ್ನೆ ಕೇಳಿದ್ದರಿಂದ ತಕ್ಷಣ ನಾನೂ ಉತ್ತರಿಸದನಾದೆ. ನಿಜ ಹೇಳಬೇಕೆಂದರೆ ಉತ್ತರವೂ ತಿಳಿದಿರಲಿಲ್ಲ. ಎಲ್ಲೋ ಒಂದು ಕಡೆ ಎರೆಹುಳು ಇವನ ಪ್ರಶ್ನೆಗೆ ಉತ್ತರ ಎನಿಸಿದರೂ ನಿಖರವಾಗಿ ತಿಳಿಯದೆ ವಿಷಯಗಳನ್ನು ವರ್ಗಾಯಿಸಬಾರದೆಂಬ ಆಲೋಚನೆ ಮೂಡಿತು. ಅಷ್ಟರಲ್ಲಿ ಅವನ ಪ್ರಶ್ನೆಗೆ ಉತ್ತರಿಸಲು ಕಾತುರದಿಂದ ಕಾಯುತ್ತಿದ್ದ ಸಹಪಾಠಿ ಮೆದುಳೊಂದು ಎದ್ದು ‘ಎರೆಹುಳ ‘ಎಂದೂ ಹೇಳಿಬಿಟ್ಟಿದ್ದ. ತಕ್ಷಣವೇ ಇವನು ನನ್ನನ್ನು ಇರಿಕಿಸಿದ್ದ, ಈ ಸಂದರ್ಭದಿಂದ ಪಾರಾಗುವ ಸೂಕ್ತ ಉಪಾಯವೆಂಬ ಹಣ್ಣೊಂದನ್ನು ತಲೆಯೊಳಗಿನ ಆಲೋಚನಾ ಮರದಲ್ಲಿ ಹುಡುಕಿದೆ, ದೊರಕಿತು. ಅದನ್ನೇ‌ ಅವನಿಗೆ ಹೀಗೆ ಎಸೆದೆ, ‘ನೋಡೋ ಗುಂಡ ಎರೆಹುಳ ಕತ್ತರಿಸಿದರೆ ಸಾಯುತ್ತದೆಯೋ ಅಥವಾ ಎರೆಡು ಜೀವಿಯಾಗಿ ಬದುಕುತ್ತದೆಯೋ?’ ಎಂದು ಪ್ರಶ್ನಿಸಿದೆ. ಒಂದಷ್ಟು ವಿದ್ಯಾರ್ಥಿಗಳು ಇದಕ್ಕೆ ಹೌದು ಎಂದು ಉತ್ತರಿಸಿದರೂ, ಇನ್ನೊಂದಷ್ಟು ಜನ ಇಲ್ಲಾಎಂದು ರಾಗ ಎಳೆದರು. ಅಷ್ಟು ಸಾಕಾಗಿತ್ತು. ಅವನಿಗೆ ಇದು ಇರಬಹುದೋ-ಇಲ್ಲವೇ ಎಂದು ತಿಳಿದುಕೊಂಡು ಹೇಳಿದೆ. ಅವನೂ ಸರಿ ಎಂದು ಒಪ್ಪಿದ. ಇದೆಲ್ಲಾ ತರಗತಿಯ ಒಂದು ಭಾಗವಾದರೆ, ಆ ತರಹದ ಜೀವಿ ಇರಬಹುದೇ? ಇದ್ದರೆ ಅಂತಹ ಜೀವಿಗೆ ಸಾವೇ ಇಲ್ಲವೇ? ನಮ್ಮ ಪುರಾಣಗಳಲ್ಲಿ ರಕ್ತ ಬೀಜಾಸುರನ ಹಾಗೆ ಜೀವಿಗಳು ನಿಜ ಜಗತ್ತಿನಲ್ಲಿ ಇರಲು ಸಾಧ್ಯವೇ? ಎಂಬ ಪ್ರಶ್ನಾವಾಹನಗಳು ತಲೆಯೊಳಗಿನ ಆಲೋಚನಾನಗರದಲ್ಲಿ ರಸ್ತೆಯ ನಿಯಮ ಪಾಲಿಸದೇ ಡಿಕ್ಕಿ ಹೊಡೆಯುತ್ತಿದ್ದವು.

ಇಂತಹ ಸಮಯದಲ್ಲೇ‌ ಕಾನನದ ವಿ ವಿ ಅಂಕಣ ಬರೆಯಲು ಸೂಕ್ತ ವೈಜ್ಞಾನಿಕ ಲೇಖನ ಹುಡುಕುವಾಗ ಒಂದು ಲೇಖನ ದೊರಕಿತು. ಅದರಲ್ಲಿ ಹಂದಿಯೊಂದು ಸತ್ತು ಒಂದು ತಾಸು ಕಳೆದ ನಂತರ ಕೃತಕ ವೈಜ್ಞಾನಿಕ ವಿಧಾನದಿಂದ ಅದರಲ್ಲಿನ ಜೀವಕೋಶಗಳನ್ನು ಮತ್ತೆ ಬದುಕಿಸಿದರಂತೆ. ಅಂದರೆ ನಿರ್ಜೀವಕೋಶಗಳಲ್ಲಿ ಜೀವ ಕೃತಕವಾಗಿ ಮರುಕಳಿಸಿದರಂತೆ. ಕಣ್ಣು ಮಿಟುಕಿಸುವ ವಿಷಯದಂತೆ ಕಂಡರೂ ಇದು ಸತ್ಯ-ಸಾಧ್ಯ ಎನ್ನುತ್ತಾರೆ ಇದರಲ್ಲಿ ಪಾಲ್ಗೊಂಡ ಸಂಶೋಧನಾ ತಂಡ. ಅವರ ಮಾತಿನಲ್ಲಿ ಹೇಳುವುದಾದರೆ, ಒಂದು ಜೀವಕೋಶ ಬದುಕಲು ಬೇಕಾದ ಆಮ್ಲಜನಕ, ಪೋಷಕಾಂಶಗಳು ಮತ್ತು ಔಷಧಿಗಳನ್ನು ಕೃತಕವಾಗಿ ಸಣ್ಣ ಪ್ರಮಾಣದ ಪಂಪ್, ಸಂವೇದಕಗಳು ಮತ್ತು ಕೃತಕ ದ್ರವಗಳ ಮೂಲಕ ಕೊಟ್ಟಿದ್ದರಿಂದ ಆ ಜೀವಕೋಶಗಳು ಮತ್ತೆ ಜೀವ ತಳೆದವು ಎಂಬುದು ಸಂಶೋಧನೆಯ ಸಾರ.

© cc_Jet

ಮೊದಲಿಗೆ ಈ ಪ್ರಯೋಗವನ್ನು ಮೆದುಳಿನ ಜೀವಕೋಶಗಳ ಮೇಲೆ ಮಾಡಿ, ಆಮ್ಲಜನಕದ ಸರಬರಾಜು ನಿಂತ ಮೆದುಳಿನ ಜೀವಕೋಶಗಳನ್ನು ಬದುಕಿಸಿ ಅದಕ್ಕೆ BrainEx ಎಂದು ನಾಮಕರಣ ಮಾಡಿದ್ದರು. ಇದನ್ನೇ‌ ಬೇರೆ ಬೇರೆ ಅಂಗಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾದರು. ಅದಕ್ಕೆ OraganEx ಎಂದು ನಾಮಕರಣ ಮಾಡಿದರು. ಈ ಸಂಶೋಧನೆಯಲ್ಲಿ OraganExನ ಕೆಲಸವೇನೆಂದರೆ, ಸತ್ತ ಜೀವಿಯ ಶ್ವಾಸಕೋಶ ಮತ್ತು ಹೃದಯದ ಕೆಲಸವನ್ನು ಕೃತಕವಾಗಿ ಮಾಡುವುದು. ಇದಕ್ಕೆ ಅದೇ ಜೀವಿಯ ರಕ್ತವನ್ನು ಮತ್ತು ಆಮ್ಲಜನಕ, ಪೋಷಕಾಂಶ, ರಕ್ತಹೆಪ್ಪುಗಟ್ಟದಿರದ ಹಾಗೆ ನೋಡಿಕೊಳ್ಳುವ ಒಂದು ದ್ರವವನ್ನು ತಯಾರಿಸಿ 1:1 ಅನುಪಾತದಲ್ಲಿ ಬೆರೆಸಿ ಅದನ್ನು ಸತ್ತ ಜೀವಕೋಶಕ್ಕೆ ಕಳುಹಿಸಲಾಯಿತು. ಇದರ ಪರಿಣಾಮ ಜೀವಕೋಶಗಳು ತಮ್ಮ ಕೆಲಸಗಳನ್ನು ಮತ್ತೆ ಪುನರ್ ಪ್ರಾರಂಭಿಸಿದವು.

ECMO (extracorporeal membrane oxygenation) ಎಂಬ ವಿಧಾನ ಸರಿಸುಮಾರು ಇದೇ ಕೆಲಸವನ್ನು ಮಾಡುತ್ತದಾದರೂ, OrganEx ಇದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಏಕೆಂದರೆ EMCOಕ್ಕಿಂತ OrganEx ವಿಧಾನದಲ್ಲಿ ಹೆಚ್ಚು ಜೀವಕೋಶಗಳು ಬದುಕಿದವು. ಅಷ್ಟೇ ಅಲ್ಲ ಹಾನಿಗೊಳಗಾದ ಜೀವಕೋಶಗಳು ಸ್ವತಃ ತಾವೇ ಸರಿಪಡಿಸಿಕೊಳ್ಳುತ್ತಿದ್ದವು. ಇದು ಗಮನಾರ್ಹ ಮತ್ತು ಅಚ್ಚರಿಯ ಬದಲಾವಣೆಯಾಗಿತ್ತು.

© DAVID ANDRIJEVIC, ZVONIMIR VRSELJA, TARAS LYSYY, SHUPEI ZHANG_SESTAN LABORATORY_YALE SCHOOL OF MEDICINE

ಹೀಗೆ ಮಾಡುವುದರಿಂದ ಸತ್ತ ಒಂದು ಜೀವಿಯನ್ನೇ‌ ಬದುಕಿಸಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿದ್ದರೆ, ನೀವಿನ್ನು ಕಥೆಯಲ್ಲೇ ಇದ್ದೀರೆಂದಾಯಿತು. ಆದರೆ ಅದಕ್ಕೆ ಉತ್ತರ ಸಧ್ಯಕ್ಕೆ ಇಲ್ಲ, ಎಂದೇ ಹೇಳಬೇಕಾಗುತ್ತದೆ. ಜೀವಿ ಸತ್ತ ನಂತರ ಅಂಗಾಂಗಗಳೂ ಸಹ ಬೇಗ ಸಾಯುತ್ತವೆ. ಆದರೆ ಈ ಹೊಸ ವಿಧಾನದಿಂದ ಸತ್ತ ಜೀವಿಯ ದೇಹದಿಂದ ಅಂತಹ ಅಂಗಾಂಗಳನ್ನು ಹೊರತೆಗೆದು ಇನ್ನೊಬ್ಬರಿಗೆ ಅಂಗಾಂಗ ಕಸಿ ಮಾಡುವವರೆಗೆ ಜೀವಂತವಾಗಿ ಉಳಿಸುವಲ್ಲಿ ಖಚಿತವಾಗಿ ಉಪಯೋಗವಾಗುತ್ತದೆ. ಇಷ್ಟು ಯಶಸ್ವಿ ತಂತ್ರಜ್ಞಾನ ಇಲ್ಲಿಯವರೆಗೆ ಎಲ್ಲೂ ಬಾರದ ಕಾರಣ ಈ ಸಂಶೋಧನೆಯಿಂದ ಉಳಿಯಬಹುದಾದ ಜೀವಗಳ ಸಂಖ್ಯೆ ಏರಿಕೆಯಾಗುತ್ತದೆ.

ಈ ಸಂಶೋಧನೆಯ ಪರಿಣಾಮವಾಗಿ ವಿಜ್ಞಾನ ಒಂದು ಮೆಟ್ಟಿಲು ಏರಬಹುದೇನೋ, ಆದರೆ ಅದೇ ವಿ-ಜ್ಞಾನಕ್ಕೆ ಮೌಲ್ಯ ಸಹಭಾಗಿಯಾಗದಿದ್ದರೆ, ಜ್ಞಾನದ ಹರಿತ ನಮ್ಮನ್ನೇ ಕತ್ತರಿಸೀತು.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.