ಸಮುದ್ರದಾಳದಿಂದ ಹಿಮಾಲಯದೆತ್ತರಕ್ಕೂ

ಸಮುದ್ರದಾಳದಿಂದ ಹಿಮಾಲಯದೆತ್ತರಕ್ಕೂ

ರಾಮ ದೇವರ ಬೆಟ್ಟ ದೂರದಿಂದ ರಾಮನ ಮೊಗದಂತೆ ಶಾಂತವಾಗಿ ಕಂಡರೂ, ಅದರ ತುದಿಗೆ ಹತ್ತಲು ಹನುಮನ ಶಕ್ತಿ ಮತ್ತು ಧೈರ್ಯ ಬೇಕು. ಚಾರಣಿಗರಿಗೆ ಇದು ಸುಲಭವಿರಬಹುದು. ಆದರೆ ವಾರವೆಲ್ಲಾ ಅಥವಾ ಕೆಲವೊಮ್ಮೆ ತಿಂಗಳೆಲ್ಲಾ ಕೂತು ಕೆಲಸ ಮಾಡುವವರಿಗೆ ಹೀಗೆ ಅಪರೂಪದ ಚಾರಣ ಸಣ್ಣದಾದರೂ, ಆಯಾಸದಾಯಕವಾಗಿರುತ್ತದೆ. ವಿಶೇಷವಾಗಿ ರಾಮನಗರದ ಆ ಬಿಸಿಲು ಆಯಾಸ ಕಾರ್ಯಕ್ಕೆ ಪುಷ್ಠಿ ನೀಡುತ್ತದೆ. ರಾಮದೇವರ ಕೊನೆಯ ಬಂಡೆಯಲ್ಲಂತೂ ಆ ಕಬ್ಬಿಣದ ಹಿಡಿಕೆ ಮತ್ತು ಮೆಟ್ಟಿಲುಗಳಿಲ್ಲದಿದ್ದರೆ, ನನ್ನ ಹಾಗೆ ಸ್ವಲ್ಪ ಹೆದರಿಕೆ ಇರುವ ವ್ಯಕ್ತಿಗಳಿಗೆ ಅದನ್ನು ಹತ್ತುವುದು ಅಸಾಧ್ಯಕ್ಕೆ ಹತ್ತಿರದ ಮಾತಾಗುತ್ತಿತ್ತು. ಹೇಗೋ ಕಷ್ಟಪಟ್ಟು ಮೇಲೆ ತಲುಪಿದಾಗ ನನಗೆ ಕಂಡದ್ದು, ಪೂರ್ವದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಾದರೆ, ದಕ್ಷಿಣಕ್ಕೆ ಬಿದಿರು ಕಾಡಿನ ಮಧ್ಯೆ ತಲೆ ಎತ್ತಿ ನಿಂತಿರುವ ಬಂಡೆಗಳು. ಪಶ್ಚಿಮಕ್ಕೆ ತೆಂಗಿನ ತೋಟಸಹಿತ ಮನೆಗಳು, ಹೀಗೆ ಎತ್ತ ನೋಡಿದರೂ ವೈವಿಧ್ಯ ಭೂಪ್ರದೇಶಗಳು. ಇವೆಲ್ಲವನ್ನು ಸವಿದು ಹತ್ತುವಾಗ ಮಾಡಿದ ಸಾಹಸವನ್ನೇ ಅನುಸರಿಸಿ ಒಂದೊಂದೇ ಹೆಜ್ಜೆಯನ್ನು ಎಣಿಸಿ ಎಣಿಸಿ ಇಡುವಂತೆ ಇಟ್ಟು ಇಳಿದು ಬರುತ್ತಿದ್ದೆ. ಬರುವ ದಾರಿಯಲ್ಲಿ ಕಂಡ ಸಹ್ಯಾದ್ರಿ ಚಿಟ್ಟೆ (ಹಕ್ಕಿರೆಕ್ಕೆ / Birdwing) ಕಣ್ಣಿನ ನೇರಕ್ಕೆ ಸಿಕ್ಕಿತು. ಮೊದಲಬಾರಿಗೆ ಆ ಚಿಟ್ಟೆ ಮಕರಂದ ಸವಿಯುವುದನ್ನು ಕಣ್ಣಾರೆ ಕೆಲವು ನಿಮಿಷಗಳವರೆಗೆ ನೋಡಿದ್ದು ಬಹಳ ಖುಷಿಯುಣಿಸಿತು. ಹಾಗೇ ಮುಂದೆ ಇಳಿದು ಬರುತ್ತಾ ನನ್ನ ಗಮನವನ್ನು ಚಿಟ್ಟೆಗಳ ಮೇಲೆ ಹರಿಸುತ್ತಿರುವಾಗ ನಾವಿಕ ಚಿಟ್ಟೆ (Common sailor) ಕುಣಿದು ಕುಪ್ಪಳಿಸುವ ಹಾಗೆ ರೆಕ್ಕೆ ಬಡಿಯುತ್ತಾ ಎಲೆಯ ಮೇಲೆ ಕುಳಿತುಕೊಂಡಿತು. ಇನ್ನೇನು ಅದರ ಬಳಿಹೋಗಿ ಫೋಟೋ ಕ್ಲಿಕ್ಕಿಸುವಷ್ಟರಲ್ಲಿ ಮತ್ತೆ ಹಾರಿ ಕುಣಿಯುತ್ತಾ ಮತ್ತೊಂದು ಎಲೆಯ ಮೇಲೆ ಕುಳಿತುಕೊಂಡಿತು. ಈ ಬಾರಿ ಕಾದು ನೋಡೋಣ ಎಂದು ಹಾಗೆ ನಿಂತೆ. ಅಲ್ಲಿಂದಲೂ ಅದು ಕೆಲವೇ ಸೆಕೆಂಡುಗಳಲ್ಲಿ ಮತ್ತೆ ಹಾರಿ ನನ್ನೆಡೆಗೇ ಬಂದು, ತಲೆಯ ಮೇಲಿನಿಂದ ನನ್ನ ಪಕ್ಕದಲ್ಲೇ ಇದ್ದ ಕಿತ್ತಳೆ ಬಣ್ಣದ ಬಿಸ್ಕೆಟ್ ಕವರ್ ನ ಮೇಲೆ ಹೋಗಿ ಕುಳಿತುಕೊಂಡಿತು. ಅದು ಪ್ಲಾಸ್ಟಿಕ್ ಎಂದು ತಿಳಿಯದ ಅದು ಹೂವೆಂದು ಭಾವಿಸಿ ಎಲೆಗಳ ಮೇಲೆ ಇದ್ದ ಸಮಯಕ್ಕಿಂತ ಹೆಚ್ಚು ಸಮಯ ಆ ಪ್ಲಾಸ್ಟಿಕ್ ಮೇಲೆಯೇ ಇತ್ತು. ಬಹುಶಃ ಅಷ್ಟು ಸಮಯ ಇದ್ದಮೇಲೆ ಅದು ಹೂವಲ್ಲವೆಂದು ತಿಳಿದು ಮರಳಿ ತನ್ನ ಹಾರುವ ಕುಣಿತವನ್ನು ಮುಂದುವರೆಸಿತು.

ಇದೊಂದು ಸಾಮಾನ್ಯ ಹಾಗೂ ಸಣ್ಣ ಗಮನಿಕೆಯಾದರೂ ಇದರ ಒಳ ಅರ್ಥ ಬಹಳಷ್ಟಿದೆ. ಬಹುಪಯೋಗಿಯಾಗಿ ಬಂದ ಪ್ಲಾಸ್ಟಿಕ್, ಈಗ ಬಹುರೂಪಿ ಮಾರಕವಾಗಿ ಪರಿಗಣಿಸಿರುವುದು ನಾವೆಲ್ಲ ಕೇಳುತ್ತಲೇ ಇದ್ದೇವೆ. ಕೆಲವನ್ನು ನೋಡುತ್ತಲೂ ಇದ್ದೇವೆ. ಆದರೆ ಅದಕ್ಕಿಂತ ಹೆಚ್ಚು ಅಪಾಯಕಾರಿ ಸಂಗತಿ ಎಂದರೆ, ನಮ್ಮ ನಿತ್ಯ ಜೀವನದಲ್ಲಿ ಬಳಸುವ ಪ್ಲಾಸ್ಟಿಕ್ ನ ಪರಿಣಾಮವನ್ನೂ ಹಾಗೂ ಅದರಿಂದ ನಮ್ಮ ಸುತ್ತಲ ಜೀವಿಗಳಿಗೆ ಆಗುತ್ತಿರುವ ಉಪಟಳವನ್ನು ನೋಡಿಯೂ ನೋಡದ ಹಾಗೆ ಸುಮ್ಮನಿರುವುದು. ಜೊತೆಗೆ ಇವೆಲ್ಲಾ ತೊಂದರೆಗಳೇ ಅಲ್ಲ, ನಾವು ತಲೆಕೆಡಿಸಿಕೊಳ್ಳಬೇಕಿರುವ ಸಂಸಾರ ತಾಪತ್ರಯಗಳು ಎಷ್ಟೋ ಇವೆ ಎನ್ನುವವರಿಗೆ ಇವು ಹೇಳಿಯೂ ಪ್ರಯೋಜನವಿಲ್ಲ. ಆದರೆ ಚಾರಣ, ಪರ್ವತಾರೋಹಣಕ್ಕೆ ತೆರಳುವ ಮಹಾನುಭಾವರು ಮುಂಚೆಯಾದರೂ ಪ್ರಕೃತಿಯ ಬಗ್ಗೆ ಸ್ವಲ್ಪ ಜ್ಞಾನ, ಕಾಳಜಿಯಿಂದ ನಡೆದುಕೊಳ್ಳುತ್ತಿದ್ದರು. ಆದರೆ ಈಗಿನ ದಿನಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಓದಿಕೊಂಡಿರುವ ಚಾರಣಿಗರೇ ಅದನ್ನು ಕೇವಲ ಮನೋಲ್ಲಾಸ ಮತ್ತು ಮೋಜು ಮಸ್ತಿಗಾಗಿ ಮಾಡುತ್ತಿರುವುದು ವಿಷಾದನೀಯ. ಇದರ ಸ್ಪಷ್ಟ ಉದಾಹರಣೆಯಂತೆ ಇತ್ತೀಚೆಗೆ ನಡೆದ ಸಂಶೋಧನೆ, ಪ್ರಪಂಚದ ಅತೀ ಎತ್ತರದ ಪರ್ವತ ಶ್ರೇಣಿಗಳಾದ ಹಿಮಾಲಯದ ಎತ್ತರ ಪರ್ವತ ಪ್ರದೇಶಲ್ಲಿ ಇದ್ದ ಪ್ಲಾಸ್ಟಿಕ್ಕನ್ನು ಹೊರಗೆಳೆದು ತೋರಿಸುತ್ತಿದೆ.

ಸಮುದ್ರ ಲೆಕ್ಕವಿಲ್ಲದಷ್ಟು ಜೀವರಾಶಿಯನ್ನಲ್ಲದೇ, ಲೆಕ್ಕವಿಲ್ಲದಷ್ಟು ಪ್ಲಾಸ್ಟಿಕ್ ಅನ್ನೂ ಸಹ ತನ್ನ ಮಡಿಲಲ್ಲಿ ಇರಿಸಿದೆ. ಎಷ್ಟೆಂದರೆ ನಮ್ಮ ಭೂಮಿಯಲ್ಲಿ 1950ರಲ್ಲೇ 500,00,00,000 (500 ಕೋಟಿ) ಕೆ.ಜಿ. ಪ್ಲಾಸ್ಟಿಕ್ ಅನ್ನು ನಾವು ಬಳಸುತ್ತಿದ್ದೆವು. 2020ನ್ನು ತಲುಪುವಷ್ಟರಲ್ಲಿ 33000,00,00,000 (33,000 ಕೋಟಿ) ಕೆ.ಜಿ. ಪ್ಲಾಸ್ಟಿಕ್ ಅನ್ನು ನಾವು ಬಳಸುತ್ತಿದ್ದೇವೆ. ಇಷ್ಟು ಪ್ಲಾಸ್ಟಿಕ್ ಗಳಲ್ಲಿ ಬಹು ಭಾಗ ಸಮುದ್ರವನ್ನೇ ಸೇರುವುದು. ಅಲ್ಲಿ ಕೊಳೆಯದ ಈ ಚಿರಾಯು, ಬಿಸಿಲು, ಗಾಳಿ, ಅಲೆಗಳಿಂದ ಸಣ್ಣ ಸಣ್ಣ ಕಣಗಳಾಗಿ ಪುಡಿಯಾಗುತ್ತವೆ. ಇವುಗಳನ್ನು ಆಹಾರವಾಗಿ ಭ್ರಮಿಸಿ ತಿನ್ನುವ ಜಲಚರಗಳು, ಅದರಿಂದ ಹೊರಬರುವ ವಿಷ ಪದಾರ್ಥಗಳನ್ನು ಸೇವಿಸುವ ನೀರಲ್ಲಿ ನೀರಾಗಿಹೋಗುತ್ತವೆ. ವಿಶೇಷವಾಗಿ 5 ಎಮ್. ಎಮ್. ಕ್ಕಿಂತ ಕಡಿಮೆ ಇರುವ ಪ್ಲಾಸ್ಟಿಕ್ಗಳು ಮೀನುಗಳ ಕಿವಿರುಗಳಲ್ಲಿ ಸಿಲುಕಿ ಕೊಲ್ಲುತ್ತವೆ. ಹೀಗೆ ಒಮ್ಮೆ ಬಳಸಿ ತೊಲಗಿಸಿದ ಪ್ಲಾಸ್ಟಿಕ್ ನಿಂದ ಅದೆಷ್ಟೋ ಅಮಾಯಕ ಜೀವಿಗಳು ಬೆಲೆ ತೆರಬೇಕಾಗಿದೆ. ಇವುಗಳ ಅಸ್ಥಿತ್ವ ಎಲ್ಲೆಲ್ಲಿದೆ ಎಂದರೆ ಪ್ರಪಂಚದ ಮೂಲೆ ಮೂಲೆಯಲ್ಲಿ, ಸಮುದ್ರದಾಳದಿಂದ ಹಿಡಿದು ಹಿಮಾಲಯಪರ್ವತದ ಎತ್ತರದವರೆಗೂ ಹಬ್ಬಿದೆ. ಅವುಗಳಲ್ಲಿ ಕೆಲವನ್ನು ಹೇಳುವುದಾದರೆ…

ಪ್ಲಾಸ್ಟಿಕ್ ನ ಆಳದ ಸ್ಕೂಬಾ ಡೈವ್… (ಸಮುದ್ರದಾಳದಲ್ಲಿ)

©  A.J. JAMIESON ET AL_ROY SOC OPEN SOCIETY 2019

ಸಮುದ್ರಲ್ಲಿ ತೇಲುವ ‘ದಿ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್’ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಸಮುದ್ರ ಮೇಲೆ ತೇಲುವ ಈ ಜೈರ್ ಗಳು ಕೇವಲ ತೇಲುತ್ತಿರುವ ಹಿಮಪರ್ವತದ ತುದಿ ಮಾತ್ರ. 2019ರಲ್ಲಿ ಸಂಗ್ರಹಿಸಿದ 90 ಕಠಿಣಚರ್ಮಿಗಳಲ್ಲಿ(crustaceans) 65 ಜೀವಿಗಳಲ್ಲಿ ‘ಮೈಕ್ರೋಪ್ಲಾಸ್ಟಿಕ್’ಗಳು ಸಿಕ್ಕೆವೆ. ಅಷ್ಟೇ ಅಲ್ಲ ಪ್ರಪಂಚದ ಅತ್ಯಂತ ಆಳದ, ಸಮುದ್ರದೊಳಗಿನ ‘ಮರೀನ ಟ್ರೆಂಚ್’ ಪ್ರದೇಶದಲ್ಲಿ 10,890 ಮೀಟರ್ (ಸರಿ ಸುಮಾರು 11 ಕಿ. ಮೀ) ಆಳದಲ್ಲಿ ಸಂಗ್ರಹಿಸಿದ ಕ್ರಿಟ್ಟರ್ ಎಂಬ ಸಮುದ್ರ ಕೀಟದ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸಿಕ್ಕಿದೆ ಎಂದರೆ ನೀವೇ ಅರ್ಥಮಾಡಿಕೊಳ್ಳಿ. ಇನ್ನೊಂದು ಸಂಶೋಧನೆಯ ಪ್ರಕಾರ ಸಮುದ್ರಜೀವಿಗಳ ಜೀವಕ್ಕೆ ಕುತ್ತು ತರುವ ಪ್ಲಾಸ್ಟಿಕ್ ಗಳು ಇರುವುದು ಸಮುದ್ರದ ಮೇಲ್ಮೈನಿಂದ 200 ರಿಂದ 600 ಮೀಟರ್ ಆಳದಲ್ಲಿನ ಜಲ ಪ್ರದೇಶದಲ್ಲಿ.

ಎತ್ತರಕ್ಕೇರಿದ ಚಾರಣಿಗ – ಪ್ಲಾಸ್ಟಿಕ್… (ಮೌಂಟ್ ಎವೆರೆಸ್ಟಲ್ಲಿ)

ಹಿಮಾಲಯ ಮತ್ತು ಮಂಜೆಂದರೆ ಅಲ್ಲಿ ಆಡುವ, ಚಾರಣ ಹೊರಡುವ ಆಸೆ ಹುಟ್ಟುತ್ತದೆ. ಆದರೆ ಅದೇ ಆಸೆ ಏನೆಲ್ಲಾ ಮಾಡಿದೆ ಎಂದು ಕೇಳಿದರೆ ಅಚ್ಚರಿಯಾಗಬಹುದು. ಮೌಂಟ್ ಎವೆರೆಸ್ಟ್ ಹತ್ತುವ ಮೊದಲು ತಂಗುವ ‘ಬೇಸ್ ಕ್ಯಾಂಪ್’ನಲ್ಲಿ ಪ್ರತೀ ಕ್ಯುಬಿಕ್ ಮೀಟರ್ ಗೆ 1,19,000 ಪ್ಲಾಸ್ಟಿಕ್ ಪೀಸ್ ಗಳು ದೊರಕುತ್ತಿದೆಯಂತೆ. ಅಷ್ಟೇ ಅಲ್ಲ ಸಮುದ್ರ ಮಟ್ಟದಿಂದ 8,440 ಮೀಟರ್ ಎತ್ತರದ ಪ್ರದೇಶ ಅಂದರೆ ಮೌಂಟ್ ಎವೆರೆಸ್ಟ್ ನ ತುದಿಯಲ್ಲಿ ಸಹ ಪ್ಲಾಸ್ಟಿಕ್ ಪೀಸ್ ಸಿಕ್ಕಿವೆ. ಅದರ ಪರಿಣಾಮವಾಗಿಯೋ ಏನೋ ಹಿಮಾಲಯದಲ್ಲಿ ಉಗಮವಾಗಿ ಬರುವ ಅತ್ಯಂತ ಶುದ್ಧ ಎಂದು ನಾವು ಭಾವಿಸುವ ಹಿಮನದಿಗಳಲ್ಲಿ ಪ್ರತೀ 8 ರಲ್ಲಿನ 3 ಸ್ಯಾಂಪಲ್ ಗಳು ಪ್ಲಾಸ್ಟಿಕ್ ಅನ್ನು ಹೊಂದಿವೆ. ಇಲ್ಲಿ ಸಿಕ್ಕ ಪ್ಲಾಸ್ಟಿಕ್ ಗಳು ಚಾರಣಿಗರ ಬಟ್ಟೆಯಲ್ಲಿ ಅಥವಾ ಬಳಸುವ ವಸ್ತುಗಳಲ್ಲಿ ಸಿಗುವ ‘ಪಾಲಿಸ್ಟೆರ್ ಫೈಬರ್’ ಆಗಿದೆ.

ತೇಲಿಬಂದ ಪ್ಲಾಸ್ಟಿಕ್ ಮಳೆ… (ಗಾಳಿಯಲ್ಲಿ) ಪೈರಿನೀಸ್ ಪರ್ವತಶ್ರೇಣಿಯಲ್ಲಿ ಸ್ಥಾಪಿಸಿದ ಹವಾಮಾನ ಪರಿವೀಕ್ಷಣಾ ಕೇಂದ್ರದಲ್ಲಿ ದಾಖಲಿಸಿದ ಹಾಗೆ ಪ್ಲಾಸ್ಟಿಕ್ ಗಳು ದೂರದ ಪ್ರದೇಶದಿಂದ ಗಾಳಿಯಲ್ಲಿ ತೇಲಿಬಂದು ಮಳೆಯ ಹಾಗೆ ಸುರಿಯುತ್ತಿದೆಯಂತೆ. ದಿನಕ್ಕೆ ಒಂದು ಚದರ ಮೀಟರ್ ಜಾಗದಲ್ಲಿ 365 ಪ್ಲಾಸ್ಟಿಕ್ ಕಣಗಳ ಮಳೆ ಸುರಿಯುತ್ತಿದೆಯಂತೆ. ಹಾಗೂ ಹೀಗೆ ಬೀಳುವ ಪ್ಲಾಸ್ಟಿಕ್ ಕನಿಷ್ಟ 95 ಕಿ.ಮೀ. ದೂರದಿಂದ ತೇಲಿ ಬರುತ್ತಿದೆ, ಎನ್ನುತ್ತಾರೆ ಸಂಶೋಧಕರು.

ಭವಿಷ್ಯದ ಪ್ಲಾಸ್ಟಿಕ್ ಪಳೆಯುಳಿಕೆ… (ಮಂಜಿನೊಳಗೆ) 2018ರ ಒಂದು ಸಂಶೋಧನೆಯಲ್ಲಿ ತಿಳಿದುಬಂದ ವಿಶೇಷ ಸುದ್ದಿ ಹೀಗಿದೆ, ಮನುಷ್ಯ ತನ್ನ ಅಸ್ತಿತ್ವವನ್ನು ಎಲ್ಲಾ ಕಡೆ ಸಾಧಿಸಿದ್ದರೂ ಕಡಿಮೆ ಸಂಖ್ಯೆಲ್ಲಿರುವ ಪ್ರದೇಶವೆಂದರೆ ಭೂಮಿಯ ಧೃವದ ಮಂಜಿನ ಪ್ರದೇಶಗಳು. ದೂರದಿಂದ ಬೆಳ್ಳಗೆ ಕಾಣುವ ಅಂತಹ ಧೃವದ ಮಂಜಿನಲ್ಲೂ ಸಹ ಪ್ಯಾಕಿಂಗ್ ಅಲ್ಲಿ ಬಳಸುವ, ಪೇಂಟ್ ನಲ್ಲಿ ದೊರಕುವ 17 ಬಗೆಯ ಪ್ಲಾಸ್ಟಿಕ್ ಗಳು ಸೇರಿ 10,00,000 ದಿಂದ 1,00,00,000ರ ವರೆಗೆ ಪ್ಲಾಸ್ಟಿಕ್ ಕಣಗಳು ಅಂದರೆ ಮೈಕ್ರೋಪ್ಲಾಸ್ಟಿಕ್ ಗಳು ಕೇವಲ ಒಂದು ಕ್ಯುಬಿಕ್ ಮೀಟರ್ ಜಾಗದಲ್ಲಿ ದೊರಕಿದೆ. ಅದೇ ರೀತಿ 2020ರಲ್ಲಿ ನಡೆದ ಅಂತಹುದೇ ಸಂಶೋಧನೆಯಲ್ಲಿ ಪ್ಲಾಸ್ಟಿಕ್ ಸಂಖ್ಯೆ ಗಣನೀಯವಾಗಿ ಇಳಿದಿದೆ. 2,000 ದಿಂದ 17,000 ಪ್ಲಾಸ್ಟಿಕ್ ಕಣಗಳು ಮಾತ್ರ ಒಂದು ಕ್ಯುಬಿಕ್ ಮೀಟರ್ ಜಾಗದಲ್ಲಿ ದೊರಕಿದೆ. ಈ ಅಚ್ಚರಿಯ ಇಳಿಕೆಯಲ್ಲಿ ಎಷ್ಟು ಸತ್ಯಾಸತ್ಯತೆಗಳಿವೆ ಎಂಬುದು ಸಂಶೋಧಕರಿಗೇ ಗೊತ್ತು.

ನುಂಗಿದ ಪ್ಲಾಸ್ಟಿಕ್ ಗುಳಿಗೆಗಳು… (ನಮ್ಮಲ್ಲಿ)

ಅಮೇರಿಕಾದ ಒಬ್ಬ ವ್ಯಕ್ತಿ ವರ್ಷದಲ್ಲಿ 39,000 ದಿಂದ 52,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂದು 2019ರ ಸಂಶೋಧನೆಯೊಂದು ಹೇಳುತ್ತಿದೆ. ಈ ಸಂಖ್ಯೆಯನ್ನು ಬಾಟಲ್ ನೀರು, ಆಹಾರ ಪದಾರ್ಥಗಳಾದ ಮೀನು, ಸಕ್ಕರೆ, ಉಪ್ಪಿನಂತಹ ಪದಾರ್ಥಗಳ ಮೇಲೆ ಈ ಹಿಂದೆ ನಡೆದ ಸಂಶೋಧನಾ ಸಮೀಕ್ಷೆಯಲ್ಲಿ ದೊರೆತ ಅಂಕಿಅಂಶಗಳ ಆಧಾರದ ಮೇಲೆ ಹೇಳಲಾಗಿದೆ.

ಪ್ಲಾಸ್ಟಿಕ್ ನಿಂದ ಆಗುವ ಸಮಸ್ಯೆಗಳನ್ನು ಎತ್ತಿ ತೋರಿಸುವ ಸಂಶೋಧನೆಗಳು ಸಾವಿರಾರು… ಆದರೆ ಪರಿಹಾರ ಮಾರ್ಗ ಒಂದೇ. ನಾವು, ನಮ್ಮ ಅರಿವು, ನಮ್ಮ ಜೀವನ ಶೈಲಿ. ಇದು ಪ್ರತಿಯೊಬ್ಬನ ವೈಯಕ್ತಿಕ ಸವಾಲು!

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.